18-19 ರ ಪ್ರಾಯದಲ್ಲಿ ತರುಣರ ಮೇಲೆ ಬೀಳುವ ಮನೆಯ ಜವಾಬ್ದಾರಿ ಹಾಗೂ ಅದನ್ನು ಎದುರಿಸಲಾಗದೆ ಮಾನಸಿಕವಾಗಿ ಕುಗ್ಗುವಿಕೆಯ ಕುರಿತು ಯುವ ಲೇಖಕ ವಿಕಾಸ್. ಫ್. ಮಡಿವಾಳರ ಅವರು ಬರೆದಿರುವ ಒಂದು ಚಿಂತನ ಲೇಖನ ತಪ್ಪದೆ ಓದಿ…
” ನಿಮಗೆ ನನ್ನ ನೋವು ಅರ್ಥವಾಗುವುದಿಲ್ಲ “. ಹದಿನೆಂಟು – ಹತ್ತೊಂಬತ್ತರ ತರುಣ ಪಾರ್ಕ್ ಅಲ್ಲಿ ಕೂತಾಗ ಹೇಳಿದ ಮಾತಿದು. ಸಾಮಾನ್ಯವಾಗಿ ಎಲ್ಲರ ಜೊತೆ ಬೆರೆಯುವ ನನಗೆ ಆ ದಿನ ಏಕಾಂತದಲ್ಲಿರಬೇಕು ಅನಿಸಿತ್ತು. ಹೀಗಾಗಿ ಇಳಿ ಸಂಜೆಯ ವೇಳೆಯಲ್ಲಿ ನೆಮ್ಮದಿಯನ್ನು ಹುಡುಕುತ್ತ ಪಾರ್ಕ್ ಕಡೆ ನಡೆದೆ. ಅಲೆಮಾರಿಯಂತಿದ್ದ ನನ್ನ ಜೀವನಕ್ಕೆ ಕೊನೆಯೇ ಇಲ್ಲವೆಂದೇನಿಸುತ್ತದೆ. ಸ್ವಲ್ಪ ಹೊತ್ತು ಓಡಾಡಿ ಧನಿವಾರಿಸಿಕೊಳ್ಳುತ್ತಿದ್ದ ನನಗೆ ದೂರದಲ್ಲಿ ಯಾರೊ ಗೋಚರವಾದರು. ಸೂರ್ಯ ಮಾಯವಾಗಿ ಒಂದೆರಡು ನಿಮಿಷವಾಗಿತ್ತು. ಮೋಡ ಕವಿದ ವಾತಾವರಣಕ್ಕೆ, ತಂಪು ಗಾಳಿಯ ಹಿತ ಅನುಭವದಲ್ಲಿ, ಜಾರಿದ ಮನಸ್ಸನ್ನು ಹಿಡಿದು ಏಕಾಂತದಲ್ಲಿದ್ದ ನನಗೆ, ಆ ವ್ಯಕ್ತಿ ನನ್ನೆಡೆಗೆ ಬರುತ್ತಿದ್ದಾನೆ ಎಂದು ತಿಳಿಯಿತು.
ಆತನನ್ನು ಒಂದೆರಡು ಸಾರಿ ನೋಡಿದ್ದು ಬಿಟ್ಟರೆ ಹೆಚ್ಚು ಹೇಳಿಕೊಳ್ಳುವಂತ ಸಂಬಂಧವೇನು ಇರಲಿಲ್ಲ. ಮುಖದಲ್ಲಿ ಅಂತಹ ತೇಜಸ್ಸು ಕಾಣಲಿಲ್ಲವಾದ್ದರಿಂದ ಯಾವುದೊ ತೊಂದರೆಯಲ್ಲಿದ್ದಾನೆ ಎಂದು ನನಗನಿಸಿತು. ಆದರೆ ನನ್ನಿಂದ ಏನು ಅವಶ್ಯಕತೆ ಇದೆ ಎಂದು ತಿಳಿಯುವ ಕಾತುರದಲ್ಲಿ ನಾನೆ ಅವನನ್ನು ವಿಚಾರಿಸಿದೆ. ಎರಡು ನಿಮಿಷ ಆತ ಏನು ಹೇಳಲಿಲ್ಲ. ಗೊಂದಲದಲ್ಲಿದ್ದ ಆತನಿಗೆ ನನ್ನ ಮಾತು ಹಿಡಿಸಲಿಲ್ಲವೆಂದುಕೊಂಡು ಮನೆಗೆ ಹೋಗಲು ನಿರ್ಧರಿಸಿದೆ. ಆಗಲೆ ಆತ ಹೇಳಿದ ” ನಿಮಗೆ ನನ್ನ ಮಾತು ಅರ್ಥವಾಗುವುದಿಲ್ಲ ಹೋಗಿ “.

ಫೋಟೋ ಕೃಪೆ : dreamstime
ಕಣ್ಣಲ್ಲಿ ಒಂದೆರಡು ಹನಿ ನೀರು ಬರುತ್ತಾ ಇತ್ತು. ಕೈಗಳು ನಡುಗುತ್ತಿದ್ದವು ಯಾರಾದರು ನನ್ನ ನೋವು ಕೇಳುತ್ತಾರೆಯೆ ಎಂದು ಮನಸ್ಸು ಹವಣಿಸುತ್ತಿತ್ತು. ಇದನೆಲ್ಲ ನೋಡಿದ ನನಗೆ ಕಾಣಿಸಿದ್ದು ಒಂದೆ ದಾರಿ, ಅವನನ್ನು ಸಮಾಧಾನಪಡಿಸುವುದು. ಕೆಲ ಹೊತ್ತುಗಳ ನಮ್ಮಿಬ್ಬರ ಮಾತುಗಳಿಂದ ಅವನ ಮನಸ್ಸು ಮೊದಲಿನಂತಾಯಿತು. ಖುಷಿಯಿಂದ ನನಗೆ ಧನ್ಯವಾದ ತಿಳಿಸಿದ.
ಈಗ ನನಗೆ ಕಾಡಿದ ಏಕೈಕ ಪ್ರಶ್ನೆ ಎಂದರೆ ಅದು ಒಂದೆ. ಇನ್ನೂ ಬದುಕು ಎಂದರೆ ಏನು ಅಂತ ಅರಿಯದ ಮುಗ್ದ ಮನಸುಗಳು ಮಾನಸಿಕವಾಗಿ ಕುಗ್ಗುವುದು ಏಕೆ? 18-19 ರ ತರುಣ, ನನ್ನ ನೋವು ನಿನಗೆ ಅರ್ಥ ಆಗುವುದಿಲ್ಲ ಎಂದಾಗ ಆತನ ಮನಸ್ಥಿತಿಯಾದರು ಏನಿರುತ್ತದೆ ಎಂದು ಸ್ವಲ್ಪ ಯೋಚಿಸಿ. ಈಗಲೆ ಜೀವನದಲ್ಲಿ ತುಂಬಾ ನೋವು ಅನುಭವಿಸಿದ್ದೆನೆ ಎಂದು ತಿಳಿದ ಅವರಿಗೆ ನಿಜವಾಗಿಯೂ ನೋವಾಗಿದೆಯೆ.
ಈ ಪ್ರಶ್ನೆಗೆ ಸಾವಿರ ಉತ್ತರವಿದೆ. ಆದರೆ ಎಲ್ಲದರ ಮೂಲ ಒಂದೇಯಾಗಿದೆ. ಅದೇನೆಂದರೆ ಅವರಿಗೆ ಜೀವನದ ಬಗ್ಗೆ ಅರ್ಥವಾಗಿಲ್ಲವೆಂಬುದು. ಹಾಗಾದರೆ ನಿಜವಾದ ನೋವು ಎಂದರೇನು.
ಕಟ್ಟಿಕೊಂಡ ಗಂಡ ಬಿಟ್ಟು ಹೋದಮೇಲೆ ಎಳೆಯ ಮಕ್ಕಳನ್ನು ಹೇಗೆ ಸಾಕುವುದು ಎಂದು ತಾಯಿ ಕೊರಗುವಳಲ್ಲ ಅದು ನಿಜವಾದ ನೋವು. ಹಗಲಿರುಳು ದುಡಿದರು ಏನು ಗೀಟದೆ ಮಲಗಿದಾಗ ಮುಂದಿನ ಜೀವನವೇನು ಎಂದು ಚಿಂತಿಸುವ ತಂದೆಯ ನೋವು, ಮೊಮ್ಮಕ್ಕಳು ಬರುವ ವಯಸ್ಸಾದರೂ ಮಗನು ನಮ್ಮನ್ನು ನೋಡದೆ ಇದ್ದರೂ, ಸದಾ ಅವನಿಗೆ ಒಳ್ಳೆಯದನ್ನು ಬಯಸುವ ಪಾಲಕರ ನೋವು, ವೃದ್ಧ ತಂದೆ ತಾಯಿಗಳನ್ನು ಸಾಕಲು ತನ್ನ ಎಲ್ಲ ಕನಸನ್ನು ನುಚ್ಚು ನೂರು ಮಾಡಿಕೊಂಡು ಕೆಲಸಕ್ಕಾಗಿ ಹುಡುಕುತ್ತ, ಯಾರೆದುರು ಹೇಳದೆ ಒಳಗೊಳಗೆ ಕೊರಗುವ ಮಗನ ನೋವು. ಇವುಗಳು ಬದುಕಿನ ನಿಜವಾದ ನೋವುಗಳು.
ಇನ್ನೂ ಜೀವನ ಏನೆಂದು ತಿಳಿಯದ ಆ ಹುಡುಗ, ನನ್ನ ನೋವು ನಿಮಗೆ ಅರ್ಥವಾಗುವುದಿಲ್ಲ ಎಂದಾಗ ನನಗೆ ನಾಚಿಕೆಯೆನಿಸಿತು. ಈಗಲೆ ಅವನಿಗೆ ಜೀವನವನ್ನು ಎದುರಿಸಲಾಗುತ್ತಿಲ್ಲವೆಂದರೆ ಮುಂದೆ ಆತನ ಜೀವನವನ್ನು ನೆನೆಸಿಕೊಂಡರೆ ಭಯವೆನಿಸುತ್ತದೆ. ಇದು ಆತನದೊಂದೆ ತೊಂದರೆಯಲ್ಲ. ಆತನಂತಹ ಸಾವಿರಾರು ತರುಣ ತರುಣೆಯರ ತೊಂದರೆಯಾಗಿದೆ.
18-19 ರ ಪ್ರಾಯ ನಮ್ಮ ಜೀವನವನ್ನು ನಾವೆ ನಿರೂಪಿಸಿಕೊಳ್ಳುವಂತ ವಯಸ್ಸು. ಸದಾ ಖುಷಿಯಿಂದ ಇರುತ್ತಿದ್ದ ನಮಗೆ ಈ ವಯಸ್ಸಿನಲ್ಲಿ ಕೆಲವು ಅಡಚಣೆಗಳು ಬರುತ್ತವೆ. ಜವಾಬ್ದಾರಿಗಳು ಹೆಗಲ ಮೇಲೆ ಬಂದಿದೆ ಎಂದು ನೋವು ಪಡುವುದಕ್ಕಿಂತ ಅವುಗಳನ್ನು ಎತ್ತಿಕೊಂಡು ಸಾಗುವುದೆ ನಿಜವಾದ ಜೀವನ. ಇನ್ನೂ ಮುಂದೆಯಾದರೂ ನೋವನ್ನು ನಲಿವಾಗಿ ಪರಿವರ್ತಿಸೋಣ…
- ವಿಕಾಸ್. ಫ್. ಮಡಿವಾಳರ – ಯುವ ಲೇಖಕ
