ಗುರಿ ಇಲ್ಲದ ಜೀವನ, ರೆಕ್ಕೆ ಇಲ್ಲದ ಹಕ್ಕಿಯಂತೆ

ದೀಪದ ಹಣತೆಯಿಂದ ಇನ್ನೊಂದು ದೀಪ ಹಚ್ಚಬಹುದು. ಒಂದು ಟ್ಯೂಬಲೈಟನಿಂದ ಇನ್ನೊಂದು ಟ್ಯೂಬಲೈಟ ಹಚ್ಚಲು ಬರುವುದಿಲ್ಲ. ಎಲ್ಲವನ್ನು ಹಣದಿಂದ ಕೊಂಡು ಕೊಳ್ಳಲು ಆಗುವುದಿಲ್ಲ. ಕವಿಯತ್ರಿ ಸಂಧ್ಯಾ ಟಿ ಅವರ ಲೇಖನಿಯಲ್ಲಿ ಅರಳಿದ ಸುಂದರ ವಿಚಾರದ ಸೂಕ್ಷ್ಮ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಜ್ಞಾನ ಇದು ತುಂಬಾ ಮೌಲ್ಯವಾದದ್ದು. ಇದು ಪವಿತ್ರಕ್ಕೆ ಪವಿತ್ರ ಮಂಗಳಕ್ಕೆ ಮಂಗಳ. ಜ್ಞಾನಕ್ಕೆ ಸಮ ಬೇರೊಂದಿಲ್ಲ. ಮಾತು, ಕ್ರಿಯೆ, ಮನಸ್ಸು. ಈ ತ್ರಿಕರಣಗಳು ಒಂದೇ ಆಗಿ ಶುದ್ಧಿಯಿಂದ ಕಾರ್ಯ ಸಾಧನೆ ಮಾಡಲು ಜ್ಞಾನವು ಸಹಾಯ ಮಾಡುತ್ತದೆ. ಜ್ಞಾನವಿದ್ದಲ್ಲಿ ಆತ್ಮ ವಂಚನೆಗೆ ಸ್ಥಳವಿಲ್ಲ. ಮನುಷ್ಯರಿಗೆ ಹುಟ್ಟು ಸಾವು ಅನಿವಾರ್ಯ. ಅದರಂತೆ ಬಾಲ್ಯ, ಯೌವನ, ಮುಪ್ಪು ಇವು ಸೃಷ್ಟಿಯ ನಿಯಮ. ಬದುಕಿದ್ದಾಗ ಶಕ್ತಿಯಿರುವಾಗ ಮಾಡಿದ ಧರ್ಮ ಕರ್ಮಗಳೆ ನಮ್ಮ ಜನ್ಮಾಂತರದ ಸುಖ ದುಃಖಗಳೆ ಸಾಧನೆಗಳಿಗೆ ಕಾರಣವಾಗುತ್ತವೆ.

ತಿಳಿಯುವ ಕಲಿಯುವ ಕುತುಹಲವೆ ಜ್ಞಾನ. ಇದರಿಂದ ಜೀವನದ ಮೌಲ್ಯ ತಿಳಿಯುವಂತಾಗಬೇಕು. ಸಮಯಕ್ಕೆ ಸರಿಯಾಗಿ ಮಾತನಾಡಬಲ್ಲವನೆ ಪಂಡಿತ. ತನ್ನ ಶಕ್ತಿಗೆ ತಕ್ಕ ಜನಸೇವೆ ಮಾಡುವವ ಮತ್ತು ಕೋಪದ ಇತಿ ಮಿತಿಗಳರಿತವನು ಗುರಿ ಸಾಧಿಸಬಲ್ಲ. ಆಸೆ ಆಮಿಷಗಳಿಗೆ ದಾಸನಾಗದೆ ಸ್ವತಹ ದುಡಿದು ತಿನ್ನುವವನು ಸಾವು ಗೆದ್ದವ. ನಮ್ಮ ಬದುಕಿಗೆ ಯಶಸ್ಸು ಸಿಗಬೇಕೆಂದರೆ ಹನ್ನೊಂದು ಇಂದ್ರಿಯಗಳನ್ನು ಮೊದಲು ಗಮನಿಸಬೇಕು.

ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಹುದ್ದೆಯಲ್ಲಿದ್ದಾಗ ಒಂದು ಸಂವಾದದಲ್ಲಿ ಮಾತನಾಡುವಾಗ ಒಬ್ಬ ವಿದ್ಯಾರ್ಥಿ ನಿಮ್ಮ ಬದುಕು ಸಾರ್ಥಕ ಎನಿಸಿದ ಕ್ಷಣ ಯಾವುದು? ಎಂದು ಕೇಳಿದಾಗ ಅವರು ಹೇಳಿದ ಉತ್ತರ ಏನೆಂದರೆ ನಾನು ಒಂದು ಸಾರೆ ಹೈದರಾಬಾದ ನಿಜಾಂ ಆಸ್ಪತ್ರೆಗೆ ಹೋದಾಗ ಅಲ್ಲಿ ಪೋಲಿಯೋ ಪೀಡಿತ ಮಕ್ಕಳು ತಮ್ಮ ದುಬ೯ಲ ಕಾಲುಗಳಿಗೆ ಭಾರವಾದ ಕಬ್ಬಿಣದ ಕವಚ ಧರಿಸಿ ನಡೆಯಲು ತುಂಬಾ ಪ್ರಯಾಸ ಪಡುತ್ತಿದ್ದರು. ಅದನ್ನು ನೋಡಿ ತಮ್ಮ ಸಹೋದ್ಯೋಗಿಗಳ ಜೊತೆ ಚರ್ಚಿಸಿ ಅತಿ ಹಗುರವಾದ ಕಬ್ಬಿಣಕ್ಕಿಂತಲೂ ಗಟ್ಟಿಯಾದ ಲೋಹದಿಂದ ಕವಚ ತಯಾರಿಸಿ ಕೊಟ್ಟರು. ಮಕ್ಕಳು ಅದನ್ನು ಧರಿಸಿ ನಗುತ ಓಡಾಡುವುದನ್ನು ನೋಡಿದಾಗ ನನ್ನ ಜೀವನ ಸಾರ್ಥಕ ಎನಿಸಿತು ಎಂದರು.

ದ.ರಾ. ಬೇಂದ್ರೆಯವರು ಆಸ್ಪತ್ರೆಯಲ್ಲಿ ಕೊನೆ ಕಾಲದ ಪರಿಸ್ಥಿತಿಯಲ್ಲಿಯೂ ನಗು ನಗುತ್ತಾ ಮಾತಾಡುತ್ತಾ ತಮ್ಮ ಸೇವೆ ಮಾಡುತ್ತಿರುವ ನಸ೯ಗೆ ‘ಮಗಳೇ, ನಿನ್ನ ಹೆಸರೇನವ್ವ?’ ಎಂದು ಕೇಳಿದಾಗ ನಸ೯ ಸಾವಿತ್ರಿ ಎಂದಳಂತೆ. ಅದಕ್ಕೆ ಬೇಂದ್ರೆಯವರು ಹಾಸ್ಯದಿಂದ ‘ಹಾಗಿದ್ರೆ, ನನಗೆ ಅರಾಮ ಆಯಿತು. ಯಾಕೆಂದರೆ ಸಾವಿತ್ರಿ ಇರುವಲ್ಲಿ ಯಮನೂ ಬರುವುದಿಲ್ಲ’… ಎಂದು ತಮ್ಮ ಹಾಸ್ಯ ಪ್ರವೃತ್ತಿಯನ್ನು ತೋರಿಸಿದರು. ಹೀಗೆ ಮನಸ್ಸು ಮಾತು ಕ್ರಿಯೆ ಎಲ್ಲವೂ ಶುದ್ಧವಾಗಿದ್ದವು. ಜ್ಞಾನ ಸಂಪಾದಿಸಲು ವ್ಯಕ್ತಿಗಳೇ ಬೇಕಿಲ್ಲ. ವಸ್ತುಗಳಿಂದಲೂ ಸಂಪಾದಿಸಬಹುದು. ಆದರೆ ಹಣ, ಪ್ರಶಂಸೆ ಮೊದಲಾದ ದುರಾಸೆಯಿಂದ ಹೋದರೆ ಜೀವನವೇ ದುಸ್ತರವಾಗುವುದು. ಒಂದು ದೀಪದ ಹಣತೆಯಿಂದ ಇನ್ನೊಂದು ದೀಪ ಹಚ್ಚಬಹುದು. ಒಂದು ಟ್ಯೂಬಲೈಟನಿಂದ ಇನ್ನೊಂದು ಟ್ಯೂಬಲೈಟ ಹಚ್ಚಲು ಬರುವುದಿಲ್ಲ. ಎಲ್ಲವನ್ನು ಹಣದಿಂದ ಕೊಂಡು ಕೊಳ್ಳಲು ಆಗುವುದಿಲ್ಲ. ಯೋಚಿಸಿ ಗುರಿಯನ್ನು ಮುಟ್ಟಲು ಪ್ರಯತ್ನಿಸಬೇಕು.

ಸಲ್ಲಲಿ ಮಾನವನ ಪ್ರೀತಿ ಪ್ರಕೃತಿಗೆ
ನಿಲ್ಲಲಿ ಮನ ಧರ್ಮದ ಸುಕೃತಿಗೆ

ಇರಲಿ ಸಂತೋಷ ನೈಸರ್ಗಿಕ ಸೌಂದರ್ಯಕೆ
ಬರಲಿ ಕಾಲಚಕ್ರ ನೀತಿ ಸಂಹಿತೆ ಯಡೆಗೆ
ಜಾರಲಿ ಮನ ಸತ್ಯದ ಸಂದೋಹದೆಡೆಗೆ
ಸೇರಲಿ ಬದುಕು ಸತ್ಸಂಗದ ಕಡೆಗೆ

ಮನ ಮನೆ ಬೆಳಗಲಿ ಶಾಂತಿ ಸಮೃದ್ಧಿಯಲಿ
ಹೀನ ಕೃತ್ಯ ಮೋಸ ವಂಚನೆ ದೂರಾಗಲಿ
ಧ್ಯಾನ ತೃಪ್ತಿ ಪುಷ್ಟಿ ಯಿಂದ ಬೆಳೆಯಲಿ
ಮಾನವತೆಗೆ ಮಾನ್ಯತೆ ಪ್ರತಿ ಸಿಗಲಿ

ಯಾರಾದರೇನು ಕೈ ಜೋಡಿಸಲಿ ಸಮಾನತೆಗೆ
ಮಾರಾಮಾರಿಗೆ ಹೋಗದಿರಲಿ ಕ್ರೂರತೆಗೆ
ದುರಾಲೋಚನೆ ಸಲ್ಲದು ಮಾನವೀಯತೆಗೆ
ಪರಿತಪಿಸಬೇಕಾಗುವದು ಎಂದಿಲ್ಲ ಕೊನೆಗೆ

ಎಚ್ಚರ ಎಚ್ಚರವಿರಲಿ ನಿನಗೆ ಮಾನವ
ನಿಚ್ಚಳವಿರಲಿ ಬಿಡು ನಿನ್ನ ಕೃತಕವ
ಸ್ವಚ್ಛತೆಗೆ ಕಲಕ ಬೇಡ ನೀ ಮನವ
ನಿಶ್ಚಿಂತೆಯಲಿ ಕಳೆ ನೀ ಮರಣವ


  • ಸಂಧ್ಯಾ ಟಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading