ಸಂತೋಷ ಎಂಬುದು ಹುಡುಕುವ ವಸ್ತುವಲ್ಲ

ಸಂತೋಷವನ್ನು ದುಡ್ಡು ಕೊಟ್ಟು ಕೊಳ್ಳಲು ಸಾಧ್ಯವಿಲ್ಲ, ಆದರೆ ಪ್ರತಿಯೊಂದು ಸಣ್ಣ ವಿಷಯದಲ್ಲಿ ಸಂತೋಷವನ್ನು ಕಂಡುಕೊಳ್ಳಿ. ವಸ್ತುಗಳಿಂದ ಸಿಗುವುದು ಕೇವಲ ಅನುಕೂಲ, ಆದರೆ ಮನಸ್ಸಿಗೆ ಬೇಕಿರುವುದು ಆನಂದ. ಯುವ ಲೇಖಕರಾದ  ಜಿ. ಎಸ್. ಶರಣು ಅವರು ಸಂತೋಷ ಎಂಬುದು ಹುಡುಕುವ ವಸ್ತುವಲ್ಲ, ಸೃಷ್ಟಿಸಿಕೊಳ್ಳುವ ಅನುಭವ ವಿಷಯದ ಮೇಲೆ ಸುಂದರ ಲೇಖನವನ್ನು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…

ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಯಾವುದಾದರೂ ಒಂದರ ಹಿಂದೆ ವಿರಾಮವಿಲ್ಲದೆ ಓಡುತ್ತಿದ್ದಾನೆ ಎಂದರೆ, ಅದು ಸಂತೋಷಕ್ಕಾಗಿ ಮಾತ್ರ. ನಾವು ಪಡುವ ಕಷ್ಟ, ಮಾಡುವ ಕೆಲಸ, ಸಂಪಾದಿಸುವ ಹಣ ಎಲ್ಲದರ ಹಿಂದಿನ ಉದ್ದೇಶ ಒಂದೇ, ನೆಮ್ಮದಿಯಿಂದ, ಖುಷಿಯಾಗಿ ಇರಬೇಕು ಎಂಬುದಾಗಿದೆ. ಇಡೀ ಜೀವನ ಸಂತೋಷವನ್ನೇ ಹುಡುಕುವ ನಾವು, ಕೊನೆಯವರೆಗೂ ಅದನ್ನು ಎಲ್ಲಿ ಹುಡುಕಬೇಕು ಎಂಬ ವಿಳಾಸವನ್ನೇ ಮರೆತು ಬಿಟ್ಟಿರುತ್ತೇವೆ. ನಾವು ಸಂತೋಷವನ್ನು ಕಳೆದುಹೋದ ವಸ್ತುವಿನಂತೆ ಹೊರಗಿನ ಜಗತ್ತಿನಲ್ಲಿ ಹುಡುಕುತ್ತಿದ್ದೇವೆ, ಆದರೆ ವಾಸ್ತವದಲ್ಲಿ ಸಂತೋಷ ಎಂಬುದು ಹುಡುಕಿ ಪಡೆಯುವ ವಸ್ತುವಲ್ಲ, ಅದು ನಾವೇ ಸ್ವತಃ ಸೃಷ್ಟಿಸಿಕೊಳ್ಳಬೇಕಾದ ಒಂದು ಸುಂದರ ಅನುಭವ.

ನಾವು ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ, “ನನಗೆ ಆ ಕೆಲಸ ಸಿಕ್ಕರೆ ಸಂತೋಷವಾಗುತ್ತದೆ,” “ನಾನು ಸ್ವಂತ ಮನೆ ಕಟ್ಟಿದರೆ ಖುಷಿಯಾಗಿರುತ್ತೇನೆ,” ಅಥವಾ “ನನ್ನ ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣವಿದ್ದರೆ ನೆಮ್ಮದಿ ಸಿಗುತ್ತದೆ.” ಹೀಗೆ ನಾವು ನಮ್ಮ ಸಂತೋಷವನ್ನು ಭವಿಷ್ಯದ ಘಟನೆಗಳ ಮೇಲೆ ಅವಲಂಬಿತವಾಗಿ ಇಡುತ್ತೇವೆ. ಇದನ್ನು ಷರತ್ತುಬದ್ಧ ಸಂತೋಷ ಎನ್ನಬಹುದು. ಯಾವಾಗ ನಾವು ನಮ್ಮ ಖುಷಿಯ ಕೀಲಿ ಕೈಯನ್ನು ಹೊರಗಿನ ವಸ್ತುಗಳ ಕೈಗೆ ಕೊಡುತ್ತೇವೋ, ಆಗ ನಾವು ಗುಲಾಮರಾಗುತ್ತೇವೆ. ಆ ವಸ್ತು ಸಿಕ್ಕಾಗ ಕ್ಷಣಿಕವಾದ ಸುಖ ಸಿಗಬಹುದು, ಆದರೆ ಅದು ಶಾಶ್ವತವಾದ ಸಂತೋಷವಲ್ಲ. ಕಾರು ಹಳೆಯದಾದಾಗ ಅಥವಾ ಹಣ ಖಾಲಿಯಾದಾಗ ಆ ಸಂತೋಷವೂ ಮಾಯವಾಗುತ್ತದೆ. ವಸ್ತುಗಳಿಂದ ಸಿಗುವುದು ಕೇವಲ ಅನುಕೂಲ, ಆದರೆ ಮನಸ್ಸಿಗೆ ಬೇಕಿರುವುದು ಆನಂದ.

ಕಸ್ತೂರಿ ಮೃಗದ ಕಥೆ ನಮಗೆಲ್ಲರಿಗೂ ಗೊತ್ತಿದೆ. ಆ ಜಿಂಕೆ ತನ್ನ ಹೊಕ್ಕಳಿನಿಂದಲೇ ಬರುತ್ತಿರುವ ಸುಗಂಧವನ್ನು ಅರಿಯದೆ, ಆ ಪರಿಮಳ ಎಲ್ಲಿಂದ ಬರುತ್ತಿದೆ ಎಂದು ಹುಡುಕುತ್ತಾ ಇಡೀ ಕಾಡನ್ನೇ ಸುತ್ತುತ್ತದೆ. ಮನುಷ್ಯನ ಸ್ಥಿತಿಯೂ ಅಷ್ಟೇ. ಸಂತೋಷದ ಮೂಲ ನಮ್ಮ ಮನಸ್ಸಿನಲ್ಲೇ ಇದೆ. ನಾವು ಪರಿಸ್ಥಿತಿಗಳನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡರೆ, ಅಲ್ಲಿಯೇ ಸಂತೋಷ ಹುಟ್ಟುತ್ತದೆ. ಒಬ್ಬ ಬಡವ ತನ್ನ ಗುಡಿಸಲಿನಲ್ಲಿ ಗಂಜಿ ಕುಡಿಯುತ್ತಾ ತೃಪ್ತಿಯಿಂದ ನಗಬಹುದು, ಅದೇ ಸಮಯದಲ್ಲಿ ಒಬ್ಬ ಶ್ರೀಮಂತ ತಾಜ್ ನಂತ ಹೋಟೆಲ್‌ನಲ್ಲಿ ಕುಳಿತು ಚಿಂತೆಯಲ್ಲಿ ಮುಳುಗಿರಬಹುದು. ಇದರ ಅರ್ಥವಿಷ್ಟೇ, ಸಂತೋಷ ಇರುವುದು ಜಾಗದಲ್ಲಲ್ಲ, ಅದು ಇರುವುದು ನಮ್ಮ ಮನಸ್ಥಿತಿಯಲ್ಲಿ.

ಸಂತೋಷವನ್ನು ಸೃಷ್ಟಿಸಿಕೊಳ್ಳುವುದು ಎಂದರೆ ಪ್ರತಿಯೊಂದು ಸಣ್ಣ ವಿಷಯದಲ್ಲೂ ಖುಷಿಯನ್ನು ಹುಡುಕುವುದು. ಬೆಳಿಗ್ಗೆ ಕುಡಿಯುವ ಬಿಸಿ ಕಾಫಿಯಲ್ಲಿ, ಮಳೆ ಬಂದಾಗ ಬರುವ ಮಣ್ಣಿನ ವಾಸನೆಯಲ್ಲಿ, ಮಗುವಿನ ನಗುವಿನಲ್ಲಿ ಅಥವಾ ಬೇರೆಯವರಿಗೆ ಮಾಡುವ ಒಂದು ಚಿಕ್ಕ ಸಹಾಯದಲ್ಲಿ ಸಿಗುವ ತೃಪ್ತಿಯೇ ನಿಜವಾದ ಸಂತೋಷ. ಯಾರು ಈ ಚಿಕ್ಕ ಚಿಕ್ಕ ವಿಷಯಗಳಲ್ಲಿ ಖುಷಿ ಪಡುವುದನ್ನು ಕಲಿಯುವುದಿಲ್ಲವೋ, ಅವರಿಗೆ ದೊಡ್ಡ ದೊಡ್ಡ ಸಾಧನೆಗಳು ಕೂಡ ಖುಷಿ ನೀಡುವುದಿಲ್ಲ. ಸಂತೋಷ ಎಂಬುದು ಯಾವುದೋ ಗುರಿ ಮುಟ್ಟಿದಾಗ ಸಿಗುವ ಟ್ರೋಫಿ ಅಲ್ಲ, ಅದು ಆ ಗುರಿಯತ್ತ ಸಾಗುವ ದಾರಿಯುದ್ದಕ್ಕೂ ನಾವು ಅನುಭವಿಸಬೇಕಾದ ಪ್ರಯಾಣ.

ನಾವು ಅಡುಗೆ ಮಾಡುವಾಗ ಹೇಗೆ ಬೇರೆ ಬೇರೆ ಪದಾರ್ಥಗಳನ್ನು ಹದವಾಗಿ ಬೆರೆಸಿ ರುಚಿಯಾದ ಊಟವನ್ನು ತಯಾರಿಸಿಕೊಳ್ಳುತ್ತೇವೋ, ಹಾಗೆಯೇ ಬದುಕಿನಲ್ಲಿ ಬರುವ ಕಷ್ಟ-ಸುಖಗಳನ್ನು ಸಮವಾಗಿ ಸ್ವೀಕರಿಸಿ ನಾವು ಸಂತೋಷವನ್ನು ಸೃಷ್ಟಿಸಿಕೊಳ್ಳಬೇಕು. ಹೊರಗಿನ ಜಗತ್ತು ಎಷ್ಟೇ ಗದ್ದಲದಿಂದ ಕೂಡಿದ್ದರೂ, ನಮ್ಮ ಒಳಗಿನ ಪ್ರಪಂಚವನ್ನು ಶಾಂತವಾಗಿ ಇಟ್ಟುಕೊಳ್ಳುವ ಕಲೆ ನಮಗೆ ಸಿದ್ದಿಸಬೇಕು. ದೂರು ಹೇಳುವುದನ್ನು ನಿಲ್ಲಿಸಿ, ಇರುವುದಕ್ಕೆ ಕೃತಜ್ಞತೆ ಹೇಳಲು ಆರಂಭಿಸಿದ ಕ್ಷಣವೇ ಮನಸ್ಸಿನಲ್ಲಿ ಸಂತೋಷದ ದೀಪ ಬೆಳಗುತ್ತದೆ. ಉದಾಹರಣೆಗೆ ಬೆಳಿಗ್ಗೆ ಟೀ ಕುಡಿಯುವಾಗ “ಅಬ್ಬಾ ಎಷ್ಟು ಚೆನ್ನಾಗಿದೆ ಟೀ. ಇಂತ ಟೀ ಕುಡಿಯೋಕ್ಕೆ ಪುಣ್ಯ ಮಾಡಿದ್ದೀನಿ” ಎಂದು ಖುಷಿಯಾಗಿ ಟೀ ಮಾಡಿಕೊಟ್ಟವರಿಗೆ ಥ್ಯಾಂಕ್ ಯು ಹೇಳಿ, ಆಗ ನೋಡಿ ನಿಮಗೆ ಎಲ್ಲಿಲ್ಲದ ಖುಷಿ ಉಂಟಾಗುತ್ತದೆ.

ಸಂತೋಷಕ್ಕಾಗಿ ಕಾಯಬೇಡಿ. “ಎಲ್ಲವೂ ಸರಿಯಾದ ಮೇಲೆ ನಗುತ್ತೇನೆ” ಎಂದು ಅಂದುಕೊಂಡರೆ, ಆ ಸಮಯ ಬರುವುದೇ ಇಲ್ಲ. ಏಕೆಂದರೆ ಜೀವನದಲ್ಲಿ ಸಮಸ್ಯೆಗಳು ಮುಗಿಯುವುದೇ ಇಲ್ಲ. ಸಮಸ್ಯೆಗಳ ನಡುವೆಯೂ ನಗಲು ಕಲಿಯುವುದೇ ಜೀವನ. ನೀವು ಖುಷಿಯಿಂದ ನಗುವಾಗ, ಸಮಸ್ಯೆಗಳು ತನ್ನಿಂದ ತಾನೇ ದೂರಾಗುತ್ತಾವೆ. ನೀವು ನೆಮ್ಮದಿಯಿಂದ ಕೂಡಿರುವಾಗ, ಸಮಸ್ಯೆ ಸಮಸ್ಯೆ ಎಂದು ಅನಿಸುವುದಿಲ್ಲ. ಇಂದೇ, ಈ ಕ್ಷಣವೇ ನಿಮ್ಮ ಸಂತೋಷವನ್ನು ಸೃಷ್ಟಿಸಿಕೊಳ್ಳಿ. ನಿಮ್ಮ ನಗು, ನಿಮ್ಮ ನೆಮ್ಮದಿ ನಿಮ್ಮ ಆಯ್ಕೆಯಾಗಿರಲಿ.


  •  ಜಿ. ಎಸ್. ಶರಣು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW