ಕಡುಬಿಸಿಲಿಗೆ ತಂಪಾದ ರಾಗಿ ಅಂಬಲಿ

ಪರಿಸರ ಹಾಳಾಗುತ್ತಿರುವುದನ್ನು ನೋಡಿದರೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕತೆ ಇದೆ. ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು ಅರೋಗ್ಯದ ದೃಷ್ಟಿಯಿಂದ ರಾಗಿ ಮುಖ್ಯವಾಗಿ ಕಾರ್ಯ ನಿರ್ವಹಿಸುತ್ತದೆ, ರಾಗಿ ಮಹತ್ವದ ಕುರಿತು ಸೌಮ್ಯ ಸನತ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದಡಲ್ಲಿ ಚೆನ್ನ,
ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ.
ಸವಿದು ನೋಡಿ ಅಂಬಲಿ ರುಚಿಯಾಯಿತ್ತೆಂದು
ಕೂಡಲಸಂಗಮದೇವಂಗೆ ಬೇಕೆಂದು
ಕೈದೆಗೆದ ನಮ್ಮ ಚೆನ್ನ……

ರಾಗಿಯ ಅಂಬಲಿ ಸವಿರುಚಿಯನ್ನು ಬಸವಣ್ಣನವರು ತಮ್ಮ ವಚನದಲ್ಲಿ ಬಹಳಷ್ಟು ಅರ್ಥಪೂರ್ಣವಾಗಿ ತಿಳಿಸಿದ್ದಾರಲ್ಲವೇ…

ಹೌದು ಈ ಅಂಬಲಿಯನ್ನು ಮಣ್ಣಿನ ಗಡಿಗೆಯಲ್ಲಿ ಬಳಸಿದರೆ ಅದರ ರುಚಿಯೇ ಚಂದ..ನನಗೆ ನನ್ನ ಹಿರಿಯರು ಹೇಳುತ್ತಿದ್ದ ಮಾತು: ವಚನಗಳು ಯಾವಾಗಲು ದಿನದ ಜೀವನಕ್ಕೆ ಹತ್ರ ಆಗ್ತಾವೆ ಅಂತ. ನಮ್ಮ ದಿನದ ಬದುಕಿನಲ್ಲಿ ಬಳಸುವ ಅಂಬಲಿಯ ಉಪಯೋಗ ಅರಿತ ಮೇಲೆ ಅವರ ಮಾತುಗಳು ಎಷ್ಟು ನಿಜ ಅನಿಸುತ್ತೆ. ಅಂಬಲಿ ಕುರಿತ ಕೆಲವು ವಚನಗಳನ್ನು ನೋಡಿದರೆ ನಿಮಗೂ ಆ ಅನುಭವ ಆಗುವುದು.

ಆರೋಗ್ಯ ಆರೋಗ್ಯ ಆರೋಗ್ಯ…..ಹೌದು ಈಗ ಆರೋಗ್ಯ ಕಾಪಾಡಿಕೊಳ್ಳಿ ಎಂದು ಬಾಯಿ ಬಾಯಿ ಬಡಿದುಕೊಳ್ಳುವ ಸ್ಥಿತಿ ಬಂದಿದೆ.. ಪರಿಸರ ಹಾಳಾಗುತ್ತಿರುವ ಸ್ಪೀಡ್ ನೋಡಿದರೆ ನಾವು ಅದ್ಯಾವಾಗ ಸಾಯುತ್ತೀವೋ ನಮಗೆ ಗೊತ್ತಿಲ್ಲ.. ಅಂತಹದರಲ್ಲಿ ಇರುವಷ್ಟು ದಿನ ಹಾಳು ಮೂಳು ತಿಂದು ಆರೋಗ್ಯ ಕೆಡಿಸಿ ಕೊಳ್ಳುವುದು ಬೇರೆ. ವರ್ಷಗಳು ಉರುಳಿದಂತೆ ಬಿಸಿಲು ಜಾಸ್ತಿಯಾಗುತ್ತಿದೆ. ಹೆಚ್ಚಿದ ಬಿಸಿಲಿನ ಝಳ, ಬಿಸಿಯಾದ ತಾಪಮಾನ ನಮ್ಮ ದೇಹದಿಂದ ನಮ್ಮ ಆರೋಗ್ಯವನ್ನು ಕಸಿಯುತ್ತದೆ. ನಮ್ಮ ದೇಹ ದಲ್ಲಿರುವ ನೀರಿನ ಅಂಶ ಸಂಪೂರ್ಣವಾಗಿ ಎಲ್ಲಿ ಹೊರಟು ಹೋಗುತ್ತದೆಯೋ ಎನ್ನುವ ಭಯ ಶುರು ವಾಗುತ್ತದೆ. ಅಷ್ಟು ಪ್ರಮಾಣದಲ್ಲಿ ಈಗ ಎಲ್ಲಾ ಕಡೆ ಬಿಸಿಲು ಜಳಪಿಸುತ್ತಿದೆ.

ಈ ಸಂದರ್ಭದಲ್ಲಿ ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು ಅರೋಗ್ಯದ ದೃಷ್ಟಿಯಿಂದ ಬಹು ಮುಖ್ಯ. ಆರೋಗ್ಯಕರವಾದ ಮತ್ತು ನೈಸರ್ಗಿಕ ವಾದ ಕೆಲವೊಂದು ಪಾನೀಯಗಳು ನಮ್ಮ ದೇಹದ ನಿರ್ಜಲೀಕರಣ ಸಮಸ್ಯೆಯನ್ನು ಹೋಗಲಾಡಿಸಿ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸಿ ಬೇಸಿಗೆ ದಿನಗಳಲ್ಲಿ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುತ್ತವೆ. ಅಂತಹ ಆರೋಗ್ಯಕರ ಡ್ರಿಂಕ್ ಗಳಲ್ಲಿ ರಾಗಿ ಅಂಬಲಿ ಕೂಡ ಒಂದು.

10 ನಿಮಿಷದಲ್ಲಿ ಮಾಡಬಹುದಾದ ರಾಗಿ ಅಂಬಲಿ ಉಪಯೋಗ ಅಪಾರ ಕುಡಿದರೆ ರೋಗ ದೂರ ದೂರ…

ಪ್ರೋಟಿನ್ ಕಣಜ ರಾಗಿ ಅಂಬಲಿ ಬಹು ಉಪಯೋಗಗಳು :

* ಬೆಳಗ್ಗೆ ತಿಂಡಿಯ ಬದಲು ರಾಗಿ ಅಂಬಲಿ ಕುಡಿಯುವುದರಿಂದ ನಿಮ್ಮ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ

* ರಾಗಿ ಗಂಜಿ ದೇಹಕ್ಕೆ ತಂಪು. ದೇಹದಲ್ಲಿನ ಹೆಚ್ಚುವರಿ ಉಷ್ಣಾಂಶವನ್ನು ಇದು ಕಡಿಮೆ ಮಾಡುತ್ತದೆ. ಉರಿಯೂತದ ಸಮಸ್ಯೆ ಇರುವವರು ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಹೀಗೆ ಎಲ್ಲಾ ಕಾಲದಲ್ಲೂ ರಾಗಿ ಗಂಜಿ ಸೇವಿಸುವುದು ಉತ್ತಮ.

* ಬೊಜ್ಜನ್ನು ನಿಯಂತ್ರಿಸಲು ಮತ್ತು ವೇಗವಾಗಿ ತೂಕ ಇಳಿಸಿಕೊಳ್ಳಲು ರಾಗಿ ಅಂಬಲಿ ಸಹಾಯಕಾರಿಯಾಗಿದೆ.

* ಮೆದುಳು ಸಕ್ರಿಯವಾಗಿ ಕೆಲಸ ಮಾಡಲು ರಾಗಿ ಗಂಜಿ ಸಹಾಯಕವಾಗಿದೆ. ಹೀಗಾಗಿ ಮಕ್ಕಳಿಗೆ ಇದನ್ನು ನೀಡುವುದು ತುಂಬಾ ಒಳ್ಳೆಯದು.

ಬೇಕಾಗುವ ಸಾಮಾಗ್ರಿಗಳು :

•ರಾಗಿ ಹಿಟ್ಟು
•ನೀರು
•ಮೊಸರು
•ಉಪ್ಪು
•ಜೀರಿಗೆ ಪುಡಿ
•ಸಣ್ಣಗೆ ಹಚ್ಚಿದ ಕೊತ್ತಂಬರಿ
•ಸಣ್ಣಗೆ ಹಚ್ಚಿದ ಈರುಳ್ಳಿ (ಬೇಕಿದ್ದಲ್ಲಿ )

ಬಹು ಉಪಯೋಗಿ ರಾಗಿ ಅಂಬಲಿ ಮಾಡುವ ವಿಧಾನ :

* ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಹಾಕಿ ಅದಕ್ಕೆ 1/2 ಕಪ್‌ನಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಉಳಿದ ನೀರು ಹಾಕಿ ಕಲಸಿಕೊಳ್ಳಿ.

* ನಂತರ ಒಲೆಯ ಮೇಲೆ ಒಂದು ಪಾತ್ರೆ ಇಟ್ಟು, ರಾಗಿ ಹಿಟ್ಟಿನ ಮಿಶ್ರಣವನ್ನ ಹಾಕಿ ಗಂಟಾಗದಂತೆ ಕೈಯ್ಯಾಡಿಸುತ್ತಾ 3 ನಿಮಿಷದವರೆಗೆ ಕಾಯಿಸಿಕೊಳ್ಳಿ.

* ಹಿಟ್ಟು ಸ್ವಲ್ಪ ಗಟ್ಟಿ ಆದಾಗ ಅದಕ್ಕೆ ಉಪ್ಪು ಮತ್ತು ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ ನಂತರ ಒಲೆಯಿಂದ ಕೆಳಗಿಳಿಸಿ ಆರಲು ಬಿಡಿ.

* ಗಂಜಿ ಸಂಪೂರ್ಣ ತಣ್ಣಗಾದ ನಂತರ ಮೊಸರು ಅಥವಾ ಮಜ್ಜಿಗೆ ಹಾಕಿ ಮಿಕ್ಸ್ ಮಾಡಿದರೆ ರಾಗಿ ಅಂಬಲಿ ಸವಿಯಲು ಸಿದ್ಧ. ನಿಮಗೆ ಇಷ್ಟವಿದ್ದರೆ ಇದಕ್ಕೆ ಸಣ್ಣಗೆ ಕಟ್ ಮಾಡಿದ ಈರುಳ್ಳಿ ಸೇರಿಸಿಕೊಳ್ಳಬಹುದು.


  • ಸೌಮ್ಯ ಸನತ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading