2025 -26 ನೇ ಸಾಲಿನ ಎಸ್ ಎಸ್ ಎಲ್ ಸಿ /ಪಿಯುಸಿ ಪರೀಕ್ಷೆಗಳಿಂದಲೇ ಹೊಸ ನಿಯಮ ಬಂದಿದೆ. ತೇರ್ಗಡೆಯಾಗಲು ಕನಿಷ್ಠ ಅಂಕವನ್ನು 35 ರಿಂದ 33ಕ್ಕೆ ಇಳಿಸಲಾಗಿದೆ ಎಂದು ಪ್ರಕಟಣೆ ಇದೆ. ಅಂಕಗಳ ಕುರಿತು ದೇವರಾಜ ಚಾರ್ ಅವರ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ನೆರೆಯ ರಾಜ್ಯಗಳಲ್ಲಿ ಮಕ್ಕಳು ತೇರ್ಗಡೆಯಾಗಲು ಕನಿಷ್ಠ 33 ಅಂಕವಿದೆಯಂತೆ. ತಾರತಮ್ಯ ನಿವಾರಣೆಗೆ ಅದೇ ಕ್ರಮವನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವರ ಸಮಜಾಯಿಸಿ ನೀಡಿದ್ದಾರೆ.
1947ರ ಸಮಯದಲ್ಲಿ ಜನರಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ಕನಿಷ್ಠ 35 ಅಂಕ ತೆಗೆದುಕೊಂಡರೆ ಸಾಕಿತ್ತು. ಅವರು ಮುಂದಿನ ವಿದ್ಯಾಭ್ಯಾಸ ಅಥವಾ ಹುದ್ದೆ ಹಿಡಿಯಲು ಅವಕಾಶವಿತ್ತು.
ಈವಾಗಿನ ಸ್ಥಿತಿಯೇ ಬೇರೆ. ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ. ಕೆಲವು ಮಕ್ಕಳು ತೊಂಬತ್ತು ಅಂಕಗಳನ್ನು ತೆಗೆಯುವ ಸಾಮರ್ಥ್ಯವಿದೆ. ಶಾಲೆಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದ ಶಿಕ್ಷಕರಿದ್ದಾರೆ. ಸೌಲಭ್ಯಗಳು ಹೆಚ್ಚಿವೆ. ಕನಿಷ್ಠ ಪ್ರಮಾಣವನ್ನು ಹೆಚ್ಚಿಸ ಬೇಕೆ ಹೊರತು, ಕಡಿಮೆ ಮಾಡುವುದು ಸರಿಯಲ್ಲ. ಈ ಅಂಕಗಳನ್ನು ತೆಗೆದುಕೊಂಡು ಮಕ್ಕಳು ಏನು ಮಾಡಬೇಕು?ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ.
ಮುಂದುವರೆದ ಸಮಾಜದವರ ಮಕ್ಕಳ ಜತೆ, ಹೀಗೆ ಹಿಂದುಳಿದವರ ಮಕ್ಕಳು ಯಾವ ರೀತಿ ಪೈಪೋಟಿಯನ್ನು ಎದುರಿಸುತ್ತಾರೆ. 50 ಅಂಕಗಳಿಂದ ಕಡಿಮೆ ತೆಗೆದವರು ಮೂರನೇ ದರ್ಜೆ ಸೇರುತ್ತಾರೆ. ಈಗಿನ ಕಾಲದಲ್ಲಿ ಮೊದಲನೇ ದರ್ಜೆಗೆ ಬೆಲೆ ಇಲ್ಲ. ಶೇಕಡಾ 85 ಅಂಕಗಳಿಗಿಂತ ಹೆಚ್ಚು ಅಂಕ ಪಡೆದರೆ ಮಾತ್ರ ಸಮಾಜದಲ್ಲಿ ಬೆಲೆ ಇದೆ. ಮುಂದೆ ಮುಂದೆ ಹೋಗಬೇಕೇ ಹೊರತು ಹಿಂದೆ ಹಿಂದೆ ಹೋಗಬಾರದು.
- ದೇವರಾಜಚಾರ್ – ಮೈಸೂರು.
