ಮನುಜನ ಅರಿವಿನ ಅಂತರಂಗವೇ ಕಾವ್ಯವಾಗಿದೆ

ಕಣ್ಣಿಗೆ ಕಾಣದ, ಪ್ರಕೃತಿಯ ಮಡಿಲಿನೊಳಗಿರುವ ಸಕಲ ಜೀವಿಗಳಿಗೂ ಉಸಿರು ನೀಡಿ ಬದುಕಿಸುವ ಗಾಳಿಗೆ ಗೆಜ್ಜೆಯನ್ನು ಕಟ್ಟಲು ಹೊರಟಿದ್ದಾರೆ ಕವಿ ಜಬೀವುಲ್ಲಾ ಎಮ್ ಅಸದ್ ಅವರು. ಕೃತಿಯ ಕುರಿತು ಕವಿ ನಾರಾಯಣಸ್ವಾಮಿ .ವಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಗಾಳಿಗೆ ಕಟ್ಟಿದ ಗಜ್ಜೆ( ಕವನಸಂಕಲನ )
ಲೇಖಕರು : ಜಬೀವುಲ್ಲಾ ಎಮ್ ಅಸದ್
ಪ್ರಕಾಶಕರು : ತೇಜಸ್ ಇಂಡಿಯಾ
ಬೆಲೆ : 250 ರೂಪಾಯಿಗಳು

ಕವಿತೆಯು ಬದುಕಿನ ಅಸ್ಮಿತೆಯನ್ನು ಕಟ್ಟಿಕೊಡುವಲ್ಲಿ, ಸಮಾಜದೊಳಗಿನ ಸ್ತರಗಳ ಅನ್ಯಾಯದ ಧೋರಣೆಯನ್ನು ಎತ್ತಿ ಹಿಡಿಯುವಲ್ಲಿ ಬರಹ ಪ್ರಮುಖ ಪಾತ್ರ ವಹಿಸುತ್ತದೆ. ತನ್ನ ಸುತ್ತಲಿನ ಸಮಾಜದಲ್ಲಿ ಇನ್ನೂ ಬೇರು ಬಿಟ್ಟಿರುವ, ಜಾತಿ ಧಮ೯ದ ಶೋಷಣೆಯಿಂದ ನಲುಗಿ ಹೋಗಿರುವ ಜನರಲ್ಲಿನ ಶೋಷಣೆ ಅಂಧಾನುಕರಣೆಯನ್ನು ತಡೆಯುವ ಪ್ರತಿಭಟಿಸುವ ಅಸ್ತ್ರವನ್ನಾಗಿಸಿಕೊಂಡು ಕವಿತೆಯನ್ನು ತನ್ನ ಕಲೆಯೊಳಗೆ ಕವಿತೆಯೊಳಗೆ ಮಾತನಾಡಿಸುತ್ತಾ, ಪ್ರೀತಿಸುತ್ತಾ ಸಾಗಿರುವ ಬರಹಗಾರ’ ಚಿತ್ರ ಕಲಾವಿದ, ಸರಳ ವ್ಯಕ್ತಿತ್ವದ ಮಿತಭಾಷಿಯ ಕವಿಯೇ ಜಬೀವುಲ್ಲಾ ಎಮ್ ಅಸದ್ ರವರು.ಅವರು ಬರೆದಿರುವ ಕೃತಿಯೇ “ಗಾಳಿಗೆ ಕಟ್ಟಿದ ಗೆಜ್ಜೆ” ಕವನಸಂಕಲನ.

ಜಬೀವುಲ್ಲಾ ಎಮ್ ಅಸದ್ ರವರು ಕರುನಾಡಿನಲ್ಲಿ ಉದಯೋನ್ಮುಖ ಕವಿಯಾಗಿ, ಚಿತ್ರ ಕಲಾವಿದನಾಗಿ, ಕಥೆಗಾರ, ಗಜಲ್ ಕಾರನಾಗಿಯೂ ರೂಪಗೊಳ್ಳುತ್ತಿರುವುದು ಸಂತೋಷದಾಯಕ ವಿಚಾರ. ಇವರು ಈಗಾಗಲೇ ಹಲವಾರು ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿ ಕರುನಾಡಿನ ಜನರ, ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ.

ಜಬೀವುಲ್ಲಾ ಎಮ್ ಅಸದ್ ರವರ ಬರಹಗಳನ್ನು ಮುಖಪುಟದಲ್ಲಿ ಓದಿರುವೆನಾದರೂ ಅವರ ಯಾವುದೇ ಕೃತಿಯನ್ನು ಓದಲು ಸಾಧ್ಯವಾಗಿರಲಿಲ್ಲ. ಹಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕಾಡುವ ಕಿರಂ ಅಹೋರಾತ್ರಿಯ ಕವಿಗೋಷ್ಠಿಯಲ್ಲಿ ಅವರು ತಮ್ಮ ಕವನಸಂಕಲನವಾದ “ಪ್ರೇಮತನಯ” ಕೃತಿಯನ್ನು ಸ್ನೇಹಪೂವ೯ವಾಗಿ ನೀಡಿದರಾದರೂ ಓದಲು ಇನ್ನೂ ಸಮಯ ಕೂಡಿ ಬರಲಿಲ್ಲ. ಮೊನ್ನೆ ತುಮಕೂರಿನ ಜರುಗಿದ ಕವಿಗೋಷ್ಠಿ ಒಂದರಲ್ಲಿ ಮತ್ತೊಮ್ಮೆ ಭೇಟಿಯಾದಾಗ ಎರಡನೇ ಮುದ್ರಣವನ್ನು ಕಂಡಂತಹ ತಮ್ಮ ಕೃತಿಯಾದ “ಗಾಳಿಗೆ ಕಟ್ಟಿದ ಗೆಜ್ಜೆ ” ಕೃತಿಯನ್ನು ಸ್ನೇಹಪರತೆಯ ಕೊಡುಗೆಯಾಗಿ ನೀಡಿದರು.

ಸಾಮಾನ್ಯವಾಗಿ ಹೆಣ್ಣುಮಕ್ಕಳು ಮತ್ತು ನೃತ್ಯ ಮಾಡುವಂತಹ ಕಲಾವಿದರು ಕಾಲಿಗೆ ಗೆಜ್ಜೆಯನ್ನು ಕಟ್ಟಿ ನಡೆದಾಗ ಇಲ್ಲಾ ಕುಣಿದಾಗ ಆ ಗೆಜ್ಜೆಯ ನಾದದಿಂದ ಹೊರಬರುವ ಶಬ್ದವು ಕಿವಿಗಳಿಗೆ ನಿನಾದವಾಗಿ ಮುದವನ್ನು ನೀಡುತ್ತದೆ. ಅದರೆ ಕಣ್ಣಿಗೆ ಕಾಣದ, ಪ್ರಕೃತಿಯ ಮಡಿಲಿನೊಳಗಿರುವ ಸಕಲ ಜೀವಿಗಳಿಗೂ ಉಸಿರು ನೀಡಿ ಬದುಕಿಸುವ ಗಾಳಿಗೆ ಗೆಜ್ಜೆಯನ್ನು ಕಟ್ಟಲು ಹೊರಟಿದ್ದಾರೆ ಕವಿಗಳು.

ಈ ಕವನಸಂಕಲನದಲ್ಲಿ ಮೊದಲಿಗೆ ತೆರೆದುಕೊಳ್ಳುವ ಸಾಲುಗಳು ಕುವೆಂಪುರವರ ನುಡಿಗಳು ನಂತರದಲ್ಲಿ ಮುನ್ನುಡಿಯ ರೂಪದ ಅಕ್ಷರಯಾನದ ಕಥನ ಸಾಲುಗಳು ಲಿಪಿಯ ಬಗ್ಗೆ ಅದರ ಬೆಳವಣಿಗೆಯ ಬಗ್ಗೆ ಸುದೀರ್ಘವಾದ ಲೇಖನವನ್ನು ಡಾ. ಮೀರಾಸಾಬಿಹಳ್ಳಿ ಶಿವಣ್ಣ ಸಂಪಾದಕರು ಅಕ್ಷರಯಾನ ಮಾಲೆ ಬರೆದಿದ್ದಾರೆ.

ಡಾ. ತಾರಿಣಿ ಶುಭದಾಯನಿರವರು ಜಬೀವುಲ್ಲಾ ಎಮ್ ಅಸದ್ ರವರ ಕವಿತೆಗಳು ” ಅರಿವಿನ ತುಡಿತವುಳ್ಳ ಕವಿತೆಗಳು” ಎಂದು ಹೇಳುತ್ತಾ ಪ್ರತಿಯೊಬ್ಬರಿಗೂ ಹೊಳೆಯುವ ಅನುಭಾವದ ನೆಲೆಗಟ್ಟಿನಲ್ಲಿ ಅವರು ಕವಿತೆಯನ್ನು ಬರೆಯುತ್ತಲೇ ಸಮಕಾಲೀನ ಜಗತ್ತಿನಲ್ಲಿ ಅನುಭಾವ ಎನ್ನುವುದು ಎಷ್ಟೊಂದು ಪ್ರಸ್ತುತವಾಗಿದೆ ಎನ್ನುವುದನ್ನು ಕಾಣಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿ ಶುಭ ಹಾರೈಸಿದ್ದಾರೆ.

ಕವಿತೆಯೆಂದರೆ ಕೇವಲ ಕನಸುಗಳ ಮೆರವಣಿಗೆ ಅಲ್ಲ ಕಲ್ಪನೆಗಳ ವಿಲೇವಾರಿಯಲ್ಲ ಕಾದ ಕವಿಮನದ ಕುಲುಮೆಯ ಒಸಗೆ ಅಂತರಂಗದ ಭಾವಗಳ ಬೆಸುಗೆ, ಏಕಾಂತದ ನಿಟ್ಟುಸಿರು ಎಂದು ತಮ್ಮ ಮನದ ಮಾತಿನಲ್ಲಿ ಹೇಳುತ್ತಾರೆ. ಮತ್ತು ಈ ಕವನಸಂಕಲನಕ್ಕೆ ತಾವೇ ರಚಿಸಿರುವಂತಹ ಚಿತ್ರಗಳು ಕವಿತೆಯ ಅಥ೯ವನ್ನು ಬಿಂಬಿಸಿ, ಕವಿತೆಗಳ ಘನತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಈ ಗಾಳಿಗೆ ಕಟ್ಟಿದ ಗೆಜ್ಜೆ ಕವನಸಂಕಲನವು ಸುಮಾರು ಸಮಾರು ಅರವತ್ತು ಕವಿತೆಗಳಿರುವ ಒಂದು ಹೂಗುಚ್ಚವಾಗಿದೆ. ಈ ಸಂಕಲನದ ಪ್ರತಿಯೊಂದು ಕವಿತೆಯೂ ಕೂಡ ಮನಸ್ಸಿನಾಳಕ್ಕೆ ಇಳಿದು ಯೋಚಿಸುವಂತೆ ಮಾಡುತ್ತದೆ. ಮನುಷ್ಯನ ಅಂತರಂಗದ ಭಾವನೆಗಳು, ಅವನೊಳಗಿನ ಭ್ರಮೆಯ ಬದುಕು, ಬದುಕಿನ ಅಥ೯ವನ್ನು ಹುಡುವ ಬಗೆ, ದೇವರೆಂದರೆ ಯಾರು? ಮನೋಭಿಲಾಷೆಯ ತತ್ವಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಕವಿ ಜಬೀವುಲ್ಲಾ ಎಮ್ ಅಸದ್ ರವರು.

ಗಾಳಿಗೆ ಕಟ್ಟಿದ ಗೆಜ್ಜೆ ಕವನಸಂಕಲನದಲ್ಲಿ ನನ್ನನ್ನು ಓದಿಸಿಕೊಂಡ ಹಲವು ಕವಿತೆಗಳನ್ನು ಇಲ್ಲಿ ಪರಿಚಯ ಮಾಡಿಕೊಡುತ್ತೇನೆ.

ಕಂಬನಿಯ ನೋವು
ಆತಿಶಯೋಕ್ತಿಯೆ ಸರಿ!
ಬಿಡು ಬದುಕಿನ ಆಸೆಯನು
ಸದಾ ಸಾವಿನ ಸಾನಿಧ್ಯದಲ್ಲಿಯೇ
ಇರುವನೆಂಬುದನು ಅರಿ….

ಭ್ರಮೆಯ ಆಗಸವೆಂಬ ಈ ಕವನದ ಶೀರ್ಷಿಕೆಯಲ್ಲಿ ಬರುವ ಸಾಲುಗಳು ಮನುಷ್ಯ ಭ್ರಮೆಯಲೋಕದಲ್ಲಿ ಬದುಕುತ್ತಿದ್ದಾನೆ. ಸಾವು ನನಗೆ ನಿಶ್ಚಿತವಾದುದ್ದದೆಂದು ತಿಳಿದರೂ ಕೂಡ ಅವನು ಸುಖಭೋಗ ಮೋಹಗಳಿಗೆ ದಾಸ್ಯನಾಗಿ ಚಂಚಲಿತನಾಗಿದ್ದಾನೆ. ಕಷ್ಟ ಬಂದಾಗ ಮನಸ್ಸಿಗೆ ನೋವಾಗುವು ಅಚ್ಚರಿ ಎನು ಅಲ್ಲ. ಮೋಹದ ಬದುಕಿನ ಅಸೆಯನ್ನು ತೊರೆದು ಸಾವು ಎಂಬುದು ಸದಾ ನಿನ್ನ ಪಕ್ಕದಲ್ಲಿಯೇ ಇದೇ ಎಂಬುದನ್ನು ಅರಿತು ನೀನು ಬದುಕು ಎಂದು ಹೇಳುತ್ತಾ ಸಾಗುವ ಸಾಲುಗಳು ಮನಸ್ಸನ್ನು ಎಚ್ಚರಗೊಳಿಸಿ ಎದ್ದು ನಿಲ್ಲು ಭವ ಬಂಧನಗಳ ವ್ಯಾಮೋಹನು ಕಳಚಿ, ನಿನ್ನ ಮನದೊಳಗಿನ ಅಜ್ಞಾನವನ್ನು ದೂರಸರಿಸಿ, ಅರಿವಿನ ಲೋಕದ ಕಡೆಗೆ ಬಾ ಈ ಮನಸ್ಸಿಗೆ ಅಂಟಿಕೊಂಡಿರುವ ಸ್ವಾಥ೯, ದ್ವೇಷ, ಹಿಂಸೆಯನ್ನು ನೀನಿರುವ ಜಾಗದಲ್ಲಿಯೇ ಬಿಟ್ಟು, ಮನದೊಳಗೆ ತುಂಬಿರುವ ಅಸೆಗಳನ್ನು ಸಂಹಾರ ಮಾಡಿ ಮನಸ್ಸುನ್ನು ಸುಜ್ಞಾನದತ್ತ ಬಂದು ಆತ್ಮವನ್ನು ಶುದ್ದಿಕರಿಸಬೇಕು ಎಂದು ಬಹಳಷ್ಟು ಮಾಮಿ೯ಕವಾಗಿ ಈ ಕವಿತೆಯನ್ನು ಬರೆದಿದ್ದಾರೆ.

ಕಂಬನಿಯಾಗದ ನೋವು
ಅತಿಶಯೋಕ್ತಿಯೇ ಸರಿ!
ಬಿಡು ಬದುಕಿನ ಅಸೆಯನು
ಸದಾ ಸಾವಿನ ಸಾನಿಧ್ಯದಲ್ಲಿಯೇ
ಇರುವೆನೆಂಬುದನು ಅರಿ….

ಭ್ರಮೆಯ ಆಗಸ ಕವನದ ಶೀರ್ಷಿಕೆಯಲ್ಲಿ ಹೇಳುತ್ತಾರೆ. ಕಣ್ಣೀರು ಬರದ ನೋವು ಅತಿಶಯೋಕ್ತಿಯೇನು ಆಗಲಾರದು ಮನುಜ ನೀನು ಅಸೆಯನ್ನು ಬಿಟ್ಟು ಹೊರ ಬಂದುಬಿಡು, ನಿನಗೆ ಸಾವು ಶಾಶ್ವತವಾದುದ್ದು ಎಂಬುದನ್ನು ಮೊದಲು ನೀನು ತಿಳಿದುಕೋ. ಮನುಜನ ಅಯುಷ್ಯನು ಮಂಜುಗಡ್ಡೆಗೆ ಹೋಲಿಸುವ ಕವಿಗಳು ದಿನಗಳು ಉರಳುತ್ತಿದ್ದಂತೆ ನಿನ್ನ ಅಯುಷ್ಯು ಕೂಡ ಮಂಜಿನ ಕರಗಿ ಹೋಗುತ್ತದೆ. ಯಾವ ಕ್ಷಣದಲ್ಲಾದರೂ ಪ್ರಾಣಿ ಪಕ್ಷಿ ಹಾರಿ ಹೋಗಬಹುದು. ಭವ ಬಂಧಗಳ ಬದುಕು ಉಸಿರುಗಟ್ಟಿಸುವ ರೀತಿಯಲ್ಲಿ ಇರುತ್ತದೆ ಎಂದು ಸೊಗಸಾಗಿ ಸಾಲುಗಳನ್ನು ಕಟ್ಟಿದ್ದಾರೆ.

ಅದ ನೋಡುತಾ
ಕವಿ ಪರವಶಗೊಳ್ಳುತ
ಅನುಭವದಿ ಮಾಗುತಾ
ಮುಗುಳ್ನಗುತ್ತಾನೆ
ಧ್ಯಾನಕ್ಕೆ ಕೂತ ಬುದ್ದನಂತೆ….

ಕವಿ ಬುದ್ದನಾಗಿ ಮುಗುಳ್ನಗುವಾಗ ಕವಿತೆಯ ಸಾಲುಗಳಲ್ಲಿ ಹೇಳುವ ಪ್ರತಿಯೊಂದು ಮಾತು ಕೂಡ ನಿಜ ಅನಿಸುತ್ತದೆ. ಯಾಕೆಂದರೆ ಕವಿಯಾದವನು ಕವಿತೆಯನ್ನು ಧ್ಯಾನಿಸಬೇಕು, ಅವನ ಮನದೊಳಗೆ ಪ್ರಶಾಂತತೆಯು ತುಂಬಿರಬೇಕು ಆ ವಿಷಯದ ಬಗ್ಗೆ ಜ್ಞಾನವನ್ನು ಅಂದರೆ ಅರಿವನ್ನು ಪಡೆದಾಗ ಮಾತ್ರ ಕವಿತೆಯು ಹುಟ್ಟುತ್ತದೆ. ಅನುಭವ ಹೆಚ್ಚಾದಂತೆ ಎದೆಯನ್ನು ಕಾಡುವ ಭಾವಗಳ ಕುಸುಮ ಅರಳಿ ಘಮ್ ಎಂದು ಸುವಾಸನೆಯನ್ನು ಬೀರುತ್ತದೆ. ಆಗ ಕವಿಯು ಬರೆಯುವ ಕವಿತೆಯು ವಿಶಾಲವಾದ ಅಗಸದಂತಾಗುತ್ತದೆ. ಅನಂದದಿಂದ ಮುಗುಳ್ನಗುವಾಗು ಹಿಮಾಲಯ ಪವ೯ತದಷ್ಟು ದೊಡ್ಡವಾಗಿರುವ ಕಷ್ಟಗಳು ಮಂಜಿ ಕರಗಿ ಯಮುನೆಯ ನದಿಯಾಗಿ ಹರಿಯುವಾಗ ಪ್ರೇಮದ ಸಂಕೇತವಾದ ತಾಜ್
ಮಹಲ್ ಕೂಡ ಗಜಲ್ ಆಗಿ ರೂಪಗೊಳ್ಳುತ್ತದೆ ಎಂದು ಬಹಳಷ್ಟು ಮ‍ಾಮಿ೯ಕವಾಗಿ ಕವಿತೆಯನ್ನು ಬರೆದಿದ್ದಾರೆ.

ನೀನು ಕೂಡಿಟ್ಟದ್ದು
ಸಂಪತ್ತು ಅಥಾವ ಜ್ಞಾನವಾಗಿದ್ದರೆ
ನೀ ಸನ್ಯಾಸಿ ಹೇಗಾಗುವೆ?

ಸಂನ್ಯಾಸಿಗೊಂದು ಪತ್ರ ಕವನದ ಶೀರ್ಷಿಕೆಯ ಕವಿತೆಯ ಸಾಲುಗಳಲ್ಲಿ ಹೇಳುತ್ತಾರೆ. ಅರಿಷಡ್ವಗ೯ಗಳಾದ ಕಾಮ ಮೋಹ ಮದ ಮತ್ಸರ ದಂತಹ ಮೋಹದಲ್ಲಿ ಬಂಧಿತನಾಗಿದ್ದರೆ ನೀನು ಸಂನ್ಯಾಸಿ ಹೇಗಾಗುವೆ? ಎಂದು ಪ್ರಶ್ನಿಸುತ್ತಾ, ಮೊದಲು ನೀನು ಗೃಹದೊಳಗಿನ ಸುಖವನ್ನು ಬಿಟ್ಟು ದೇಹದೊಳಗಿನ ಬಯಕೆಗಳ ಮೋಹವನ್ನು ಧಿಕ್ಕರಿಸಿ ನಡೆದಾಗ ಮಾತ್ರ ನಿನ್ನನ್ನು ಸಂನ್ಯಾಸಿ ಎಂದು ಕರೆಯಬಹುದು. ನಿನ್ನಲ್ಲಿರುವ ಸಂಪತ್ತು ಜ್ಞಾನವನ್ನು ಎಲ್ಲಾ ಹಂಚಿ ಬರೀ ಗೈಯ ದಾಸನಂತೆ ಹೊರಟು ಬಿಡು. ಸಾಮಾನ್ಯ ಮನುಷ್ಯರೆಲ್ಲಾ ಉಸಿರಾಡುತ್ತಾರೆ ನಿಜ ಆದರೆ ಬದುಕುವುದನ್ನು ಕಲಿಯಬೇಕಿದೆ ನೀನು ಬದುಕುವುದನ್ನು ಕಲಿಸಬೇಕಿದೆ. ನೀನು ನಕಲಿ ಸಂನ್ಯಾಸಿಯಾದರೆ ಇಂದಲ್ಲ ನಾಳೆ ನಿನ್ನ ಮುಸುಕಿನ ಬಟ್ಟೆಯು ಕಳಚಿ ಹೋಗುತ್ತದೆ. ನಿನ್ನ ಮನಸ್ಸನ್ನು ನೀನು ಗೆದ್ದೆಯಾದರೆ ನೀನು ಯಾರನ್ನು ಕೂಡ ಗೆಲ್ಲುವ ಅವಶ್ಯಕತೆಯಿಲ್ಲವೆಂದು ಕವಿಗಳು ಸಂನ್ಯಾಸಿಗಳ ಬಗ್ಗೆ ತನ್ನ ಮನೋಭಿಲಾಷೆಯನ್ನು ವ್ಯಕ್ತ ಪಡಿಸುತ್ತಾರೆ.

ಹೇಗೆ ದೇವರನ್ನು ಕಾಣಬೇಕು ಎಂಬುದನ್ನು ದೇವರನ್ನು ಕಾಣು ಎಂಬ ಶೀರ್ಷಿಕೆಯ ಕವಿತೆಯಲ್ಲಿ ಬರೆಯುತ್ತಾರೆ.

ಹಸಿದು ಬೇಸತ್ತು ಕಣ್ಣ ಮುಂದೆ
ಕೈಚಾಚಿದ ಖಾಲಿ ಕರದಲ್ಲಿ
ದೇವರನ್ನು ಕಾಣು….

ಕಲ್ಲು ಮಣ್ಣುಗಳ ಗುಡಿಯೊಳಗೆ ವಿಗ್ರಹವಾಗಿರುವ ದೇವರುಗಳನ್ನು ಕಾಣಲೂ ನೂರು ಮೈಲಿ ಹೋಗಿ ಜನಸಂದಣಿಯಲ್ಲಿ ನಿಂತು ದೇವರನ್ನು ಕಾಣುವ ಬದಲು ನಮ್ಮ ಮಧ್ಯದಲ್ಲಿಯೇ ಇರುವ ಬಡವರು, ನಿಗ೯ತಿಕರು, ಅಂಗವಿಕಲರು ಇಲ್ಲ ಪುಟ್ಟ ಮಕ್ಕಳ ನಗುವಿನಲ್ಲಿ ದೇವರನ್ನು ಕಾಣಬಹುದು. ಬರಗಾಲದಲ್ಲಿ ಭೂಮಿಯು ಒಣಗಿ ಹೋಗಿ ಬಾಯ್ಬಿಟ್ಟ ಬಿರುಕಿನೊಳಗೆ ಗಾಳಿಯಲ್ಲಿ ಹಾರಿಬಂದು ಬಿದ್ದ ಬೀಜ ಮೊಳೆಯೊಡೆಯುತಿದೆಯಲ್ಲಾ ಅದೊಂದು ವಿಸ್ಮಯ ಅದರಲ್ಲಿ ದೇವರನ್ನು ಕಾಣು, ಬಿಸಿಲು ಮಳೆ ಚಳಿಯನ್ನದೆ ಅನ್ನ ಬೆಳೆಯುವ ರೈತನ ಬೆವರ ಹನಿಯಲ್ಲಿ ದೇವರನ್ನು ನೋಡು. ನಿಮ್ಮ ಮನಸ್ಸಿಗೆ ಮುಸುಕಿರುವ ಕಲ್ಮಶವನ್ನು ಸೂಸಿ ಪರಿಶುದ್ಧವಾದ ಮನಸ್ಸಿನಿಂದ ದೇವರನ್ನು ಕಾಣು ಎಂದು ಮನುಜ ಆತ್ಮಸಾಕ್ಷಿಯನ್ನು ಪರಿಕ್ಷೀಸುವ ಸಾಲುಗಳನ್ನು ನೀಡಿದ್ದಾರೆ.

ನಿನಗೆ ದಕ್ಕಿದ ಶಾಂತಿಯನು
ನನಗೂ ಕರುಣಿಸು
ನಿನಗೆ ಪ್ರಾಪ್ತಿಯಾದ ಜ್ಞಾನವನು
ನನಗೂ ಭೋದಿಸು
ಭರವಸೆಯಿಲ್ಲದ ಭವದ ಬದುಕಿದು
ಅನುಭವದಿ ಮಾಗಿಸು
ಬೆರಳ ಹಿಡಿದು ಮುನ್ನಡಿಸು…

ಬರುವೆ ನಿನ್ನೊಂದಿಗೆ ಬುದ್ದ ಕವನದ ಶೀರ್ಷಿಕೆಯಲ್ಲಿ ಈ ಗೃಹದ ಬದುಕು ಸಹವಾಸ ಸಾಕಾಗಿದೆ ನನಗೆ, ನಾನು ಪಡೆದಿರುವುದೆಲ್ಲಾವನು ತ್ಯಜಿಸಿ ಮನಸ್ಸು ಬಯಸಿದ್ದನ್ನೆಲ್ಲಾ ಬೆಂಕಿಗೆ ಆಹುತಿ ಮಾಡಿ ಬೂದಿಯಾಗಿಸಿ ನಿನ್ನ ನೆರಳಿನ ಜೊತೆಯಲ್ಲಿ ನಿನ್ನೊಂದಿಗೆ ಬರುವೆ, ನಿನಗೆ ಸಿಕ್ಕದಂತಹ ಮನ:ಶಾಂತಿಯನ್ನು ಕರುಣಿಸು ಬುದ್ದ ಅಂತ ಕೇಳುತ್ತಾರೆ. ನಿನಗೆ ಮಾತ್ರ ಗೊತ್ತು ಬಯಕೆಗಳ ವ್ಯಾಮೋಹವನು ತ್ಯಜಿಸಿ, ಗೃಹಭೋಗಗಳನ್ನು ಸುಖವನ್ನು ಕ್ಷಣಿಕವೆಂದು ಭಾವಿಸಿ ಬರಿಗೈಯಲಿ ಒಂಟಿಯಾಗಿ ನಡೆದುಬಿಡುವುದು. ಅದರೆ ಅದು ಎಲ್ಲರಿಂದಲೂ ಸಾಧ್ಯವಾಗದ ಮಾತು ಬುದ್ದ. ನೋವನ್ನು ಮರೆತು ನಗುವುದನ್ನು ಕಲಿತಿರುವೆ. ನೀನು ನನ್ನ ದು:ಖವನ್ನು ಆಲಿಸಿ ನನ್ನ ಅಹವಾಲು ಸ್ವೀಕರಿಸಿ ನನ್ನೊಳಗಿರುವ ಅಹಂಕಾರವನ್ನು ಧಮನಿಸಿ ನಿನ್ನ ನೆರಳಿನಲ್ಲಿ ಸಾಗಿ ಬರಲು ಅವಕಾಶವನ್ನು ಮಾಡಿಕೊಡು ಬುದ್ದನೇ ಒಂದು ಕ್ಷಣ ನಿಲ್ಲು ನನ್ನೊಳಗಿನ ಎಲ್ಲಾ ಮೋಹವನ್ನು ಬಿಟ್ಟು ಪರಿಶುದ್ಧನಾಗಿ ನಿನ್ನೊಂದಿಗೆ ಬರುತ್ತೇನೆ ಎಂಬ ಈ ಕವಿತೆಯ ಸಾಲು ಪ್ರತಿಯೊಬ್ಬ ಓದುಗನ ಮನದಾಳಕ್ಕೆ ಇಳಿದು ಯೋಚಿಸುವಂತೆ ಮಾಡುತ್ತವೆ.

ಮೇಲಿನ ಒಂದು ಕವಿತೆಯಲ್ಲಿ ಸನ್ಯಾಸಿ ಹೇಗಿರಬೇಕು? ಎಂಬ ತಿಳಿಸಿದರೆ ಸನ್ಯಾಸದ ದೀಕ್ಷೆ ಕವಿತೆಯು ಸನ್ಯಾಸವೆಂದರೇನು? ಅದರ ತತ್ವಗಳೇನು ವಿವರಿಸುತ್ತಾರೆ.

ಹಸಿವನ್ನು ನುಂಗಿ, ತೃಷೆಯನ್ನು ಮೀರಿ
ಧ್ಯಾನದಿ ಮುಗುಳ್ನಕ್ಕು
ಕೈಗೆ ಸಿಕ್ಕ ಅರಿವೆ ಸುತ್ತಿ
ಬಯಲಾಗುವುದು ಸನ್ಯಾಸ….

ಸಂನ್ಯಾಸ ದೀಕ್ಷೆ ಎಂಬ ಶೀರ್ಷಿಕೆಯ ಕವಿತೆಯ ಸಾಲುಗಳಲ್ಲಿ ಹೇಳುತ್ತಾರೆ. ಸಂನ್ಯಾಸವೆಂದರೆ ಮನದೊಳಗೆ ತುಂಬಿರುವ ಆಹಂ ಎಂಬ ಸ್ವಾಥ೯ದ ಚೀಲವನ್ನು ಬಯಲಿಗೆ ಸುರಿದು ಖಾಲಿಯಾಗಿ ಸಂಭ್ರಮಿಸುವುದು ಸನ್ಯಾಸ. ಒಂದು ಕಡೆ ನೆಲೆ ನಿಂತು ಮಹಾವೃಕ್ಷವಾಗಿ ಬೆಳೆದು ಬಿಸಿಲಿನಲ್ಲಿ ನೆರಳನ್ನು ನೀಡಿ ಜೀವ ಸಂಕುಲಕ್ಕೆ ನೆರವಾಗುವುದು ಸಂನ್ಯಾಸ, ಉದರದ ಹಸಿವನ್ನು ನುಂಗಿ, ದೇಹವನ್ನು ಭಾಧಿಸುವ ತೃಷೆಯನ್ನು ಗೆದ್ದು ಧ್ಯಾನದಿಂದ ಮುಗುಳ್ನಕ್ಕು ದೇಹವನ್ನು ಮುಚ್ಚಲು ವಿವಿಧ ರಂಗು ರಂಗಿನ ಬಟ್ಟೆಗಳನ್ನು ಬಯಸದೇ ಕೈಗೆ ಸಿಕ್ಕಿದ ಬಟ್ಟೆಯಿಂದಲೇ ಮಾನವನ್ನು ಮುಚ್ಚಿಕೊಂಡು ಬಯಲಾಗುವುದು. ಬಿದಿರಿನ ಮೆಳೆಯ ನಡುವೆ ಕುಳಿತುಕೊಂಡು ಜಗದ ಜಂಜಾಟವನು ಮರೆತು ಸಂಗೀತದ ನಿನಾದವನ್ನು ಮೊಳಗಿಸುವ ಕೊಳಲಿಗೆ ಉಸಿರನು ನೀಡಿ ಪ್ರಕೃತಿಗೆ ಕೃತಜ್ಞತೆಯನ್ನು ಸೂಸಿಸುವುದು ಕೂಡ ಸನ್ಯಾಸವೆಂದು ಕವಿಗಳು ತಮ್ಮ ಕವಿತೆಯ ಸಾಲುಗಳಲ್ಲಿ ಹೇಳುತ್ತಾರೆ.

ಹುಟ್ಟು ಆಕಸ್ಮಿಕ
ಬದುಕು ಅವಶ್ಯಕ
ಸಾವು ಎಂಬುದು ಅನಿವಾರ್ಯ
ಇದೇ ನಿತ್ಯ ನಿರಂತರ ಸತ್ಯ….

ಬಿಟ್ಟು ಹೊರಡು ಆಲಯ ಎಂಬ ಕವಿತೆಯ ಶೀರ್ಷಿಕೆಯಲ್ಲಿ ಮನುಷ್ಯನ ದೇಹ ಮೂಳೆ ಮಾಂಸಗಳಿಂದ ಕೂಡಿದ್ದು ಅವನು ಸತ್ತಾಗ ತಾನು ಗಳಿಸಿರುವ ಅಸ್ತಿ ಸಂಪಾದಿಸಿರುವ ಸಂಪತ್ತು ನಗ ನಾಣ್ಯ ವಜ್ರ ವೈಡೂರ್ಯವನ್ನು ಯ‍ಾವುದನ್ನು ಕೂಡ ತನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ತಾನು ಪಡೆದಿರುವುದೆಲ್ಲಾವನ್ನು ಬಿಟ್ಟು ಬರಿಗೈಯಲಿ ತನ್ನ ಬದುಕಿನ ಆಟವನ್ನು ಮುಗಿಸಿ ಹೊರಡಬೇಕು. ಹುಟ್ಟು ನಮಗೆ ಆಕಸ್ಮಿಕವಾಗಿ ಬಂದಂತೆ ಸಾವು ಕೂಡ ನಮಗೆ ನಿಶ್ಚಿತವಾಗಿದೆ. ಶಾಶ್ವತವಾಗಿ ಇರದ ಈ ಜೀವಕ್ಕೆ ಜಾತಿ ಧಮ೯ ಬಡವ ಶ್ರೀಮಂತ ಎಂಬ ಭೇದಭಾವವೇಕೆ? ದ್ವೇಷ ಸ್ವಾಥ೯ಗಳೇಕೆ? ನಾವೆಲ್ಲರೂ ಕೂಡ ಸಮಾನರಲ್ಲವೇ? ಈ ಸಮಾಜದಲ್ಲಿರುವ ಜಾತಿಯ ತಾರತಮ್ಯ ಬಡವರ ಶೋಷಣೆಯ ತನ್ನ ಮನದ ಭಾವನೆಗಳನ್ನು ಕವಿತೆಯ ಸಾಲುಗಳ ಮೂಲಕ ಹೊರಹಾಕಿದ್ದಾರೆ.

ಈ ಗಾಳಿಗೆ ಕಟ್ಟಿದ ಗೆಜ್ಜೆ ಕವನಸಂಕಲನದಲ್ಲಿ ಮೂಡಿ ಬಂದಿರುವ ಕವಿತೆಗಳಲ್ಲಿ ಮಾನವನ ಅಂತರಂಗದಲ್ಲಿ ಮನೆಮಾಡಿರುವ ಸ್ವಾಥ೯, ದ್ವೇಷ, ಸಮಾಜದಲ್ಲಿ ಮನುಜನ ಬದುಕು ಹೇಗಿದೆ? ಸಾವು ನೋವು ದು:ಖ ಎಲ್ಲಾವು ಶಾಶ್ವತವಾಗಿ ಬರುತ್ತದೆ ಎಂಬ ಅರಿವಿದ್ದರೂ ಕೂಡ ನಾನು ಇತರರಿಗಿಂತ ಸುಂದರ ಶ್ರೀಮಂತ ಜಾತಿಯಲ್ಲಿ ಶ್ರೇಷ್ಠ ಎಲ್ಲಾ ಜ್ಞಾನವನು ಪಡೆದ ಪಂಡಿತ ಎಂದು ಬೀಗುತ್ತಾ ಕ್ಷಣ ಕಾಲದ ಮೋಹದ ಬಯಕೆಗಳಿಗಾಗಿ ತನ್ನ ಜೀವನವನ್ನು ಹಾಳು ಮಾಡುತ್ತಾ ಬದುಕುತ್ತಿದ್ದಾನೆ. ಈ ಕವನಸಂಕಲನ ಸಾಲುಗಳು ಮನುಷ್ಯನಿಗೆ ಈ ಭೂಮಿಯ ಮೇಲೆ ಯಾವುದು ಕೂಡ ಶಾಶ್ವತವಲ್ಲ. ಅವನು ಮಾಡಿದ ಒಳ್ಳೆಯ ಕೆಲಸಗಳು ಅವನನ್ನು ಈ ಭೂಮಿಯ ಶಾಶ್ವತ ಹೆಸರನ್ನು ಉಳಿಸುತ್ತದೆ ಎಂಬುದನ್ನು ತಿಳಿಸುತ್ತಾ ಸಾಗುತ್ತವೆ.

ಜಬೀವುಲ್ಲಾ ಅಸದ್ ರವರ ಈ ಕವನಸಂಕಲನದ ಎಲ್ಲಾ ಕವಿತೆಗಳು ಮನುಷ್ಯ ಅಂತರಂಗದ ಸುತ್ತ ಅವನ ಮನೋಸ್ಥಿತಿಯ ಅರಿವಿನ ಬಗ್ಗೆ ಬರೆದಿದ್ದು ಈ ಕವನಸಂಕಲನದ ಎಲ್ಲಾ ಕವಿತೆಗಳನ್ನು ಪರಿಚಯ ಮಾಡಿದರೆ ಓದುಗರ ಮನದೊಳಗೆ ಕುತೂಹಲ ಕಡಿಮೆಯಾಗಬಹುದು. ಜ್ಞಾನ ದೇಹಿ, ಜ್ಞಾನದ ರೊಟ್ಟಿ , ಭಾವಯಾನ, ಆಗೋಚರ ಮಮ೯, ಅರಿವಿನ ದಶ೯ನ, ಬದುಕಿನ ಅಂಚಿನಲಿ ಇನ್ನೂ ಮುಂತಾದ ಕವಿತೆಗಳು ಓದುಗರ ಮನದಾಳಕ್ಕೆ ಇಳಿಯುತ್ತವೆ. ಇಂತಹ ಕವನಸಂಕಲನ ಎಲ್ಲರೂ ಕೊಂಡು ಓದಿ ಯುವ ಲೇಖಕನನ್ನು ಬೆಳೆಸಬೇಕಿದೆ.

ನಿಮ್ಮಿಂದ ಇನ್ನೂ ಹತ್ತಾರು ಉತ್ತಮ ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ಗೌರವವನ್ನು ತಂದುಕೊಡಲಿ ಮುಂದೆ ಕನ್ನಡ ಸಾಹಿತ್ಯಲೋಕದಲ್ಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ.


  • ನಾರಾಯಣಸ್ವಾಮಿ .ವಿ – ವಕೀಲರು ಮತ್ತು ಲೇಖಕರು, ಮಾಸ್ತಿ ಕೋಲಾರ ಜಿಲ್ಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW