ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ. ಆ ಅವತಾರಗಳನ್ನು ಲೇಖಕಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
- ಶೈಲ ಪುತ್ರಿ ( ನವರಾತ್ರಿಯ ಮೊದಲ ದಿನ )
ನವರಾತ್ರಿ ಇಲ್ಲವೆ ದಸರಾ ಎಂದು ಕರೆಯಲ್ಪಡುವ ಈ ಹಬ್ಬದಲ್ಲಿ ನಾವು ಶಕ್ತಿ ದೇವತೆ ದೇವಿಯನ್ನು ಒಂಬತ್ತು ಬೇರೆ ಬೇರೆ ವಿಧದ ರೂಪಗಳಲ್ಲಿ ಪೂಜಿಸುತ್ತೇವೆ. ಹರಿಹರ ಬ್ರಹ್ಮಾದಿಗಳನ್ನು ಸೃಷ್ಟಿಸಿದ ದೇವಿಯು ಅವರಿಗೆ ಈ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ನಿರ್ವಹಿಸಲು ಆದೇಶಿಸಿದಳು.
ಹರಿಹರ ಬ್ರಹ್ಮಾದಿಗಳು ದೇವಿಯ ಆದೇಶದಂತೆ ತಮ್ಮ ಕಾರ್ಯವನ್ನು ನೆರವೇರಿಸುತ್ತಿದ್ದರೂ ಆಗಾಗ ಬಂದೊದಗುವ ವಿಘ್ನಗಳನ್ನು, ರಾಕ್ಷಸರನ್ನು ನಿವಾರಿಸಲು ಶ್ರೀದೇವಿಯಿಂದಲೇ ಸಾಧ್ಯವಾಗಿದ್ದು ಆಕೆ ಮಾತೃ ಸ್ವರೂಪಳು. ಸ್ತ್ರೀ ಕುಲದ ಪಾರಮ್ಯವನ್ನು ಸೂಚಿಸುವ ಈ ನವರಾತ್ರಿಯ ಹಬ್ಬದಲ್ಲಿ ಶಕ್ತಿ ಸ್ವರೂಪಿಣಿ ದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆ.
ಪ್ರಥಮಂ ಶೈಲ ಪುತ್ರಿಚ,ದ್ವಿತೀಯಂ ಬ್ರಹ್ಮಚಾರಿಣಿ ತೃತೀಯಂ ಚಂದ್ರಘ0ಟೇತಿ,ಕೂಶ್ಮಾಂಡೇತಿ ಚತುರ್ಥಕಂ.
ಪಂಚಮಂ ಸ್ಕಂದ ಮಾತೇ ತೀ,ಷಷ್ಠಂ ಕಾತ್ಯಾಯನೀತಿ ಚ
ಸಪ್ತಮಂ ಕಾಲರೇತಿಚ,ಮಹಾ ಗೌರಿತಿ ಚಾಷ್ಟಮಂ
ನವಮಂ ಸಿದ್ದಿ ಧಾತ್ರಿಚ,ನವದುರ್ಗ ಪ್ರಕೀರ್ತಿತಹ
ಉಕ್ತಾನೇತ್ಯಾನಿ ನಾಮಾನಿ,ಬ್ರಹ್ಮಣ್ಣೈವ ಮಹಾತ್ಯನಾ
ಅಗ್ನಿನಾ ದಹ್ಯ ಮಾನಸ್ತು ಶತ್ರು ಮಧ್ಯೆ ಗತೋರಣೆ ವಿಷಮೆ ದುರ್ಗವೇ ಚೈವ ಭಯಾರ್ಥಾ ಶರಣಂ ಗತಹ
ನವರಾತ್ರಿಯ ಪ್ರಥಮ ದಿವಸ ಶೈಲ ಪುತ್ರಿಯನ್ನು ಪೂಜಿಸುವರು. ಶೈಲ ಪುತ್ರಿಯು ಹೆಸರೇ ಹೇಳುವಂತೆ ಹಿಮವಂತನ ಮಗಳಾಗಿದ್ದು ತಾಯಿ ದುರ್ಗೆಯ ಮೊದಲ ಪುನರ್ಜನ್ಮವಾಗಿದ್ದಾಳೆ. ಹಳದಿ ವರ್ಣದ ಬಟ್ಟೆಯನ್ನು ಧರಿಸಿದ್ದು ಶುದ್ಧತೆ ಮತ್ತು ಪ್ರಕೃತಿಯ ಪ್ರತೀಕವಾಗಿರುವ ಆಕೆ, ಶೂಲವನ್ನು ಕೈಯಲ್ಲಿ ಹಿಡಿದು ವೃಷಭಾರೂಢಳಾಗಿದ್ದಾಳೆ . ಹಳದಿ ಬಣ್ಣವು ಚೈತನ್ಯ ಮತ್ತು ಶಾಂತಿ ಸಮಾಧಾನಗಳ ಸಂಕೇತವಾಗಿದ್ದು ಬ್ರಾಹ್ಮಿ ಮುಹೂರ್ತದಲ್ಲಿ ಶುಬ್ರಸ್ನಾತರಾಗಿ ಹಳದಿ ಬಟ್ಟೆಗಳನ್ನು ಧರಿಸಿ ದೇವಿಯನ್ನು ಪೂಜಿಸಿ ಆಕೆಯ ಕೃಪೆಗೆ ಪಾತ್ರರಾಗಬೇಕು.
ವಂದೇ ವಾಂಚಿತ ಲಾಭಾಯ,ಚಂದ್ರಾರ್ಥಕೃತ ಶೇಖರಾಂ
ವೃಷಾರೂಢಮ್ ಶೂಲ ಧರಾಂ, ಶೈಲ ಪುತ್ರಿ ಯಶಸ್ವಿನಿಂ
ಎಂಬ ಮಂತ್ರವನ್ನು ಜಪಿಸುತ್ತಾ ದೇವಿಯನ್ನು ಪೂಜಿಸಬೇಕು. ಚಂಚಲ ಚಿತ್ತವನ್ನು ಹೊಂದಿದವರು ಮೂಲಾಧಾರ ಚಕ್ರದಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ. ಆದ್ದರಿಂದ ಯೋಗ ಸಾಧಕರು ಚಂಚಲಚಿತ್ತರಿಗೆ ಶೈಲ ದೇವಿಯನ್ನು ಪೂಜಿಸಲು ಹೇಳುವರು.ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಯಸುವವರು ಶೈಲಪುತ್ರಿಯನ್ನು ಪೂಜಿಸಿ ಆರಾಧಿಸಬೇಕು. ಮೂಲಾಧಾರ ಚಕ್ರದ ಮೇಲೆ ಗಮನವಿಟ್ಟು ಧ್ಯಾನವನ್ನು ಮಾಡುವ ಮೂಲಕ ಆಧ್ಯಾತ್ಮ ಸಾಧನೆಯ ಮೊದಲ ಮೆಟ್ಟಿಲನ್ನು ಏರಬಹುದು.
ಕಾಪಾಡುವ ಸಲುವಾಗಿ
ಓಂ ಹ್ರೀಂ ಶ್ರೀ0 ಶೈಲ ಪುತ್ರಿ ದುರ್ಗಾಯೇ ನಮಃ
***
- ನವರಾತ್ರಿಯ ಎರಡನೇ ದಿನ
ದೇವಾದಿ ದೇವ ಮಹಾದೇವ ಪರಶಿವನನ್ನು ಪತಿಯಾಗಿ ಪಡೆಯಲು ತಪಸ್ಸನ್ನು ಆಚರಿಸಿದ ಬ್ರಹ್ಮಚಾರಿಣಿ ದೇವಿಯು ದುರ್ಗೆಯ ಎರಡನೇ ಅವತಾರವಾಗಿ ನವರಾತ್ರಿಯ ಎರಡನೇ ದಿನ ಪೂಜಿಸಲ್ಪಡುತ್ತಾಳೆ. ಬ್ರಹ್ಮಚಾರಿಣಿ ದೇವಿಯು ಶ್ವೇತ ವಸ್ತ್ರಧಾರಿಣಿಯಾಗಿದ್ದು ಶುದ್ಧತೆ ಮತ್ತು ಶಾಂತಿಯನ್ನು ಪ್ರತಿಪಾದಿಸುತ್ತಾಳೆ. ಈಕೆಯು ತನ್ನ ಎಡಗೈಯಲ್ಲಿ ಕಮಂಡಲನ್ನು ಹಿಡಿದಿದ್ದು ಬಲಗೈಯಲ್ಲಿ ಜಪಮಾಲೆಯನ್ನು ಹಿಡಿದಿದ್ದಾಳೆ. ಶಿವ ಯೋಗದ ಸಮಯದಲ್ಲಿ ಶಿವ ಮತ್ತು ಶಕ್ತಿ ರೂಪಿಣಿಯಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಎಲ್ಲ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ, ಸುಖ ಸಮೃದ್ಧಿ ಸಮಾಧಾನಗಳು ಹೆಚ್ಚುತ್ತವೆ.
ಸಿದ್ದಿ ಸಾಧನೆಗೆ ಮೂರ್ತ ರೂಪವೇ ಬ್ರಹ್ಮಚಾರಿಣಿ ದೇವಿ. ತನ್ನ ಹಿಂದಿನ ಜನ್ಮದಲ್ಲಿ ಸತಿ ದೇವಿಯಾಗಿ ಹುಟ್ಟಿದ ಆಕೆ ತನಗೆ ಮತ್ತು ತನ್ನ ಪತಿಗಾದ ಅವಮಾನದಿಂದ ತಂದೆಯು ಮಾಡುತ್ತಿದ್ದ ಯಜ್ಞದ ಕುಂಡಕ್ಕೆ ಹಾರಿ ಪ್ರಾಣಬಿಟ್ಟಳು. ಆಕೆಯೇ ಮರುಜನ್ಮದಲ್ಲಿ ಹಿಮವಂತನ ಮಗಳಾಗಿ ಮರುಜನ್ಮವೆತ್ತಿದಳು. ವಿಧಿ ಲಿಖಿತದಂತೆ ಶಿವನನ್ನು ವಿವಾಹವಾಗಲು ಸತತ ಶ್ರದ್ಧೆ ಮತ್ತು ಸಾಧನೆಯಿಂದ ಒಡಗೂಡಿದ ಆಕೆಯ ಭಕ್ತ ಭಾವದ ವ್ಯಕ್ತ ರೂಪಕ್ಕೆ ಸಾಕ್ಷಾತ್ ಪರಶಿವನೇ ಸೋತು ಆಕೆಯನ್ನು ಮದುವೆಯಾದನು.
ಶ್ವೇತವರ್ಣದ ಬಟ್ಟೆಗಳನ್ನು ಧರಿಸಬೇಕು.
ದಧಾನ ಕರದ್ಮಾಭಾಮಕ್ಷ ಮಾಲಾ ಕಮಂಡಲ
ದೇವಿ ಪ್ರಸೀದತುಮಯೀ ಬ್ರಹ್ಮಚಾರಿಣ್ಯನುತ್ತಮಾ
ಸ್ವಾದಿಷ್ಟಾನ ಚಕ್ರದ ಮೇಲೆ ಹಿಡಿತವನ್ನು ಸಾಧಿಸಲು ಮೊಸರನ್ನವನ್ನು ಬಹುವಾಗಿ ಇಷ್ಟಪಡುವ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಬೇಕು. ಬ್ರಹ್ಮಚಾರ್ಯ ಶಕ್ತಿಯನ್ನು ಕಾಪಾಡುವ, ಸೃಷ್ಟಿಯ ಅಧಿದೇವತೆ ಪಾರ್ವತಿ ದೇವಿಯ ಅವತಾರವಾಗಿರುವವಳೇ ಬ್ರಹ್ಮಚಾರಿಣಿ. ಕೇವಲ ಒಂದು ಎಲೆಯನ್ನು ಸೇವಿಸಿ ನೂರಾರು ವರ್ಷ ತಪಸ್ಸನ್ನು ಆಚರಿಸಿದ ಆಕೆ ಅಪರ್ಣೇ ಎನಿಸಿದಳು. ಕಂದ ಮೂಲಗಳನ್ನು ಸೇವಿಸಿ ಕೂಡ ಆಕೆ ಕಠಿಣ ತಪಸ್ಸನ್ನು ಆಚರಿಸಿ ಶಿವನನ್ನು ಪತಿಯಾಗಿ ಪಡೆದು ಉಮಾ ಎನಿಸಿಕೊಂಡಳು
ಓಂ ಐಮ್ ಹ್ರೀಂ ಬ್ರಹ್ಮಚಾರಿಣಿ ದುರ್ಗಾಯೇ ನಮಃ ಎಂದು ಜಪಿಸಬೇಕು.
ಭಕ್ತಿ ಮತ್ತು ವೈರಾಗ್ಯಗಳನ್ನು ಹೊಂದಬಯಸುವವರು ಶಕ್ತಿ ರೂಪೀಣಿಯಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಬೇಕು
ಯಾ ದೇವಿ ಸರ್ವಭೂತೇಶು ಶಕ್ತಿ ರೂಪೇಣ ಸಂಸ್ಥಿತ ನಮಸ್ತಸ್ಯೆ ನಮಸ್ತಸ್ಯೆ ನಮಸ್ತ್ಯಸ್ಯೆ ನಮೋನಮಃ ಎಂದು ಜಪಿಸಬೇಕು.
***
- ನವರಾತ್ರಿಯ ಮೂರನೇ ದಿನ
ಶಿವಪುರಾಣದ ಪ್ರಕಾರ ಸ್ಮಶಾನವಾಸಿ ಶಿವನು ಚಂದ್ರಶೇಖರನ ರೂಪದಲ್ಲಿ ಹಿಮವಂತ ಮತ್ತು ಮೇನಾ ದೇವಿಯರ ಮಗಳಾದ ಪಾರ್ವತಿಯನ್ನು ವರಿಸಲು ಬರುತ್ತಾನೆ. ಈ ಚಂದ್ರಶೇಖರನ ಶಕ್ತಿ ಸ್ವರೂಪಿಣಿಯೇ ಚಂದ್ರ ಘಂಟ ದೇವಿ.
ನವರಾತ್ರಿಯ ಮೂರನೇ ದಿನ ದೇವಿಯನ್ನು ಚಂದ್ರಘಂಟಾ ರೂಪದಲ್ಲಿ ಪೂಜಿಸುತ್ತಾರೆ. ಮನುಷ್ಯನ ವ್ಯಕ್ತಿತ್ವದಲ್ಲಿ ಸಮತೋಲನ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ಶಕ್ತಿಯನ್ನು ಪ್ರತಿಪಾದಿಸುವ ಚಂದ್ರ ಘಂಟಾ ದೇವಿಯು ಋಣಾತ್ಮಕ ವಿಚಾರಗಳನ್ನು ನಮ್ಮ ಜೀವನದಿಂದ ಹೊರಗೋಡಿಸಿ ಮಾನಸಿಕ ಶಾಂತಿಯನ್ನು ಕಾಯಲು ಕಾರಣಳಾಗುತ್ತಾಳೆ. ಚಂದ್ರಘಂಟಾ ದೇವಿಯನ್ನು ಪೂಜಿಸುವುದರಿಂದ ಭಯದಿಂದ ಮುಕ್ತರಾಗಬಹುದು ಮತ್ತು ಆಕೆ ಪಾಪ ವಿನಾಶಿನಿ ಎಂಬುದು ಭಕ್ತರ ನಂಬಿಕೆಯಾಗಿದೆ.
ಗಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿರುವ, ಚಿನ್ನದ ಮೈಬಣ್ಣವನ್ನು ಹೊಂದಿರುವ ಚಂದ್ರ ಘಂಟಾ ದೇವಿಯು ಧೈರ್ಯ ಹಾಗೂ ಶೌರ್ಯದ ಸಂಕೇತವಾದ ಸಿಂಹದ ಮೇಲೆ ಕುಳಿತಿರುತ್ತಾಳೆ.
ಚಂದ್ರಘಂಟಾ ದೇವಿಯು ಹತ್ತು ಕೈಗಳನ್ನು ಹೊಂದಿದ್ದು, ಪ್ರತಿ ಕೈಯಲ್ಲಿಯೂ ತ್ರಿಶೂಲ ಗದೆ ಕಮಲ ಬಿಲ್ಲು ಬಾಣ ಕಮಂಡಲ ಖಡ್ಗ ಜಪಮಾಲೆ ಮತ್ತು ಗಂಟೆಯನ್ನು ಹಿಡಿದುಕೊಂಡಿದ್ದಾಳೆ. ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿರುವ ಆಕೆಯ ಒಂದು ಕೈಯು ಅಭಯಮುದ್ರೆಯನ್ನು ಹೊಂದಿದ್ದು ಭಕ್ತರನ್ನು ಆಶೀರ್ವದಿಸುವ ಆಕೆ ದುಷ್ಟರನ್ನು ಶಿಕ್ಷಿಸಲು ಆಯುಧಗಳನ್ನು ಹಿಡಿದಿದ್ದರೂ ಶಿಷ್ಟರನ್ನು ರಕ್ಷಿಸುವ ದಯೆ, ಸಹಾನುಭೂತಿ ಮತ್ತು ತನ್ನ ಮಕ್ಕಳ ಮೇಲೆ ಕಾಳಜಿಗಳು ವ್ಯಕ್ತವಾಗುವ ಮುಖಭಾವವನ್ನು ಹೊಂದಿದ್ದಾಳೆ. ಬೂದು ಬಣ್ಣವನ್ನು ಇಷ್ಟಪಡುವ ಚಂದ್ರಗಂಟ ದೇವಿಯನ್ನು ಕೌಮಾರಿ ಎಂದು ಕೂಡ ಕರೆಯುತ್ತಾರೆ.
ಪಿಂಡಜ ಪ್ರವರಾರೂಢ ಚಂಡಕೊ ವಾಸ್ತ್ರ ಕೈಯುತಾ
ಪ್ರಸಾದಂ ತನುತೆ ಮಹ್ಯಾಂ ಚಂದ್ರ ಘಂಟೇತಿ ವಿಶ್ರುತಾ
ಪಾರ್ವತಿ ದೇವಿಯು ಕಠಿಣ ತಪಸ್ಸನ್ನು ಮಾಡಿ ಶಿವನನ್ನು ಮದುವೆಯಾಗಲು ಸಿದ್ದಳಾಗುತ್ತಾಳೆ.ಶಿವನ ಭಯಂಕರ ರೂಪವನ್ನು ನೋಡಿ ಪಾರ್ವತಿಯ ತಾಯಿ ಮೇನಾ ದೇವಿಯ ಮೂರ್ಚೆ ಹೋಗುತ್ತಾಳೆ. ಆಗ ಪಾರ್ವತಿಯು ಶಿವನಿಗೆ ಸೌಮ್ಯ ಸ್ವರೂಪವನ್ನು ಧರಿಸುವಂತೆ ಕೇಳಿಕೊಂಡು ತಾನು ಚಂದ್ರಘಂಟಾ ದೇವಿಯ ರೂಪದಲ್ಲಿ ವಧುವಾಗಿ ಶಿವನೊಂದಿಗೆ ವಿವಾಹವಾಗುತ್ತಾಳೆ.
ವಧುವಿನ ರೂಪದಲ್ಲಿ ಕಂಗೊಳಿಸುವ ಚಂದ್ರಘಂಟಾ ದೇವಿಯನ್ನು ಪೂಜಿಸಿ ಜೀವನದಲ್ಲಿ ಯಶಸ್ಸು ಮತ್ತು ಮನಃಶಾಂತಿಯನ್ನು ಪಡೆಯಲು ಈ ಮಂತ್ರವನ್ನು ಎಂಟು ಸಲ ಪಠಿಸಬೇಕು.
ಯಾ ದೇವಿ ಸರ್ವಭೂತೇಶು ನಿದ್ರಾ ರೂಪೇಣ ಸಂಸ್ಥಿತ
ನಮಸ್ತಸ್ಸ್ಯೇ ನಮಸ್ತಸ್ಯೆ ನಮಸ್ತಸ್ಸ್ಯೇ ನಮೋ ನಮಃ
ಓಂ ಹ್ರೀಂ ಶ್ರೀ0 ಚಂದ್ರ ಘಂಟಾಯೇ ನಮಃ
ದೇವಿಯ ಕೃಪೆಗೆ ಪಾತ್ರರಾಗಲು ಚಂದ್ರಘಂಟ ದೇವಿಯನ್ನು ಪೂಜಿಸಿ.
ನವರಾತ್ರಿ ಹಬ್ಬದ ಮೂರನೇ ದಿನದ ಶುಭಾಶಯಗಳು
***
- ನವರಾತ್ರಿಯ ನಾಲ್ಕನೇ ದಿನ
ಕೂಷ್ಮಾಂಡಾದೇವಿ ನವರಾತ್ರಿಯ ನಾಲ್ಕನೇ ದಿನ ತಾಯಿ ಪಾರ್ವತಿಯನ್ನು ಕೂಷ್ಮಾಂಡಾ ದೇವಿಯ ಅವತಾರದಲ್ಲಿ ಪೂಜಿಸುತ್ತಾರೆ. ಅನಾಹತ ಚಕ್ರ ಇಲ್ಲವೇ ಹೃದಯ ಚಕ್ರವನ್ನು ಹೊಂದಿರುವ ದೇವಿಯು ಎಂಟು ಕೈಗಳನ್ನು ಹೊಂದಿದ್ದು ಅಷ್ಟ ಭುಜದೇವಿ, ವೈಷ್ಣವಿ ಎಂದು ಕೂಡ ಕರೆಯಲ್ಪಡುತ್ತಾಳೆ.
ಆಕೆಯ ಹೆಸರಿನ ‘ಕೂ’ ಎಂಬ ಅಕ್ಷರವು ‘ಸ್ವಲ್ಪ’ ಎಂದು ‘ ಉಶ್ಮಾ’ ಎಂಬ ಅಕ್ಷರವು ಅಕ್ಷರವು ಬೆಚ್ಚಗಿನ ಇಲ್ಲವೇ ಚೈತನ್ಯ ಶಕ್ತಿ ಎಂದು ಅಂಡ ಎಂದರೆ ಶಕ್ತಿಯುತವಾದ ತತ್ತಿ ಇಲ್ಲವೇ ಬೀಜ ಎಂದು ಹೇಳಬಹುದು. ಸಿದ್ದಿ ಮತ್ತು ಬುದ್ಧಿಯರು ಆಕೆಯ ಜಪಮಾಲೆಯಲ್ಲಿ ಸ್ಥಿತರಾಗಿದ್ದಾರೆ ಎಂದು ಹೇಳುವರು.
ಕೂಷ್ಮಾಂಡಾ ದೇವಿಯು ಬ್ರಹ್ಮಾಂಡವನ್ನು ಸೃಷ್ಟಿಸಿದ್ದು ಆಕೆಯು ಬಿಳಿಯ ವರ್ಣದ ಕುಂಬಳಕಾಯಿಯನ್ನು ಇಷ್ಟಪಡುವ ಕಾರಣ ಆಕೆಯ ಹೆಸರಿನ ಜೊತೆಗೆ ಬ್ರಹ್ಮಾಂಡವು ಸೇರಿ ಕೂಷ್ಮಾಂಡ ಎಂದಾಗಿದೆ. ಶಂಖ, ಚಕ್ರ, ಖಡ್ಗ, ಬಿಲ್ಲು ಬಾಣಗಳನ್ನು ಧರಿಸಿರುವ ಆಕೆಯ ಎರಡು ಕೈಗಳಲ್ಲಿ ಎರಡು ಕಳಶಗಳಿದ್ದು ಒಂದರಲ್ಲಿ ಅಮೃತ ಮತ್ತು ಇನ್ನೊಂದರಲ್ಲಿ ರಕ್ತವು ತುಂಬಿದೆ.
ಸಿಂಹ ವಾಹಿನಿಯಾಗಿರುವ ಕೂಷ್ಮಾಂಡ ದೇವಿಯು ಗಾಢಾಂಧಕಾರದಲ್ಲಿ ಬೆಳಕನ್ನು ಹೊತ್ತು ಈ ಜಗತ್ತನ್ನು ಬೆಳಗಲು ಬಂದವಳು. ಸದಾ ನಗೆಯನ್ನು ಚೆಲ್ಲುವ, ಬೆಳಕು ಮತ್ತು ಚೈತನ್ಯ ಶಕ್ತಿಯ ಅಧಿದೇವತೆಯಾಗಿದ್ದಾಳೆ ಕೂಷ್ಮಾಂಡಾದೇವಿ. ತನ್ನ ಭಕ್ತರಿಗೆ ಆರೋಗ್ಯ, ಶಕ್ತಿ ಮತ್ತು ಧೈರ್ಯವನ್ನು ಕೊಡುವ ಕೂಷ್ಮಾಂಡಾದೇವಿ ಕೇಸರಿ ವರ್ಣವನ್ನು ಪ್ರತಿನಿಧಿಸುತ್ತಾಳೆ.
ಸುರಾ ಸಂಪೂರ್ಣ ಕಲಶಂ ರುಧಿರಾ ವ್ರತ ಮೇವ ಚ
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೆ
ಜಗತ್ತನ್ನು ಸೃಷ್ಟಿಸಿರುವ ಸತ್, ಚಿತ್, ಆನಂದಮೂರ್ತಿಯಾಗಿರುವ ಕೂಷ್ಮಾಂಡಾ ದೇವಿಯನ್ನು ಪೂಜಿಸಿ ಭಕ್ತರು ಉತ್ತಮ ಆರೋಗ್ಯ ಶಕ್ತಿ ಮತ್ತು ಧೈರ್ಯವನ್ನು ಪಡೆಯುತ್ತಾರೆ.
ಯಾ ದೇವಿ ಸರ್ವಭೂತೇಶು ಶಾಂತಿ ರೂಪೇಣ ಸಂಸ್ಥಿತ
ನಮಸ್ತಸ್ಸ್ಯೇ ನಮಸ್ತಸ್ಯೆ ನಮಸ್ತಸ್ಸ್ಯೇ ನಮೋ ನಮಃ
ಎಂಬ ಮಂತ್ರವನ್ನು ಹೇಳಿಕೊಂಡು ದೇವಿಯನ್ನು ಪೂಜಿಸಬೇಕು. ವೈಷ್ಣವಿ ರೂಪಿಣಿಯಾಗಿರುವ, ಸ್ತ್ರೀ ಶಕ್ತಿಯ ಪಾರಮ್ಯವನ್ನು ಸಾರುವ ಕೂಷ್ಮಾಂಡ ದೇವಿಯು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
ಓಂ ಹ್ರೀಂ ಶ್ರೀ0 ಕೂಷ್ಮಾಂಡಾಯೇ ನಮಃ
ಎಲ್ಲರಿಗೂ ನವರಾತ್ರಿ ಹಬ್ಬದ ನಾಲ್ಕನೇ ದಿನದ ಶುಭಾಶಯಗಳು
***
- ನವರಾತ್ರಿಯ ಐದನೇ ದಿನ
ನವರಾತ್ರಿಯ 5ನೇ ದಿನ ತಾಯಿ ಪಾರ್ವತಿ ದೇವಿಯನ್ನು ಸ್ಕಂದ ಮಾತಾ ದೇವಿಯ ರೂಪದಲ್ಲಿ ಪೂಜಿಸುತ್ತಾರೆ. ದೇವತೆಗಳ ಅಪೇಕ್ಷೆಯ ಮೇರೆಗೆ ಪಾರ್ವತಿಯ ಅಚಲ ಪ್ರೇಮಕ್ಕೊಲಿದ ಶಿವನು ಆಕೆಯನ್ನು ವರಿಸಿದನು. ಅಸುರ ಸಂಹಾರಕ್ಕಾಗಿ ದೇವಸೇನಾನಿಯಾದ ಷಣ್ಮುಖನ ಜನನಕ್ಕಾಗಿ ಮತ್ತೆ ದೇವತೆಗಳು ಶಿವನನ್ನು ಪ್ರಾರ್ಥಿಸಿದರು. ಶಿವ ಮತ್ತು ಪಾರ್ವತಿಯರ ಯೋಗ ಅಗ್ನಿ ತೇಜಸನ್ನು ಧರಿಸಲು ಎಲ್ಲರೂ ಹೆದರಿದಾಗ ಗಂಗೆಯು ಅದನ್ನು ತನ್ನಲ್ಲಿಟ್ಟು ಬೆಳೆಸಿದಳು. ನವಜಾತ ಶಿಶುವಿಗೆ ಕೃತ್ತಿಕೆಯರು ಹಾಲೂಡಿಸಿ ಬೆಳೆಸಿದರೆ ಪಾರ್ವತಿ ದೇವಿಯು ಕುಮಾರನನ್ನು ಮುದ್ದಿಸಿ ಬೆಳೆಸಿದಳು. ಮುಂದೆ ಆತನೇ ಬೆಳೆದು ತಾರಕಾಸುರನನ್ನು ಸಂಹರಿಸಿದನು. ಹೀಗೆ ತಾರಕಾಸುರನನ್ನು ಸಂಹರಿಸಿದ ಸ್ಕಂದ ಎಂದರೆ ಷಣ್ಮುಖನ ತಾಯಿ ಪಾರ್ವತಿ ದೇವಿಯನ್ನು ಸ್ಕಂದ ಮಾತೆಯ ಹೆಸರಿನಲ್ಲಿ ಎಲ್ಲರೂ ಈ ದಿನ ಪೂಜಿಸುವರು.
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತ ಕರದ್ವಯಂ
ಶುಭರಾತ್ರಿ ಸದಾ ದೇವಿ ಸ್ಕಂದಮಾತಾ ಯಶಸ್ವಿನಿ
ಎಂಬುದು ಆಕೆಯ ಧ್ಯಾನ ಮಂತ್ರವಾಗಿದೆ.
ನಾಲ್ಕು ಕೈಗಳನ್ನು, ಮೂರು ಕಣ್ಣುಗಳನ್ನು ಹೊಂದಿರುವ ತಾಯ್ತನದ ಪ್ರತೀಕವಾಗಿರುವ ಸ್ಕಂದ ಮಾತ ದೇವಿಯು ಸಿಂಹಾರೂಢಳಾಗಿದ್ದಾಳೆ. ಎರಡು ಕರೆಗಳಲ್ಲಿ ಕಮಲದ ಹೂಗಳನ್ನು ಹಿಡಿದಿರುವ ಸ್ಕಂದಮಾತಾ ದೇವಿಯ ಒಂದು ಕೈ ಅಭಯಮುದ್ರೆಯಲ್ಲಿದ್ದು ಭಕ್ತರಿಗೆ ಧೈರ್ಯವನ್ನು ನೀಡುವಂತಿದ್ದರೆ ಮತ್ತೊಂದು ಕೈಯಲ್ಲಿ ಪುಟ್ಟ ಹಸುಗೂಸು ಕಾರ್ತಿಕೇಯನನ್ನು ಹಿಡಿದಿರುವ ಸ್ಕಂದ ಮಾತಾದೇವಿ ಮಾತೃತ್ವದ ಪ್ರತೀಕವೆನಿಸಿದ್ದಾಳೆ. ಕೆಲವೆಡೆ ಕಮಲದ ಹೂವಿನ ಮೇಲೆ ಪದ್ಮಾಸನದಲ್ಲಿ ಆಕೆ ಕುಳಿತಿರುವುದನ್ನು ಕಾಣಬಹುದು. ತುಸು ಶ್ಯಾಮಲ ವರ್ಣದವಳಾಗಿರುವ ಸ್ಕಂದಮಾತ ದೇವಿಯು ನೀಲವಣದ ಉಡುಗೆಯನ್ನು ಧರಿಸಿರುತ್ತಾಳೆ.ಭಕ್ತರಿಗೆ ಧೈರ್ಯ, ಸಿರಿ, ಸಂಪತ್ತುಗಳನ್ನು ನೀಡುವ ಅಧಿದೇವತೆಯಾಗಿದ್ದಾಳೆ. ಬೇಡಿದ ಭಕ್ತರಿಗೆ ಜ್ಞಾನ ಸಾಗರವನ್ನು ಉಣಪಡಿಸುವಷ್ಟು ಜಾಣ್ಮೆಯನ್ನು ಆಕೆ ಹೊಂದಿದ್ದು ಆಕೆಯನ್ನು ಅಗ್ನಿ ದೇವತೆ ಎಂದು ಕೂಡ ಕರೆಯುತ್ತಾರೆ. ಮೋಕ್ಷಪ್ರದಾಯಿನಿ ಕೂಡ ಆಕೆಯೇ.
ಸ್ಕಂದ ಮಾತಾ ದೇವಿಯನ್ನು ಪೂಜಿಸುವ ಭಕ್ತರು ಪ್ರಾಪಂಚಿಕ ಮೋಹವನ್ನು, ಪಂಚೇಂದ್ರಿಯಗಳ ಭೋಗವನ್ನು ತೊರೆಯಬೇಕು. ಭಕ್ತಿ ಮತ್ತು ನಂಬಿಕೆಯಿಂದ ಆಕೆಯನ್ನು ಪೂಜಿಸಿದ ಭಕ್ತರಿಗೆ ಆಕೆ ಅಭಯಪ್ರದಳಾಗಿದ್ದಾಳೆ.
ಯಾ ದೇವಿ ಸರ್ವಭೂತೇಶು ದಯಾ ರೂಪೇಣ ಸಂಸ್ಥಿತ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಎಂಬ ಮಂತ್ರವನ್ನು ಉಚ್ಚರಿಸುತ್ತಾ ಈ ದಿನದ ಪೂಜೆಯನ್ನು ಮಾಡಬೇಕು
ಸ್ಕಂದ ಮಾತ ದೇವಿಯು ಪುತ್ರ ಷಣ್ಮುಖನನ್ನು ಕುಮಾರ ಸ್ವಾಮಿ, ಮುರುಗನ್ ಎಂಬ ಹೆಸರಿನಿಂದ ಕರೆಯುತ್ತಾರೆ. ಪಂಚಮಹಾಭೂತಗಳನ್ನು ತನ್ನ ವಶದಲ್ಲಿ ಇರಿಸಿಕೊಂಡಿರುವ ಷಣ್ಮುಖ ಓರ್ವ ನಿಜವಾದ ಯೋಗಿ ಎನಿಸಿರುವನು. ಆರೋಗ್ಯ ಮತ್ತು ಶಕ್ತಿಯ ಸಂಚಯವಾದ ಷಣ್ಮುಖನನ್ನು ಆತನ ತಾಯಿ ಪಾರ್ವತಿ ದೇವಿಯೊಂದಿಗೆ ಪೂಜಿಸುವುದಕ್ಕೆ ನವರಾತ್ರಿಯ ಐದನೇ ದಿನ ಅತ್ಯಂತ ಪ್ರಶಸ್ತವಾಗಿದೆ.
ಓಂ ಐ0 ಹ್ರೀ0 ಶ್ರೀ0 ಸ್ಕಂದಮಾತಾಯೇ ನಮಃ
ನವರಾತ್ರಿ ಹಬ್ಬದ ಐದನೇ ದಿನದ ಶುಭಾಶಯಗಳು.
***
- ನವರಾತ್ರಿ ಹಬ್ಬದ ಆರನೆಯ ದಿನ
ನವರಾತ್ರಿ ಹಬ್ಬದ ಆರನೇ ದಿನ ದೇವಿ ಪಾರ್ವತಿಯನ್ನು ಕಾತ್ಯಾಯಿನಿ ದೇವಿಯ ರೂಪದಲ್ಲಿ ಆರಾಧಿಸುತ್ತಾರೆ. ದೇವಿ ಕಾತ್ಯಾಯಿನಿಯು ಜಾಣ್ಮೆ ಮತ್ತು ಸಾಮರಸ್ಯಗಳ ಅಧಿದೇವತೆಯಾಗಿದ್ದಾಳೆ. ಪಾಪನಾಶಿನಿಯಾಗಿರುವ ಈಕೆ ಭಕ್ತರಿಗೆ ಅಭಯ ಪ್ರದಳಾಗಿದ್ದಾಳೆ. ಅವಿವಾಹಿತ ತರುಣಿಯರು ತಾವು ಇಚ್ಚಿಸುವ ಗುಣಗಳುಳ್ಳ ವರನನ್ನು ಪಡೆಯಲು ಕಾತ್ಯಾಯನಿ ದೇವಿಯನ್ನು ಪೂಜಿಸುತ್ತಾರೆ.
ಭೂಲೋಕದ ಜನರನ್ನು ಕಾಡುತ್ತಿದ್ದ ಮಹಿಶಾಸುರ ಎಂಬ ರಾಕ್ಷಸನ ಉಪಟಳ ತಡೆಯದೆ ದೇವತೆಗಳೆಲ್ಲರೂ ತ್ರಿಮೂರ್ತಿಗಳಿಗೆ ಮೊರೆಯಿಟ್ಟಾಗ ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮೆಲ್ಲಾ ಶಕ್ತಿಯನ್ನು ಧಾರೆಯೆರೆದು ಕಾತ್ಯಾಯಿನಿಯನ್ನು ಸೃಷ್ಟಿಸಿದರು. ತಮ್ಮ ವಿಶೇಷ ಉಡುಗೆಗಳನ್ನು,ಆಭರಣಗಳನ್ನು, ಆಯುಧಗಳನ್ನು ಆಕೆಗೆ ಉಡುಗೊರೆಯಾಗಿ ನೀಡಿದರು. ತ್ರಿಮೂರ್ತಿಗಳು ಮತ್ತು ಅಷ್ಟದಿಕ್ಪಾಲಕರ ಎಲ್ಲ ವಿಶೇಷ ಶಕ್ತಿಯನ್ನು ಪಡೆದುಕೊಂಡ ಆಕೆಯನ್ನು ಮಹಿಷಾಸುರನನ್ನು ಯುದ್ಧ ಮಾಡಿ ಸಂಹರಿಸಲು ಕೇಳಿಕೊಂಡರು.ದೇವಿಯು ಕಾತ್ಯಾಯಿನಿಯ ರೂಪದಲ್ಲಿ ಮಹಿಷಾಸುರನೊಂದಿಗೆ ಯುದ್ಧ ಮಾಡಿ ಆತನನ್ನು ಸಂಹರಿಸಿದಳು.
ಈ ದಿನ ವಿಶೇಷವಾಗಿ ಮಹಿಳೆಯರು ಶ್ವೇತ ವಸ್ತ್ರವನ್ನು ಧರಿಸಿ ದೇವಿಯನ್ನು ಪೂಜಿಸಿ ಧೈರ್ಯ ಮತ್ತು ಸಂರಕ್ಷಣೆಗಾಗಿ ದೇವಿಯನ್ನು ಬೇಡಿಕೊಳ್ಳುತ್ತಾರೆ. ದೇವಿಗೆ ಶುದ್ಧವಾದ ಜೇನುತುಪ್ಪವನ್ನು ನೈವೇದ್ಯವಾಗಿ ಅರ್ಪಿಸಿ ಸಂಪತ್ತು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಕೊಡು ಎಂದು ಬೇಡಿಕೊಳ್ಳುತ್ತಾರೆ.
ಉಗ್ರ ಸ್ವರೂಪಿಣಿಯಾಗಿ ಅವತಾರವೆತ್ತಿರುವ ಕಾತ್ಯಾಯಿನಿ ದೇವಿಗೆ ಒಂದೆಡೆ ನಾಲ್ಕು ಕೈಗಳಿದ್ದರೆ ಮತ್ತೊಂದೆಡೆ 10, 18 ಕೈಗಳನ್ನು ಹೊಂದಿರುವ ವಿವಿಧ ರೂಪಗಳಲ್ಲಿ ಸಿಂಹವಾಹಿನಿಯಾಗಿ ಆಕೆ ಪೂಜಿಸಲ್ಪಡುತ್ತಾಳೆ. ಕಾತ್ಯಾಯಿನಿ ದೇವಿಯು ಮಹಿಷಾಸುರನನ್ನು ಸಂಹರಿಸಿ ಮಹಿಷಾಸುರ ಮರ್ದಿನಿ ಎಂದು ಕರೆಯಲ್ಪಟ್ಟಳು.
ಚಂದ್ರಹಾಸೋಜ್ವಲಕರಾ ಶಾರ್ದೂಲ ವರ ವಾಹನಾ
ಕಾತ್ಯಾಯನಿ ಶುಭಂ ದದ್ಯಾ ದೇವಿ ದಾನವ ಘಾತಿನಿ
ಚಂದ್ರನಂತೆ ಉಜ್ವಲವಾದ ಬೆಳಕನ್ನು ಚೆಲ್ಲುವ, ಸಿಂಹವಾಹಿನಿಯಾಗಿರುವ ಕಾತ್ಯಾಯಿನಿ ದೇವಿಯು ದಾನವರ ಪಾಲಿಗೆ ದುಷ್ಟಹಂತ್ರಿಯಾಗಿ ದುಷ್ಟರನ್ನು ಶಿಕ್ಷಿಸಿ ತನ್ನ ಭಕ್ತರಾದ ಶಿಷ್ಟರನ್ನು ಪರಿಪಾಲಿಸುವಳು.
ಕಾಂಚನ ಮಾಲೆ ಮತ್ತು ಪದ್ಮ ಪುಷ್ಪವನ್ನು ತನ್ನ ಮುಕುಟದಲ್ಲಿ ಧರಿಸಿರುವ ಶಿವನ ಪತ್ನಿಯಾದ ಕಾತ್ಯಾಯಿನಿ ದೇವಿಯು ಪೀತಾಂಬರ ಮತ್ತು ನಾನಾಲಂಕಾರಗಳಿಂದ ಭೂಷಿತವಾಗಿದ್ದಾಳೆ. ಪರಮಾನಂದವನ್ನು ನೀಡುವ ಪರಬ್ರಹ್ಮ ಸ್ವರೂಪಿಣಿಯಾಗಿದ್ದಾಳೆ. ತನ್ನ ಭಕ್ತರ ಪರಮ ಶಕ್ತಿಯಾಗಿರುವ ವಿಶ್ವಕರ್ತಳು ವಿಶ್ವಾತೀತಳು, ವಿಶ್ವ ಪ್ರೇಮಿ ವಿಶ್ವ ಕ್ಷೇಮವನ್ನು ಬಯಸುವ ತಾಯಿ ಕಾತ್ಯಾಯಿನಿದೇವಿಯಾಗಿದ್ದಾಳೆ.
ಕಾತ್ಯಾಯಿನಿ ದೇವಿಯು ಆಜ್ಞಾಚಕ್ರದ ಅಧಿದೇವತೆ. ಮಾನಸಿಕ ಅಸಮತೋಲನವನ್ನು ಸರಿಪಡಿಸಲು ಜ್ಞಾನ, ಸ್ಪಷ್ಟತೆಗಳನ್ನು ಹೊಂದಲು ಆಜ್ಞಾಚಕ್ರದ ಅದಿದೇವತೆಯಾದ ಕಾತ್ಯಾಯಿನಿಯನ್ನು ಪೂಜಿಸಬೇಕು.
ವಂದೇ ವಾಂಛಿತ ಮನೋರಥಾರ್ಥ ಚಂದ್ರಾರ್ಧ ಕೃತಶೇಖರಾಂ
ಸಿಂಹಾರೂಢ ಚತುರ್ಭುಜ ಕಾತ್ಯಾಯಿನಿಮ್ ಯಶಸ್ವಿನಿಮ್
ಸ್ವರ್ಣ ವರ್ಣ ಆಜ್ಞಾಚಕ್ರ ಸ್ಥಿತಮ್, ಷಷ್ಠಮ ದುರ್ಗ ತ್ರಿನೇತ್ರಂ
ವರಾಭಿಕಂ ಶಗಪಾದಧರಂ ಕಾತ್ಯಾಯನ ಸುತಂ ಭಜಾಮಿ
ಪೀತಾಂಬರ ಪರಿಧಾನಂ ಸ್ಮೆರಮುಖಿ ನಾನಾಲಂಕಾರ ಭೂಷಿತಂ
ಮಂಜೀರ ಹರ ಕೇಯೂರ ಕಿಂಕಿಣಿ ರತ್ನಕುಂಡಲ ಮಂಡಿತಂ
ಪ್ರಸನ್ನವದನಾ ಪಲ್ಲವಾಧರಮ ಕಾಂತ ಕಪೋಲ ತುಗಾಮ್ ಕುಚಂ
ಕಮನೀಯಂ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಾಭಿಂ
ಎಂದು ಧ್ಯಾನಪೂರ್ವಕವಾಗಿ ದೇವಿಯನ್ನು ಕಲ್ಪಿಸಿಕೊಳ್ಳಬೇಕು.
ಷೋಡಶೋಪಚಾರ ಪೂಜೆಯನ್ನು ಮಾಡಿ
“ಓಂ ನಮೋ ಕಾತ್ಯಾಯಿನಿ ನಮಹ” ಎಂಬ ಮಂತ್ರವನ್ನು ಹೇಳಿ ಆರತಿ ಮಾಡಬೇಕು.
ಯಾ ದೇವಿ ಸರ್ವಭೂತೇಶು ಕಾತ್ಯಾಯನಿ ರೂಪೇಣ ಸಂಸ್ಥಿತಮ್
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಎಂದು ದೇವಿಯನ್ನು ಸ್ತುತಿಸಬೇಕು.
ಎಲ್ಲರಿಗೂ ನವರಾತ್ರಿ ಹಬ್ಬದ ಆರನೇ ದಿನದ ಶುಭಾಶಯಗಳು.
***
- ನವರಾತ್ರಿ ಹಬ್ಬದ ಏಳನೆಯ ದಿನ
ನವರಾತ್ರಿ ಹಬ್ಬದ ದಿನ ಪಾರ್ವತಿ ದೇವಿಯನ್ನು ತಾಯಿ ಕಾಳರಾತ್ರಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಕಗ್ಗತ್ತಲ ರಾತ್ರಿಯ ಶಕ್ತಿಯನ್ನು ಪ್ರತಿನಿಧಿಸುವ ಕಾಳರಾತ್ರಿ ದೇವಿಯು ಉಗ್ರ ರಾಕ್ಷಸರಾದ ಚಂಡ ಮುಂಡರನ್ನು ಸಂಹರಿಸಿದ ದಿನ.
ಮೂರು ಲೋಕದ ಪ್ರಜೆಗಳಿಗೆ ಉಪಟಳ ನೀಡುತ್ತಿದ್ದ ಪ್ರಳಯಾಂತಕ ರಾಕ್ಷಸರಾದ ಶು0ಭ ಮತ್ತು ನಿಶು0ಭ ದ್ವಯರು ಹಿಮಾಚಲದಲ್ಲಿ ತಪಗೈಯುತ್ತಿದ್ದ ಸೌಂದರ್ಯದ ಖನಿಯಾಗಿದ್ದ ವನದೇವಿಯ ಕುರಿತು ದೂತರಿಂದ ಅರಿತು ವಿವಾಹವಾಗಬೇಕೆಂಬ ಆಸೆಯಿಂದ ಆಕೆಯನ್ನು ಕರೆತರಲು ಚಂಡ ಮುಂಡರನ್ನು ಕಳುಹಿಸಿದನು. ಆಗ ಮಹಾದೇವಿಯು ಚಂಡ ಮುಂಡರನ್ನು ಯುದ್ಧದಲ್ಲಿ ಸಂಹರಿಸಿ ಆಕೆ ಚಾಮುಂಡಿ ಎನಿಸಿದಳು. ಕಾಳರಾತ್ರಿಯು ಪಾರ್ವತಿ ದೇವಿಯ ಅತ್ಯಂತ ಉಗ್ರ ಸ್ವರೂಪವಾಗಿದ್ದು ಆಕೆ ಕತ್ತಲನ್ನು ಕೊನೆಗಾಣಿಸುವ ದೇವತೆ ಎಂದು ಪರಿಗಣಿಸಲ್ಪಟ್ಟಿದ್ದಾಳೆ.
ತನ್ನ ಚಿನ್ನದ ಬಣ್ಣವನ್ನು ತೊರೆದು ಕಪ್ಪು ಬಣ್ಣವನ್ನು ಹೊಂದುವ ಪಾರ್ವತಿ ದೇವಿಯು ಕಾಳರಾತ್ರಿಯಾಗಿ ಕತ್ತೆಯ ಮೇಲೆ ಸವಾರಿ ಮಾಡುತ್ತಾ ದುಷ್ಟ ರಾಕ್ಷಸರಾದ ಶು0ಭ ಮತ್ತು ನಿಶುಂಭರನ್ನು, ರಕ್ತ ಬೀಜಾಸುರ ಮತ್ತು ಚಂಡ ಮುಂಡರನ್ನು ಸಂಹರಿಸಿ ಎಲ್ಲ ರಾಕ್ಷಸರು ಮತ್ತು ಋಣಾತ್ಮಕ ಶಕ್ತಿಗಳನ್ನು ನಾಶ ಮಾಡಿದಳು.
ಒರಿಸ್ಸಾದ ಕಪಾಲಶಾಸ್ತ್ರದ ಪುಸ್ತಕ ‘ಶಿಲ್ಪ ಪ್ರಕಾಶ’ ಎಂಬ ಕೃತಿಯಲ್ಲಿ ಕಾಳರಾತ್ರಿ ದೇವಿಯ ಕುರಿತು ಹೆಚ್ಚಿನ ವಿವರಗಳಿದ್ದು ಈಕೆ ಸಹಸ್ರಾರ ಚಕ್ರದ ಅಧಿದೇವತೆಯಾಗಿದ್ದು, ತನ್ನ ಭಕ್ತರನ್ನು ದುಷ್ಟರಿಂದ ರಕ್ಷಿಸಲು ಅವರನ್ನು ಸಂಹರಿಸುವ ಮೂಲಕ ತನ್ನ ಭಕ್ತರಿಗೆ ಅಭಯಪ್ರದಾಯಿನಿಯಾಗಿದ್ದಾಳೆ.
ಕಾಲ ಎಂಬ ಪದದಲ್ಲಿ ಎರಡು ಅರ್ಥಗಳಿದ್ದು, ಒಂದು ಸಮಯವನ್ನು ಮತ್ತೊಂದು ಕಡು ಕತ್ತಲೆಯನ್ನು ಸೂಚಿಸುತ್ತದೆ. ಕಾಳರಾತ್ರಿ ದೇವಿಯು ಕಡುಗಪ್ಪು ಬಣ್ಣವನ್ನು ಧರಿಸಿದ್ದು ಉಗ್ರವಾದ ಕೆಂಗಣ್ಣು ಮತ್ತು ರಕ್ತವರ್ಣದ ನಾಲಿಗೆಯನ್ನು ಹೊಂದಿದ್ದು 4 ಕೈಗಳನ್ನು ಹೊಂದಿದ್ದಾಳೆ. ಒಂದು ಕೈಯಲ್ಲಿ ಖಡ್ಗವನ್ನು ಮತ್ತೊಂದು ಕೈಯಲ್ಲಿ ಪರಶುವನ್ನು ಹಿಡಿದಿರುವ ಆಕೆ ತನ್ನ ಇನ್ನೊಂದು ಕೈಯಲ್ಲಿ ರಕ್ತವನ್ನು ತುಂಬಿದ ತಲೆಬುರುಡೆಯನ್ನು ಹಿಡಿದಿದ್ದಾಳೆ. ಆಕೆಯ ಇನ್ನೊಂದು ಕೈ ಅಭಯಮುದ್ರೆಯನ್ನು ಹೊಂದಿದ್ದಾಳೆ.
ಕರಲ್ವಂದನ ಧೋರಂ ಮುಕ್ತಕೇಶೀ ಚತುರ್ಭುಜಮ್। ಕಾಲ ರಾತ್ರಿಂ ಕರಾಲಿಕಾಂ ದಿವ್ಯಂ ವಿದ್ಯುತ್ಮಲಾ ವಿಭೂಷಿತಾಮ್
ಕೇಶವನ್ನು ಹರಿ ಬಿಟ್ಟಿರುವ ಚತುರ್ಭುಜಗಳನ್ನು ಹೊಂದಿರುವ ಕಾಲ ರಾತ್ರಿ ದೇವಿಯು ದಿವ್ಯವಾದ ಬೆಳಕಿನ ಪ್ರಭೆಯನ್ನು ಹೊಂದಿದ್ದಾಳೆ.
ಓಂ ಐ0 ಹ್ರೀ0 ಶ್ರೀ0 ಕಾಳರಾತ್ರಿಯೇ ನಮಃ
ಎಂದು ಜಪಿಸಬೇಕು.
ಯಾ ದೇವಿ ಸರ್ವಭೂತೇಶು ಶ್ರದ್ಧಾ ರೂಪೇಣ ಸಂಸ್ಥಿತ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಎಂಬ ಮಂತ್ರವನ್ನು ನಾಲ್ಕು ಬಾರಿ ಹೇಳಿಕೊಂಡು ಆ ದೇವಿಯನ್ನು ಪೂಜಿಸಿ ಆರಾಧಿಸಬೇಕು.
ಎಲ್ಲರಿಗೂ ನವರಾತ್ರಿ ಹಬ್ಬದ ಏಳನೇ ದಿನದ ಶುಭಾಶಯಗಳು
***
- ನವರಾತ್ರಿ ಹಬ್ಬದ ಎಂಟನೇ ದಿನ….ದುರ್ಗಾಷ್ಟಮಿ
ನವರಾತ್ರಿ ಹಬ್ಬದ ಎಂಟನೇ ದಿನವನ್ನು ದುರ್ಗಾದೇವಿಯ ಹೆಸರಿನಲ್ಲಿ ಆರಾಧಿಸುತ್ತಾರೆ. ಚಂಡ ಮುಂಡರನ್ನು ವಧಿಸಿದ ತಾಯಿ ಚಾಮುಂಡಿಯು ರಕ್ತ ಬೀಜಾಸುರನನ್ನು ಕೂಡ ಸಂಹರಿಸಿದಳು. ಪಾರ್ವತಿ ದೇವಿಯ ಎಂಟನೆಯ ಅವತಾರವೇ ದುರ್ಗಾದೇವಿ.
ದುರ್ಗಾದೇವಿಯು ಶಾಂತಿ ಮತ್ತು ಸಾಮರ್ಥ್ಯಗಳ ಅಧಿದೇವತೆಯಾಗಿದ್ದು ಆಕೆಯ ಸೌಂದರ್ಯ ತೊಳೆದ ಮುತ್ತಿನಂತಹ ಕಾಂತಿಯಿಂದ ಹೊಳೆಯುತ್ತದೆ. ವೃಷಭವಾಹನಳಾಗಿರುವ ತಾಯಿ ದುರ್ಗಾದೇವಿಯು ಪ್ರಶಾಂತವಾದ ಮುಖ ಮುದ್ರೆಯನ್ನು ಹೊಂದಿದ್ದು ನಾಲ್ಕು ಕೈಗಳನ್ನು ಹೊಂದಿದ್ದು ಎಡಗಡೆಯ ಮೇಲಿನ ಕೈಯಲ್ಲಿ ತ್ರಿಶೂಲವನ್ನು ಬಲಗಡೆಯ ಕೆಳಗಿನ ಕೈಯಲ್ಲಿ ಡಮರುವನ್ನು ಹಿಡಿದಿದ್ದು ಇನ್ನೆರಡು ಕೈಗಳು ಅಭಯಮುದ್ರೆಯನ್ನು ಹೊಂದಿದ್ದು ಭಕ್ತರಿಗೆ ಧೈರ್ಯವನ್ನು ಮತ್ತು ವರವನ್ನು ಕೊಡುವ ವರದಾಯಿನಿಯಾಗಿದ್ದಾಳೆ.
ತನ್ನ ಭಕ್ತರ ಮನದ ಕ್ಲೇಶವನ್ನು ಕಳೆಯುವ ಆಕೆ ಅತ್ಯಂತ ಸುಂದರವಾಗಿದ್ದು ಮಹಾ ಗೌರಿ ಎಂದು ಕರೆಯಲ್ಪಡುತ್ತಾಳೆ. ಶುದ್ಧತೆ,ಗೌರವರ್ಣ ಮತ್ತು ಅನುಗ್ರಹದ ಅಧಿದೇವತೆ ಗೌರಿ. ಹಾಲಿನಂತಹ ಗೌರವ ವರ್ಣವನ್ನು ಹೊಂದಿರುವ ಕಾರಣವೇ ಆಕೆಯನ್ನು ಮಹಾಗೌರಿ ಎಂದು ಕರೆಯುವುದು.
ಸ್ತ್ರೀತ್ವದ ಪಾರಮ್ಯವನ್ನು ತೋರುವ ಈ ದುರ್ಗಾಷ್ಟಮಿಯ ದಿನ ಕರುಣೆ ಶಾಂತಿ ಸಹಾನುಭೂತಿ ಮತ್ತು ತಾಯಿತನದ ಅನುಭೂತಿಗಳನ್ನು ಹೊಂದಿರುವ ಮಹಾಗೌರಿಯನ್ನು ಪೂಜಿಸಿ ಆಕೆಯ ಅನುಗ್ರಹಕ್ಕೆ ಪಾತ್ರರಾಗಬೇಕು. ಗುಲಾಬಿ ವರ್ಣವನ್ನು ಪ್ರತಿನಿಧಿಸುವ ಪ್ರೀತಿ ಸಹಾನುಭೂತಿಗಳನ್ನು ಹೊಂದಿರುವ ಮಹಾ ಗೌರಿಯು ಶಾಂತಿ ಮತ್ತು ಸಾಮರಸ್ಯದ ಸಂಕೇತವಾಗಿದ್ದಾಳೆ. ಶ್ವೇತ ವರ್ಣದ ಮಲ್ಲಿಗೆ ಹೂಗಳನ್ನು ಮಹಾ ಗೌರಿಗೆ ಅರ್ಪಿಸಬೇಕು.
ಸರ್ವ ಸ್ವರೂಪೇ ಸರ್ವೇಶ ಸರ್ವಶಕ್ತಿ ಸಮನ್ವಿತೆ
ಬಯೋಭ್ಯಸ್ತ್ರ ತ್ರಾಹಿ ನೋ ದುರ್ಗೆ ದೇವಿ ನಮೋಸ್ತುತೆ
ಎಲ್ಲ ರೂಪಗಳನ್ನು ಒಳಗೊಂಡಿರುವ ಸರ್ವಶಕ್ತಿ ಮಯಿಯಾಗಿರುವ ಭಕ್ತರಿಗೆ ಅಭಯಪ್ರದಳಾಗಿರುವ ಮಹಾಗೌರಿಗೆ ನಮಿಸೋಣ.
ಯಾ ದೇವಿ ಸರ್ವಭೂತೇಶು ತುಷ್ಠಿ ರೂಪೇಣ ಸಂಸ್ಥಿತ ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಎಂಬ ಮಂತ್ರವನ್ನು ಪಠಿಸಬೇಕು.
ಓ ಐ0 ಹ್ರೀ0 ಶ್ರೀಮ್ ದುರ್ಗಾಯೇ ನಮಃ
ಇಲ್ಲವೇ
ಓ ಐ0 ಹ್ರೀ0 ಶ್ರೀಮ್ ಮಹಾಗೌರಾಯೇ ನಮಃ
ಎಂಬುದು ಆಕೆಯ ಪ್ರಣವ ಮಂತ್ರ.
ಮಹಾಗೌರಿಯನ್ನು ಭಕ್ತಿಯಿಂದ ಪೂಜಿಸುವ ಭಕ್ತರ ನೋವು ಸಂಕಟ ದುಃಖ ದುಮ್ಮಾನ ಮತ್ತು ಬಡತನಗಳನ್ನು ಆಕೆ ನಿವಾರಿಸುತ್ತಾಳೆ.
ಎಲ್ಲರಿಗೂ ದುರ್ಗಾಷ್ಟಮಿಯ ಶುಭಾಶಯಗಳು.
***
- ನವರಾತ್ರಿಯ ಒಂಬತ್ತನೇ ದಿನ
ನವರಾತ್ರಿಯ 9ನೇ ದಿನವನ್ನು ಸಿದ್ದಿಧಾತ್ರಿ ದೇವಿಯ ದಿನವನ್ನಾಗಿ ಆಚರಿಸುತ್ತಾರೆ. ಅತ್ಯುನ್ನತ ಆಧ್ಯಾತ್ಮಿಕ ಔನ್ನತ್ಯದ ಈ ರಾತ್ರಿಯಂದು ಸಿದ್ದಿಧಾತ್ರಿಯನ್ನು ಪೂಜಿಸುವ ಮೂಲಕ ಭಕ್ತರು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಸಿದ್ದಿ ಎಂದರೆ ಸಾಧನೆ ಅಥವಾ ಕಾರ್ಯನಿರ್ವಹಣೆ ಎಂದು ಹೇಳಿದರೆ ಧಾತ್ರಿ ಎಂದರೆ ಮನೋಭೀಷ್ಟಗಳನ್ನು ಪೂರೈಸುವವಳು ಎಂದರ್ಥ. ನಮ್ಮಲ್ಲಾ ಆಧ್ಯಾತ್ಮಿಕ ಮತ್ತು ಭೌತಿಕ ಪ್ರಪಂಚದ ಮನೋಕಾಮನೆಗಳನ್ನು ದೇವಿಯು ಪೂರೈಸುತ್ತಾಳೆ. ಜೀವನದಲ್ಲಿನ ಎಲ್ಲ ನೋವು,ಸಂಕಟಗಳನ್ನು ದೇವಿಯನ್ನು ಜನರು ಪ್ರಾರ್ಥಿಸುವರು.
ಗಾಡ್ ಅಂಧಕಾರದಿಂದ ಕೂಡಿದ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ದೇವಿಯು ತ್ರಿಮೂರ್ತಿಗಳನ್ನು ಕೂಡ ಸೃಷ್ಟಿಸಿದಳು. ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರಿಗೆ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯಗಳನ್ನು ನಿರ್ವಹಿಸಲು ಹೇಳಿದ ದೇವಿಯು ಗಾಢಾಂಧಕಾರದಿಂದ ಕೂಡಿದ ಈ ಸೃಷ್ಟಿಯನ್ನು ತನ್ನ ದಿವ್ಯ ಪ್ರಭೆಯಿಂದ ಕೂಷ್ಮಾಂಡ ದೇವಿಯು ಬೆಳಗಿಸಿದಳು.
ಭಯ ಕರ್ತನಾದ ಶಿವನು ತನ್ನನ್ನು ಪರಿಪೂರ್ಣವಾಗಿ ಸಲು ಕೇಳಿಕೊಂಡಾಗ ಕೂಷ್ಮಾಂಡ ದೇವಿಯು ಆತನಿಗೆ ಒಟ್ಟು 18 ಸಿದ್ಧಿಗಳನ್ನು ದೇವಿಯ ರೂಪದಲ್ಲಿ ಅನುಗ್ರಹಿಸಿದಳು. ಆಕೆಯೇ ಸಿದ್ದಿಧಾತ್ರಿ ದೇವಿ.ಆತನಿಗೆ ಮೊದಲ 8 ಸಿದ್ದಿಗಳಾದ ಅಣಿಮಾ,ಮಹಿಮಾ,ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವಗಳು ಪರಿಪೂರ್ಣತೆಯನ್ನು ನೀಡಿದರೆ ಉಳಿದ ಹತ್ತು ಸಿದ್ದಿಗಳು ಸಂಪೂರ್ಣ ಪರಿಪೂರ್ಣನನ್ನಾಗಿಸಿದವು.
ಸೃಷ್ಟಿಕರ್ತ ಬ್ರಹ್ಮನು ಬ್ರಹ್ಮಾಂಡದಲ್ಲಿ ಸೃಷ್ಟಿ ಕಾರ್ಯವನ್ನು ನಡೆಸಲು ಸಿದ್ದಿರಾತ್ರಿಯ ಸಹಾಯವನ್ನು ಯಾಚಿಸಲು ಆಕೆ ಪರಶಿವನ ಅರ್ಧ ಶರೀರವನ್ನು ಸ್ತ್ರೀ ರೂಪಕ್ಕೆ ಬದಲಾಯಿಸಿದಳು. ಆದ್ದರಿಂದ ಶಿವನನ್ನು ‘ಅರ್ಧ ನಾರೀಶ್ವರ’ ಎಂದು ಕರೆಯುತ್ತಾರೆ.
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಹಿ
ಮಹಾ ಗೌರಿ ಶುಭಂ ದಧ್ಯಾನ್ಮಹಾದೇವ ಪ್ರಮೋದನಾ
ಸಿಂಹ ವಾಹಿನಿಯಾಗಿರುವ ಸಿದ್ದಿಧಾತ್ರಿಯು ಕಮಲ ಪುಷ್ಪದ ಮೇಲೆ ಕುಳಿತಿದ್ದು ನಾಲ್ಕು ಕೈಗಳನ್ನು ಹೊಂದಿದ್ದು ಶಂಖ, ಚಕ್ರ,ಹರಿಗೆಗಳನ್ನು ಹೊಂದಿದ್ದು ಶ್ವೇತ ವಸ್ತ್ರಧಾರಿಣಿಯಾಗಿರುವ ಮಹಾಶಿವನಿಗೆ ಆನಂದವನ್ನು ತರುವ, ಪರಿಪೂರ್ಣತೆಯನ್ನು ನೀಡುವ ಸಿದ್ದಿ ಧಾತ್ರಿ ದೇವಿಯು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
” ಯಾ ದೇವಿ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತ, ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ”
ಎಂದು ದೇವಿಯ ಮಂತ್ರವನ್ನು ಪಠಿಸಬೇಕು.
ಓ ಐ0 ಹ್ರೀ0 ಶ್ರೀಮ್ ಸಿದ್ಧಿ ಧಾತ್ರೈ ನಮಃ
ಎಂಬ ಪ್ರಣವ ಮಂತ್ರವನ್ನು ಪಠಿಸಿ ಆಕೆಯ ಕೃಪೆಗೆ ಪಾತ್ರರಾಗಬೇಕು.
ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು…
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ
