ಹೇಗೋ ನಾಟಕ ಮುಗಿಯಿತು,ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳು ಜೋರಾಗಿಯೇ ಬಂದವು… ಹರಿಕೃಷ್ಣ ಹರಿ ಅವರು ಮತ್ತು ಬಿವಿ ಕಾರಂತರ ನಡುವಿನ ಪ್ರಾಂಪ್ಟರ ಮುಂದೇನಾಯಿತು, ಮುಂದೆ ಓದಿ…
ಎಪ್ಪತ್ತರ ದಶಕ.
ಅಂದು ರವೀಂದ್ರ ಕಲಾಕ್ಷೇತ್ರದಲ್ಲಿ ಶಕಶೈಲೂಷರು (ಈಗಿನ ಬೆನಕ) ತಂಡದಿಂದ ಶ್ರೀರಂಗರ ನಾಟಕ “ಸಂಧ್ಯಾಕಾಲ” ಪ್ರದರ್ಶನ. ಕಾರಂತರು, ಶ್ರೀರಂಗರು, ಗೆಳೆಯ ಲೋಕೇಶ್ ಮತ್ತು ಇತರರು ಅದರಲ್ಲಿ ಭಾಗವಹಿಸಿದ್ದರು.
ಬ್ಯಾಂಕಿನ ಕೆಲಸ ಮುಗಿಸಿದ ನಾನು ಸೀದಾ ಕಲಾಕ್ಷೇತ್ರಕ್ಕೆ ಹೋಗಿ ಒಂದು ಟಿಕೆಟ್ ಕೊಂಡುಕೊಂಡೆ. ಪ್ರದರ್ಶನ ರಾತ್ರಿ ಏಳು ಗಂಟೆಗೆ ಆದ್ದರಿಂದ ಇನ್ನೂ ಒಂದು ಘಂಟೆ ಸಮಯವಿತ್ತು. ತಂಡದ ಸದಸ್ಯರೆಲ್ಲರೂ ನನ್ನ ಪರಿಚಯದವರೇ ಆದ್ದರಿಂದ ಅವರಿಗೆ ಶುಭ ಹಾರೈಸಿದರು ಗ್ರೀನ್ ರೂಂಗೆ ಹೋದೆ. ಮೇಕಪ್ ಮಾಡುತ್ತಿದ್ದ ನಾಣಿಯವರು ‘ಬಾರಯ್ಯ,’ ಅಂತ ಪ್ರೀತಿಯ ಸ್ವಾಗತ ನೀಡಿದರು. ಅವರಿಗೆ ಕೈಯೆತ್ತಿ ‘ನಮಸ್ಕಾರ ಸಾರ್’ ಅಂದೆ.
ಎಲ್ಲಿ ಗೆಳೆಯರನ್ನೂ ಮಾತನಾಡಿಸುತ್ತಿರುವಾಗ ಕಾರಂತರು ‘ಹರಿಕೃಷ್ಣ, ಬನ್ನಿ ಇಲ್ಲಿ’ ಎಂದು ಕರೆದರು. ಅವ್ರು ಕನ್ನಡಿಯ ಮುಂದೆ ಕುಳಿತು ಮೇಕಪ್ ನಾಣಿಯವರಿಂದ ಬಣ್ಣ ಹಚ್ಚಿಸಿಕೊಳ್ಳುತ್ತಿದ್ದರು. ಹೋದೆ ಗುರುಗಳ ಬಳಿಗೆ.
“#ಹರಿಕೃಷ್ಣ, ಸ್ಕ್ರಿಪ್ಟ್ ತಗೊಳ್ಳಿ. ಇವತ್ತು ನೀವು ಬೇರೆ ಎಲ್ಲಿಗೂ ಹೋಗೋ ಹಾಗಿಲ್ಲ. ನಂಗೆ ನೀವು ಪ್ರಾಂಪ್ಟ್ ಮಾಡ್ಬೇಕು.” – ಗುರುಗಳ ಅಪ್ಪಣೆಯಾಯಿತು. ನನಗೋ ಖುಶಿ, ಮೇಷ್ಟ್ರಿಗೆ ನಾನು ಸ್ಮೃತಿಪ್ರೇಷಕ ಇವತ್ತು ಅಂತ.
“ಸರಿ ಸಾರ್” , ಸ್ಕ್ರಿಪ್ಟು ಕೈಗೆತ್ತಿಕೊಂಡೆ.
“ಇಲ್ಲೇ ನನ್ನೆದುರು ಕೂತ್ಕೊಂಡು ನಂಗೆ ಡೈಲಾಗ್ ಕ್ಯೂ ಕೊಡ್ತಾ ಹೋಗಿ. ನಾನು ನನ್ನ ಡೈಲಾಗ್ ಮರೆತ್ರೆ ಪ್ರಾಂಪ್ಟ್ ಮಾಡಿ.” ಕಾರಂತರ ಸೆಕೆಂಡ್ ಆರ್ಡರ್. ಸರಿ ಕೆಲಸ ಶುರು ಮಾಡಿದೆ.
ಆಗ ಅರಿವಾಯಿತು, ಕಾರಂತರಿಗೆ ಹೆಚ್ಚುಕಮ್ಮಿ ಪ್ರತಿ ಮಾತಿಗೂ ಎಂದಿಗಿಂತ ಹೆಚ್ಚು ಪ್ರಾಂಪ್ಟಿಂಗ್ ಬೇಕಾಗಿತ್ತು… ಆ ಕ್ಷಣದಿಂದ ನನಗೆ ಜಗತ್ತನ್ನು ಹೆಗಲ ಮೇಲೆ ಹೊತ್ತ ಅಟ್ಲಾಸನ ಹೊಣೆಯ ಅನುಭವವಾಗಲು ತೊಡಗಿತು. ಅನಿವಾರ್ಯ…
ನಾಟಕ ಶುರುವಾಗುವಾಗ ಮೂರನೆಯ #ಆರ್ಡರ್… ” “ನಾನೆಲ್ಲಿ ಇರ್ತೀನೋ ನೀವೂ ಅಲ್ಲೇ ಹತ್ರಾನೇ ವಿಂಗ್ಸ್ ಮರೇಲಿ ಇರಬೇಕು ಯಾವಾಗ್ಲೂ, ಗೊತ್ತಾಯ್ತಾ?” – ಗೊತ್ತಾಗದೆ ಇದ್ದೀತೇ!
ಅಲ್ಲಿಂದ ನೋಡಿಪ್ಪಾ.. ಕಾರಂತರು ರಂಗದ ಎಡಕ್ಕೆ ಹೋದರೆ ಎಡಗಡೆ, ಬಲಕ್ಕೆ ಹೋದರೆ ಬಲಗಡೆ, ಮಧ್ಯೆ ಬಂದರೆ ನಡುಗಡೆ…ಒಂದು ಕೈಯಲ್ಲಿ ಸ್ಕ್ರಿಪ್ಟು, ಇನ್ನೊಂದು ಕೈಯಲ್ಲಿ ಟಾರ್ಚು- ಇವುಗಳೊಂದಿಗೆ ನನ್ನ ಓಡಾಟ – ಪ್ರಾಂಪ್ಟಾಗಿ ಓಡಾಡುತ್ತಾ ಪ್ರಾಂಪ್ಟ್ ಮಾಡುತ್ತಾ ಹೋದೆ. ನಾಟಕದ ಪಾತ್ರಗಳಿಗಿಂತ ಅಲ್ಲಿ ನಾನೇ ಹೆಚ್ಚು ಜಂಗಮನಾಗಿದ್ದೆ. ಓಡಾಟವೆಲ್ಲ ರಂಗದ ಹಿಂದೆ ಆದ್ದರಿಂದ ಪ್ರೇಕ್ಷಕರಿಗೆ ತಿಳಿಯುತ್ತಿರಲಿಲ್ಲ.
ಆದರೆ ಪ್ರಾಂಪ್ಟಿಂಗು! ಪಾತ್ರಕ್ಕೆ ನನ್ನ ಮಾತುಗಳು ಕೇಳದಿದ್ದರೆ! ಅನಿವಾರ್ಯವಾಗಿ ಕೆಲವೆಡೆ ಸ್ವಲ್ಪ ವಾಲ್ಯೂಂ ಹೆಚ್ಚಿಸಲೇ ಬೇಕಾಗಿತ್ತು.
ಹೇಗೋ ನಾಟಕ ಮುಗಿದಾಗ ಜಗತ್ತು ಅಟ್ಲಾಸನ ಹೆಗಲಿನಿಂದ ಇಳಿದಿತ್ತು.
ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳು ಕಟು ಟೀಕೆಗಳಾಗಿದ್ದವು. ಒಂದು ಪತ್ರಿಕೆಯಲ್ಲಂತೂ ಸಖತ್ ಟೀಕೆ ಬಂದಿತ್ತು-
“ನಾಟಕದಲ್ಲಿ ಪಾತ್ರಗಳು ಆಡುತ್ತಿದ್ದ ಮಾತುಗಳು ಸರಿಯಾಗಿ ಕೇಳಿಸುತ್ತಿರಲಿಲ್ಲ. ಪಾತ್ರಗಳ ಮಾತುಗಳಿಗಿಂತ
ಪ್ರಾಂಪ್ಟರನ ಮಾತುಗಳೇ ಸ್ಪಷ್ಟವಾಗಿ ಕೇಳಿಸುತ್ತಿದ್ದವು.”
- ಹರಿಕೃಷ್ಣ ಹರಿ (ಖ್ಯಾತ ಕಲಾವಿದರು, ಬರಹಗಾರರು)
