ಗಾಂಧೀಜಿ ಮತ್ತು ಆತ್ಮ ಗೌರವದ ಪಾಠ

ಬೇರೆಯವರನ್ನು ನೋಡಿ ನಗುವ, ಹೀಯಾಳಿಸುವ ಮನಸ್ಥಿತಿಯ ಜನ ನಮ್ಮ ಸುತ್ತ ಇದ್ದಾರೆ. ಅವರು ಜಾಣರಿರಬಹುದು, ಶ್ರೀಮಂತರಿರಬಹುದು, ಮೇಲರಿಮೆ ಉಳ್ಳವರೂ ಇರಬಹುದು… ಆದರೆ ಬೇರೊಬ್ಬರನ್ನು ಅವಮಾನಿಸುವ, ಕಡೆಗಣಿಸುವ ಹಕ್ಕು ಅವರಿಗೆ ಇಲ್ಲ. ಲೇಖಕಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಚೀನತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಲಂಡನ್ ನಲ್ಲಿ ಗಾಂಧೀಜಿಯವರು ಕಾನೂನು (ಬ್ಯಾರಿಸ್ಟರ್) ಪದವಿಯನ್ನು ಓದುತ್ತಿದ್ದ ಸಮಯ. ಅವರಿಗೆ ಪಠ್ಯ ವಿಷಯವನ್ನು ತೆಗೆದುಕೊಳ್ಳುತ್ತಿದ್ದ ಪ್ರೊಫೆಸರ್ ಪೀಟರ್ ಎಂಬ ವ್ಯಕ್ತಿಗೆ ಗಾಂಧಿ ಎಂದರೆ ಕೊಂಚ ಅಸೂಯೆ ಸಿಟ್ಟು. ಕಾರಣವಿಷ್ಟೇ ಗಾಂಧಿ ಎಂದಿಗೂ ತಮ್ಮ ಆತ್ಯಾಭಿಮಾನವನ್ನು ಬಿಟ್ಟು ಕೊಟ್ಟು ಮಾತನಾಡುತ್ತಿರಲಿಲ್ಲ. ಅವರಿಬ್ಬರ ನಡುವೆ ಆಗಾಗ ವಾದಗಳು ನಡೆಯುತ್ತಿದ್ದುದು ಸಾಮಾನ್ಯವಾಗಿತ್ತು.

ಒಂದು ದಿನ ವಿಶ್ವವಿದ್ಯಾಲಯದ ವಿಶಾಲವಾದ ಊಟದ ಕೋಣೆಯಲ್ಲಿ ಪೀಟರ್ ಆಹಾರವನ್ನು ಸ್ವೀಕರಿಸುತ್ತಿದ್ದರು ಮತ್ತು ಅದೇ ಸಮಯದಲ್ಲಿ ಗಾಂಧೀಜಿಯವರು ತಮ್ಮ ಊಟದ ಟ್ರೇಯನ್ನು ಹಿಡಿದು ಪ್ರೊಫೆಸರ್ ಪಕ್ಕದಲ್ಲಿ ಬಂದು ಕುಳಿತರು. ಇದು ಪ್ರೊಫೆಸರ್ ಗೆ ಇಷ್ಟವಾಗಲಿಲ್ಲ. ಆ ಸಮಯದಲ್ಲಿ ಗಾಂಧಿಯನ್ನು ಕೆಣಕುವ ನಿಟ್ಟಿನಲ್ಲಿ ಪ್ರೊಫೆಸರ್ “ಮಿಸ್ಟರ್ ಗಾಂಧಿ ನಿಮಗೆ ಗೊತ್ತಿಲ್ವೇ! ಒಂದು ಹಂದಿ ಮತ್ತು ಒಂದು ಹಕ್ಕಿ ಎಂದೂ ಜೊತೆಯಾಗಿ ಊಟಕ್ಕೆ ಕುಳಿತುಕೊಳ್ಳುವುದಿಲ್ಲ” ಎಂದು ಗಾಂಧಿಯನ್ನು ಕಿಚಾಯಿಸಿದರು.

ಇದಕ್ಕೆ ಪ್ರತ್ಯುತ್ತರವಾಗಿ ಗಾಂಧಿ “ಡೋಂಟ್ ವರಿ ಪ್ರೊಫೆಸರ್…ನಾನು ಹಾರಿ ಹೋಗುವೆ ” ಎಂದು ಹೇಳಿ ಕೂಡಲೇ ಪಕ್ಕದ ಮತ್ತೊಂದು ಟೇಬಲ್ ಗೆ ಹೋಗಿ ಕುಳಿತರು ಗಾಂಧೀಜಿಯವರ ಉತ್ತರ ಪೀಟರ್ಸ್ ಗೆ ತುಂಬಾ ಕೋಪವನ್ನು ತರಿಸಿತು. ಮುಂದೆ ನಡೆಯಲಿರುವ ಪರೀಕ್ಷೆಯಲ್ಲಿ ಗಾಂಧೀಜಿಯವರನ್ನು ನಪಾಸು ಮಾಡುವ ಮೂಲಕ ಸೇಡು ತೀರಿಸಿಕೊಳ್ಳಬೇಕು ಎಂದು ಪೀಟರ್ ಯೋಜಿಸಿದರು. ಆದರೆ ಪರೀಕ್ಷೆಗಳಲ್ಲಿ ಗಾಂಧೀಜಿ ಅತ್ಯಂತ ಚಾಣಾಕ್ಷತನದಿಂದ ಉತ್ತರಗಳನ್ನು ನೀಡಿದ್ದರು. ಇಲ್ಲಿಯೂ ಪೀಟರಗೆ ಗಾಂಧಿಯವರನ್ನು ಏನು ಮಾಡಲು ಆಗಲಿಲ್ಲ. ನಂತರ ನಡೆದ ಮೌಖಿಕ ಪರೀಕ್ಷೆಯಲ್ಲಿ ಮಿಸ್ಟರ್ ಪೀಟರ್ ಗಾಂಧೀಜಿಯವರನ್ನು ಕುರಿತು ಕೇಳಿದ ಪ್ರಶ್ನೆ ಹೀಗಿತ್ತು… “ಮಿಸ್ಟರ್ ಗಾಂಧಿ, ನೀವು ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ನಿಮಗೆ ಒಂದು ಬ್ಯಾಗಿನಲ್ಲಿ ಸಾಕಷ್ಟು ಹಣ ಮತ್ತು ಮತ್ತೊಂದು ಬ್ಯಾಗಿನಲ್ಲಿ ಜಾಣ್ಮೆ ಇದ್ದರೆ ನೀವು ಯಾವುದನ್ನು ಆರಿಸಿಕೊಳ್ಳುತ್ತೀರಿ?” ಎಂದು ಕೇಳಿದರು. ತಕ್ಷಣವೇ ಪ್ರತ್ಯುತ್ತರ ನೀಡಿದ ಗಾಂಧಿ ನಾನು ಖಂಡಿತವಾಗಿಯೂ ಹಣ ತುಂಬಿದ ಬ್ಯಾಗನ್ನು ಆರಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಆಗ ಸಿಕ್ಕಿಕೊಂಡೆ ನೀನು ಎಂಬಂತೆ ಮಿಸ್ಟರ್ ಪೀಟರ್ ನಗುತ್ತಾ “ನಾನಾಗಿದ್ದರೆ ಖಂಡಿತವಾಗಿಯೂ ಜಾಣ್ಮೆಯ ಬ್ಯಾಗ್ ಅನ್ನು ಆರಿಸಿಕೊಳ್ಳುತ್ತಿದ್ದೆ…. ನಿನ್ನ ಹಾಗೆ ಹಣಕ್ಕೆ ಬಾಯ್ಬಿಡುತ್ತಿರಲಿಲ್ಲ” ಎಂದು ಹೆಮ್ಮೆಯಿಂದ ಹೇಳಿದರು.

ಪೀಟರ್ಸ್ ನ ಕುಹಕವು ಗಾಂಧಿಗೆ ಅರ್ಥವಾಯಿತು. ಒಂದು ಕ್ಷಣವೂ ತಡ ಮಾಡದೆ ಅವರು ಪೀಟರ್ಸ್ ಗೆ “ಹೌದು ಸರ್… ಯಾರ್ಯಾರಿಗೆ ಯಾವುದರ ಅವಶ್ಯಕತೆ ಇರುತ್ತದೆಯೋ ಅದನ್ನು ಅವರು ಆರಿಸಿಕೊಳ್ಳುತ್ತಾರೆ. ಈಗ ನೋಡಿ! ನನಗೆ ಹಣದ ಅವಶ್ಯಕತೆ ಇದೆ ಆದ್ದರಿಂದ ನಾನು ಹಣವನ್ನು ಆರಿಸಿಕೊಳ್ಳುತ್ತೇನೆ ಮತ್ತು ನಿಮಗೆ ಜಾಣ್ಮೆಯ ಅವಶ್ಯಕತೆ ಇದೆ ಎಂದು ತೋರುತ್ತದೆ, ಆದ್ದರಿಂದ ನೀವು ಜಾಣ್ಮೆಯನ್ನು ಆರಿಸಿಕೊಳ್ಳಲು ಇಚ್ಚಿಸುತ್ತೀರಿ’ ಎಂದು ಮರುತ್ತರ ನೀಡಿದರು.

ಮೊದಲೇ ಕೆಂಪಗಿನ ಬಣ್ಣವನ್ನು ಹೊಂದಿದ ಮಿಸ್ಟರ್ ಪೀಟರ್ ಕ್ರೋಧದಿಂದ ಮತ್ತಷ್ಟು ಕೆಂಪಗಾದರೂ ಕೂಡ ಗಾಂಧೀಜಿಯವರನ್ನು ಮಾತಿನಲ್ಲಿ ಸೋಲಿಸಲಾಗುವುದಿಲ್ಲ ಎಂದು ಅರ್ಥ ಮಾಡಿಕೊಂಡರು…. ಅಲ್ಲದೆ ಮುಂದೆಂದೂ ಗಾಂಧೀಜಿಯವರನ್ನು ವಿನಾಕಾರಣ ಕೆಣಕುವ ಸಾಹಸಕ್ಕೆ ಕೈ ಹಾಕಲಿಲ್ಲ.

ನೋಡಿದಿರಾ ಸ್ನೇಹಿತರೆ? ನಮ್ಮ ಬದುಕಿನಲ್ಲಿಯೂ ನಾವು ಇಂತಹ ಸಾಕಷ್ಟು ಜನರನ್ನು ನೋಡುತ್ತೇವೆ. ತಮ್ಮ ಜಾಣ್ಮೆಯನ್ನು, ಮೇಲರಿಮೆಯನ್ನು, ಶ್ರೀಮಂತಿಕೆಯನ್ನು ತೋರಿಸುವ ನಿಟ್ಟಿನಲ್ಲಿ ಉಳಿದವರನ್ನು ಕೀಳಾಗಿ ಕಾಣುವ ಜನ ನಮ್ಮಲ್ಲಿಯೂ ಇದ್ದಾರೆ. ಅವರು ಜಾಣರಿರಬಹುದು, ಶ್ರೀಮಂತರಿರಬಹುದು, ಮೇಲರಿಮೆ ಉಳ್ಳವರೂ ಇರಬಹುದು… ಆದರೆ ಬೇರೊಬ್ಬರನ್ನು ಅವಮಾನಿಸುವ, ಕಡೆಗಣಿಸುವ ಹಕ್ಕು ಅವರಿಗೆ ಇಲ್ಲ.

ಸ್ವಾಭಿಮಾನಿಯಾದ ಯಾವುದೇ ವ್ಯಕ್ತಿಯು ಬೇರೆಯವರು ತನ್ನನ್ನು ಕಡೆಗಣಿಸಲು ಅಣಕಿಸಲು, ಅವಮಾನಿಸಲು ಅವಕಾಶ ಮಾಡಿಕೊಡುವುದಿಲ್ಲ. ಅಂತಹ ಸಮಯದಲ್ಲಿ ಬೇರೆಯವರು ತಮ್ಮನ್ನು ಹೀಗಳೆದರೆ ಅವರು ತಕ್ಕ ಪ್ರತ್ಯುತ್ತರವನ್ನು ನೀಡುತ್ತಾರೆ ಎಂಬುದು ಗಾಂಧೀಜಿಯವರ ಮೇಲಿನ ಕಥೆಯಿಂದ ನಮಗೆ ಅರಿವಾಗುತ್ತದೆ.

ನಮ್ಮ ಬದುಕಿನಲ್ಲಿಯೂ ಇಂತಹ ಪ್ರಸಂಗಗಳು ಆಗಿರುತ್ತವೆ. ಎಷ್ಟೋ ಬಾರಿ ನಮಗಿಂತ ಹಿರಿಯರು ಎಂದು ನಾವಂದುಕೊಂಡವರು ಮತ್ತು ನಾವು ಗೌರವಿಸುವ ವ್ಯಕ್ತಿಗಳು ನಮ್ಮನ್ನು ಹೀಗೆಳೆದಾಗಲೂ ಕೂಡ ನಾವು ನಮ್ಮ ಸ್ವಾಭಿಮಾನವನ್ನು ಬದಿಗೊತ್ತಿ ಅವರು ಮಾಡುವ ಅವಮಾನವನ್ನು ಸಹಿಸಿಕೊಳ್ಳುತ್ತೇವೆ. ಇದಕ್ಕೆ ಕಾರಣ ಅವರ ಮೇಲರಿಮೆಯಂತೂ ಖಂಡಿತ ಅಲ್ಲ. ಬದಲಾಗಿ ಅವರ ವಯೋ ಸಹಜ ಹಿರಿಮೆಯ ಕಾರಣ ನಾವು ಅವರನ್ನು ಅವರ ಹೀಗಳಿಕೆಗಳನ್ನು ಸುಮ್ಮನೆ ಸಹಿಸಿಕೊಳ್ಳುತ್ತೇವೆ. ನಾವು ಸುಮ್ಮನೆ ಸಹಿಸಿಕೊಳ್ಳುವುದು ಅವರು ನಮ್ಮ ಮೇಲೆ ಪ್ರಭುತ್ವವನ್ನು ಸಾಧಿಸಿದ್ದಾರೆ ಎಂದರ್ಥವಲ್ಲ ಎಂಬುದನ್ನು ಅರಿತು ಅವರು ತಮ್ಮ ತಪ್ಪನ್ನು ತಿದ್ದಿಕೊಂಡರೆ ಸರಿ ಇಲ್ಲವಾದರೆ ಖಂಡಿತವಾಗಿಯೂ ತಮ್ಮ ಗೌರವವನ್ನು ತಾವೇ ಕಳೆದುಕೊಳ್ಳುತ್ತಾರೆ.

ನಿಜವಲ್ಲವೇ ಸ್ನೇಹಿತರೆ?


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ ಗದಗ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW