‘ನೀರು ಕಾಣದೆ ನಲುಗುತಿರುವುದು, ಬೆಂಗಳೂರಿದು ಮಹಾನಗರ’…ಬೆಂಗಳೂರಿನ ವಾಸ್ತವ ಸ್ಥಿತಿಯ ಕುರಿತು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದಿರುವ ಒಂದು ಕವನವನ್ನು ತಪ್ಪದೆ ಮುಂದೆ ಓದಿ…
ಬೆಂಗಳೂರಿಗೆ ಭೀಕರ ಬರಗಾಲ
ಬಂದಿಹ ಗುಟ್ಟನು ಕೇಳುವಿರಾ?
ಇದು ಯಾರ ಶಾಪವೊ ಪಾಪದ ಫಲವೊ
ನರಳುತಿರುವರು ಸಾಮಾನ್ಯರು
ನೀರು ಕಾಣದೆ ನಲುಗುತಿರುವುದು
ಬೆಂಗಳೂರಿದು ಮಹಾನಗರ
ಕಾರುಬಾರಿನಲಿ ಬಾರಿ ಭೋಗದಲಿ
ಮೆರೆದ ನಗರದಲಿ ಆಹಾಕರ
ಕೆಂಪೆಗೌಡರು ಕಟ್ಟಿದ ನಾಡಿದು
ಕನ್ನಡ ನಾಡಿಗೆ ವರದಾನ
ಕೆಂಪು ಮೂತಿಯ ಹೊರ ನಾಡಿಗರ
ಹಾವಳಿಯಿಂದ ಹರೋಹರ
ಐಟಿ ಬೀಟಿಯು ಹೊಗೆ ಕಾರ್ಖಾನೆಯು
ನಾಯಿ ಕೊಡೆಯಂತೆ ಎದ್ದಿರಲು
ದಡದಡ ಗಡಿಯ ದಾಟಿ ಬಂದರು
ಬಂಡವಾಳವ ಹೂಡಿದರು
ಗಗನ ಚುಂಬಿತ ಮಹಡಿಗಳೆದ್ದು
ಕೊಳವೆ ಬಾವಿಯು ಬಾಯ್ತೆರೆದು
ತಂಡೋಪತಂಡ ಜನರು ನುಗ್ಗಿದರು
ನೀರಿನ ಬಳಕೆಯು ಹೆಚ್ಚಾಯ್ತು
ಅಂತರ್ಜಲವು ಕ್ಷೀಣವಾಗುತಲಿ
ಮಳೆಯ ಮೋಡವು ಬಿಳಿಯಾಯ್ತು
ರಸ್ತೆ ಇಕ್ಕೆಲ ಸಾಲು ಮರಗಳ
ಮಾರಣ ಹೋಮವು ನಡೆದಿತ್ತು
ತಂಪು ಗಾಳಿಯು ಮರೆಯಾಯ್ತು
ನೀರಿಗೆ ಬರವು ಬಂದಾಯ್ತು
ಎದ್ದೇಳು ಕನ್ನಡಿಗ ಇನ್ನಾದರು ನೀ
ನಿನ್ನ ಹಕ್ಕಿಗೆ ಹೋರಾಡು
ನಿನ್ನ ನಾಡಲಿ ಪರಿಸರ ಜಾಗೃತಿ
ಅರಿವು ಮೂಡಿಸುತ ಕಾದಾಡು
ಅರಿವು ಮೂಡಿಸುತ ಕಾದಾಡು.
- ಚನ್ನಕೇಶವ ಜಿ ಲಾಳನಕಟ್ಟೆ.
