‘ಹಾಸಿಗೆಯ ಹಾಸ್ಯ ವಿಲ್ಲಾಸ’ ಕೃತಿ ಪರಿಚಯ

ಪತ್ರಕರ್ತರಾದ ರಾಜು ಅಡಕಳ್ಳಿ ಅವರು ನಾಟಿಶೈಲಿ ಬರಹಗಳಿಂದ ಹೆಸರುವಾಸಿಯಾಗಿದ್ದಾರೆ.ಇವರು ಮೂಲತಃ ಶಿರಸಿ ಕಡೆಯವರು, ಅವರ ರಚನೆಯ ಹೊಸ ಕೃತಿ ‘ಹಾಸಿಗೆಯ ಹಾಸ್ಯ ವಿಲ್ಲಾಸ’ ದ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ….`

ಪುಸ್ತಕ : ಹಾಸಿಗೆಯ ಹಾಸ್ಯ ವಿಲ್ಲಾಸ
ಲೇಖನಗಳು : ರಾಜು ಅಡಕಳ್ಳಿ
ಪ್ರಕಾಶಕರು : ಸಪ್ನಾ ಪ್ರಕಾಶನ
ಬೆಲೆ : ೨೨೦.೦೦

ಬರವಣಿಗೆಗೆ ವಯಸ್ಸಿಲ್ಲ, ಆದರೆ ಮನಸ್ಸಿರಬೇಕು. ಕೆಲವು ಲೇಖಕರು ತಡವಾಗಿ ಬರೆದರು ಲೇಟೆಸ್ಟ್ ಆಗಿ ಬರೆದು ಓದುಗರನ್ನು ತನ್ನತ್ತ ಸೆಳೆದು ಬಿಡುತ್ತಾರೆ. ಅವರಲ್ಲಿ ರಾಜು ಅಡಕಳ್ಳಿಯೂ ಒಬ್ಬರು. 57 ವರ್ಷ ದಾಟಿದ ಮೇಲೆ ಅವರು ಬರವಣಿಗೆಯಲ್ಲಿ ಹೆಚ್ಚು ಪ್ರಚಲಿತರಾಗಿದ್ದಾರೆ.

ಅಡಕಳ್ಳಿ ಅವರು ಪತ್ರಿಕೋದ್ಯಮದಲ್ಲಿ ಎಂ ಎ ಪದವೀಧರರು. 15 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಶ್ರಮಿಸಿದ್ದಾರೆ. ಈಗ ಸಾಹಿತ್ಯದತ್ತ ಒಲವು ಹರಿಸಿದ್ದು, ಒಂದು ವರ್ಷದಲ್ಲಿ ಐದಾರು ಪುಸ್ತಕವನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ. ಅವರ ಹೊಸ ಕೃತಿ “ಹಾಸಿಗೆಯ ಹಾಸ್ಯ ವಿಲ್ಲಾಸ ” ಇದೊಂದು ಹಾಸ್ಯ ಪ್ರಬಂಧಗಳ ಸಂಕಲನವಾಗಿದೆ. ಇದರಲ್ಲಿ 23 ಲೇಖನಗಳಿದ್ದು, ನಮ್ಮ ಜೀವನದಲ್ಲಿ ನಡೆಯುವ ಸನ್ನಿವೇಶಗಳನ್ನು ಹಾಸ್ಯದ ಲೇಪನವನ್ನು ಕೊಟ್ಟು ಓದುಗರ ಮುಂದಿಟ್ಟಿದ್ದಾರೆ.

ಕೆಲವರಿಗೆ ಹೆಂಡತಿ, ದುಡ್ಡು, ಆಸ್ತಿ ಪಾಸ್ತಿ, ಸಂಬಂಧಗಳೇ ಮುಖ್ಯವಾದರೆ ಲೇಖಕರಿಗೆ ಮೊಸರನ್ನವೇ ಅತಿ ಮುಖ್ಯವಾಗುತ್ತೆ. ಮೊಸರನ್ನವಿಲ್ಲದ ಊಟವೆಂದರೆ ಅವರ ಪಾಲಿಗೆ ಹೆಂಡತಿ ಇಲ್ಲದ ಬಾಳ್ವೆ. “ಮೋಸರನ್ನ… ಬದುಕಿನ ಸುಪ್ರಸನ್ನ” ದಲ್ಲಿ ಹಾಸ್ಯದ ಮೂಲಕ ಮೋಸರನ್ನದ ಮಹತ್ವವನ್ನು ಹೇಳುತ್ತಾರೆ.
*
ಇಲಿ ಒಂದು ಸಣ್ಣ ಜೀವಿಯಾದರೂ ಅದು ಲೇಖಕರ ಕಣ್ಣಿಗೆ ಆನೆಗಿಂತ ಪ್ರಭಾವಶಾಲಿ ಅನ್ನಿಸುತ್ತದೆ. ಲೇಖಕರು ದೊಡ್ಡ ಪ್ರಾಣಿಗೆ ಹೆದರದಿದ್ದರೂ ಸಣ್ಣ ಇಲಿಗೆ ಭಯ ಪಡುತ್ತಾರೆ. ಒಮ್ಮೆ ಸ್ನಾನದ ಮನೆಯಲ್ಲಿ ಇಲಿ ನೋಡಿ ಹೆದರಿ ಹೊರಕ್ಕೆ ಓಡಿ ಬಂದು ಹೆಂಡತಿ ಕಡೆ ಬೈಯಿಸಿಕೊಂಡದ್ದನ್ನು “ಇಲಿಗಳು ಸಾರ್… ಇಲಿಗಳು…” ಲೇಖನದಲ್ಲಿ ದಾಖಲಿಸಿದ್ದಾರೆ.

ಲೇಖಕರ ಊರಿನಲ್ಲಿ ಒಂಟಿ ಮನೆ ಇತ್ತಂತೆ, ಅದು ಇಳಿಜಾರಿನಲ್ಲಿ ಇದ್ದಿದ್ದರಿಂದ ಆ ಮನೆಗೆ “ಇಳಿಮನೆ” ಹೆಸರು ಬಂದಿತ್ತoತೆ. ಅವರ ಮನೆಯಲ್ಲಿ ಇಲಿಗಳ ಕಾಟ ನೋಡಿದವರು. ಇದು ಇಳಿಮನೆ ಅಲ್ಲ, “ಇಲಿಮನೆ” ಎಂದು ಕರೆಯ ತೊಡಗಿದರಂತೆ. ಹೀಗೆ ಇಲಿಯು ಲೇಖಕರ ಜೀವನದಲ್ಲಿ ಸಾಕಷ್ಟು ಪ್ರಭಾವವನ್ನು ಬೀರಿದೆ. ಅದರಿಂದ ಪಾಠವನ್ನು ಕಲಿತಿದ್ದಾರೆ ಎಂದು ಈ ಲೇಖನ ಓದುವಾಗ ಅರ್ಥವಾಗುತ್ತದೆ.
*
ಮಲೆನಾಡು, ಕರಾವಳಿ ಭಾಗದಲ್ಲಿ ದೋಸೆಗೆ ವಿಶೇಷ ಸ್ಥಾನವಿದೆ. ಬೆಳಿಗ್ಗೆ ಆಯಿತೆಂದರೆ ಕಾವಲಿ ಸುಯ್…ಗುಡುವ ಸದ್ದು ಎಲ್ಲರ ಮನೆಯಿಂದ ಕೇಳಿ ಬರುತ್ತದೆ. ಮೊಸರನ್ನ ಲೇಖಕರಿಗೆ ಊಟಕ್ಕೆ ಪ್ರಿಯವಾದರೆ, ದೋಸೆ ಬೆಳಗ್ಗೆಯ ಉಪಹಾರಕ್ಕೆ ಪ್ರಿಯವಂತೆ. ಅದು ಎಷ್ಟರ ಮಟ್ಟಿಗೆ ಅವರು ದೋಸೆ ಪ್ರಿಯರೆಂದರೆ ಅವರ ಹೆಂಡತಿ ಗಂಡನ ತಿನ್ನುವ ವೀಕ್ನೆಸ್ಸ್ ಅರ್ಥ ಮಾಡಿಕೊಂಡು ‘ದೋಸೆ ಬೇಕೆಂದರೆ ಹೊಸ ಸೀರೆ ಕೊಡಸಬೇಕು, ಇಲ್ಲದಿದ್ದರೆ ಉಪ್ಪಿಟ್ಟು ಮಾಡುವೆ” ಎಂದು ಹೆದರಿಸುತ್ತಾರಂತೆ. ಲೇಖಕರು “ದೋಸೆಯ ದಾಸ”ರಾದರೆ, ನನಗೆ ಇದನ್ನು ಓದುವಾಗ ಲೇಖಕರ ಹೆಂಡತಿ ಗಂಡನಿಗೆ ಹೆದರಿಸಿ ಎಷ್ಟು ಸೀರೆಗಳನ್ನು ಖರೀದಿಸಿರಬಹುದು ಎನ್ನುವ ಕುತೂಹಲ ಈ ಲೇಖನ ಓದುವಾಗ ಮೂಡಿತು.
*
ಮೊಬೈಲ್ ಎಲ್ಲರ ಬದುಕಿನಲ್ಲಿ ಅಧಿಪತಿಯಾಗಿದೆ. ಮೊಬೈಲ್ ಇಲ್ಲದ ಜೀವನವೆಂದರೆ ಕೆಲವರಿಗೆ ಬಾಯಿ ಇಲ್ಲದ ಜೀವನದಂತೆ ಎಂದು ಲೇಖಕರು “ಮೊಬೈಲ್ ಮಹಿಮೆ”ಯಲ್ಲಿ ಮೊಬೈಲ್ ಕುರಿತು ಹಾಡಿ ಹೊಗಳಿದ್ದಾರೆ.

ಮೊಬೈಲ್ ಗೆ ನಮ್ಮ ಬದುಕನ್ನೇ ಸಮರ್ಪಸಿ ಬಿಟ್ಟಿದ್ದೇವೆ. ಅದು ಯಾವ ಮಟ್ಟಕ್ಕೆ ಎಂದರೆ ಮೊಬೈಲ್ ಬಿಟ್ಟು ಬದುಕಲು ಸಾಧ್ಯವಾಗದಷ್ಟು ಎನ್ನುವುದು ಸತ್ಯ, ಇದು ವಿಷಾದನೀಯ. ಲೇಖಕರು ಮೊಬೈಲ್ ಗೀಳಿನ ಬಗ್ಗೆ ಹೇಳುವ ಶೈಲಿ ಸೊಗಸಾಗಿದೆ. ಲೇಖಕರು ತಮಗೆ ಆದ ಅನುಭವವನ್ನು ಹೇಳುತ್ತಾರೆ. ತಾವು ವಿದೇಶಕ್ಕೆ ಹೋದಾಗ ಸ್ನೇಹಿತರೊಬ್ಬರ ಹೆಂಡತಿಯ ಮೊಬೈಲ್ ಕಳೆದುಹೋಗುತ್ತದೆ. ಅವರು ಗೊಳಾಡುವಾಗ “ನಾನು ಗಂಡನನ್ನು ಬಿಟ್ಟಿರಬಲ್ಲೆ, ಆದರೆ ಮೊಬೈಲ್ ಬಿಟ್ಟಿರಲಾರೆ”… ಎಂದಾಗ ಆಕೆಯ ಗಂಡ ಧoಗಾದರಂತೆ. ಇದು ಒಂದು ಕಡೆ ಹಾಸ್ಯವೆಂದನ್ನಿಸಿದರು, ಇನ್ನೊಂದೆಡೆ ದಾರಿ ತಪ್ಪುತ್ತಿರುವ ಬದುಕಿಗೆ ಮೊಬೈಲ್ ಕಾರಣವೆಂದು ಎತ್ತಿ ತೋರಿಸುತ್ತಿದೆ. ಹಾಗಾಗಿ ಮೊಬೈಲ್ ನ್ನು ಹಿತ ಮಿತವಾಗಿ ಬಳಸಿ ಎನ್ನುವ ಸಂದೇಶವೂ ಈ ಲೇಖನದಲ್ಲಿದೆ.

*
ಪತ್ರಿಕೋದ್ಯಮದಂತಹ ಗಂಭೀರ ಸ್ಥಳಗಳಲ್ಲಿಯೂ ಹಾಸ್ಯಗಳು ಹೇಗೆ ಹುಟ್ಟುತ್ತದೆ ಎಂದು ಈ ಹಿಂದೆ ಪ್ರಜಾವಾಣಿಗಳಂತಹ ದೊಡ್ಡ ಪತ್ರಿಕೆಯಲ್ಲಿ ಕೆಲಸ ಮಾಡಿದ ರಾಜು ಅಡಕಳ್ಳಿ ಅವರು ತಮ್ಮ ಅನುಭವವನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ಪತ್ರಕರ್ತರೊಬ್ಬರು ಆನೆ ನಾಗರಹೊಳೆಯ ಪ್ರಪಾತಕ್ಕೆ ಬಿದ್ದು ಕೈ ಕಾಲುಗಳಿಗೆ ಗಾಯವಾಗಿದೆ ಎಂದು ವರದಿ ಮಾಡಿದ್ದರಂತೆ. ಆನೆಗೆ ಸೊಂಡಿಲು, ಕಾಲು ಇರುವುದು ಗೊತ್ತಿರುವ ಸಂಗತಿ. ಆದರೆ ಕೈ ಇರುವುದು ಆ ವರದಿಯಿಂದ ತಿಳಿಯುವಂತಾಯಿತು ಎಂದು ಕಚೇರಿಯಲ್ಲಿ ಮುಸಿ ಮುಸಿ ನಗುವ ಪ್ರಸಂಗ ಬಂದಿತ್ತಂತೆ.

ಕೊಲೆಗಾರರು ಒಬ್ಬ ವ್ಯಕ್ತಿಯನ್ನು ಒಂದೇ ಸಲ ಕೊಲೆ ಮಾಡಬಹುದು. ಆದರೆ ಒಬ್ಬ ಪತ್ರಕರ್ತ ಒಬ್ಬ ವ್ಯಕ್ತಿಯನ್ನು ಹಲವಾರು ಬಾರಿ ಕೊಲೆ ಮಾಡಬಹುದಂತೆ. ಹೇಗೆಂದರೆ ಉಸಿರು ನಿಂತು ಅಸು ನೀಗಿದ, ಸತ್ತ ಹೆಣದ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಹೀಗೆ ರಬ್ಬರ್ ತರ ಒಂದೇ ವಿಷಯವನ್ನು ಎಳೆದು ಬಿಡುವ ಶಕ್ತಿ ಇದ್ದರೇ ಅದು ಪತ್ರಕರ್ತರಿಗೆ ಮಾತ್ರ ಎಂದು ಪತ್ರಿಕೋದ್ಯಮದಲ್ಲಿನ ಕರಾಳ ಸತ್ಯವನ್ನು ಹೊರಗೆ ಹಾಕುತ್ತಾರೆ ಲೇಖಕರು.

“ಹಾಸಿಗೆಯ ಹಾಸ್ಯ ವಿಲಾಸ” ಪುಸ್ತಕ ಓದುವಾಗ ಗಂಟು ಮುಖ ಹಾಕಿಕೊಂಡು ಓದುವ ಪ್ರಸಂಗ ಬರುವುದಿಲ್ಲ. ಮುಖದಲ್ಲಿ ನಗೆಯ ಬುಗ್ಗೆಯನ್ನೇ ಎಬ್ಬಿಸುತ್ತದೆ. ಐತಿಹಾಸಿಕ, ಪೌರಾಣಿಕ ಕತೆ, ಕಾದಂಬರಿಯ ಆರ್ಭಟದಲ್ಲಿ ಹಾಸ್ಯ ಬರಹಗಳು ಮರೆಯಾಗುತ್ತಿದೆ. ಹಾಸ್ಯ ಬರಹ ಬರೆಯುವ ಲೇಖಕರ ಸಂಖ್ಯೆಯೂ ಅತ್ಯಂತ ವಿರಳವಾಗಿದೆ. ರಾಜು ಅಡಕಳ್ಳಿ ಅವರ ಈ ಹಾಸ್ಯ ಕೃತಿ ಓದಿ ಮೈಂಡ್ ಫ್ರೆಷ್ ಆಯ್ತು ಎಂದು ಹೇಳುತ್ತೇನೆ.

ರಾಜು ಅವರಿಂದ ಹೀಗೆ ಇನ್ನಷ್ಟು ಹಾಸ್ಯ ಕೃತಿಗಳು ಬರಲಿ, ಹಾಸ್ಯ ಸಾಹಿತ್ಯದಲ್ಲಿ ಅವರ ಹೆಸರು ವಿಜೃಂಭಿಸಲಿ ಎಂದು ಶುಭ ಹಾರೈಸುತ್ತೇನೆ.


  • ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಆನ್ಲೈನ್ ಪತ್ರಿಕೆಯ ಸಂಪಾದಕಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading