ಡಿವಿಜಿ ಎಂದರೆ ಪ್ರಖರ ಬೆಳಕು

ಡಿವಿಜಿ ಅವರು ಯಾವ ಪ್ರಶಸ್ತಿ, ಪುರಸ್ಕಾರಗಳಿಗಾಗಿಯೂ ಕದ ಬಡಿದವರಲ್ಲ. ಡಿವಿಜಿ ಮತ್ತು ಅವರ ಮಗ ಡಾ. ಬಿ.ಜಿ.ಎಲ್‌. ಸ್ವಾಮಿ ಅವರಿಗೆ ಕನ್ನಡದಲ್ಲಿ ಇಬ್ಬರಿಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ತಾನಾಗಿಯೇ ದೊರೆತಿದೆ…ಕೆ. ರಾಜಕುಮಾರ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ …

ನಮ್ಮ ಗುಂಡಪ್ಪನವರು ಕನ್ನಡದಲ್ಲಿ ವಿಪುಲವಾಗಿ ಬರೆದರು. ಆದರೆ ಅದಕ್ಕಿಂತ ನಾಲ್ಕುಪಟ್ಟು ಹೆಚ್ಚಿಗೆ ಬರೆದದ್ದು ಇಂಗ್ಲಿಷಿನಲ್ಲಿ.

ಕಗ್ಗ ಎಂದರೆ ಕೆಲಸಕ್ಕೆಬಾರದ್ದು, ಕಸ ಎಂಬ ಅರ್ಥಗಳಿವೆ. ತಮ್ಮ ಕೃತಿಗೆ ಮಂಕುತಿಮ್ಮನ ಕಗ್ಗ ಎಂದು ಹೆಸರಿಟ್ಟು ಅದರ ಅರ್ಥವನ್ನೇ ತಿರುವು-ಮುರುವು ಮಾಡುವಂತೆ ಬರೆದವರು ನಮ್ಮ ಡಿವಿಜಿ. ಈಗ ಕಗ್ಗಕ್ಕೆ ಮಹತ್ತ್ವದ್ದು, ರಸಮಯ ಕಾವ್ಯ ಎಂಬ ಅರ್ಥಗಳು ಸ್ಫುರಿಸಿವೆ. ಅವರು ಸೃಜಿಸಿದ ಮಂಕುತಿಮ್ಮ, ಮರುಳ ಮುನಿಯ ವಾಸ್ತವವಾಗಿ ನಮ್ಮ ನಡುವೆ ಇಲ್ಲದೆಯೇ ದಂತಕತೆಗಳಾಗಿದ್ದಾರೆ!

ಡಿ.ವಿ. ಗುಂಡಪ್ಪನವರು ಕೋಲಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ, ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಧೀರೋದಾತವಾಗಿ ಫೇಲಾದವರು! ಹಾಗೆಂದರೇನು ಎಂದಿರಾ? ಕನ್ನಡದಲ್ಲಿ ಒಂದೇ ಒಂದು ಅಂಕ ಕಡಿಮೆ ಬಂದಿತ್ತು ಉತ್ತೀರ್ಣರಾಗಲು! ಈ ಪುಣ್ಯಾತ್ಮ ಅನಂತರ ಭಗವದ್ಗೀತೆಗೆ ಕನ್ನಡದಲ್ಲಿ ‘ನ ಭೂತೋ’ ಎಂಬಂತೆ ತಾತ್ಪರ್ಯ ಬರೆದರು ಎಂಬುದನ್ನು ನೆನೆದಾಗ ಬೆರಗು ಬೆಳಕಾದಂತಹ ಅನುಭವ. ಅವರ ಈ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೆ ಪಾತ್ರವಾಯಿತು. ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮಯೋಗ.

ಅವರ ಅತಿ ದೊಡ್ಡ ಕೊಡುಗೆಯೆಂದರೆ ಅವರ ಮಗ ಲೇಖಕ, ಸಸ್ಯಶಾಸ್ತ್ರಜ್ಞ ಬಿ.ಜಿ.ಎಲ್. ಸ್ವಾಮಿ! ತಮಿಳು ತಲೆಗಳ ನಡುವೆ ಕೃತಿಯ ಕರ್ತೃ. ತಮಿಳರ ಬಾಯಲ್ಲಿ ಬಿಚಿಲ ಚಾಮಿ. ಸಸ್ಯಶಾಸ್ತ್ರ ಕುರಿತಂತೆ ‘ಹಸುರುಹೊನ್ನು’ ಎಂಬ ಅದ್ವಿತೀಯ ಕೃತಿಯನ್ನು ರಚಿಸಿದವರು ಡಾ. ಬಿ.ಜಿ.ಎಲ್‌. ಸ್ವಾಮಿ. ಈ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೆ ಪಾತ್ರವಾಯಿತು. ತನ್ಮೂಲಕ ಕನ್ನಡದಲ್ಲಿ ತಂದೆ ಮತ್ತು ಮಗ ಇಬ್ಬರಿಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆಯುವಂತಾಯಿತು. ಅನಂತರ ಕುವೆಂಪು-ತೇಜಸ್ವಿ; ಶ್ರೀರಂಗ ಮತ್ತು ಅವರ ಮಗಳು ಶಶಿ ದೇಶಪಾಂಡೆ ಅವರದು ಸಹ ಇಂತಹುದೇ ಸಾಧನೆ.

ಡಿವಿಜಿ ಮುತ್ಸದ್ದಿ, ದ್ರಷ್ಟಾರ, ಆಹಾರಪ್ರಿಯ, ಸಾಹಿತಿ, ಪತ್ರಕರ್ತ. ತಾವೇ ಸ್ಥಾಪಿಸಿದ ಗೋಖಲೆ ಸಾರ್ವಜನಿಕ ಸಂಸ್ಥೆಗೆ ತಮ್ಮ ಅಷ್ಟೂ ಪುಸ್ತಕಗಳನ್ನು ದಾನಮಾಡಿದವರು ಅವರು.

ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಲಿದೆ ಎಂಬ ಖಾತ್ರಿಯಿತ್ತು. ಆದರೆ ಆದದ್ದೇ ಬೇರೆ. ಡಿವಿಜಿ ಹಾಗೂ ಮತ್ತೊಬ್ಬರಿಗೆ ಸಮಾನ ಮತಗಳು ಬಂದಿದ್ದವಂತೆ. ಆಯ್ಕೆ ಸಮಿತಿಯ ಅಧ್ಯಕ್ಷರು ತಮ್ಮ ಮತವನ್ನು ಇನ್ನೊಬ್ಬರ ಪರ ಚಲಾಯಿಸಿದರು. ಇದರಿಂದಾಗಿ ಡಿವಿಜಿ ಈ ಪುರಸ್ಕಾರದಿಂದ ವಂಚಿತರಾದರು.

ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಬಾಬು ರಾಜೇಂದ್ರಪ್ರಸಾದ್ ಆಯ್ಕೆ ಸಮಿತಿಯ ಸಭೆಗೆ 15 ದಿನಗಳ ಹಿಂದೆ ತೀರಿಕೊಂಡರು. ಹಾಗಾಗಿ ಬೇರೊಬ್ಬರು ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದರು.

ಡಿವಿಜಿ ಅವರ ಮಗ ಸಸ್ಯಶಾಸ್ತ್ರಜ್ಞ ಬಿ.ಜಿ.ಎಲ್. ಸ್ವಾಮಿ

ನೆನಪಿರಲಿ: ಜ್ಞಾನಪೀಠ ಪುರಸ್ಕಾರ ರಾಜ್ಯ ಅಥವಾ ಕೇಂದ್ರ ಸರ್ಕಾರದ ಪ್ರಶಸ್ತಿ ಅಲ್ಲ. ಅದು ಜ್ಞಾನಪೀಠ ಸಂಸ್ಥಾನ ಎಂಬ ಖಾಸಗಿ ಸಂಸ್ಥೆ ನೀಡುವಂತಹುದು. ಡಿವಿಜಿ ಅವರು ಯಾವ ಪ್ರಶಸ್ತಿ, ಪುರಸ್ಕಾರಗಳಿಗಾಗಿಯೂ ಕದ ಬಡಿದವರಲ್ಲ. ಅವರು ತ್ಯಾಗರಾಜರ ಎಂದರೋ ಮಹಾನುಭಾವರಲ್ಲಿ ಒಬ್ಬರಲ್ಲ. ಕೊಂದರೇ ಮಹಾನುಭಾವರಲ್ಲಿ ಒಬ್ಬರು! ಅಂದರೆ ಕೆಲವೇ ಕೆಲವು ಮಹಾನುಭಾವರ ಪೈಕಿ ಒಬ್ಬರು. ಅವರು ಸರಸಿ, ರಸಿಕ, ಉದಾರಿ, ನಿಸ್ಪೃಹ ಏನೆಲ್ಲ; ಎಷ್ಟೆಲ್ಲ. ಬಡತನದ ಕೆಸರಿನಲ್ಲಿ ಬಿರಿದ ಕಮಲ! ಡಿವಿಜಿ ಎಂಬುದೊಂದು ಅದ್ಭುತ ಚೇತನ.

ಬಡತನ ಇನ್ನಿಲ್ಲದಂತೆ ಕಾಡುತ್ತಿದ್ದರೂ ಸರ್ಕಾರದಿಂದ ಯಾವ ಸವಲತ್ತನ್ನೂ ಬಯಸಿದವರಲ್ಲ. ಒಮ್ಮೆ ಮೈಸೂರು ಸಂಸ್ಥಾನದ ಕಾರ್ಯವೊಂದನ್ನು ನಿರ್ವಹಿಸಿದ್ದಕ್ಕೆ ನೀಡಿದ ಸಂಭಾವನೆಯ ಚೆಕ್ಕನ್ನು ಪಡೆಯಲು ನಿರಾಕರಿಸಿದರು. ಆಗ ಮೈಸೂರಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ ಒತ್ತಾಯದಿಂದ ಅದನ್ನು ಸ್ವೀಕರಿಸಿದರು. ಆದರೆ ಅದನ್ನು ನಗದೀಕರಿಸಲಿಲ್ಲ. ಬಡತನದಲ್ಲಿ ಬೇಯುತ್ತಿದ್ದರೂ, ಕಡೆಯವರೆಗೂ ಅದನ್ನು ಹಾಗೆಯೇ ಎತ್ತಿಟ್ಟರು. ಅವರ ನಿಧನಾನಂತರವೇ ಈ ಸಂಗತಿ ಬಯಲಾದದ್ದು. ಅಂತಹ ನಿಸ್ಪೃಹ ಸ್ವಾಭಿಮಾನಿ. ಅವರ ಹಿರಿತನದ ಬಗೆಗೆ ಬರೆದಷ್ಟೂ ಇದೆ.‌

ಕರ್ನಾಟಕದ ಮೂಡಣಬಾಗಿಲು, ಮುಳಬಾಗಿಲಿನಲ್ಲಿ ಮೂಡಿದ ಡಿವಿಜಿ ಎಂಬ ಈ ಅರುಣೋದಯವು ಇಡೀ ನಾಡನ್ನು ಬೆಳಗಿತು. ಅವರು ಕನ್ನಡದ ಪ್ರಾತಃಸ್ಮರಣೀಯರಲ್ಲಿ ಅಗ್ರಗಣ್ಯರು. ಅವರ ಸ್ಮರಣಾರ್ಥ ಮುಳಬಾಗಿಲಿನಲ್ಲಿ ಡಿವಿಜಿ ಗಡಿ ಭವನವನ್ನು ನಿರ್ಮಿಸಲಾಗಿದೆ. ಇದೀಗ ಅದರ ನವೀಕರಣ ಕಾರ್ಯ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅವರ ಸಮಗ್ರ ಸಾಹಿತ್ಯವನ್ನು ಹಲವು ಸಂಪುಟಗಳಲ್ಲಿ ಪ್ರಕಟಿಸಿ ಉಪಕರಿಸಿದೆ. ಡಾ. ಸರೋಜಿನಿ ಮಹಿಷಿ ಅವರು ಮಂಕುತಿಮ್ಮನ ಕಗ್ಗವನ್ನು ಹಿಂದಿಗೆ ತರ್ಜುಮೆ ಮಾಡಿದ್ದಾರೆ. ಸೋಜಿಗದ ಸಂಗತಿಯೆಂದರೆ ಮಂಕುತಿಮ್ಮನ ಕಗ್ಗಕ್ಕೆ ಸಿಕ್ಕ ಯಶಸ್ಸು ಮತ್ತು ಖ್ಯಾತಿ ಅವರ ಮರುಳ ಮುನಿಯನ ಕಗ್ಗಕ್ಕೆ ಸಿಗಲಿಲ್ಲ.

ಹಲವು ಜನ್ಮ ಕಳೆದರೂ ಅಷ್ಟು ಜ್ಞಾನ ಸಂಚಯಿಸಲಾಗದು. ಡಿವಿಜಿ ಎಂಬುದು ಬೆರಗಷ್ಟೇ ಅಲ್ಲ; ಅದು ಪ್ರಖರ ಬೆಳಕು. ಅಂತಿಂತಹ ಅಚ್ಚರಿಯಲ್ಲ; ಹುಬ್ಬು ಮೇಲೇರಿ ಹಣೆಯನ್ನೇ ದಾಟುವ ಯತ್ನಕ್ಕೆ ಎಳಸುವಷ್ಟು ಅಚ್ಚರಿ. ಡಿವಿಜಿ ಅದೊಂದು ಬುದ್ಧಿಮಂತ್ರ. ಮೂರಕ್ಷರದ ಧೀಮಂತ್ರ; ಮನೋಮಂತ್ರ.

ಏಳೇಳು ಜನ್ಮ ಕಳೆದರೂ ಸಾಧಿಸಲಾಗದ್ದನ್ನು ಒಂದೇ ಜನ್ಮದಲ್ಲಿ ಸಾಧಿಸಿದವರು. ಪಾಂಡಿತ್ಯ, ವಿದ್ವತ್ತುಗಳಿಗೇ ಪಾಠ ಹೇಳಿದವರು ಅವರು.

ಅವರು ಕನ್ನಡಕ್ಕಿಂತ ಇಂಗ್ಲಿಷಿನಲ್ಲಿ ಹೆಚ್ಚು ಬರೆದರು! ಇದು ಹೆಚ್ಚಿನ ಜನರಿಗೆ ಗೊತ್ತಿರದ ಸಂಗತಿ. ಒಂಬತ್ತು ಸಂಪುಟಗಳಲ್ಲಿ ಅವರ ಇಂಗ್ಲಿಷ್ ಬರಹಗಳು ಪ್ರಕಟವಾಗುತ್ತಿವೆ. ಈಗಾಗಲೇ ಏಳು ಸಂಪುಟಗಳು ಬೆಳಕು ಕಂಡಿವೆ. ಅವರ ಕೃತಿಗಳನ್ನು ಜಗತ್ತಿನ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಗಳು ವಿಮರ್ಶಿಸಿವೆ. ಇಷ್ಟು ಬರೆದರೆ? ಗೊತ್ತೇ ಇರಲಿಲ್ಲ ಎಂಬುದು ಎಲ್ಲರ ಪ್ರತಿಕ್ರಿಯೆ. ಅವರು ಬರೆಯದ, ಅವರ ಇಂಗ್ಲಿಷ್ ಲೇಖನಗಳನ್ನು ಪ್ರಕಟಿಸದ ಭಾರತದ ಇಂಗ್ಲಿಷ್ ಪತ್ರಿಕೆಗಳೇ ಇರಲಿಲ್ಲ.

ನಾನು ಅವರು ಹುಟ್ಟಿದ ಮುಳಬಾಗಿಲಿನಲ್ಲಿ ಬಾಲ್ಯದಲ್ಲಿನ ರಜೆ ಎಂಬ ಸಂಭ್ರಮದ ದಿನಗಳನ್ನು ಕಳೆಯುತ್ತಿದ್ದವನು. ಅವರಿದ್ದ ಮನೆಯಿಂದ ಕಾಲಳತೆ ದೂರದಲ್ಲಿ ನಮ್ಮ ಅಜ್ಜಿಯ ಮನೆ. ಇರುಳಿನಲ್ಲಿ ಇಲ್ಲಿಂದ ಕೂಗಿದರೆ ಅಲ್ಲಿಗೆ ಕೇಳುತ್ತಿತ್ತು. ಕೂಗಿದರು ದನಿ ಕೇಳಲಿಲ್ಲವೇ ನರ-ಹರಿಯೇ” ಎಂಬ ಪ್ರಶ್ನೆಯೇ ಆ ಕಡೆ ಇರುತ್ತಿರಲಿಲ್ಲ. ಅಷ್ಟು ನಜದೀಕ್. ಅಷ್ಟೊಂದು ಹತ್ತಿರ. ಈ ಭೌಗೋಳಿಕ ಸಾಮೀಪ್ಯದ ಹೊರತಾಗಿ ಬೇರೆ ಯಾವ ರೀತಿಯೂ ಅವರನ್ನು ಹತ್ತಿರವಾಗಿಸಿಕೊಳ್ಳಲು ಸಾಧ್ಯವಾಗದು. ಯಾರೂ ಕ್ರಮಿಸಲಾಗದ, ಏರಲಾಗದ ಬೌದ್ಧಿಕ ಎತ್ತರವದು. ಗುಂಡಪ್ಪನವರು ಸಾರ್ವಜನಿಕ ಬದುಕಿನ ನಿಗಿ ನಿಗಿ ಕೆಂಡ. ಪಾರದರ್ಶಕತೆಯನ್ನು ಜೀವನವಿಡೀ ಆದರಿಸಿ ಉಪಚರಿಸಿದವರು. ಡಿವಿಜಿ ನಮ್ಮ ಸಮಕಾಲೀನ ಇತಿಹಾಸದ ಕೊಹಿನೂರ್. ಅವರು ಕನ್ನಡಕ್ಕಿಂತ ನಾಲ್ಕುಪಟ್ಟು ಹೆಚ್ಚು ಇಂಗ್ಲಿಷಿನಲ್ಲಿ ಬರೆದರು ಎಂಬುದು ನಾವು ಕೇಳಿಯೇ ಇರದ ವಿಸ್ಮಯ.


  • ಕೆ. ರಾಜಕುಮಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW