ದುಷ್ಟ ಮಹಿಷಾಸುರ ಮರ್ಧಿನಿಯಾಗಿ ರಕ್ಕಸರನ್ನು ಕೊಂದು ಯುದ್ಧದ ದೇವತೆ ಎನಿಸಿಕೊಂಡಳು ಮಹರ್ಷಿ ಕಾತ್ಯಾಯನ ಮಗಳಾಗಿ ಕಾತ್ಯಾಯಿನಿಯಾದಳು!…ಗೀತಾಂಜಲಿ ಎನ್ ಎಮ್ ಅವರ ದುರ್ಗಿ ಕುರಿತಾದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಸುಕೋಮಲೇ ದಾಕ್ಷಾಯಿಣಿ ದಕ್ಷನ
ತನುಜೆಯಾಗಿ ಭಸ್ಮಧಾರಿ ಶಿವನ
ಸತಿಯಾಗಿ ಪತಿಗಾದ ಅವಮಾನಕೆ
ಯಜ್ಞ ಕುಂಡಕೆ ಹಾರಿದಳು!
ಮೊದಲ ರೂಪವಾಗಿ ಪುನರ್ಜನ್ಮ
ಪಡೆದ ಹೈಮವತಿ ಹಿಮಾಚಲದಲ್ಲಿ
ಹಿಮವಂತನ ಪುತ್ರಿಯಾಗಿ ಜನಿಸಿ
ವೃಷಬಾಲಂಕೃತಳಾಗಿ ಶೈಲಪುತ್ರಿಯಾಳು !
ಪರ್ಣಗಳನ್ನೇ ತಿಂದು ಅಪರ್ಣಳಾಗಿ
ಹರನನ್ನೇ ಪತಿಯಾಗಿ ಪಡೆಯಲು ಕಠಿಣ
ತಪಗೈದ ಸುಜ್ಞಾನಿ ಜಪಮಾಲೆ ಕಮಂಡಲ
ಹಿಡಿದು ಬ್ರಹ್ಮಚಾರಿಣಿಯಾದಳು!
ಚಂದ್ರಧಾರಿಣಿಯಾಗಿ ಭಸ್ಮಾಧಾರಿ
ಮಹಾಶಿವನನ್ನು ಚಂದ್ರಶೇಖರನನ್ನಾಗಿಸಿ
ಭಕ್ತರಿಗೆ ಸಂಪತ್ತು ಸಮೃದ್ಧಿ ನೀಡುತ
ಶಸ್ತ್ರಾಸ್ತ್ರಳಾಗಿ ಚಂದ್ರಘಂಟಾದೇವಿಯಾದಳು!
ಸಕಲ ಬ್ರಹ್ಮಾಂಡವ ಸೃಷ್ಟಿಸಿ ದಿನಕರನ
ಹೊಳೆವ ತೇಜಸ್ಸಿನ ದಿವ್ಯ ಕಾಂತಿಯಾಗಿ
ನಭದ ತಮಕ್ಕೆ ಬೆಳಕಿನಾರತಿಯಾಗಿ ಕೂಷ್ಮಾಂಡೆಯಾದಳು!
ಶಿವನೆಂದಿಗೂ ಮದುವೆ ಆಗುವುದಿಲ್ಲವೆಂದು
ಶಿವನ ಮಗನಿಂದಲೇ ಮರಣಬೇಕೆಂದ ದುಷ್ಟ
ತಾರಕಾಸುರನ ಸಂಹಾರಕ್ಕೆ ಸ್ಕಂದನನ್ನು ಹೆತ್ತು
ಸ್ಕಂದಮಾತಳಾದಳು!
ದುಷ್ಟ ಮಹಿಷಾಸುರ ಮರ್ಧಿನಿಯಾಗಿ
ರಕ್ಕಸರನ್ನು ಕೊಂದು ಯುದ್ಧದ ದೇವತೆ ಎನಿಸಿಕೊಂಡಳು ಮಹರ್ಷಿ ಕಾತ್ಯಾಯನ
ಮಗಳಾಗಿ ಕಾತ್ಯಾಯಿನಿಯಾದಳು!
ರಕ್ತಬೀಜಾಸುರ ಶುಂಭ ನಿಶುಂಭರನ್ನು
ಸಂಹರಿಸಿದವಳು ದೇವತೆಗಳನ್ನು ಅಸುರರ
ಉಪಟಳದಿಂದ ರಕ್ಷಿಸಿದವಳು ತನ್ನ ತೇಜದಿಂದಲೇ ಕಾಳರಾತ್ರಿದೇವಿಯಾದಳು!
ಶಿವನೊಲವಿಗಾಗಿ ತಪಗೈದ ತಪಸ್ವಿನಿ
ನಿರಹಾರಳಾಗಿದ್ದಳು ಕಠಿಣ ತಪಸ್ಸಿನ ತಾಪಕ್ಕೆ
ಕಪ್ಪಾಗಿದ್ದ ಅವಳು ಶಿವನ ಮುಡಿಯ ಗಂಗೆಯಲಿ
ಮಿಂದು ಮಹಾಗೌರಿಯಾದಳು!
ಶಿವನಿಗೆ ಎಲ್ಲಾ ಸಿದ್ಧಿಗಳನ್ನು ಕರುಣಿಸಿದ
ದೇವಿಯಾದಳು ಅರಳಿದ ಕಮಲದ ಮೇಲೆ
ಆಸೀನಳಾದಳು ತನ್ನಿಂದ ಅರ್ಧನಾರೀಶ್ವರನಾದ
ಶಿವನಿಗೆ ಎಲ್ಲವನ್ನು ಸಿದ್ಧಿಸಿ ಸಿದ್ದಿದಾತ್ರಿಯಾದಳು!
- ಗೀತಾಂಜಲಿ ಎನ್ ಎಮ್
