ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು 1953ರ ಜನವರಿ 23ರಂದು ಜನಿಸಿದರು. ಅವರೇ ನಮ್ಮ ಪ್ರೀತಿಯ ಡಾ ಟಿ ಎಸ್ ನಾಗಾಭರಣವರು, ಅವರಿಗೆ ಆಕೃತಿಕನ್ನಡದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು.
ನನ್ನ ಅಚ್ಚು ಮೆಚ್ಚಿನ ನಿರ್ದೇಶಕರು ಡಾ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಸರ್. ಅವರು ಪ್ರತಿಯೊಂದು ಸಿನಿಮಾವನ್ನು ತುಂಬಾ ಇಷ್ಟಪಟ್ಟು ನೋಡಿದ್ದೇನೆ. ಸದಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಾಗಾಭರಣ ಅವರು ಹುಟ್ಟಿದ ದಿನವಿದು.
ಸರ್, ನಿಮಗೆ ಆ ಭಗವಂತ ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಶುಭ ಹಾರೈಸುತ್ತೇನೆ. ನಿಮ್ಮ ಈ ವಿಶೇಷ ದಿನದಂದು ನಿಮ್ಮ ಅಭಿಮಾನಿ ತುಸು ಕೋಪಿಸಿಕೊಂಡಿದ್ದಾಳೆ. ಇತ್ತೀಚಿಗೆ ನೀವು ನಾಟಕದಲ್ಲಿ ಹೆಚ್ಚು ಸಕ್ರಿಯರಾಗಿದ್ದೀರಿ. ಸಿನಿಮಾ ಕಡೆಗೆ ಯಾಕೆ ಬರುತ್ತಿಲ್ಲ? ಎನ್ನುವುದೇ ನನ್ನ ಸಿಟ್ಟು. ನಿಮ್ಮಿಂದ ಜಾನಪದ ಶೈಲಿಯ, ಹಳ್ಳಿ ಸೊಗಡಿನ , ಕೌಟಂಬಿಕ ಚಿತ್ರವನ್ನು ನಿಮ್ಮ ನಿರ್ದೇಶನದಲ್ಲಿ ನೋಡಬೇಕೆಂಬುದು ನನ್ನ ಆಸೆ. ಆದಷ್ಟು ಬೇಗ ಈಡೇರಿತ್ತೀರಲ್ಲವೇ ? .
ನಿಮ್ಮ ಹುಟ್ಟುಹಬ್ಬಕ್ಕೆ ನಾನು ಉಡುಗೊರೆ ಕೊಡಬೇಕೆಂದುಕೊಂಡೆ, ನನಗೆ ಗೊತ್ತು ಸರ್… ನಿಮಗೆ ಶಾಲು, ಹಾರ ತಂದರೆ ಇಷ್ಟವಾಗುವುದಿಲ್ಲವೆಂದು. ನಿಮಗೆ ಗಿಡ, ಪುಸ್ತಕವೆಂದರೆ ಇಷ್ಟ. ನಾನು ಈಗ ತಾನೇ ಸಾಹಿತ್ಯದಲ್ಲಿ ಪುಟ್ಟ ಹೆಜ್ಜೆ ಇಟ್ಟಿರುವೆ ಸರ್ . ಮುಂದಿನ ಬಾರಿ ಭೇಟಿಯಾದಾಗ ನೀವು ಬೈದುಕೊಂಡರು ಪರವಾಗಿಲ್ಲ, ನನ್ನ ಮುಂದಿನ ಪುಸ್ತಕ ನಿಮಗೆ ಕೊಡುವೆ. ನಿಮ್ಮ ಪ್ರೀತಿ, ಆಶೀರ್ವಾದ ನನ್ನ ಮುಂದಿನ ದಿಟ್ಟ ಹೆಜ್ಜೆಗೆ ಬೇಕು. ಅಷ್ಟೇ ಅಲ್ಲ ನಿಮಗೆ ಇಷ್ಟದ ಗಿಡ ಉಡುಗೊರೆಯಾಗಿ ಕೊಡುವೆ.
ನಿಮ್ಮನ್ನು ನೋಡಿದಾಗಲೆಲ್ಲ ನನ್ನಲ್ಲಿ ಒಂದು ಸ್ಫೂರ್ತಿ, ಉತ್ಸಾಹ ತುಂಬುತ್ತದೆ. ಎಷ್ಟೇ ಎತ್ತರಕ್ಕೆ ನೀವು ಬೆಳೆದಿದ್ದರು ಯಾವ ಬೌನ್ಸರ್ ಇಲ್ಲದೆ ಸರಳವಾಗಿ ಎಲ್ಲರೊಂದಿಗೆ ಬೆರೆಯುತ್ತೀರಿ.

ಒಂದು ಸಿನಿಮಾ ಹಿಂದೆ ನಿಮ್ಮ ಪೂರ್ವತಯಾರಿ ನೋಡಿದ್ದೇನೆ. ನಿಮ್ಮ ಮನೆಯಲ್ಲಿ ದೊಡ್ಡ ಗ್ರಂಥಾಲಯವನ್ನೇ ನಿರ್ಮಿಸಿದ್ದೀರಿ. ಸಮಯ ಸಿಕ್ಕಾಗೆಲ್ಲ ಗ್ರಂಥಾಲಯದಲ್ಲಿ ಕೂತು ನೋಟ್ ಬರೆದುಕೊಳ್ಳುವುದನ್ನು ನೋಡಿದ್ದೇನೆ. ಯಾರೇ ಪುಸ್ತಕ ಕೊಟ್ಟರು ಪ್ರೀತಿಯಿಂದ ತಗೆದುಕೊಂಡು ಓದುತ್ತೀರಿ ಮತ್ತು ಚರ್ಚಿಸುತ್ತೀರಿ. ಹಿರಿಯರು ಕಿರಿಯರು ಎನ್ನದೆ ಎಲ್ಲರೊಂದಿಗೆ ಕೂತು ಕತೆ – ಚಿತ್ರಕತೆ ಬಗ್ಗೆ ಚರ್ಚಿಸಿ ಸಿನಿಮಾಕ್ಕೆ ಕತೆ ಹೆಣೆಯುತ್ತೀರಿ.
ಯಾವ ಮುಜುಗರವಿಲ್ಲದೆ ಕುಟುಂಬದವರೆಲ್ಲ ಕೂತು ನಿಮ್ಮ ಸಿನಿಮಾ ನೋಡಿ ಚಪ್ಪಾಳೆ ಹೊಡೆದು ಆನಂದಿಸಿದ್ದೇವೆ. ಅದರಲ್ಲಿಯೂ ನಾಗಮಂಡಲ, ಚಿನ್ನಾರಿ ಮುತ್ತಾ, ಮೈಸೂರು ಮಲ್ಲಿಗೆ, ಕಲ್ಲರಳಿ ಹೂವಾಗಿ ತುಂಬಾ ಇಷ್ಟಪಟ್ಟು ನೋಡಿದ್ದೇನೆ. ನಾಗಾಭರಣ ಎಂದರೆ ನಮ್ಮ ಹಳ್ಳಿಯ ಸೊಗಡುನ್ನು ಎತ್ತಿ ಹಿಡಿಯುವ ನಿರ್ದೇಶಕರೆಂದು ನಾನು ನಂಬಿದ್ದೇನೆ.
ಇತ್ತೀಚಿಗೆ ನಿಮ್ಮ ನಿರ್ದೇಶನದ ಚಿನ್ನಾರಿಮುತ್ತಾ ಸಿನಿಮಾವನ್ನು ನನ್ನ ಮಕ್ಕಳೊಂದಿಗೆ ನೋಡಿದೆ. ನನ್ನ ಮಕ್ಕಳು ಕೂಡ ನಿಮ್ಮ ಅಭಿಮಾನಿಯಾಗಿದ್ದಾರೆ. ಯಾವ ಪೀಳಿಗೆಯವರು ಬಂದರೂ ನಿಮ್ಮನ್ನು ಇಷ್ಟಪಡುವಂತೆ ನಿಮ್ಮ ಸಿನಿಮಾಗಳು ಎಲ್ಲರನ್ನು ಆವರಿಸಿದೆ ಸರ್.
ಸಿನಿಮಾ ರಂಗವಷ್ಟೇ ಅಲ್ಲ , ನಿಮ್ಮಿಂದ ರಂಗಭೂಮಿಯೂ ಪಾವನವಾಗಿದೆ. ಬೆಂಗಳೂರು ನಾಗರತ್ನಮ್ಮ, ಗೋಕುಲ ನಿರ್ಗಮನ, ಸಾಕಷ್ಟು ನಾಟಕಗಳನ್ನು ರಂಗದ ಮೇಲೆ ಸಿನಿಮಾದಂತೆ ಪ್ರೇಕ್ಷಕನಿಗೆ ತೋರಿಸಿದ ಕೀರ್ತಿ ನಿಮ್ಮದು. ನನ್ನ ತಂದೆ ಹೂಲಿಶೇಖರ್ ಅವರ ಪ್ರತಿಭೆಗೆ ನೀವು ಪ್ರೋತ್ಸಾಹಿಸಿದ್ದೀರಿ, ಅದನ್ನು ಮರೆಯುವಂತಿಲ್ಲ.
ತುಂಬಾ ಮಾತಾಡಿದ್ದೀನಿ ಅನಿಸುತ್ತದೆ ಸರ್, ತಪ್ಪಾಗಿದ್ದರೆ ಕ್ಷಮೆ ಇರಲಿ.
ಮತ್ತೊಮ್ಮೆ ನಿಮ್ಮಗೆ ಹುಟ್ಟುಹಬ್ಬದ ಶುಭಾಶಯಗಳು ಸರ್…
ನಿಮ್ಮ ಪ್ರೀತಿಯ
ಶಾಲೂ
- ಶಾಲಿನಿ ಹೂಲಿ ಪ್ರದೀಪ್
