ಹಳೆ ತಲೆಮಾರಿನ ಅನುಭವವನ್ನು ಸ್ವೀಕರಿಸಿ



ಒಬ್ಬ ಓಟಗಾರ , ಓಡುವ ಮೊದಲು ಒಂದು ಕಾಲು ಹಿಂದೆ ಇಟ್ಟೇ ಅಣಿಯಾಗುವುದು ಅಲ್ಲವೇ?ಅದರಂತೆ ಹಳೆ ತಲೆಮಾರಿನ ಅನುಭವಗಳನ್ನು ಅರಿತು ನಡೆದರೆ ಜೀವನ ಸುಂದರವಲ್ಲವೇ? … ಉತ್ತಮ ಜೀವನಕ್ಕೆ  ರೂಪೇಶ್ ಪುತ್ತೂರು ಅವರ ಈ ಸುಂದರ ಕತೆಯನೊಮ್ಮೆ ಓದಿ ಅರ್ಥೈಸಿಕೊಂಡರೆ ಸಾಕು…

ಬಾಲ್ಯದಲ್ಲಿ ನಾನು ಬಸ್ಸು ಹತ್ತಿದ ತಕ್ಷಣ, ಚಾಲಕನ ಹಿಂದೆ ಅಥವಾ ಪಕ್ಕದಲ್ಲಿ ನಿಲ್ಲುತ್ತಿದ್ದೆ. ಅವನ ಹಾವ ಭಾವ, ಕೈ , ಕಾಲು, ಎಡ ಬಲ ತಿರುಗುವ ಸನ್ನೆಗಳು….. ನೋಡುತ್ತಾ ಜೀವನದಲ್ಲಿ ಅತ್ಯಂತ ದೊಡ್ಡ ಹುದ್ದೆ ಚಾಲಕನದೇ ಎಂದು ಎಲ್ಲರಲ್ಲೂ ಹೇಳುತ್ತಿದ್ದೆ. ಆಟೋ /ಬಾಡಿಗೆ ಕಾರು/ ಲಾರಿ / ಬಸ್ .. ಯಾವುದಾದರೊಂದರ ಚಾಲಕನಾಗುವುದೆಂದೂ ನಿರ್ಧರಿಸಿಯೂ ಇದ್ದೆ.
ದೊಡ್ಡ ಪಟ್ಟಣಗಳ #ಬಸ್_ನಿಲ್ದಾಣದಲ್ಲಿ , ಸೀಟು ಹಿಡಿಯಲು ಟವೆಲ್, ಬ್ಯಾಗು, ಕೆಲವೊಮ್ಮೆ ಮಗುವನ್ನೂ ಕಿಟಕಿಯ ಒಳಗೆ ಎಸೆಯುತ್ತಿದ್ದರು.

ಬಸ್ಸಿನ ಒಳಗೆ ಸೀಟಿಗಾಗಿ ಪಾಣಿಪತ್ ಕದನ ಮಾಡಿದವರು ನಂತರ, ಪ್ರಯಾಣದ ಕೊನೆಗೆ ಮಿತ್ರರಾಗಿ ಇಳಿದು ಹೋಗುವುದೂ ನೋಡಿದ್ದೆ.

ಚಿಕ್ಕ ಕಥೆ ನೆನಪಾಯಿತು…

ತಂದೆ ತನ್ನ ಇಪ್ಪತ್ತು ವರುಷದ ಮಗನ ಜೊತೆ ಬಸ್ಸು ಹತ್ತಿ ಕುಳಿತರು. ಇಬ್ಬರ ವಸ್ತ್ರವೂ ಹೇಳಿಕೊಳ್ಳುವಷ್ಟು ಸ್ವಚ್ಛ ಇರಲಿಲ್ಲ. ಟಿಕೇಟು ಪಡೆದು ಮಗನನ್ನು ಕಿಟಕಿಯ ಪಕ್ಕ ಕುಳ್ಳಿರಿಸಿದರು. ಬಸ್ಸು ಹೋಗುತ್ತಿದ್ದಂತೆ ವಿಚಿತ್ರವಾಗಿ ನಗುತ್ತಾ ಮಗ ಹೇಳಿದ “ಅಪ್ಪಾ ನೋಡು ಮರ ಓಡ್ತಾ ಇದೆ.” ಎಂದು ಖುಷಿಯಿಂದ ಚಪ್ಪಾಳೆ ಹೊಡೆದು ಹುಡುಗ ಕೇಕೆ ಹಾಕಿದ.
ಪುನಃ ….

ಫೋಟೋ ಕೃಪೆ :commons.wikimedia

” ಅಪ್ಪಾ ನೋಡು…”

ಗಿಡ ಮರ ಅಲ್ಲಾಡದೇನೇ ಹಿಂದಕ್ಕೆ ಹೋಗ್ತಾ ಇದೆ.” ಎಂದು ಬಸ್ಸಿನೊಳಗೆ ವಿಚಿತ್ರವಾಗಿ ಚೀರಿದ ಆ ಹುಡುಗ.

“ಅಪ್ಪಾ ನೋಡು…..

ಸುಂಟರಗಾಳಿ ಇಲ್ಲದಿದ್ದರೂ ಗಾಳಿ ಬರ್ತಾ ಇದೆ” ಎಂದು ಉದ್ಗರಿಸಿ, ಸೀಟಿನ ಮೇಲೆ ನಿಲ್ಲಲು ಪ್ರಯತ್ನಿಸಿದ ಆ ಹುಡುಗ. ಇವನ ನಗು, ಚೀರಿಕೆ, ಚಪ್ಪಾಳೆ, ಕೇಕೆಗೆ ಸಹಪ್ರಯಾಣಿಕರು ಸಹನೆಗೆಟ್ಟು ಮಾತನಾಡ ತೊಡಿಗಿದರು.

” ಮಕ್ಕಳು, ವೃದ್ದರು, ಹೆಂಗಸರು ಪ್ರಯಾಣಿಸುತ್ತಿರುವ ಸಾರ್ವಜನಿಕ( ಪಬ್ಲಿಕ್) ವಾಹನದಲ್ಲಿ,ಇಂತಹಾ ಮಗನನ್ನು ಕರೆದುಕೊಂಡು ಹೋಗ್ತಾನಲ್ಲಾ. ಎಂತಾ ಮನುಷ್ಯನಪ್ಪಾ ಇವನು

“ಅಪ್ಪಾ ನೋಡು …”

ಅಲ್ಲಿ ನೋಡು ಮುಂದಕ್ಕೆ ನಡೆಯುವವರೆಲ್ಲಾ ಹಿಂದಕ್ಕೆ ಹೋಗುತ್ತಿದ್ದಾರೆ….. ನೋಡು ನೋಡು….

ಅಪ್ಪಾ ನೋಡು…….” ಎಂದು ಜೋರಾಗಿ ಕೂಗಿದ.

ಫೋಟೋ ಕೃಪೆ : YOUTUBE

ಮಿತಿ ಕೆಟ್ಟು ತಡೆಯಲಾಗದೆ, ಅವರ ಮುಂದೆ ಕುಳಿತ ಪ್ರಯಾಣಿಕ ಎದ್ದು ನಿಂತು “ರೀ ಕಂಡೆಕ್ಟರ್ ಸಾಹೆಬ್ರೇ, ಬಸ್ಸು ನಿಲ್ಲಿಸಿ!!!!! ಇವರನ್ನು ಇಳಿಸ್ರಿ, ನನ್ನ ಮಗಳು ಇವನ ಮಾತು, ಶಬ್ದ ಕೇಳಿ ಗಾಬ್ರಿ ಪಡ್ತಾ ಅಳ್ತಿದ್ದಾಳೆ ” ಅಂದ.

ಉಳಿದ ಸಹ ಪ್ರಯಾಣಿಕರು ಅದಕ್ಕೆ ಧ್ವನಿಗೂಡಿಸಿದರು. ಕಂಡೆಕ್ಟರ್ ಅಸಹಾಯಕನಾಗಿ ಆ ತಂದೆಯಲ್ಲಿ ತನ್ನ ತಲೆ ತಗ್ಗಿಸಿ ಕೇಳಿಕೊಳ್ಳಲು ತುಟಿ ಬಿಚ್ಚುತ್ತಿದ್ದಂತೆ… ಆ ಹುಡುಗನ ತಂದೆ ” ಕ್ಷಮಿಸಿ, ನನ್ನ ಮಗ ಕಣ್ಣಿನ ಶಸ್ತ್ರ ಚಿಕಿತ್ಸೆ ಮುಗಿಸಿ, ದೃಷ್ಟಿ ಲಭಿಸಿ, ಪ್ರಪ್ರಥಮವಾಗಿ ಕಣ್ತುಂಬಾ ನೋಡುತ್ತಾ ಪ್ರಯಾಣಿಸುತ್ತಿದ್ದಾನೆ… ಅವನ ತಾಯಿಯ ಕಣ್ಣು ಅವನಿಗೆ …” ಎಂದು ಮಾತು ನುಂಗಿದರು.



ಪೂರ್ವ ಪರ ಅರಿಯದೆ ನಾವು ಏನನ್ನೂ ಹೇಳಲಾಗದು, ಅದಕ್ಕೆ ನಮ್ಮ ಹಿರಿಯರು ಹೇಳುವ ಗಾದೆ ” ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು” ಎಂಬುವುದು ತುಂಬಾ ಅರ್ಥಪೂರ್ಣ.

ಮೊತ್ತ ಮೊದಲು ಒಂದು ಕಾರ್ಖಾನೆಗೆ ಕೆಲಸಕ್ಕೆ ಹೋಗುವಾಗ ನನ್ನ ತಂದೆ ” ನೋಡು… ಅಲ್ಲಿ ಆ ಕಾರ್ಖಾನೆಯ ಮೊದಲ ದಿನದಿಂದ ತುಂಬಾ ಶ್ರಮಿಸಿ ಬೆಳೆಸಿದವರು ಇರುತ್ತಾರೆ. ಇಂದು ಅದು ಇಷ್ಟು ಬೆಳೆದ ಮೇಲೆ, ನೀನು ಸೇರುತ್ತಿದ್ದಿ.- ಎಂಬುದು ನಿನಗೆ ಸ್ಪಷ್ಟವಾಗಿ ತಿಳಿದಿರಲಿ” ಎಂದು ನನಗೆ ಬುದ್ದಿ ಹೇಳಿದ್ದರು.

ಒಬ್ಬ ಓಟಗಾರ , ಓಡುವ ಮೊದಲು ಒಂದು ಕಾಲು ಹಿಂದೆ ಇಟ್ಟೇ ಅಣಿಯಾಗುವುದು ಅಲ್ಲವೇ? ನಾನೂ ನಿಮ್ಮಂತೆಯೇ ನನ್ನ ತಂದೆ, ತಾಯಿ, ಅಜ್ಜ, ಅಜ್ಜಿ…ಅವರ ಕಾಲದ ಕಥೆಯನ್ನು ಕುತೂಹಲದಿಂದ ಕೇಳುತ್ತಿದ್ದವನಾಗಿದ್ದೆ. ನಮ್ಮ-ನಿಮ್ಮ ತಲೆಮಾರಿನವರ ಬವಣೆಗಳೂ ಅನುಭವಗಳು, ಈ ಜೀವನ ಪಯಣದಲ್ಲಿ ಕೇಳಿದ ಹೊಸ ತಲೆಮಾರೆಂಬ ನ್ಯೂ ಜನರೇಷನ್ ರವರು ಕಿಂಚಿತ್ ಆದರೂ ಅರಿಯಬೇಕು…….. ಅಲ್ಲವೇ?? ಹೀಗೆ … ಪಯಣಿಗರು ಬದಲಾಗುತ್ತಾ , ನಾವೂ ಬದಲಾಗುತ್ತಾ ಪ್ರಯಾಣಿಸುವವರಲ್ಲಿ….

ನಿಮ್ಮವ ನಲ್ಲ
*ರೂಪು*


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು) ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW