ಬೈಕ್ ಬಿಟ್ಟು ಪುಟ್ಟದೊಂದು ಸ್ಯಾಂಟ್ರೋ ಕಾರು ಕೊಂಡ ಗೋಲ್ಡನ್ ಸ್ಟಾರ್ ಗಣೇಶ್ ಯಶಸ್ಸಿನ ಹಾದಿಯ ಕುರಿತು ಖ್ಯಾತ ಸಿನಿ ಪತ್ರಕರ್ತರಾದ ಗಣೇಶ ಕಾಸರಗೋಡು ಅವರು ಓದುಗರ ಮುಂದಿಟ್ಟಿದ್ದಾರೆ. ತಪ್ಪದೆ ಮುಂದೆ ಓದಿ…
ಈ ಕಾಮಿಡಿ ಟೈಮ್ ಗಣೇಶನನ್ನು ಮೊಟ್ಟ ಮೊದಲ ಬಾರಿ ನಾನು ಭೇಟಿಯಾದದ್ದು ಗಾಂಧಿನಗರದ BCRC ಪ್ರೀವ್ಯೂ ಥಿಯೇಟರ್’ನಲ್ಲಿ. ಆ ಕಾಲದಲ್ಲಿ ಯಾವುದೋ ಚಾನಲ್’ನಲ್ಲಿ ಈತನ ನಟನೆಯ ‘ಯದ್ವಾತದ್ವಾ’ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಗಣೇಶನ ಅಭಿನಯ ಚಾತುರ್ಯ ಕಂಡು ಈತನ ಬಗ್ಗೆ ಏನಾದರೂ ಬರೆಯುವ ಮನಸ್ಸಾಯಿತು. ಒಂದು ವಿಸಿಟಿಂಗ್ ಕಾರ್ಡ್ ಕೊಟ್ಟು ಭೇಟಿಯಾಗಲು ತಿಳಿಸಿದೆ. ಆದರೆ ಗಣೇಶ ಬರಲಿಲ್ಲ, ನಮ್ಮ ಭೇಟಿಯಾಗಲೇ ಇಲ್ಲ. ವಿಸಿಟಿಂಗ್ ಕಾರ್ಡ್ ಕೊಡದೇನೇ ನನ್ನ ಬಳಿ ಬಂದು ಬರೆಸಿಕೊಳ್ಳುವ ನಟ-ನಟಿಯರ ನಡುವೆ ಇದ್ಯಾರಪ್ಪಾ ಪುಣ್ಯಾತ್ಮ ಅಂದುಕೊಂಡೆ! ಆದರೆ ನಂತರದ ದಿನಗಳಲ್ಲಿ ಇದೇ ಗಣೇಶ್ ಎಷ್ಟೊಂದು ಹತ್ತಿರವಾದನೆಂದರೆ ನಮ್ಮ ಫ್ಯಾಮಿಲಿ ಜತೆ ‘ಚಿತ್ರತಾರಾ’ ಬಿಡುಗಡೆಗಾಗಿ ಹುಬ್ಬಳ್ಳಿಗೆ ಬಂದ. ನವಲಗುಂದಕ್ಕೆ ಬಂದ.
ಹಂಪಿ, ಬದಾಮಿ, ಬಾಗಲಕೋಟೆ, ರಾಮದುರ್ಗ, ಧಾರವಾಡ, ಮಂಗಳೂರು, ಕುಂದಾಪುರ… ಎಲ್ಲಾ ಕಡೆಗೂ ಜತೆಯಾಗಿ ಬಂದ. ನಿಮ್ಮಾಣೆಗೂ ಹೇಳುತ್ತಿದ್ದೇನೆ : ಈ ಹುಡುಗನ ಜನಪ್ರಿಯತೆಯ ವಿರಾಟ್ ರೂಪವನ್ನು ನಾನು ನೋಡಿದ್ದೇ ಆವಾಗ! ಅದು ‘ಕಾಮಿಡಿ ಟೈಮ್’ ಕಾರ್ಯಕ್ರಮದ ಜನಪ್ರಿಯತೆ. ಹುಚ್ಚು ಬೀಳುತ್ತಿದ್ದ ಅಭಿಮಾನಿಗಳ ಕ್ರೇಜ್ ಕಂಡು ಆಗಲೇ ನಾನು ಹೇಳಿದ್ದೆ : ‘ಗಣೇಶ್, ಏನೋ ಕಾದಿದೆ ಕಣೋ ನಿನ್ಗೆ. ಚಿತ್ರರಂಗದಲ್ಲೂ ದೊಡ್ಡ ಹೆಸರು ಮಾಡುವ ಲಕ್ಷಣವಿದೆ ಗಣೇಶ್, ಆಲ್ ದಿ ಬೆಸ್ಟ್…’ – ನನ್ನ ಈ ಮಾತು ಕೇಳಿ ಭಾವಪರವಶನಾದ ಗಣೇಶನ ಮುಖ ಈಗಲೂ ನನ್ನ ಕಣ್ಣ ಮುಂದಿದೆ!

ಒಂದು ದಿನ ಇದ್ದಕ್ಕಿದ್ದಂತೆಯೇ ಫೋನ್ ಮಾಡಿ : ‘ಅಣ್ಣಾ, ಒಂದು ಸಿನಿಮಾದ ಆಫರ್ ಬಂದಿದೆ. ಶ್ರೀಧರ್ ಅನ್ನೋರು ನಿರ್ದೇಶಿಸಲಿರುವ ‘ಚೆಲ್ಲಾಟ’ದ ಆಫರ್. ನಾನು ‘ಗುಡ್ ಲಕ್’ ಅಂದೆ ಅಷ್ಟೇ. ನಡುನಡುವೆ ಸಕಲೇಶಪುರದಿಂದ ಫೋನ್ ಮಾಡಿ ಚಿತ್ರೀಕರಣದ ವಿವರ ತಿಳಿಸುತ್ತಿದ್ದ. ಹಾಡು, ಫೈಟ್, ಟ್ರೈನ್ ಅಂತೆಲ್ಲಾ ಹೇಳುತ್ತಿದ್ದ. ನೋಡನೋಡುತ್ತಿರುವಂತೆಯೇ ‘ಚೆಲ್ಲಾಟ’ ಅದ್ಭುತ ಯಶಸ್ಸು ಕಂಡಿತು. ಗಣೇಶನಿಗೆ ದೊಡ್ಡ ಹೆಸರು ತಂದಿತು.
ಜರಗನಹಳ್ಳಿಯ ನಮ್ಮ ‘ಅಮ್ಮನ ಮನೆ’ಗೆ ಓಡಿ ಬಂದ. ಎನ್.ಆರ್.ಕಾಲೊನಿಯ ರೂಮ್’ನಿಂದ ಒಂದೊಳ್ಳೆಯ ಮನೆಗೆ ವಾಸ್ತವ್ಯವನ್ನು ಶಿಫ್ಟ್ ಮಾಡಿರುವುದಾಗಿ ತಿಳಿಸಿದ. ಬೈಕ್ ಬಿಟ್ಟು ಪುಟ್ಟದೊಂದು ಸ್ಯಾಂಟ್ರೋ ಕಾರು ಕೊಂಡಿರುವುದಾಗಿ ತಿಳಿಸಿದ!
ನಡುವೆ ಏನಾಯಿತೋ ಏನೋ ಗೊತ್ತಿಲ್ಲ. ಮಾತಿಲ್ಲ, ಕತೆಯಿಲ್ಲ. ಫೋನಂತೂ ಇಲ್ಲವೇ ಇಲ್ಲ. ಗಣೇಶನನ್ನು ನಾನು ಮರೆತೆ, ಆತನೂ ಮರೆತ! ದಿಢೀರ್ ಅಂತ ಒಂದು ಮುಂಜಾನೆ ‘ಅಮ್ಮನ ಮನೆ’ಗೆ ಹಾಜರ್. ಅದೇ ಟ್ರಾಕ್ ಸೂಟ್, ಅದೇ ಕ್ಯಾಪ್, ಅದೇ ನಗು, ಅದೇ ಕುರುಚಲು ಗಡ್ಡ ಮತ್ತು ಅದೇ ಉತ್ಸಾಹದ ಚಿಲುಮೆ! ಬಂದವನೇ ಹೇಳ ಹೊರಟ : ‘ಅಣ್ಣಾ, ನಿಮಗೊಂದು ವಿಷ್ಯ ಹೇಳ್ಬೇಕು. ಯೋಗರಾಜ ಭಟ್ ಅಂತ ಒಬ್ರು ನಿರ್ದೇಶಕರಿದ್ದಾರಲ್ಲಾ? ಅವ್ರು ‘ಮುಂಗಾರು ಮಳೆ’ ಅನ್ನೋ ಸಿನಿಮಾ ನಿರ್ದೇಶಿಸಲಿದ್ದಾರೆ. ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಆಪ್ತರಾದ ಕೃಷ್ಣಪ್ಪ ಅನ್ನೋರು ನಿರ್ಮಾಪಕರು. ಆಶೀರ್ವಾದ ಮಾಡಿ ಅಣ್ಣಾ…’ – ಎಂದು ಹೇಳುತ್ತಾ ತಲೆಬಾಗಿ ನಿಂತೇ ಬಿಟ್ಟ ಗಣೇಶ! ಮತ್ತೆ ‘ಆಲ್ ದಿ ಬೆಸ್ಟ್’ ಅಂದೆ…

ನಂತರ ಜೋಗದ ಚಿತ್ರೀಕರಣ ಮುಗಿಸಿ ಬಂದ ಗಣೇಶ ಅಕ್ಷರಶಃ ನಡುಗುತ್ತಿದ್ದ! ‘ಅಂಥಾ ಸಾಹಸ ಮಾಡಿ ಬಂದಿದ್ದೇನೆ ಅಣ್ಣಾ. ಬದುಕಿ ಬಂದದ್ದೇ ದೊಡ್ಡ ವಿಷಯ. ಜೋಗದ ನೆತ್ತಿಯ ಅಂಚಿನಲ್ಲಿ ಚಿತ್ರೀಕರಿಸಿದ ರೀತಿಯೇ ಅದ್ಭುತ, ಅನನ್ಯ. ಈಗ ನಿಮ್ಮ ಮುಂದೆ ಜೀವಂತವಾಗಿ ನಿಂತಿದ್ದೇನೆ ಅಂದ್ರೆ ಅದು ನನ್ನ ಪುಣ್ಯ…’ – ಎಂದೆಲ್ಲಾ ಹೇಳುತ್ತಿದ್ದ. ನಾನು ನಕ್ಕು ಸುಮ್ಮನಾದೆ…
‘ಮುಂಗಾರು ಮಳೆ’ ತೆರೆಕಂಡಿತು. ಅದೊಂದು ಅನನ್ಯ ಅನುಭವ. ಅಂದೇ ಪ್ರೆಸ್ ಮೀಟ್. ಚಿತ್ರತಂಡವನ್ನು ಡಿಫರೆಂಟಾಗಿ ಅಭಿನಂದಿಸುವ ಮನಸ್ಸಾಯಿತು. ಗೆಳೆಯ ಸಂತೋಷ ಪೈಯವರಲ್ಲಿ ಹೇಳಿ ಕೊಂಡೆ. ಅವರು ನಾಲ್ಕೈದು ಹೂಗುಚ್ಛ ತರಿಸಿಕೊಂಡರು. ಗ್ರೀನ್ ಹೌಸ್ ಸೆಲ್ಲರ್’ನಲ್ಲಿ ನಡೆದ ಪ್ರೆಸ್ ಮೀಟ್’ನಲ್ಲಿ ತಂಡದ ಎಲ್ಲರಿಗೂ ಹೂಗುಚ್ಛ ನೀಡಿ ಅಭಿನಂದಿಸಿದೆವು. ಯೋಗರಾಜ್ ಭಟ್ಟರ ಕಣ್ಣಲ್ಲಿ ನೀರು. ಗಣೇಶನ ಕಣ್ಣಲ್ಲಿ ಆನಂದ ಭಾಷ್ಪ. ದಿನ ಬೆಳಗಾಗುವುದರಲ್ಲಿ ಕಾಮಿಡಿ ಟೈಮ್ ಗಣೇಶ್, ಗೋಲ್ಡನ್ ಸ್ಟಾರ್ ಗಣೇಶ್ ಆಗಿ ಬಿಟ್ಟಿದ್ದ!
ಜನಪ್ರಿಯತೆಯ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುತ್ತಲಿದ್ದಾಗೊಮ್ಮೆ ಗಣೇಶ್ ಮತ್ತೆ ‘ಅಮ್ಮನ ಮನೆ’ಗೆ ಬಂದಿದ್ದ : ‘ಅಣ್ಣಾ, ಜವಾಬ್ದಾರಿ ಹೆಚ್ಚಾಗಿದೆ. ನಾನು ಹೇಗಿರಬೇಕು ಹೇಳಣ್ಣಾ?’ – ಅಂದ. ನಾನಂದೆ : ‘ನಯ, ವಿನಯ, ಭಯ, ಭಕ್ತಿ, ನಿಷ್ಠೆ, ಶ್ರದ್ಧೆ, ಶ್ರಮ ಮತ್ತು ಜವಾಬ್ದಾರಿ…ಇಷ್ಟಿದ್ದರೆ ಸಾಕು. ತುಂಬಾ ಕೇರ್’ಫುಲ್ ಆಗಿರಬೇಕಾದ ಟೈಮ್ ಇದು. ಯಾರನ್ನೂ ನೋಯಿಸಬೇಡ. ಯಾರಲ್ಲೂ ವಿರಸ ಕಟ್ಟಿಕೊಳ್ಳಬೇಡ. ‘ಮುಂಗಾರು ಮಳೆ’ಯ ಹಿಂದೆ ಹೇಗಿದ್ದೀಯೋ ಹಾಗೇ ಇದ್ದು ಬಿಡು. ನಿನಗೆ ನೀನೇ ಮಾದರಿಯಾಗಿರು…’
ಆ ಮೇಲೆ ಏನೆಲ್ಲಾ ಆದುವು ನಿಮಗೆ ಗೊತ್ತೇ ಇದೆ. ಜನಪ್ರಿಯತೆಯ ಉತ್ತುಂಗಕ್ಕೇರಿದಾಗ ತಾನು ಇಷ್ಟಪಟ್ಟ ಹುಡುಗಿ ಶಿಲ್ಪಾಳನ್ನು ಮದುವೆಯಾದ. ಎರಡು ಮುದ್ದಾದ ಮಕ್ಕಳಾದುವು. ಬಿ.ಜೆ.ಪಿ.ಯಲ್ಲಿ ಮುದ್ದಿನ ಮಡದಿ ಶಿಲ್ಪಾಗೆ ವಿಶೇಷ ಸ್ಥಾನಮಾನವಿದೆ. ರಾಜರಾಜೇಶ್ವರಿನಗರದಲ್ಲೊಂದು ಭವ್ಯ ಬಂಗಲೆ ಕಟ್ಟಿಸಿಕೊಂಡಿದ್ದಾನೆ. ಉದ್ಯಮದ ಎಲ್ಲರೊಂದಿಗೂ ಸೌಹಾರ್ದಯುತ ಸಂಬಂಧ ಹೊಂದಿದ್ದಾನೆ. ಸಿಕ್ಕಾಗಲೆಲ್ಲಾ ಈಗಲೂ ನನ್ನನ್ನು ‘ಅಣ್ಣಾ’ ಎಂದು ಕರೆದು ಅಪ್ಪಿ ಮುದ್ದಾಡುತ್ತಾನೆ…
ಇಂಥಾ ಗಣೇಶನ ಬರ್ತ್ ಡೇ ಇಂದು. ಹ್ಯಾಪ್ಪಿ ಬರ್ತ್ ಡೇ ಮೈ ಬಾಯ್…
- ಗಣೇಶ ಕಾಸರಗೋಡು – ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು
