‘ನನ್ನ ಸುಂದರಿ’ ಕವನ – ಮೇಗರವಳ್ಳಿ ರಮೇಶ್

ಕವಿ ಮೇಗರವಳ್ಳಿ ರಮೇಶ್ ಅವರು ತಮ್ಮ ಮಡದಿಗಾಗಿ ಬರೆದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….

ನಿಷ್ಕಲ್ಮಶ ಹೃದಯದಿಂದ
ಪರಿಶುಧ್ಧ ಕಣ್ಣುಗಳಿಂದ
ಆರಾಧಿಸುತ್ತೇನೆ ನಿನ್ನ
ಓ ನನ್ನ ಸುಂದರಿ!

ಚಾಮರ ಬೀಸುತ್ತಿವೆ
ಗಿಡ ಮರದ ಕೊಂಬೆಗಳು
ಅರಳಿ ನಿಂತ ಹೂಗಳ ಸುಗಂಧವನ್ನು
ತಂದು ತೀಡುತ್ತಿದೆ ತಂಗಾಳಿ
ನಿನ್ನ ಸುಂದರ ಮೈಗೆ.

ಚಂದಿರ ಜೀವಂತವಾಗಿದ್ದಾನೆ
ನಿನ್ನ ಬೆಳದಿಂಗಳ ಮೈಯಲ್ಲಿ
ನಕ್ಷತ್ರಗಳು ಹೊಳೆಯುತ್ತಿವೆ
ನಿನ್ನ ಕಣ್ಣುಗಳಲ್ಲಿ
ನಿನ್ನ ಕಿನ್ನರ ಕಂಠದುಲುಹಿಗೆ
ಇಡೀ ಪ್ರಕೃತಿ ಕಿವಿದೆರೆದು ನಿಂತಿದೆ.

ನಿನಗಾಗಿ ಕೋಗಿಲೆ ಬಿತ್ತರಿಸುತ್ತಿದೆ
ವಸಂತೋದಯದ ಗೀತೆಯನ್ನು
ನೈದಿಲೆಯ ಕೊಳದಲ್ಲಿ
ಹಂಸ ದ್ವಯಗಳು ಸರಸವಾಡುತ್ತಿವೆ.

ಚೆಲುವಾದ ಬೆಳದಿಂಗಳ ಈ ರಾತ್ರಿ
ನೀ ಮಲಗಿ ವಿಶ್ರಮಿಸು
ಓ ನನ್ನ ಸುಂದರಿ
ನನ್ನ ಕವಿತೆಗಳ ಮಿದು ಹಾಸಿಗೆಯಲ್ಲಿ
ತುಂಬಲಿ ನಿನ್ನ ಸುಗಂಧ
ನನ್ನ ಕವಿತೆಗಳಲ್ಲಿ!

ನಿಷ್ಕಲ್ಮಶ ಹೃದಯದಿಂದ
ಪರಿಶುದ್ಧ ಕಣ್ನುಗಳಿಂದ
ಆರಾಧಿಸುತ್ತೇನೆ ನಿನ್ನನ್ನು
ಓ ನನ್ನ ಸುಂದರಿ!


  • ಮೇಗರವಳ್ಳಿ ರಮೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading