ಇಷ್ಟು ದಿನ ನಾನು ಸರಿ ಇದ್ದೇನೆ ಪ್ರಪಂಚ ಸರಿ ಇಲ್ಲ ಅಂತ ಅಂದುಕೊಂಡಿದ್ದೇ. ಆದರೆ ಬದಲಾವಣೆ ಅನಿವಾರ್ಯ ಹಾಗು ಅವಶ್ಯಕ… ಚಂದನ್ ಅವರ ಮನಸ್ಸಿನ ಪಿಸುಮಾತನ್ನು ತಪ್ಪದೆ ಮುಂದೆ ಓದಿ…
ಇಷ್ಟು ದಿನ ಪ್ರಪಂಚದಲ್ಲಿ ಬದಲಾವಣೆ ಕಾಣಬೇಕು, ನಾನು ಸರಿ ಇದ್ದೇನೆ ಪ್ರಪಂಚ ಸರಿ ಇಲ್ಲ ಅಂತ ಅಂದುಕೊಂಡಿದ್ದೇ. ಆದರೆ ಪ್ರಪಂಚ ಸರಿಯಾಗಿಯೇ ಇದೆ. ನಾನು ನನ್ನಲ್ಲಿ ಬದಲಾವಣೆ ತಂದುಕೊಂಡು ಈ ಪ್ರಪಂಚ ಇರುವಂತೆಯೇ ನಾನೂ ಇರಬೇಕು ಅನ್ನುವುದನ್ನು ಅರಿಯಲು ಇಷ್ಟು ಸಮಯ ಬೇಕಾಯಿತು…
ಕನಸುಗಳು ಕಾಣುವುದು ಸಹಜ, ಕಾಣುವ ಪ್ರತಿ ಕನಸು ನನಸಾಗುತ್ತಾ ಇಲ್ಲವಾ ಅಂತಲೂ ಆಲೋಚನೆ ಮಾಡದೆ ಹುಚ್ಚರಂತೆ ಕನಸು ಕಾಣುವುದು ಸಹಜ. ಆದರೆ ಜೀವನ ಒಂದು ಹಂತಕ್ಕೆ ಬಂದಾಗ ಕಾಣುವ ಕನಸುಗಳೆಲ್ಲ ಬರೀ ಕನಸಾಗಿಯೇ ಉಳಿಯುತ್ತವೆ, ಅವು ಎಂದಿಗೂ ನಿಜವಾಗಲ್ಲ ಅಂತ ಗೊತ್ತಾದ ಮೇಲೆ ಕನಸು ಕಾಣುವುದು ಹುಚ್ಚುತನ ಅಂತ ಅರ್ಥವಾಗುವ ಹೊತ್ತಿಗೆ ಮನಸ್ಸು ಕಲ್ಲಾಗಿರುತ್ತೆ.
ತಾಳ್ಮೆಯಿಂದ ಇಂದಲ್ಲಾ ನಾಳೆ ಎಲ್ಲವೂ ಸರಿಹೋಗುತ್ತೆ, ನಾವು ಅಂದುಕೊಂಡಂತೆ ಎಲ್ಲವೂ ನಮ್ಮ ಲೆಕ್ಕಾಚಾರಕ್ಕೆ ಬಂದಿರುತ್ತೆ. ನಮ್ಮ ಮನಸ್ಸಿನ ಭಾವನೆಗಳು ಅರ್ಥವಾಗಿ ಸ್ಪಂದನೆ ಅನ್ನೋದು ಸಿಗುವ ಸಮಯ ಅನ್ನೋದು ಬರುತ್ತೆ ಅಂತ ಕಾದಿದ್ದು ಸಾಕಾಗಿದೆ. ಅದು ಎಂದಿಗೂ ಈಡೇರಲ್ಲ ಅಂತ ಮನಸ್ಸಿಗೆ ಅರ್ಥವಾಗಿದೆ.

ಫೋಟೋ ಕೃಪೆ :google
ಇಷ್ಟು ದಿನ ಸೂಕ್ತ ಸ್ಪಂದನೆಗಾಗಿ ಕಾಯುತ್ತಾ ಕುಳಿತೆ, ಕಣ್ಣಿಗೆ ಕಾಣದ ದೇವರು ಕರುಣಿಸದೆ ಹೋದಾನೆಯೇ ಅಂತ ಕಾಯುತ್ತಲೇ ಇದ್ದೆ? ಕರುಣಿಸಲು ಅಸಲಿಗೆ ಈ ಪ್ರಪಂಚ ಇರುವಂತೆ ನಾನಿಲ್ಲವಲ್ಲ. ಎಲ್ಲರಂತೆ ನಾನೂ ಇದ್ದರೆ ತಾನೇ ನನಗೂ ಎಲ್ಲರಂತೆ ಬದುಕಲು ಆ ಭಗವಂತ ಕರುಣಿಸಲು ಸಾಧ್ಯ ಅನ್ನೋದು ಅರ್ಥವಾಗಿದೆ.
ಇಂದಿನಿಂದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುವ ನಿರ್ಧಾರ ನನ್ನದು. ಭಾವನೆಗಳಿಗೆ ಬೆಲೆ ಸಿಗಲ್ಲ. ಬೆಲೆ ಇಲ್ಲ ಅಂತ ತಿಳಿದುಕೊಂಡೆ. ಇನ್ನು ಮುಂದೆ ನನ್ನ ಯಾವುದೇ ಮನಸ್ಸಿನ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲಾರೆ. ಯಾರಿಂದಲೂ ಏನನ್ನೂ ನಿರೀಕ್ಷೆ ಮಾಡಲಾರೆ. ಬರೆಯುವುದು ನನ್ನ ಹವ್ಯಾಸ. ಬರೆಯುವೆ ನನ್ನ ಮನಸ್ಸಿನ ಭಾವನೆಗಳನ್ನು ನನ್ನ ಬರವಣಿಗೆಯಲ್ಲಿ ಹಂಚಿಕೊಳ್ಳುತ್ತೇನೆಯೇ ಹೊರತು ಯಾರೊಂದಿಗೂ ನೇರವಾಗಿ, ವಿವರವಾಗಿ ವ್ಯಕ್ತಪಡಿಸಲಾರೆ.
ಯಾಂತ್ರಿಕ ಬದುಕಿನ ಪ್ರಪಂಚದಲ್ಲಿ ಯಾಂತ್ರಿಕವಾಗಿ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದ ಯಂತ್ರದಂತೆ ಬದುಕಬೇಕು ನಾನು. ಯಾರಿಂದಲೂ ಏನನ್ನೂ ಬಯಸದೆ, ನಿರೀಕ್ಷೆ ಮಾಡದೆ ಕೇವಲ ಬರೆಯಲು ಹಾಗು ಬರವಣಿಗೆಯನ್ನು ಹಂಚಿಕೊಳ್ಳಲು ಮಾತ್ರ ಸೀಮಿತವಾಗಿ ಇರಬೇಕೆಂದು ನಿರ್ಧಾರ ಕೈಗೊಂಡಿರುವೆ. ನಾನೇ ಪ್ರಪಂಚ ಅನ್ನುವವರ ನಿರೀಕ್ಷೆಯಲ್ಲಿ ಹಾಗು ಅನ್ವೇಷಣೆಯಲ್ಲಿ ನನಗೆ ಸಿಕ್ಕಿದ್ದು ಕೇವಲ ಅವರ ಪ್ರಪಂಚದಲ್ಲಿ ನಾನು ಎಲ್ಲರಂತೆ ಒಬ್ಬ ಸಾಮಾನ್ಯನಾಗಿ.
ಬದಲಾಗಬೇಕು ಮಾನಸಿಕವಾಗಿ ನಾನು ಹಾಲಾಹಾಲವನ್ನು ಕಂಠದಲ್ಲಿ ತುಂಬಿಕೊಂಡಿರುವ ನೀಲಕಂಠನಂತೆ. ನನ್ನ ಮನಸ್ಸಿನ ಭಾವನೆಗಳನ್ನು ನನ್ನಲ್ಲಿನ ಉತ್ತರವಿಲ್ಲದ ಪ್ರಶ್ನೆಗಳನ್ನು ಯಾರೊಂದಿಗೂ ಹಂಚಿಕೊಳ್ಳದ ಹಾಗೆ ಇಂದಿನಿಂದ ಆಗುತ್ತೇನೆ ಯಾರ ಕೈಗೂ ಸಿಗದ ಏಟುಕದ ಹಾಗೆ, ಮತ್ತೆ ಹಿಂದಿರುಗಿ ಬಾರದ ಹಾಗೆ. ಇಂದಿನಿಂದ ನನ್ನ ಪಯಣ ಯಾರಿಗೂ ಕಾಣದ ಭಾವನೆಗಳೇ ಇಲ್ಲದ ದೂರದೂರಿಗೆ. ಎಂದಿಗೂ ಮರಳಿ ಬಾರದ ಊರಿಗೆ….
ಹಿಂದಿನ ಸಂಚಿಕೆಗಳು :
- ಚಂದನ್
