ಮನೇಲ್ಲಿ ಪೈನಾಪಲ್, ಬಾಳೆಹಣ್ಣಿನ ಕೇಸರಿಬಾತ್ ಮಾಡಿದ್ದೀರಿ, ಇಲ್ಲಾ ಹೊರಗೆ ಎಲ್ಲಾದರೂ ತಿಂದಿದ್ದೀರಿ. ಆದರೆ ಕೆಂಪು ಸೀಬೆಹಣ್ಣಿನ ಕೇಸರಿ ಬಾತ್ ತಿಂದಿರುವುದು ಬಲು ಅಪರೂಪ. ಆ ರಿಸಿಪಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ನಳಪಾಕ ಪ್ರವೀಣೆ ಚಂದ್ರಕಲಾ ಮಂಜುನಾಥ್ ಅವರು. ತಪ್ಪದೆ ಮನೆಯಲ್ಲಿ ಮಾಡಿ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ…
ಬೇಕಾಗುವ ಸಾಮಗ್ರಿಗಳು :
ಸಣ್ಣ ರವೆ/ಚಿರೋಟಿ – ಒಂದು ಕಪ್
ಸಕ್ಕರೆ – ಒಂದು ಕಪ್
ಸೀಬೆ ಹಣ್ಣು – ದೊಡ್ಡದು 1.
ಹಾಲು – 2 ಕಪ್
ತುಪ್ಪ – 1/4 ಕಪ್
ಗೋಡಂಬಿ, ದ್ರಾಕ್ಷಿ – ಸ್ವಲ್ಪ
ಕೇಸರಿ ಎಸಳು – 4-5 ಎಸಳು
ಏಲಕ್ಕಿ – 4

ತಯಾರಿಸುವ ವಿಧಾನ :
ಮೊದಲಿಗೆ ಒಂದು ಟೀ ಚಮಚ ಬಿಸಿ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿಡಬೇಕು. ನಂತರ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹುರಿದು ತೆಗೆದಿಟ್ಟುಕೊಳ್ಳಿ. ಸೀಬೆಹಣ್ಣನ್ನು ಹೆಚ್ಚಿ ರುಬ್ಬಿ, ಬೀಜವಿಲ್ಲದಂತೆ ಸೋಸಿಕೊಳ್ಳಿ. ಬಾಣಲೆಗೆ ರವೆಯನ್ನು ಹಾಕಿ ಚೆನ್ನಾಗಿ ಹುರಿದು ತೆಗೆದಿಡಿ.
ಒಂದು ಪಾತ್ರೆಯಲ್ಲಿ ಹಾಲು, ನೆನೆಸಿದ ಕೇಸರಿ ಎಸಳು, ಸಕ್ಕರೆ ಸೇರಿಸಿ ಕುದಿಯಲು ಬಿಡಿ. ಹಾಲು ಕುದಿ ಬರುವಾಗ ರವೆಯನ್ನು ನಿಧಾನವಾಗಿ ಹಾಕುತ್ತಾ, ಗಂಟಾಗದಂತೆ ತಿರುಗಿಸಿ. ಈಗ ಸೀಬೆಹಣ್ಣಿನ ರಸ ಮತ್ತು ಇನ್ನೊಂದಷ್ಟು ತುಪ್ಪ ಮತ್ತು ಸೇರಿಸಿ ಒಂದೆರಡು ನಿಮಿಷ ಸಣ್ಣ ಉರಿಯಲ್ಲಿಟ್ಟು ರವೆ ಅರಳಲು ಬಿಡಿ. ಕೊನೆಯಲ್ಲಿ ಏಲಕ್ಕಿ ಪುಡಿ, ಕರಿದ ಗೋಡಂಬಿ, ದ್ರಾಕ್ಷಿ ಸೇರಿಸಿ. ಈಗ ಸೀಬೆಹಣ್ಣಿನ ಕೇಸರಿಬಾತ್ ಸವಿಯಲು ಸಿದ್ಧ.
- ಕೈ ಚಳಕ : ಚಂದ್ರಕಲಾ ಮಂಜುನಾಥ್
