ಖ್ಯಾತ ಗಾಯಕಿ ಎಸ್. ಜಾನಕಿ ಅವರು ಆಭರಣಗಳನ್ನು, ಬಣ್ಣದ ಉಡುಪುಗಳನ್ನು ತ್ಯಜಿಸಿ ಶ್ವೇತ ವಸ್ತ್ರಧಾರಣಿಯಾಗಳು ಕಾರಣವೇನು ಗೊತ್ತೇ?… ಖ್ಯಾತ ಪತ್ರಕರ್ತರಾದ ಎನ್.ಎಸ್.ಶ್ರೀಧರ ಮೂರ್ತಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ತಮ್ಮ ಇಳಿ ವಯಸ್ಸಿನಲ್ಲಿ ದೊಡ್ಡ ಆಘಾತವನ್ನು ಎದುರಿಸ ಬೇಕಾಗಿ ಬಂದಿದೆ. ಅವರ ಮಗ ಮುರುಳಿ ಕೃಷ್ಣ ತಮ್ಮ 65ನೆಯ ವಯಸ್ಸಿನಲ್ಲಿ ಹೈದರಬಾದಿನಲ್ಲಿ ತೀವ್ರ ಹೃದಯಾಘಾತದಿಂದ ಇಂದು ಬೆಳಗಿನ ಜಾವ (22 ಜನವರಿ 2026) ನಿಧನರಾದ ಸುದ್ದಿ ಬಂದಿದೆ.

ಜಾನಕಿಯವರ ವೃತ್ತಿ ಜೀವನವನ್ನು ರೂಪಿಸುವಲ್ಲಿ ಅವರ ಪತಿ ವಿ.ರಾಮಪ್ರಸಾದ್ ಮುಖ್ಯ ಪಾತ್ರ ವಹಿಸಿದ್ದರು. ʼಸ್ಟುಡಿಯೋ ದೀಪ ಹತ್ತುವುದು ಆರುವುದು ನೋಡುವುದರಲ್ಲಿಯೇ ನನ್ನ ಜೀವನ ಕಳೆದು ಹೋಯಿತು, ಮನೆಯನ್ನು ಅತ್ತೆ ನೋಡಿ ಕೊಂಡರು. ವೃತ್ತಿ ವ್ಯವಹಾರಗಳನ್ನು ಪತಿ ನೋಡಿ ಕೊಂಡರುʼ ಎಂದು ಎಸ್.ಜಾನಕಿಯವರೇ ಹೇಳಿಕೊಂಡಿದ್ದುಂಟು. 1997ರಲ್ಲಿ ರಾಮಪ್ರಸಾದ್ ನಿಧನರಾದಾಗ ಜಾನಕಿ ಕುಗ್ಗಿ ಹೋಗಿದ್ದರು. ಬದುಕಿನಿಂದ ವಿಮುಖರಾದ ಅವರನ್ನು ಆಪ್ತ ಗೆಳತಿ ಪಿ.ಸುಶೀಲ ಸಂತೈಸಿ ಮತ್ತೆ ಜೀವನದ ಕಡೆ ತಂದು ಮತ್ತೆ ಗಾಯನ ಕ್ಷೇತ್ರದಲ್ಲಿ ಮುಂದುವರೆಯುವಂತೆ ಮಾಡಿದ್ದರು. ಆದರೆ ಅಂದಿನಿಂದ ಜಾನಕಿ ಆಭರಣಗಳನ್ನು ಬಣ್ಣದ ಉಡುಪುಗಳನ್ನು ತ್ಯಜಿಸಿ ಶ್ವೇತ ವಸ್ತ್ರಧಾರಣಿಯಾದರು.
ಮುರುಳಿ ಕೃಷ್ಣ ಅತ್ಯುತ್ತಮ ಭರತನಾಟ್ಯ ಕಲಾವಿದರು, ಅವರ ಗರಡಿಯಲ್ಲಿ ಹಲವು ಭರತನಾಟ್ಯ ಕಲಾವಿದರು ರೂಪುಗೊಂಡಿದ್ದಾರೆ. ಚಿತ್ರರಂಗದತ್ತ ಕೂಡ ಅವರಿಗೆ ಒಲವಿತ್ತು. ʼವಿನಾಯಕುಡುʼ ಮತ್ತು ʼಮಲ್ಲೆ ಪೂವುʼ ಚಿತ್ರಗಳಲ್ಲಿ ಅಭಿನಯಿಸಿದ್ದರು. ʼಕೂಲಿಂಗ್ ಗ್ಲಾಸ್ʼ ಮಲೆಯಾಳಂ ಚಿತ್ರಕ್ಕೆ ಕಥೆಯನ್ನು ರಚಿಸಿದ್ದರು. ಅವರ ಮಡದಿ ಉಮಾ ಕೂಡ ಹೆಸರಾಂತ ಭರತ ನಾಟ್ಯ ಕಲಾವಿದೆ. ಇಬ್ಬರು ಮಕ್ಕಳು ವರ್ಷ ಮತ್ತು ಅಪ್ಸರಾ ಪ್ರತಿಭಾವಂತರು. ಇಬ್ಬರೂ ವಿವಾಹಿತರು. ಈಗ ಕೆಲವು ವರ್ಷಗಳಿಂದ ಹೈದರಾಬಾದಿನಲ್ಲಿ ವಾಸವಾಗಿದ್ದರು. ಅಲ್ಲಿಯೇ ನಿಧನರಾದ ಸುದ್ದಿ ಬಂದಿದೆ. ಅವರು ಜಾನಕಿಯವರನ್ನು ಎಷ್ಟು ಪ್ರೀತಿ ಮತ್ತು ಕಕ್ಕುಲತೆಯಿಂದ ನೋಡಿ ಕೊಳ್ಳುತ್ತಿದ್ದರು ಎನ್ನುವುದುನ್ನು ಹತ್ತಿರದಿಂದ ನಾನು ಬಲ್ಲೆ.
ಈ ನೋವನ್ನು ಸಹಿಸುವ ಶಕ್ತಿ ಜಾನಕಿಯವರಿಗೆ ಬರಲಿ. ಬದುಕು ಅವರಿಗೆ ಸಹನೀಯವಾಗಲಿ ಎಂದು ಪ್ರಾರ್ಥಿಸುವುದು ಮಾತ್ರವೇ ನಮ್ಮ ಪಾಲಿಗೆ ಉಳಿದಿರುವುದು.
- ಎನ್.ಎಸ್.ಶ್ರೀಧರ ಮೂರ್ತಿ – ಪತ್ರಕರ್ತರು, ಲೇಖಕರು, ಬೆಂಗಳೂರು
