ಜಾನಪದ ಸೊಡರಲಿ ಕನ್ನಡದ ಆಡು ನುಡಿಯಲ್ಲಿ ಎನ್ನುತ್ತಾ ಕನ್ನಡಮ್ಮನ ಹಿರಿಮೆಯ ಕುರಿತು ಕವಿಯತ್ರಿ ಶಕುಂತಲ ಪಿ ಆಚಾರ್ ಅವರು ಬರೆದಿರುವ ಕವನವನ್ನು ತಪ್ಪದೆ ಓದಿ…
ಕನ್ನಡಾಂಬೆಯೇ ನಿನ್ನ ಮಡಿಲು
ಪ್ರೇಮ ಮಮತೆಯ ತೊಟ್ಟಿಲು
ಸ್ನೇಹ,ಸೌಹಾರ್ಧತೆಯ ಭದ್ರ ನೆಲೆಯು
ಶಾಂತಿ ಸಹನೆಯಾ ಕಡಲು
ತಾಯೆ ನೀ ಭರವಸೆಯ ಹೊನಲು
ಸುತ್ತ ಮುತ್ತಿಹ ಭ್ರಾತೃ ಭಾಷೆಗೆ
ನೀನು ನೀಡುವೆ ಗೌರವ
ಎಲ್ಲರೊಂದೇ ಎಂಬ ಭಾವದ
ಹೃದಯವಂತಿಕೆ ಅನುಕ್ಷಣ
ಸಮ್ಯಕ್ ಚಾರಿತ್ರ್ಯದ ಲಕ್ಷಣ
ಕನ್ನಡದ ಚೆಲುವು ಜಿಹ್ವೆಯಲಿ ನಲಿದು
ಅಮೃತದ ಸವಿಯು ತನುವನಾವರಿಸೆ
ಕೇಳುಗನು ಮರೆವ ಆನವರತ ದಣಿವ
ಚೈತನ್ಯಭರಿತ ದಾರ್ಶಿನಿಕರ ನಿಲುವು
ಕಬ್ಬಿಗರು ಕಟ್ಟಿ ಆರಾಧಿಸುವ ಗುಡಿಯು
ಗಿರಿಯೇರೆ ಪ್ರಕೃತಿ, ನೆಲವೆಲ್ಲ ಸಂಸ್ಕೃತಿ
ಹಸಿರುಟ್ಟು ಮನಸೆಳೆವ ಸಮೃದ್ಧ ಪೃಥ್ವಿ,
ಕುಹೂ ಇಂಚರದಿ ಪ್ರತಿ ಬೆಳಗ ಸ್ವಾಗತಿಸಿ
ಹೊನ್ನಕಿರಣದಿ ಧರೆಗೆ ರವಿಯ ಆರತಿ
ಮೈಮರೆಸುವಾ ಆಗುಂಬೆ ಚತುರ ಪ್ರಬೃತಿ
ಜಾನಪದ ಸೊಡರಲಿ ಕನ್ನಡದ ಆಡು ನುಡಿ
ಭಾವಗೀತೆಗಳು ನವಿರು ಭಾವಗಳ ಕೈಪಿಡಿ
ವಚನದರಿವಿನಾಶ್ರಯದಿ ಬದುಕ ಕಟ್ಟಿ ಹಿಡಿ
ಅರ್ಥ ಚಿತ್ತಾರದ ಸುಭಗ ಭಾಷಾಪಡಿ
ಸುಮಧುರ ನುಡಿ ಕನ್ನಡಿಗರ ಜೀವನಾಡಿ
ಕಾವ್ಯಗ್ರಂಥಗಳು ಪ್ರೌಢತೆಯ ಸಿರಿಗಡಲು
ಸಾಹಿತ್ಯ ಫಲಭರಿತ ತಾಯ ಒಡಲು
ಗದ್ಯ , ಪದ್ಯಗಳಲ್ಲಿ ಹಲ ಪ್ರಾಕಾರಗಳು
ಮುದಗೊಳಿಸುವ ಹಾಸ್ಯರಸದ ಹೊನಲು
ಅಭಿಜ್ಞ ಕವಿ ಬರಹಗಳೇ ನಿನ್ನ ಗೆಲುವು
ತಾಯೆ ಕನ್ನಡತಿ ಎರಗುವೆನು ನಿನ್ನಡಿ
ಜ್ಞಾನ ದೀವಿಗೆಯೇ ಸಂಸ್ಕಾರಕೆ ಮುನ್ನುಡಿ
ನಿನ್ನೊಲುಮೆ ಶ್ರೀರಕ್ಷೆ ಆನವರತ ನಮಗಿರಲಿ
ಎಲ್ಲೆಲ್ಲೂ ಮೊಳಗಲಿ ಕರುನಾಡ ಚೆನ್ನುಡಿ
ಲಿಪಿಗಳ ರಾಣಿ ನೀ ಸತ್ಯಾರ್ಥದ ಹೊನ್ನುಡಿ
- ಶಕುಂತಲ ಪಿ ಆಚಾರ್, ಚಿತ್ರದುರ್ಗ
