ಪತ್ತೇದಾರಿ ಕಾದಂಬರಿಗಾರ್ತಿ ಎಚ್ ವಿ ಮೀನಾ ಅವರ ‘ಎವಿಡೆನ್ಸ್ ನಂಬರ್ 5/A’ ಕೃತಿ ಕುರಿತು ಕತೆಗಾರ್ತಿ ಶೋಭಾ ನಾರಾಯಣ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಎವಿಡೆನ್ಸ್ ನಂಬರ್ 5/A
ಲೇಖಕರು : ಎಚ್ ವಿ ಮೀನಾ
ಪ್ರಕಾಶನ : ಸೆಂಚುರಿ ಪಬ್ಲಿಕೇಶನ್
ಬೆಲೆ: 200
ಆಕೃತಿ ಕನ್ನಡ ದ ಸಂಪಾದಕಿ ಶ್ರೀಮತಿ ಶಾಲಿನಿ ಪ್ರದೀಪ್ ಅವರೊಡನೆ ಮಾತನಾಡುವಾಗ ಇತ್ತೀಚೆಗೆ ಅಷ್ಟೇ ಓದಿದ ಪತ್ತೇದಾರಿ ಕಾದಂಬರಿ ‘ಎವಿಡೆನ್ಸ್ ನಂಬರ್ 5/A “‘ ಬಗ್ಗೆ ಹೇಳುತ್ತಾ ಈ ಕಾದಂಬರಿ ಬರೆದ ಹೆಚ್ ವಿ ಮೀನಾ ಅವರ ಬಗ್ಗೆ ಪರಿಚಯಿಸಿ ಕಾದಂಬರಿ ಕುರಿತು ಶಾಲಿನಿ ಅವರು ಹೇಳಿದ ಒಳ್ಳೆಯ ಮುಕ್ತ ಅಭಿಪ್ರಾಯ ನನಗೆ ತುಂಬಾ ಇಷ್ಟ ಆಗಿದ್ದಲ್ಲದೇ ಆ ಪುಸ್ತಕ ಓದುವ ಕುತೂಹಲ ಉಂಟಾಗುತ್ತದೆ. ನನಗೂ ಪುಸ್ತಕ ಬೇಕಿತ್ತು ಎಂದು ಶಾಲಿನಿ ಅವರಲ್ಲಿ ಕೇಳಿದಾಗ ನನಗೆ ಹೆಚ್. ವಿ.ಮೀನಾ ಅವರ ಕಾಂಟೆಕ್ಟ ಸಿಗುವಂತೆ ಮಾಡುತ್ತಾರೆ. ಮೂಲತಃ ಪರಿಚಯ ಇಲ್ಲದ, ಮುಖಪುಟದಲ್ಲೂ ಪರಿಚಿತರಲ್ಲದ ಲೇಖಕಿಯವರನ್ನು ಶಾಲಿನಿ ಪ್ರದೀಪ್ ಅವರ ಮೂಲಕ ಪರಿಚಯವಾಗಿ ನಾನು ಪೋನಿನ ಮೂಲಕ ಲೇಖಕಿಯವರನ್ನು ಸಂಪರ್ಕಿಸಿದಾಗ ಅಷ್ಟೇ ವಿನಮೃವಾಗಿ, ಮೃದುವಾಗಿ ಮಾತನಾಡಿದ ಹೆಚ್ ವಿ ಮೀನಾ ಅವರು ಅಷ್ಟೇ ಬೇಗ ಆಪ್ತರ ಲೀಸ್ಟಿನಲ್ಲಿ ಸೇರಿ ಹೋದರು. ಪುಸ್ತಕ ಕಳುಹಿಸಿ ಕೊಡಿ ಎಂದು ವಿನಂತಿಸಿಕೊಂಡೆ. ಬೆಲೆ ಎಷ್ಟು ತಿಳಿಸಿ ಎಂದಾಗ ನಾನೂ ಒಬ್ಬ ಪುಟ್ಟ ಬರಹಗಾರ್ತಿ ಎಂದು ತಿಳಿದ ಮೇಲೆ ನಿಮ್ಮ ಪುಸ್ತಕ ನನಗೆ ಕಳುಹಿಸಿ ಕೊಡಿ ಎಂದು ಮೀನಾ ಹೇಳಿದರು. ನಿಜಕ್ಕೂ ಅವರ ಈ ಹೃದಯ ವೈಶಾಲ್ಯತೆ ತುಂಬಾ ಇಷ್ಟ ಆಯಿತು.

ಬರಹಗಾರರು ಇನ್ನೊಂದು ಬರಹಗಾರರ ಪುಸ್ತಕ ವಿನಿಮಯ ರೂಪದಲ್ಲಿ ಪಡೆಯುವುದು ಅತೀ ವಿರಳ. ಆದರೆ ಮೀನಾ ಅವರ ಈ ನಿಶ್ಕಲ್ಮಶ ಗುಣ ನನ್ನ ಮನದಾಳದಲ್ಲಿ ಇಳಿದು ಬಿಟ್ಟಿತು. ಒಂದೊಳ್ಳೆ ಪತ್ತೇದಾರಿ ಕಾದಂಬರಿ ಓದಲು ಅವಕಾಶ ಸಿಗುವಂತೆ ಮಾಡಿರುವುದಕ್ಕೆ.
ಚಂದದ ಮುಖಪುಟ ವಿನ್ಯಾಸ ಹೊಂದಿರುವ ಈ ಕಾದಂಬರಿಯನ್ನು ಮೀನಾ ಅವರು ತಮ್ಮ ಬೆನ್ನೆಲುಬಾಗಿ ನಿಂತ ತಮ್ಮ ಪತಿಗೆ ಅರ್ಪಿಸಿದ್ದಾರೆ. ಮುನ್ನುಡಿಯನ್ನು ತುಂಬಾ ಚಂದವಾಗಿ ಬರೆದು ಹಾರೈಸಿದವರು ಕಿಗ್ಗಾಲು ಎಸ್. ಗಿರೀಶ್ ಅವರು. ಹಲವಾರು ಸಾಹಿತ್ಯ ದಿಗ್ಗಜರು ಆಶಯ ನುಡಿಗಳನ್ನು ಅರ್ಥ ಪೂರ್ಣವಾಗಿ ಬರೆದು ಲೇಖಕಿ ಗೆ ಹಾರೈಸಿದ್ದಾರೆ.
ಪುಸ್ತಕ ದ ಬೆನ್ನುಡಿಯನ್ನು ಕೂಡ ಅಷ್ಟೇ ಸುಂದರವಾಗಿ ಬರೆದಿರುವುದು ಡಾ.ಬೈರಮಂಗಲ ರಾಮೇಗೌಡ .ಅಧ್ಯಕ್ಷ. ಬಿ ಎಂ ಶ್ರೀ ಪ್ರತಿಷ್ಠಾನ ಬೆಂಗಳೂರು.
ಇನ್ನು ಕಾದಂಬರಿಯ ಒಳ ನೋಟದತ್ತ ನೋಟ ಹರಿಸಿದರೆ, ನಿಜಕ್ಕೂ ಪತ್ತೇದಾರಿ ಕಾದಂಬರಿ ವಾಸ್ತವ ಜಗತ್ತಿಗೆ ತುಂಬಾ ಹತ್ತಿರ ಆದಂತಹ ಸನ್ನಿವೇಶವನ್ನೇ ಕಟ್ಟಿ ಕೊಟ್ಟಿದೆ.ಇವತ್ತಿನ ವಿಭಕ್ತ ಕುಟುಂಬದಲ್ಲಿ ಇರುವ ಒಂದೋ ಎರಡೋ ಮಕ್ಕಳು ಕೂಡ ಹೆಚ್ಚಿನ ಶಿಕ್ಷಣದ ಸಲುವಾಗಿ ಹೆತ್ತವರ ಜೊತೆಯಲ್ಲಿ ಇರಲಾದಂತ ಪರಿಸ್ಥಿತಿ. ಇದರಿಂದ ವಿಚ್ಛೇದನ ಪಡೆದವರು, ಅಥವಾ ಸಂಗಾತಿ ತೀರಿ ಹೋದಂತಹ ಅದೆಷ್ಟೋ ಮಹಿಳೆಯರು ಅನುಭವಿಸುವ ಮಾನಸಿಕ, ಒಂಟಿತನದ ನರಕ ಯಾತನೆಯ ಚಿತ್ರ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಅಕ್ಷರವನ್ನು ಭಟ್ಟಿ ಇಳಿಸಿರುವ ಲೇಖಕಿ ಅಷ್ಟೇ ಸೂಕ್ಷ್ಮವಾಗಿ ಇಂತಹ ಮಹಿಳೆಯರನ್ನು ಮೋಸಗಾರರು ಅದೆಷ್ಟು ಸುಲಭವಾಗಿ ಬಳಸಿಕೊಂಡು ಅವರ ಬದುಕಿನಲ್ಲಿ ಹೇಗೆಲ್ಲಾ ಆಟ ಆಡಿ ಅವರ ಬದುಕನ್ನೇ ನರಕವಾಗಿಸುತ್ತಾರೆ .ಪಬ್ಲಿಕ್, ಸೋಶಿಯಲ್ ಮೀಡಿಯಾಗಳಲ್ಲಿ ವ್ಯಕ್ತಿ, ವ್ಯಕ್ತಿತ್ವ ಅರಿತು ಸ್ನೇಹ ಮಾಡಬೇಕೇ ವಿನಃ ,ಅವರ ಯಾವುದೇ ಕಲೆ ಅಥವಾ ಪ್ರಸಿದ್ಧಿ, ಹೆಸರಿನ ಬೆನ್ನು ಹತ್ತಿ ಕುರುಡರಾಗಬಾರದು ಎನ್ನುವ ಸಂದೇಶವನ್ನು ಕೂಡ ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾದಂಬರಿಯ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಕಥೆಯ ಹಂದರವನ್ನು ತುಂಬಾ ಸೂಕ್ಷ್ಮವಾಗಿ ,ಅಷ್ಟೇ ಪ್ರಬುದ್ಧತೆಯಿಂದ ಹೆಣೆದ ಲೇಖಕಿಯವರು ಓದುಗರಿಗೆ ಎಲ್ಲೂ ನಿರಾಸೆ ತರದಂತೆ ಸರಳವಾಗಿ, ಅರ್ಥ ಪೂರ್ಣವಾಗಿ ಕೌತುಕತೆ ಕೊನೇತನಕ ಉಳಿಯುವಂತೆ ರಚನೆ ಮಾಡಿದ್ದಾರೆ. ಮೊದಲಿಗೆ ಮಹಿಳೆಯ ಕೊಲೆ ಸುತ್ತ ಆರಂಭವಾಗುವ ಈ ಕಥೆ SI ಸುರೇಶ್ ಪೋಲೀಸ್ ಇನ್ಸೆಕ್ಟರ್ ರಿಂದ ಕೊಲೆ, ಶೋಧ, ಸಾಕ್ಷಿಗಳ ಬೆನ್ನು ಹತ್ತುವ ರೋಚಕತೆ ಹೆಚ್ಚುವಂತೆ ಸನ್ನಿವೇಶ ಕಟ್ಟಿಕೊಟ್ಟುದಲ್ಲದೇ ಕೌತುಕದಿಂದ ಕಥೆ ,ಇನ್ನೊಂದು ಮಗ್ಗಲು ಹೊರಳಿ ಇಬ್ಬರು ಬಾಲ್ಯ ಸ್ನೇಹಿತೆಯರಾದ ಮಧುರ ಮತ್ತು ಸುಧಾರು ಸೇರಿ ಹೊರಡುವ ಪ್ರವಾಸ,ಸುತ್ತ ಮುತ್ತಲಿನ ಘಟನೆ ಆಧಾರಿತ ಕತೆ ಶುರುವಾಗಿ ಅವರ ಬದುಕಿನಲ್ಲಿ ನಡೆವ ಕೆಲ ಘಟನೆಗಳು ಕೂಡ ಮೊದಲಿನ ಕಥೆಗೆ ಮುಖ್ಯ ಸಾಕ್ಷಿ ಆಗಿ ನಂತರ ಕಥೆ ಅಚ್ಚರಿಯ ತಿರುವು ಪಡೆದುಕೊಂಡು ಈ ಎರಡೂ ಮಜಲುಗಳ ಖಳನಾಯಕ ಒಂದೇ ಎನ್ನುವ ಆಘಾತಕಾರಿ ಬೆಳವಣಿಗೆಯನ್ನು ಕರ್ತವ್ಯ ನಿಷ್ಠೆಯಿಂದ ಒಬ್ಬ ಧಕ್ಷ ಅಧಿಕಾರಿಯಾಗಿ SI ಸುರೇಶ್ ಎನ್ನುವ ಪೋಲೀಸ್ ಅಧಿಕಾರಿ ಕಂಡು ಹಿಡಿಯುವ ಅದ್ಭುತವಾದ ಸನ್ನಿವೇಶದ ಎಳೆಗಳು ಬಿಚ್ಚಿ ಹರಡುವುದೇ ಈ ಕಥಾ ಹಂದರವಾದ ‘ಎವಿಡೆನ್ಸ್ ನಂಬರ್ 5/A’.

ಕಥೆಯನ್ನು ವಿವರಿಸಿ ಹೇಳುವುದಿಲ್ಲ. ಯಾಕೆಂದರೆ ಓದುಗರಿಗೆ ಕುತೂಹಲ ತಣಿಯಬಾರದು ಎಂದು. ನಿಜಕ್ಕೂ ಕಾದಂಬರಿಯನ್ನು ಕೊಂಡು ಓದಿ .ತುಂಬಾ ಚೆನ್ನಾಗಿದೆ ಕಥಾವಸ್ತು. ಲೇಖಕಿ ಹೇಳುವ ಹಾಗೆ ಕಥೆಯಲ್ಲಿ ಬಹಳಷ್ಟು ಕಾಲ್ಪನಿಕ ಇದ್ದರೂ ವಾಸ್ತವ ಪ್ರಪಂಚಕ್ಕೆ ತೀರಾ ಹತ್ತಿರವಿದೆ.
ಕಾಲ ಎಷ್ಟೇ ಬದಲಾಗಲಿ, ಆದರೆ ಮನಸ್ಸು ಬದಲಾವಣೆ ಆಗುವುದು ತುಂಬಾ ದುಸ್ಥರ. ಒಂಟಿ ಹೆಣ್ಣನ್ನು ನೋಡುವ ದೃಷ್ಟಿ ಅಪಾಯಕರವೇ ಆಗಿದೆ. ಮೋಸ ಹೋಗುವವರು ಇರುವತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹಾಗಾಗಿ ಒಂಟಿ ಮಹಿಳೆಯರು ಆದಷ್ಟೂ ಜಾಗೃತವಾಗಿ ಸಮಾಜದಲ್ಲಿ ಬದುಕಬೇಕು ಎನ್ನುವ ಸೂಕ್ಷ್ಮ ಸಂವೇದನೆಯ ಸಂದೇಶ ಈ ಕಾದಂಬರಿಯಲ್ಲಿ ಅಡಗಿದೆ. ಕೇವಲ ಮಹಿಳೆಯರು ಅಂತಲ್ಲ,ಒಟ್ಟಾರೆ ಪ್ರೈವೇಟ್ ಬದುಕನ್ನು ಪಬ್ಲಿಕ್ ಮಾಡಿ ಬದುಕು ನರಕವಾಗದಿರಲಿ ಎನ್ನುವ ಮಹತ್ವದ ತಿಳುವಳಿಕೆ ಕೂಡ ಇದರಲ್ಲಿ ಅಡಗಿದೆ.
ತುಂಬು ಹೃದಯದ ಧನ್ಯವಾದಗಳು ಮೀನಾ ಅವರೇ. ಒಂದೊಳ್ಳೆ ಕಾದಂಬರಿ ಓದಲು ಅವಕಾಶ ನೀಡಿದ್ದಕ್ಕೆ. ಇನ್ನೂ ಹೆಚ್ಚಿನ ಸಮಾಜಮುಖಿ ಕೃತಿಗಳು ನಿಮ್ಮಿಂದ ಬರಲಿ ಎಂದು ತುಂಬು ಮನದಿಂದ ಹಾರೈಸುವೆ.ಶುಭವಾಗಲಿ. ಜೊತೆಗೆ ನಿಮ್ಮ ಪರಿಚಯ ಮಾಡಿಸಿ ಪತ್ತೇದಾರಿ ಕಾದಂಬರಿ ಓದಲು ಕುತೂಹಲ ಭರಿಸಿ ಓದಿಸಿದ ನಮ್ಮ ಆಪ್ತ ಶಾಲಿನಿ ಪ್ರದೀಪ್ ಜೀ ಗೂ ಹೃತ್ಪೂರ್ವಕ ಧನ್ಯವಾದಗಳು.
- ಶೋಭಾ ನಾರಾಯಣ ಹೆಗಡೆ – ಶಿರಸಿ
