‘ಗುಬ್ಬಿಯ ಕಲರವ’ ಚುಟುಕು ಸಂಕಲನ ಪರಿಚಯ

ವೃತ್ತಿಯಲ್ಲಿ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿಯಾಗಿದ್ದು ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಶ್ರೀಯುತ ರಮೇಶ್ ಗುಬ್ಬಿಯವರ ‘ಗುಬ್ಬಿಯ ಕಲರವ’ ಚುಟುಕು ಸಂಕಲನದ ಕುರಿತು ಕದ್ರಿ ಕಂಬ್ಳ ರೇಖಾದೇವಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಗುಬ್ಬಿಯ ಕಲರವ – ಚುಟುಕು ಸಂಕಲನ.
ಕವಿ: ಎ.ಎನ್.ರಮೇಶ್. ಗುಬ್ಬಿ.
ಪ್ರಕಾಶನ : ವೈದ್ಯ ವಾರ್ತಾ ಪ್ರಕಾಶನ,ಮೈಸೂರು.
ಪುಟಗಳು 60. 2012
ಬೆಲೆ: 40/

ವೃತ್ತಿಯಲ್ಲಿ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿಯಾಗಿದ್ದು ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಶ್ರೀಯುತ ರಮೇಶ್ ಗುಬ್ಬಿಯವರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕವನ, ಚುಟುಕು ಕಥೆ, ನಾಟಕ, ಚಿತ್ರ ಕತೆಗಳಲ್ಲಿ ಪ್ರಸಿದ್ಧಿಯನ್ನು ಪಡೆದವರು. ಮಾತ್ರವಲ್ಲ ನಟನೆ, ನಿರೂಪಣೆ , ನಿರ್ದೇಶನ ಕ್ಷೇತ್ರದಲ್ಲೂತಮ್ಮದೇ ಆದ ಛಾಪನ್ನು ಮೂಡಿಸಿದವರು. ಇವರ ಅನೇಕ ಕವನ , ಹನಿಗವನಗಳ ಸಂಕಲನ, ಕಥಾ ಸಂಕಲನ, ನಾಟಕ, ಹಾಸ್ಯಗವನ ಮುಂತಾದವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ. ಗುಬ್ಬಿಯ ಕಲರವ ಇವರ ಪ್ರಥಮ ಸಂಕಲನ. ಇವರಿಗೆ ಬಂದ ಪ್ರಶಸ್ತಿ, ಬಹುಮಾನಗಳು ಅಸಂಖ್ಯ. ಕೆಲವನ್ನಷ್ಟೇ ಇಲ್ಲಿ ನಮೂದಿಸುತ್ತೇನೆ.

1. ರಾಜ್ಯ ಮಟ್ಟದ ಸರ್. ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಮತ್ತು ಬೆಳ್ಳಿ ಪದಕ.
2. ಪ್ರತಿಷ್ಠಿತ ಬಸವ ಜ್ಯೋತಿ ಪ್ರಶಸ್ತಿ
3. ಕೆ.ಎಸ್.ನ.ರಾಜ್ಯ ಮಟ್ಟದ ಕಾವ್ಯ ಪುರಸ್ಕಾರ.
4. ಜನ್ನ ಕಾವ್ಯ ಪ್ರಶಸ್ತಿ
5. ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ
6.ಕನಕಶ್ರೀ ಕಾವ್ಯ ಪ್ರಶಸ್ತಿ

ಇದಲ್ಲದೆ ಕಾವ್ಯಶ್ರೀ ಪುರಸ್ಕಾರ, ಕರುನಾಡ ಸಾಹಿತ್ಯ ಸೇವಾರತ್ನ ಪ್ರಶಸ್ತಿ, ರಾಜ್ಯ ಅನಿಕೇತನ ಪ್ರಶಸ್ತಿ…ಹೀಗೆ ಬರೆಯುತ್ತಾ ಹೋದರೆ ಪುಟಗಳು ಸಾಲದು. ನಾಟಕ ರಚನೆ, ನಟನೆ ಮತ್ತು ನಿರ್ದೇಶನದಲ್ಲಿ ಈಗಾಗಲೇ ರಾಷ್ಟ್ರ ಮಟ್ಟದ ಗಮನ ಸೆಳೆದಿದ್ದಾರೆ.

ಇವರ ಹನಿಗವಿತೆಗಳಲ್ಲಿ ವಾಸ್ತವದ ಜಗತ್ತಿನ ಜೊತೆಯಲ್ಲಿಯೇ ಬದುಕಿನ ಅನುಬಂಧವಿದೆ. ಮಾತಿನ ಚಮಕ್ ಇದೆ. ಅಕ್ಷರಗಳ ಪದ ಜೋಡಣೆಯಲ್ಲಿ ಮಾಧುರ್ಯವಿದೆ. ಬೆಳಕಿನ ಒರತೆಯಿದೆ. ಗುಬ್ಬಿಯ ಕಲರವದಲ್ಲಿ ಕಚಗುಳಿಯಿಡುವ ಭಾವನೆಗಳಿವೆ. ನಿರಾಡಂಬರ ಸೊಬಗಿದೆ.

ಹೀಗೇಕೆ..? :

ಅಂದು ಮದುವೆಗೂ ಮುನ್ನ
ಸವಿ – ಮಾತುಗಳ ಮಹಾಪೂರ
ಪ್ರಿಯಾ ಈಗೀಗ ಏಕೆ
ಹನಿ ಮಾತಿಗೂ ಬರ ? !!

***
ಏ – ಕಾಂತ :

ಏ ! ಕಾಂತಾ
ನೀನು ದೂರಾದ
ಮೇಲೀಗೀಗ
ಬರೀ ಏಕಾಂತ !!
ಕವಿ ಗೋಷ್ಠಿ.
ಕವಿ ಗೋಷ್ಠಿಯ ತುಂಬ
ಬರೀ ಕವಿಗಳು !
ಕೇಳಲು ಇರಲೇ ಇಲ್ಲ
ಅಲ್ಲಿ ಕಿವಿಗಳು.

ಇಲ್ಲಿ ಹಾಸ್ಯದ ಜೊತೆ ವಿಡಂಬನೆಯೂ ಇದೆ. ವಿಷಾದವೂ ಇದೆ.

***
ಸ್ವದೇಶಿ :

ಅವನು ಪಕ್ಕಾ ಗಾಂಧಿವಾದಿ
ಸದಾ ಸ್ವದೇಶೀ
ಮುಟ್ಟುವುದಿಲ್ಲ ವಿಸ್ಕಿ- ಬ್ರಾಂದಿ
ಏನಿದ್ದರೂ …ದೇಸೀ ಸೇಂದಿ.


***

ಮಳ್ಳಿ :

ನನ್ನವಳು ಏನೂ
ಅರಿಯದ ಮುಗ್ಧ- ನೀರೆ
ಆರಿಸಲು ಬರುವುದೇ ಇಲ್ಲ
ಕಡಿಮೆ ಬೆಲೆಯ ಒಡವೆ- ಸೀರೆ.
ಕೊಳ್ಳು- ಬಾಕರು.
ಕೊಳ್ಳು ಬಾಕರು ನಾವು
ಕಂಡದ್ದೆಲ್ಲ ಬೇಕು
ಅಗತ್ಯ ಇರದಿದ್ದರೂ
ನೆರೆಯವರ ಕಣ್ಣು- ಕುಕ್ಕಲು ಬೇಕು.
ಸಮರಸ. ‌
ಸರಸಕ್ಕೂ
ಆಗಾಗ ಇರಬೇಕು
ವಿರಸದ….
ವಿರಾಮ.!

***

ಕಲೆ : 

ವಿಮರ್ಶೆಯೂ ಮಹಾನ್ ಕಲೆ !
ಉತ್ತಮ ಬರಹಗಳಲ್ಲು ಒಮ್ಮೊಮ್ಮೆ
ಹುಡುಕಬೇಕು ಕಪ್ಪು- ಕಲೆ
ಹೆಚ್ಚಿಸಿಕೊಳ್ಳಲು ತಮ್ಮ- ಬೆಲೆ.!!
ಈ ಹನಿಗವನ ಜಗದ ರೀತಿ ನೀತಿಗೆ ಹಿಡಿದ ಕನ್ನಡಿಯಾಗಿದೆ.
ಚೌತಿ – ಸಮಾಪ್ತಿ.
ಪ್ರಿಯ ಗೆಳತಿ ಕಳೆದ ಚೌತಿ
ನಮ್ಮ ಪ್ರೇಮಕ್ಕೆ ಅಂಬೆಗಾಲು!
ಈ – ಸರತಿ….ಗಣಪನೊಡನೆ
ಅದೂ ನೀರು ಪಾಲು.!!!
ಮೊಗದಲ್ಲಿ ನಗುವರಳಿಸುವ ಹನಿಗವನವಿದು.
ವರ- ಪರೀಕ್ಷೆ
ಮಾವ ಖಾತರಿ ಪಡಿಸಿಕೊಂಡ
” ಇದೆಯಾ ಜಾಸ್ತಿ-ಪಗಾರದ ನೌಕರಿ”
ಮಗಳು ಖಚಿತ ಪಡಿಸಿಕೊಂಡಳು
“ಕಲಿತಿರುವೆಯಾ ನಿತ್ಯದ ಮನೆ ಚಾಕರಿ”!!
ಇಲ್ಲಿ ಪ್ರಸ್ತುತ ಪರಿಸ್ಥಿತಿಯ ವಾಸ್ತವಿಕತೆಯ ಅನಾವರಣವಿದೆ.
ಅಂತರ.
ನನ್ನವಳು ತೌರಿನಲ್ಲಿದ್ದರೆ
ಏನೋ – ಸೆಳೆತ
ಮನೆಗೆ ಬಂದರೆ
ತಲೆ ಸಿಡಿತ!!
ವಂದನೆ- ಅಭಿವಂದನೆ.
ಕೈ- ಕೊಟ್ಟವಳಿಗೆ ಒಲವಿನ ವಂದನೆ
ಬರೆಯಲು ಕಾರಣವಾದೆ ನೀ
ಕೈ ಹಿಡಿದವಳಿಗೆ ಗೆಲುವಿನ ಅಭಿನಂದನೆ
ಬೆಳೆಯಲು ಪ್ರೇರಣೆಯಾದೆ ನೀ.

ಇಲ್ಲಿ ಪ್ರಾಸಬದ್ಧವಾಗಿ ಬರೆಯುವ ಜಾಣ್ಮೆಯೊಡನೆ ಅರ್ಥಗರ್ಭಿತವಾಗಿದೆ. ಪ್ರತಿ ದಿನವೂ ಮುಖ ಪುಟದಲ್ಲಿ ಬರೆಯುವ ರಮೇಶ್ ಗುಬ್ಬಿಯವರ ಹನಿಗವನಗಳನ್ನು ಓದುವುದೇ ಚೆಂದ. ಅವರ ಚುಟುಕಗಳು ವ್ಯಕ್ತ ಪಡಿಸುವ ಭಾವನೆಗಳ ಸೊಗಸೇ ವಿಶಿಷ್ಟವಾದುದು.

ಕಳೆದ ತಿಂಗಳಿನಲ್ಲಷ್ಟೇ ಗುಬ್ಬಿಯವರ “ಬುಧ್ದ ನಗುತ್ತಿದ್ದಾನೆ” ಕವನ ಸಂಕಲವು ಪ್ರತಿಷ್ಠಿತ ” ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ” ಯ ಗೌರವಕ್ಕೆ ಪಾತ್ರವಾಗಿದೆ. ವಸಂತಾ ಮೇಡಂ ಕೊನೆಯಲ್ಲಿ ನಮಗೂ ಬರೆಯಲು ಹೇಳಿ ಸ್ಪೂರ್ತಿ ತುಂಬಿದ್ದಾರೇನೋ ನಿಜ. ಆದರೆ ಬರೆಯಲು ಎಷ್ಟು ಕಷ್ಟವಿದೆಯೆಂದು ಈಗಲೇ ಅರ್ಥವಾಗಿದ್ದು. ಆದರೂ ಸಣ್ಣ ಪ್ರಯತ್ನ ಪಟ್ಟಿದ್ದೇನೆ.

***
ಜಾಹೀರಾತು

ಏಲಕ್ಕಿ ಲವಂಗ ಉಪ್ಪಿದೆಯೇ
ನಿಮ್ಮ ಹಲ್ ಪುಡಿಯಲ್ಲಿ
ಕೇಳಿದಾ ಸುಂದರಿಯ ಓಡಿಸಿದಳು
ಸುಂದ್ರಜ್ಜಿ ಹಿಡಿಸೂಡಿಯಲ್ಲಿ.
ನೋವು
ಮಾತಿನಾ ಮೊನೆಯೇಕೆ
ಚುಚ್ಚದಿರು ಎನ್ನನು
ಮನದ ಕದವ ಮುಚ್ಚಿದರೂ
ಕಾಡುತಿಹುದು ಎದೆಯನು.
ಸೌಂದರ್ಯ
ಆಹಾ! ಬಿದ್ದೆನಾ ಸುಂದರಿಯ ನೋಟದೊಳು
ರೂಪವದು ಭದ್ರವಾಗಿರಲು ಮನದ ಪೀಠದೊಳು
ನಗು ನಗುತಾ ಹೂವನಿಡಲು ಅವಳ ಕರದೊಳು
ಕಂಡೆನಾ ಮಾಂಗಲ್ಯ ಸರವನು ಕೊರಳೊಳು.
ನಿರೀಕ್ಷೆ
ನಲ್ಲನ ಪ್ರೇಮದಾ ಓಲೆಯದು
ಬಲು ನಿರೀಕ್ಷಿತ
ಕನ್ಯಾರ್ಥಿಯಾಗಿ ಮನೆಯೆದುರು ನಿಂತಿರಲು
ಅದು ಅನಿರೀಕ್ಷಿತ.
ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು.


  • ಕದ್ರಿ ಕಂಬ್ಳ ರೇಖಾದೇವಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW