ವೀರಲೋಕ ಸೃಷ್ಠಿಸಿದ ‘ಪುಸ್ತಕ ಸಂತೆ’ ಯಲ್ಲಿ ವೀರಕಪುತ್ರ ಶ್ರೀನಿವಾಸ ಶ್ರಮ ಎದ್ದುಕಾಣುತ್ತಿತ್ತು. ಸಾಕಷ್ಟು ಲೇಖಕರು, ಓದುಗರು, ಪ್ರಕಾಶಕರನ್ನು ಕಣ್ತುಂಬಿಕೊಂಡೆವು… ‘ಪುಸ್ತಕ ಸಂತೆ’ ಯ ಕುರಿತು ಲೇಖಕಿ ಶೋಭಾ ನಾರಾಯಣ ಹೆಗಡೆ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ನನಗೆ ಮುಖತಃ ಪರಿಚಯ ಇಲ್ಲ. ಯಾವತ್ತೂ ಇವರ ಕಾರ್ಯಕ್ರಮಗಳಿಗೆ ಭೇಟಿ ನೀಡಿದವಳೂ ಅಲ್ಲ.ಇವತ್ತೇ ಮೊದಲು ಬಂದದ್ದು ನಾನು.ಮುಖಪುಟದಲ್ಲಿ ಇವರ ಕಾರ್ಯ ವೈಖರಿಯನ್ನು ನೋಡಿ ಮನಸಾರೆ ಅಭಿನಂದಿಸಿದ್ದೇನೆ ಅಷ್ಟೇ.
ನಿಜ.ಇವತ್ತಿನ ಕಾಲಘಟ್ಟದಲ್ಲಿ ಇಂತಹ ನಿಶ್ಕಲ್ಮಶ ಮನಸ್ಸು ಅಧಮ್ಯವಾಗಿ ಅಕ್ಷರ ಪ್ರೀತಿ ಬೆಳೆಸಿಕೊಂಡು ತನ್ನಂತೆ ಇನ್ನೂ ಅನೇಕ ಹೃನ್ಮನಸಿನವರನ್ನೊಳಗೊಂಡ ತನ್ನದೇ ಟೀಮ್ ಕಟ್ಟಿಕೊಂಡು ನಿಸ್ವಾರ್ಥದಿಂದ ಕನ್ನಡಮ್ಮನ ಸೇವೆಯನ್ನು ಮಾಡುವುದು ಸಾಧ್ಯ ಎಂತಾದರೆ ,ಅದು ವೀರಲೋಕದ ವೀರಕಪುತ್ರ ಶ್ರೀನಿವಾಸ ಜೀ ಅವರಿಂದ ಮಾತ್ರ ಸಾಧ್ಯ.

ಮೂರು ದಿನಗಳಿಂದ ನಡೆದ ಪುಸ್ತಕ ಸಂತೆಯನ್ನು ಒಂದು ಚಂದದ ಕನ್ನಡದ ಹಬ್ಬವನ್ನಾಗಿ ಆಚರಿಸಿರುವ ರೀತಿ ತುಂಬಾ ಶ್ಲಾಘನೀಯ. ಮೊನ್ನೆಯಿಂದಲೂ ಸಂತೆಗೆ ಭೇಟಿ ನೀಡಿದ ಮನಸುಗಳಿಂದ ಪುಸ್ತಕ ಸಂತೆಯ ಬಗ್ಗೆ ಮುಖಪುಟದಲ್ಲಿ ಕೇಳಿ ಬರುತ್ತಿದ್ದ ಸಂತೃಪ್ತಿದಾಯಕ ಮಾತು, ಖುಷಿ, ಸಂಭ್ರಮ ನೋಡುವಾಗೆಲ್ಲ ನಾನೂ ಹೋಗಬೇಕು ಎಂದು ನನಗೂ ಅನಿಸಿದ್ದು. ನನ್ನ ಹಾಗೆ ಅದೆಷ್ಟೋ ಮಂದಿ ಮನೆಯಲ್ಲಿ ಕೂತರೂ ಬಿಡದೇ ಎದ್ದೇಳಿಸಿ ಸಂತೆಯೊಳಗೊಂದು ಸುತ್ತು ಸುತ್ತುವಂತೆ ಮಾಡುವಷ್ಟು ಸೆಳೆತ ಹುಟ್ಟಿಸಿದ್ದು ಶ್ರೀನಿವಾಸ ಜೀ ಅವರ ಕಾರ್ಯ ವೈಖರಿ.
ಸಂತೆ ಅದೆಷ್ಟು ನಿರಾಳತೆಯಿಂದ ,ಅಷ್ಟೇ ಧನಾತ್ಮಕವಾಗಿ ಕೂಡಿತ್ತು ಎಂದರೆ ಸಂತೆಗೆ ಬಂದವರಿಗೆ ಯಾವ ಹೊರ ಜಗತ್ತಿನ ದುಗುಡವೂ ಆ ಕ್ಷಣ ಕಾಡದಷ್ಟು ಅಕ್ಷರದೊಡಲು ತನ್ನೊಳಗೆ ಹುದುಗಿಸಿ ಇಟ್ಟಿತ್ತು.
ಕನ್ನಡದ ಕಂಪ ಅರಸಿ ಬಂದವರಿಗೆ ಇನಿತೂ ಕಷ್ಟ ಆಗದಂತೆ, ಇರಿಸು ಮುರಿಸು ಆಗದಂತೆ ಎಲ್ಲದರಲ್ಲೂ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ರೀತಿ ಅಚ್ಚರಿ ಆಗುವಂತೆ ಮಾಡುತ್ತದೆ. ಅಷ್ಟೊಂದು ಮಂದಿ ಓದುಗ ಪ್ರಭುಗಳು ಬಂದರೂ ನೂಕು ನುಗ್ಗಲು ಆಗದಂತೆ, ಶೌಚಾಲಯದ ವ್ಯವಸ್ಥೆ, ಊಟ ,ಉಪಹಾರದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ,ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಪುಟಾಣಿ ಮಕ್ಕಳಿಗೆ ಆಟೋಟದ ವ್ಯವಸ್ಥೆ. ಏನಿಲ್ಲ ಅಲ್ಲಿ. ಎಲ್ಲವೂ ಇತ್ತು. ಎಲ್ಲವೂ ಇತ್ತು ಎನ್ನುವುದಕಿಂತ ಅಷ್ಟೇ ಅಚ್ಚುಕಟ್ಟಾಗಿ ,ಅನುಕೂಲಕರವಾಗಿ ಇತ್ತು. ಓದುಗರು ಮತ್ತು ಲೇಖಕರು ಒಂದೆಡೆ ಸೇರುವ ಭಾಗ್ಯ.ಪುಸ್ತಕಗಳ ಮಳಿಗೆಗಳ ಸಾಲು ಒಂದೆಡೆ. ಇನ್ನೊಂದೆಡೆ ಸಂಗೀತ, ಇನ್ನಿತರ ಕಾರ್ಯಕ್ರಮಗಳ ಹೊನಲು ಕಣ್ಣು, ಕಿವಿಗಳಿಗೆ ತಂಪಿನ ಇಂಪು ನೀಡಿದ್ದು ಸತ್ಯ.

ಇದ್ದರೆ ಸಾಹಿತ್ಯ ಹಬ್ಬ ಹೀಗಿರಬೇಕು ಎನ್ನುವ ಹಾಗೆ. ನಿಜಕ್ಕೂ ಈ ಎಲ್ಲ ಅಚ್ಚುಕಟ್ಟು ಸುವ್ಯವಸ್ಥೆ ಹಿಂದೆ ತುಂಬಾ ಎಂದರೆ ತುಂಬಾನೇ ಪರಿಶ್ರಮ ಇದೆ.ಆದರೆ ಜೊತೆಗೆ ಅಷ್ಟೇ ಕನ್ನಡದ ಬಗೆಗಿನ ಕಾಳಜಿ, ಪ್ರೀತಿ ಕೂಡ ಇರುವುದರಿಂದ ಈ ಕಾರ್ಯಕ್ರಮ ಅವಿಸ್ಮರಣೀಯವಾಗಿ ಉಳಿಯುವಂತೆ ನಡೆದಿದೆ.ಇದು ಖಂಡಿತ ಉತ್ಪ್ರೇಕ್ಷೆಯ ಮಾತಲ್ಲ ಮನದಾಳದ ಮಾತಿದು.ಒಂದು ಕಾರ್ಯಕ್ರಮ ಹೊಮ್ಮಿಕೊಂಡಾಗ ಅದರ ಜವಾಬ್ದಾರಿ ಬೆಟ್ಟದಷ್ಟು. ಹೊರುವುದು ಬಲು ಭಾರ.ಆದರೆ ಅಂತಹ ಭಾರವನ್ನು ತಾವು ಜವಾಬ್ದಾರಿಯುತವಾಗಿ ಹೊತ್ತು ಆ ಜವಾಬ್ದಾರಿಗೆ ಧಕ್ಕೆ ಬಾರದಂತೆ ನಡೆದು ಕನ್ನಡದ ಹಬ್ಬವನ್ನು ಬಂದವರೆಲ್ಲರೂ ಮನಸಾರೆ ಇಷ್ಟ ಪಟ್ಟು ತಮ್ಮದೇ ಮನೆಯ ಕಾರ್ಯಕ್ರಮ ಎನ್ನುವ ಹಾಗೆ ಕನ್ನಡದ ಇಂಪಿನ ಆ ಸುಮಧುರ ಮಾಧುರ್ಯವನ್ನು ಎಲ್ಲರೂ ಸವಿಯಲು ಅವಕಾಶದ ವೇದಿಕೆ ಆಗಿದ್ದು ವೀರಲೋಕ ಮತ್ತು ವೀರಕಪುತ್ರ ಶ್ರೀನಿವಾಸ ಅವರು.ಇನ್ನೂ ಹೆಚ್ಚಿನ ಶಕ್ತಿಯನ್ನು ಕನ್ನಡಮ್ಮ ನೀಡಲಿ ನಿಮಗೆ ಸರ್.ನಿಮ್ಮ ಸಾಹಸದ ಈ ನಿಶ್ಕಲ್ಮಶ ಕಾಯಕಕ್ಕೆ ನನ್ನದೊಂದು ಬಿಗ್ ಸಲಾಂ…
- ಶೋಭಾ ನಾರಾಯಣ ಹೆಗಡೆ
