ಬ್ಯೂಟಿ ಎಂದರೆ ಮೇಲ್ನೋಟವೇ? ಕಪ್ಪು ಬಿಳಿ ಬಣ್ಣದ ಕುರಿತು ನನ್ನ ಅನುಭವದ ಒಂದು ಸಣ್ಣಕತೆಯನ್ನ ಓದುಗರ ಮುಂದೆ ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ….
ನಾನು ಚಿಕ್ಕವಳಿದ್ದಾಗ ಸಂಬಂಧಿಕರು
“ಅಯ್ಯ… ಯ್ಯ.. ನಿನ್ನ ಮಗಳು ಎಷ್ಟು ಕಪ್ಪಗಿದ್ದಾಳೆ… ನಾಳೆ ಇವಳನ್ನ ಯಾರು ಮದುವೆ ಆಗ್ತಾರೆ”…ಅಂದಾಗ ಅಮ್ಮನಿಗೆ ಎಲ್ಲಿಲ್ಲದ ಆತಂಕ.
ಹೆತ್ತವಳಿಗೆ ಹೆಗ್ಗಣ ಮುದ್ದಾದರೂ ಹೊರಗಿನವರ ಮಾತು ಸತ್ಯವಾದರೆ ಎನ್ನುವ ಭಯ ಅಮ್ಮನಿಗಿತ್ತು. ಹೇಗಾದರೂ ಮಾಡಿ ನನ್ನ ಮಗಳನ್ನ ಬೆಳ್ಳಗೆ ಮಾಡಬೇಕು… ಆಡಿಕೋಳ್ಳೋರ ಬಾಯಿಗೆ ಬೀಗ ಜಡಿಬೇಕು ಅನ್ನೋ ಹಠಕ್ಕೆ ಬಿದ್ದಳು.
ದಿನ ಅವರಿರವರ ಬಾಯಲ್ಲಿ ಮನೆ ಮದ್ದು ಕೇಳಿ ಬಂದು ನನ್ನ ಮೇಲೆ ಪ್ರಯೋಗ ಮಾಡುತ್ತಿದ್ದಳು. ಒಂದು ದಿನ ಅಮ್ಮನ ಗೆಳತಿ ಮಳಿಯಾಳಿಯೊಬ್ಬರು ಅರಶಿಣ, ಎಣ್ಣೆ, ಕಡಲೆ ಹಿಟ್ಟು ಹಾಕಿ ಚನ್ನಾಗಿ ಕಲಸಿ ಮುಖಕ್ಕೆ ಹಚ್ಚಿ ಕಾಂತಿ ಬರುತ್ತೆ….ಅಂತ ಫ್ರೀ ಅಡ್ವೈಸ್ ಕೊಟ್ರು. ಅಮ್ಮ ಬಿಡ್ತಾಳಾ.. ಒಟ್ಟಿನಲ್ಲಿ ನನ್ನ ಮಗಳು ಬೆಳ್ಳಗೆ ಲಕಾ… ಲಕಾ… ಅಂತ ಹೊಳಿಬೇಕು ಅನ್ನೋದಷ್ಟೇ ಅವಳ ತಲೆಯಲ್ಲಿ, ಅದಕ್ಕಾಗಿ ಎಲ್ಲದಕ್ಕೂ ಸಿದ್ದಳಿದ್ದಳು.
ಒಂದು ದಿನ ಬಟ್ಟಲಿನಲ್ಲಿ ಎಲ್ಲ ರೆಡಿ ಮಾಡಕೊಂಡು ಕಾಯ್ತಾ ನಿಂತಿದ್ದಳು. ಶಾಲೆಗೆ ಬೇರೆ ತಡವಾಯ್ತು ಅಂತ ಓಡಾಡಿ ಸ್ನಾನಕ್ಕೆ ಹೊರಟಿದ್ದೆ, ನನ್ನನ್ನು ತಡೆದು ಅರಿಶಿಣ ಬಟ್ಟಲು ತಂದಳು. ತಾಮ್ರದ ಕೊಡಕ್ಕೆ ಹುಣಸೆಹಣ್ಣು ಹಾಕಿ ತಿಕ್ಕಿದಂತೆ ನನ್ನ ಮುಖಕ್ಕೆ ಅರಿಶಿಣ ಹಾಕಿ ತಿಕ್ಕೋಕ್ಕೆ ಶುರು ಮಾಡಿದ್ಲು. ಅರಶಿಣ ತಿಕ್ಕಿ ತೊಳೆದ ಮೇಲೆ ಬೆಳ್ಳಗೇನೂ ಆಗ್ಲಿಲ್ಲ. ಬದಲಾಗಿ ಹಳದಿ ಬಣ್ಣ ಬಂತು. ಅದೇ ಮುಖ ಇಡ್ಕೊಂಡು ಶಾಲೆಗೆ ಹೋದ್ರೆ ಶಾಲೆಯಲ್ಲಿ ಎಲ್ಲರೂ ನನ್ನ ಹಿಂದಿಂದೆ ಕಿಸಕ್ ಅಂತ ನಗೋರೆ… ಆಗ ಅಮ್ಮನ ಮೇಲೆ ಮತ್ತು ಅಮ್ಮನಿಗೆ ಐಡಿಯಾ ಕೊಟ್ಟ ಮಳಿಯಾಳಿ ಗೆಳತಿ ಮೇಲೆ ಸಿಟ್ಟು ಉಕ್ಕಿ ಬಂತು.
ಶಾಲೆ ಮುಗಿಸಿ ಮನೆಗೆ ಹೋಗಿ ಅಮ್ಮನ ಜೊತೆಗೆ ಚನ್ನಾಗಿ ಜಗಳ ಮಾಡಿ ಇನ್ನೊಮ್ಮೆ ನನ್ನ ತಂಟೆಗೆ ಬರದಂತೆ ತಾಕೀತು ಮಾಡಿದೆ. ಅಮ್ಮ ಅಲ್ಲಿಗೆ ನನ್ನ ಬೆಳ್ಳಗೆ ಮಾಡುವ ಕಾರ್ಯಕ್ಕೆ ಸ್ವಲ್ಪ ವಿರಾಮ ಕೊಟ್ಟಳು.

ಫೋಟೋ ಕೃಪೆ : google
ಕಾಲೇಜ್ ಬಂದ್ಮೇಲೆ ಅಮ್ಮನಿಗೆ ಯಾಕೋ ನನ್ನ ಮಗಳು ಇನ್ನೂ ಬೆಳ್ಳಗೆ ಆಗ್ತಿಲ್ಲ ಅನ್ನೋ ಚಿಂತೆ ಮತ್ತೆ ಕಾಡೋಕೆ ಶುರುವಾಯ್ತು. ಅದೇ ಸಮಯಕ್ಕೆ ಸರಿಯಾಗಿ “ಫೇರ್ ಅಂಡ್ ಲವ್ಲಿ”…ದೊಡ್ಡ ಮಟ್ಟದಲ್ಲಿ ಜಾಹೀರಾತು ಬರುತ್ತಿತ್ತು. ಅದನ್ನ ನೋಡಿ ಅಮ್ಮ ಅಂಗಡಿಯಿಂದ ಫೇರ್ ಅಂಡ್ ಲವ್ಲಿ ಕ್ರೀಮ್ ಕೂಡಾ ತಂದಿಟ್ಟಳು. ಅದನ್ನ ಹಚ್ಚಕೋ ಬೆಳ್ಳಗೆ ಕಾಣ್ತಿ ಅನ್ನೋಕೆ ಅಮ್ಮನಿಗೆ ಧೈರ್ಯ ಸಾಲಲಿಲ್ಲ. ಎರಡು ಮೂರು ದಿನ ನಾನು ಕನ್ನಡಿ ಮುಂದೆ ನಿಂತು ರೆಡಿಯಾಗುವಾಗ ನನ್ನ ಹಿಂದೆ ಮುಂದೆ ಫೇರ್ ಅಂಡ್ ಲವ್ಲಿ ಹಿಡ್ಕೊಂಡು ಓಡಾಡಿದ್ಲು. ಕೊನೆಗೆ ಪಾಪ ನನ್ನ ಬೆಳ್ಳಗೆ ನೋಡ್ಬೇಕು ಅನ್ನೋ ಆಸೆಗೆ ಏನೇನೋ ಮಾಡ್ತಿದ್ದಾಳೆ. ಕ್ರೀಮ್ ತಾನೇ…ಹಚ್ಚಕೊಂಡು ಸಮಾಧಾನ ಮಾಡೋಣ ಅಂತ ನಾನೇ ಕೊಡು ಅಂತ ಅಮ್ಮನಿಂದ ಕೇಳಿ ಹಚ್ಚಕೋಕೆ ಶುರು ಮಾಡಿದೆ. ಅಮ್ಮನಿಗೆ ಹಿರಿ ಹಿರಿ ಹಿಗ್ಗು. “ಟಿವಿಯಲ್ಲಿ ಎಷ್ಟು ಕಪ್ಪು ಇರತ್ತಾಳೆ, ಇದನ್ನ ಹಚ್ಚಕೊoಡ ಮೇಲೆ ಬೆಳ್ಳಗೆ ಆಗ್ತಾಳೆ… ನೀನು ಸ್ವಲ್ಪ ದಿನ ಬಿಡದೆ ಹಚ್ಚು ಬೆಳ್ಳಗೆ ಆಗ್ಲಿಲ್ಲ ಅಂದ್ರೆ ಕೇಳು”…ಫೇರ್ ಅಂಡ್ ಲವ್ಲಿ ambassador ಗಳು ದುಡ್ಡು ತಗೊಂಡು ಹೊಗಳೋಲ್ಲ, ಅಷ್ಟು ಅಮ್ಮ ಫೇರ್ ಅಂಡ್ ಲವ್ಲಿ ಯನ್ನ ಹೊಗಳಿ, ಮಾರ್ಕೆಟ್ ಮಾಡಿಟ್ಟಳು.
ನನಗೆ ಇದರ ಮೇಲೆಲ್ಲಾ ನಂಬಿಕೆ ಇರಲಿಲ್ಲ. ಏನೋ ಅಮ್ಮ ಸಮಾಧಾನವಾದ್ರೆ ಸರಿ ಅಂತ ಅಪ್ಲೈ ಮಾಡೋಕೆ ಶುರು ಮಾಡಿದೆ. ಕಾಲೇಜ್ ಗೆ ರೆಡಿ ಆಗೋ ಸಮಯಕ್ಕೆ ಸರಿಯಾಗಿ ಅಮ್ಮ ಹಿಂದೆ ನಿಂತು ಫೇರ್ ಅಂಡ್ ಲವ್ಲಿ ಹಚ್ಚತ್ತಾಳೋ ಇಲ್ವೋ ಅಂತ ಕಾಯ್ತಿದ್ಲು. ನಾನು ಅವಳಿಗೆ ಕ್ರೀಮ್ ಕಾಣೋ ತರನೇ ತೋರಿಸಿ ಹಚ್ಚಿಕೊಳ್ಳುತ್ತಿದ್ದೆ. ಹೀಗೆ ಸ್ವಲ್ಪ ದಿನ ನಡೆಯಿತು.
ಫೇರ್ ಅಂಡ್ ಲವ್ಲಿಯಿಂದ ಬಣ್ಣ ಬೆಳ್ಳಗೆ ಬರೋದಿರಲಿ… ಮುಖದಲ್ಲಿ ತ್ಯಾಪೆ ತರ ಬಿಳಿ ಬಿಳಿ ಬರೋಕೆ ಶುರುವಾಯಿತು. ನಾನು ಕಂಗಾಲಾಗಿ ಹೋದೆ. ಅಮ್ಮನಿಗಂತೂ ಬಾಯಿ ಬಡಿದುಕೊಳ್ಳುವಷ್ಟು ಭಯ.
“ಬೆಳ್ಳ ಬೆಳ್ಳ ಅಂತ ತಲೆ ತಿಂದೆ, ನೋಡು ಈಗ… ಇತ್ಲಾಗೆ ಬಿಳಿನೂ ಇಲ್ಲಾ… ಕಪ್ಪು ಇಲ್ಲಾ… ಎರಡು ಮಿಕ್ಸ್ ಆಗಿ ನನ್ನ ಬಣ್ಣ ಬರ್ತಿದೆ… ಇದಕ್ಕೊಂದು ಪರಿಹಾರ ಕೊಡು… ಇಲ್ಲಾದ್ರೆ ಅಪ್ಪನಿಗೆ ಹೇಳ್ತಿನಿ”… ದುಃಖದಲ್ಲಿ ಏನೇನೋ ಬಡಬಡಿಸಿದೆ. ಅಪ್ಪನ ಮೇಲಿನ ಭಯಕ್ಕಿಂತ ಮಗಳ ಮುಖ ಹೀಗೆ ಆಯ್ತಲ್ಲ ಅಂತ ಅಮ್ಮನಿಗೆ ದುಃಖ ತುಂಬಿತು. ಏನು ಮಾಡೋದು ಅಂತ ತಲೆ ಮೇಲೆ ಕೈ ಇಡ್ಕೊಂಡು ಕೂತಾಗ ಅಕ್ಕಾ” ಸ್ಕೀನ್ ಡಾಕ್ಟರ್ ಹತ್ರ ತೋರಸೋಣ ಅಂತ ಅವಳು ಫ್ರೀ ಅಡ್ವೈಸ್ ಕೊಟ್ಲು. ಈಗ ಬೇರೆ ದಾರಿಯೂ ಇಲ್ಲದೆ, ಅಮ್ಮ, ನಾನು, ಅಕ್ಕಾ ಡಾಕ್ಟರ್ ಹತ್ರ ಹೋದ್ವಿ.
ಸ್ಕೀನ್ ಡಾಕ್ಟರ್ 2000 ರೂಪಾಯಿಯಷ್ಟು ಮೆಡಿಸಿನ್ ಬರೆದು ಕಳಿಸಿದ್ಲು. ದೇವರ ದಯೆಯಿಂದ ಕೊನೆಗೆ ನನ್ನ ಬಣ್ಣ ಮರಳಿತು. ಬಿಳಿ ಅಲ್ಲ, ಕಪ್ಪು. ಬಣ್ಣ ಯಾವುದಾದರೇನು ಇರೋದ್ರಲ್ಲಿ ಸಂತೋಷವಾಗಿ, ಆರೋಗ್ಯವಾಗಿದ್ರೆ ಸಾಕು… ಅಂತ ದೇವರ ಮುಂದೆ ಅಮ್ಮ ದೀಪ ಹಚ್ಚಿದಳು.
ನಿಮ್ಮ ಪ್ರೀತಿಯ
ಶಾಲೂ
- ಶಾಲಿನಿ ಹೂಲಿ ಪ್ರದೀಪ್
