ಹತ್ತು ವರ್ಷ ಎಂಟು ತಿಂಗಳ ಮಗಳನ್ನು ಕಳೆದುಕೊಂಡ ಹಡೆದಮ್ಮನ ಒಡಲು ಬರಿದಾಯಿತು, ತಾಯಿಗೆ ಬದುಕುವ ಆಸೆಯೇ ಇಲ್ಲವಾದಾಗ ಯೋಚಿಸಿದ್ದು ತಾಯಿಯನ್ನು ಕಳೆದುಕೊಂಡ ಸಾವಿರಾರು ತಬ್ಬಲಿ ತಾನು ಯಾಕೆ ತಾಯಿಯಾಗಬಾರದು…ಸಾವಿರಾರು ಮಕ್ಕಳ ತಾಯಿ ಶ್ರೀದೇವಿ ಅವರ ಛಲದ ಕತೆಯಿದು, ಅವರ ಮೇಲೆ ಬೆಳಕು ಹರಿಸಿ ಓದುಗರಿಗೆ ತಲುಪುವಂತೆ ಮಾಡಿದ್ದು ಹೆಚ್.ಮಂಜುಳಾ ಅವರು. ತಪ್ಪದೆ ಮುಂದೆ ಓದಿ …
ತಂದೆ ತಾಯಿಯರಿಗೆ ತಮ್ಮ ಮಕ್ಕಳೇ ಸರ್ವಸ್ವ, ಅವರ ಬದುಕಿನ ಆಧಾರವೇ ಮಕ್ಕಳಾಗಿರುತ್ತಾರೆ. ಮಕ್ಕಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುತ್ತಾರೆ. ಅವರಿಗೆ ಸ್ವಲ್ಪ ನೋವಾದರೂ ಇವರ ಸಂಕಟ ಹೇಳತೀರದು. ಮಕ್ಕಳು ಆ ನೋವಿನಿಂದ ಹೊರ ಬರುವವರೆಗೂ ಇವರ ಹೊಟ್ಟೆಗೆ,ಕಣ್ಣಿಗೆ ಶಿಕ್ಷೆ ತಪ್ಪಿದ್ದಲ್ಲ ಹಸಿವು ನಿದ್ದೆ ಹತ್ತಿರ ಸುಳಿಯವು!ಹೀಗಿರುವಾಗ ಹೆತ್ತ ಮಕ್ಕಳು ಶಾಶ್ವತವಾಗಿ ಕಣ್ಣಿಗೆ ಮರೆಯಾಗಿ ಲೋಕದಿಂದ ದೂರವಾದರೆ ಅಂತಹ ತಂದೆ ತಾಯಿಯರ ಗತಿ…!? ಅದೊಂದು ಪುಟ್ಟ ಹಾಗೂ ಸುಂದರ ಸಂಸಾರ.ಅಪ್ಪ ಅಮ್ಮ ಮುದ್ದಾದ ಇಬ್ಬರು ಮಕ್ಕಳು-ಮಗಳು ನಿವೇದಿತಾ, ಮಗ ವಿವೇಕ್. ಅಪ್ಪ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಮ್ಮ ಶಾಲಾ ಶಿಕ್ಷಕಿ. ಸಂತೋಷಕ್ಕೆ ಪಾರವೇ ಇಲ್ಲದಂಥ ಸಂಸಾರ ಅದು.
ಹನ್ನೊಂದನೇ ವಯಸ್ಸಿಗೆ ಕಾಲಿಟ್ಟ ಮಗಳು, ಶಾಲೆಗೆ ರಜೆ ಇದೆಯೆಂದು ಅತ್ತೆಯ ಊರಿಗೆ ಹೋಗುತ್ತಾಳೆ. ಕೆಲ ದಿನಗಳ ನಂತರ ಅವರಿಗೆ ಅನಾರೋಗ್ಯವುಂಟಾಗುತ್ತದೆ. ವಿಷಯ ತಿಳಿದ ಹೆತ್ತವರು ಅಲ್ಲಿಂದ ಮಗಳನ್ನು ಕರೆ ತಂದು ಡಾಕ್ಟರ್ ಬಳಿ ಕರೆದುಕೊಂಡು ಹೋಗುತ್ತಾರೆ. ಡಾಕ್ಟರ್ ಅವಳ ಖಾಯಿಲೆಯನ್ನು ಸರಿಯಾಗಿ ಗುರುತಿಸದೇ ಅಕ್ಷಮ್ಯ ಅಪರಾಧ ಎಸಗುತ್ತಾರೆ! ಒಳರೋಗಿಯಾಗಿ ಆ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅದು ಡೆಂಗ್ಯೂ ಎಂದು ಗೊತ್ತಾಗುವ ಹೊತ್ತಿಗೆ ಅವಳನ್ನು ಉಳಿಸಿಕೊಳ್ಳುವ ಹಂತವನ್ನು ದಾಟಿತ್ತು! ಕೊನೆಗೂ ಆ ಮಗು ಹೆತ್ತವರ ಕೈಯಿಂದ ಜಾರಿ ಹೋಯಿತು. ಹತ್ತು ವರ್ಷ ಎಂಟು ತಿಂಗಳ ಮಗಳನ್ನು ಕಳೆದುಕೊಂಡ ಹಡೆದಮ್ಮನ ಒಡಲು ಬರಿದಾಯಿತು! ಹೆತ್ತವರ ಬದುಕು ಬರಿದಾಯಿತು! ತಾಯಿಗೆ ಬದುಕುವ ಆಸೆಯೇ ಇಲ್ಲದಂತಾಯಿತು.

ಹೆತ್ತ ಮಕ್ಕಳನ್ನು ಕಳೆದುಕೊಳ್ಳುವುದೆಂದರೆ ಅದೊಂದು ಬರಸಿಡಿಲು! ಅದು ಒಡಲಿಗೆ ಸುರಿದ ಬೆಂಕಿ! ತಂದೆ ತಾಯಿ ತಮ್ಮ ಜೀವಂತ ಶವವಾಗುತ್ತಾರೆ. ಹಲವಾರು ತಿಂಗಳುಗಳ ಕಾಲ ಸಂಕಟದ ಮೂಟೆಗಳಾಗಿ ನರಳುತ್ತಾರೆ! ತಾಯಿ ಶ್ರೀದೇವಿಯವರಿಗೆ ತಾವೂ ಮಗಳ ಹಿಂದೆ ಹೋಗಬೇಕೆಂದು ಅಂದುಕೊಳ್ಳುತ್ತಾರೆ. ಆದರೆ ಆ ನಿರ್ಧಾರಕ್ಕೆ ಬರುವ ಹೊತ್ತಿಗೆ ಅವರ ಮನದಲ್ಲಿ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದೆಂದರೆ ಒಬ್ಬ ಮಗಳನ್ನು ಕಳೆದುಕೊಂಡ ನೋವಿಗೆ ತಾನು ಹೋಗಿಬಿಟ್ಟರೇ..ತಾಯಿಯನ್ನು ಕಳೆದುಕೊಂಡ ಸಾವಿರಾರು ತಬ್ಬಲಿ ಮಕ್ಕಳಿದ್ದಾರೆ. ಅಂಥವರಿಗೆ ಯಾರಿದ್ದಾರೆ? ಅವರಿಗೆ ತಾನು ತಾಯಿಯಾಗಬಾರದೇಕೆ…ಅವರ ನಿರ್ಧಾರ ಬದಲಾಯಿತು. ಕರುಳ ಕುಡಿಯ ನೆನಪು ಕಾಡದೇ ಇದ್ದೀತೇ..ಸದಾ ಅವಳ ಅಗಲಿಕೆ ಕಿತ್ತು ತಿನ್ನುತ್ತಿತ್ತು. ಎಲ್ಲಿ ನೋಡಿದರೂ ಮಗಳ ಸುಳಿವಿಲ್ಲ! ಮನೆ ತುಂಬಾ ಇರುವ ಫೋಟೋಗಳಿಗೆ ದನಿ ಇಲ್ಲ! “ನಿನ್ನ ದನಿ ಕೇಳಿ ತಿಂಗಳುಗಳೇ ಕಳೆದುಹೋಗಿವೆ, ಎಲ್ಲಿರುವೆ… ಮಗಳೇ ಯಾವಾಗ ಬರುವೆ?!” ಎಂಬ ಹಳಹಳಿಯಲ್ಲೇ ಕಾಲ ಸರಿಯುತಿತ್ತು. ಮಗಳು ನಿವೇದಿತಾಳನ್ನು ಪ್ರೀತಿಯಿಂದ ‘ಚುಕ್ಕಿ’ ಎಂದು ಕರೆಯುತ್ತಿದ್ದರು. ನೋಡಲು ಮಾತ್ರ ಸುಂದರಿ ಅಲ್ಲ, ನಡೆ ನುಡಿ, ಹಾಡು, ಚಿತ್ರಕಲೆ ಎಲ್ಲದರಲ್ಲೂ ಅವಳು ಸುಂದರಿ. ಅಂಥ ಮಗಳನ್ನು ಕಳೆದುಕೊಂಡು ಹುಚ್ಚಿಯಂತಾದ ತಾಯಿ ಶ್ರೀದೇವಿಯವರನ್ನು ಆ ನೋವಿನಿಂದ ಹೊರ ತರುವ ಪ್ರಯತ್ನದ ಫಲವಾಗಿ, ‘Master mind trainer’ ಹೆಸರಿನ ಬದುಕನ್ನು ಅರಿಯುವ ತರಬೇತಿಗೆ ಪತ್ನಿಯನ್ನು ಕಳಿಸಿದರು. ಆ ತರಬೇತಿ ಅವರ ಬದುಕಿನಲ್ಲಿ ಬದಲಾವಣೆಗೆ ನಾಂದಿ ಹಾಡಿತು. ಅದರ ಫಲವೇ ‘ನಿವೇದಿತಾ ಹೂಗಾರ ಟ್ರಸ್ಟ್’ ಪ್ರಾರಂಭ. ಅನಾಥ, ಅಸಹಾಯಕ ಮಕ್ಕಳಿಗೆ ಸಹಾಯ ಹಸ್ತವಾಗಿ ನಿಂತಿದೆ ಟ್ರಸ್ಟ್.

ಕೊರೋನ ಸಮಯದಲ್ಲಿ ಮನೆಯಿಂದ ಹೊರ ಬರದೇ ಜನತೆ ಒತ್ತಡದಲ್ಲಿದ್ದಾಗ ಅವರನ್ನು ಆ ಒತ್ತಡದಿಂದ ಹೊರ ತರುವ ಪ್ರಯತ್ನವಾಗಿ ಬೆಳಗಿನ ಜಾವ ಆನ್ಲೈನ್ ಧ್ಯಾನ ತರಗತಿಗಳನ್ನು ನಡೆಸಿದರು. ತಾವು ದುಃಖ, ಸಂಕಟಗಳಿಂದ ಹೊರ ಬರಲು ಕಾರಣವಾದ ಮಾಸ್ಟರ್ ಮೈಂಡ್ ತರಗತಿಗಳನ್ನು ಪ್ರಾರಂಭಿಸಿ ಸಾವಿರಾರು ಜನರ ಬದುಕಿಗೆ ಭರವಸೆ ಮೂಡಿಸಿದ್ದಾರೆ!
ಯಾವುದೇ ಬೆಳೆ ಹುಲುಸಾಗಿ ಬೆಳೆಯಬೇಕೆಂದರೆ ಭೂಮಿ ಫಲವತ್ತಾಗಿರಬೇಕು ಎಂಬುದು ಶ್ರೀದೇವಿಯವರಿಗೆ ಸರಿಯಾಗಿ ಒಪ್ಪುತ್ತದೆ. ಅವರು ಚಿಕ್ಕಂದಿನಿಂದಲೂ ಓದಿನಲ್ಲಿ ತುಂಬಾ ಬುದ್ಧಿವಂತೆ ಪಠ್ಯ ಪುಸ್ತಕದ ಜೊತೆ ಜೊತೆಗೆ,ಇತರೆ ಎಂದರೆ ಸಾಹಿತಿಗಳ,ಶರಣರ, ವಚನಕಾರರ ಪುಸ್ತಕಗಳನ್ನು ಓದಿ ಪ್ರಭಾವಿತರಾಗಿದ್ದರು. ಅದರಲ್ಲೂ ‘ಕೋಳೂರ ಕೊಡಗೂಸು’ ಅವರನ್ನು ಆವರಿಸಿಕೊಂಡು ಬಿಟ್ಟಿದ್ದಳು. ಚಿಕ್ಕ ಹುಡುಗಿ ಶ್ರೀದೇವಿ ತಾನೂ ಅವಳಂತೆ ಲಿಂಗದಲ್ಲಿ ಲೀನವಾಗಬೇಕೆಂದು ಬಯಸಿದ್ದಳು.ಬಾಲ್ಯದ ಮುಗ್ಧತೆಯೋ ಹಂಬಲವೋ..?! ಇಂಥ ಬಾಲ್ಯವನ್ನು ಕಳೆದ ಅವರಲ್ಲಿ ಒಂದು ರೀತಿಯ ಸಾತ್ವಿಕ ಮನೋಭಾವ ಬೆಳೆದಿತ್ತು. ಅವರ ಇಂದಿನ ಸಾಧನೆಗೆ ಪ್ರಗತಿಗೆ ಈ ಎಲ್ಲಾ ಅಂಶಗಳು ಕಾರಣ ಎಂದರೆ ತಪ್ಪಲ್ಲ.
ಪಿಯುಸಿ, ಟಿಸಿ ಎಚ್ ಮಾಡಿಕೊಂಡಿದ್ದ ಅವರಿಗೆ ಮದುವೆಯ ನಂತರ ಶಿಕ್ಷಕಿಯ ಕೆಲಸ ಸಿಕ್ಕಿತ್ತು. ಮಗಳು ಹುಟ್ಟಿದ ಕೇವಲ ಇಪ್ಪತ್ತು ದಿನಗಳಲ್ಲಿ ಕೆಲಸದ ಆದೇಶ ಬಂದಿತ್ತು. ಪುಟ್ಟ ಹಸುಳೆಯನ್ನು ಬಗಲಲ್ಲಿ ಹೊತ್ತು ತನ್ನ ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಆಟೊದಲ್ಲಿ ಅಲ್ಲಿಂದ ತಾಲೂಕು ಚಿಂಚೋಳಿಗೆ ಬಸ್ಸಿನಲ್ಲಿ ಮತ್ತೆ ಅಲ್ಲಿಂದ ಮತ್ತೊಂದು ಹಳ್ಳಿಗೆ ಹೀಗೇ ಎರಡೂವರೆ ಗಂಟೆಗಳ ಪ್ರಯಾಣದ ನಂತರ ಶಾಲೆಯನ್ನು ತಲುಪಬೇಕು! ಹಸಿ ಬಾಣಂತಿ ಹಸುಗೂಸು…ಇನ್ನೊಬ್ಬರಿಲ್ಲ ಮತ್ತೊಬ್ಬರಿಲ್ಲ! ತನಗೆ ಅಂತ ಯಾರೂ ಇಲ್ಲದಿದ್ದರೂ ಆತ್ಮಬಲವೇ ಅವರ ಸಂಗಾತಿಯಾಗಿತ್ತು.

ಶ್ರೀದೇವಿಯವರು ಬೀದರ್ ನ ಗ್ರಾಮವೊಂದರಲ್ಲಿ ಜನಿಸಿದವರು. ಅವರ ಬಾಲ್ಯ ಕುಣಿದಾಡುವಂಥದ್ದಾಗಿರಲಿಲ್ಲ. ಅವರೇ ಚುಕ್ಕಿ ಪುಸ್ತಕದಲ್ಲಿ ಬರೆದುಕೊಂಡಿರುವಂತೆ ತಂದೆ ಕುಸ್ತಿ ಪಟುವಾಗಿದ್ದರೂ ಕುಡಿತ ಮತ್ತು ಇತರೆ ದುಶ್ಚಟಗಳ ದಾಸನಾಗಿದ್ದ ಹೆಂಡತಿ ಪೀಡಕನಾಗಿದ್ದ, ತನ್ನೆರಡು ಮಕ್ಕಳಿಗೆ ಎಂದೂ ಅಪ್ಪನಾಗಲಿಲ್ಲ. ತಾಯಿ ನೀಲಮ್ಮನವರು ಸಂಸ್ಕಾರವಂತ ಹೆಣ್ಣುಮಗಳು. ಗಂಡ ಕುಡಿದು ಬಂದು ಮನ ಬಂದಂತೆ ಥಳಿಸುತ್ತಿದ್ದರೂ ಬೆಳಗ್ಗೆ ಎದ್ದಾಕ್ಷಣ ಗಂಡನ ಪಾದಗಳಿಗೆ ನಮಸ್ಕರಿಸುತ್ತಿದ್ದರು. ಇದನ್ನು ಕಂಡ ಪುಟ್ಟ ಹುಡುಗಿ ಶ್ರೀದೇವಿ ತಾಯಿಯನ್ನು ವಿರೋಧಿಸುತ್ತುದ್ದಳು. ಅಪ್ಪ ಕುಡಿದು ಬಂದು ಅಮ್ಮನಿಗೆ ಹಿಂಸೆ ಕೊಡುವುದು,ಕುಡಿದದ್ದು ಹೆಚ್ಚಾಗಿ ವಾಂತಿ ಮಾಡಿಕೊಂಡಾಗ ಅಮ್ಮ ಅದನ್ನೆಲ್ಲಾ ಸ್ವಚ್ಛಗೊಳಿಸಿ ಆತನ ಸೇವೆ ಮಾಡುವುದು, ಇದೆಲ್ಲಾ ಪುಟ್ಟ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು. ಒಮ್ಮೊಮ್ಮೆ ಬದುಕಿನಲ್ಲಿ ಊಹೆಗೂ ಮೀರಿದ ಘಟನೆಗಳು ನಡೆದು ಬಿಡುತ್ತವೆ.ಎರಡು ಪುಟ್ಟ ಹೆಣ್ಣುಮಕ್ಕಳ ಮನಸ್ಸನ್ನು ಘಾಸಿಗೊಳಿಸುವಂಥ ಆಘಾತವೊಂದು ನಡೆದು ಬಿಟ್ಟಿತು!ತಾಯಿ ಅಸಹಜ ಸಾವಿಗೆ ಬಲಿಯಾದರು! ಶ್ರೀದೇವಿ ಹಾಗೂ ಅವರ ತಂಗಿ ಇಬ್ಬರೂ ಅಪ್ಪನಿದ್ದರೂ ಅಕ್ಷರಸಃ ಅನಾಥರಾದರು.ಕೊನೆಗೆ ದಾಯಾದಿಗಳ ಅಡಿಯಾಳಾಗಬೇಕಾಯಿತು. ಆ ಚಿಕ್ಕ ವಯಸ್ಸಿಗೆ ಸೇವಕರಾದರು. ಛಲಗಾತಿ ಶ್ರೀದೇವಿ ತನಗಿಂತ ಚಿಕ್ಕ ಮಕ್ಕಳಿಗೆ ಪಾಠ ಮಾಡಿ ತಮ್ಮ ಓದು ಇತರೆ ಖರ್ಚಾಗಿತ್ತು ತಾವೇ ನೋಡಿಕೊಳ್ಳುತ್ತಿದ್ದರು. ತಂದೆಯಿಂದ ಏನನ್ನೂ ಪಡೆಯುತ್ತಿರಲಿಲ್ಲ. ಬದುಕಿನಲ್ಲಿ ಹಂತ ಹಂತಕ್ಕೂ ಅಡೆತಡೆಗಳನ್ನು ಎದುರಿಸುತ್ತಲೇ ಬಂದರೂ ಎಂದೂ ಹಿಂದೆ ಬೀಳಲಿಲ್ಲ. ತಾವು ಓದುತ್ತಿದ್ದ ಪುಸ್ತಕಗಳ ಪ್ರಭಾವ ಮತ್ತು ಬದುಕಿನಲ್ಲಿ ಬಂದೊದಗಿದ ಗಂಡಾಂತರಗಳ ಕಾರಣ ಅವರಿಗೆ ಸನ್ಯಾಸದಲ್ಲಿ ಆಸಕ್ತಿ ಮೂಡತೊಡಗಿತು.
ಇದನ್ನರಿತ ಮನೆಯವರು ಅವರಿಗೆ ಮದುವೆ ಮಾಡಿದರು. ಬೆಂಕಿಯಿಂದ ಬಾಣಲೆಗೆ ಇಲ್ಲಿ ಗಂಡನೂ ಕುಡುಕ. ಕುಡಿದು ಕುಡಿದು ಕೆಲಸಕ್ಕೆ ಸರಿಯಾಗಿ ಹೋಗದೇ ಸಾಲದ ಹೊರೆಯನ್ನೇ ಹೊತ್ತುಕೊಂಡಿದ್ದರು. ಅತ್ತೆಗೆ ಸೊಸೆಯನ್ನು ಕಂಡರೆ ಆಗದು.ಅತ್ತ ತವರಿನ ಆಸರೆಯಿಲ್ಲ ಇತ್ತ ಗಂಡನ ಮನೆಯ ನೆರವೂ ಇಲ್ಲ ಒಂಟಿ ಬದುಕಿನ ಹೋರಾಟ! ಕುಡಿತದ ಚಟದಿಂದ ಗಂಡನನ್ನು ಹೊರತರಲು ಯಾರು ಹೇಳುತ್ತಾರೋ ಎಲ್ಲಿ ಹೇಳುತ್ತಾರೋ ಅಲ್ಲೆಲ್ಲಾ ಕರೆದುಕೊಂಡು ಹೋಗುತ್ತಾರೆ.ಅದು ಆಗಾಗ ನಡೆಯುತ್ತಲೇ ಇತ್ತು.

ಇನ್ನು ಅತ್ತೆ ಅತ್ತೆಯೇ ಆಗಿದ್ದರು. ಸೊಸೆಯ ಹೋರಾಟ ಅವಳು ಮನೆಗಾಗಿ ಮಾಡುವ ಸೇವೆ ಅವರಿಗೆ ಕಾಣುತ್ತಿರಲಿಲ್ಲ. ಯಾವಾಗಲೂ ಕಿರಿಕಿರಿ ಮಾಡುತ್ತಿದ್ದರು. ಸ್ವಲ್ಪ ದೊಡ್ಡದಾಗುತ್ತಿದ್ದ ಮಗುವನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದ ಶ್ರೀದೇವಿಯವರಿಗೆ ತನ್ನ ಶಾಲಾ ಕಲಸಗಳ ಮಧ್ಯೆ ಮಗುವಿನ ಅಳುವುಕ್ಕಿ ಬರುತ್ತಿತ್ತು. ಎದೆಯ ಹಾಲು ತುಂಬಿ ಆ ನೋವೂ ಸೇರಿಕೊಂಡಿತ್ತು. ಮಗುವಿಗಾಗಿ ಒಮ್ಮೊಮ್ಮೆ ಬೇಗ ಮನೆಗೆ ಬಂದರೆ,”ಏಯ್ ಮಗಾ ಈಕಿ ಬಸ್ಸಿಗೆ ಬಂದಿಲ್ಲ. ಹೆಚ್ಚಿಗೆ ದುಡ್ಡು ಕೊಟ್ಟು ಟ್ಯಾಕ್ಸಿಗ್ ಬಂದಾಳ” ಎಂದು ಅತ್ತೆ ಮಗನಿಗೆ ಚಾಡಿ ಹೇಳಿ ಹೊಡೆಸುತ್ತಿದ್ದಳು. ಹೆತ್ತ ಕರುಳಿನ ನೋವಿನ ಮುಂದೆ ಇದೆಲ್ಲಾ ನೋವೇ ಅಲ್ಲ ಆ ತಾಯಿಗೆ. ಅದ್ಯಾವುದನ್ನೂ ಲೆಕ್ಕಿಸದೇ ಮಗುವಿಗೆ ಹಾಲು ಕುಡಿಸಲು ಮುಂದಾದ ಸೊಸೆಯನ್ನು ಹಾಲು ಕುಡಿಸಬೇಡವೆಂದು ಕಟ್ಟಪ್ಪಣೆ ಮಾಡುತ್ತಿದ್ದರು. ಅಲ್ಲದೇ ಮೊದಲೇ ಮಗು ಹಾಲು ಕುಡಿಯದಿರಲೆಂದು ಸಿರಿಲ್ಯಾಕ್ ತಿನ್ನಿಸುತ್ತಿದ್ದರು! ತನ್ನ ಕರುಳ ಕುಡಿಯನ್ನು ಎದೆಯಲ್ಲಿ ಹುದುಗಿಸಿಕೊಂಡು ಅದರ ಹೊಟ್ಟೆ ತುಂಬಿಸಿ ಮನಸಾರೆ ಮುದ್ದಿಸುತ್ತಾ ಬೆಳಗಿನಿಂದ ತಾನು ಅನುಭವಿಸಿದ ಸಂಕಟವನ್ನು ಮರೆಯಬೇಕೆಂದವಳಿಗೆ ಸಹಿಸಲು ಸಾಧ್ಯವೇ?. ಇಕ್ಕಳದಲ್ಲಿ ಸಿಕ್ಕಿಸಿ ಹಿಂಸಿಸುವ ಬಂಧುಗಳು, ಎಲ್ಲಿ ಹೋದರೂ ಬಂದರೂ ನೆಮ್ಮದಿ ಶೂನ್ಯ!!

ಅವರ ದುಡಿಮೆಯ ಫಲವಾಗಿ ಲಕ್ಷಾಂತರ ರೂಪಾಯಿಯ ಸಾಲ ಕರಗುತ್ತಾ ಬರತೊಡಗಿತು. ಛಲ ಬಿಡದೇ ಹೋರಾಡಿ ಗಂಡನನ್ನು ಕುಡಿತದ ಚಟ ಬೀಡಿಸುವಲ್ಲಿ ಯಶಸ್ಸು ದೊರೆಯಿತು. ಗೆದ್ದೇ ಗೆಲುವೆನೆಂಬ ಧೈರ್ಯದ ನಡೆ ಮನೆಯಲ್ಲಿ ಜೀವಂತಿಕೆ ಕಾಣತೊಡಗಿತು. ಅವರು ಎಂಎ ಗೆ ಪ್ರವೇಶ ಪಡೆದು ಓದತೊಡಗಿದರು. ಈಗ ಪಿ ಎಚ್ ಡಿ ಮಾಡುತ್ತಿದ್ದಾರೆ. ಶ್ರೀದೇವಿಯವರು ಉತ್ತಮ ಸಾಹಿತಿಗೂ ಹೌದು ಭಾವಲಹರಿ, ಹೃದಯವೀಣೆ, ಭಾವಬುಗುರಿ ಕವನ ಸಂಕಲನ ಗೆಲ್ಲದೇ ‘ಚುಕ್ಕಿ’ ಎಂಬ ಮಗಳಿಗೆ ಬರೆದ ಪತ್ರಗಳ ಪುಸ್ತಕ ಮತ್ತು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರು ನೂರಾರು ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಪ್ರಸ್ತುತ ಅವರು ಸಿ ಅರ್ ಪಿ ಯಾಗಿ ಕೆಲಸ ಮಾಡುತ್ತಿದ್ದಾರೆ. ಬದುಕಿನುದ್ದಕ್ಕೂ ಸವಾಲು, ಸಂಕಷ್ಟಗಳನ್ನು ಎದುರಿಸಿ-ಹೆದರಿಸಿ ಮುನ್ನಡೆಯುತ್ತಲೇ ಬಂದ ಧೈರ್ಯವಂತೆಯ ಬದುಕಿನಲ್ಲಿ (2015) ರಲ್ಲಿ ಬೀಸಿದ್ದು ಮಾತ್ರ ಗಾಳಿಯಲ್ಲ ಅದು ಭಯಂಕರ ಬಿರುಗಾಳಿ!
ಇಂಥ ಸಂಕಷ್ಟಗಳ ತಿರುಗಣಿಯಲ್ಲಿ ತಿರುಗಿ ತಿರುಗಿ ಮಾನವ ಕುಲಕ್ಕೆ ಬದುಕು ಕಳಿಸುವ ಮಾರ್ಗದರ್ಶಿಯಾಗಿ ರೂಪುಗೊಂಡಿದ್ದಾರೆ. ಇಂಥವರನ್ನೇ ಅಲ್ಲವೇ ನಾವು ಸಂಭ್ರಮಿಸಬೇಕಾಗಿರುವುದು, ಇಂಥ ಮಹಿಳಾಮಣಿಗಳನ್ನೇ ನಮ್ಮ ಸ್ಫೂರ್ತಿ?…
- ಹೆಚ್.ಮಂಜುಳಾ – ಹರಿಹರ.
