ಪೊದೆಯಲ್ಲಿ ಸರ ಸರನೇ ಯಾರೋ ನಡೆದ ಸದ್ದು ಕೇಳಿಸಿತು.ವೇಗದಿಂದ ನಡೆಯುತ್ತಿದ್ದ ನನ್ನನ್ನು ಪ್ರಕಾಶ್ ಸರ್ ತಿವಿದು ನಿಲ್ಲಿಸಿದರು. ನಮ್ಮ ಎದೆಯ ಸದ್ದು ನಮಗೆ ಕೇಳಿಸುವಷ್ಟು ಹೃದಯ ಬಡಿದುಕೊಂಡಿತು, ಆ ಸದ್ದು ಮತ್ಯಾರದು ಅಲ್ಲ….ಮುಂದೆ ಓದಿ ಗಿರಿವಾಲ್ಮೀಕಿ ಅವರ ಕಾಡಿನ ಅನುಭವ.
ಆಗಷ್ಟೇ ಕಳಚಿಬಿದ್ದಂತೆ ಕಾಣುವ ಮುಂಜಾವು,ಯಾವ ತೆರೆಯಿಲ್ಲದೇ ಕೆರೆಯ ಮೇಲೆ ಏಳುತ್ತಿರುವ ಚುಮುಚುಮು ಮಂಜಿನ ಮೋಡ. ಚಿತ್ರ ಬಿಡಿಸಿಟ್ಟಂತೆ ಕಾಣುವ ಅಂಕುಡೊಂಕಾದ ಕಾಡು ದಾರಿ.ಕಾಲಿಟ್ಟಿಲ್ಲೆಲ್ಲಾ ಪಾದವನ್ನು ನೆಕ್ಕಿ ತೊಳೆದು ಓಡುವ ಸ್ಪಟಿಕದಂತ ಅಚ್ಚ ಬೆಳ್ಳಿ ನೀರು. ನೀರಿನಡಿಯಲಿ ಅಂಗಾತ ಮಲಗಿ ವಯ್ಯಾರದಿಂದ ಬಳಕುವ ಕೊಳೆಯದ ಹಳದಿಯಾಗದ ಹಸಿ ಹಸಿರು ಹುಲ್ಲು ಯಾರು ನನ್ನನ್ನು ತುಳಿಯುವುದಿಲ್ಲವೆಂದು ಧೈರ್ಯವಾಗಿ ಮಲಗಿತ್ತು. ದೂರದಿಂದ ಯಾರದರೂ ಈ ಭೌಗೋಳಿಕ ದೃಶ್ಯಾವಳಿಗಳನ್ನು ನೋಡಿದರೆ ಯಾರೋ ನೇರವಾಗಿ ಸ್ವರ್ಗದಿಂದ ಧರೆಗಿಳಿದು ನೀರಿನಡಿಯಲ್ಲಿ ಹಸಿರು ಚಾಪೆ ಹಾಸಿದಂತೆ ಕಾಣುವ ಮಾಯಕದಂತ ಅಪರೂಪದ ದೃಶ್ಯ.
ಪ್ರಕಾಶ್ ಎಸ್ ಎಚ್ ಸರ್ ನನಗೆ ಬಂಡೀಪುರದ Sniffer dog ರಾಣನ ಜೊತೆ ಕಳೆದ 8 ವರ್ಷಗಳ ಅನುಭವವನ್ನು ಹೇಳುತ್ತಿದ್ದರು.ನಾವು ತನ್ಮಯತೆಯಿಂದ ಕೇಳುತ್ತಾ ಕಾಡು ದಾರಿ ಸವೆಸುತ್ತಿದ್ದೆವು. ಬಿ.ಜಿ.ಎಲ್ ಸ್ವಾಮಿಯವರ “ಹಸಿರು ಹೊನ್ನು” ಕೃತಿಯ ಥರ ನಮ್ಮ ಕಾಡಿನ ಪ್ರಯಾಣ ಆರಂಭವಾಗಿತ್ತು. ನಾನು ಪ್ರಕಾಶ್ ಸರ್ ಇಲ್ಲಿ ಕಾಲಿಟ್ಟಗಾಲೇ ವಾತಾವರಣದ ಮಸುಕು ಬೆಳಕು ಅಸುನೀಗಿ ಗೋವೆಯ ಕಾಡು ದೀರ್ಘ ಮೌನ ಧರಿಸಿ ದಟ್ಟ ಕತ್ತಲಿನಲ್ಲಿ ಲೀನವಾಗತೊಡಗಿತು. ನಮಗಿಂತ ದೂರದಲ್ಲಿ ಹರಡಿಕೊಂಡಿದ್ದ ಆಗಸದ ಕತ್ತಲ ಛಾಯೆಯನ್ನ ಹೊತ್ತುಕೊಂಡು ಬಿಮ್ಮನೇ ಕುಳಿತಿತ್ತು. ಬೆಳಕು ಅಸುನೀಗುವ ಮುಂಚೆಯೇ ನಮ್ಮನ್ನೇ ನುಂಗುವಂತೆ ಮೋಡವೊಂದು ಆ ಸಂಜೆಯ ಕಾಡಿಗೆ ಬಂದಂತ್ತಿತ್ತು. ನಮ್ಮ ಕಾಲ ಬಳಿ ಅನಾಥವಾಗಿ ಬಿದ್ದಿದ್ದ ರಸ್ತೆಯ ಇಕ್ಕೆಲದಲ್ಲಿ ತಿಳಿ ಗುಲಾಬಿ ಬಣ್ಣದ ಆರ್ಕಿಡ್ಗಳು ಮೋಡದೊಟ್ಟಿಗೆ ಸೇರಿದ ಮಂಜಿನ ಗಾಳಿಯ ಹಗುರಾದ ದಾಳಿಗೆ ತಲೆದೂಗುತ್ತಿದ್ದವು.
ಅಲ್ಲಿಂದ ಸುಮಾರು ಅರ್ಧ ಗಂಟೆಯ ತರುವಾಯ ಗೋವೆಯ ಪಶ್ಚಿಮ ಘಟ್ಟದ ಮಳೆಕಾಡು ಪ್ರದೇಶದಲ್ಲಿ ದಟ್ಟ ಮಂಜು ಮಿಶ್ರಿತ ಕತ್ತಲಾವರಿಸಿತು.ನಾನು ಪ್ರಕಾಶ್ ಸರ್ ಲಘುಬಗೆಯಿಂದ ಕಾಡಿನ ಆಚೆಗೆ ಬರಲು ಯತ್ನಿಸುತ್ತಿದ್ದರೆ ನಮ್ಮ ಹಿಂಬದಿಯಲ್ಲಿ ಕ್ಷೀಣ ಸ್ವರದಲ್ಲಿ ಇರುಳು ಹಕ್ಕಿಗಳ ಕೂಗು ಮಾರ್ದನಿಸುತ್ತಿತ್ತು. ಹೋಗುವ ದಾರಿಯ ಕಲ್ಲು ಪ್ರದೇಶಗಳ ಮೇಲೆ ಕರಡಿಯ ವಿಸರ್ಜನೆ ಕಂಡು ನನಗೆ ಮಾತ್ರ ಜೀವ ಬಾಯಿಗೆ ಬಂದಿತ್ತು.
ಹರಡಿಕೊಂಡಿದ್ದ ಗುಡ್ಡಗಾಡು ಪ್ರದೇಶದ ಪೊದೆಯಲ್ಲಿ ಸರ ಸರನೇ ಯಾರೋ ನಡೆದ ಸದ್ದು ಕೇಳಿಸಿತು.ವೇಗದಿಂದ ನಡೆಯುತ್ತಿದ್ದ ನನ್ನನ್ನು ಪ್ರಕಾಶ್ ಸರ್ ತಿವಿದು ನಿಲ್ಲಿಸಿದರು. ಸುತ್ತಲು ಬಿಳಿ ಬಿಳಿ ಮಂಜು. ಕೇವಲ ಎರಡು- ಮೂರು ಅಡಿಯ ಅಂತರದಲ್ಲಿ ನಮ್ಮಿಂದ ಯಾವ ವಸ್ತು,ಗಿಡ-ಮರ,ಹಾದಿ ಏನೂ ಕಾಣಿಸಲೊಲ್ಲದು. ಕತ್ತಾಲಾಗುತ್ತಿದೆ. ಸದ್ದು ಬಂದ ಕಡೆ ಗಮನಿಸಿದರೆ ಅದು ಕರಡಿಯೋ,ಹುಲಿಯೋ,ಕಾಟಿಯೋ ಬಲ್ಲವರಾರು.? ನಿಂತಲ್ಲೇ ಉಸಿರಾಟದ ವೇಗ ಜೋರಾಯ್ತು. ನಮ್ಮ ಎದೆಯ ಸದ್ದು ನಮಗೆ ಕೇಳಿಸುವಷ್ಟು ಹೃದಯ ತೌಡು ಕುಟ್ಟುತ್ತಿದ್ದರೆ ಅತ್ತ ಪೊದೆಯಲ್ಲಿ ಆಕೃತಿಯೊಂದು ನಮ್ಮತ್ತಲೇ ಧಾವಿಸಿ ಬರುವಂತೆ ಸದ್ದು ಜೋರಾಗತೊಡಗಿತು. ಮೃಗದ ಹೆಜ್ಜೆ ನಮಗೆ ಸಮೀಪವಾದಂತೆಲ್ಲಾ ಸದ್ದು ಮಾಡುತ್ತಿದ್ದ ಆಕೃತಿಗೆ ಸ್ಪಷ್ಟತೆ ದೊರಕತೊಡಗಿತು.
ಅದು ನಮ್ಮನ್ನು ದೂರದಿಂದಲೇ ಗಮನಿಸಿಕೊಂಡು, ಮಂಜಿನ ಕಣ್ಣಾಮುಚ್ಚಾಲೆಯ ಪರಿಸರದಲ್ಲಿ ಹೊಂಚು ಹಾಕಿ ಆಯಕಟ್ಟಿನ ಕಲ್ಲಿನ ಜಾಗದಲ್ಲಿ ಘಂಟೆಗಟ್ಟಲೇ ಪಳಗಿದ ಬೇಟೆ ಗಾರನಂತೆ ಅಚ್ಚ ಬಂಗಾರ ಬಣ್ಣದ ಹಳದಿ ಹೊದಿಕೆಯ ಮೇಲೆ ಕಪ್ಪು ಚುಕ್ಕೆಗಳಿರುವ ದೈತ್ಯ ಕಟ್ಟುಮಸ್ತಾದ ಗಂಡು ಚಿರತೆ ನಮ್ಮಿಬ್ಬರಿಗೆ ಎದುರಾಗಿತ್ತು.ಅದರ ಕಣ್ಣುಗಳಲ್ಲಿ ಯಾವ ಭಯದ ಲವಲೇಶವಿರಲಿಲ್ಲಾ.
ಆ ನಿರ್ಭಿತ ಮೃಗವೊಂದರ ಹಠಾತ್ ಆಗಮನದಿಂದ ನಾವು ಪಾರಾಗಲು ಆ ಸ್ವರ್ಗದಂತ ಕಾಡಿನಲ್ಲಿ ಸುಮ್ಮನೆ ನಿಂತುಕೊಂಡೆವು.ಇಬ್ಬರು ದಿನ ನಿತ್ಯವೂ ಕಾಡಿನಲ್ಲಿ ತಿರುಗುವುದರಿಂದ ನಮ್ಮೊಳಗೆ ಮೃಗ ಸಹಜ ಎಚ್ಚರಿಕೆ ಯಾವಾಗಲೂ ಜೀವಂತವಾಗಿರುತ್ತದೆ. ಆದರೆ ಪ್ರಕೃತಿಯಲ್ಲಿ ಕೆಲವೊಂದು ಅನಿರೀಕ್ಷಿತ ಘಟನೆಗಳು ಮನುಷ್ಯ ತರ್ಕಕ್ಕೂ ಮೀರಿ ಘಟಿಸಿ ಬಿಡುತ್ತವೆ. ಮುಂದೆ ಆಗುವ ಹೋರಾಟದಲ್ಲಿ ಜಯ ಯಾರದ್ದೆಂದು ನಿಮಗೆ ಬಿಡಿಸಿ ಹೇಳಬೇಕಿಲ್ಲಾ.
ಕಾಡಿನ ಬದುಕು ಇಲ್ಲಿ ಕರ್ತವ್ಯ ನಿರ್ವಹಿಸುವ ಹಸಿರು ಯೋಧರದ್ದು ಯಾವಗಾಲೂ ಕತ್ತಿಯ ಅಲಗಿನ ಮೇಲಿನ ನಡಿಗೆ.ದೂರದಿಂದ ಎಲ್ಲೋ ಕೂತು ಕಾಡನ್ನು ಇಲ್ಲಿಯ ಸವಾಲುಗಳನ್ನು ಯಾರಿಗೂ ಎಂದಿಗೂ ಎದುರಿಸಲು ಸಾಧ್ಯವಿಲ್ಲ. ಕಾಡೆಂದರೆ ಹಾಗೇ ಒಂದು ಕಡೆ ಕ್ರೌರ್ಯ ಮತ್ತೊಂದೆಡೆ ಜೀವ ವೈವಿಧ್ಯತೆಯ ಕೂಡು ಕುಟುಂಬ. ಹೀಗೆಲ್ಲಾ ಇಬ್ಬರು ಧೇನಿಸುತ್ತಲೇ ಕಾಡಿನ ಫಾಸಲೆಯಿಂದ ಆಚೆ ಬಂದು ಜೀಪು ಹತ್ತಿದ ಕೂಡಲೇ ಭಗವಾನ್ ಮಹಾವೀರ ರಾಷ್ಟ್ರೀಯ ಉದ್ಯಾನವನದ ಕಣಿವೆಯ ಆಳದಿಂದ ಮುಸುವಾಗಳು ಅರಚತೊಡಗಿದವು. ಸುತ್ತಲೂ ಥಂಡಿ ಹೆಚ್ಚಾಗಿ ಕತ್ತಲು ಪೂರ್ಣವಾಗಿ ಆವರಿಸಿತು. ನಮ್ಮ ಜೀಪು ಕುಂಬಾರವಾಡದ ಕಾಡನ್ನು ಮಳೆಯಲ್ಲಿ ಸೀಳುತ್ತಾ ಕತ್ತಲೆಯಲ್ಲಿ ಅಂತರ್ಧಾನವಾಯಿತು.
- ಗಿರಿವಾಲ್ಮೀಕಿ
