ಮಾನವೀಯ ಮೌಲ್ಯಗಳು ಇಂದು ಎಲ್ಲಿವೆ? ಕಲಿಕೆ ಎನ್ನುವುದು ಕೇವಲ ಪುಸ್ತಕದಿಂದ ಬರುವುದಲ್ಲ,ಸುತ್ತಲಿನ ಸಮಾಜದಿಂದ ಬರುವುದು. ಒಳ್ಳೆಯದನ್ನು ಕಲಿತು ಸಮಾಜಕ್ಕೆ ಒಳ್ಳೆಯದನ್ನು ಮಾಡೋನಾ ಎನ್ನುತ್ತಾರೆ ಯುವಬರಹಗಾರ್ತಿ ಅಮೃತಾ ಅವರು. ಮುಂದೆ ಓದಿ .
ನನ್ನ ಅನುಭವಕ್ಕೂ ಬರದ, ಇನ್ನು ಹೇಳಬೇಕು ಎಂದರೆ ವಯಸ್ಸು ಮೀರಿದ ಮಾತಿದು ಎನಿಸಬಹುದು. ಆದ್ರೆ ನಾ ಯಾವಾಗಲೂ ಸತ್ಯಕ್ಕೆ ನನ್ನನ್ನ ನಾ ಹರವಿಕೊಳ್ಳೋದು ಹೆಚ್ಚು. ವಾಸ್ತವ ಅಂಶಕ್ಕೆ ನನ್ನ ಬರಹವ ತೆರೆದು ಬಿಡಲು ಮನ ಬಯಸುತ್ತದೆ. ‘ನೆನ್ನೆ ನಡುವೆ ಅಂತರವಿರಲಿ…’ ಎಂಬ ಹಿಂದಿ ಫಿಲ್ಮ್ ಕನ್ನಡ ಡಬ್ ನೋಡಿದೆ. (ಫಿಲ್ಮ್ ಹಳೆದೆ ನಾ ನೋಡಿದ್ದುಈಗ) ನೋಡಿದಾಗ ಏನು ಅನ್ನಿಸಲು ಇಲ್ಲ. ಆದ್ರೆ ನನ್ನ ಆಲೋಚನೆ ಮಟ್ಟ ಆಲೋಚನೆ ಹಾದಿ, ಬೇರೆ ನೋಡಿ… ನಾ ತರ್ಕಿಸೋ ರೀತಿಯಲ್ಲಿ ಅಲ್ಲಿ ನಡೆದ ಘಟನಾವಳಿಗಳನ್ನು ಬದುಕಿಗೆ ನಿಲ್ಲಿಸಿದೆ. ನೋಡುವ ತವಕ ಹಾಗಾಗಿ ಒಂದಷ್ಟು ಮಾತುಗಳ ಅನಾವರಣ ಅನ್ನೋದಕ್ಕಿಂತ ಸತ್ಯಗಳ ಉಸುರುವ ಮಾತುಕತೆ . ಇಂದು ಬರುವ ನಾಳೆ ಹೋಗುವ ಪ್ರೀತಿ ಬೇಡ, ಸೆರಗು ಹಾಸಿ ಬೆವರ ಹನಿಯಲ್ಲಿ ಮಿಂದೆದ್ದ ಮೇಲೆ ಮರೆತು ನಡೆಯುವ ವ್ಯಾಮೋಹ ಬೇಡ, ತೀರದ ಬಯಕೆ ಹೊನಲಿನಲ್ಲಿ ಬದುಕ ಹಾಸಿ, ಆಧಾರವಲ್ಲ ಆಧಾರಕ್ಕಾಗಿ ಎಂಬ ಹುಸಿ ಮಾತುಗಳ ವಾದ ಬೇಡ. ತೀಟೆ ತೀರಿಸಲು ಮಿಂದೆಂದು ಹುಟ್ಟಿದ ಭ್ರೂಣಕ್ಕೆ ಅನಾಥನೆಂಬ ಪಟ್ಟ ನೀಡಿ ಬದುಕುವುದೆಷ್ಟು ಸರಿ?. ಉತ್ತರವಿಲ್ಲದ ಪ್ರಶ್ನೆಗಳು ಉತ್ತರಿಸೋಕೆ ಸಮಯ ಇಲ್ಲವೋ ??? ಮನಸ್ಸು ಇಲ್ಲವೋ??? ತಿಳಿಯದಾಗಿದೆ.
ಹಾದಿ ತಪ್ಪಿ ನಡೀತಾ ಇರೋದು, ಸಾಲು ಸಾಲು ಪದವಿ ಪಡೆದು ಬುದ್ಧಿವಂತರೇನಿಸಿಕೊಂಡಿರುವ ವಿದ್ಯಾವಂತರೆ ಹೊರತು ಮುಗ್ದತೆಗೆ ಜೋತು ಬಿದ್ದ ಅನಕ್ಷರಸ್ಥರಲ್ಲ. ಎತ್ತಣ ಸಾಗುತ್ತಿದೆ ಈ ಪಯಣ??? ಅದರಲ್ಲೂ ವಿದ್ಯಾರ್ಥಿ ಜೀವನ, ಬಹಳ ಸಲ ನನ್ನನ್ನೇ ನಾ ಕೇಳಿಕೊಂಡಿರುವೆ. ಬಹಳ ಹಿಂದಿನವವರು ಉನ್ನತ ವ್ಯಾಸಂಗ ಮಾಡಿದ್ದು ಕಡಿಮೆ. ಆದ್ರೂ ಅವರ ಅಭಿರುಚಿ ಅಭಿವ್ಯಕ್ತತೆ, ಇನ್ನು ಹೇಳಬೇಕು ಎಂದರೆ ಅವರ ಮಾನವೀಯ ಮೌಲ್ಯಗಳು ಆದರ್ಶಗಳಲ್ಲಿ ನಾವು ಕಿಂಚಿತ್ತೂ ಲೋಪ ಕಾಣೋಕೆ ಸಾಧ್ಯನೇ ಇಲ್ಲ. (ಹಳೆ ಸಾಹಿತ್ಯ ಓದಿದ್ರೆ ಒಂದುಚ್ರೂ ಕಾಣೋದು ಉಂಟು ಅದು ಶ್ರೀಮಂತನೆಂಬ ಪಟ್ಟ ಹೊತ್ತು ಹುಚ್ಚುಕುದುರೆ ಏರಿದವರಲ್ಲಿ), ಅಂದು ಅವ್ರು ಅನುಸರಿಸಿ ತತ್ವಗಳನ್ನು ನಾವಿಂದು ಅನುಭವಿಸಲು ಆಗದು. ಅಷ್ಟಕ್ಕೂ ಅವರಿಗೆ ಸಿಕ್ಕಿದ್ದಂತಹ ಆದರ್ಶಗಳು ಎಲ್ಲಿಯವು..? ಕಳೆದು ಹೋಗ್ತಿದೆ ಯೌವನ ಮೋಹ. ಪರವಶವಾಗಿ ಬದುಕುವುದು ಎಷ್ಟರಮಟ್ಟಿಗೆ ಉತ್ತಮ ಚಿಂತನೆ ನೀವೇ ತರ್ಕಿಸಿ.
ಹಿಂದೆ ಅನಾಥಾಶ್ರಮ ಇರಲಿಲ್ಲ, ವೃದ್ದಾಶ್ರಮ ಅಂತೂ ಕಂಡೆ ಇರಲಿಲ್ಲ. ಇದ್ದದ್ದು ಪರ್ಣ ಕುಟೀರಗಳು ಅದು ವಿಶ್ರಾಂತಿಗೆ ಹೊರತು ಆಶ್ರಯಕ್ಕಲ್ಲ. ಇಂದು ಭಾವನೆಗಳು ಹೇಗಿದೆ ಗೊತ್ತಾ, ಉಟ್ಟ ಬಟ್ಟೆಯ ಬದಲಾಯಿಸುವಷ್ಟು ಜಾಗತೀಕರಣದಂತೆ ಕಂಡಿದೆ. ದೈಹಿಕ ಸುಖಕ್ಕೆ ಸೆರಗು ಹಾಸಿ ಮೈ ಮರೆಯುವಾಗ ಹೆತ್ತ ತಂದೆ ತಾಯಿಯ ಅಳಲು ಎಲ್ಲಿಂದ ಕೇಳೀತು..? ತಮ್ಮ ಮಗುವಿನ ಮೇಲೆ ಅಕ್ಕರೆ ಕಾಳಜಿ ಕಾಣದೆ ಭ್ರೂಣ ತೆಗೆಸಲು ಹೊರಟಾಗ ಅದೇ ಭ್ರೂಣಕ್ಕೆ ಅಸ್ತಿತ್ವ ಕೊಟ್ಟಾಕ್ಷಣ ವಯಸ್ಸಾದ ಮೇಲೆ ಸಲಹಬೇಕು ಎಂಬ ಕಟ್ಟುಪಡೆ ಇದೆಯಾ..?
ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ದುಡುಕಿ ಕೈ ಕಚ್ಚಿ ಕೊಳ್ಳುವುದರ ಬದಲು, ದಿಟ್ಟ ಹೆಜ್ಜೆಗಳು ದಿಕ್ಕು ತಪ್ಪದೆ ಇರಲಿ. ಭಾವನೆಗಳು ಕೇವಲ ಯಾಂತ್ರಿಕರಣದಾ ಸರಕಲ್ಲ, ಅಥವಾ ತಂತ್ರಾಂಶಗಳು ಬಂದು ಯಾರನ್ನು ಬದುಕಿಸುವುದಿಲ್ಲ ಆದ್ರೆ ಇಂದಿನ 5ಜಿ ಜೆನೇರೇಷನ್ ನಾಗಲೋಟದ ಓಟ ಬದುಕನ್ನ ಬರ್ಬರ ಸ್ಥಿತಿಗೆ ನೂಕುವಲ್ಲಿ ಅನುಮಾನವೇ ಇಲ್ಲ. ಇಂದು ಶೇಕಡಾ ೫೦ ಭಾಗದಷ್ಟು ಮದುವೆಗಳು ವಿಚ್ಛೇದನದಲ್ಲಿ ಬೇರ್ಪಡುತ್ತಿದೆ. ಅದಕ್ಕೆ ಕಾರಣವ ತರ್ಕಿಸುತ್ತ ಸಾಗಿದರೆ ಉತ್ತರ ನೂರಾರು ಪ್ರಶ್ನೆ ಸಾವಿರಾರು.
ಬದುಕಿನ ಆಟದಲ್ಲಿ ಮೊದಲ ಸಲ ಅಂತ ಇರುತ್ತೆ ನೋಡಿ, ಅದು ಏನೇ ಆಗಬಹುದು ಸ್ನೇಹ- ಪ್ರೀತಿ ಮತ್ತೊಂದು ಮಗದೊಂದು. ಅಲ್ಲಿ ಬಾಂಧವ್ಯಗಳ ಸವಿಯೂಟ ಉಂಟು, ಮುಗಿದರೂ ಮುಗಿಯದ ಆಕರ್ಷಣೆಯ ಸೆಳೆತವುಂಟು. ಸೆಳೆತದಲ್ಲಿ ತೀರದ ಪ್ರೀತಿಯ ತುಮುಲವುಂಟು, ಅರೆಕ್ಷಣ ಅಳಿಯದೆ ಉಳಿಯುವ ಒಲವ ಬುಗ್ಗೆಯುಂಟು, ಇದೆಲ್ಲವೂ ಪ್ರೀತಿ- ಪ್ರೇಮ- ಪ್ರಯಣ ಎಂದು ಬದುಕಿನಲ್ಲಿ ಒಂದು ಹೆಜ್ಜೆ ಮುಂದೆ ಹೋದರೆ ಸಂಗಾತಿ ನಿಮ್ಮ ಹೆಜ್ಜೆಗೆ ಸರಿ ಹೆಜ್ಜೆ ಹಾಕದೆ ಹೋಗಬಹುದು. ಆಗ ಭಿನ್ನಾಭಿಪ್ರಾಯಗಳ ಮೂಟೆ ಹೊರದೆ ಅನುಬಂಧದ ಕಟ್ಟು ದಕ್ಕುವುದೇ..? ಜಿಗುಪ್ಸೆ ಜನಿಸದೆ ಪ್ರೀತಿ ಹಾಲ್ಗಡಲು ಹರಿಯಲು ಸಾಧ್ಯವೇ ..? ಅನುಭಾವಿಗೂ ಅನುಭವಕ್ಕೆ ಆಗ ತಾನೇ ತೆರೆದು ಕೊಳ್ಳುವರಿಗೂ ಅಜಗಜಾಂತರ ವ್ಯತ್ಯಾಸವುಂಟು.
ಕಾಮದ ತೃಷೆಯಲ್ಲಿ ಒಂದು ಹತ್ತು ಹೆಜ್ಜೆ ಮುಂದೆ ಸಾಗಿದರೆ ವೈವಾಹಿಕ ಜೀವನ ಹಸನಾಗುವುದಾದರು ಹೇಗೆ.. ? ಮಕ್ಕಳಿಗೆ ನೀವು ಜೀವನ ಭದ್ರತೆ ತಂದು ಕೊಡುವಿರೋ ಬಿಡುವಿರೋ ಅದು ಮುಂದಿನ ಚಿಂತನೆ, ಇಂದಿನ ಮಕ್ಕಳಿಗೆ ಬೇಕಿರೋದು ಮಾನಸಿಕ ಭದ್ರತೆ, ಅದು ಬಹಳಷ್ಟು ಮಕ್ಕಳಿಗೆ ಸಿಗ್ತಾ ಇಲ್ಲ, ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ ಎಂಬುದು ಎಷ್ಟು ಖಚಿತವೋ ಅಷ್ಟೇ ಸಮ್ಮುದವದು. ಇಂದಿನ ಶಿಕ್ಷಣ ಅಂಕ ತುಂಬಿಸಿಕೊಳ್ಳುವುದ ಹೇಳಿ ಕೊಡುತ್ತಿದೆಯೋ ವಿನಃ ನೈತಿಕತೆಯನ್ನಲ್ಲ, ಮಕ್ಕಳಿಗೆ ಮನೆಯಲ್ಲೇ ನೈತಿಕತೆ ಪಾಠ ಸಿಗಬೇಕು , ಇಂದಿನ ಮಕ್ಕಳು ತಂದೆ ತಾಯಿಗೆ ಎದುರು ಆಡುವಲ್ಲಿ, ಎದುರು ನಡೆಯುವಲ್ಲಿ ನಿಸ್ಸೀಮರು ಇದೆಲ್ಲ ರಾಶಿ ರಾಶಿ ಹಣ ಪಡೆದು ಕೊಡುವ ಶಿಕ್ಷಣದಲ್ಲಂತೂ ನೈತಿಕತೆ ಹೇಳಲ್ಲ, ಹಣದ ಸಂಪಾದನೆಯಲ್ಲಿ ಬದುಕು ಕಟ್ಟುವ ಪೋಷಕರಿಗೂ ಇದರ ಅವಶ್ಯಕತೆ ಇಲ್ಲ. ಭವ್ಯ ಸಮಾಜದ ಭಾವಿ ಪ್ರಜೆಗಳ ಬದುಕಿನ ದಿಕ್ಕು ಹಾದಿ ತಪ್ಪದೆ ಸುಹಾದಿಯಲ್ಲಿ ನಡೆಯಲು ಸಾಧ್ಯವೇ..?
ಕರುಳ ಬಳ್ಳಿಯೇ ಕರುಳ ಕತ್ತರಿಸಿ ನಡೆದ ದೃಶ್ಯಕ್ಕೇನು ಕಡಿಮೆ ಇಲ್ಲ, ರಕ್ತ ಸಂಬಂಧಗಳೇ ರಕ್ತ ಹೀರಲು ನಿಂತ ದೃಶ್ಯಕ್ಕೆ ಅಂತ್ಯವಿಲ್ಲ . ಯಾವ ಸಮಯದಲ್ಲಿ ಯಾವ ರೀತಿಯ ಹಾರೈಕೆ ದೇಹಕ್ಕೆ ಅವಶ್ಯಕತೆ ಇದೆಯೋ, ಬೌದ್ಧಿಕ ಬೆಳವಣಿಗೆಗೆ ಯಾವ ರೀತಿ ಶಿಕ್ಷಣದ ಅವಶ್ಯಕತೆ ಬೇಕೋ ಹಾಗೆ ಮನೋವಿಕಾಸಕ್ಕೆ, ಮಾನವೀಯ ಮೌಲ್ಯಗಳ ಬೆಳವಣಿಗೆಗೆ ನೈತಿಕತೆ ಅವಶ್ಯಕತೆ ಇದೆ. ಮೊದಲು ಮಾನವನಾಗು ನಂತರ ಕಾರುಣ್ಯವುಳ್ಳ ಮನುಷ್ಯನಾಗು ಪ್ರಾಣಿಕುಲಕ್ಕೆ ಮಾರಕವಾಗಿ ಕಪ್ಪುಚುಕ್ಕೆಯಾಗಬೇಡ.
- ಅಮೃತ ಎಂ ಡಿ (ಯುವಬರಹಗಾರ್ತಿ, ಗಣಿತಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿನಿ) ಮಂಡ್ಯ.
