‘ಮಲೆನಾಡಿನ ರೋಚಕ ಕತೆಗಳು’ ಸರಣಿಯ ಪುಸ್ತಕಗಳ ಕುರಿತು ಯಾರಿಗೆ ಗೊತ್ತಿಲ್ಲ ಹೇಳಿ. ಜೊತೆಗೆ ಮನೋವೈಜ್ಞಾನಿಕ ವಿಷಯಗಳು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡ ಬರಹಕ್ಕೆ ಹೆಸರಾದವರು ಶ್ರೀಯುತ ಗಿರಿಮನೆ ಶ್ಯಾಮರಾವ್ ಅವರು. ವಸಂತ ಗಣೇಶ್ ಅವರೊಂದಿಗೆ ಗಿರಿಮನೆ ಶ್ಯಾಮರಾವ್ ಮುಕ್ತ ಮಾತು ಕತೆ. ತಪ್ಪದೆ ಓದಿ…
೧. ನಿಮ್ಮ ಬಾಲ್ಯ ಹಾಗೂ ತಂದೆ ತಾಯಿ ಹುಟ್ಟಿದ ಊರು ವಿದ್ಯಾಭ್ಯಾಸದ ಬಗ್ಗೆ ಹೇಳಿ?
ಹುಟ್ಟಿದ್ದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಗಾಣದಹೊಳೆ ಎನ್ನುವ ಪಶ್ಚಿಮಘಟ್ಟಕ್ಕೆ ತಗುಲಿಕೊಂಡೇ ಇರುವ ಒಂದು ಹಳ್ಳಿಯಲ್ಲಿ. ಏಳು ಜನ ಮಕ್ಕಳು. ಅಪ್ಪ ಸಂಸ್ಕೃತ ವಿದ್ವಾಂಸರಾಗಿದ್ದರೂ, ಆಸ್ತಿ ಇದ್ದರೂ ಬಡತನ ತುಂಬಿಕೊಂಡಿತ್ತು. ಅಲ್ಲೇ ಹತ್ತಿರ ಇದ್ದ ಒಂದು ಸರಕಾರಿ ಶಾಲೆಯಲ್ಲಿ ಆರನೇ ವರ್ಷದಲ್ಲಿ ಮೂರನೆ ತರಗತಿಗೆ ಸೇರಿಸಿದರು ಅಪ್ಪ. ಸೇರೋದಿಕ್ಕೆ ಹೋಗಿದ್ದು ನಾನು ಒಂದನೆಯ ತರಗತಿಗೆ, ಅಣ್ಣ ಎರಡನೆಯ ತರಗತಿಗೆ ಅಂತ. ಆದರೆ ನಮಗೆ ಅ, ಆ, ಇ, ಈ, ಮಗ್ಗಿ ಎಲ್ಲಾ ಬರ‍್ತಿತ್ತು. ‘ಈ ಮಕ್ಕಳು ಮತ್ತೆ ಅದನ್ನೇ ಕಲಿಯೋದು ಬೇಡ’ ಅಂತ ಅಲ್ಲಿನ ಮೇಡಂ ನಮ್ಮನ್ನು ಮೂರು ಮತ್ತು ನಾಲ್ಕನೇ ತರಗತಿಗೆ ಸೇರಿಸಿದ್ರು. ಮತ್ತೆ ಐದನೆಯ ತರಗತಿಗೆ ಸಕಲೇಶಪುರದ ಸರಕಾರಿ ಶಾಲೆಗೆ ಸೇರಿದೆ. ನಂತರ ಹೈಸ್ಕೂಲ್ ವ್ಯಾಸಂಗ ಇದೇ ಸಕಲೇಶಪುರದ ಸರಕಾರಿ ಪ್ರೌಢಶಾಲೆಯಲ್ಲಾಯ್ತು. ಇದರ ಜೊತೆಗೆ ದನ ಕಾಯೋದು, ಮನೆ ಕೆಲಸ, ಗದ್ದೆ ಕೆಲಸ ಮಾಡೋದೂ ಇದ್ದೇ ಇತ್ತು. ಅಷ್ಟರಲ್ಲಾಗಲೇ ಅಪ್ಪ ತೀರಿಕೊಂಡು ಬಡತನ ಮತ್ತೂ ಜಾಸ್ತಿ ಆಯ್ತು. ಮತ್ತೆ ಪಿ.ಯು.ಸಿ.ಗೆ ಸೇರಿ ನಾಲ್ಕು ದಿನ ಕಾಲೇಜಿಗೂ ಹೋದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಕಮ್ಮಿ ಇದ್ದ ಕಾರಣಕ್ಕೆ ಪಿ.ಯು.ತರಗತಿಯನ್ನೇ ನಿಲ್ಲಿಸಿದ್ರು. ಮತ್ತೆ ಬೇರೆ ಕಾಲೇಜು ಅಂದರೆ ಹಾಸನಕ್ಕೆ ಹೋಗಬೇಕಾಗಿತ್ತು. ಮನೆಯಿಂದ ಆರು.ಕಿ.ಮೀ. ನಡೆದು ಬಸ್ ಹತ್ತಿ ಹಾಸನ ಬಸ್‌ಸ್ಟಾಂಡಲ್ಲಿ ಇಳಿದು ಅಲ್ಲಿಂದ ಮತ್ತೆ ಎರಡು ಕಿ.ಮೀ. ನಡೆದು ಕಾಲೇಜಿಗೆ ಹೋಗೋದೂ ಅದಕ್ಕೆಲ್ಲಾ ಹಣ ಹೊಂದಿಸೋದೂ ಅಸಾಧ್ಯವಾಗಿತ್ತು. ಹಾಗಾಗಿ ಅಲ್ಲಿಗೆ ನನ್ನ ಕಾಲೇಜು ವಿದ್ಯಾಭ್ಯಾಸವೂ ಮುಕ್ತಾಯ ಆಗಿ ಸಂಸಾರದ ಜವಾಬ್ದಾರಿಯೂ ಸೇರಿಕೊಂಡಿತು. ಮತ್ತೆ ಅನಿವಾರ್ಯವಾಗಿ ಕೃಷಿಯಲ್ಲಿ ನನ್ನನ್ನ ತೊಡಗಿಸಿಕೊಂಡೆ. ಅಕ್ಕ, ಅಣ್ಣ, ತಮ್ಮ ಎಲ್ಲರ ಮದುವೆ ಆದಮೇಲೆ ನಾನು ಮದುವೆ ಮಾಡಿಕೊಂಡಿದ್ದು. ಕಷ್ಟಪಟ್ಟು ಹಾಳುಬಿದ್ದ ಜಾಗವನ್ನೆಲ್ಲಾ ತೋಟ ಮಾಡಿದೆ. ಆಗಲೂ ಕಾಲೇಜಿನ ಪಠ್ಯ ಪುಸ್ತಕಗಳನ್ನ ಮನೆಗೇ ತಂದು ಮನೆಯಲ್ಲೇ ನನ್ನ ಸ್ವಂತ ವಿದ್ಯಾಭ್ಯಾಸ ಮುಂದುವರೆಸಿದೆ. ಅದರ ಜೊತೆಗೆ ಕತೆ ಕಾದಂಬರಿ ಓದುವ ಹುಚ್ಚಂತೂ ಸಿಕ್ಕಾಪಟ್ಟೆ ಇತ್ತು.

೨.ಸಾಹಿತ್ಯ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಹುಟ್ಟಿದ್ದು ಯಾವಾಗ ಮತ್ತು ಹೇಗೆ? ಲೇಖಕರಾಗಬೇಕೆನಿಸಿದ್ದು ಯಾವಾಗ? ಕಾರಣ ಏನು?
ಕಷ್ಟಪಟ್ಟು ಕಾಫಿತೋಟ ಮಾಡಿಯಾದರೂ ಸತತವಾಗಿ ಎಂಟು ವರ್ಷ ಕಾಫೀ ದರ ಕುಸಿದಿದ್ದರಿಂದ ಹೊಟ್ಟೆಪಾಡಿಗಾಗಿ ಹಳ್ಳಿ ಬಿಟ್ಟು ಸಕಲೇಶಪುರ ಪೇಟೆಯಲ್ಲಿ ಮೆಡಿಕಲ್ ಷಾಪ್ ಮಾಡಿದೆ. ಅಲ್ಲಿ ಆರೇಳು ವರ್ಷ ಕಳೀತಿದ್ದ ಹಾಗೆ ವ್ಯಾಪಾರ ಇಲ್ಲದೆ ಇರುವಾಗ ಸುಮ್ಮನೆ ಕಾಲ ಕಳೀಬೇಕಲ್ಲಾ ಅನ್ನಿಸ್ತಿತ್ತು. ಆಗ ಏನಾದರೂ ಬರೆದರೇನು ಅನ್ನೋ ಯೋಚನೆ ಶುರುವಾಯ್ತು. ದೊಡ್ಡ ಲೇಖಕ ಆಗ್ಬೇಕು ಅಂತೇನೂ ಇರ‍್ಲಿಲ್ಲ. ಮನಸ್ಸಿನ ತೃಪ್ತಿಗೆ ಅಂತ ಬರೆಯೋದಿಕ್ಕೆ ಹೊರಟಿದ್ದು.
೩. ನಿಮ್ಮ ಮೊದಲ ಬರಹ ಯಾವುದು? ಬರೆದಿದ್ದು ಯಾವಾಗ?
ಮೊದಲು ಹದಿನೆಂಟು ಮಾತ್ರೆ, ಪ್ರಾಸಗಳಿರುವ ನಾಲ್ಕು ಸಾಲಿನ ಚಿಂತನಗಳನ್ನ ಬರೆಯೋದಿಕ್ಕೆ ಶುರು ಮಾಡಿದೆ. ದಿನಕರ ದೇಸಾಯಿಯವರು ಪತ್ರಿಕೆಗಳಲ್ಲಿ ಆ ರೀತಿಯ ಚುಟುಕುಗಳು ಬರೀತಿದ್ರು. ಕನ್ನಡ ಜ್ಞಾನ ಚೆನ್ನಾಗಿತ್ತು. ಬದುಕಿನ ಅನುಭವ ಸಾಕಷ್ಟಿತ್ತು. ಚುಟುಕುಗಳ ಬದಲಾಗಿ ಅದೇ ರೀತಿಯ ಚಿಂತನಗಳನ್ನು ಬರೆಯೋದಿಕ್ಕೆ ಶುರು ಮಾಡಿದೆ. ಎರಡು ಸಾವಿರದ ಎರಡರಲ್ಲಿ ಅಂದರೆ ನನ್ನ ನಲವತ್ತೊಂದನೆಯ ವಯಸ್ಸಲ್ಲಿ ಮೊದಲ ಕೃತಿ “ಧ್ವನಿ” ಬಿಡುಗಡೆ ಆಯ್ತು. ಮತ್ತೆ ಅದೇ ರೀತಿಯ “ಚಿಂತನ” ಹಾಗೂ “ಜಿಜ್ಞಾಸೆ” ಅನ್ನುವ ಕೃತಿಗಳನ್ನು ಬರೆದೆ. ಅವುಗಳನ್ನ ಬರೆಯಬೇಕಾದರೆ ಚಿಂತನೆ ಮಾಡಲೇಬೇಕಾಗಿತ್ತು. ಅಷ್ಟಾಗುವಾಗ ನಂಗೆ ನನ್ನೊಳಗೆ ಬರಹಗಾರ ಇದ್ದಾನೆ ಅನ್ಸೋದಿಕ್ಕೆ ಶುರು ಆಯ್ತು. ಇನ್ನೇನು ಬರೆಯೋದಪ್ಪಾ ಅಂದುಕೊಂಡಿರುವಾಗ, ಒಂದು ದಿನ ಒಂಭತ್ತರಲ್ಲಿ ಓದುವ ಒಬ್ಬಳು ಹುಡುಗಿ ಪೂರ್ಣಚಂದ್ರ ತೇಜಸ್ವಿಯವರ ಬರಹವೊಂದನ್ನ ಪ್ರಬಂಧ ರೂಪ ಮಾಡಿಕೊಡ್ತೀರಾ? ಅಂತ ಕೇಳಿದ್ಳು. ಅದಕ್ಕಾಗಿ ಅದನ್ನ ಎರಡೆರಡು ಸಲ ಓದಿದಾಗ “ಇದು ಥೇಟ್ ನಮ್ಮ ಹಳ್ಳಿಯಲ್ಲಿ ನಡೆದ ಘಟನೆಗಳೇ ಇದ್ದ ಹಾಗಿದೆ. ನಾನೂ ಯಾಕೆ ಇಂಥಾ ಕೃತಿ ಬರೀಬಾರ‍್ದು” ಅನ್ನಿಸ್ತು. ಅಗ ಬರೆದಿದ್ದೇ “ಮಲೆನಾಡಿನ ರೋಚಕ ಕತೆಗಳ ಮೊದಲ ಭಾಗ”. ಅದು ನೇರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟ ಆಯ್ತು. ಮತ್ತೆ ಮೆಡಿಕಲ್ ಷಾಪಿಗೆ ಬರುವ ಮಕ್ಕಳ ಮನೋಭಾವ, ಅವರ ಹೆತ್ತವರ ಭಾವನೆಗಳನ್ನ, ಅವರ ದೃಷ್ಟಿಕೋನಗಳನ್ನ ಸ್ಟಡೀ ಮಾಡ್ತಾ ಇದ್ದೆ. ಅಲ್ಲಾಗುವ ತಪ್ಪುಗಳು ಎದ್ದು ಕಾಣ್ತಿತ್ತು. ಅದರ ಬಗ್ಗೆಯೇ ಯಾಕೆ ಬರೀಬರ‍್ದು ಅನ್ನಿಸ್ತು. ಹಾಗೆ ಬರೆದ “ಮಕ್ಕಳನ್ನು ಬೆಳೆಸುವುದು ಹೇಗೆ?” ಎಂಬ ಲೇಖನಗಳು ಕೂಡಾ ನೇರ ವಿಜಯ ಕರ್ನಾಟಕದಲ್ಲಿ ಎರಡು ತಿಂಗಳು ಪ್ರಕಟ ಆಯ್ತು. ಆಗ ಬರೆಯೋದಿಕ್ಕೆ ನನಗೊಂದು ಅವಕಾಶ ಇದೆ ಅನ್ನಿಸ್ತು. ಮತ್ತೆ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ತರಂಗ, ಕರ್ಮವೀರ, ಮಂಗಳ ಇತ್ಯಾದಿ ಎಲ್ಲಾ ಪತ್ರಿಕೆಗಳಲ್ಲೂ ವಾರದ ಅಂಕಣ, ಧಾರಾವಾಹಿ, ನುಡಿಮುತ್ತು ಎಲ್ಲವನ್ನೂ ಬರೆದೆ. ಸಂಯುಕ್ತ ಕರ್ನಾಟಕದಲ್ಲಿ ಹತ್ತು ವರ್ಷ ವಾರದ ಅಂಕಣ ಬರೆದೆ.

೪.ಒಟ್ಟು ನೀವು ಬರೆದ ಕೃತಿಗಳು ಎಷ್ಟು? ಕಾದಂಬರಿ, ವ್ಯಕ್ತಿತ್ವ ವಿಕಸನ, ಸಣ್ಣ ಕತೆಗಳು, ಎಷ್ಟೆಲ್ಲ ಬರೆದಿರುವ ನಿಮಗೆ ಇಷ್ಟವಾಗುವ ಸಾಹಿತ್ಯ ಪ್ರಕಾರ ಯಾವುದು?
ಇವತ್ತಿಗೆ ನಲವತ್ತೇಳು ಕೃತಿಗಳಾಗಿದೆ. ಈಗಲೂ ವರ್ಷಕ್ಕೆ ನಾಲ್ಕು ಕೃತಿಗಳನ್ನ ಪ್ರಕಟ ಮಾಡುವ ಗುರಿ ಹಾಕಿಕೊಂಡಿದೇನೆ. ಮೊದಲು ವ್ಯಕ್ತಿತ್ವ ವಿಕಸನದ ವಿಷಯ ಬರೆಯೋದಿಕ್ಕೆ ಖುಷಿ ಆಗ್ತಿತ್ತು. ಮತ್ತೆ ಕಾದಂಬರಿಗಳನ್ನ ಬರೀತಾ ಇದ್ದ ಹಾಗೆ ಕಾದಂಬರಿಗಳಲ್ಲೇ ವ್ಯಕ್ತಿತ್ವ ವಿಕಸನದ ವಿಷಯವನ್ನೂ ಹೇಳಬಹುದು ಅನ್ನೋದರ ಅರಿವಾಯ್ತು. ಇತ್ತೀಚೆಗಂತೂ ಮಲೆನಾಡಿನ ರೋಚಕ ಕತೆಗಳ ಸರಣಿ ಮತ್ತು ಮನೋವೈಜ್ಞಾನಿಕ ಕಾದಂಬರಿಗಳ ಸರಣಿ ಬರೆಯೋದಿಕ್ಕೆ ತುಂಬಾ ಇಷ್ಟ ಆಗ್ತಾ ಇದೆ.
೫.ಒಟ್ಟು ನೀವು ರಚಿಸಿದ ಕಾದಂಬರಿಗಳು ಎಷ್ಟು?
ವ್ಯಕ್ತಿತ್ವ ವಿಕಸನ ಇಪ್ಪತ್ತೊಂದು, ಮಲೆನಾಡಿನ ರೋಚಕಕತೆಗಳ ಸರಣಿ ಹದಿನೇಳು. ಸಣ್ಣ ಕತೆಗಳು ಒಂದು, ಮನೋವೈಜ್ಞಾನಿಕ ಕಾದಂಬರಿಗಳ ಸರಣಿ ಮೂರು. ಮಕ್ಕಳ ಕತೆ ಒಂದು. ಈ ವರ್ಷದ ಕೋಟಾದಲ್ಲಿ ಒಂದು ಆಗಿದೆ ಉಳಿದ ಮೂರು ಕೃತಿಗಳು ಸದ್ಯದಲ್ಲೇ ಪ್ರಕಟ ಆಗುತ್ತೆ. ಮೊದಲು ನವಕರ್ನಾಟಕ ಅಂಕಿತ ಮತ್ತೆ ವಸಂತ ಪ್ರಕಾಶನದಂಥಾ ಸಂಸ್ಥೆಗಳು ನನ್ನ ಕೃತಿಗಳನ್ನ ಪ್ರಕಟಿಸಿದ್ರು. ಮತ್ತೆ ಎಲ್ಲವೂ ನಮ್ಮದೇ ಸ್ವಂತ ಗಿರಿಮನೆ ಪ್ರಕಾಶನದ ಅಡಿಯಲ್ಲಿ ಪ್ರಕಟ ಆಗೋದಿಕ್ಕೆ ಶುರುವಾಯ್ತು.
೬ .ನೀವು ಬರೆದಿರುವ ಪ್ರತಿ ಕಾದಂಬರಿಗೆ / ಕತೆಗಳಿಗೆ ವೈವಿಧ್ಯಮಯ ವಸ್ತು, ವಿಷಯಗಳನ್ನು ಎಲ್ಲಿಂದ ಸಂಗ್ರಹಿಸುತ್ತೀರಿ?
ಮೊದಲು ಬದುಕಿನ ಅನುಭವವೇ ಚಿಂತನಗಳಂಥಾ ಕೃತಿ ಬರೆಯೋದಿಕ್ಕೆ ಸಾಮಗ್ರಿ ಆಯ್ತು. ಮತ್ತೆ ಮಕ್ಕಳ ಸ್ವಭಾವ, ಮನುಷ್ಯರ ಸ್ವಭಾವ ಇತ್ಯಾದಿಗಳನ್ನ ಗಮನಿಸುವುದರ ಜೊತೆಗೇ ಮನಶ್ಯಾಸ್ರೃಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನ ಓದೋದನ್ನೂ ಮುಂದುವರೆಸಿದೆ. ನಮ್ಮ ಮೂಢನಂಬಿಕೆಗಳಿಗೆ ಕಾರಣ ಏನು ಅಂತ ಹುಡುಕಿದಾಗ ಅದೆಲ್ಲಾ ವೇದದಿಂದ ಅಪಭ್ರಂಶ ಆಗಿ ಬಂದಿದ್ದು ಅನ್ನೋದು ಗೊತ್ತಾಯ್ತು. ಹಾಗಾಗಿ ಅದರ ಬಗ್ಗೆ ಆಳವಾಗಿ ತಿಳಿಯೋದಿಕ್ಕೆ ಹೋದಾಗ ವೇದ ತುಂಬ ವೈಜ್ಞಾನಿಕವಾಗಿಯೇ ಇದೆ. ವೇದದ ಹೆಸರಲ್ಲಿ ಮೂಢನಂಬಿಕೆಯನ್ನ ಬೆಳೆಸಿದ್ರು ಅನ್ನೋದು ವೇದ ವಿದ್ವಾಂಸರಾದ ಶ್ರೀಯುತ ಸುಧಾಕರ ಶರ್ಮರಂಥವರಿಂದ ಗೊತ್ತಾಯ್ತು. ಅದರಲ್ಲಿ ನಂಗೆ ಜ್ಞಾನಕ್ಕೆ ಸಂಬಂಧಪಟ್ಟ ವಿಷಯ ತುಂಬ ಸಿಕ್ಕಿತು. ಸರಳವಾಗಿ ಹೇಳೋದಾದ್ರೆ ಜ್ಞಾನ ಅಂತ ಯಾವುದಕ್ಕೆಲ್ಲಾ ಹೇಳೋದಪ್ಪಾ ಅಂತ ತಲೆ ಕೆಡಿಸ್ತಾ ಇದ್ದೆ. ವೇದದಲ್ಲಿ ಅದಕ್ಕೆ ಸರಿಯಾದ ಉತ್ತರ ಸಿಕ್ಕಿತು. `ಈ ಜಗತ್ತಿನಲ್ಲಿರುವುದನ್ನು ಅಂತೆಯೇ ಅರ್ಥಮಾಡಿಕೊಳ್ಳುವುದೇ ಜ್ಞಾನ’ ಅಂತ. ಎಷ್ಟು ನಿಖರವಾದ ಉತ್ತರ ಅಲ್ವಾ? ಮತ್ತೆ ಮಲೆನಾಡಿನ ರೋಚಕ ಕತೆಗಳ ಸರಣಿಗೆ ನಾನು ಕಂಡು ಅನುಭವಿಸಿದ ವಿಷಯಗಳೇ ಸಾಮಗ್ರಿ. ಅದರಲ್ಲಿ ಮನೋರಂಜಕವಾದ ವಿಷಯಗಳ ಜೊತೆಗೇ ಪ್ರಾಣಿ ಮತ್ತು ಮನುಷ್ಯರ ನಡುವೆ ನಡೆಯುವ ರೋಚಕ ಘಟನೆಗಳು, ಸಂಘರ್ಷ, ಅಲ್ಲಿ ಜರುಗುವಂಥಾ ವಿಶೇಷಗಳು, ಅಲ್ಲಿನ ಬದುಕು, ಮಳೆ, ಬೆಳೆ, ನಿಗೂಢ ರಾತ್ರಿಗಳು, ಭಯ, ಮೂಢನಂಬಿಕೆಗಳು ಎಲ್ಲಾ ವಿಷಯಗಳೂ ಅದರೊಳಗೇ ಬಂದು ಹೋಗುತ್ತೆ. ಕತೆಯ ಜೊತೆಗೇ ಪ್ರಾಣಿ ಪಕ್ಷಿಗಳ ಬದುಕಿನ, ಮಲೆನಾಡಿನ ಸಂಪೂರ್ಣ ಚಿತ್ರಣ ಸಿಗುತ್ತೆ.

೭.ನಿಮಗೆ ಇದುವರೆಗೆ ಸಿಕ್ಕಿರುವ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಹೇಳಿ?
ಮೊದಲನೆಯದಾಗಿ ನಾನು ಯಾವ ಪ್ರಶಸ್ತಿಯ ಹಿಂದೆಯೂ ಹೋಗಿಲ್ಲ. ಆದರೆ ವೈದ್ಯರು, ಮನೋವೈದ್ಯರ ಹೊರತಾಗಿ ಲೇಖಕರೊಬ್ಬರು ಅದಕ್ಕೆ ಸಂಬಂಧಪಟ್ಟ ಕೃತಿಗಳನ್ನ ಬರೆದಿದ್ದಕ್ಕೆ ಕೊಡುವಂಥಾ ಕೆ.ಎಮ್.ಸಿ. (ಕರ್ನಾಟಕ ಮೆಡಿಕಲ್ ಕೌನ್ಸಿಲ್) ಆವಾರ್ಡನ್ನ ಅವರೇ ಕರೆದು ಕೊಟ್ಟಿದಾರೆ. ಮತ್ತೆ ಜಾಲತಾಣದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವರ್ಷದ ಉತ್ತಮ ಕಾದಂಬರಿಕಾರ ಅಂತ ಓದುಗರೇ ತೀರ್ಮಾನ ಮಾಡಿ ಪ್ರಶಸ್ತಿ ಕೊಟ್ಟಿದಾರೆ. ಅದು ಬಿಟ್ಟರೆ ನನಗೆ ಯಾವ ಪ್ರಶಸ್ತಿಯೂ ಬಂದಿಲ್ಲ. ಶಾಲೆಗಳ ಜೊತೆಗೆ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲೂ ಉಪನ್ಯಾಸಕ್ಕೆ ಅಂತ ಕರೀತಾರೆ. ಆರೂವರೆ ಲಕ್ಷಕ್ಕಿಂತ ಹೆಚ್ಚು ಕೃತಿಗಳ ಮಾರಾಟ ಆಗಿದೆ. ಅದರ ಮುಂದೆ ನನಗೆ ಯಾವ ಪ್ರಶಸ್ತಿಯ ಅಪೇಕ್ಷೆಯೂ ಇಲ್ಲ.
೮. ನೀವು ನಿಮ್ಮ ವೃತ್ತಿಜೀವನದ ಜವಾಬ್ದಾರಿಗಳು ಮತ್ತು ಬರವಣಿಗೆ ಎರಡಕ್ಕೂ ಸಮಯ ಹೇಗೆ ಹೊಂದಿಸಿಕೊಳ್ಳುವಿರಿ?
ಮಗನಿಗೆ ಕೆಲಸ ಸಿಕ್ಕಿದ ಮೇಲೆ ನಮ್ಮದೇ ಸ್ವಂತ ಪ್ರಕಾಶನ ಶುರು ಮಾಡಿದೆ. ಹಾಗಾಗಿ ಅದೂ ಬರಹ ಎರಡೂ ಒಟ್ಟಿಗೇ ಸಾಗುತ್ತೆ. ನಾವೇ ಪ್ರಕಟ ಮಾಡಿದರೂ ನವಕರ್ನಾಟಕ ಮತ್ತೆ ಸಪ್ನಾ ಬುಕ್ ಹೌಸ್‌ಗಳಿಗೆ ನೇರ ಹೋಲ್‌ಸೇಲಾಗಿ ಕೃತಿಗಳನ್ನ ಕೊಡೋದರಿಂದ ವ್ಯಾಪಾರದ ಬಗ್ಗೆ ಚಿಂತೆ ಇಲ್ಲ. ಜೊತೆಗೆ ಅಲ್ಲಿ ಇಲ್ಲಿ ಶಾಲೆ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮಕ್ಕೂ ಹೋಗೋದರಿಂದ ಅಷ್ಟಕ್ಕೆ ಸಮಯ ಹೊಂದಿಸಿಕೊಂಡು ಬರೀತೀನಿ. ಜೊತೆಗೆ ಸಣ್ಣ ಕಾಫಿ ತೋಟವೂ ಇದೆ. ಸ್ವಲ್ಪ ಅದರ ಕಡೆಗೂ ಗಮನ ಕೊಡ್ತೀನಿ. ಕೃಷಿಯ ಬಗ್ಗೆ ಗೊತ್ತಿರೋದರಿಂದ ಅದೇನೂ ಕಷ್ಟ ಆಗೋದಿಲ್ಲ. ಜವಾಬ್ದಾರಿಗಳೆಲ್ಲಾ ಚಿಕ್ಕವನಾಗಿರುವಾಗಲೇ ಹೆಗಲೇರಿತ್ತು. ಈಗ ಬೇರೇನೂ ಜವಾಬ್ದಾರಿ ಇಲ್ಲ.
೯. ಜನಪ್ರಿಯ ಸಾಹಿತ್ಯ, ವಿಮರ್ಶಕರಿಂದ ಕಡೆಗಣಿಸಲ್ಪಟ್ಟಿದೆ ಎನ್ನುವ ಮಾತು ಸಾಹಿತ್ಯವಲಯದಲ್ಲಿ ಇದೆ. ಒಬ್ಬ ಬರಹಗಾರರಾಗಿ ಈ ಕುರಿತು ನೀವೇನು ಹೇಳುತ್ತೀರಿ?
ಅದನ್ನ ತಳ್ಳಿ ಹಾಕೋದಿಕ್ಕೂ ಸಾಧ್ಯ ಇಲ್ಲ. ಜನಪ್ರಿಯ ಸಾಹಿತ್ಯಕ್ಕೂ ಗಂಭೀರವಾದ ಸಾಹಿತ್ಯಕ್ಕೂ ಸ್ವಲ್ಪ ವ್ಯತ್ಯಾಸ ಇರುತ್ತೆ. ಹಾಗಂತ ಗಂಭೀರ ಸಾಹಿತ್ಯವನ್ನ ಸರಿಯಾಗಿ ವಿಮರ್ಶೆ ಮಾಡುವ ವ್ಯವಸ್ಥೆ ಇದೆಯಾ ಎಂದರೆ ಅದೂ ಇಲ್ಲ. ಮೊದಲೆಲ್ಲಾ ಇದ್ದ ಹಾಗೆ ಒಂದು ಗಂಭೀರವಾದ ಕೃತಿಯನ್ನು ಈಗ ಸರಿಯಾಗಿ ವಿಮರ್ಶೆ ಮಾಡುವವರು ಕಮ್ಮಿ. ಇತ್ತೀಚೆಗೆ ಸಾಹಿತ್ಯದ ವಿಷಯದಲ್ಲೂ ಜಾತಿ ರಾಜಕೀಯ ತಲೆ ಹಾಕಿರೋದನ್ನ ಗಮನಿಸ್ಬಹುದು. ಮತ್ತೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಬರೀತಾ ಇರುವಾಗ ಅವನ ಕೃತಿಗಳ ವಿಮರ್ಶೆ ಮಾಡೋದಿಕ್ಕಿಂತ ಅವನ ನಂತರವೇ ಹೆಚ್ಚು ವಿಮರ್ಶೆ ಮಾಡೋದನ್ನ ನೀವು ಗಮನಿಸಬಹುದು. ಅದರಲ್ಲಿ ಕಾರಂತರಿರಬಹುದು, ತೇಜಸ್ವಿಯವರಿರಬಹುದು. ಅವರ ನಂತರವೇ ಅವರ ಕೃತಿಗಳ ಮಾರಾಟ ಹೆಚ್ಚಿಗೆ ಆಗಿದ್ದು. ಅದರಲ್ಲಿ ಎಸ್.ಎಲ್. ಭೈರಪ್ಪನವರೇ ಪುಣ್ಯವಂತರು ಅನ್ನಬಹುದು.
೧೦. ಪ್ರಸ್ತುತ ದಿನಗಳಲ್ಲಿ ನಮ್ಮ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಏನು ಮಾಡಬಹುದು? ಈ ವಿಷಯದಲ್ಲಿ ನಿಮ್ಮ ಸಲಹೆ ಏನು?
ಈಗ ಹೆತ್ತವರು ಮಕ್ಕಳಿಗೆ ಹೇಳೋದೇ ಪಾಠ ಓದು, ರ‍್ಯಾಂಕ್ ತೆಗಿ ಅಂತ. ಕತೆ ಓದು ಅಂತ ಹೇಳುವವರು ತುಂಬ ಕಮ್ಮಿ. ಶಿಕ್ಷಣ ಅನ್ನೋದು ಬರೀ ಹಣ ಸಂಪಾದನೆಯ ವೃತ್ತಿ ಶಿಕ್ಷಣ ಆಗಿದೆ. ಅದರಿಂದಾಗಿ ಇತರ ಶಿಕ್ಷಣದ ಕೊರತೆಯಾಗಿ ಬದುಕಲ್ಲಿ ಅನುಭವ ಪಡೆದುಕೊಳ್ಳೋದು ಕಮ್ಮಿ ಆಗ್ತಾ ಇದೆ. ಸ್ವಲ್ಪವಾದರೂ ಬದುಕಿನ ಅನುಭವ ಆಗಿ ಅದಕ್ಕೆ ಪೂರಕವಾಗಿ ಕತೆ ಕಾದಂಬರಿಗಳ ಮೂಲಕ ಜನಗಳು ಹೇಗರ‍್ತಾರೆ, ಅವರ ಮನಸ್ಸುಗಳು ಯಾವ ರೀತಿ ಇರುತ್ತೆ, ಪ್ರಪಂಚದಲ್ಲಿ ಏನಾಗ್ತಾ ಇದೆ ಅನ್ನೋದೆಲ್ಲಾ ತಿಳಿದುಕೊಂಡಿದ್ರೆ ಬೇಗ ಮೋಸ ಹೋಗೋದು ತಪ್ಪಿ ಜ್ಞಾನ ಹೆಚ್ಚತಿತ್ತು. ಅದಾಗ್ತಾ ಇಲ್ಲ. ಮಕ್ಕಳಿಗೆ ರಜದಲ್ಲಿ ಕತೆ ಓದುವ ಆಸಕ್ತಿ ಬೆಳೆಯೋ ಹಾಗೆ ಪುಸ್ತಕಗಳನ್ನ ಮಕ್ಕಳಿಗೆ ಕೊಡಿಸಿದ್ರೆ ಕೆಲವರಿಗಾದ್ರೂ ಅವರ ಮೊಬೈಲ್ ಗೀಳು ತಪ್ಪಿ ಸ್ವಲ್ಪವಾದರೂ ಓದುವ ಅಭ್ಯಾಸ ಬೆಳಿತಿತ್ತು. ಹಾಗಾಗಿ ಮಕ್ಕಳಿಗಿಂತ ಹೆಚ್ಚಾಗಿ ಓದೋದರಿಂದ ಆಗುವ ಪ್ರಯೋಜನ ಏನು ಅನ್ನೋದನ್ನ ಹೆತ್ತವರಿಗೆ ತಿಳಿಸಿ ಕೊಡುವ ಕೆಲಸ ಆಗ್ಬೇಕು. ಇತ್ತೀಚೆಗೆ ಇ ಬುಕ್, ಆಡಿಯೋ ಬುಕ್ ಇತ್ಯಾದಿಗಳಿಂದ ಸ್ವಲ್ಪ ಪ್ರಯೋಜನ ಆಗ್ತಾ ಇದೆ. ಆದರೂ ಅದೆಲ್ಲಾ ಪುಸ್ತಕ ಓದೋದಿಕ್ಕೆ ಸಮ ಅಲ್ಲ
ಅನ್ನೋದನ್ನ ಹೆತ್ತವರು, ಶಿಕ್ಷಕರು ಮಕ್ಕಳಿಗೆ ಹೇಳಿದರೆ ಅವರಲ್ಲಿ ಆ ಅಭಿರುಚಿ ಬೆಳೆಯುತ್ತೆ. ಹೇಳಬೇಕಲ್ಲ?

೧೧. ನಿಮ್ಮ ಇಷ್ಟದ ಲೇಖಕರು ಯಾರು? ನೀವು ಮತ್ತೆ ಮತ್ತೆ ಓದಲು ಇಷ್ಟಪಡುವ ಕೃತಿಗಳ ಬಗ್ಗೆ ಹೇಳಿ. ಹಾಗೇ ನೀವು ಆಸೆಪಟ್ಟು ನಿಮ್ಮ ಇಷ್ಟದ ಲೇಖಕ ಲೇಖಕಿಯರನ್ನು ಬೇಟಿಯಾಗಿ ಮಾತನಾಡಿಸಿದ ಕ್ಷಣದ ನೆನಪುಗಳನ್ನು ಹಂಚಿಕೊಳ್ಳಿ.
ಕಾರಂತರು, ತೇಜಸ್ವಿಯವರು ಹಾಗೂ ದಾರಾಬೇಂದ್ರೆಯವರು ನಾನು ಇಷ್ಟ ಪಡುವ ಲೇಖಕರು. ಅವರೆಲ್ಲಾ ನನ್ನ ಮೇಲೆ ಪ್ರಭಾವ ಬೀರಿದ ಸಾಹಿತಿಗಳೇ. ಬಹಳಷ್ಟು ಜನ ಸಾಹಿತಿಗಳ ಪರಿಚಯವೂ ಆಗಿದೆ. ಕಾರಂತರ `ಮೂಕಜ್ಜಿಯ ಕನಸುಗಳು’ ಮತ್ತು ತೇಜಸ್ವಿಯವರ `ಕರ್ವಾಲೋ’ ಗಳನ್ನು ಮಾತ್ರ ನಾನು ಮೂರು ಮೂರು ಸಲ ಓದಿದ್ದು. ಆದರೆ ನಂತರ ನನಗೆ ನನ್ನ ಬರಹಕ್ಕೆ ಸಹಾಯ ಆಗಿದ್ದು ಮನೋವೈದ್ಯರಾದ ಶ್ರೀಯುತ ಡಾ. ಸಿ.ಆರ್.ಚಂದ್ರಶೇಖರ್‌ರವರಿಂದ. ಅವರ ಮನಶ್ಯಾಸ್ತೃದ ಕೃತಿಗಳು, ಅವರ ಒಡನಾಟ, ಮನಶ್ಯಾಸ್ತೃದ ಬಗ್ಗೆ ಅವರ ಜೊತೆ ನಡೆದ ಮಾತುಕತೆಗಳೆಲ್ಲಾ ನನಗೆ ಕೃತಿಗಳನ್ನ ಬರೆಯೋದಿಕ್ಕೆ ಸಾಮಗ್ರಿ ಒದಗಿಸಿಕೊಟ್ಟಿದೆ. ಅವರು ನಮ್ಮ ಮನೆಗೆ ಬಂದು ನಮ್ಮಲ್ಲೇ ಉಳಿದು ಹೋದ ಕ್ಷಣ ನೆನಪಲ್ಲಿ ಉಳಿಯುವಂಥದ್ದು.
೧೨. ಹೊಸ ಲೇಖಕರಿಗೆ ನಿಮ್ಮ ಸಂದೇಶ ಏನು?
ಬಹಳಷ್ಟು ಜನ ಬರೀತಾ ಇದಾರೆ. ಅದರಲ್ಲಿ ಎಲ್ಲಾ ತರಹದ ಸಾಹಿತ್ಯವೂ ಇದೆ. ಆದರೆ ಕೆಲವು ಉದಯೋನ್ಮುಖ ಸಾಹಿತಿಗಳು ಆಳವಾಗಿ ಬರಹವನ್ನ ಅಭ್ಯಾಸ ಮಾಡಿ ಬರೀತಾ ಇಲ್ಲ ಅನ್ನೋದೂ ಸತ್ಯವೇ. ಅದಕ್ಕೆ ಕಾರಣ ಸುಲಭವಾಗಿ ಅದನ್ನ ಕೃತಿ ಮಾಡಿ ಲೈಬ್ರರಿಗೆ ತಳ್ಳಿ ಹಣ ಮಾಡಿಕೊಳ್ಳುವ ಒಂದು ವರ್ಗ ಇರೋದರಿಂದ. ಅದರಿಂದಾಗಿ ಗ್ರಂಥಾಲಯಲ್ಲಿ ಓದುವವರಿಗೆ ಒಳ್ಳೆಯ ಕೃತಿಗಳೇ ಸಿಗದೆ ಈಗಿನ ಬರಹಗಾರರೆಲ್ಲಾ ಪ್ರಯೋಜನಕ್ಕಿಲ್ಲ ಅನ್ನೋ ಅಭಿಪ್ರಾಯ ರೂಢಿಸಿಕೊಂಡು ಬಿಡ್ತಾರೆ. ಹಾಗಾಗಿ ಹೊಸದಾಗಿ ಬರೆಯುವವರು ಒಂದು ಕೃತಿ ಬರೆದ ತಕ್ಷಣ ಅದಕ್ಕೆ ಪ್ರಕಾಶಕರನ್ನ ಹುಡುಕುವ ಬದಲು ಮತ್ತೂ ಒಂದೆರಡು ಕೃತಿಗಳ ರಚನೆ ಮಾಡಿ ಅನುಭವ ಆಗ್ತಾ ಇದ್ದ ಹಾಗೆ ಮತ್ತೆ ಪ್ರಕಟ ಮಾಡೋದು ಒಳ್ಳೇದು ಅನ್ನೋದು ನನ್ನ ಭಾವನೆ. ಬರೆಯೋದನ್ನ ಅಭ್ಯಾಸ ಮಾಡ್ತಾ ಇದ್ದ ಹಾಗೆ ಅದು ನಮಗೆ ಕರಗತ ಆಗುತ್ತೆ. ಬದುಕಿನ ಅನುಭವದ ಬರಹಕ್ಕೆ ಬೆಲೆ ಇದೆ, ಅನುಭವಗಳೇ ಆಗದಿದ್ದರೆ ಬರಹ ಆಳಕ್ಕೆ ತಲುಪೋದಿಲ್ಲ.
೧೩. ನೀವು ನಮ್ಮ ಪುಸ್ತಕ ಅವಲೋಕನದ ಸದಸ್ಯರೂ ಆಗಿದ್ದೀರಿ. ನಮ್ಮ ಬಳಗದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
ನನಗೆ ವೀಣಾ ಮೇಡಂ ಮೂಲಕ ಪುಸ್ತಕ ಅವಲೋಕನದ ಪರಿಚಯ ಆಯ್ತು. ಅವರು ನನ್ನ ಕೃತಿಗಳನ್ನ ಕೊಂಡು ಅದನ್ನ ಬಳಗಕ್ಕೆ ಹಂಚುವ ಕೆಲಸ ಮಾಡ್ತಾ ಇದ್ರು. ಮತ್ತೆ ಅದರ ಸಂಪರ್ಕದಲ್ಲಿರುವವರ ಪರಿಚಯವೂ ಆಗ್ತಾ ಬಂತು. ಓದುಗರು ಕಮ್ಮಿ ಆಗ್ತಾ ಇರುವ ಸಂದರ್ಭದಲ್ಲಿ ಪುಸ್ತಕ ಅವಲೋಕನ ಒಂದು ರೀತಿಯಲ್ಲಿ ಓದುಗರನ್ನು ಹುಟ್ಟು ಹಾಕ್ತಾ ಇರೋದಂತೂ ಸತ್ಯ. ಎಷ್ಟೋ ಪ್ರಬುದ್ಧ ಓದುಗರಿಗೆ ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳೋದಿಕ್ಕೆ ಕೂಡಾ ಒಂದು ವೇದಿಕೆ ಸಿಕ್ಕಿತು. ಅದರಿಂದಾಗಿ ಒಳ್ಳೆಯ ಕೃತಿಗಳಿಗೆ ಪ್ರಚಾರವೂ ಸಿಕ್ಕಿತು. ಅದರಲ್ಲೂ ಕೋವಿಡ್ ಬಂದ ಸಮಯದಲ್ಲಿ ಮಾಡಿದ ಕೆಲಸದಿಂದ ಎಷ್ಟೋ ಹೊಸ ಓದುಗರು ಹುಟ್ಟಿಕೊಂಡರು. ಪುಸ್ತಕ ಅವಲೋಕನ ಹುಟ್ಟು ಹಾಕಿದವರಿಗೂ ಅದರ ಸದಸ್ಯರಿಗೂ ಬಳಗದ ಓದುಗ ಬಂಧುಗಳಿಗೂ ನನ್ನ ಧನ್ಯವಾದಗಳು.
ನಿಮ್ಮ ಬಿಡುವಿರದ ಕೆಲಸ ಕಾರ್ಯಗಳ ನಡುವೆಯೂ ನಮ್ಮೊಂದಿಗೆ ಇಷ್ಟೆಲ್ಲಾ ವಿಷಯಗಳನ್ನು ಹಂಚಿಕೊಂಡದ್ದಕ್ಕಾಗಿ, ಅನಂತ ಧನ್ಯವಾದಗಳು ಸರ್. ನಿಮ್ಮಿಂದ ಇನ್ನಷ್ಟು ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಲಿ. ಪ್ರಶಸ್ತಿಗಳು ನಿಮ್ಮನ್ನು ಅರಸಿಬರಲಿ. ನಿಮ್ಮ ಕೃತಿಗಳನ್ನು ಓದುವ ಭಾಗ್ಯ ನಮ್ಮದಾಗಲಿ. ಮತ್ತೊಮ್ಮೆ ಬಳಗದ ಪರವಾಗಿ ಧನ್ಯವಾದಗಳು ಸರ್.
ಕೃಪೆ : ಪುಸ್ತಕ ಅವಲೋಕನ
ಹಿಂದಿನ ಸಂಚಿಕೆ :
- ವಸಂತ ಗಣೇಶ್
