ಮರಗಳೇ ಎನ್ನ ಮಕ್ಕಳು : ಶಶಿಧರ ಹಾಲಾಡಿ

ಬದುಕಿದ್ದಾಗಲೇ ದಂತಕಥೆಯಾಗಿ ಪ್ರಸಿದ್ಧರಾದಂತಹವರ ಪಟ್ಟಿಯಲ್ಲಿ ಸಾಲು ಮರದ ತಿಮ್ಮಕ್ಕನವರ ಹೆಸರು ಅಗ್ರಗಣ್ಯ ಎನಿಸುತ್ತದೆ. ಗಿಡಗಳನ್ನು ನೆಟ್ಟು, ನೀರೆರೆದು, ಪೋಷಿಸಿ, ಸಾಲುಮರಗಳನ್ನು ಬೆಳೆಸಿದ “ಸಾಲುಮರದ ತಿಮ್ಮಕ್ಕ” ನಮ್ಮನ್ನು ಮೊನ್ನೆ ಅಗಲಿದ್ದಾರೆ. ಶಶಿಧರ ಹಾಲಾಡಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಪ್ರವೇಶ

ಗಿಡಗಳನ್ನು ನೆಟ್ಟು, ನೀರೆರೆದು, ಪೋಷಿಸಿ, ಸಾಲುಮರಗಳನ್ನು ಬೆಳೆಸಿದ “ಸಾಲುಮರದ ತಿಮ್ಮಕ್ಕ” ನಮ್ಮನ್ನು ಮೊನ್ನೆ ಅಗಲಿದ್ದಾರೆ. ಪರಿಸರ ರಕ್ಷಣೆ ಎಂಬ ಪರಿಕಲ್ಪನೆ ನಮ್ಮ ರಾಜ್ಯದಲ್ಲಿ ಜನಪ್ರಿಯವಾಗುವ ಮೊದಲೇ, ಇವರು ನೂರಾರು ಮರಗಳನ್ನು ಬೆಳೆಸಿದರು. ಸಾರ್ವಜನಿಕ ರಸ್ತೆಯುದ್ದಕ್ಕೂ ನೂರಾರು ಗಿಡಗಳನ್ನು ನೆಟ್ಟು, ಅವುಗಳಿಗೆ ನೀರೆರೆದು ಪೋಷಿಸಿ, ರಕ್ಷಿಸಿ, ಮರಗಳನ್ನಾಗಿಸಿದವರು ಸಾಲುಮರದ ತಿಮ್ಮಕ್ಕ. ಹೆದ್ದಾರಿಯ ಪಕ್ಕದಲ್ಲಿ ನೆಟ್ಟು ಬೆಳೆಸಿದ ಆ ಸಾಲುಮರಗಳಿಂದ ಅವರು ಯಾವುದೇ ಆರ್ಥಿಕ ಲಾಭವನ್ನು ಬಯಸಿರಲಿಲ್ಲ, ನಿರೀಕ್ಷಿಸಿಯೂ ಇರಲಿಲ್ಲ. ಹಕ್ಕಿಗಳಿಗೆ, ಇತರ ಜೀವಿಗಳಿಗೆ ಆಶ್ರಯ ನೀಡಲಿ ಎಂಬುದು ಒಂದು ಆಸೆ; ರಸ್ತೆಯಲ್ಲಿ ಸಂಚರಿಸುವ ಜನರಿಗೆ ನೆರಳನ್ನು ನೀಡಲು ಎಂಬುದು ಇನ್ನೊಂದು ಬಯಕೆ. ಅಷ್ಟೇ! ಇಂತಹ ನಿಸ್ವಾರ್ಥ ಸೇವೆ ಮಾಡಿದ ಸಾಲುಮರದ ತಿಮ್ಮಕ್ಕನವರು, ತಾವು ಬೆಳೆಸಿದ ಮರಗಳನ್ನು ಮಕ್ಕಳಂತೆಯೇ ಕಂಡರು. ಆ ಮರಗಳನ್ನು ರಕ್ಷಿಸುವಲ್ಲಿ ಮಾತೃಪ್ರೇಮ ಮೆರೆದರು. ಹಳ್ಳಿಗಾಡಿನಲ್ಲೇ ಹುಟ್ಟಿ ಬೆಳೆದ ತಿಮ್ಮಕ್ಕನವರು, ಮರಗಳನ್ನು ನೆಡುವ ಕೈಂಕರ್ಯದ ಮೂಲಕ ಪ್ರಸಿದ್ಧರಾದರು; ಅದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ಪಡೆಯಲು ದೆಹಲಿಗೆ ಹೋಗಿಬಂದರು. ರಾಷ್ತ್ರೀಪತಿಗಳ ಹಸ್ತದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಅವರು ಪಡೆದಾಗ ತಮ್ಮ ಹಳ್ಳಿಯಲ್ಲಿ ಅವರು ನೆಟ್ಟ ನೂರಾರು ಆಲದ ಮರಗಳು, ಮೌನವಾಗಿ ತಮ್ಮ ಎಲೆಗಳನ್ನು ಅಲುಗಿಸಿ ಚಪ್ಪಾಳೆ ತಟ್ಟಿರಲೇಬೇಕು. ಕರ್ನಾಟಕದ ಗ್ರಾಮೀಣ ಪ್ರದೇಶದ ಪರಿಸರಪ್ರೇಮಿಯೊಬ್ಬರು ಪದ್ಮಪ್ರಶಸ್ತಿ ಪಡೆದ ಅಪರೂಪದ ಕ್ಷಣ ಅದು! ನಾನು ಸಾಲುಮರದ ತಿಮ್ಮಕ್ಕ ಅವರನ್ನು ಭೇಟಿಯಾಗಿಲ್ಲ; ಆದರೆ, ಅವರು ನೆಟ್ಟು ಪೋಷಿಸಿದ ನೂರಾರು ಮರಗಳು, ಅವರ ನಿಸ್ವಾರ್ಥ ಸೇವೆ, ಮರ ಬೆಳೆಸಿದ್ದ ಕಾರಣದಿಂದಾಗಿ ಅವರು ಪಡೆದ ಪ್ರಸಿದ್ಧಿ ಎಲ್ಲವೂ ನನ್ನ ಮೇಲೆ ಪ್ರಭಾವ ಬೀರಿದ್ದಂತೂ ನಿಜ. ನಮನಗಳು.

ದಂತೆಕಥೆಯಾದರು!

ಬದುಕಿದ್ದಾಗಲೇ ದಂತಕಥೆಯಾಗಿ ಪ್ರಸಿದ್ಧರಾದಂತಹವರ ಪಟ್ಟಿಯಲ್ಲಿ ಸಾಲು ಮರದ ತಿಮ್ಮಕ್ಕನವರ ಹೆಸರು ಅಗ್ರಗಣ್ಯ ಎನಿಸುತ್ತದೆ. ಶಾಲೆಗೆ ಹೋಗದ, ಅಕ್ಷರಾಭ್ಯಾಸ ಮಾಡದ ಈ ಮಹಿಳೆ, ಪರಿಸರ ಸಂರಕ್ಷಣೆಯಲ್ಲಿ ಮಾಡಿದ ಕೆಲಸ, ತನ್ನ ಕೆಲಸದ ಮೂಲಕ ಒಂದು ಜನಾಂಗಕ್ಕೆ ನೀಡಿದ ಪ್ರೇರಣೆಯು ಅಗಾಧ. ರಸ್ತೆಯ ಇಕ್ಕೆಲದಲ್ಲಿ ನೂರಾರು ಗಿಡಗಳನ್ನು ನೆಟ್ಟು, ಆ ಗಿಡಗಳಿಗೆ ಬೇಸಗೆಯಲ್ಲಿ ನೀರುಣಿಸಿ, ಗಿಡಗಳನ್ನು ರಕ್ಷಿಸಿ, ಬೆಳೆಸಿ, ಸಾಲುಮರಗಳ ನೆರಳನ್ನು, ಆಸರೆಯನ್ನು ಕಲ್ಪಿಸಿಕೊಟ್ಟ ತಿಮ್ಮಕ್ಕನವರ ಸಾಧನೆ ಮತ್ತು ಅವರು ಗಳಿಸಿದ ಮನ್ನಣೆ ನಿಜಕ್ಕೂ ವಿಶೇಷ. ಹಲವು ವರ್ಷಗಳ ಕಾಲ ಗಿಡಗಳಿಗೆ ನೀರುಣಿಸಿ, ಮೇಕೆಗಳು ಆ ಗಿಡಗಳ ಕುಡಿಯನ್ನು ತಿಂದು ಹಾಕದಂತೆ ಕಾಪಾಡಿ, ಸುಮಾರು ೪೦೦ ಸಾಲುಮರಗಳನ್ನು ಬೆಳೆಸಿದ ಹಳ್ಳಿಯ ಹೆಂಗಸು ತಿಮ್ಮಕ್ಕನವರು, ಇಂದಿನ ಆಧುನಿಕ ಯುಗದ ಪರಿಸರ ಪ್ರೇಮಿಗಳಿಗೂ ಆದರ್ಶ ಎನಿಸಿದ್ದಾರೆ.

ಹಾಗೆ ನೋಡಿದರೆ, ಸಾಲುಮರದ ತಿಮ್ಮಕ್ಕನವರ ಸಾಧನೆಯು ಬಹು ದೀರ್ಘಕಾಲದ ತನಕ, ಬಹುಮಟ್ಟಿಗೆ ಅಜ್ಞಾತವಾಗಿಯೇ ಉಳಿದಿತ್ತು. ೧೯೧೧ರಲ್ಲಿ ಜನಿಸಿದ ತಿಮ್ಮಕ್ಕನವರು, ಆ ಕಾಲದ ಗ್ರಾಮೀಣ ಮಹಿಳೆಯರ ರೀತಿ, ತಮ್ಮ ಪಾಡಿಗೆ ಬದುಕು ಕಟ್ಟಿಕೊಂಡಿದ್ದವರು; ಏಕತಾನದ ಬದುಕು; ಹಸು ಮೇಯಿಸುವಂತಹ ಸಣ್ಣ ಪುಟ್ಟ ಕೆಲಸ ಮಾಡುವ ಕಾಯಕ. ಪತಿ ಬಿಕ್ಕಲು ಚಿಕ್ಕಯ್ಯನವರ ಜತೆ ಸರಳ ಜೀವನ.

ಬದುಕಿನಲ್ಲೊಂದು ತಿರುವು

ಈ ನಡುವೆ, ಒಂದು ದಿನ ಮಾಗಡಿ ತಾಲೂಕಿನ ಹುಲಿಕಲ್ ಮತ್ತು ಕುದೂರು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯ ಪಕ್ಕದಲ್ಲಿ ಹತ್ತು ಆಲದ ಕುಡಿಗಳನ್ನು ನೆಟ್ಟು, ನೀರುಣಿಸಲು ತೊಡಗಿದರು ಆ ದಂಪತಿ. ಅವರಿಗೆ ಅರಿವಿಲ್ಲದೇ ಮಾಡಿದ ಆ ಕೆಲಸವು, ಅವರ ಬದುಕಿಗೊಂದು ಗುರಿಯನ್ನು ಕಲ್ಪಿಸಿತು. ಹಕ್ಕಿಗಳಿಗೆ ಆಶ್ರಯ ನೀಡುವ, ದಾರಿಹೋಕರಿಗೆ ನೆರಳು ನೀಡುವ ಮರಗಳನ್ನು ಬೆಳೆಸುವ, ಪರಿಸರಪ್ರೇಮದ ಕೆಲಸ ಅದು; ಪರಿಸರವಾದದ ಪರಿಚಯವಿಲ್ಲದೇ, ಪರಿಸರ ರಕ್ಷಣೆಗೆ ತೊಡಗಿದ್ದರು ಆ ದಂಪತಿ! ರಸ್ತೆಬದಿ ನೆಟ್ಟ ಗಿಡಗಳನ್ನು ತಮ್ಮ ಮಕ್ಕಳ ರೀತಿಯಲ್ಲಿ ಪೋಷಿಸತೊಡಗಿದರು. ಪ್ರತಿ ವರ್ಷ ಮಳೆ ಬಿದ್ದ ಕೂಡಲೇ, ಅದೇ ರಸ್ತೆಯ ಎರಡೂ ಬದಿಗಳಲ್ಲಿ ಇನ್ನಷ್ಟು ಆಲದ ಕುಡಿಗಳನ್ನು ನೆಟ್ಟು, ನೀರೆರೆದು ಪೋಷಿಸತೊಡಗಿದರು. ಆ ಗಿಡಗಳಿಗೆ ಮುಳ್ಳಿನ ಬೇಲಿ ಮಾಡಿ, ಮೇಕೆಗಳು, ಕುರಿಗಳು ಆ ಗಿಡಗಳನ್ನು ತಿನ್ನದಂತೆ ನೋಡಿಕೊಂಡರು. ಪ್ರತಿ ಬೇಸಗೆಯಲ್ಲೂ ದೂರದಿಂದ ನೀರನ್ನು ಹೊತ್ತು ತಂದು, ತಾವು ನೆಟ್ಟ ಗಿಡಗಳಿಗೆ ಎರೆದು, ಅವು ಬಾಡದಂತೆ ನೋಡಿಕೊಂಡರು; ೧೯೫೦-೬೦ರ ದಶಕದಿಂದಲೇ ಅವರ ಈ ನಿಸ್ವಾರ್ಥ ಕೈಂಕರ್ಯ ಮುಂದುವರಿದಿತ್ತು. ಆ ಸುತ್ತಲಿನ ಗ್ರಾಮಸ್ತರು ಇವರ ಕೆಲಸವನ್ನು ನೋಡಿ ಮೆಚ್ಚಿದ್ದರು; ಆದರೆ, ವಿಶೇಷವಾದ ಪ್ರಚಾರ ದೊರಕದೇ, ಇವರ ಪರಿಸರ ಪ್ರೇಮವು ಅಜ್ಞಾತವಾಗಿಯೇ ನಡೆದಿತ್ತು.

ಹುಲಿಕಲ್ ಮತ್ತು ಕುದೂರು ನಡುವೆ, ರಸ್ತೆಯುದ್ದಕ್ಕೂ ಎರಡೂ ಪಕ್ಕದಲ್ಲಿ ಇವರು ಬೆಳೆಸಿದ ಸುಮಾರು ೩೮೫ ಮರಗಳು ನೆರಳು ನೀಡತೊಡಗಿದವು; ಆ ಮಟ್ಟಕ್ಕೆ ಮರಗಳು ಬೆಳೆಯಲು ಆ ದಂಪತಿ ಸಾಕಷ್ಟು ಬೆವರು ಸುರಿಸಿದ್ದಂತೂ ನಿಜ; ಅವುಗಳನ್ನು ಕಾಪಾಡುವ ಜತೆಯಲ್ಲೇ, ಎಳವೆಯಲ್ಲಿದ್ದಾಗ, ಬೇಸಗೆಯ ಸಮಯದಲ್ಲಿ ನೀರುಣಿಸುವ ಕೆಲಸನ್ನು ಮಾಡಲೇಬೇಕಿತ್ತು. ನಡುನಡುವೆ ಒಂದೊಂದು ವರ್ಷ ಸಾಕಷ್ಟು ಮಳೆಯಾಗದೇ, ಸನಿಹಗ ಜಲಮೂಲಗಳು ಒಣಗಿದಾಗ, ಬಹುದೂರದಿಂದ ನೀರನ್ನು ಹೊತ್ತು ತಂದು, ತಾವು ನೆಟ್ಟ ಗಿಡಗಳಿಗೆ ಉಣಿಸುವ ಮೂಲಕ, ಮಾತೃಪ್ರೇಮವನ್ನು ಮೆರೆದರು ತಿಮ್ಮಕ್ಕ.

ಕಾಯಕ ನಿಷ್ಠೆ ಜೀವನ ಪ್ರೀತಿ

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಸಾರ್ವಜನಿಕ ರಸ್ತೆಯ ಎರಡೂ ಪಕ್ಕದಲ್ಲಿ ಆಲದ ಮರಗಳನ್ನು ನೆಟ್ಟು ಬೆಳೆಸುವ ಅವರ ಈ ಕಾಯಕನಿಷ್ಠೆಯನ್ನು, ಜೀವನ ಪ್ರೀತಿಯನ್ನು, ಸಾಹಸವನ್ನು ವರ್ಣಿಸಲು ಸೂಕ್ತ ಪದಗಳಿಲ್ಲ. ಮಕ್ಕಳಿಲ್ಲದ ಆ ದಂಪತಿಗೆ, ಆ ರಸ್ತೆಯುದ್ದಕ್ಕೂ ಬೆಳೆದು ನಿಂತ ಮರಗಳೇ ಮಕ್ಕಳು ಎನಿಸಿದವು. ಅವುಗಳು ಬೆಳೆಯುವುದನ್ನು ನೋಡುತ್ತಾ, ಅವುಗಳ ಪಾಲನೆ ಪೋಷಣೆ ಮಾಡುತ್ತಾ, ಬದುಕಿನಲ್ಲಿ ಪ್ರೀತಿಯನ್ನು ಕಂಡುಕೊAಡರು ಆ ದಂಪತಿ.
ಈ ನಡುವೆ, ೧೯೯೧ರಲ್ಲಿ ತಿಮ್ಮಕ್ಕನವರ ಪತಿ ಬಿಕ್ಕಲು ಚಿಕ್ಕಯ್ಯ ತೀರಿ ಹೋದಾಗ, ತಿಮ್ಮಕ್ಕ ಏಕಾಂಗಿಯಾದರು. ಆದರೆ, ಅವರು ಕಷ್ಟಪಟ್ಟು ನೆಟ್ಟು ಬೆಳೆಸಿದ ೩೮೫ ಆಲದ ಮರಗಳು, ತಿಮ್ಮಕ್ಕನವರನ್ನು ಏಕಾಂಗಿಯಾಗಿರಲು ಬಿಡಲಿಲ್ಲ; ಆ ಮರಗಳನ್ನು ಇನ್ನಷ್ಟು ನಿಷ್ಠೆಯಿಂದ, ಪ್ರೀತಿಯಿಂದ, ಕಾಳಜಿಯಿಂದ ರಕ್ಷಿಸಲು ತೊಡಗಿಕೊಂಡರು, ಸಾಲುಮರದ ತಿಮ್ಮಕ್ಕ.

ಹುಲಿಕಲ್ ಮತ್ತು ಕುದೂರು ಗ್ರಾಮಗಳ ನಡುವಿನ ೪ ಕಿ.ಮೀ. ಉದ್ದದ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿದ್ದ ೩೮೫ಕ್ಕೂ ಅಧಿಕ ಮರಗಳು ಅದಾಗಲೇ ನೆರಳು ನೀಡುತ್ತಿದ್ದರೂ, ಅವು ಆ ಮಟ್ಟಕ್ಕೆ ಬೆಳೆದು ನಿಲ್ಲುವಲ್ಲಿ ತಿಮ್ಮಕ್ಕ ದಂಪತಿ ಮಾಡಿದ ಕೈಂಕರ್ಯ ಆಗಿನ್ನೂ ಪ್ರಸಿದ್ಧಿಗೆ ಬಂದಿರಲಿಲ್ಲ. ೧೯೯೪ರ ಒಂದು ದಿನ; ಕನ್ನಡದ ಪ್ರಮುಖ ದಿನಪತ್ರಿಕೆಯೊಂದು, ಸಾಲುಮರದ ತಿಮ್ಮಕ್ಕ ಬೆಳೆಸಿದ ಸಾಲುಮರಗಳ ಕುರಿತು ಒಂದು ಸಚಿತ್ರ ವರದಿಯನ್ನು ಪ್ರಕಟಿಸಿತು. `ಓದು ಬರಹ ಕಲಿಯದ, ಹಳ್ಳಿಗಾಡಿನ ಏಕಾಂಗಿ ಮಹಿಳೆಯೊಬ್ಬಳು ಸಾರ್ವಜನಿಕ ರಸ್ತೆಯ ಎರಡೂ ಪಕ್ಕದಲ್ಲಿ, ನೂರಾರು ನೆರಳಿನ ಮರಗಳನ್ನು ಬೆಳೆಸಿದ್ದಾಳೆ, ಆ ಮೂಲಕ ಪಕ್ಷಿ ಸಂಕುಲಕ್ಕೆ ಆಶ್ರಯ ಕಲ್ಪಿಸಿದ್ದಾಳೆ’ ಎಂಬ ವಿಚಾರವು ಕನ್ನಡನಾಡಿನಾದ್ಯಂತ ಸಂಚಲನವನ್ನೇ ಸೃಷ್ಟಿಸಿತು. ಸರಕಾರದ ಇಲಾಖೆಗಳು ಮಾಡಬಹುದಾದಂತಹ ಇಂತಹ ಪರಿಸರ ಸ್ನೇಹಿ ಚಟುವಟಿಕೆಯನ್ನು, ಮಾಗಡಿ ತಾಲೂಕಿನ ನಿರಕ್ಷರಕುಕ್ಷಿ ಮಹಿಳೆಯೊಬ್ಬಳು ಮಾಡಿದ್ದಾಳೆ ಎಂಬ ವಿಷಯವು, ಜನಸಾಮಾನ್ಯರಲ್ಲಿ ಮತ್ತು ಪರಿಸರಪ್ರೇಮಿಗಳಲ್ಲಿ ಬೆರಗನ್ನು ಮೂಡಿಸಿತು; ನಿಧಾನವಾಗಿ, ಹಲವು ಸಂಘ ಸಂಸ್ಥೆಗಳು ತಿಮ್ಮಕ್ಕನ ಸಾಧನೆಯನ್ನು ಗುರುತಿಸಿದವು, ಹೊಗಳಿದವು, ಸನ್ಮಾನವನ್ನೂ ಮಾಡಿದವು; ಅವರ ಈ ಪರಿಸರ ಸ್ನೇಹಿ ಚಟುವಟಿಕೆಯಲ್ಲಿ ತಾವೂ ಕೈ ಜೋಡಿಸಿದವು.

ಹುಲಿಕಲ್ ಮತ್ತು ಕುದೂರು ಗ್ರಾಮದ, ಆ ಸುತ್ತಲಿನ ಜನರಿಗೆ ಕೆಲವು ದಶಕಗಳಿಂದಲೇ ಈ ಮಹಿಳೆ ಚಿರಪರಿಚಿತ; ತಮ್ಮ ಗ್ರಾಮದ ರಸ್ತೆಯ ಎರಡೂ ಪಕ್ಕದಲ್ಲಿ ಗಿಡಗಳನ್ನು ನೆಟ್ಟು, ನೀರು ಹಾಕುತ್ತಾ, ಅವುಗಳನ್ನು ರಕ್ಷಿಸುತ್ತಿದ್ದ ಈ ಮಹಿಳೆಯನ್ನು ಗ್ರಾಮಸ್ಥರು `ಸಾಲುಮರದ ತಿಮ್ಮಕ್ಕ’ ಎಂದೇ ಕರೆಯುತ್ತಿದ್ದರು. ಹಳ್ಳಿಯ ಜನರು ಇಟ್ಟ ಹೆಸರಾದ `ಸಾಲುಮರದ ತಿಮ್ಮಕ್ಕ’ ಈಗ ನಾಡಿನಾದ್ಯಂತ ಪ್ರಚುರಗೊಂಡಿತು.

ಬಿಬಿಸಿ ಗುರುತಿಸಿದ ಸಾಧನೆ

ಏಕಾಂಗಿ, ಅನಕ್ಷರಸ್ಥ ಮಹಿಳೆಯೊಬ್ಬಳು, ರಸ್ತೆಯ ಬದಿ ನೂರಾರು ಮರಗಳನ್ನು ಬೆಳೆಸಿ, ಸಾಲುಮರದ ವನವನ್ನೇ ಬೆಳೆಸಿದ್ದಾಳೆ ಎಂಬ ಸುದ್ದಿ ಕರ್ನಾಟಕದಾಚೆಯೂ ಹರಡಲು ಹೆಚ್ಚು ಸಮಯ ಬೇಕಾಗಲಿಲ್ಲ. ರಾಷ್ಟ್ರೀಯ ಸುದ್ದಿಯಾದ ಈ ಪರಿಸರಸ್ನೇಹಿ ಚಟುವಟಿಕೆಯು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹರಡಿತು. ಬಿ.ಬಿ.ಸಿ. ಸಂಸ್ಥೆಯು ೨೦೧೪ರಲ್ಲಿ ಸಾಲುಮರದ ತಿಮ್ಮಕ್ಕನ ಸಾಧನೆಯನ್ನು ಗುರುತಿಸಿ, ಜಗತ್ತಿನ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರನ್ನಾಗಿ ಇವರನ್ನು ಹೆಸರಿಸಿದ್ದಂತೂ, ಇಡೀ ದೇಶಕ್ಕೇ ಹೆಮ್ಮೆಯ ವಿಚಾರ. ನಮ್ಮ ರಾಜ್ಯದ ಸರಕಾರ ಮತ್ತು ಪ್ರತಿಷ್ಠಿತ ಸಂಸ್ಥೆಗಳು ಸಾಲುಮರದ ತಿಮ್ಮಕ್ಕನ ಸಾಧನೆಯನ್ನು ಗೌರವಿಸಿದವು.

ಮಾಗಡಿ ತಾಲೂಕಿನ ಹುಲಿಕಲ್ ಮತ್ತು ಕುದೂರು ನಡುವೆ ಆರಂಭದಲ್ಲಿ ಸುಮಾರು ೪೦೦ ಮರಗಳನ್ನು ಬೆಳೆಸಿದ ಸಾಲುಮರದ ತಿಮ್ಮಕ್ಕನವರು, ಆ ನಂತರವೂ ಗಿಡನೆಡುವ ಕೈಂಕರ್ಯವನ್ನು ಮುಂದುವರಿಸಿದರು. ಅವರೊಂದಿಗೆ ಹಲವು ಸಂಸ್ಥೆಗಳು ಕೈಜೋಡಿದಿವರು. ಇದುವರೆಗೆ ಒಟ್ಟು ೮,೦೦೦ಕ್ಕೂ ಹೆಚ್ಚಿನ ಮರಗಳನ್ನು ಅವರು ನೆಟ್ಟಿದ್ದಾರೆ.

ಮಂತ್ರಿ ಸಮಾನ ಗೌರವ

ಕುದೂರು ಬಳಿ ರಸ್ತೆಯುದ್ದಕ್ಕೂ ಅವರು ನೆಟ್ಟಿರುವ ಮರಗಳು ಇಂದು ವಿಶಾಲ ಕ್ಯಾನೋಪಿಯನ್ನು ಸೃಷ್ಟಿಸಿವೆ; ದಾರಿಹೋಕರಿಗೆ, ಪಕ್ಷಿಗಳಿಗೆ, ಜಾನುವಾರುಗಳಿಗೆ ನೆರಳನ್ನು ನೀಡಿವೆ. ಈ ಮರಗಳನ್ನು ನೆಡುತೋಪನ್ನಾಗಿ ಸರಕಾರ ಘೋಷಿಸಿದ್ದು, ಅವುಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ರಕ್ಷಣೆ ನೀಡಿದೆ. ಜತೆಗೆ, ಇಂತಹ ಒಂದು ಸಾಧನೆಗಾಗಿ, ಸಾಲು ಮರದ ತಿಮ್ಮಕ್ಕನವರಿಗೆ, ಆಜೀವ ಪರ್ಯಂತ ಕ್ಯಾಬಿನೆಟ್ ದರ್ಜೆಯ ಮಂತ್ರಿಯ ಸ್ಥಾನಮಾನ ನೀಡಿ ಗೌರವಿಸಿದೆ.

೨೧ನೆಯ ಶತಮಾನದಲ್ಲಿ ಸಾಲುಮರದ ತಿಮ್ಮಕ್ಕನವರ ಸಾಧನೆಯು ಇನ್ನಷ್ಟು ಪ್ರಸಿದ್ಧವಾಯಿತು. ಅಕ್ಷರಶಃ ನೂರಾರು ಸಂಘ ಸಂಸ್ಥೆಗಳು, ಬಳಗಗಳು, ಗೆಳೆಯರ ಗುಂಪು ಅವರಿಗೆ ಸನ್ಮಾನ ಮಾಡಿವೆ. ಹಲವು ಕಡೆ ಅವರನ್ನು ಗೌರವ ಅತಿಥಿಯಾಗಿ ಕರೆದು, ಪರಿಸರ ರಕ್ಷಣೆಯ ಸಂದೇಶವನ್ನು ಹರಡಿವೆ. ಸಾಲುಮರಗಳನ್ನು ಬೆಳೆಸಿದ ಇವರ ನಿಸ್ವಾರ್ಥ ಚಟುವಟಿಕೆಯು, ಅವರಿಗೆ ೨೦೧೯ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಓದುಬರಹ ಕಲಿಯದ ಗ್ರಾಮೀಣ ಮಹಿಳೆಯೊಬ್ಬರು ಪದ್ಮಶ್ರೀ ಪಡೆದದ್ದು, ಪರಿಸರ ರಕ್ಷಿಸುವ ಎಲ್ಲರಿಗೂ ಇನ್ನಷ್ಟು ಸ್ಫೂರ್ತಿ ನೀಡಿದೆ.

ಇಂದು ಕಾಲ ಬದಲಾಗಿದೆ. ಸಾಲುಮರದ ತಿಮ್ಮಕ್ಕನವರು ಬೆಳೆಸಿದ ಮರಗಳು ನೆರಳನ್ನು ನಿಡುತ್ತಲೇ ಇವೆ; ೨೦ನೆಯ ಶತಮಾನದ ತನಕ ಹೆದ್ದಾರಿಯುದ್ದಕ್ಕೂ ಸಾಲುಮರಗಳನ್ನು ಬೆಳೆಸುವುದು ಆದ್ಯ ಚಟುವಟಿಕೆಗಳಲ್ಲಿ ಒಂದು ಎನಿಸಿತ್ತು. ಆದರೆ ೨೧ನೆಯ ಶತಮಾನದ ಈಚಿನ ವರ್ಷಗಳಲ್ಲಿ, ರಸ್ತೆ ಬದಿಯ ಮರಗಳನ್ನು ಕಡಿದು, ಹಲವು ಲೇನ್‌ಗಳ ರಸ್ತೆ ನಿರ್ಮಾಣ, ಕಾಮಗಾರಿಯು ಹೆಚ್ಚು ಆದ್ಯತೆಯನ್ನು ಪಡೆಯುತ್ತಿದೆ. ಪರಿಸರ ರಕ್ಷಣೆಯ ಅಭಿಯಾನವು, ಹೊಸ ಆಯಾಮದಲ್ಲಿ ಮುಂದುವರಿದಿದ್ದು, ಕವಲುದಾರಿ ಹಿಡಿದಿರುವ ಈ ಸಂದರ್ಭದಲ್ಲಿ, ತಾವೇ ಕೈಯಾರ ನೀರೆರೆದು ೩೮೫ ಆಲದ ಮರಗಳನ್ನು ಬೆಳೆಸಿದ ಸಾಲುಮರದ ತಿಮ್ಮಕ್ಕನ ಕೈಂಕರ್ಯವು ಒಂದು ಅದ್ಭುತ ಕೆಲಸ ಎಂದು ಗೋಚರವಾಗುತ್ತಿದೆ ಮತ್ತು ಆದರ್ಶಪ್ರಾಯವಾಗಿ ಕಾಣಿಸುತ್ತಿದೆ. ಕಳೆದ ವಾರ ನಮ್ಮನ್ನಗಲಿದ ಸಾಲುಮರದ ತಿಮ್ಮಕ್ಕ, ಈ ಕಾಲಮಾನದ ಎಲ್ಲಾ ಪರಿಸರ ಹೋರಾಟಗಾರರಿಗೆ ಸ್ಫೂರ್ತಿ ತುಂಬಲಿ ಎಂದು ಆಶಿಸೋಣ.

ತಿಮ್ಮಕ್ಕನವರ ಜೀವನ ಸಾಧನೆ :

೧೯೧೧ : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಕ್ಕೇನಹಳ್ಳಿಯಲ್ಲಿ ಜನನ.

*ಹುಲಿಕಲ್ ಗ್ರಾಮದ ಬಿಕ್ಕಲು ಚಿಕ್ಕಯ್ಯನವರೊಂದಿಗೆ ವಿವಾಹ.

*೧೯೫೦-೬೦ : ಹುಲಿಕಲ್ ಮತ್ತು ಕುದೂರು ನಡುವಿನ ರಸ್ತೆಯುದ್ದಕ್ಕೂ ಗಿಡ ನೆಟ್ಟು, ನೀರೆರೆದು ಪೋಷಿಸುವ ಕಾಯಕ; ಗಿಡಗಳನ್ನೇ ಮಕ್ಕಳೆಂದು ತಿಳಿದು, ರಕ್ಷಣೆ ನೀಡಿದರು.

*೧೯೭೦-೯೦: ಒಟ್ಟು ಸುಮಾರು ೪೦೦ ಆಲದ ಮರಗಳನ್ನು ರಸ್ತೆಯುದ್ದಕ್ಕೂ ಬೆಳೆಸಿದ ಸಾಧನೆ; ಆದರೆ ಇವರ ಸಾಧನೆಯು ಅಲ್ಲಿಯ ತನಕ ಬಹುಮಟ್ಟಿಗೆ ಅಜ್ಞಾತವಾಗಿಯೇ ಇತ್ತು.

*೧೯೯೧: ತಿಮ್ಮಕ್ಕನವರ ಪತಿ ಚಿಕ್ಕಯ್ಯನವರ ನಿಧನ. ತಿಮ್ಮಕ್ಕನವರು ಮರಗಳ ಪೋಷಣೆಯನ್ನು ಮುಂದುವರಿಸಿದರು.

*೧೯೯೪: ಮೊದಲ ಬಾರಿ ರಾಜ್ಯ ಮಟ್ಟದ ದಿನಪತ್ರಿಕೆಯಲ್ಲಿ ಸಾಲುಮರದ ತಿಮ್ಮಕ್ಕನ ಸಾಧನೆಯ ಸಚಿತ್ರ ವರದಿ

*೧೯೯೬: ರಾಷ್ಟ್ರೀಯ ಪೌರ ಸನ್ಮಾನ

*೧೯೯೭ : ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ

*ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿವಿಧ ಸಂಘ ಸಂಸ್ಥೆಗಳಿAದ ಗೌರವ, ಪ್ರಶಸ್ತಿ, ಸನ್ಮಾನ (ಅವರು ಪಡೆದ ಗೌರವಗಳು ಪ್ರಶಸ್ತಿಗಳ ಸಂಖ್ಯೆ ಅಪಾರ.)

*೨೦೦೬: ಗಾಡ್‌ಫ್ರೇ ಫಿಲಿಪ್ಸ್ ಬ್ರೇವರಿ ಪ್ರಶಸ್ತಿ

*೨೦೧೦: ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪುರಸ್ಕಾರ

*೨೦೧೪: ಬಿಬಿಸಿ ಸಂಸ್ಥೆಯಿAದ, ವಿಶ್ವದ ೧೦೦ ಪ್ರಮುಖ ಮಹಿಳೆಯರ ಪಟ್ಟಿಯಲ್ಲಿ ತಿಮ್ಮಕ್ಕನವರ ಹೆಸರು ಸೇರ್ಪಡೆ

*೨೦೧೯ : ಕೇಂದ್ರ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ

*೨೦೨೨: ರಾಜ್ಯ ಸರಕಾರದಿಂದ ತಿಮ್ಮಕ್ಕನವರಿಗೆ ಕ್ಯಾಬಿನೆಟ್ ಮಂತ್ರಿಯ ಖಾಯಂ ಸ್ಥಾನಮಾನ.


  • ಶಶಿಧರ ಹಾಲಾಡಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading