‘ಸಿರಿವಂತನ ಮಗ ಸಿರಿವಂತನಂತೆ…ಹಾಗಾದರೆ ನಾನೇಕೆ ಬಡವನಾಗಲಿಲ್ಲ?’… ಭುವನೇಶ್ವರಿ. ರು. ಅಂಗಡಿ ಅವರ ಭಾವನಾತ್ಮಕ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಅಪ್ಪ ಏಕೆ ಬಡವನಾದ?
ನನ್ನಪ್ಪ ಏಕೆ ಬಡವನಾದ?
ಸಿರಿವಂತನ ಮಗ ಸಿರಿವಂತನಂತೆ
ಹಾಗಾದರೆ ನಾನೇಕೆ ಬಡವನಾಗಲಿಲ್ಲ?
ಬೆನ್ನ ಮೇಲೆ ಹರಿದ ಆ ಬನಿಯನ್ನು
ಎಣಿಸಿದರೆ ಬರೀ ತೂತುಗಳೇ ಕಾಣುವ
ಹೆಗಲ ಮೇಲಿನ ಆ ಟವೆಲ್ಲು
ಸಾಕಲ್ಲವೇ ನನ್ನ ಅಪ್ಪ ಬಡವನೆಂದು ಹೇಳಲು
ಸಡಿಲಾದ ಚಪ್ಪಲಿಯ ಉಂಗುಷ್ಟಕ್ಕೆ
ದಾರವ ಕಟ್ಟಿ ಬೆಸೆದಿದ್ದಾನೆ ಅಪ್ಪ
ಕಾಲು ನೋವಾದರೂ ಇನ್ನೂ ತೇಕುತ್ತಲೇ
ಜೀವನ ತೇಯುತ್ತಿದ್ದಾನೆ ಅಪ್ಪ
ನಾ ತೊಡುವ ಅಂಗಿಗೆ ಒಂದೇ ಒಂದು
ತೂತಾದರೂ ರಂಪ ಮಾಡುವೆ
ಬೂಟುಗಳ ಟಕಟಕ ಸದ್ದು ಊರೆಲ್ಲ
ಕೇಳಲೆಂದು ಗರ್ವದಿಂದ ನಡೆಯುವೆ
ನನ್ನ ಮೈ ಮೇಲಿನದೆಲ್ಲ ಅಪ್ಪ ಕೊಡಿಸಿದ್ದು
ಅಪ್ಪನ ಮೈ ಮೇಲಿಂದು ಅವನೇ ತಗೊಂಡಿದ್ದು
ಎಲ್ಲವನ್ನು ನನಗಾಗಿ ತೆಗೆದುಕೊಟ್ಟ ಅಪ್ಪ
ಉಳುಕಲನ್ನು ತನಗಾಗಿ ಇಟ್ಟುಕೊಳ್ಳಲಿಲ್ಲ
ನನಗಾಗಿ ರಟ್ಟೆಯ ಬಲವನ್ನು ಮುಡುಪಿಟ್ಟು
ಬಡವನಾದ ಎಂದೆನಿಸುತ್ತದೆ ನನಗೆ
ನಾನು ಯಾವ ಸೀಮೆಯ ಸಿರಿವಂತ
ಅಪ್ಪನೇ ಸಾವಿರ ಕಾಲಕೂ ಮಕ್ಕಳಿಗೆ ಸಾಹುಕಾರ
- ಭುವನೇಶ್ವರಿ. ರು. ಅಂಗಡಿ – ನರಗುಂದ, ಗದಗ
