‘ಎ. ಪಿ. ಜೆ ಅಬ್ದುಲ್ ಕಲಾಂ ಅವರೊಬ್ಬ ಕನಸು ಹಂಚುವ ಹರಿಕಾರರಾಗಿ ಬದುಕಿದರು. ಕನಸುಗಳ ತಾಯಿ ಬೇರು ನಿದ್ರೆ. ನಮ್ಮ ದೇಹ ಮತ್ತು ಮನಸ್ಸು, ಹಗಲು ರಾತ್ರಿಗಳಿಗೆ ಹೊಂದಿಕೊಂಡು ಜೈವಿಕ ಗಡಿಯಾರದಂತೆ ಕೆಲಸ ಮಾಡುತ್ತದೆ. ನಿದ್ರೆ ಆರೋಗ್ಯದ ಪ್ರಮುಖ ಲಕ್ಷಣ’. – ಡಾ. ಶೇಖರ್ ಗೌಳೇರ್
ಈ ಭೂಮಿಯ ಮೇಲೆ ಚಿರಂಜೀವಿಯಾಗಿ ಬದುಕಿರುತ್ತೇನೆಂದು ಬದುಕಿರುತ್ತೇನೆಂದು ಕನಸು ಕಾಣಿರಿ ಹಾಗೂ ಇವತ್ತೇ ಸಾಯುತ್ತೇನೆಂದು ಜೀವಿಸಿ” ಎಂದು ಒಬ್ಬ ದಾರ್ಶನಿಕ ಹಿತ ನುಡಿಯುತ್ತಾನೆ. ಅಂದರೆ ಸಾವಿನ ವಾಸ್ತವಕ್ಕಿಂತ ಕನಸಿನ ಮಾಯಾ ಲೋಕವೇ ಹೆಚ್ಚು ಖುಷಿ ಕೊಡುವಂಥದ್ದು. ನಮ್ಮ ಹೆಮ್ಮೆಯ ಕ್ಷಿಪಣಿ ವಿಜ್ಞಾನಿ ಎ. ಪಿ. ಜೆ ಅಬ್ದುಲ್ ಕಲಾಮ್ “ಕನಸು ಕಾಣಿರಿ, ಕನಸು ಕಾಣಿರಿ. ಕನಸು ಚಿಂತನೆಯಾಗಲಿ, ಚಿಂತನೆ ಕಾಯಕವಾಗಲಿ, ಕಾಯಕ ಯಶಸ್ಸಿನ ಫಲ ನೀಡಲಿ” ಎಂದು ಸದಾ ಯುವ ಪೀಳಿಗೆಗೆ ಸಂದೇಶ ನೀಡುತ್ತಿದ್ದರು. ಉನ್ನತ ವಿಚಾರಗಳು ಕನಸುಗಳಾಗಿ ರೂಪ ತಾಳಿ, ಅವು ವ್ಯಕ್ತಿಯ ನಿದ್ದೆ ಕೆಡಿಸಿದಾಗ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಬಲ್ಲ ಎಂಬುದು ಕಲಾಮರ ಅಭಿಪ್ರಾಯವಾಗಿತ್ತು. ಅವರೊಬ್ಬ ಕನಸು ಹಂಚುವ ಹರಿಕಾರರಾಗಿ ಬದುಕಿದರು.

ಫೋಟೋ ಕೃಪೆ : britannica
ಫ್ರಾನ್ಸ್ ದೇಶದ ಕಾಫ್ಕಾನ ಪ್ರಸಿದ್ಧ ಕಥೆ ರೂಪಾಂತರ (ಮೆಟಾಮಾರ್ಫಾಸಿಸ್) ದಲ್ಲಿ ಕಥಾನಾಯಕ ಗ್ರೇಗರ್ ಸಂಸ ಒಂದು ರಾತ್ರಿ ಕೆಟ್ಟ ಕನಸು ಕಂಡು ಎಚ್ಚರವಾದಾಗ ಆತ ದೊಡ್ಡ ಹುಳುವಾಗಿ ರೂಪಾಂತರಗೊಂಡಿರುತ್ತಾನೆ. ಜೂಲಿಯಸ್ ಸೀಝರ್ ಕೊಲೆಯಾದ ಹಿಂದಿನ ದಿನ ಅವನ ಹೆಂಡತಿ ಒಂದು ಕೆಟ್ಟ ಕನಸನ್ನು ಕಂಡು ನೀವು ಈ ದಿನ ಹೊರಗೆ ಹೋಗಬೇಡಿ ಎಂದು ಗಂಡನನ್ನು ಗೋಗರೆದಿರುತ್ತಾಳೆ.
ಕಾಫ್ಕಾ ಮತ್ತು ಸೀಝರನ ಮೇಲಿನ ಎರಡು ಉದಾಹರಣೆಗಳು. ನಾವು ಕಾಣುವ ಕನಸುಗಳು ಚಿತ್ರ ವಿಚಿತ್ರ, ಅಮೂರ್ತ, ಭಯಾನಕ, ಭ್ರಾಮಕ ಘಟನೆಗಳೆಂದು ನಿರೂಪಿಸುತ್ತವೆ. ನಮ್ಮ ಹಿರಿಯರು ಕನಸುಗಳನ್ನು ಪೂರ್ವ ಜನ್ಮದ ನೆನಪುಗಳೆಂದು, ಭವಿಷ್ಯದ ಮುನ್ಸೂಚಕವೆಂದು ನಂಬಿದ್ದರು. ಇಂದಿಗೂ ಬೆಳಗಿನ ಜಾವದ ಕನಸುಗಳು ನನಸಾಗುತ್ತವೆಂದು ಎಷ್ಟೋ ಜನ ನಂಬಿದ್ದಾರೆ. ಸುಂದರವಾದ, ಭಯಾನಕ, ತಲೆ ಬುಡವಿಲ್ಲದ ಕನಸುಗಳನ್ನು ಮನುಷ್ಯ ತಾನು ಯಾವಾಗ ನಿದ್ರಿಸತೊಡಗಿದನೋ ಅಂದಿನಿಂದ ಕಾಣುತ್ತ ಬಂದಿದ್ದಾನೆ. ಮನೋವಿಜ್ಞಾನಿಗಳ ಪ್ರಕಾರ ಕನಸುಗಳು ಮಿಥ್ಯ, ಹುಸಿ, ಊಹೆ ಹಾಗೂ ಕಲ್ಪನೆಗಳ ಕೂಸಾಗಿದ್ದರೂ ಅವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ. ಅವು ನಮ್ಮ ಬದುಕನ್ನು ಜೀವಂತವಾಗಿಟ್ಟಿವೆ. ನಮ್ಮ ಬದುಕಿನಲ್ಲಿ ಕನಸುಗಳೇ ಇಲ್ಲದಿದ್ದರೆ ನಾವು ಹುಚ್ಚರಾಗಿ ಬಿಡುತ್ತಿದ್ದೆವು.
ಕಷ್ಟ ಪಡದೇ ನಮ್ಮಿಚ್ಛೆ ಪೂರೈಸುವ ಕನಸುಗಳು ಹದಿ ಹರೆಯದವರ ಪಾಲಿಗೆ ಸುಗ್ಗೀ ಕಾಲ. ಮನೋವಿಜ್ಞಾನಿಗಳ ಪ್ರಕಾರ ಪ್ರೀತಿ ಪ್ರೇಮ ಪ್ರಣಯವೆಂದು ಹಾತೊರೆಯುವ ಯುವ ತರುಣ ತರುಣಿಯರ ಕನಸುಗಳೇ ಬೇರೆ. ಬದುಕಿನಲ್ಲಿ ಝೀರೋಗಳಾಗಿದ್ದವರು ಕನಸಿನಲ್ಲಿ ಹೀರೋಗಳಾಗಿ ಮೆರೆಯುತ್ತಾರೆ. ಅವರು ತಮ್ಮ ಕನಸುಗಳಲ್ಲಿ ತಮಗಿಷ್ಟ ಬಂದವರನ್ನು ಪ್ರೀತಿಸುತ್ತಾರೆ, ಭೇಟಿಯಾಗುತ್ತಾರೆ. ಬೈಕಿನಲ್ಲಿ ಸುತ್ತಾಡುತ್ತಾರೆ. ಅಂತಿಮವಾಗಿ ಅಪ್ಪಿ ಮುದ್ದಾಡುತ್ತಾರೆ. ಕೆಲವೊಮ್ಮೆ ನಾವು ದ್ವೇಷಿಸುತ್ತಿದ್ದವರನ್ನು ಕನಸಿನಲ್ಲಿ ಹಿಡಿದು, ಬಡಿದು, ಕೊಚ್ಚಿ ಕೊಂದುಹಾಕುವ ಹಂತಕ್ಕೂ ಹೋಗಬಹುದು. ಕನಸುಗಳು ನಮ್ಮ ವ್ಯಕ್ತಿತ್ವ, ಯೋಚನಾ ಲಹರಿ, ಹವ್ಯಾಸ, ಅಭಿರುಚಿ, ಸ್ವಭಾವಗಳನ್ನು ಅವಲಂಭಿಸಿರುತ್ತವೆ. ಈಗಾಗಲೇ ಹೇಳಿದಂತೆ ಹದಿ ಹರಯದವರ, ಚಿಕ್ಕ ಮಕ್ಕಳ ಹಾಗೂ ವಯಸ್ಸಾದವರ ಕನಸುಗಳೇ ಬೇರೆ.

ಫೋಟೋ ಕೃಪೆ : thelist
ಪ್ರತಿ ರಾತ್ರಿ ಒಬ್ಬರು ಸರಾಸರಿ ನಾಲ್ಕೈದು ಕನಸು ಕಾಣುತ್ತಾರೆ. ಬುದ್ಧಿ, ಮನಸ್ಥು, ಆರೋಗ್ಯವನ್ನು ಸದಾ ಹತೋಟಿಯಲ್ಲಿಡುವ ಕನಸುಗಳು ನಮ್ಮ ಸ್ವಾಸ್ಥ್ಯದ ಅಸ್ತ್ರದಂತೆ ಕೆಲಸ ಮಾಡುತ್ತದೆ. ಯುದ್ಧ ಮಾಡುವ ಸೈನಿಕರು ತಮ್ಮ ಊರು, ಹೆಂಡತಿ, ಮಕ್ಕಳು, ತಂದೆ ತಾಯಿಯರ ಕನಸು ಕಾಣುತ್ತಾರೆ. ಮಕ್ಕಳಿಗೆ ತಮಗೆ ಇಷ್ಟವಾದ ಆಟಗಳು, ಆಟಗಳ ನಾಯಕರು, ಕಾರ್ಟೂನು, ಕಥೆ, ಪ್ರಾಣಿ, ಪಕ್ಷಿಗಳ ಕನಸು ಬೀಳುತ್ತವೆ. ಹಸಿದ ಭಿಕ್ಷುಕರು ಪಾಯಸ, ವಡೆ, ಹೋಳಿಗೆ, ಜಿಲೇಬಿ ಬಗೆ ಬಗೆಯ ಭಕ್ಷ್ಯಗಳನ್ನು ಸವಿದಂತೆ ಕನಸು ಕಾಣುತ್ತಾರೆ. ವಿದ್ಯಾರ್ಥಿಗಳು ಪಾಸಾದ ಕನಸು, ನಿರುದ್ಯೋಗಿಗಳು ಉದ್ಯೋಗ ಪಡೆದ ಕನಸು, ಕ್ರೀಡಾ ಪಟುಗಳು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಕನಸು, ಹೀಗೆ ಕನಸುಗಾರರಿಗೆ ಅವರವರ ಆಸೆ, ಆಕಾಂಕ್ಷೆ, ನಿರೀಕ್ಷೆಗಳೇ ಸರಕುಗಳು. ವಾಸ್ತವದಲ್ಲಿ ಕೈಗೂಡದ ಎಷ್ಟೋ ಅಭೀಪ್ಸೆಗಳು ಕನಸಿನಲ್ಲಿ ನನಸಾಗುತ್ತವೆ. ಕೆಲವರಿಗೆ ಪತ್ತೇದಾರಿ ಸಿನಿಮಾ, ದಾರಾವಾಹಿ, ಕಾದಂಬರಿಗಳೆಂದರೆ ಅಚ್ಚುಮೆಚ್ಚು. ರಾತ್ರಿ ಅವುಗಳನ್ನು ನೋಡಿ, ಓದಿ ಮಲಗಿದಾಗ ಕೊಲೆ, ಅಪಘಾತ, ಆತ್ಮಹತ್ಯೆಯಂತಹ ಭಯಾನಕ ಕನಸು ಬೀಳುತ್ತವೆ. ಸತ್ತವರು ಎದ್ದುಬಂದಂತೆ, ಹಾವು ಬುಸುಗುಟ್ಟಿದಂತೆ, ನಿದ್ರೆಯಲ್ಲಿ ಕತ್ತು ಹಿಸುಕಿದಂತೆ, ಹುಚ್ಚು ನಾಯಿ ಬೆನ್ನಟ್ಟಿದಂತೆ ಕನಸು ಕಾಣುತ್ತಾರೆ. ಕನಸಿನ ಮಾಯಾಲೋಕವೇ ಹಾಗೆ. ಅದು ನಮ್ಮ ಬದುಕಿನ ಕಷ್ಟ, ಸುಖ, ದು:ಖ, ಸಂತೋಷಗಳ ಕಲಸು ಮೇಲೋಗರ.
ರಷ್ಯದ ಮನೋವಿಜ್ಞಾನಿ ೪೧, ೦೦೦ ಕನಸುಗಳ ವರದಿಯನ್ನು ಸಂಗ್ರಹಿಸಿ ವಿಶ್ಲೇಷಿಸುತ್ತಾನೆ. ಅವರ ಪ್ರಕಾರ ಮನುಷ್ಯ ದೈಹಿಕ, ಮಾನಸಿಕ ಹಾಗೂ ಅಧ್ಯಾತ್ಮಿಕವಾಗಿ ಆರೋಗ್ಯವಾಗಿದ್ದರೆ ಅಂಥವರಿಗೆ ಯಾವ ಭಯಾನಕ ಕೆಟ್ಟ ಕನಸುಗಳೂ ಬೀಳುವುದಿಲ್ಲವಂತೆ. ಅವರೇ ಹೇಳುವಂತೆ ಕೆಟ್ಟ ಕನಸುಗಳಿಗೆ ಭಯ, ದುಗುಡ, ಒತ್ತಡ, ಖಿನ್ನತೆ, ಮಾರಣಾಂತಿಕ ಖಾಯಿಲೆ ಹಾಗೂ ಹತ್ತಿರದ ಬಂಧುಗಳ ಸಾವೇ ಕಾರಣವಂತೆ. ಮೋವಿಜ್ಞಾನಿ ಕಾರ್ಲ್ ಯೂಂಗ್ ರವರ ಪ್ರಕಾರ ಕೆಟ್ಟ ಕನಸುಗಳು ಆರೋಗ್ಯಕ್ಕೆ ಒಳ್ಳೆಯವೇ. ಏಕೆಂದರೆ ಅಂಥ ಕನಸುಗಳು ಮನಸ್ಥನ್ನು ಒತ್ತಡದಿಂದ ಮುಕ್ತಗೊಳಿಸುತ್ತವಂತೆ! ಕನಸುಗಳಿಗೆ ಕಾರಣವೇನು? ಅವುಗಳಿಂದೇನು ಪ್ರಯೋಜನ? ಕುರುಡರು, ಮೂಗರು, ಪ್ರಾಣಿ ಪಕ್ಷಿಗಳು ಕನಸು ಕಾಣುತ್ತವೆಯೇ? ಹೀಗೆ ಹತ್ತಾರು ಪ್ರಶ್ನೆಗಳು ಮನೋವೈದ್ಯರನ್ನು ಕಾಡುತ್ತಲೇ ಬಂದಿವೆ.

ಫೋಟೋ ಕೃಪೆ : thechelseapsychologyclinic
ಕನಸುಗಳ ತಾಯಿ ಬೇರು ನಿದ್ರೆ. ನಮ್ಮ ದೇಹ ಮತ್ತು ಮನಸ್ಸು, ಹಗಲು ರಾತ್ರಿಗಳಿಗೆ ಹೊಂದಿಕೊಂಡು ಜೈವಿಕ ಗಡಿಯಾರದಂತೆ ಕೆಲಸ ಮಾಡುತ್ತದೆ. ಹಗಲು ನಾವು ದುಡಿದು , ದಣಿದು ಬಳಲಿರುತ್ತೇವೆ. ರಾತ್ರಿ ಆದೊಡನೆ ನಿದ್ರೆ ಆವರಿಸುತ್ತದೆ. ದೇಹದ ಬೆಳವಣಿಗೆಗೆ, ಜೀವಕೋಶಗಳ ವೃದ್ಧಿಗೆ ಅತ್ಯಂತ ಅವಶ್ಯಕವಾದುದು ನಿದ್ರೆ. ನಿದ್ರೆಯೇ ಇಲ್ಲದಿದ್ದರೆ ದೇಹ, ಮನಸ್ಸು ಜಡವಾಗಿ ವ್ಯಕ್ತಿ ಲವಲವಿಕೆ ಕಳೆದುಕೊಂಡು ಮಂಕಾಗುತ್ತಾನೆ. ದಿನವಿಡೀ ಕೆಲಸದಲ್ಲಿ ಆಸಕ್ತಿ ಇಲ್ಲದೆ, ಕೋಪ, ತಾಪ, ಸಿಡುಕಿನಿಂದ ಕೂಡಿರುತ್ತಾನೆ. ಸರ್ವ ದೃಷ್ಠಿಯಿಂದ ನಿದ್ರೆ ಆರೋಗ್ಯದ ಪ್ರಮುಖ ಲಕ್ಷಣ. ನಿದ್ರೆಯ ಮತ್ತೊಂದು ಮುಖವೇ ಕನಸು. ದೇಹದ ಪಂಚೇಂದ್ರಿಯಗಳು ಗ್,ಹಿಸಿದ ಅನುಭವಗಳನ್ನು ಪರೀಕ್ಷಿಸಿ, ಸಂಸ್ಕರಿಸಿ, ಬೇಕಾದದ್ದನ್ನು ನೆನಪಿನ ಉಗ್ರಾಣಕ್ಕೆ, ಬೇಡವಾದ್ದನ್ನು ಕತ್ತಲೆ ಕೋಣೆಗೆ ತಳ್ಳುವ ಕೆಲಸವನ್ನು ನಿದ್ರೆ ನಿರ್ವಹಿಸುತ್ತದೆ. ಆ ಸಂದರ್ಭದಲ್ಲಿಯೇ ಕನಸುಗಳು ಹುಟ್ಟುತ್ತವೆಂದು ಮನೋವಿಜ್ಞಾನಿ ಕ್ರಸ್ಟೋಫರ್ ಇವಾನ್ಸ್ ಕಂಡುಕೊಂಡಿದ್ದ.
ಮೆದುಳಿನ ಜೀವ ಕೋಶಗಳು, ಇಂದ್ರಿಯಗಳ ಮೂಲಕ ಏನಾದರೂ ಹೊಸದನ್ನು ಕಲಿಯುವಾಗ ಹೊಸ ಸಂಬಂಧ ಏರ್ಪಟ್ಟು, ಹಳೆಯದು ಮರೆತು ಹೋದಾಗ ಕನಸು ಸೃಷ್ಠಿಯಾಗುತ್ತವೆಂದು ಫ್ರಾನ್ಸಿಸ್ ಕ್ರೀಕ್ ಹಾಗೂ ಮಿಚಿನ್ಸನ್ ಎಂಬ ತಜ್ಞರು ಅಧ್ಯಯನ ಮಾಡಿದರು. ಪೀಟರ್ ವಾಟ್ಸನ್ ಎಂಬ ಮನೋವಿಜ್ಞಾನಿಯ ಪ್ರಕಾರ, ನಾವು ಆಲೋಚನೆ ಮಾಡುವ ಸಂದರ್ಭದಲ್ಲಿ ಮಿದುಳಿನಿಂದ ಸೂಕ್ಷ್ಮ ಪ್ರಮಾಣದ ವಿದ್ಯುಚ್ಛಕ್ತಿ ಉತ್ಪಾದನೆಯಾಗಿ ನಮ್ಮ ಆಲೋಚನೆ ಮುಂದುವರಿದಂತೆ ಅದು ಖಾಲಿಯಾಗುತ್ತದೆ. ಹೊಸ ಆಲೋಚನೆ ಹೊಳೆದಂತೆ ಹೊಸ ಖನಸು ಹುಟ್ಟುತ್ತವೆ. ಥಾಮಸ್ ವೆರ್ ಎಂಬ ತಜ್ಞ ಪ್ರಾಣಿಗಳೂ ಕನಸು ಕಾಣುತ್ತವೆಂದು ಕಂಡುಹಿಡಿದ. ಕತ್ತಲಾದಾಗ ಪ್ರಾಣಿಗಳು ತಮ್ಮ ಶಕ್ತಿ ವ್ಯಯವಾಗದಿರಲು ನಿದ್ರಿಸುತ್ತವೆ. ಆಗ ಅವುಗಳ ದೇಹ ತಣ್ಣಗಾದರೆ ಮಿದುಳು ಬಿಸಿಯಾಗಿರಲು ಕನಸು ಬೀಳುವುದೇ ಪ್ರಕೃತಿಯ ಸಹಜ ನಿಯಮವೆಂದು ಆತ ಪ್ರತಿಪಾದಿಸುತ್ತಾನೆ. ಕನಸುಗಳ ವಿಶ್ಲೇಷಣೆ, ಅಧ್ಯಯನ ತುಂಬಾ ಕ್ಲಿಷ್ಟಕರ. ಏಕೆಂದರೆ ಕನಸುಗಾರರನ್ನು ಸಂದರ್ಶಿಸಿಅವರಿಗೆ ಕನಸುಗಳ ಬಗ್ಗೆ ವಿಚಾರಿಸಿದರೆ ಬಹುತೇಕ ಜನರಿಗೆ ತಾವು ಕಂಡ ಕನಸು ಮರೆತು ಹೋಗಿರುತ್ತದೆ. ಕನಸುಗಳನ್ನು ಜನ ನಿದ್ರಿಸುವಾಗಲೇ ಅಧ್ಯಯನ ಮಾಡಬೇಕು.

ಫೋಟೋ ಕೃಪೆ : atlasobscura
೧೯೫೦ ರಲ್ಲಿ ಶರೀರ ವೈದ್ಯ ಡಾ. ಎಥೇನಿಯಲ್ ಕ್ಲೈಟ್ಮನ್ ಹಾಗೂ ಅವರ ಶಿಷ್ಯ ಡಾ. ಬಿಲ್ ಡಿಮೆಂಟ್ ಕನಸುಗಳ ಅಧ್ಯಯನಕ್ಕಾಗಿ ನ್ಯೂಯಾರ್ಕ್ ನಲ್ಲಿ ನಿದ್ರಾ ಪ್ರಯೋಗಾಲಯ ಆರಂಭಿಸಿ ಕನಸುಗಾರರನ್ನು ಆಹ್ವಾನಿಸಿದರು. ಪ್ರತಿದಿನ ನಿದ್ದೆ ಮಾಡುವ ಸ್ವಯಂಸೇವಕರು ಬಂದು ಹೋಗತೊಡಗಿದರು. ಅವರಿಗೆ ಸಂಭಾವನೆ ಸಿಗುತ್ತಿತ್ತು. ನಿದ್ರಿಸುವವರ ತಲೆಗೆ ಎದೆಗೆ ತಂತಿಗಳ ಜಾಲ ಅಳವಡಿಸಿ, ವಿದ್ಯುತ್ ತರಂಗಗಳ ಏರಿಳಿತವನ್ನು, ಶರೀರದ ಉಷ್ಣತೆಯನ್ನು, ಕಣ್ಣು ಗುಡ್ಡೆಗಳ ಚಲನೆಯನ್ನು ಗಂಭೀರವಾಗಿ ಅಧ್ಯಯನ ಮಾಡಿದರು ಸರಿಯಾಗಿ ಸಾವಿರ ರಾತ್ರಿ ನೂರು ಜನರನ್ನು ನಿದ್ರಾ ಪ್ರಯೋಗಕ್ಕೆ ಅಳವಡಿಸಿ ಫಲಿತಾಂಶ ತಿಳಿದರು. ಗಾಢ ನಿದ್ರೆಯಲ್ಲಿರುವವರ ಕಣ್ಣು ಗುಡ್ಡೆಗಳು ವೇಗವಾಗಿ ಚಲಿಸುತ್ತಿದ್ದು ಅವರು ಕನಸು ಕಾಣುತ್ತಿದ್ದರು. ಅಂಥವರ ಸಂಖ್ಯೆ ಶೇ. ೮೦ ರಷ್ಟಿತ್ತು. ಹಗುರ ನಿದ್ರೆಯಲ್ಲಿದ್ದವರ ಕಣ್ಣು ಗುಡ್ಡೆ ನಿಧಾನವಾಗಿ ಚಲಿಸುತ್ತಿದ್ದವು. ಶೇ. ೭ ರಷ್ಟು ಜನ ಸಾಧಾರಣ ಕನಸು ಕಾಣುತ್ತಿದ್ದರು. ನಿದ್ರೆಯಲ್ಲಿ ಕಣ್ಣು ಗುಡ್ಡೆ ಚಲಿಸದೇ ಇದ್ದವರು ಯಾವ ಕನಸುಗಳನ್ನೂ ಕಾಣುತ್ತಿರಲಿಲ್ಲ. ಇಂಥ ನಿದ್ರಾಭಂಗದ ಅಧ್ಯಯನದ ಪ್ರಕಾರ ಕುರುಡರೂ ಕನಸು ಕಾಣುತ್ತಿದ್ದರು. ಆದರೆ ಅವರಿಗೆ ಕನಸಿನಲ್ಲಿ ದೃಶ್ಯ ಕಾಣಿಸದೇ ಬರೀ ಸ್ಪರ್ಶ, ಸಪ್ಪಳ ಹಾಗೂ ವಾಸನೆಗಳು
ಮಾತ್ರ ಅನುಭವಕ್ಕೆ ಬರುತ್ತಿದ್ದವು. ಇನ್ನು ಮಾತು ಬಾರದ ಮೂಗರಿಗೆ ದೃಶ್ಯ ಕಾಣಿಸುತ್ತಿದ್ದವು. ಯಾವುದೇ ಧ್ವನಿ, ಸಪ್ಪಳ ಕೇಳುತ್ತಿರಲಿಲ್ಲ.

(ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್) ಫೋಟೋ ಕೃಪೆ : verywellmind
ಮನೋವಿಶ್ಲೇಷಣೆಯ ಜನಕನೆಂದೇ ಪ್ರಸಿದ್ಧಿಯಾದ #ಸಿಗ್ಮಂಡ್ ಫ್ರಾಯ್ಡ್ ರವರ ಪ್ರಕಾರ ನಿನ್ನೆಯ ಹಳಸಲು ಚಿಂತನೆಗಳೇ ಇಂದಿನ ಕನಸು. ಅವು ನಮ್ಮ ಸುಪ್ತ ಮನಸ್ಸಿನ ಹಂಬಲ, ಆಸೆ, ಅಭಿಲಾಷೆಗಳನ್ನು ಹೊರಹಾಕುವ ರಾಜಮಾರ್ಗಗಳು. ಗಾಢ ನಿದ್ರೆಗಿಂತ ಹಗುರ ಹಾಗೂ ವಿಶ್ರಾಂತ ನಿದ್ರೆಯ ಕನಸುಗಳಲ್ಲಿ ಬಡಬಡಿಕೆ, ಚಡಪಡಿಕೆ, ನಿದ್ರಾ ನಡಿಗೆ ಇಲ್ಲದಿರುವುದರಿಂದ ಅವು ಆರೋಗ್ಯಕ್ಕೆ ಹಿತವಾಗಿರುತ್ತವೆ. ಸುಪ್ರಸಿದ್ಧ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ತನ್ನ ಜಟಿಲ ಗಣಿತದ ಸಮಸ್ತೆಗಳಿಗೆ ಉತ್ತರಗಳನ್ನು ತನ್ನ ಕನಸಿನಲ್ಲಿಯೇ ಕಾಣುತ್ತಿದ್ದನಂತೆ. ಕೊಲರಿಡ್ಜ್ ಎಂಬ ಕವಿ ಕನಸಿನಲ್ಲೇ ಪದ್ಯ ಹೆಣೆಯುತ್ತಿದ್ದನಂತೆ. ಹಾಗೆಯೇ ಜೋಸೆಫ್ ಟಾರ್ಟ ಎಂಬ ಸಂಗೀತಗಾರನಿಗೆ ಕನಸಿನಲ್ಲಿಯೇ ಹೊಸ ರಾಗ – ಸ್ವರಗಳು ಹೊಳೆಯುತ್ತಿದ್ದವಂತೆ. ಬದುಕಿನಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯ ರೂಪಿಸುವ ದಾರಿ ಅದಾಗೇ ಕಾಣಿಸುತ್ತೆ. ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೇ ತೆರೆಯುತ್ತೆ ಎನ್ನಲು ಇವು ಉದಾಹರಣೆಗಳು. ಕಷ್ಟ ಪಡದೇ ಕನಸುಗಳೆಂದೂ ನನಸಾಗುವುದಿಲ್ಲ. ಕನಸುಗಳು ನನಸಾಗುವವರೆಗೂ ಕನಸು ಕಾಣುತ್ತಲೇ ಇರಬೇಕು
- ಡಾ. ಶೇಖರ್ ಗೌಳೇರ್ (ಪದವಿ ತರಗತಿಯ (ಭೂಗೋಳ) ಉಪಾಧ್ಯಾಯರಾಗಿ ನಿವೃತ್ತರಾದವರು)
