‘ಕರುನಾಡ ದಸರಾ’ ಕವನ – ರವಿನಾಗ್ ತಾಳ್ಯ

ನೋಡಬೇಕು ಒಮ್ಮೆ ಕರುನಾಡ ಸಿರಿ ದಸರಾ, ನವ ದುರ್ಗೆಯರ ನಾಡಿನ ವೈಭೋಗ ಸಡಗರ… ಕವಿ ರವಿನಾಗ್ ತಾಳ್ಯ ಅವರ ಲೇಖನಿಯಲ್ಲಿ ದಸರಾ ವೈಭವವನ್ನು ತಪ್ಪದೆ ಓದಿ…

ಆಹಾ ಬಂತೂ ಬಂತೂ ದಸರಾ
ತಂತೂ ತಂತೂ ಸಡಗರ
ನಮ್ಮ ಕರುನಾಡ ದಸರಾ
ಗಜ ಗಂಭೀರ ದಸರಾ
ಅತಿ ಸುಂದರ ದಸರಾ
ನವ ದುರ್ಗೆಯರು ಧರೆಗಿಳಿವ ದಸರಾ

ಚಾಮುಂಡಿ ನಾಡಿನಲಿ ಒಡೆಯರಾ ಗತ್ತಿನಲಿ
ಶಾರದೆಯ ಶೃಂಗೇರಿಯಲಿ ಮಲೆನಾಡ ತಪ್ಪಲಿನಲಿ
ಮೂಕಾಂಬೆ ನೆಲೆಯಲ್ಲಿ ಸಾಗರದ ಸೆಲೆಯಲ್ಲಿ,
ಅನ್ನಪೂರ್ಣೆಯ ಹೊರನಾಡ ಹಸಿರ ಸೊಬಗಿನಲಿ
ನೋಡಬೇಕು ಒಮ್ಮೆ ಕರುನಾಡ ಸಿರಿ ದಸರಾ
ನವ ದುರ್ಗೆಯರ ನಾಡಿನ ವೈಭೋಗ ಸಡಗರ

ಕೊಡಗಿನ ಕಣಿವೆಯ ಕಾವೇರಿ ತವರ ಸೀಮೆಯ
ಕಟೀಲು ದುರ್ಗೆಯ ಶಿರಸಿ ಮಾರಿಕಾಂಬೆಯ,
ಬಾದಾಮಿ ಬನಶಂಕರಿ ದುರ್ಗದ ಉಚ್ಚಂಗಿ ಏಕನಾಥೆಯ
ಕೋಲಾರಮ್ಮ ಹಾಸನಾಂಬೆ ದೇವಿಯ
ದಸರಾ ಮೆರವಣಿಗೆ ನೋಡಬನ್ನಿ ಒಮ್ಮೆ ಕಣ್ತುಂಬಾ
ಕರುನಾಡ ದಸರೆಯ ಕೀರ್ತೀ ಹರಡಿದೆ ಜಗದ ತುಂಬಾ

ಅಸುರತ್ವ ಕೊನೆಯಾಗಿ ಮನುಷ್ಯತ್ವ ನೆಲೆಯಾಗಿ
ಕೆಡುಕಿಗೆ ಸೋಲಾಗಿ ಒಳಿತಿಗೆ ಗೆಲುವಾಗಿ
ಅಂಬು ಕಡಿದು ಜಂಭ ಸೊಲ್ಲಡಗಿ ಸನ್ಮಾರ್ಗ ಬದುಕಾಗಿ
ಜೀವ ಜೀವಗಳು ಅರಿತು ಬಾಳಬೇಕು ಒಂದಾಗಿ
ನೀತಿಯ ಅರುಹಿದೆ ಕರುನಾಡ ದಸರಾ
ತಿಳಿದು ಬಾಳಿದರೆ ಬದುಕೇ ಸುಂದರ

ಒಮ್ಮೆ ಪುರಾಣ ಇತಿಹಾಸ ಪುಟ ತಿರುವು
ಹಠ ಚಟವೆಂದವರ ಹಮ್ಮು ಬಿಮ್ಮು ಕಳೆದವು
ಘಟಗಳೇ ಬಿದ್ದವು ಮೀಸೆ ಮಣ್ಣಾದವು
ಹೆಣ್ಣನ್ನು ಕಡೆಗಣಿಸಿ ಸೋತು ಸತ್ತೋದವು
ಸ್ತ್ರೀ ಶಕ್ತಿಯ ಸಂಕೇತ ತಿಳಿ ದಸರಾದ ಇಂಗಿತ
ಸ್ತ್ರೀಯ ಪೂಜಿಸಿ ವಂದಿಸಿ ಗೌರವಿಸಿ ಎಂದಿದೆ ಭಾರತ

ಅರಿ ಮನುಜ ದಸರಾದ ಐತಿಹ್ಯ
ಅರಿಯದೊಡೆ ದುರ್ಗೆಯ ವಿಜಯ ದಶಮಿ ಪ್ರತಿನಿತ್ಯ
ದುರುಳರಾ ಹರಣಕೆ ಮಾರಿ ಬರುವುದು ಸತ್ಯ
ಹೆಣ್ಣು ಅಬಲೆ ಎಂಬ ಮಾತದು ಮಿಥ್ಯ
ಅರ್ಥಪೂರ್ಣ ನಮ್ಮ ದಸರಾದ ಹಬ್ಬವು
ರೀತಿ ನೀತಿ ತಿಳಿದು ಬದಕಲು ಕರುನಾಡೆ ಸ್ವರ್ಗವು


  •  ರವಿನಾಗ್ ತಾಳ್ಯ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading