ನಿವೃತ್ತಿ ಜೀವನ ವರವೋ, ಶಾಪವೋ – ಬಾಣಾವರ ಶಿವಕುಮಾರ್ಹುಟ್ಟಿದವನಿಗೆ ಸಾವು ತಪ್ಪಿದ್ದಲ್ಲ. ವೃತ್ತಿಯಲ್ಲಿ ತೊಡಗಿದವನಿಗೆ ನಿವೃತ್ತಿ ತಪ್ಪಿದ್ದಲ್ಲ. ನಿವೃತ್ತಿಯ ನಂತರ ಬದುಕು ಹೇಗಿರುತ್ತೆ? ಇದೊಂದು ವರವೋ , ಶಾಪವೋ ಬಗ್ಗೆ ಲೇಖಕರಾದ ಬಾಣಾವರ ಶಿವಕುಮಾರ್ ಅವರು ಸುಂದರವಾಗಿ ನಿರೂಪಿಸಿದ್ದಾರೆ.ಮುಂದೆ ಓದಿ…

#ನಿವೃತ್ತಿ ಜೀವನ ವರವೋ, ಶಾಪವೋ ಹೀಗೊಂದು ಜಿಜ್ಞಾಸೆ/ತರ್ಕ ಹುಟ್ಟಿಕೊಳ್ಳುವ ಸಂದರ್ಭವಾದರೂ ಯಾವುದೂ ಅಂತ ಅರೆ ಕ್ಷಣ ಯೋಚಿಸಿದಾಗ ನಮ್ಮ ಕಣ್ಮುಂದೆ ಬರುವ ವಿಚಾರಗಳು ಅನೇಕ. ಇಂತಹದೊಂದು ಪ್ರಶ್ನೆ ಉದ್ಭವಿಸೋದು ವೃತ್ತಿಯಿಂದ ಬಿಡುಗಡೆ ಹೊಂದಿ ಜೀವನ ಅನ್ನೋದು ತನ್ನ ಮತ್ತೊಂದು ಮಗ್ಗುಲನ್ನು ಬದಲಾಯಿಸಿದಾಗ. ಒಡನಾಟದ ಹೆಗ್ಗುರುತಾಗಿ ಸ್ನೇಹಿತರು, ಸಹೋದ್ಯೋಗಿಗಳು ಹಾರ ತುರಾಯಿಗಳ ಸನ್ಮಾನ ಪಡೆದು , ವೃತ್ತಿ ಜೀವನದ ಹೆಜ್ಜೆ ಗುರುತುಗಳ ಬಗ್ಗೆ ಸುದೀರ್ಘ ಭಾಷಣ ಬಿಗಿದು, ಗದ್ಗದ ತೊದಲು ನುಡಿಗಳೊಡನೆ ಸ್ನೇಹಿತರನ್ನು ಬಿಗಿದಪ್ಪಿ ಭಾರವಾದ ಹೃದಯದೊಡನೆ ಕಛೇರಿಯ ಕಟ್ಟಡದಿಂದ ಹೊರನಡೆದಾಗ. ನೆನಪಿನ ಕಾಣಿಕೆ ಕೈಯಲ್ಲಿ ಹಿಡಿದು, ಹಾರ ತುರಾಯಿ ಜೊತೆ ಹಣ್ಣಿನ ಬಕ್ಕೆ ಹಿಡಿದು ಮನೆ ಸೇರಿದ ಬಳಿಕ ಜೀವನ ಮುಸ್ಸಂಜೆಯ ಇಳಿ ವಯಸ್ಸಿಗೆ ಕಾಲಿಡೋ ದುಗುಡ. ‘ಉಡುಗೊರೆಯೊಂದಾ ತಂದಾ ಎನ್ನಯ ಮನದಾನಂದಾ’ ಅಂತ ಮನೆಯವರೆಲ್ಲಾ ಸೇರಿ ಆರತಿ ಎತ್ತಿ ಒಳಗೆ ಕರೆಸಿಕೊಳ್ಳುವ ಹೆಬ್ಬಯಕೆ. ಇನ್ನು ಜೀವನ ಸುಖದ ಸೋಪಾನವೋ, ಶಾಪವೋ ಅಂತ ಅನ್ನಿಸೋ ಆ ಕ್ಷಣ ಹುಟ್ಟಿಕೊಳ್ಳೋದು ಸಹಜ. ಯೌವನದ ಹುರುಪಿನ ವೃತ್ತಿ ಬದುಕಿಗೆ ಕಾಲಿಟ್ಟ ಕ್ಷಣ, ಸತತವಾಗಿ ಸೇವೆಗೈದು ದಣಿವಾಗಿ ಇಳಿವಯಸ್ಸಿಗೆ ಜಾರುವ ಉತ್ಸಾಹ ಕಳೆದುಕೊಂಡ ಗಳಿಗೆಗಳು ಒಮ್ಮೆ ತುಲನ ಮಾಡಿ ನೋಡಿದಾಗ, ಮುಂದೆ ಎದುರಾಗುವುದು ನಿರಾಯಾಸದ ಬದುಕೋ ಆತಂಕದ ತಳಮಳದ ಕ್ಷಣಗಳೋ ಅಂತ ಅನ್ನಿಸೋ ಈ ಪ್ರಶ್ನೆ ನಮ್ಮ ಮುಂದೆ ಒಮ್ಮೆ ಹಾದುಹೋಗದೇ ಇರಲಾರದು.

ಬದುಕಿನ ಯಾವುದೇ ಕ್ಷಣಗಳನ್ನು ಅನುಭವಿಸಬೇಕಾದರೆ ಅದಕ್ಕೊಂದು ಪೂರ್ವಭಾವಿ ಸಿದ್ಧತೆಯ ಅನಿವಾರ್ಯತೆ ಇರಬೇಕು. ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಯಾವುದನ್ನೂ ಈ ನಮ್ಮ ಮನೋಸ್ಥಿತಿ ಅಷ್ಟು ಸುಲಭವಾಗಿ ಜೀರ್ಣಿಸಿ ಕೊಳ್ಳಲಾರದು. ಒತ್ತಡದ ದಿನಗಳು ಕಳೆಯಿತು, ಇನ್ನೇನಿದ್ದರೂ ‘ಪವಡಿಸು ಪರಮಾತ್ಮ’ ಅಂತ ಮನೆಯ ಯಾವದೋ ಮೂಲೆಯಲ್ಲಿ ಬಿದ್ದಿರುವ ಆರಾಮ್ ಖುರ್ಚಿಗೆ ಹೊಸ ಬಟ್ಟೆ ತೊಡಿಸಿ ಅದರ ಮೇಲೆ ಕಾಲು ಚಾಚಿ ಸುಖದ ದಿನ ಕಲ್ಪನೆ ಮಾಡಿಕೊಳ್ಳೋ ಆ ಕ್ಷಣ ಬರದಿರಲಾರದು.

ಫೋಟೋ ಕೃಪೆ :shutterstock

ಹುಟ್ಟಿದವನಿಗೆ ಸಾವು ತಪ್ಪಿದ್ದಲ್ಲ. ವೃತ್ತಿಯಲ್ಲಿ ತೊಡಗಿದವನಿಗೆ ನಿವೃತ್ತಿ ತಪ್ಪಿದ್ದಲ್ಲ. ಈ ಸತ್ಯಾಂಶದ ಹಿನ್ನೆಲೆಯಲ್ಲಿ ನಿವೃತ್ತಿ ವರವೋ, ಶಾಪವೋ ಎನ್ನುವ ಜಿಜ್ಞಾಸೆ ಸಹಜವಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡವರ ಎಲ್ಲರ ಬಾಳಲ್ಲಿ ಮೂಡದಿರಲಾರದು. ಹಾಗಾದರೆ ನಿವೃತ್ತಿ ವರ ಎಂದು ಪರಿಗಣಿಸಲು ಮಾನದಂಡವಾದರೂ ಯಾವುದು ಅಂತ ಕ್ಷಣಕಾಲ ಯೋಚಿಸಿದಾಗ, ಅಲ್ಲಿ ಗೋಚರವಾಗುವ ಅಂಶಗಳನ್ನು ನೋಡೋಣ. ಇನ್ನು ಮುಂದೆ ದೈಹಿಕವಾಗಿ, ಮಾನಸಿಕವಾಗಿ ನಿನ್ನ ದುಡಿಮೆಯ ಬಗ್ಗೆ ತಲೆ ಕೆಡಿಸಿಕೊಳ್ಳುವಂತಿಲ್ಲ. ಅದಕ್ಕೆ ಪೂರ್ಣ ವಿರಾಮ. ಯಾವುದೇ ಕೆಲಸದ ಒತ್ತಡವಿಲ್ಲ. ಬಾಸ್ ಮುಂದೆ ಕೈಕಟ್ಟಿ ನಿಲ್ಲುವ ಗೊಡವೆ ಇಲ್ಲ. ನಿಮಗೆ ನೀವೇ ಬಾಸ್. ತುರ್ತು ರಜೆಗೆ ಅಂಗಲಾಚುವ ಅವಶ್ಯಕತೆ ಇಲ್ಲ. ೩೬೫ ದಿನವೂ ಹೆಂಡತಿ ಮಕ್ಕಳೊಂದಿಗೆ ಹಾಯಾಗಿರಬಹುದು. ತಿಂಗಳ ಸಂಬಳದಲ್ಲಿ ಯಾವುದೇ ಮುಂಗಡ ಪಡೆದ ಹಣದ ಕಡಿತವಿಲ್ಲ. ವರ್ಗಾವಣೆ ಬಡ್ತಿ ಇವುಗಳ ಆತಂಕವಿಲ್ಲ. ಎಲ್ಲವೂ ನಿರಾಳವಾದ ಬದುಕು.

ವೃತ್ತಿಯಲ್ಲಿ ಮಾಡಿದ ಸೇವೆಗೆ ಸಂಸ್ಥೆಯ ವತಿಯಿಂದ ಸಿಗುವ ನಿವೃತ್ತಿ ಸೌಲಭ್ಯದ ಒಟ್ಟಾರೆ ಪ್ಯಾಕೇಜ್ (ಇಡುಗಂಟು) ಗ್ರ್ಯಾಜುಯಿಟಿ, ರಜೆ ನಗದೀಕರಣ, ಗುಂಪು ವಿಮೆ ಸೌಲಭ್ಯ ಇತ್ಯಾದಿಯ ಇಡುಗಂಟು ಪಡೆದು ಅದನ್ನು ಜೋಪಾನ ಮಾಡಿಕೊಳ್ಳುವುದಷ್ಟೇ ಉಳಿದಿರುವ ಕೆಲಸ.

ಮಾಡಬೇಕಾಗಿರುವ #ಶುಭ_ಕಾರ್ಯಗಳಿಗೆ ಇದು ಸಕಾಲ. ಕುಟುಂಬದವರೊಡನೆ, ಬಂಧುಗಳೊಡನೆ ಬೆರೆಯಲು ಸುಯೋಗ. ಕೆಲಸದ ಒತ್ತಡದ ನಡುವೆ ಅರ್ಧಕ್ಕೆ ಚಿವುಟಿ ಹಾಕಿದ್ದ ಕಲಿತ ಹವ್ಯಾಸಗಳನ್ನು ಮುಂದುವರಿಸಿಕೊಂಡು ಹೋಗಲು ಮತ್ತೊಮ್ಮೆ ಸದವಕಾಶ, ಹೊಸದಾಗಿ ಎನನ್ನಾದರೂ ಮಾಡಬೇಕೆಂಬ ಹಂಬಲ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ನಿವೃತ್ತಿ ವರವೆನಿಸದೇ ಇರಲು ಸಾಧ್ಯವೇ ಇಲ್ಲ.

ಇವೆಲ್ಲಾ ಒಂದೆಡೆಯಾದರೆ ಕೌಟುಂಬಿಕ ಜೀವನದಲ್ಲಿ ನೀವು ಕಳೆದುಕೊಂಡದ್ದೇನನ್ನೋ ಕೊಡಲು ಈಗ ವೇದಿಕೆ ಸಜ್ಜು ಎನಿಸದಿರಲಾರದು. ಮುದ್ದಿನ ಹೆಂಡತಿಯ ಬೇಕು ಬೇಡಗಳನ್ನು ಆಲಿಸಿ ಸಪ್ತಪದಿ ಹೆಜ್ಜೆಯ ಸಾರಾಂಶವನ್ನು ಸಂಗಾತಿಯೊಂದಿಗೆ ಸುಪ್ರೀತಗೊಳಿಸುವ ಸಕಾಲ. ಮಕ್ಕಳ ಓದು ಬರಹ, ಉದ್ಯೋಗ, ಶುಭಕಾರ್ಯ ಇವೆಲ್ಲಾ ಪೂರೈಸಿ ಬಾಂಧವ್ಯ ವೃದ್ಧಿಗೊಳಿಸಿಕೊಳ್ಳೋ ಅವಕಾಶ, ಬಂಧು ಬಳಗ, ಹಿತೈಷಿಯರನ್ನು ನಾವು ನಮ್ಮವರು ಎಂಬ ಗಟ್ಟಿತನ ಉಳಿಸಿಕೊಳ್ಳೋ ಭರವಸೆ ಮೂಡಿಸೋ ಕಾಲ.ಕುಟುಂಬ ಸಮೇತ ದೇಶ ಸುತ್ತು ಕೋಶ ಓದು ಅನ್ನೋ ಹಾಗೆ ಪ್ರಮುಖ ಪ್ರವಾಸ ಕೈಗೊಳ್ಳೋ ಅವಕಾಶ, ಸಮಾಜಮುಖಿ ಸೇವೆಯ ಕಡೆ ಗಮನ ಹರಿಸಿ ಸನ್ಮಾರ್ಗದೆಡೆಗೆ ನಡೆಯೋ ಅವಕಾಶ, ಇವೆಲ್ಲವೂ ದೊರೆಯುವ ಮುಕ್ತ ಅವಕಾಶ ಸಿಗೋ ಸಂದರ್ಭ ನಿವೃತ್ತಿ ಜೀವನದ ಕ್ಷಣಗಳು. ಹಾಗಾಗಿ ನಿವೃತ್ತಿ ಒಂದು ವರ ಅನ್ನೋದರಲ್ಲಿ ಯಾವ ಸಂಶಯವೂ ಬೇಡ ಎಂಬುದು ಒಂದು ಕಡೆಯ ಮನಸ್ಸಿನ ತರ್ಕ.
ಇನ್ನು ನಿವೃತ್ತಿ ಶಾಪ ಎಂಬುದು ನಾವು ಅಂದುಕೊಳ್ಳದಿದ್ದರೂ ಪರರಿಂದ ಕೇಳುವು ಕುಟುಕಿನ ಮಾತುಗಳು ನಮ್ಮನ್ನು ಹೆಚ್ಚು ಹೈರಾಣಾಗಿಸುತ್ತದೆ. ಏನು ರಿಟೈರ್ಡ್ ಆದರಂತೆ, ಇಷ್ಟು ವರ್ಷ ಗಟ್ಟಿ ಇದ್ದಿರಿ, ಮಾಡಿದಿರಿ, ಇನ್ನು ದೇಹ ಕೇಳಬೇಕಲ್ಲ. ವಯಸ್ಸಾದಮೇಲೆ ನಿವೃತ್ತಿ ಆಗಲೇ ಬೇಕಲ್ಲಾ. ಹೋಗಲಿ ಬಿಡಿ. ಇನ್ನು ಮುಂದೆ ರಾಮಾ ಕೃಷ್ಣಾ ಅಂತ ಮನೆಯಲ್ಲಿಯೇ ಇದ್ದುಬಿಡಿ. ಇನ್ನೇನಿದ್ದರೂ ಮನೆಯಲ್ಲಿಯೇ ಹಾಕಿದ ಹುಲ್ಲು, ಕಟ್ಟಿದ ಗೂಟ ಅಷ್ಟೇ ನಿಮ್ಮ ಜೀವನ. ನಾ ಹೀಗೆ ಹೇಳ್ತೀನಿ ಅಂತ ಬೇಜಾರು ಮಾಡಿಕೊಳ್ಳಬೇಡಿ. ಇನ್ನುಮುಂದೆ ಎಲ್ಲೂ ತಿರುಗುವುದಕ್ಕೆ ಹೋಗದೆ ಮನೆಯಲ್ಲೇ ಇರುವುದು ಒಳ್ಳೆಯದು. (ಅಂದರೆ ಅವನ ಅರ್ಥ ಗೃಹ ಬಂಧನದಲ್ಲಿ ಇದ್ದುಬಿಡೋದು) ನಿಮ್ಮ ಒಳ್ಳೆಯದಕ್ಕೇ ಅಂತ ಬೇರೆ. ನೀವು ಹೊರಗಡೆ ಹಾಳು ಮೂಳು ಎಲ್ಲಾ ತಿನ್ನೋಕೆ ಹೋಗಬೇಡಿ. ದೇಹಕ್ಕೆ ತಡಕೊಳ್ಳೋ ಶಕ್ತಿ ಇರೋಲ್ಲ ಅಂತ ತಾವೇ ವೈದ್ಯರ ತರಹ ಬಿಟ್ಟಿ ಸಲಹೆ ಕೊಡುವಂಥಾ ಜನರು.

ಫೋಟೋ ಕೃಪೆ : agewellfoundation

ಈಗಂತೂ ಚಿಕ್ಕ ಮಕ್ಕಳಿಗೆ ಬಿಪಿ, ಶುಗರ್ ಇನ್ನೂ ಏನೇನೋ ಬರುತ್ತವಂತೆ (ಅಂದರೆ ಚಿಕ್ಕವರಿಗೆ ಬಂದಮೇಲೆ ನಿಮಗೆ ಬಿಡುತ್ತದೆಯೇ) ಎಂಬ ಕೊಂಕು ನುಡಿ. ಮತ್ತೆ ಅದಕ್ಕೆ ಔಷಧಿಯೇ ಇಲ್ಲವೇನೋ ಎಂಬ ಭಯದ ಅರಿವು ಹುಟ್ಟಿಸೋ ಪ್ರಯತ್ನ. ಯಾವುದಕ್ಕೂ ನಿಮ್ಮ ಹುಷಾರಲ್ಲಿ ನೀವಿರೋದು ಒಳ್ಳೆಯದು ಎಂದು ಬಿಟ್ಟಿ ಸಲಹೆ ಕೊಡೋ ಮನೆಯವರ ಮುಂದೆ ಫಿಟ್ಟಿಂಗ್ ಇಟ್ಟು ತೃಪ್ತಿ ಪಡೆದುಕೊಳ್ಳೋ ಮಂದಿ. ಇಷ್ಟಕ್ಕೆ ನಿಲ್ಲಿಸದೆ ಹಣಕಾಸಿನ ವಿಚಾರದಲ್ಲಿ ಹೆಂಡತಿ ಮಕ್ಕಳು ಮರಿ ಅಂತ ಯಾರನ್ನೂ ನಂಬಬೇಡಿ. ನಂಬಿದರೆ ಚಂಬೇ ಗತಿ ಎಂದು ವೇದವಾಕ್ಯ ಹೇಳೋರು ಎಷ್ಟೋ ಮಂದಿ. ಮೊದಲೇ ದ್ವಂದ್ವ ಮನಸ್ಥಿತಿಯಲ್ಲಿ ಸಿಲುಕಿದ ಜೀವಕ್ಕೆ ಮತ್ತಷ್ಟು ಕಸಿವಿಸಿ ಉಂಟುಮಾಡೋರು ಬಹಳಷ್ಟು ಜನ . ಇದನ್ನೆಲ್ಲಾ ನೋಡಿದಾಗ ನಿವೃತ್ತಿ ಮೊದಲಿನ ದಿನಗಳೇ ಚೆನ್ನಾಗಿತ್ತೇನೋ ಅನ್ನಿಸದಿರಲಾರದು.

ಇನ್ನು ಕುಟುಂಬದಲ್ಲಿ ನಿವೃತ್ತಿ ವರವೆಂದು ಬಯಸಿದವರಿಗೆ ಎದುರಾಗುವ ಸವಾಲುಗಳಾದರೂ ಏನು ಅಂತ ನೋಡುತ್ತಾ ಹೋದರೆ ಕೊನೆಗೆ ಸಿಗುವ ಅಂತಿಮ ಉತ್ತರ #ವೃತ್ತಿ ಜೀವನದ ದಿನಗಳೇ ಚೆನ್ನಾಗಿತ್ತೇನೋ ಎಂಬ ಭಾವನೆ ಬರದಿರಲಾರದು.


  • ಬಾಣಾವರ ಶಿವಕುಮಾರ್   (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು )

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW