ಕತೆಗಳು ಸಣ್ಣದಾದರೂ ಮನಸ್ಸಿಗೆ ಹತ್ತಿರವಾಗುತ್ತದೆ ಅಂತಹ ಕತೆಗಳಲ್ಲಿ ಮಾರುತಿ ಗೋಪಿಕುಂಟೆ ಅವರ ಕತೆಯು ಒಂದು, ಅವರ ಗೋಲಿ ಆಟ ಕಲಿಸಿತು ಪಾಠ ಮತ್ತು ರಕ್ಷಿಸಿದ ವಾಚ್ ಮಿನಿ ಕತೆ ಭಾವನಾತ್ಮಕವಾಗಿ ಮನಸ್ಸಿನಲ್ಲಿ ಉಳಿಯುತ್ತದೆ, ತಪ್ಪದೆ ಮುಂದೆ ಓದಿ…
ಎಂದಿನಂತೆ ರಂಗನಿಗೆ ಶಾಲೆಗೆ ಬೇಸಿಗೆ ರಜೆ ಬಿಡಲಾಗಿತ್ತು. ರಂಗನಿಗೆ ಗೋಲಿ ಆಡುವುದು ಪ್ರಿಯವಾದ ಆಟ ಮನೆಯಲ್ಲಿ ಎಷ್ಟು ಹೇಳಿದರೂ ಅವರ ಕಣ್ತಪ್ಪಿಸಿ ಆಡುವುದಕ್ಕೆ ಹೋಗುತ್ತಿದ್ದ. ಹಿಂದಿನ ದಿನ ತನ್ನಲ್ಲಿದ್ದ ಗೋಲಿಗಳನ್ನೆಲ್ಲಾ ಸೋತಿದ್ದನು. ಹೊಸ ಗೋಲಿ ತೆಗೆದುಕೊಳ್ಳುವುದಕ್ಕೆ ಕಾಸು ಇರಲಿಲ್ಲ. ಅದು ಪೈಸೆಗಳಲ್ಲಿ ವ್ವವಹರಿಸುತ್ತಿದ್ದ ಕಾಲ.
ಏನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಅಪ್ಪನ ಜೇಬಲ್ಲಿ ಇಪ್ಪತ್ತು ಪೈಸೆ ಕಾಣಿಸಿತು. ಅದನ್ನು ತೆಗೆದುಕೊಂಡು ಬಿಟ್ಟನು. ಅದರಿಂದ ನಾಲ್ಕು ಗೋಲಿಗಳನ್ನು ತೆಗೆದುಕೊಂಡು ಗೆಳೆಯರೊಂದಿಗೆ ಆಡಿ ಸಾಕಷ್ಟು ಗೋಲಿಗಳನ್ನು ಗೆದ್ದುಬಿಟ್ಟ. ಖುಷಿಯಲ್ಲಿ ಅವರಪ್ಪ ಬಂದು ನಿಂತಿದ್ದನ್ನು ನೋಡಿರಲಿಲ್ಲ. ತಲೆ ಎತ್ತಿದ್ದವನಿಗೆ ಎದೆ ದಸಕ್ಕೆಂದಿತು. ಅಲ್ಲಿಂದ ಓಡಲು ಪ್ರಯತ್ನಿಸುವಷ್ಟರಲ್ಲೆ ಅವರಪ್ಪ ಅವನನ್ನು ಹಿಡಿದಿದ್ದನು. ನಿನಗೆ ಗೋಲಿ ಎಲ್ಲಿಂದ ಬಂದವು.

ಫೋಟೋ ಕೃಪೆ : youthkiawaaz
ಅವನು ಒಂದೊಂದೆ ಸುಳ್ಳುಗಳನ್ನು ಹೇಳುತ್ತ ಬಂದಂತೆ ಒಂದೊಂದು ಹೊಡೆತಗಳು ಅವನ ಮೇಲೆ ಬೀಳುತ್ತಿದ್ದವು. ಕೊನೆಗೆ ಜೇಬಿಂದ ತೆಗೆದುಕೊಂಡಿದ್ದನ್ನು ಬಾಯಿಬಿಡಲೇಬೇಕಾಯಿತು. ಈ ಘಟನೆ ಅವನನ್ನು ಮುಂದೆ ಎಂದೂ ಸುಳ್ಳು ಹೇಳದಂತೆ ಮಾಡಿತು. ಸತ್ಯ ನುಡಿಯಲೂ ಕಾರಣವಾದ ‘ಇಪ್ಪತ್ತು ‘ಪೈಸೆ ಆತನಲ್ಲಿ ಇವತ್ತಿಗೂ ಭದ್ರವಾಗಿದೆ.
ರಕ್ಷಿಸಿದ ವಾಚ್
ಬೆಂಗಳೂರಿಗೆ ಹೋಗಿದ್ದರ ಹೊಸತು. ಭವ್ಯ ಬೆಂಗಳೂರು ನೋಡಬೇಕೆಂಬುದು ನನ್ನ ಕನಸು ಆಗಿತ್ತು. ನಾನು ನಮ್ಮಣ್ಣನ ಮನೆಯಲ್ಲಿ ಉಳಿದು ಕೊಂಡಿದ್ದೆ. ಬೆಂಗಳೂರನ್ನು ನೋಡುವಷ್ಟು ಬುದ್ಧಿವಂತಿಕೆ ನನಗೂ ಇತ್ತು.
ಚಿಕ್ಕಪೇಟೆಯನ್ನು ನೋಡಿಕೊಂಡು ನಡೆದುಕೊಂಡೆ ಬರುತ್ತಿದ್ದೆ. ಚಿಕ್ಕಪೇಟೆಯ ಕಡೆಯಿಂದ ಟ್ರೈನ್ ಹೋಗುವ ಜಾಗದಲ್ಲಿ ಏನೊ ಕೆಲಸ ನಡೆಯುತ್ತಿದೆ ಎಂದು ಆ ಕಡೆಯ ಗೇಟ್ ತೆಗೆದಿದ್ದರು. ನನಗೂ ರೈಲ್ವೆ ಸ್ಟೇಷನ್ ನೋಡಬೇಕೆಂಬ ಆಸೆಯು ಇದ್ದರಿಂದ ಇಲ್ಲಿಂದ ಹೋಗಬಹುದೆಂದು ನುಗ್ಗಿದೆ ಒಳಗೂ ಹೋಗಿಬಿಟ್ಟಿದ್ದೆ ಪ್ಲಾಟ್ ಫಾರ್ಮ್ನಿಂದ ಹೊರಗಡೆ ಹೋಗಬೇಕಾಗಿತ್ತು. ನನಗೆ ಪ್ಲಾಟ್ ಫಾರ್ಮ್ ಟಿಕೇಟ್ ತಗೋಬೇಕು ಅನ್ನೋದು ಗೊತ್ತಿರಲಿಲ್ಲ.

ಫೋಟೋ ಕೃಪೆ : zeenews
ಬೇರೆ ದಾರಿ ಇರಲಿಲ್ಲ ಅಲ್ಲಿಂದ ಹೋಗಬೇಕಾಗಿತ್ತು. ಅಲ್ಲಿ ಮ್ಯಾನೇಜರ್ ಅನ್ನು ದಾಟಿ ಹೋಗಬೇಕಾಗಿತ್ತು. ಆತ ಟಿಕೇಟ್ ಇಲ್ಲದವರಿಗೆ ಪೈನ್ ಹಾಕ್ತಿದ್ದ, ಕೆಲವರಿಗೆ ಹಣ ಪಡೆದುಕೊಂಡು ಕಳುಹಿಸುತಿದ್ದ. ನನಗೆ ಎರಡೂ ಶಕ್ತಿ ಇರಲಿಲ್ಲ. ಆತ ನನಗೆ ಪೈನ್ ಹಾಕ್ತೇನೆ ಅಂದು ಬೆದರಿಸಿದ. ಆತನಿಗೆ ಕನ್ನಡ ಸರಿಯಾಗಿ ಬರ್ತಿರ್ಲಿಲ್ಲ. ನನ್ನಿಂದ ನೂರು ರೂಪಾಯಿ ಕೇಳಿದ ನನ್ನತ್ರ ಇದ್ದದ್ದು ವಾಪಸ್ ಮನೆಗೋಗವಷ್ಟು ಹಣ ಮಾತ್ರ. ಕೊಡ್ಲಿಲ್ಲ ಅಂದ್ರೆ ಕೇಸ್ ಹಾಕ್ತೀನಿ ಅಂತ ಎದರುಸ್ತಿದ್ದ ವಿಧಿಯಿಲ್ಲದೆ ಕೈಯಲ್ಲಿದ್ದ ವಾಚ್ ಬಿಚ್ಚಿಕೊಟ್ರು ನನ್ನಲ್ಲಿದ್ದ ಹಣವನ್ನು ಕಸಿದುಕೊಂಡಿದ್ದ ಏನಾದರಾಗಲಿ ಅಲ್ಲಿಂದ ಹೋದ್ರು ಸಾಕು ಅಂತ ಅಲ್ಲಿಂದ ಬಂದು ಮನೆಗೆ ಸುಮಾರು ಹತ್ತು ಕಿ ಮೀ ನಡ್ಕೊಂಡು ಬಂದಿದ್ದೆ. ಅಂತೂ ವಾಚ್ ನನ್ನನ್ನು ರಕ್ಷಣೆ ಮಾಡಿತ್ತು. ಅರಿಯದೆ ಮಾಡಿದ ತಪ್ಪಿಗೆ ದಂಡವೂ ಬಿದ್ದಿತ್ತು.
- ಮಾರುತಿ ಗೋಪಿಕುಂಟೆ – ಸಿರಾ ತಾಲ್ಲೂಕು ತುಮಕೂರು ಜಿಲ್ಲೆಯ ಗೋಪಿಕುಂಟೆ ಗ್ರಾಮ ನನ್ನ ಹುಟ್ಟೂರು. ಸಾಹಿತ್ಯವೆಂದರೆ ಬಲು ಪ್ರೀತಿ. ಕವಿತೆ ಬರೆಯುವ ಹಂಬಲ. ನನ್ನ ಅನೇಕ ಕವಿತೆಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ತೊಡಗಿಸಿ ಕೊಂಡಿದ್ದೇನೆ. ಕತೆ ಲಲಿತಪ್ರಬಂಧ ಬರೆಯುವ ಹವ್ಯಾಸವು ಇದೆ “ಎದೆಯ ನೆಲದ ಸಾಲು” ಕವಿತೆ ಸಂಕಲನ ಪ್ರಕಟಣೆಯ ಹಾದಿಯಲ್ಲಿದೆ.
