ನಿಮ್ಮಿಬ್ಬರ ಮಧ್ಯೆ ಏಕೆ ಈ ಅಂತರ ಬಂತು. ದಿನ ನಿತ್ಯ ಹರಟುತ್ತಿದ್ದ ಗೆಳತಿಯೊಂದಿಗೆ ಮಾತು ಕಮ್ಮಿಯಾಯಿತು. ಮನಸ್ಸಿನಲ್ಲಿ ತಳಮಳ ಹೆಚ್ಚಾಯಿತು. ಇರಲಿ, ಒಂದಲ್ಲ ಒಂದು ದಿನ ನಾವು ಮತ್ತೆ ಮಾತನಾಡುತ್ತೇವೆಂಬ ಆಸೆಯಿದೆ. ಯುವ ಲೇಖಕಿ ಮೇಘ.ವಿ ಅವರ ಭಾವನಾತ್ಮಕ ಲೇಖನವನ್ನು ತಪ್ಪದೆ ಮುಂದೆ ಓದಿ…
ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರು, ನಮ್ಮೊಂದಿಗೆ ನಿಂತು ಬೆಂಬಲ ಕೊಡುವವರು ಇದ್ದೇ ಇರ್ತಾರೆ. ಯಾರಾದರೂ ಒಬ್ಬರು ನಮ್ಮ ಜೀವನಕ್ಕೆ ದಾರಿ ದೀಪವಾಗುತ್ತಾರೆ. ಆದರೆ ಕೆಲವೊಂದು ಸಮಯದಲ್ಲಿ ನಾವು ಅವರನ್ನೇ ತಪ್ಪಾಗಿ ತಿಳಿದುಕೊಳ್ಳುತ್ತೇವೆ. ಅಲ್ಲದೇ ತುಂಬಾ ಬೇಗ ಅವರನ್ನು ಅಳೆಯಲು ಶುರು ಮಾಡುತ್ತೇವೆ. ಇದು ನಾವು ಮಾಡುವ ಬಹು ದೊಡ್ಡ ತಪ್ಪು. ನಮ್ಮ ಜೊತೆ ಇದ್ದವರು, ನಮ್ಮ ನಿಜವಾದ ಭರವಸೆಯ ದೀಪವಾಗಿರುತ್ತಾರೆ ಎಂದು ನಾವು ಮರೆತುಬಿಡುತ್ತೇವೆ. ನಾನು ಇಲ್ಲಿ ನಕಾರಾತ್ಮಕವಾಗಿ ಯೋಚನೆ ಮಾಡುವವರನ್ನಾ ಕೀಳು ಯೋಚನೆ ಇಟ್ಟುಕೊಳ್ಳುವ ವ್ಯಕ್ತಿಗಳ ಬಗ್ಗೆ ಹೇಳ್ತಾ ಇಲ್ಲ. ನಿಜವಾಗಿಯೂ ಕಾಳಜಿಯಿಂದ ನಮ್ಮೊಂದಿಗೆ ನಿಂತವರ ಬಗ್ಗೆ ಹೇಳುತ್ತಿದ್ದೇನೆ.
ಒಂದು ಸಮಯದಲ್ಲಿ ನನ್ನ ಜೀವನದಲ್ಲಿ ತುಂಬಾ ಕಷ್ಟದ ಅವಧಿ ಎದುರಾಗಿತ್ತು. ಆಗ ಸ್ನೇಹ ಹಾಗೂ ಸಂಬಂಧಗಳ ಕುರಿತು ಒಂದು ತೀವ್ರವಾದ ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಹೇಳಿದ ಒಂದು ಮಾತು ನನ್ನ ನಂಬಿಕೆಗೆ ನೋವನ್ನುಂಟು ಮಾಡಿತು. ನನಗೆ ತುಂಬಾ ಆಘಾತವಾಯಿತು. ನನ್ನ ಮನಸ್ಸಿನಲ್ಲಿದ್ದುದನ್ನ ಹೇಳ್ಬೇಕು ಅನ್ನಿಸ್ತು. ಆದರೆ ಅವಳು ಅದನ್ನ ಗಮನಿಸಲಿಲ್ಲ. ಆಗ ನಾನೇ ಮೊಗದಲ್ಲಿ ಕಿರುನಗುವನ್ನ ಇಟ್ಟುಕೊಂಡು ನೋವನ್ನ ಮರೆಮಾಚಿಕೊಂಡೆ. ಇದೇ ಮೊದಲಾದರೆ ನನ್ನ ಉಸಿರಿನ ಬದಲಾವಣೆಯನ್ನೂ ಗುರುತಿಸಿದವಳು. ಈಗ ನನ್ನ ಮೌನದ ಹಿಂದಿರುವ ನೋವನ್ನ ಅರ್ಥಮಾಡಿಕೊಳ್ಳಲಿಲ್ಲ. ಈ ವಿಚಾರ ನನಗೆ ತುಂಬಾ ಕಾಡಲು ಶುರು ಮಾಡಿತು.
ನನಗೆ ಸ್ನೇಹದ ಅವಶ್ಯಕತೆಯಿದ್ದ ಸಮಯದಲ್ಲಿ ನಮ್ಮ ಸ್ನೇಹ, ಕುಸಿಯಲು ಶುರು ಆಗಿತ್ತು. ಒಬ್ಬಳು ಗೆಳತಿ ಹಬ್ಬಕ್ಕೆಂದು ಮನೆಗೆ ಹೋದರೆ, ಇನ್ನೊಬ್ಬಳು ಹೊಸ ಜನರ ಜೊತೆ ಕಾಲ ಕಳೆಯಲು ಪ್ರಾರಂಭಿಸಿದಳು. ನಾನು ಹಿಂದಿರುಗಿದಾಗ, ನನಗೂ ಯಾರಾದರೂ ಬೇಕು ಎಂಬ ಒಂದು ಭಾವನೆ ಶುರುವಾಗತೊಡಗಿತು.
ಅದೊಂದು ಸಂಜೆ ಇಂಟರ್ನ್‌ಶಿಪ್ ಕೆಲಸ ಹುಡುಕುತ್ತಿದ್ದಾಗ, ಒಬ್ಬ ವೃತ್ತಿಪರ ವ್ಯಕ್ತಿ ನನ್ನ ಪುಟ್ಟ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಮಾತುಕತೆಯ ವೇಳೆ ಅವರು ನನಗೆ ನನ್ನ ಸ್ನೇಹದ ವಿಷಯದಲ್ಲಿ ಸರಿಯಾಗಿ ಯೋಚಿಸಬೇಕೆಂದು ಸಲಹೆ ನೀಡಿದರು. “ಯಾರು ತಪ್ಪು, ಯಾರು ಸರಿ” ಎಂಬುದಕ್ಕಿಂತ “ಏಕೆ ನಿಮ್ಮಿಬ್ಬರ ಮಧ್ಯೆ ಈ ಅಂತರ ಬಂತು?” ಎಂಬುದನ್ನು ಹುಡುಕಬೇಕೆಂದರು.
ಸರಿಯಾಗಿ ಯೋಚಿಸಿದಾಗ ಅರ್ಥವಾಯಿತು. ನಮ್ಮ ನಡುವೆ ಉಂಟಾದ ಸಮಸ್ಯೆ ತುಂಬಾ ಚಿಕ್ಕದು. ಆದರೆ ಮಾತುಕತೆ ಕಡಿಮೆಯಾಗುತ್ತಿದ್ದಂತೆ ಅದು ದೊಡ್ಡದಾಗಿದೆ. ನಾವು ನಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಲಿಲ್ಲ. ಇಂದಿಗೂ ಆ ವಿಷಯವನ್ನು ನಾನು ಆಕೆಯ ಜೊತೆ ಮಾತನಾಡಿಯೇ ಇಲ್ಲ. ಮನಸ್ಸಿನಲ್ಲಿ ಏನೋ ಒಂದು ರೀತಿಯ ತಳಮಳ .
ನನಗೆ ಗೊತ್ತು, ಅವಳು ನನ್ನ ಭರವಸೆಯ ದಾರಿದೀಪ ಅಂತ. ಆದರೆ ನಮ್ಮಿಬ್ಬರ ಅಹಂಕಾರವೇ ಈಗ ನಮ್ಮಿಬ್ಬರನ್ನು ಉಸಿರುಗಟ್ಟುವಂತೆ ಮಾಡುತ್ತಿದೆ.
ಒಂದಲ್ಲ ಒಂದು ದಿನ ನಾವು ಮತ್ತೆ ಮಾತನಾಡುತ್ತೇವೆಂಬ ಆಸೆ. ಈ ಕೆಟ್ಟ ಸಮಯವನ್ನು ಹಿಂದಕ್ಕೆ ಹಾಕಿಯೇ ಹಾಕುತ್ತೇವೆ ಅನ್ನೋ ಭರವಸೆ ನನ್ನಲ್ಲಿದೆ. ಈ ಸಮಯ ಎಂದಿಗೂ ಹೀಗೆಯೇ ಇರುವುದಿಲ್ಲ ಕಳೆದುಹೋಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
- ಮೇಘ.ವಿ – ಬೆಂಗಳೂರು
