ಹುಟ್ಟಿದಾಗಿನಿಂದ ಜನನಿ ಮೊದಲ ಗುರುವಾಗಿ ಸಲಹುತ್ತಾಳೆ ನಂತರ ತಂದೆ ಮನೆಯಿಂದ ಹೊರಗೆ ಹೆಜ್ಜೆ ಇಡಲು ದಾರಿ ತೋರಿಸುತ್ತಾನೆ.. ನಂತರದ ಸ್ಥಾನವನ್ನು ಗುರುವು ವಹಿಸಿಕೊಳ್ಳುತ್ತಾರೆ..ಗುರುವಿನ ಕುರಿತಾದ ಲೇಖನವನ್ನು ತಪ್ಪದೆ ಮುಂದೆ ಓದಿ…
‘ಗುರು ಎಂದರೆ ವ್ಯಕ್ತಿಯಲ್ಲ,
ಒಂದು ಶಕ್ತಿ. ಅಜ್ಞಾನದ
ಕತ್ತಲೆಯ ಕಳೆದು
ಸುಜ್ಞಾನದೆಡೆಗೆ ಕರೆದು ಕೊಂಡು
ಹೋಗುವ ಶಬ್ದವೇ ಗುರು’
ಸ್ವಾಮಿ ವಿವೇಕನಂದರ ಈ ವಾಕ್ಯಗಳು ಶಿಕ್ಷಕ ಮಕ್ಕಳ ಜೀವನದಲ್ಲಿ ಎಂತಹ ಅದ್ಭುತ ಸ್ಥಾನವನ್ನು ಹೊಂದಿರುವನೆಂದು ತಿಳಿಯುವುದು. ಒಬ್ಬ ವಿದ್ಯಾರ್ಥಿಯನ್ನು ಪರಿಪೂರ್ಣ ವ್ಯಕ್ತಿಯಾಗಿ ಬದಲಾಯಿಸಬಲ್ಲ ಸಂಪೂರ್ಣ ಶಕ್ತಿ ಗುರುವಿನಲ್ಲಿ ಇದೆ. ಶಿಕ್ಷಕನು ವಿದ್ಯಾರ್ಥಿಯಲ್ಲಿ ಅಜ್ಞಾನವನ್ನು ತೊಲಗಿಸಿ, ಅಕ್ಷರ ಎಂಬ ಬೀಜ ಬಿತ್ತಿ, ಸುಜ್ಞಾನ ಎಂಬ ಹೆಮ್ಮರವನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತಾನೆ.
“ಮಾತೃ ದೇವೋಭವ,ಪಿತೃದೇವೋಭವ,ಆಚಾರ್ಯ ದೇವೋಭವ,ಅಥಿತಿ ದೇವೋಭವ.” ಅಂದರೆ ದೇವರನ್ನು ಇವರಲ್ಲಿ ಕಾಣು ಎಂದರ್ಥ..
ಹುಟ್ಟಿದಾಗಿನಿಂದ ಜನನಿ ಮೊದಲ ಗುರುವಾಗಿ ಸಲಹುತ್ತಾಳೆ ನಂತರ ತಂದೆ ಮನೆಯಿಂದ ಹೊರಗೆ ಹೆಜ್ಜೆ ಇಡಲು ದಾರಿ ತೋರಿಸುತ್ತಾನೆ.. ನಂತರದ ಸ್ಥಾನವನ್ನು ಗುರುವು ವಹಿಸಿಕೊಳ್ಳುತ್ತಾರೆ..
ಒಬ್ಬ ವ್ಯಕ್ತಿ ಪರಿಪೂರ್ಣ ವ್ಯಕ್ತಿಯಾಗಲು ಅವನ ಜೀವನದಲ್ಲಿ ಬಂದಂತಹ ಜೀವನದ ಮಾರ್ಗದರ್ಶಕರಾದ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ.
ಮಗು ಮನೆಯಲ್ಲಿ ತಾಯಿ – ತಂದೆಯನ್ನು ಅನುಸರಿಸಿ ಹಾಗೂ ಅನುಕರಿಸುವುದರ ಮೂಲಕ ಹಲವಾರು ಕಲಿಕೆಯನ್ನು ತನ್ನ ಅನುಭವದ ಮೂಲಕ ಕಲಿಯುತ್ತದೆ. ನಂತರ ಮನೆಬಿಟ್ಟು ಶಾಲಾ ಪರಿಸರಕ್ಕೆ ಬಂದಾಗ ಮಗು..ಸತತ ಐದು ವರ್ಷಗಳ ಕಾಲ ತನ್ನ ಸುತ್ತಲಿನ ತನ್ನವರನ್ನು ಬಿಟ್ಟಿದ್ದು,ಅದಕ್ಕೆ ಒಂಟಿತನ ಕಾಡುತ್ತದೆ.. ಅಥವಾ ಗರ್ಭದಲ್ಲಿರುವ ಮಗುವು ಹೇಗೆ ಹೊರಗಡೆ ಬಂದ ತಕ್ಷಣ ಹೊಸ ಪರಿಸರಕ್ಕೆ ಹೊಂದಿಕೊಳ್ಳದೇ ಅಳುವುದೋ,ಹಾಗೆಯೇ ಮನೆಯ ಬಿಟ್ಟು ಬಂದ ಮಗುವು ಹೊಸ ಪರಿಸರಕ್ಕೆ ಹೊಂದಿಕೊಳ್ಳುವಾಗ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ಇಂತಹ ಸಂದರ್ಭದಲ್ಲಿ ಶಿಕ್ಷಕನು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಶಾಲೆಗೆ ಬಂದಂತಹ ಮಗುವಿಗೆ ಎರಡನೇ ತಾಯಿಯಾಗಿ ಮಮತೆಯನ್ನು ನೀಡಿ,ತಂದೆಯ ಸ್ಥಾನದಲ್ಲಿ ನಿಂತು ಕಾಳಜಿ ಮಾಡಿ,ಸ್ನೇಹಿತರಂತೆ ಆ ಮಗುವಿನ ಜೊತೆ ಬೆರೆತಾಗ ಮಗುವಿಗೆ ಶಾಲೆಯ ವಾತಾವರಣ ಹಿತವೆನಿಸುವುದು.ಮತ್ತು ಅದು ಸಂಪೂರ್ಣವಾಗಿ ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು.
ಮನೆಯನ್ನು ಆಗತಾನೆ ಬಿಟ್ಟು ಬಂದ ಮಗುವಿನ ಮನಸ್ಸು, ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲನೆ ಒದ್ದಾಡುವುದು. ಇಂತಹ ಪರಿಸ್ಥಿತಿಯನ್ನು ಸುಸ್ತಿಗೆ ತರುವಲ್ಲಿ ಶಿಕ್ಷಕನು ಅತಿ ಸಮಾಧಾನದಿಂದ ವರ್ತಿಸಿ,ಮಗುವನ್ನು ಶಾಲಾ ಪರಿಸರಕ್ಕೆ ಹೊಂದಿಸಿಕೊಳ್ಳಬೇಕಾಗುತ್ತದೆ. ಈ ಕೆಲಸದಲ್ಲಿ ಶಿಕ್ಷಕನ ಪರಿಶ್ರಮ ಅಪಾರ.
ಹೌದು!.. ಮನೆಯಲ್ಲಿ ನಾಲ್ಕರಿಂದ ಐದು ವರ್ಷದ ಒಂದು ಮಗುವನ್ನು ಒಬ್ಬ ತಾಯಿ ಒಂದು ಬಾನುವಾರ ಸುಧಾರಿಸಲು ಆಗದು.. ಈಗಿರುವಾಗ ಶಾಲೆಯಲ್ಲಿರುವ ಅಷ್ಟು ಮಕ್ಕಳನ್ನು ಒಬ್ಬ ಶಿಕ್ಷಕ ಪ್ರತಿದಿನ ಆ ಮಕ್ಕಳಿಗೆ ಎಂಟು ತಾಸು ಎರಡನೇ ತಾಯಿಯಾಗಿ ಪೋಷಿಸುತ್ತಾನೆ.
ಒಂದಕ್ಷರ ಕಲಿಸಿದಾತ ಗುರು..
ಜೀವನದಲ್ಲಿ ನಮಗೆ ಹಲವಾರು ಗುರುಗಳು ಬಂದು ಹೋಗುತ್ತಾರೆ.. ಅವರಲ್ಲಿ ನಮಗೆ ಹೆಚ್ಚು ಕಲಿಸಿದವರು ಇರುತ್ತಾರೆ,ಕಡಿಮೆ ಕಲಿಸಿದವರು ಇರುತ್ತಾರೆ.. ಆದರೆ,ಅವರೆಲ್ಲಾರು ನಮ್ಮ ಗುರುಗಳೇ..ನಾವು ಬೆಳೆಯುತ್ತಾ ಹೋದಂತೆ ನಮಗೆ ಹಿಂದೆ ಕಲಿಸಿದ ಶಿಕ್ಷಕರನ್ನು ಮರೆತು ಮುಂದೆ ಸಾಗುತ್ತೇವೆ..
ಉದಾಹರಣೆಗೆ ಪ್ರಾಥಮಿಕ ಶಾಲೆಯಿಂದ ಪ್ರೌಡ ಶಾಲೆಗೆ ಹೋದ ನಂತರ ಅಲ್ಲಿ ಬೋಧಿಸುವ ವಿವಿಧ ವಿಷಯಗಳ ಬೋಧಕರ ಮುಂದೆ, ಅಕ್ಷರ ಕಲಿಸಿದವರು ಮರೆತೇ ಹೋಗುತ್ತಾರೆ ಅಥವಾ ಆ ಒಂದು ಕಲಿಕೆ ಕಡಿಮೆ ಅನಿಸುವುದು.. ಆದರೆ, ಆ ಅಕ್ಷರ ಕಲಿಯದೆ ಇದ್ದಿದ್ದರೆ ನಾನು ಮುಂದೆ ಬರಲು ಸಾಧ್ಯವಾದಿತೆ?..ಎಂದು ನಾವು ಯೋಚಿಸುವುದಿಲ್ಲ..
ಶಾಲೆಗೆ ಬರುವ ಮೊದಲು ಮಗುವು ಒಂದು ಶಿಲೆಯಂತಿರುತ್ತದೆ.. ಆ ಶಿಲೆಯನ್ನು ತಾಯಿಯು ತುಂಬಾ ಸ್ವಚ್ಛವಾಗಿ ತೊಳೆದು,ಶಾಲೆಗೆ ತಂದು ಬಿಟ್ಟು ಹೋಗುತ್ತಾಳೆ.. ಆನಂತರ ಶಿಕ್ಷಕನು ಅದನ್ನು ಒಂದು ಪರಿಪೂರ್ಣ ಶಿಲ್ಪವಾಗಿ ಮಾರ್ಪಾಡು ಮಾಡುತ್ತಾನೆ.. ನಂತರ ಉನ್ನತ ತರಗತಿಗಳಿಗೆ ಹೋದಂತೆ,ಅದನ್ನು ಇನ್ನಷ್ಟು ತಿದ್ದಿ ತೀಡಿ,ಬಣ್ಣ ಹಚ್ಚಿ ಒಂದು ಸುಂದರ ಪ್ರತಿಮೆಯಾಗಿ ರೂಪಗೊಳ್ಳುವಂತೆ ಶಿಕ್ಷಕರು ಹಂತ ಹಂತವಾಗಿ ತಮ್ಮ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ. ಅಂದರೆ ಜೀವನದಲ್ಲಿ ಬರುವ ಪ್ರತಿಯೊಬ್ಬ ಶಿಕ್ಷಕರು ಅವರದೇ ಅದ ಪಾತ್ರವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತಾ ಬರುತ್ತಾರೆ.
“ಗುರುವಿನ ಗುಲಾಮಾಗುವ ತನಕ ದೊರೆಯದಣ್ಣಾ ಮುಕ್ತಿ.”
ಈ ನಾಣ್ಣುಡಿಯಂತೆ ತೆತ್ರಾಯುಗದ ಶ್ರೀರಾಮ ವಿಶ್ವಾಮಿತ್ರನ ಜೊತೆ ಕಾಡಿನಲ್ಲಿ ಅಲೆದು,ಅವರ ಒಂದು ಸನ್ನಿಧಿಯಲ್ಲಿ ಪಳಗಿದ್ದರಿಂದ ಇಂದು ಶ್ರೀರಾಮನ ಧರ್ಮ ಸಾಧನೆ ಅಜಾರಮರವಾಗಿದೆ. ದ್ವಾಪರಯುಗದಲ್ಲಿ ಏಕಲವ್ಯ ಗುರುವಿನ ಪ್ರತಿಮೆಯ ಅನುಗ್ರಹದಿಂದ ಶಬ್ದವೇದಿ ವಿದ್ಯೆಯನ್ನು ಕಲಿತನು. ಅಂದರೆ ಅವರಲ್ಲಿ ಅದೆಷ್ಟು ಅಗಾಧವಾದ ಗುರುಭಕ್ತಿ ಇತ್ತು ಎಂಬುದನ್ನು ನಾವು ಕಾಣಬಹುದಾಗಿದೆ. ಇಂದಿನ ದಿನಮಾನಗಳಲ್ಲಿ ಇಂತಹ ಗುರುಭಕ್ತಿ ಕ್ಷೀಣಿಸುತ್ತಾ ಬಂದಿದೆ..ಆದರೂ ಉತ್ತಮ ವಿದ್ಯಾರ್ಥಿಗಳಿಗೂ ಕೊರತೆಯಿಲ್ಲ.. ವಿದ್ಯಾರ್ಥಿಗಳು ಹೇಗೆ ಇರಲಿ..ಶಿಕ್ಷಕರು ಮಾತ್ರ ಆಗಲೂ ಮತ್ತು ಈಗಲೂ ವಿಧ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಸಮರ್ಥ ಶಿಕ್ಷಕ ಉತ್ತಮ ರಾಷ್ಟ್ರ ನಿರ್ಮಾಪಕ.
ಶಿಕ್ಷಕನು ಉತ್ತಮ ಸಮಾಜದ ಶಿಲ್ಪಿಯಾಗಿದ್ದಾನೆ. ಒಬ್ಬ ವೈದ್ಯ ತಪ್ಪು ಮಾಡಿದರೆ,ಒಬ್ಬ ರೋಗಿ ಸಾಯಬಹುದು,ಒಬ್ಬ ಇಂಜಿನಿಯರ್ ತಪ್ಪು ಮಾಡಿದರೆ,ಒಂದು ಕಟ್ಟಡ ಕುಸಿಯಬಹುದು ಆದರೆ,ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಇಡೀ ಸಮುದಾಯವೇ ಹಾಳಾಗಿ ಹೋಗುವುದು.
ಒಬ್ಬ ವಿದ್ಯಾರ್ಥಿ ಏನೇ ತಪ್ಪು ಮಾಡಿದರೂ,ಸಮಾಜದ ಬಾಯಿಗೆ ಮೊದಲು ಸಿಲುಕಿಕೊಳ್ಳುವ ವ್ಯಕ್ತಿ ಶಿಕ್ಷಕ..
ಹೌದು.. ಜನ ಮೊದಲು ಕೇಳುವುದು ನಿಮ್ಮ ಮೇಷ್ಟ್ರು ನಿನಗೆ ಇದುನ್ನೆ ಏನು ಕಲಿಸಿರುವುದು ಎಂದು.ಅಂದರೆ ಶಿಕ್ಷಕ ವಿದ್ಯಾರ್ಥಿಯ ಜೀವನದ ಎಲ್ಲಾ ಆಗುಹೋಗುಗಳಿಗೆ ಕಾರಣ ಕರ್ತನಾಗಿರುತ್ತಾನೆ. ಒಂದು ಮಗು ಎಂತಹ ವಾತಾವರಣದಲ್ಲಿಯೇ ಜನಿಸಲಿ.. ಆ ಮಗುವಿಗೆ ಜೀವನದಲ್ಲಿ ಒಬ್ಬ ಉತ್ತಮ ಶಿಕ್ಷಕ ಸಿಕ್ಕಿದರೆ ಸಾಕು.. ಆ ಮಗು ಸಾಧನೆಯ ಉತ್ತುಂಗ ಶಿಖರಕ್ಕೆ ಏರುವುದು.
ಉದಾಹರಣೆಗೆ ಭೀಮರಾವ್ ನಿಗೆ ದೊರೆತ ಅಂಬೇಡ್ಕರ್ ರಂತಹ ಶಿಕ್ಷಕರು. ದೇಶದ ಸಂವಿಧಾನವನ್ನು ರಚಿಸಿ,ಸಮಾಜದಲ್ಲಿ ಸಮಾನತೆಯ ಕನಸನ್ನು ಸಾಧಿಸುವ ಛಲವನ್ನು ಬೆಳೆಸಿ, ಅವರನ್ನು ಆ ಮಟ್ಟಕ್ಕೆ ಬಂದು ತಲುಪುವಂತೆ ಮಾರ್ಗದರ್ಶನ ಮಾಡಿದ ಶಿಕ್ಷಕರನ್ನು ನಾವು ಇಲ್ಲಿ ನೆನೆಯಬಹುದು.
ಸ್ವಾಮಿ ವಿವೇಕಾನಂದರಿಗೆ ದೊರೆತ ರಾಮಕೃಷ್ಣ ಪರಮಹಂಸರು.. ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಷ್ಟೊಂದು ಅಗಾಧ ಜ್ಞಾನವನ್ನು ಹೊಂದಿ,ಇಡೀ ರಾಷ್ಟ್ರದ ಸಂಸ್ಕಾರವನ್ನು ಎತ್ತಿಹಿಡಿದು ಮಹಜ್ಞಾನಿಯಾದ ಇವರ ಜೀವನದಲ್ಲಿ ದಾರಿ ದೀಪವಾದ ಇವರ ಗುರುಗಳನ್ನು ನಾವು ಕಾಣಬಹುದು. ಮರಾಠ ಸಾಮ್ರಾಜ್ಯ ಚಕ್ರವರ್ತಿ ಶಿವಾಜಿಯ ಜೀವನದ ಸಾಹಸ ಸಾಧನೆಯ ಹಾದಿಯಲ್ಲಿ ಇವರ ಗುರುವಾದ ದಾದಾಜಿ ಕೊಂಡದೇವರು ಪ್ರಮುಖ ಪಾತ್ರ ವಹಿಸುತ್ತಾರೆ.
ಒಟ್ಟಾರೆಯಾಗಿ ಮಗುವಿಗೆ ತಂದೆ – ತಾಯಿಯ ಹೊರತಾಗಿಯೂ,ಜೀವನದಲ್ಲಿ ಒಬ್ಬ ಉತ್ತಮ ಶಿಕ್ಷಕ ದೊರೆತರೆ, ಅವನೊಬ್ಬ ಸಮಾಜದ ಉತ್ತಮ ಪ್ರಜೆಯಾಗಿ ರೂಪಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದಲೇ ಹೇಳುವುದು..
ಗುರು ಬ್ರಹ್ಮ,
ಗುರು ವಿಷ್ಣು,
ಗುರು ದೇವೋ ಮಹೇಶ್ವರ,
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ..
- ಕವಿತಾ ವಿ ಪಾಟೀಲ್
