ನೆಹರೂ ಮೈದಾನ, ಹಿರಿಯೂರುನಲ್ಲಿ ನಡೆದ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ರಾತ್ರಿ ಹತ್ತುಗಂಟೆಯಾದರೂ, ಮೈದಾನದಿಂದ ಜನ ಹೊರಡುತ್ತಲೇ ಇದ್ದರು ! ಆ ಮಟ್ಟದ ಜನಸಾಗರ ತುಂಬಿದ್ದ ದೃಶ್ಯವನ್ನು ಇಂದಿಗೂ ನೋಡಲು ಸಾಧ್ಯವಿಲ್ಲ.! ಗೋಕಾಕ ಚಳವಳಿ ಹಾಗೂ ಅಪ್ಪನೊಂದಿಗೆ ಇದ್ದ ಅಪ್ಪು ಬಗ್ಗೆ ಲೇಖಕರಾದ ಹಿರಿಯೂರು ಪ್ರಕಾಶ್ ಅವರು ಬರೆದ ನೆನಪಿನ ಸುರಳಿ, ಮುಂದೆ ಓದಿ…
ನೆನಪಿನಂಗಳದ ಒಂದು ಝಲಕ್ !
ದಿನಾಂಕ : 07.07.1982. ಬುಧವಾರ
ಸ್ಥಳ : ನೆಹರೂ ಮೈದಾನ, ಹಿರಿಯೂರು

ಫೋಟೋ ಕೃಪೆ : google
ಆ ದಿನದ ಹಿಂದಿನ ರಾತ್ರಿಯೆಲ್ಲಾ ಸರಿಯಾಗಿ ನಿದ್ದೆ ಬಾರದೇ ಕಂಗಳಲ್ಲಿ ಕಾತರ ತುಂಬಿಕೊಂಡು ಬೆಳಗಾಗುವುದನ್ನೇ ಕಾಯುತ್ತಿದ್ದು ಮನೆ ಹತ್ತಿರದ ಜಾಮಿಯಾ ಮಸೀದಿಯಿಂದ ಬೆಳ್ಳಂಬೆಳಿಗ್ಗೆ ಐದಕ್ಕೆ ಆಜ಼ಾನ್ ಕೂಗು ಕಿವಿಗೆ ಬಿದ್ದ ತಕ್ಷಣವೇ ಛಕ್ಕನೇ ಎಚ್ಚರವಾಗಿ ಬೇಗ ಬೇಗ ನಿತ್ಯ ಕರ್ಮಗಳನ್ನು ಮುಗಿಸಿ ಆರಕ್ಕೆಲ್ಲಾ ನನ್ನ ಫ಼ೇವರೀಟ್ ಚಂದ್ರಣ್ಣನ ಹೋಟೆಲಿಗೆ ಹೊಟ್ಟೆಗೆಇಡ್ಲಿ ತುಂಬಿಸಿಕೊಳ್ಳಲು ಹೋಗಿದ್ದ ನನ್ನನ್ನು ಕಂಡ ಚಂದ್ರಣ್ಣ,
” ಏನ್ ಪ್ರಕಾಶ್ ಇಷ್ಟು ಬೇಗ ಈವತ್ತು ?
” ಅರ್ಜೆಂಟಾಗಿ ಇಡ್ಲಿ ಬೇಕು ಚಂದ್ರಣ್ಣ… ! ಅವಸರವಸರವಾಗಿ ಹೇಳಿದ್ದೆ.
” ಇಡ್ಲಿ ಈಗಷ್ಟೇ ಒಲೆ ಮೇಲಿದೆ, ಚಟ್ನಿ – ಸಾಂಬಾರ್ ಆಗಿಲ್ಲ, ಲೇಟಾಗುತ್ತೆ ಪ್ರಕಾಶ್. !
” ಹೋಗಲಿ ಅರ್ಜೆಂಟ್ ತಿನ್ನಲಿಕ್ಕೆ ಏನಿದೆ ಚಂದ್ರಣ್ಣ …ಎಂದೆ !
ಸದ್ಯಕ್ಕೆ ಟೀ…. ಬಿಟ್ರೆ ಬನ್ನು…ಅಷ್ಟೇ !
ಅದ್ಸರಿ… ಯಾಕಿಷ್ಟೊಂದು ಅರ್ಜೆಂಟು…???
“ಗೊತ್ತಿಲ್ವಾ ಚಂದ್ರಣ್ಣ….ಬೆಳಿಗ್ಗೆ ಹತ್ತು ಘಂಟೆಗೆ ನಮ್ಮ ಅಣ್ಣಾವ್ರ ಗೋಕಾಕ ಚಳವಳಿಯ ಜಾಥಾ ಕಡ್ಲೆಕಾಯಿಮಂಡಿ ಮೈದಾನಕ್ಕೆ ಬರ್ತಾ ಇದೆ . ಹೀಗಾಗಿ ಬೇಗನೇ ಹೋಗಿ ಜಾಗ ಹಿಡಿಯಬೇಕು . ಇಲ್ಲದಿದ್ರೆ ನಿಲ್ಲಲೂ ಜಾಗ ಸಿಗೋಲ್ಲ. ಅದಕ್ಕೇ ನಿಮ್ಮ ಹೋಟೆಲಿನ ನನ್ನ ನೆಚ್ಚಿನ ಇಡ್ಲಿ ಸಾಂಬಾರ್ ಗಡದ್ದಾಗಿ ಹೊಟ್ಟೆಗಿಳಿಸಿದ್ರೆ ಅವರು ಬರೋದು ಎಷ್ಟೊತ್ತಾದ್ರೂ ಸಹಿಸಿಕೊಳ್ಳಬಹುದು ….!
ಆದರೆ ತಿಂಡಿ ರೆಡಿಯಾಗಲಿಕ್ಕೆ ಇನ್ನೂ ಅರ್ಧ ಘಂಟೆಯಾದ್ರೂ ಆಗಲಿದೆಯೆಂಬ ಚಂದ್ರಣ್ಣನ ಮಾತಿಗೂ ಕಾಯದೇ ಎರಡು ಫ಼ುಲ್ ಗ್ಲಾಸ್ ನಲ್ಲಿ ಖಡಕ್ ಟೀ ಹಾಗೂ ದೊಡ್ಡ ಗಾತ್ರದ ಮೂರು ಬನ್ನು ಹೊಟ್ಟೆಗಿಳಿಸಿ ಅಲ್ಲಿಂದ ನಮ್ಮೂರಿನ ನೆಹರೂ ಮೈದಾನಕ್ಕೆ ಒಂದೇ ಉಸಿರಿಗೆ ಓಡಿದ್ದ ಮಧುರ ನೆನಪಿಗೆ ಹತ್ತಿರ ಹತ್ತಿರ ನಲವತ್ತು ವರ್ಷ ತುಂಬುತ್ತಾ ಬಂದಿದೆಯಾದರೂ ಅಂದಿನ ಪ್ರತೀ ಘಳಿಗೆ, ಪ್ರತೀ ಹೆಜ್ಜೆ, ಪ್ರತೀ ಮಾತೂ ಇನ್ನೂ ಕಣ್ಮುಂದೆ ಹಚ್ಚ ಹಸಿರಾಗಿದೆ, ಕಿವಿಯಲ್ಲಿ ಧ್ವನಿಸುತ್ತಲೇ ಇದೆ.

ಫೋಟೋ ಕೃಪೆ : google
೧೯೮೨ …..ಕರ್ನಾಟಕದಲ್ಲಿ ಕನ್ನಡದ ಅಗ್ರಸ್ಥಾನಕ್ಕಾಗಿ ವರನಟ ಡಾ. ರಾಜ್ ಕುಮಾರ್ ರವರ ಸಾರಥ್ಯದಲ್ಲಿ ರಾಜ್ಯದ ಉದ್ದಗಲಕ್ಕೂ ನೆಡೆದ ಐತಿಹಾಸಿಕ ಗೋಕಾಕ ಚಳವಳಿಯ ಜಾಥಾ ಅಂದು ಬೆಳಿಗ್ಗೆ ಹಿರಿಯೂರಿಗೆ ಬರುವುದಿತ್ತು ! ಡಾ. ರಾಜ್ ನೇತೃತ್ವದಲ್ಲಿ ಅಂದಿನ ಚಿತ್ರರಂಗದ ಅನೇಕ ಕಲಾವಿದರು ,ಜೊತೆಗೆ ಹಿರಿಯ ಸಾಹಿತಿಗಳಾದ ಪಾಟೀಲ ಪುಟ್ಟಪ್ಪನವರೂ ಬರುವವರಿದ್ದರು. ಅದಕ್ಕಾಗಿ ಹಿರಿಯೂರಿನ ದೊಡ್ಡದಾದ ನೆಹರೂ ಮೈದಾನದಲ್ಲಿ ಬೃಹತ್ ಸಿದ್ಧತೆಯನ್ನೇ ಮಾಡಿಕೊಂಡು ಊರ ಜನರೆಲ್ಲಾ ಕಾಯುತ್ತಿದ್ದ ಸಿರಿ ಸಂಭ್ರಮವದು . ಹತ್ತುಘಂಟೆಗೆ ಕಾರ್ಯಕ್ರಮ ಎಂದು ಘೋಷಿಸಿದ್ದರಿಂದ ಅಣ್ಣಾವ್ರನ್ನು ಕಣ್ಣಾರೆ ನೋಡಲು , ಅವರ ಬಾಯಿಂದ ಹೊರಡುವ ಕನ್ನಡದ ನುಡಿಮುತ್ತುಗಳನ್ನು ಕಿವಿಯಾರೆ ಕೇಳಲು ಹಾಗೂ ಗೋಕಾಕ ವರದಿ ಜಾರಿಗಾಗಿ ನಮ್ಮೆಲ್ಲರ ಹೃದಯಾಳದ ಬೆಂಬಲ ವ್ಯಕ್ತಪಡಿಸಲು ಬೆಳಿಗ್ಗೆ ಏಳು ಘಂಟೆಯೊಳಗೆಲ್ಲಾ ಮೈದಾನದ ಬಿ.ಇ.ಓ ಆಫ಼ೀಸಿನ ಮೇಲ್ಭಾಗದಲ್ಲಿ ಹಾಕಲಾಗಿದ್ದ ಬೃಹತ್ ವೇದಿಕೆಯ ಮುಂದಿನ ಸಾಲಿನಲ್ಲೇ ನನ್ನ ಒಂದಷ್ಟು ಜನ ಪಡ್ಡೆಗಳೊಂದಿಗೆ ಆಸೀನನಾಗಿದ್ದೆ.
ಕಣ್ಣಲ್ಲಿ ಕಾತರ, ಮನದಲ್ಲಿ ಆತುರ, ಹೃದಯದಲ್ಲಿ ಚಡಪಡಿಕೆ, ಮೈಮನಗಳ ತುಂಬೆಲ್ಲಾ ಕನ್ನಡದ ನಿಷ್ಕಾಮ ಪ್ರೇಮ- ಅಭಿಮಾನ ತುಂಬಿಕೊಂಡು ಕ್ಷಣ ಕ್ಷಣಕ್ಕೂ ಪ್ರವಾಹೋಪಾದಿ ಯಲ್ಲಿ ಮೈದಾನದೊಳಕ್ಕೆ ನುಗ್ಗಿಬರುತ್ತಿದ್ದ ಜನಸಾಗರವನ್ನು ಕಂಡು ವಿಸ್ಮಿತನಾಗಿ ರಾಜಣ್ಣನ ಜಾಥಾದ ದಾರಿಯನ್ನೇ ಎದುರು ನೋಡುತ್ತಿದ್ದೆ. ಬೆಳಗಿನಿಂದಲೂ ಕನ್ನಡಾಭಿಮಾನ ಉಕ್ಕಿಸುವ ಹಾಡುಗಳು ನಿರಂತರವಾಗಿ ಮಾರ್ಮೊಳಗುತ್ತಿದ್ದವು, ಮಧ್ಯೆ ಮಧ್ಯೆ ಡಾ. ರಾಜ್ ಕುಮಾರ್ ರವರ ಅನೇಕ ಚಿತ್ರಗಳ ಸಂಭಾಷಣೆಯ ತುಣಕುಗಳು ಮೈ ರೋಮಾಂಚನಗೊಳಿಸಿ ಸಮಯ ಹೋಗುತ್ತಿರುವುದನ್ನೇ ಮರೆ ಮಾಚಿದ್ದವು. ಹತ್ತು ಘಂಟೆಗೆಲ್ಲಾ ಹಿರಿಯೂರಿನ ನೆಹರೂ ಮೈದಾನದಲ್ಲಿ ನೋಡಿದೆಡೆಯಲ್ಲೆಲ್ಲಾ ಜನರ ತಲೆಗಳೇ ಕಾಣುತ್ತಿದ್ದವು. ಸಾವಿರ ಸಾವಿರ ಸಂಖ್ಯೆಯಲ್ಲಿ ಕನ್ನಡಿಗರು ಮೈದಾನವನ್ನಾ ಕ್ರಮಿಸಿಕೊಂಡರೂ ನಾನು ಮಾತ್ರ ನನ್ನ ಮುಂದಿನ ಸಾಲನ್ನು ಬಿಟ್ಟು ಕದಲಲೇ ಇಲ್ಲ. ಮೈಕ್ ನಲ್ಲಿ ಆಗ್ಗಾಗ್ಗೆ ಜಾಗೃತಿ ಜಾಥಾ ಇನ್ನೇನು ಊರು ತಲುಪಲಿದೆ ಎಂಬ ಅನೌನ್ಸ್ ಮೆಂಟ್ ಕೇಳಿ ಬರುತ್ತಿತ್ತು.. ಜಾಥಾ ಚಿತ್ರದುರ್ಗ ಬಿಟ್ಟಿದೆ ಎಂಬ ಘೋಷಣೆ ಕೇಳಿಬಂದಾಗ ಸಮಯ. ಮಧ್ಯಾಹ್ನ ಹನ್ನೆರಡು ವರೆ ! ಸಮಯ ಮೀರುತ್ತಿತ್ತೇ ವಿನಃ ಅಣ್ಣಾವ್ರ ದರ್ಶನವಾಗಲೇ ಇಲ್ಲ. ಹಾಗೆಯೇ ವೇದಿಕೆಯಲ್ಲಿ ಕೆಲವು ಸ್ಥಳೀಯ ಕಲಾವಿದರ ಆಗಾಗಿನ ಮನರಂಜನೆಯಿಂದ ಜನರು ಖುಷಿಯಾಗಿ ಕದಲದೇ ನಿಂತಿದ್ದರು. ಮಧ್ಯಾಹ್ನ ಮೂರು ಘಂಟೆಗೆಲ್ಲಾ ಇನ್ನೇನು ಕೆಲವೇ ನಿಮಿಷಗಳಲ್ಲಿ ಜಾಥಾ ಊರು ತಲುಪಲಿದೆ ಎನ್ನುತ್ತಾ ನಮ್ಮ ಸಹನೆಯನ್ನು ಪರೀಕ್ಷೆ ಮಾಡುತ್ತಲೇ ಬಂದಿದ್ದರು. ಹನ್ನೆರಡು ಘಂಟೆಗೆ ದುರ್ಗ ಬಿಟ್ಟರೆ ಬರೋಕೆ ಇಷ್ಟೊತ್ತಾ…? ಎನ್ನುವ ಚರ್ಚೆ ಚಿಂತನೆಗಳಿಂದ ನಾವು ನಮ್ಮ ಸಣ್ಣ ಆಕ್ರೋಷವನ್ನು ಹೊರಹಾಕುತ್ತಿದ್ದೆವು.
ಆದರೆ ಇಷ್ಟು ತಡವಾಗಲು ನಿಜವಾದ ಕಾರಣವೆಂದರೆ ಬೆಳಗಾವಿಯಿಂದ ಬೆಂಗಳೂರಿಗೆ ಅಣ್ಣಾವ್ರ ಜಾಥಾ ಬರುವ ದಾರಿಯಲ್ಲಿನ ಎಲ್ಲಾ ಸಣ್ಣ ಸಣ್ಣ ಹಳ್ಳಿಗಳಲ್ಲೂ ಜನರು ಹಾರ ತುರಾಯಿ ಹಿಡಿದು ಅವರ ವಾಹನವನ್ನು ತಡೆದು ನಿಲ್ಲಿಸಿ ಅಣ್ಣಾವ್ರನ್ನು ಅವರ ತಂಡವನ್ನು ಆಶೀರ್ವಾದ ಮಾಡಿ ಕಳಿಸುತ್ತಿದ್ದರು. ಕನ್ನಡಿಗರ ಆ ಆಸೆಯನ್ನು ನಿರಾಶೆಗೊಳಿಸಲು ಇಷ್ಟಪಡದೇ ಎಲ್ಲಾ ಊರುಗಳಲ್ಲಿಯೂ ಜಾಥಾದ ವಾಹನ ಅಲ್ಲಲ್ಲಿ ನಿಲುಗಡೆಯಾಗಿ ನಿಗದಿತ ಸಮಯಕ್ಕೆ ಆಯಾ ಊರಿಗೆ ತಲುಪುವುದು ನಿಧಾನವಾಗಿತ್ತು. ಹೀಗಾಗಿ ಬೆಳಿಗ್ಗೆ ಹತ್ತಕ್ಕೆ ನಿಗದಿಯಾದ್ದ ಹಿರಿಯೂರಿನ ಕಾರ್ಯಕ್ರಮ ತಡವಾಗಿತ್ತು.
ಮಧ್ಯಾಹ್ನ ಮೂರರ ವೇಳೆಗೆ ನನ್ನ ಹೊಟ್ಟೆಯಲ್ಲಿ ಬೆಳಿಗ್ಗೆ ಆರಕ್ಕಿಳಿಸಿದ್ದ ಮೂರು ಬನ್ನು ಎರಡು ಟೀ ಸಂಪೂರ್ಣವಾಗಿ ಕರಗಿ ನೀರಾಗಿತ್ತು. ಹೊಟ್ಟೆ ಚುರು ಚಿರು ಎನ್ನುತ್ತಿದ್ದರೂ ನಾನು ಹಿಡಿದಿದ್ದ ಜಾಗ ಬಿಟ್ಟು ಅಲ್ಲಿಂದ ಎದ್ದರೆ ಮತ್ತೇ ಸಿಗೋದು ಗ್ಯಾರಂಟೀ ಇರಲಿಲ್ಲ. ಹೀಗಾಗಿ ಊಟ ತಿಂಡಿಯ ಪರಿವೇ ಇಲ್ಲದೇ ಕೂತಿದ್ದ ಜಾಗದಲ್ಲಿಯೇ ಬಿಗಿಯಾಗಿ ಕುಳಿತಿದ್ದೆ. ಸಂಜೆ ನಾಲ್ಕಾಯಿತು, ಐದಾಯಿತು ಎಲ್ಲಿ ನೋಡಿದರೂ ಜನಸಾಗರವೇ ಹೊರತು ಬೇರೇನೂ ಕಾಣುತ್ತಿರಲಿಲ್ಲ.

ಫೋಟೋ ಕೃಪೆ : google
ಹಿರಿಯೂರಿನ ಇತಿಹಾಸದಲ್ಲೇ ಅಷ್ಟು ಜನಸಾಗರ ಸೇರಿದ್ದು ಅದೇ ಮೊದಲು ! ಅದೇ ಕೊನೆ !.
ಅಂತೂ ಸಂಜೆ ಸುಮಾರು ಆರುಘಂಟೆ ಮುವ್ವತ್ತು ನಿಮಿಷಕ್ಕೆ ಬೆಳಗಿನಿಂದಲೂ ನಾವೆಲ್ಲಾ ಉಸಿರು ಬಿಗಿಹಿಡಿದು ಕಾದು ಕುಳಿತಿದ್ದ ಸುಮೂಹೂರ್ತ ಬಂದೇ ಬಿಟ್ಟಿತು ! ಜಾಗೃತ ಜಾಥಾದ ವಾಹನದಿಂದ ಒಬ್ಬೊಬ್ಬರೇ ಕಲಾವಿದರು ಸಾಲುಸಾಲಾಗಿ ವೇದಿಕೆಯತ್ತ ಜೋರಾಗಿ ಹೆಜ್ಜೆಹಾಕುತ್ತಿದ್ದರು. ಶಂಕರ್ ನಾಗ್, ಅನಂತನಾಗ್, ಲೋಕೇಶ್, ಅಶೋಕ್, ತೂಗುದೀಪ ಶ್ರೀನಿವಾಸ್, ಮುಂತಾದವರ ಜೊತೆಗೆ ಪಾಟೀಲಪುಟ್ಟಪ್ಪ, ಚಂಪಾ ಮುಂತಾದ ಸಾಹಿತಿಗಳೂ ಬಂದರು. ಕೊನೆಯಲ್ಲಿ ವಾಹನದಿಂದ ಕೈ ಬೀಸುತ್ತಾ ಕೆಳಗಿಳಿದು ವೇದಿಕೆಯತ್ತ ಅಣ್ಣಾವ್ರು ಧಾವಿಸುವಾಗ ಇಡೀ ಮೈದಾನದ ತುಂಬೆಲ್ಲಾ ಇದ್ದ ಜನಸಮೂಹ ಡಾ. ರಾಜ್ ರಿಗೆ ಜೈಕಾರ ಹಾಕಿ ಅವರನ್ನು ಸ್ವಾಗತಿಸಿತು. ಅವರು ಪೊಲೀಸರ ಬಾರೀ ಬಂದೋಬಸ್ತಿನ ನಡುವೆ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದಾಗ ಮೆಟ್ಟಿಲುಗಳ ಪಕ್ಕದಲ್ಲೇ ಜಾಗ ಹಿಡಿದು ಕುಳಿತಿದ್ದ ನಾನು ಪುಳಕಿತನಾಗಿ ಆ ಜನಜಂಗುಳಿ ಹಾಗೂ ಪೊಲೀಸರ ಅಭೇದ್ಯ ಕೋಟೆಯನ್ನು ಭೇದಿಸಿ ಅಣ್ಣಾವ್ರನ್ನು ಒಮ್ಮೆ ಮೈದಡವಿ ಬಂದುದ್ದು ಜೀವನದ ಸಾರ್ಥಕತೆಯ ಕ್ಷಣ !
ಅಲ್ಲಿಂದ ಸಭೆ ಆರಂಭವಾಗಲು ಶುರುವಾಯಿತು. ಮೊದಲಿಗೆ ಮಾತನಾಡಿದ ಪಾಟೀಲ ಪುಟ್ಟಪ್ಪನವರು ಡಾ. ರಾಜ್ ಕುಮಾರ ರವರ ನೇತೃತ್ವದ ಜಾಥಾ ಸಂಚರಿಸಿದ ಇಡೀ ಕರ್ನಾಟಕದ ಹಳ್ಳಿ ಹಳ್ಳಿಯ ಹೆಸರನ್ನು ಒಂದೂ ಬಿಡದೇ ಪಟಪಟ ಅಂತ ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆನಂತರ ಒಬ್ಬೊಬ್ಬರೇ ಕಲಾವಿದರೆಲ್ಲಾ ಮಾತನಾಡಿ ಗೋಕಾಕ ವರದಿಗಾಗಿ ಒತ್ತಾಯಿಸಿದ್ದರು. ಇನ್ನೊಂದು ವಿಷಯ ! ಆ ಸಾಲಿನಲ್ಲಿ ಅಣ್ಣಾವ್ರ ಪಕ್ಕ ಒಬ್ಬ ಏಳು ವರ್ಷದ ಪೋರ ಸಹಾ ಅತ್ಯಂತ ಚುರುಕಾಗಿ ಓಡಾಡಿಕೊಂಡು ಭಾಷಣ ಮಾಡುವವರನ್ನು ಹುರಿದುಂಬಿಸುತ್ತಿದ್ದ. ಆ ಬಾಲಕ ಬೇರಾರೂ ಅಲ್ಲ.. ಅವರೇ ನಮ್ಮ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ !
ಆನಂತರ ಕೊನೆಯದಾಗಿ ಡಾ. ರಾಜ್ ಮಾತನಾಡಲು ಶುರು ಮಾಡಿದಾಗ ಇಡೀ ಮೈದಾನದ ತುಂಬಾ ಕರತಾಡನ ! ಅವರು ಮಾತು ಆರಂಭಿಸಿದ್ದೇ ಐದಾರು ನಿಮಿಷಗಳ ನಿರಂತರ ಚಪ್ಪಾಳೆ ನಿಂತ ನಂತರವೇ.

ಫೋಟೋ ಕೃಪೆ : Twitter
ಅತ್ಯಂತ ಅಭಿಮಾನಪೂರ್ವಕವಾಗಿ ಅಭಿಮಾನಿ ದೇವರುಗಳನ್ನು ಉದ್ದೇಶಿಸಿ ಮಾತು ಆರಂಭಿಸಿದ ಅಣ್ಣಾವ್ರು ಎಂದಿನ ಸಹಜ ವಿನಯದಿಂದ ಕರ್ನಾಟಕದಲ್ಲಿ ಕನ್ನಡದ ಸ್ಥಿತಿ ಗತಿ ಬಗೆಗೆ ಬೆಳಕು ಚೆಲ್ಲುತ್ತಾ, ಗೋಕಾಕ ವರದಿಯ ಅನುಷ್ಠಾನದ ಕುರಿತಂತೆ ಎಳೆ ಎಳೆಯಾಗಿ ಬಿಡಿಸಿ ಬಣ್ಣಿಸಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿನ ಭಾರೀ ಜನಸಮೂಹವನ್ನು ಮಂತ್ರ ಮುಗ್ಧರನ್ನಾಗಿಸಿದ್ದರು. ತಮ್ಮ ಕೀರ್ತಿ ಹಿಮಾಲಯದೆತ್ತರಕ್ಕೇರಿದೆ ಎಂಬ ಪಾಟೀಲಪುಟ್ಟಪ್ಪನವರ ಮಾತನ್ನು ವಿನಯವಾಗಿಯೇ ಪ್ರಸ್ತಾಪಿಸಿ ತಮ್ಮ ಕೀರ್ತಿ- ಆರತಿ ಎಲ್ಲವೂ ಕರುನಾಡಲ್ಲೇ ಸದಾ ನೇತಾಡಿಕೊಂಡಿರಲಿ ಎಂದು ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದರು. ಸಾಹಿತಿಗಳ ಬಗೆಗೆ, ಸಹ ಕಲಾವಿದರ ಬಗೆಗೆ ತಮ್ಮ ಗೌರವವನ್ನೂ ತೋರಿಸಿ ,ಕನ್ನಡದ ಉಳಿವಿಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದ್ದರು. ಇಡೀ ದಿನ ಸಾವಿರಾರು ಜನರ ಸ್ಪರ್ಶದಿಂದ ಕೊಳೆಯಾಗಿದ್ದ ತಮ್ಮ ಷರ್ಟ್ ಅನ್ನು ಬದಲಾಯಿಸದೇ ಇರುವುದಕ್ಕೆ ಕಾರಣ ನೀಡಿ ಅಭಿಮಾನಿಗಳ ಸ್ಪರ್ಶದ ಈ ಷರ್ಟ್ ಎಷ್ಟು ಪುಣ್ಯ ಮಾಡಿತ್ತೋ… ಇದನ್ನು ಧರಿಸಿದ ಈ ರಾಜಕುಮಾರ ಎಷ್ಟು ಪುಣ್ಯ ಮಾಡಿದ್ದನೋ ಎಂದು ಪ್ರಾಮಾಣಿಕವಾಗಿ ನುಡಿದಾಗ ಜನರಲ್ಲಿ ಅಂದು ಅಭಿಮಾನದ ಸಾಕ್ಷಾತ್ಕಾರಾವಾಗಿತ್ತು !
ಕೊನೆಗೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಯೂರ ಚಿತ್ರದ ನಾನಿರುವುದೆ ನಿಮಗಾಗಿ ಹಾಡು ಹಾಡಿದಾಗಲಂತೂ ನಮಗೆಲ್ಲಾ ಮೈ ರೋಮಾಂಚನ. ನಮ್ಮೆಲ್ಲರ ನರನಾಡಿಗಳಲ್ಲೂ ಕನ್ನಡದ ಕೆಚ್ಚನ್ನು ತುಂಬುವಲ್ಲಿ ಜಾಥಾ ಅಂದು ಯಶಸ್ವಿಯಾಗಿತ್ತು. ಸುಮಾರು ಏಳೂವರೆಗೆ ಮುಕ್ತಾಯವಾದ ಕಾರ್ಯಕ್ರಮ ನಲವತ್ತು ಕಿ.ಮಿ. ದೂರದ ಶಿರಾ ತಲುಪಿದಾಗ ಮಧ್ಯರಾತ್ರಿ ಹನ್ನೆರೆಡು ಘಂಟೆಯಂತೆ !
ಕಾರ್ಯಕ್ರಮ ಮುಗಿದು ರಾತ್ರಿ ಹತ್ತಾದರೂ ಮೈದಾನದಿಂದ ಜನ ಹೊರಡುತ್ತಲೇ ಇದ್ದರು ! ಆ ಮಟ್ಟದ #ಜನಸಾಗರ ತುಂಬಿದ್ದ ದೃಶ್ಯವನ್ನು ಇಂದಿಗೂ ನೋಡಲು ಸಾಧ್ಯವಿಲ್ಲ.! ಈ ಎಲ್ಲಾ ಘಟನೆಗಳನ್ನು ಕಣ್ತುಂಬಿಕೊಂಡು, ಕಲಾವಿದರೆಲ್ಲರ ಮಾತುಗಳನ್ನು, ಅಪ್ಪುವಿನ ಲವಲವಿಕೆಯ ಓಡಾಟವನ್ನು ನೆನೆಯುತ್ತಾ ಮನೆ ಸೇರಿದಾಗ ರಾತ್ರಿ ಹನ್ನೊಂದು ! ಆದಿನ ನನ್ನ ಹೊಟ್ಟೆಯಲ್ಲಿದ್ದದ್ದು ಕೇವಲ ಮೂರು ಬನ್ನು ! ಆದರೆ ನಮ್ಮೆಲ್ಲರ ಮೈಮನಗಳಲ್ಲಿ ಅಣ್ಣಾವ್ರು ತುಂಬಿದ್ದ ಕನ್ನಡಾಭಿಮಾನ ಮಾತ್ರ ಬರೋಬ್ಬರಿ ನೂರು ಟನ್ನು…!

ಫೋಟೋ ಕೃಪೆ : times of india
** ಮರೆಯುವ ಮುನ್ನ **
ನಲವತ್ತು ವರ್ಷದ ಹಿಂದಿನ ಈ ಘಟನೆ ಕುರಿತು ಬರೆದರೆ ಅದೇ ಒಂದು ಪುಸ್ತಕವಾದೀತು ! ಅಣ್ಣಾವ್ರ ಜೊತೆಗೆ ಹಿರಿಯೂರಿಗೆ ಅಪ್ಪು ಸಹಾ ಬಂದಿದ್ದು ಅದೇ ಮೊದಲು. ಲಕ್ಷಾಂತರ ಜನರೆದುರು ಸ್ವಲ್ಪವೂ ಗಾಬರಿಯಿಲ್ಲದೇ ಲವಲವಿಕೆಯಿಂದ ಇದ್ದ ಅಪ್ಪು ಬಾಲ್ಯದಿಂದಲೇ ತಂದೆಯೊಂದಿಗೆ ಈ ತರಹದ ಜನರ ಪ್ರೀತಿಯ ಸವಿರುಚಿಯನ್ನು ಕಂಡಿದ್ದರ ಫಲವೇ ಬಹುಶಃ ಅವರನ್ನೂ ಸಹ ಕನ್ನಡಿಗರು ತಮ್ಮ ಹೃದಯಗಳಲ್ಲಿ ಚಿರಸ್ಥಾಯಿಯಾಗಿಟ್ಟಿರುವುದು. ಅಣ್ಣಾವ್ರ ನಾಯಕತ್ವ ಗೋಕಾಕ ಚಳವಳಿಯ ಹೋರಾಟದ ದಿಕ್ಕನ್ನೇ ಬದಲಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಯಾವ ವ್ಯಕ್ತಿಯಲ್ಲಿ ಮಾತೃ ಭಾಷೆ ಬಗೆಗೆ ನೈಜ ಬದ್ಧತೆ , ಹೃದಯದಲ್ಲಿ ನಾಡು ನುಡಿ ಕುರಿತಾದ ಪ್ರಾಮಾಣಿಕ ಕಳಕಳಿ , ಅನ್ಯರನ್ನೂ ಗೌರವಿಸುವ ಉದಾತ್ತ ಮನೋಭಾವ, ಜನರ ಬಗೆಗೆ ಪ್ರೀತಿ, ಸರಳತೆ, ವಿನಯ ಹಾಗೂ ಜನಪ್ರಿಯತೆಯಲ್ಲಿ ಎಷ್ಟೇ ಎತ್ತರಕ್ಕೇರಿದರೂ ಕೀರ್ತಿಶನಿಯಿಂದ ದೂರವಿರುವ ನಿಗರ್ವತನ …. ಇವೆಲ್ಲವೂ ಮನೆ ಮಾಡಿರುತ್ತದೆಯೋ ಅಂತಹ ವ್ಯಕ್ತಿಗಳು ಸೂರ್ಯ ಚಂದ್ರರಿರುವವರೆಗೂ ಶಾಶ್ವತರಾಗಿ ಜನಮನದಲ್ಲಿ ರಾರಾಜಿಸುತ್ತಲೇ ಇರುತ್ತಾರೆ.
ಅಂತಹಾ ಸಾಲಿನಲ್ಲಿ ಡಾ. ರಾಜ್ ಕುಮಾರ್ ಹಾಗೂ ಅಪ್ಪು ಸದಾ ಇದ್ದರು, ಇದ್ದಾರೆ ಹಾಗೂ ಇರುತ್ತಾರೆ ಎಂಬುದೂ ಸಹ ಅಷ್ಟೇ ಸತ್ಯ .
ಪುನೀತ್ ನಮ್ಮನ್ನಗಲಿ ಇಂದಿಗೆ ಮೂರು ತಿಂಗಳು. ಹೀಗಾಗಿ ಅವರು ಬಾಲಕನಾಗಿದ್ದಾಗ #ಹಿರಿಯೂರಿಗೆ ಬಂದಿದ್ದ ಒಂದು ಸಂಧರ್ಭ ಇಂದು ಹಾಗೇ ಕಣ್ಮುಂದೆ ಬಂದು ಹೋಯಿತು. ಆ ಸ್ಮರಣೀಯ ದಿನದ ಕೆಲ ಸಂಧರ್ಭಗಳನ್ನು ನನ್ನ ಸ್ನೇಹಿತರಿಗಾಗಿ ಅದರಲ್ಲೂ ವಿಶೇಷವಾಗಿ ನನ್ನ ಹಿರಿಯೂರಿನ ಮಿತ್ರರಿಗಾಗಿ ಇಲ್ಲಿ ಹಂಚಿಕೊಂಡಿದ್ದೇನೆ.
ಪ್ರೀತಿಯಿಂದ….
- ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)
