ಕೌಶಿಕ್ ಕೂಡುರಸ್ತೆ ಅವರ ‘ಕಾಲಾಯ ತಸ್ಮೈ ನಮಃ’ ಪುಸ್ತಕದ ಕುರಿತು ಲೇಖಕಿ ಸುಮಾ ಭಟ್ ಅವರು ಹೇಳಿದ್ದು ಮೊದಲ ಪತ್ತೇದಾರಿ ಕಾದಂಬರಿಯಲ್ಲೇ ನಿಗೂಢತೆಯೊಂದಿಗೆ ವೈಜ್ಞಾನಿಕ ಆವಿಷ್ಕಾರಗಳ ಬಗ್ಗೆ ತಿಳಿಸುತ್ತಾ ಕುತೂಹಲ ಮೂಡಿಸಿದ ಪರಿ ಓದಿಗೊಂದು ತೃಪ್ತಿ ನೀಡಿತು ಎನ್ನುತ್ತಾರೆ. ಈ ಪುಸ್ತಕದ ಕುರಿತು ಇನ್ನಷ್ಟು ತಪ್ಪದೆ ಮುಂದೆ ಓದಿ…
ಪುಸ್ತಕ: ಕಾಲಾಯ ತಸ್ಮೈ ನಮಃ
ಲೇಖಕರು: ಕೌಶಿಕ್ ಕೂಡುರಸ್ತೆ
ಎರಡನೆಯ ಪುಸ್ತಕ ಮುದ್ರಣ ಪ್ರಕಾಶಕರು: ಸ್ನೇಹಾ ಬುಕ್ ಹೌಸ್
ಪುಟಗಳು: ೧೦೦.೦೦
ಪ್ರಥಮ ಮುದ್ರಣ:೨೦೨೦
ಪ್ರಕಾಶಕರು: ಓಂ ಶಕ್ತಿ ಪ್ರಕಾಶನ
ಬೆಲೆ: ೧೦೦
ಪುಟಗಳು: ೯೬
ಲೇಖಕರ ಕಿರು ಪರಿಚಯ
ಲೇಖಕ ಕೌಶಿಕ್ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಎಂಬ ಗ್ರಾಮದಲ್ಲಿ ಜನಿಸಿದವರು. ಇವರ ತಂದೆ ಹೆಚ್.ಎಸ್ ತಮ್ಮೇಗೌಡ ಮತ್ತು ತಾಯಿ ಭಾಗ್ಯ. ಇವರು ಓದಿದ್ದು ಏರೋನಾಟಿಕಲ್ ಇಂಜಿನಿಯರಿಂಗ್, ವೃತ್ತಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದು, ಪ್ರವೃತ್ತಿಯಲ್ಲಿ ಲೇಖಕರಾಗಿದ್ದಾರೆ. ಹೃದಯದ ಮಾತು ಇವರ ಮೊದಲ ಪ್ರಕಟಿತ ಕವನ ಸಂಕಲನವಾದರೆ, ಇಂತಿ ನಿಮ್ಮ ಆತ್ಮೀಯ ಎಂಬುದು ಮೊದಲ ಕಾದಂಬರಿ (ಎರಡನೆ ಪ್ರಕಟಿತ ಕೃತಿ).ಕಾಲಾಯ ತಸ್ಮೈ ನಮಃ ಇವರ ಮೊದಲ ಪತ್ತೇದಾರಿ ಕಾದಂಬರಿಯಾಗಿದೆ.

ಕೃತಿ ಪರಿಚಯ
ಪ್ರೊಫೆಸರ್ ರಾಮೇಶ್ವರ್ ಮತ್ತು ಡಾ.ರಾಧಾಕೃಷ್ಣ ಎಂಬ ಉನ್ನತ ಹುದ್ದೆಯಲ್ಲಿರುವ ಇಬ್ಬರು ದೂರುದಾರರಾಗಿ ಆರಕ್ಷಕ ಠಾಣೆಗೆ ಬಂದು, ಒಬ್ಬರ ಪರ ಮತ್ತೊಬ್ಬರು ಆರೋಪ ಮಾಡುವುದರೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಪ್ರೊಫೆಸರ್ ರಾಮೇಶ್ವರ್ ಮೂರು ತಿಂಗಳ ಹಿಂದೆ ತನ್ನ ಕನಸಿನ ಯೋಜನೆಯಾದ ತಾನು ಬರೆದ “ಬೆಕ್ಕಿನ ಕಣ್ಣು” ಎಂಬ ಥ್ರಿಲ್ಲರ್ ಪುಸ್ತಕವನ್ನು ಬಿಡುಗಡೆ ಮಾಡಿದ್ದಾಗಿ ಹೇಳುತ್ತಾನೆ. ನಂತರ ತನ್ನ ಪುಸ್ತಕದ ಕಥೆ ಕದ್ದು ನೀಲಿ ಕಣ್ಣು ಎಂಬ ಹೆಸರಿಟ್ಟು ರಾಧಾಕೃಷ್ಣ ಎಂಬ ಈ ವ್ಯಕ್ತಿ ತಮ್ಮ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಿರುವ ವಿಷಯ ಗೆಳೆಯನಿಂದ ತಿಳಿಯಿತು ಎಂಬುದು ರಾಮೇಶ್ವರ್ ಅವರ ದೂರಾಗಿತ್ತು.
ರಾಮೇಶ್ವರ್ ದೂರನ್ನು ಆಧರಿಸಿ ರಾಧಾಕೃಷ್ಣರನ್ನು ಪ್ರಶ್ನಿಸಿ ಅವರಿಂದ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆ ಪೋಲೀಸರು ವಿಚಾರಣೆ ನಡೆಸಿದಾಗ, ರಾಧಾಕೃಷ್ಣ ಶಿವಮೊಗ್ಗದ ಮೌನ ಹೊಂಸ್ಟೇಯೊಂದರಲ್ಲಿ ಕೂತು ಬರೆದಿರೋ ಕಥೆ ಎಂಬುದಕ್ಕೆ ಉತ್ತರ ಸಿಗುತ್ತದೆ. ಅಲ್ಲದೇ ಅದಕ್ಕೆ ಅದರ ಓನರ್ ಸುರೇಂದ್ರನಿಂದ ರಾಧಾಕೃಷ್ಣರ ಮಾತನ್ನು ಸಮರ್ಥಿಸುವಂತಹಾ ಉತ್ತರವೇ ಬಂದಾಗ ಇನ್ಸ್ ಪೆಕ್ಟರ್ ವಿಕ್ರಂ ಗೊಂದಲಕ್ಕೀಡಾಗುತ್ತಾನೆ. ಬೇರೆ ಬೇರೆ ಮಾರ್ಗದ ಮಾತಿನ ತನಿಖೆಯಿಂದಲೂ ವಿಕ್ರಂಗೆ ಯಾವುದೂ ಸ್ಪಷ್ಟವಾಗದಿದ್ದಾಗ ಇಬ್ಬರಿಗೂ ತಮ್ಮ ಕಥೆಯ ಕೈ ಬರಹದ ಮೂಲ ಹಸ್ತಪ್ರತಿಯೊಂದಿಗೆ ಠಾಣೆಗೆ ಬರಲು ತಿಳಿಸುತ್ತಾನೆ. ಒಬ್ಬರ ಹಸ್ತಪ್ರತಿಯಲ್ಲಿ ದಿನಾಂಕ ದಾಖಲಾಗಿದ್ದರೆ ಮತ್ತೊಂದರಲ್ಲಿ ಲೇಖಕ ದಾಖಲಿಸಿರಲಿಲ್ಲಾ!!!!
ಇಬ್ಬರು ಕಥೆಗಾರರ ಹಸ್ತಪ್ರತಿಯನ್ನು ಕಾನ್ಸ್ಟೇಬಲ್ ರಾಮಪ್ಪನ ಗುರುತಿನ ಗೋವಿಂದಪ್ಪನ ಪರಿಚಯದ ವಿಧಿ ವಿಜ್ಞಾನ ಪ್ರಯೋಗಾಲಯ(forensic lab)ದಲ್ಲಿ “ಇಂಕ್ ಯೇಜ್ ಡಿಟೆಕ್ಷನ್” ಪರೀಕ್ಷೆಯ ಮೂಲಕ ಯಾರು ಮೊದಲು ಕಥೆ ಬರೆದಿದ್ದು ಎಂದು ಅರಿಯುವ ಯೋಜನೆ ಇನ್ಸ್ ಪೆಕ್ಟರ್ ವಿಕ್ರಂ ಮಾಡುತ್ತಾನೆ. ಅದರ ಫಲಿತಾಂಶ ಬರುವುದು ಸಂಜೆಯಾಗುತ್ತದೆ ಎಂದು ತಿಳಿದ ವಿಕ್ರಂ ಪ್ರೊಫೆಸರ್ ರಾಮೇಶ್ವರ್ ಬಳಿ ಕೇಳುತ್ತಾನೆ. ಇಲ್ಲಿಂದ ಲೇಖಕರು ತಮ್ಮ ಬರಹವನ್ನು ಪ್ರೊಫೆಸರ್ ರಾಮೇಶ್ವರ್ ಎಂಬ ಪಾತ್ರದ ಮೂಲಕ ಓದುಗರಿಗೆ ತಿಳಿಸುತ್ತಾ ಸಾಗಿ ಪ್ರತಿ ಹಂತದಲ್ಲೂ ನಿಗೂಢತೆಯನ್ನು ಕೆರಳಿಸುತ್ತಾರೆ.
ಗೋವಾದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಫರ್ನಾಂಡೀಸ್ ಮತ್ತು ಮೇರಿ ಎಂಬ ದಂಪತಿಗಳ ಮಗಳೇ ಜೆಸ್ಸಿಕಾ. ಫರ್ನಾಂಡೀಸ್ ಮರಣದ ನಂತರ ಮೇರಿ ಜೆಸ್ಸಿಕಾಳನ್ನು ಮುದ್ದಿನಿಂದ ಸಾಕಿರುತ್ತಾಳೆ. ಕಾಲೇಜು ಮುಗಿಸಿ ಫಿಲ್ಮ್ ಸಿಟಿಗೆ ಹೋಗಿ ಬರುವೆನೆಂದು ಹೊರಟ ಜೆಸ್ಸಿಕಾಳ ಹೆಣ ಬೀಚ್ ಬಳಿಯ ಟೆಂಟ್ ಹೌಸಿನ ಬಳಿ ದೊರಕಿತ್ತು. ಅವಳ ಮೇಲೆ ಯಾವುದೇ ಹಲ್ಲೆ, ಅತ್ಯಾಚಾರ ನಡೆಯದಿದ್ದರೂ ಅವಳ ನೀಲಿ ಕಣ್ಣುಗಳನ್ನು ದೇಹದಿಂದ ಬೇರ್ಪಡಿಸಿ ಹೆಣದ ಪಕ್ಕದಲ್ಲಿಡಲಾಗಿತ್ತು. ಕುತ್ತಿಗೆಯಲ್ಲಿದ್ದ ಅವಳು ಓದುತ್ತಿದ್ದ ಇಂಜಿನಿಯರಿಂಗ್ ಕಾಲೇಜ್ ಐಡಿಯಿಂದ ಅವಳ ತಾಯಿ ಮೇರಿಗೆ ಪೋಲೀಸರು ವಿಷಯ ತಿಳಿಸುತ್ತಾರೆ.
ಇನ್ಸ್ ಪೆಕ್ಟರ್ ಅರ್ಜುನ್ ಇದನ್ನು ಕೊಲೆಯೆಂದರಿತು ತನಿಖೆ ಆರಂಭಿಸಿದಾಗ ತಿಳಿದ ಮತ್ತೊಂದು ವಿಚಿತ್ರವಾದ ವಿಷಯವೆಂದರೆ ಇದೇ ಮಾದರಿಯಲ್ಲಿ ಲೈಟ್ ಹೌಸಿನ ಬಳಿ ಮೂರು ವರ್ಷಗಳಲ್ಲಿ ಮೂರು ಕೊಲೆಯಾಗಿತ್ತು. ಅರ್ಜುನ್ ಜೆಸ್ಸಿಕಾಳ ತಾಯಿಯ ಬಳಿ ಕೆಲ ಮಾಹಿತಿ ಕಲೆ ಹಾಕಿ, ನಂತರ ಗೆಳತಿಯರ ಬಳಿ ವಿಚಾರಣೆ ಮಾಡುತ್ತಾನೆ. ಅವಳ ಗೆಳತಿ ಹೇಳಿದ ಹೇಳಿಕೆಯಿಂದ ಜೆಸ್ಸಿಕಾಳನ್ನು ಹಿಂಬಾಲಿಸಿ ಪ್ರೀತಿಸು ಎಂದು ಕಾಡುತ್ತಿದ್ದ ಜಾರ್ಜ್ನನ್ನು ವಿಚಾರಣೆಗೆ ಒಳಪಡಿಸಲು ಹೋದರೆ ಅವನು ಸಿಗುವುದಿಲ್ಲಾ.
ವರ್ಷವಾಗುತ್ತಾ ಬಂದರೂ ತನಿಖೆಯ ಮೂಲಕ ಕೊಲೆಗಾರನ ಪತ್ತೆಯಾಗದ ಕಾರಣ ಮೇರಿ ಮಗಳ ಸಾವಿಗೆ ನ್ಯಾಯ ಓದಗಿಸಲು ಖಾಸಗಿ ಪತ್ತೇದಾರನೊಬ್ಬನನ್ನು ನೇಮಿಸುವ ಬಗ್ಗೆ ಆಲೋಚನೆ ಮಾಡುತ್ತಾಳೆ.

ಮೇರಿ ಗೆಳತಿಯೊಬ್ಬಳ ಸಲಹೆ ಮೇರೆಗೆ ಹಿಮವಂತ್ ಎಂಬ ಖಾಸಗಿ ಪತ್ತೇದಾರನ ಬಳಿ ಹೋಗಿ ಇಂದಿನವರೆಗೆ ನಡೆದ ಬೆಳವಣಿಗೆಗಳನ್ನು ತಿಳಿಸಿ, ಕೊಲೆಗಾರನ ಪತ್ತೆ ಹಚ್ಚಲು ಕೇಳುತ್ತಾಳೆ. “ಕೊಲೆಗಾರನನ್ನು ಕಂಡು ಹಿಡಿದರೆ ಲಕ್ಷ ಸಾಯಿಸಿದರೆ ಕೋಟಿ” ಎಂಬ ವಾಗ್ದಾನ ಮೇರಿ ಖಾಸಗಿ ಪತ್ತೇದಾರ ಹಿಮವಂತನಿಗೆ ನೀಡುತ್ತಾಳೆ. ಈ ಪ್ರಕರಣವನ್ನು ವಹಿಸಿಕೊಂಡ ಹಿಮವಂತ್ ಮೊದಲು ಅವಳ ಗೆಳತಿಯರನ್ನು ಭೇಟಿ ಮಾಡಿ ವಿಷಯ ಕಲೆ ಹಾಕಿದ. ಆಗ ಗೆಳತಿ ರಾಧಾಳಿಂದ ಜೆಸ್ಸಿಕಾ ಫಿಲ್ಮ್ ಸಿಟಿಯಿಂದ ಯಾರ ಜೊತೆಯೋ ಹೋಟೇಲಿಗೆ ತೆರಳಿದ್ದಳೆಂದು, ಬಂದ ನಂತರ ಅವರಿಗೆಲ್ಲಾ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದಳೆಂದು ತಿಳಿಯುತ್ತದೆ.
ಈ ಪ್ರಕರಣದ ಆಳ ತಲುಪಲು ಹಿಮವಂತ್ ಕಾನ್ಸ್ಟೇಬಲ್ ಮಲ್ಲೇಶನ ಪರಿಚಯ ಮಾಡಿಕೊಂಡು ಕೆಲ ಮಾಹಿತಿ ಕಲೆ ಹಾಕುತ್ತಾನೆ. ಅಲ್ಲದೇ ಇದೇ ರೀತಿ ಅದೇ ಜಾಗದಲ್ಲಿ ನಡೆದ ಎರಡು ಕೊಲೆಗಳ ಬಗ್ಗೆ ಹೇಳಿದ್ದಲ್ಲದೇ, ಆ ಪ್ರಕರಣಗಳ ಮಾಹಿತಿ, ವಿವರಗಳನ್ನು ಮಲ್ಲೇಶ್ ಹಿಮವಂತನ ಬಳಿ ಹಣ ಪಡೆದು ನೀಡುತ್ತಾನೆ. ಪ್ರಕರಣವನ್ನು ಹಲವಾರು ಬಾರಿ ಓದಿದಾಗ ಮೂರು ಕೊಲೆಗಳಲ್ಲಿ ಕಂಡ ಸಾಮ್ಯತೆ ಹಿಮವಂತನನ್ನು ಫಿಲ್ಮ್ ಸಿಟಿಯಲ್ಲಿ ನಡೆಯುವ ಮ್ಯಾಜಿಕ್ ಶೋ ಒಂದರ ಬಳಿ ಕರೆದೊಯ್ಯುತ್ತದೆ. ಅಲ್ಲಿ ದೊರೆತ ಮಾಹಿತಿಯೂ ಪಾರದರ್ಶಕವಾಗಿರದೇ ಗೊಂದಲದಲ್ಲಿದ್ದ ಹಿಮವಂತ ಸ್ನೇಹಿತನ ಡಿನ್ನರ್ ಪಾರ್ಟಿಗೆ ಹೋದಾಗ ನಡೆದ ಘಟನೆಯಿಂದ “ರೆಸ್ಟೋರೆಂಟ್ ಆಫ್ ಆರ್ಡರ್ ಮಿಸ್ಟೇಕ್” ಎಂಬ ಜಾಗದ ಬಗ್ಗೆ ತಿಳಿಯುತ್ತದೆ.
ಬೀಚಿನ ರೋಡಿನಲ್ಲಿರುವ ಆ ರೆಸ್ಟೋರೆಂಟೀಗೆ ಮಾರನೆದಿನ ಹೋದ ಹಿಮವಂತನಿಗೆ ಜೆಸ್ಸಿಕಾ ಕೊಲೆಯಾದ ಮಾರ್ಚ್ 3ರ ಸಿಸಿಟಿವಿ ಹುಡುಕಿದಾಗ ಸಿಗಲಿಲ್ಲಾ. ಇದರಿಂದ ಬೇಸತ್ತ ಹಿಮವಂತ ಮಸಾಲೆದೋಸೆ ಆರ್ಡರ್ ಮಾಡಿ ಜೆಸ್ಸಿಕಾಳ ಭಾವಚಿತ್ರ, ಕೊಲೆಯ ನಂತರದ ಭಾವಚಿತ್ರದೊಂದಿಗೆ ಅಲ್ಲಿ ಕುಳಿತಾಗ ಬಂದ ವೇಯ್ಟರ್ ನಡೆ ಅನುಮಾನವಾಗಿ ಕಂಡಿತು. ಅವನ ಬಳಿ ವಿಚಾರಿಸಿದಾಗ ಹಿಮವಂತನಿಗೆ ಕೊಲೆಯಾದ ರಾತ್ರಿ ಜೆಸ್ಸಿಕಾ ಒಂದು ಹುಡುಗನೊಂದಿಗೆ ಬಂದಿದ್ದು, ಆ ಹುಡುಗನ ಕೈಯಲ್ಲಿದ್ದ ಹಾರ್ಟ್ ಬೀಟ್ ಹಚ್ಚೆಯ ಬಗ್ಗೆ ತಿಳಿಯುತ್ತದೆ. ಈ ಸುಳಿವುಗಳೊಂದಿಗೆ ಮತ್ತೆ ಫಿಲ್ಮ್ ಸಿಟಿಗೆ ತೆರಳಿದ ಹಿಮವಂತನಿಗೆ ಮಾರ್ಚ್ 3ರಂದು ಜಾದೂ ಪ್ರದರ್ಶಿಸಿದ ವ್ಯಕ್ತಿ ಬಗ್ಗೆ ತಿಳಿಯುತ್ತದೆ.
ಜಾದೂಗಾರನ ಹುಡುಕಿ ಹೊರಟ ಹಿಮವಂತನಿಗೆ ಅವನ ಮನೆಯಲ್ಲಿ ಕ್ರಿಸ್ಟೋಫರ್ ಅಲಿಯಾಸ್ ವಿಪುಲ್ ಚಾಂದ್ ಡೈರಿ ದೊರೆಯುತ್ತದೆ. ಡೈರಿಯೊಳಗೆ ಅವನಿಗಾದ ಮೋಸದ ಪ್ರೇಮ ಪ್ರಕರಣದ ಬಗ್ಗೆ ಮಾಹಿತಿ ಇರುತ್ತದೆ. ಆ ಮೋಸದ ಪ್ರೇಮ ಪ್ರಕರಣದಿಂದಾಗಿ ಜಾದೂಗಾರ ಮಾನಸಿಕವಾಗಿ ಅಸ್ವಸ್ಥನಾಗಿ ನೀಲಿ ಕಂಗಳ ಚೆಲುವೆಯರನ್ನು ದ್ವೇಷಿಸುವುದರ ಅರಿವಾಗುತ್ತದೆ. ಈ ಪ್ರಕರಣದ ಗುಂಗಿನಲ್ಲಿದ್ದು ಕ್ರಿಸ್ಟೋಫರ್ ಹಿಂಬಾಲಿಸಿದ ಹಿಮವಂತನಿಗೆ ರಸ್ತೆ ಬದಿಯೊಂದರ ಬಾರ್ ಅಂಡ್ ರೆಸ್ಟೋರೆಂಟೊಂದಕ್ಕೆ ಹೋದಾಗ ಕ್ರಿಸ್ಟೋಫರ್ ಜೊತೆ ಬೆಕ್ಕಿನ ಕಣ್ಣಿನ ಸುಂದರಿಯೊಬ್ಬಳು ಇರುತ್ತಾಳೆ. ಅದೇ ಸಮಯಕ್ಕೆ ಕೆಂಪು ಸೀರೆ ಉಟ್ಟ ನೀಲಿ ಕಂಗಳ ಚೆಲುವೆ ಅದೇ ರಸ್ತೆಯಲ್ಲಿ ತಾಯಿ ದುರ್ಗಿಯ ಮೆರವಣಿಗೆಯಲ್ಲಿ ಹಿಮವಂತನಿಗೆ ಕಾಣಿಸುತ್ತಾಳೆ.
ಕ್ರಿಸ್ಟೋಫರ್ ಗೆಳತಿಯೊಂದಿಗೆ ಚೆಲ್ಲಾಟದಲ್ಲಿದ್ದಾಗ, ರಸ್ತೆ ಬದಿಯ ದುರ್ಗಿಯ ಮೆರವಣಿಗೆಯಲ್ಲಿದ್ದ ಅಘೋರಿ ಬಾಬನಿಗೆ ಹಣೆಗೆ ತಿಲಕವಿಟ್ಟಾಗ ನಡೆದ ಒಂದು ವಿಚಿತ್ರ ಘಟನೆ ಹಿಮವಂತನನ್ನು ಅಚ್ಚರಿಗೊಳಿಸಿತು. ಅಮಾವಾಸ್ಯೆಯ ದಿನ ನಡೆದ ವಿಚಿತ್ರ ಘಟನೆ ಹಿಮವಂತನನ್ನು ಆ ಅಘೋರಿಯನ್ನು ಹುಡುಕಿ ಚಾಮರಾಜನಗರದ ಯನಗನಹಳ್ಳಿಗೆ ಹೋಗುವಂತೆ ಮಾಡಿತು. ಯನಗನ ಹಳ್ಳಿಗೆ ಹೋಗಿ ಅಲ್ಲಿಯ ರುದ್ರೇಗೌಡನ ತೋಟದ ಮನೆಯಲ್ಲಿ ಆಶ್ರಯ ಪಡೆದ ಹಿಮವಂತ್ ಅಘೋರಿ ಬಾಬನ ಬಗ್ಗೆ ತಿಳಿಯಲು ಅಮಚವಾಡಿಯ ರಾಜಪ್ಪ ಎಂಬುವವನನ್ನು ಸಂಧಿಸುತ್ತಾನೆ. ಮಂತ್ರವಾದಿ ರಾಜಪ್ಪನಿಂದಾಗಿ ಕ್ರಿಸ್ಟೋಫರ್ ಯಾರು ಎಂಬ ಸತ್ಯ ತಿಳಿದು, ಅವನಿಗೂ ಅಘೋರಿ ಬಾಬನಿಗಿರುವ ನಿಕಟತೆಯ ಬಗ್ಗೆ ಒಂದು ಅಂದಾಜು ಸಿಗುತ್ತದೆ. ಸರಣಿ ಕೊಲೆಗಳ ಬಗ್ಗೆ ತನಿಖೆ ಮಾಡಲು ಹೋದ ಹಿಮವಂತನಿಗೆ ಕೆಲ ಪ್ರಶ್ನೆಗಳಿಗೆ ಉತ್ತರ ಯನಗನಹಳ್ಳಿಯಲ್ಲಿ ದೊರಕುತ್ತದೆ. ಉತ್ತರದ ನಂತರ ಹಿಮವಂತ ಏನು ಮಾಡುತ್ತಾನೆ ಎಂಬುದನ್ನು ಕಾದಂಬರಿ ಓದಿದಾಗ ತಿಳಿಯುತ್ತದೆ.
ಕಥೆ ಬರೆದು ಮುಗಿಸಿದ್ದರೂ ರಾಧಾಕೃಷ್ಣ ಪ್ರಿಂಟ್ ಹಾಕಿಸಲಿಲ್ಲವೇಕೆಂದು ಇನ್ಸ್ ಪೆಕ್ಟರ್ ವಿಕ್ರಂ ಕೇಳಿದಾಗ ರಾಧಾಕೃಷ್ಣ ಏನೆಂದು ಉತ್ತರಿಸಿದ???
ಪ್ರೊಫೆಸರ್ ರಾಮೇಶ್ವರ್ ತಮ್ಮ ಕಥೆಯನ್ನು ರಿಜಿಸ್ಟರ್ ಮಾಡಿಸದೆ, ಕಾಪಿರೈಟ್ಸ್ ಪಡೆಯದೆ ಇರಲು ಕಾರಣವೇನು???
ಇಬ್ಬರು ಬರಹಗಾರರ ಹಸ್ತಪ್ರತಿಯಲ್ಲಿ ಯಾರ ಹಸ್ತಪ್ರತಿಯಲ್ಲಿ ಪ್ರಾರಂಭಿಸಿದ ದಿನಾಂಕ ದಾಖಲಾಗಿತ್ತು…ಯಾರ ಹಸ್ತಪ್ರತಿಯಲ್ಲಿ ದಿನಾಂಕ ದಾಖಲಾಗಿರಲಿಲ್ಲಾ???
ಪ್ರೊಫೆಸರ್ ರಾಮೇಶ್ವರ್ ಬಳಿಯೇ ಕಥೆ ವಿವರಿಸಲು ಹೇಳಲು ಇನ್ಸ್ ಪೆಕ್ಟರ್ ವಿಕ್ರಂಗೆ ಬಲವಾದ ಕಾರಣವೇನಾದರೂ ಇತ್ತೇ???
ಕಥೆಯಲ್ಲಿ ಜೆಸ್ಸಿಕಾ ಗುಣ ಸ್ವಭಾವ ಎಂತದ್ದು??? ಅವಳು ಫಿಲ್ಮಸಿಟಿಗೆ ಹೋದವಳು ಬೀಚಿನ ಟೆಂಟ್ ಹೌಸ್ ಬಳಿ ಹೇಗೆ ತಲುಪಿದಳು??? ಬೀಚ್ ಬಳಿ ಅವಳ ಕೊಲೆ ಮಾಡುವ ಸಂಚನ್ನು ಮೊದಲೇ ಯಾರು ಮಾಡಿದ್ದರು???
ಪ್ರೀತಿ ಮಾಡೆಂದು ಜೆಸ್ಸಿಕಾಳ ಹಿಂದೆ ಬಿದ್ದ ಸ್ಲಂ ಏರಿಯಾದ ಜಾರ್ಜ್ ಕೊಲೆ ಮಾಡಿರಾಲಾರಾ ಎಂಬ ನಿರ್ಧಾರಕ್ಕೆ ಇನ್ಸ್ ಪೆಕ್ಟರ್ ಅರ್ಜುನ್ ಬರಲು ಕಾರಣವೇನು???
ಮೇರಿ ಮಗಳ ಕೊಲೆ ಪ್ರಕರಣದ ತನಿಖೆ ಖಾಸಗಿ ಪತ್ತೇದಾರ ಹಿಮವಂತನಿಗೆ ವಹಿಸಲು ಕಾರಣವೇನು???
ಪೋಲಿಸರು ತನಿಖೆಯ ಜಾಡು ಹಿಡಿದ ಹೋದ ಹಿಮವಂತನಿಗೆ ಬೀಚಿನ ಟೆಂಟ್ ಹೌಸ್ ಬಳಿ ನಡೆದ ಮತ್ತೆರಡು ಕೊಲೆಗಳಲ್ಲಿ ಕಂಡ ಸಾಮ್ಯತೆಗಳಾದರೂ ಏನು??? ಆ ಸಾಮ್ಯತೆಗಳು ಹಿಮವಂತನನ್ನು ಫಿಲ್ಮ್ ಸಿಟಿಯ ಮ್ಯಾಜಿಕ್ ಶೋವೊಂದರ ಬಳಿ ಕರೆದೊಯ್ಯಿದಿದ್ದಾರೂ ಏಕೆ???
ಫಿಲ್ಮ್ ಸಿಟಿಗೆ ಹೋದಾಗ ಆದ ಗೊಂದಲಗಳಲ್ಲಿ ಮುಳುಗಿದ್ದ ಹಿಮವಂತನಿಗೆ ಗೆಳೆಯ ನೀಡಿದ ಡಿನ್ನರ್ ಪಾರ್ಟಿಯ ಯಾವ ಘಟನೆ ರೆಸ್ಟೋರೆಂಟ್ ಆಫ್ ಆರ್ಡರ್ ಮಿಸ್ಟೇಕ್ ಬಳಿ ಕೊಂಡೊಯ್ಯಿದಿತು??? ರೆಸ್ಟೋರೆಂಟ್ ಆಫ್ ಆರ್ಡರ್ ಮಿಸ್ಟೇಕ್ನಲ್ಲಿ ಹೆದರಿದ್ದ ವೇಯ್ಟರ್ ಮಾರ್ಚ್ 3ರ ರಾತ್ರಿ ಜೆಸ್ಸಿಕಾ ಅಲ್ಲಿಗೆ ಹಚ್ಚೆಯಿರುವ ವ್ಯಕ್ತಿಯೊಂದಿಗೆ ಬಂದಿದ್ದರೊಂದಿಗೆ ಮತ್ಯಾವ ವಿಷಯಗಳನ್ನು ಹಿಮವಂತನಿಗೆ ತಿಳಿಸುತ್ತಾನೆ???

ವೇಯ್ಟರ್ ಹೇಳಿದ ಯಾವ ಸುಳಿವುಗಳಿಂದ ಹಿಮವಂತ್ ಕ್ರಿಸ್ಟೋಫರ್ ಬಳಿ ತಲುಪುತ್ತಾನೆ???ಮಾಹಿತಿ ನೀಡಿದ ವೇಯ್ಟರ್ ಸಾವಿಗೆ ಕಾರಣವೇನು??? ಹಿಮವಂತನಿಗೆ ಕ್ರಿಸ್ಟೋಫರ್ ಡೈರಿಯಿಂದ ಯಾವ ಯಾವ ಮಾಹಿತಿ ದೊರಕಿ ಅವನ ತನಿಖೆಗೆ ಸಹಾಯವಾಗುತ್ತದೆ??? ಕ್ರಿಸ್ಟೋಫರ್ ನೀಲಿ ಕಣ್ಣಿನ ಚೆಲುವೆಯರನ್ನು ದ್ವೇಷಿಸಲು ಅವನ ಪ್ರೇಮ ಪ್ರಕರಣ ಹೇಗೆ ಕಾರಣ??
ನೀಲಿ ಕಣ್ಣಿನ ಹುಡುಗಿಯರ ಮೇಲಿನ ದ್ವೇಷಕ್ಕೂ ಕೊಲೆಗಳಿಗೂ ಯಾವುದಾದರೂ ಕೊಂಡಿ ಇತ್ತೇ ಅಥವಾ ಅದು ನಿಮಿತ್ತ ಮಾತ್ರವಾ???
ಜೆಸ್ಸಿಕಾಳ ಕೊಲೆ ಮಾಡಿದ್ದಾದರೂ ಯಾರು??? ಆ ಕೊಲೆ ಮಾಡಿದ್ದಾದರೂ ಏಕೆ??? ಕೊಲೆಯ ಹಿಂದಿನ ಪ್ರಮುಖ ಕಾರಣವಾದರೂ ಏನು???? ಕೊಲೆಗಾರ ಯಾರೆಂದು ಹಿಮವಂತ ನಿರ್ಧರಿಸುವಲ್ಲಿ ಸಫಲನಾಗುತ್ತಾನಾ???
ಕ್ರಿಸ್ಟೋಫರ್ ಗೆಳತಿಯೊಂದಿಗೆ ಚೆಲ್ಲಾಟದಲ್ಲಿದ್ದಾಗ, ರಸ್ತೆ ಬದಿಯ ಮೆರವಣಿಗೆಯಲ್ಲಿದ್ದ ಅಘೋರಿ ಬಾಬನಿಗೆ ಹಣೆಗೆ ತಿಲಕವಿಟ್ಟಾಗ ನಡೆದ ಯಾವ ವಿಚಿತ್ರ ಘಟನೆಗೆ ಹಿಮವಂತ ಸಾಕ್ಷಿಯಾಗುತ್ತಾನೆ??? ಈ ವಿಚಿತ್ರ ಘಟನೆಯಲ್ಲಿ ಪ್ರಮುಖ ಪಾತ್ರವಾದ ಅಘೋರಿ ಬಾಬಾನನ್ನು ಹುಡುಕಿಕೊಂಡು ಹಿಮವಂತ ಯನಗನಹಳ್ಳಿಗೆ ಹೋಗಿದ್ದಾದರೂ ಏಕೆ???
ಯನಗನಹಳ್ಳಿಗೆ ಹೋದ ಹಿಮವಂತನಿಗೆ ಮೂರು ಸರಣಿ ಕೊಲೆಗಳ ಬಗೆಗಿನ ರಹಸ್ಯದ ಅರಿವು ಮೂಡಿದ್ದು ಹೇಗೆ??? ಅಮಚವಾಡಿಯ ರಾಜಪ್ಪ ಅಘೋರಿ ಬಾಬಾ ಮತ್ತವನ ವಂಶದವರ ಬಗ್ಗೆ ಹಿಮವಂತನಿಗೆ ತಿಳಿಸಿದ ಕುತೂಹಲಕಾರಿ ಹಿನ್ನೆಲೆ ಮತ್ತು ರಹಸ್ಯಗಳೇನು??? ಆ ರಹಸ್ಯಗಳನ್ನು ಅರಿತ ಹಿಮವಂತ ತನ್ನ ಯಾವ ಯೋಜನೆಯನ್ನು ರೂಪಿಸಿದ???
ಹಿಮವಂತ ತನ್ನ ಯೋಜನೆಯಂತೆ ಅಘೋರಿ ಬಾಬಾನನ್ನು ತಲುಪಲು ರುದ್ರೇಗೌಡರ ಮಗಳು ಸ್ಮಿತಾ ಹೇಗೆ ಕಾರಣವಾದಳು??? ಹಿಮವಂತ ಅವಳನ್ನು ಯಾವ ರೀತಿ ಯಾವ ಕಾರ್ಯಕ್ಕಾಗಿ ಉಪಯೋಗಿಸಿಕೊಂಡ??? ಜೆಸ್ಸಿಕಾಳ ಗೆಳತಿ ರಾಧಾಳ ನೆರವಿನಿಂದ ಈ ಕೊಲೆಗಳ ಸರಣಿ ನಿಲ್ಲಿಸಲು ಹಿಮವಂತ ಯಾವ ಯೋಜನೆ ರೂಪಿಸಿದ???
ನಿಜವಾದ ಕೊಲೆಗಾರನನ್ನು ಕಂಡು ಹಿಡಿದು ಹಿಮವಂತ ಲಕ್ಷ ಗಳಿಸಿದನಾ ಇಲ್ಲಾ ಸಾಯಿಸಿ ಕೋಟಿ ಪಡೆದನಾ??? ಇದಕ್ಕೆ ಉತ್ತರ ಪ್ರೊಫೆಸರ್ ರಾಮೇಶ್ವರ್ ಕಥೆ ಅಂತ್ಯ ಹೇಳುತ್ತದೆ.
ಪುಸ್ತಕದ ಅಂತಿಮ ಪುಟಗಳಲ್ಲಿ ವಿಧಿ ವಿಜ್ಞಾನದ ಪ್ರಯೋಗಾಲಯದಿಂದ ಬಂದ “ಇಂಕ್ ಏಜ್ ಡಿಟೆಕ್ಷನ್ ಪರೀಕ್ಷೆ” ಯ ಫಲಿತಾಂಶ ಯಾವ ವಿಚಿತ್ರ ಸತ್ಯ ಪೋಲೀಸರಿಗೆ ತಿಳಿಸಿತು???
ಈ ಕಥೆಯ ನಿರೂಪಣೆಯಿಂದ ಮತ್ತು ಪರೀಕ್ಷೆಯ ಫಲಿತಾಂಶದಿಂದ ಇನ್ಸ್ ಪೆಕ್ಟರ್ ವಿಕ್ರಂ ಯಾರು ಮೊದಲು ಕಥೆ ಬರೆದರೆಂದು ತಿಳಿದರೇ ಅಥವಾ ತಿಳಿಯಲಾಗಲಿಲ್ಲವೇ??? ಅಬ್ಬಾ!!! ಇಂತಾ ಹಲವು ಕುತೂಹಲಗಳಿಗೆ ಕೌಶಿಕ್ ಅವರ ಕಾಲಾಯ ತಸ್ಮೈ ನಮಃ ಕಾದಂಬರಿಯ ಓದು ಉತ್ತರ ನೀಡುತ್ತದೆ.
ಇದು ಈ ಲೇಖಕರ ಮೊದಲ ಪತ್ತೇದಾರಿ ಕಾದಂಬರಿಯಾಗಿದ್ದು, ನಾನು ಓದಿದ ಇವರ ಮೊದಲ ಕೃತಿಯೂ ಇದೇ ಆಗಿದೆ. ಶೀರ್ಷಿಕೆಯೇ ಹೇಳುವಂತೆ ಕಥೆಯೊಳಗಿರುವ ಕಥೆಗೆ ಕಾಲ ಉತ್ತರ ನೀಡುತ್ತದೆ, ಹಾಗೆ ಇನ್ಸ್ ಪೆಕ್ಟರ್ ವಿಕ್ರಂನ ಗೊಂದಲಕ್ಕೂ ಕಾಲವೇ ಉತ್ತರ ನೀಡುತ್ತದೆ. ಮುಖಪುಟ ವಿನ್ಯಾಸದಲ್ಲಿರುವ ನೀಲಿ ಕಣ್ಣು ಮತ್ತು ಬೆಕ್ಕಿನ ಕಣ್ಣು ಪುಸ್ತಕದ ಈ ಕಥೆಗೊಂದು ಅರ್ಥಪೂರ್ಣ ಮುಖಪುಟ ಎಂಬ ಅಭಿಪ್ರಾಯ ಮೂಡಿಸಿತು. ಕೊನೆಯ ಪುಟಗಳವರೆಗೂ ನಿಗೂಢತೆಯನ್ನು ಕಾಯ್ದುಕೊಂಡಿರುವ “ಕಾಲಾಯ ತಸ್ಮೈ ನಮಃ” ವಿಭಿನ್ನ ನಿರೂಪಣಾ ಶೈಲಿಯಲ್ಲಿರುವ ಪತ್ತೇದಾರಿ ಕಾದಂಬರಿ ಎನ್ನಲು ಅಡ್ಡಿಯಿಲ್ಲಾ!!!!!
ಕಥೆಯೊಳಗೊಂದು ಕಥೆ…ಪ್ರತಿ ಕಥೆಗಳಲ್ಲೊಂದು ನಿಗೂಢತೆ…ನಿಗೂಢತೆ ಬೇಧಿಸುತ್ತಾ ಸಾಗಿದಾಗ ಅದರಲ್ಲೊಂದು ರೋಚಕ ಘಟ್ಟ…ರೋಚಕ ಘಟ್ಟದಲ್ಲಿ ಅರಿವಿಗೆ ಬರದ ಒಂದು ಗೊಂದಲ ನಂತರ…ಗೊಂದಲ ಪರಿಹಾರಕ್ಕೊಂದು ವೈಜ್ಞಾನಿಕ ಆಧಾರ…ಆಧಾರಗಳ ಮೇಲೆ ಕಥೆಗೊಂದು ತಾರ್ಕಿಕ ಅಂತ್ಯ ಈ ರೀತಿಯಾಗಿ ಲೇಖಕರು ಈ ಪತ್ತೇದಾರಿ ಕಾದಂಬರಿಯನ್ನು ಹೆಣೆದಿದ್ದಾರೆ ಎಂಬುದು ನನ್ನ ಅನಿಸಿಕೆ.
ಪತ್ತೇದಾರಿ ಕಾದಂಬರಿಗಳನ್ನು ಹೆಚ್ಚು ಓದುವ ನಾನು ಈ ಲೇಖಕರ ಬರಹ ಓದಿದ್ದು ಇದೇ ಮೊದಲು…ಅದೂ ಇದು ಅವರ ಮೊದಲ ಕಾದಂಬರಿ ಎಂದು ತಿಳಿದಾಗ ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಡುವಂತಾಯಿತು. ಮೊದಲ ಪತ್ತೇದಾರಿ ಕಾದಂಬರಿಯಲ್ಲೇ ನಿಗೂಢತೆಯೊಂದಿಗೆ ವೈಜ್ಞಾನಿಕ ಆವಿಷ್ಕಾರಗಳ ಬಗ್ಗೆ ತಿಳಿಸುತ್ತಾ ಕುತೂಹಲ ಮೂಡಿಸಿದ ಪರಿ ಓದಿಗೊಂದು ತೃಪ್ತಿ ನೀಡಿತು…ಈ ಲೇಖಕರಿಂದ ಇಂತಹ ವೈಜ್ಞಾನಿಕತೆ ಅಳವಡಿಸಿದ ಪತ್ತೇದಾರಿ ಕಥಾ ಹಂದರ ಹೆಚ್ಚು ಬರಲೀ ಎಂಬುದೇ ಓದುಗಳಾದ ನನ್ನ ಆಶಯ….ಮತ್ತೇಕೆ ತಡ ನೀವೂ ಒಂದು ಬಾರಿ ಓದಿ ಅಭಿಪ್ರಾಯ ತಿಳಿಸಿ…
- ಸುಮಾ ಭಟ್
