ಅಯ್ಯೋ ಕಂದಾ, ನಿನಗೆ ಹೇಗೆ ಸಹಾಯ ಮಾಡಲಿ…



ನಿರ್ದೇಶಕ ದಿನೇಶ್ ಬಾಬು ಅವರ ‘ಪಾಂಚಾಲಿ’, ‘ಚಿತ್ರಾ’ ಮೊದಲಾದ ನಾಲ್ಕಾರು ಸಿನಿಮಾಗಳಲ್ಲಿ ನಟಿಸಿದ್ದ ಗಣಪತಿ ಭಟ್ಟ ಅವರ ಪರಿಸ್ಥಿತಿ ಈಗ ನೋಡಲಾಗದು,ಅವನಿಗೆ ಹೊಸ ಬದುಕು ಕಟ್ಟಿಕೊಳ್ಳಲು ಹೇಗೆ ನೆರವಾಗೋಣ ನೀವೇ ಹೇಳಿ…

ವಯಸ್ಸು ಕೈಜಾರುತ್ತಿದೆ. ಯೌವನ ಕೈಕೊಟ್ಟು ಮುದಿತನದತ್ತ ದಾಪುಗಾಲು ಹಾಕುತ್ತಿದೆ. ಆದರೂ ಈ ನಟನ ಬದುಕು ಬೀದಿಗೆ ಬಿದ್ದಿದೆ. ಈ ಸ್ಫುರದ್ರೂಪಿ ನಟನ ಹೆಸರು : ಗಣಪತಿ ಭಟ್ಟ. ನಿರ್ದೇಶಕ ದಿನೇಶ್ ಬಾಬು ಅವರ ‘ಪಾಂಚಾಲಿ’, ‘ಚಿತ್ರಾ’ ಮೊದಲಾದ ನಾಲ್ಕಾರು ಸಿನಿಮಾಗಳಲ್ಲಿ ನಟಿಸಿದ್ದಾನೆ. ‘ಜಿಂಕೆ ಮರಿ ಒಡ್ತೈತೆ ನೋಡ್ಲಾ ಮಗಾ’ ಹಾಡು ಆರಂಭವಾಗುವುದೇ ಈತನಿಂದ. ಒಳ್ಳೇ ಹೈಟ್, ಒಳ್ಳೇ ರೂಪು, ಒಳ್ಳೇ ಪ್ರತಿಭೆ, ಒಳ್ಳೇ ಪರ್ಸನಾಲಿಟಿ. ಆದ್ರೆ ನಸೀಬು ಖರಾಬ್. ಯಾವ ಘಳಿಗೆಯಲ್ಲಿ ಮಾನಸಿಕ ಹೊಡೆತ ಬಿದ್ದಿತೋ ಗೊತ್ತಿಲ್ಲ, ಹೀಗಾಗಿ ಬಿಟ್ಟಿದ್ದಾನೆ. ಗಾಂಧಿನಗರದಲ್ಲಿರುವಾಗ ಅಲ್ಲಿನ ಹೋಟೆಲೊಂದರಲ್ಲಿ ಖಾಯಂ ಅತಿಥಿಯಾಗಿದ್ದ ಗಣಪತಿ ಭಟ್ಟ ಫುಟ್ ಪಾತಿನಲ್ಲೇ ಯಾರೋ ಬಿಟ್ಟ ಅನ್ನವನ್ನು ತಿನ್ನುತ್ತಿದ್ದ. ಅಲ್ಲೇ ಮಲಗುತ್ತಿದ್ದ. ಹುಚ್ಚುಚ್ಚಾರೆ ಮಾತಾಡುತ್ತಿದ್ದ. ತನ್ನಷ್ಟಕ್ಕೆ ತಾನೇ ನಗುತ್ತಿದ್ದ, ಹರಟುತ್ತಿದ್ದ, ಕೇಕೆ ಹಾಕುತ್ತಿದ್ದ, ಅಳುತ್ತಿದ್ದ, ಸ್ಟುಡಿಯೋ ಸುತ್ತುತ್ತಿದ್ದ.

ಸಿನಿಮಾ ಟಾಕೀಸುಗಳಿಗೆ ಲಗ್ಗೆಯಿಡುತ್ತಿದ್ದ. ಸಿಕ್ಕ ಸಿಕ್ಕವರ ಮುಂದೆ ಕೈಚಾಚುತ್ತಿದ್ದ. ಸಿಕ್ಕಿ ಸಿಕ್ಕಿದ್ದನ್ನು ತಿನ್ನುತ್ತಿದ್ದ. ಏನೂ ಸಿಗದಿದ್ದರೆ ಬೀದಿ ಬದಿಯ ನಲ್ಲಿ ನೀರು ಕುಡಿದು ಹಸಿವು ಹಿಂಗಿಸುತ್ತಿದ್ದ…

ಇಂಥಾ ಗಣಪತಿ ಭಟ್ಟನ ಬಗ್ಗೆ ಒಂದು ಕಾರ್ಯಕ್ರಮ ಮಾಡಬೇಕೆಂದು ಪತ್ರಕರ್ತ ಗೆಳೆಯ ಮನೋಜ್ ಬೇಡಿಕೆಯಿಟ್ಟಾಗ ನನ್ನಲ್ಲಿರುವ ಮೆಟೀರಿಯಲ್ಲುಗಳನ್ನು ಕೊಟ್ಟಿದ್ದೆ. ಫೋಟೋಗಳನ್ನು ಒದಗಿಸಿಕೊಟ್ಟಿದ್ದೆ. ಒಂದೊಳ್ಳೆ ಮಾನವೀಯ ಕಾರ್ಯಕ್ರಮವನ್ನು ಮಾಡಿ ಧನ್ಯನಾಗಿದ್ದ! ಆಗ ಗಣಪತಿ ಭಟ್ಟ ಎಲ್ಲಿದ್ದಾನೆ ಎಂದು ತಿಳಿದಿರಲಿಲ್ಲ.

ಸಾಗರದ ಊರಿನವನಾದ ಈತ ಇತ್ತೀಚೆಗೆ ನಾಪತ್ತೆಯಾಗಿದ್ದ. ಫಕ್ಕನೆ ಉದಯ ನೆನಪಾದ. ನಮ್ಮ ಪರಮಾಪ್ತ ಹುಡುಗ. ಸಾಗರದಲ್ಲಿ ಉಪ್ಪಿ ಹೆಸರಿನ ಒಂದು ಮೊಬೈಲ್ ಅಂಗಡಿಯನ್ನಿಟ್ಟುಕೊಂಡಿದ್ದ. ಈ ಹಿಂದೆಯೂ ಉದಯ ತನ್ನೂರಿನ ಬಸ್ ಸ್ಟಾಂಡಿನಲ್ಲಿ ಓಡಾಡುತ್ತಿದ್ದ ಗಣಪತಿ ಭಟ್ಟನ ಫೋಟೋಗಳನ್ನು ಕಳಿಸಿಕೊಟ್ಟಿದ್ದ. ಈಗಲೂ ಅದೇ ಉದಯನೇ ನೆನಪಾದ. ತಕ್ಷಣ ಸಂಪರ್ಕಿಸಿದರೆ ಈ ಮನ ಮಿಡಿವ ಫೋಟೋಗಳನ್ನು ಕಳಿಸಿಕೊಟ್ಟಿದ್ದಾನೆ ಉದಯ. ನೋಡಿ ಕರುಳು ಹಿಂಡಿದಂತಾಯಿತು. ತಾನೇನು ಮಾಡುತ್ತಿದ್ದೇನೆ ಎನ್ನುವುದನ್ನೂ ತಿಳಿಯದ ಈ ಯುವ ನಟ ದಿಗ್ಭ್ರಾಂತ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾನೆ…

ಈ ಹಿಂದೆಯೂ ನಾನು ಈತನ ಬದುಕಿನ ಮರುವಸತಿಗಾಗಿ ಪ್ರಯತ್ನ ಪಟ್ಟಿದ್ದೆ. ಅಲ್ಲಿ ಇಲ್ಲಿಂದ ಸಹಾಯ ಕೊಡಿಸಿದ್ದೆ. ನಿಮ್ಹಾನ್ಸ್ ಸೇರಿಕೊಂಡಾಗ ಅಲ್ಲಿಗೂ ಭೇಟಿ ನೀಡಿ ಕುಶಲ ವಿಚಾರಿಸಿಕೊಂಡು ಬಂದಿದ್ದೆ. ಸಿಕ್ಕಸಿಕ್ಕಾಗಲೆಲ್ಲಾ ಕಾಲಿಗೆ ಬಿದ್ದು ಅಂಗಲಾಚುವ #ಗಣಪತಿ_ಭಟ್ಟ ಯಥಾಪ್ರಕಾರ ಸಾಗರ ಸೇರಿಕೊಂಡಿದ್ದಾನೆ. ಉದಯ ಕಳಿಸಿರುವ ಫೋಟೋಗಳನ್ನು ನೋಡುತ್ತಿದ್ದರೆ ಕರುಳು ಕಿತ್ತು ಬರುತ್ತದೆ. ಏನಾದರೂ ಸಹಾಯ ಮಾಡೋಣ ಅಂದರೆ ಈತನ ಹಠಮಾರಿತನ ಅದನ್ನು ಸಾಧ್ಯವಾಗಿಸುತ್ತಿಲ್ಲ. ಒಂದು ಬದುಕು ಹೀಗೆಯೇ ಮುಕ್ತಾಯಗೊಳ್ಳುವುದನ್ನು ನೋಡಿ ಸುಮ್ಮನಿರಲು ಸಾಧ್ಯವೇ? ಗಣಪತಿ ಭಟ್ಟನಿಗೆ ಹೊಸ ಬದುಕು ಕಟ್ಟಿಕೊಳ್ಳಲು ಹೇಗೆ ನೆರವಾಗೋಣ ನೀವೇ ಹೇಳಿ…


  • ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW