ಶಾಬಾನೋ ಕಥೆಯನ್ನು ನೋಡುವಾಗ ಇದೆಲ್ಲಾ ನೆನಪಾಯ್ತು. ತಮ್ಮದೇ ಎಡವುವ ಕಾಲುಗಳಿಗೆ ಶಕ್ತಿ ತುಂಬಿಕೊಳ್ಳುತ್ತಾ ಪಕ್ಕದಲ್ಲಿ ಬೀಳುತ್ತಿರುವ ಮತ್ತೊಂದು ಜೀವವನ್ನು ಹಿಡಿದು ಎಬ್ಬಿಸಿ, ನಿಲ್ಲಿಸಿ, ಅಪ್ಪಿಕೊಳ್ಳುವ ಎಲ್ಲಾ ಹೆಣ್ಣುಗಳಿಗೆ ಚರಣ ಸ್ಪರ್ಶ…
15 ವರ್ಷದ ಬಾಲಕಿಗೆ ವಿವಾಹ ಮಾಡುತ್ತಿದ್ದಾರೆ ಎನ್ನುವ ಪ್ರಕರಣದಲ್ಲಿ ಮಕ್ಕಳ ಸಹಾಯವಾಣಿಯ ಸಿಬ್ಬಂದಿಯು ಆ ಹುಡುಗಿಯನ್ನು ರಕ್ಷಿಸಿ ನನ್ನೆದುರು ಹಾಜರು ಪಡಿಸಿದರು. ಆಕೆಯನ್ನು ಬಾಲಕಿಯರ ಬಾಲಮಂದಿರದಲ್ಲಿ ದಾಖಲಿಸಲಾಯಿತು. ಎದುರು ನಿಂತಿದ್ದ ಅಪ್ಪನಿಗೆ ಬಾಲಕಿಯ ಅಮ್ಮನನ್ನು ಕರೆತರಲು ಹೇಳಲಾಯಿತು. ಆತನಿಗೆ ಬೀವಿಯನ್ನು ಹಾಗೆ ಕರೆದುಕೊಂಡು ಬರುವುದಕ್ಕೆ ಮನಸ್ಸಿಲ್ಲ. ತಾಕೀತು ಮಾಡಿದಾಗ ಅನಿವಾರ್ಯವಾಗಿ ಕರೆತಂದ.
ಆಕೆ ಕಣ್ಣುಗಳೂ ಮುಚ್ಚುವಂತೆ ಬುರ್ಖಾದೊಳಗಿದ್ದಳು. ಗಂಡನನ್ನು ಹೊರಗೆ ಕಳುಹಿಸಿ ಬುರ್ಖಾ ತೆಗೆಯಲು ಹೇಳಿದೆ. ಅಷ್ಟೇ…ತಾನು ಬಿ ಎ ಓದಲು ಕಾಲೇಜು ಸೇರಿದ್ದು (ಕೊನೆಯ ವರ್ಷ ಮುಗಿಸಿರಲಿಲ್ಲ), ತನಗೆ ಕೈನೆಟಿಕ್ ಹೊಂಡ ಓಡಿಸಲು ಅಪ್ಪನೇ ಕಲಿಸಿದ್ದು, ಕಬೂಲ್ ಹೇ ಎಂದು ಹೇಳಿದ ನಂತರವೇ ಗಂಡನ ಮುಖ ನೋಡಿದ್ದು, ಇಬ್ಬರು ಮಕ್ಕಳನ್ನು ಹೆತ್ತಿದ್ದು, ಮುಂದೆ ಓದಲಾಗದೆ ಇದ್ದದ್ದು, ತರಕಾರಿ ತರಲೂ ಮನೆಯಿಂದಾಚೆ ಬಾರದೆ ಇರುವುದು, ಎಲ್ಲವೂ ಎಲ್ಲವೂ ಮಾತಿನಲ್ಲಿ ಹರಿಯಿತು.
ಮಕ್ಕಳ ನ್ಯಾಯ ಕಾಯಿದೆಗೆ ಅನುಸಾರವಾಗಿ ರಚಿತವಾಗುವ ಮಕ್ಕಳ ಕಲ್ಯಾಣ ಸಮಿತಿಗೆ ಮ್ಯಾಜಿಸ್ಟ್ರೇಟ್ ಅಧಿಕಾರವಿರುತ್ತದೆ ಆದರೆ ಅದು ಕೇವಲ ಮಕ್ಕಳ ಪಾಲನೆ, ರಕ್ಷಣೆ ಮತ್ತು ಪೋಷಣೆಗೆ ಸಂಬಂಧಿಸಿದ್ದು ಮಾತ್ರ. ಯಾವುದೇ ಕಾರಣಕ್ಕೂ ವಯಸ್ಕರ ವಿಷಯದಲ್ಲಿ ಮೂಗು ತೂರಿಸುವ ಹಾಗಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ಹಾಗಿಲ್ಲ.

ನನಗೀಗ ಜೀವ ನಿಲ್ಲದು, ಬುರ್ಖಾದೊಳಗೆ ಜೀವ ಮಿಡುಕುತ್ತಿತ್ತು. ಆಕೆಗೆ ಉಸಿರು ತುಂಬುವ ಕೆಲಸ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲ. ಆದರೆ ವಾರವೊಂದು running race ನಲ್ಲಿತ್ತು! ಏನಾದರೂ ಮಾಡಬೇಕಲ್ಲ. ಮಕ್ಕಳ ಹಕ್ಕುಗಳ ವಿಷಯ ಎಂದರೆ ಕತ್ತಿಯ ಮೇಲೆ ಹೆಬ್ಬೆರಳು ಮಾತ್ರ ಇಟ್ಟು, ಹಿಮ್ಮಡಿಗೆ ತೂಕ ನೀಡದೆ ನಿಲ್ಲುವ ಕಸರತ್ತು. ಆನೆಯೊಂದು ಮಾಡುವ cat walk ನಂತೆ. ಇಲ್ಲಿ ಮಕ್ಕಳ ಅಮ್ಮ ನನ್ನ ನೆಮ್ಮದಿಗೆ ದುಂಬಾಲು ಬಿದ್ದಿದ್ದಾಳೆ. ನನಗೋ ಕೆಲಸದ ಮೇಲಾಸೆ ಅಧಿಕಾರದ ಮೇಲಿಷ್ಟ. ತುಸುವೇ ಅಧಿಕಪ್ರಸಂಗಿತನವೂ ಸರಿ ಧೊಪ್ಪನೆ ಉರುಳಲು, ನನ್ನದೇ ನಾಳೆಗಳನ್ನು ನೇ**ಣಿಗೆ ನಾನೇ ಒಡ್ಡಿಕೊಳ್ಳಲು.
ಅವಳು ವಾರಕ್ಕೊಮ್ಮೆ ಎದುರು ಕೂರುತ್ತಾಳೆ, ಬುರ್ಖಾ ತೆರೆಯುತ್ತಾಳೆ, ಮಾತನಾಡುತ್ತಾಳೆ, ನಗುತ್ತಲೇ ಕಣ್ಣೀರಾಗಿ ಮತ್ತೆ ಕರಿ ನೆರಳಾಗಿ ಬಾಗಿಲಿನಲ್ಲಿ ನಿಂತಿರುತ್ತಿದ್ದ ಗಂಡನ ಜೊತೆ ಹೊರಟು ಹೋಗುತ್ತಿದ್ದಾಳೆ. ಒಂದು ರಾತ್ರಿ ಮಗ್ಗಲು ಬದಲಿಸುವಾಗ ಪಕ್ಕನೆ ಜೊತೆಗೇ ಹೊರಳಿತು ಸೆಕ್ಷನ್ 30 (xviii). ಬೆಳಗಿನ ಮಂಗಳವಾರದಲ್ಲಿ ಬಾಲಕಿಯ ಅಪ್ಪನನ್ನು ಒಳಗೆ ಕರೆದೆ. ” ಮಗಳನ್ನು ಮನೆಗೆ ಕಳುಹಿಸಬೇಕು ಎಂದರೆ ಮೂರು ಷರತ್ತು. ಒಂದು ನಿಮ್ಮ ಹೆಂಡತಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆಯಬೇಕು. ಪ್ರತಿ ತಿಂಗಳೂ ಒಂದು ಸಾವಿರ ರೂಪಾಯಿ ಹಾಕಬೇಕು. ಇನ್ನೊಂದು ಆಕೆಗೆ ಲೈಸೆನ್ಸ್ ಮಾಡಿಸಿ ಕೊಡಬೇಕು. ಕೊನೆಯದು Entry ಹಾಕಿಸಿಕೊಂಡು ನಿಮ್ಮ ಹೆಂಡತಿ ಮತ್ತು ಮಗಳು ತಿಂಗಳಿಗೊಮ್ಮೆ ನಿಮ್ಮ ಕೈನೆಟಿಕ್ ಹೊಂಡಾದಲ್ಲಿ ತಾವಿಬ್ಬರೇ ಬಂದು ಪಾಸ್ ಬುಕ್ ತೋರಿಸಿ, ಮಕ್ಕಳ ಕಲ್ಯಾಣ ಸಮಿತಿಯಿಂದ ಅನುಸರಣೆ ಮಾಡಿಸಿ ಕೊಳ್ಳಬೇಕು” ಆತ ಒಂದು ವಾರ ಸಮಯ ತೆಗೆದುಕೊಂಡು ಅಂತೂ ಒಪ್ಪಿದ.
ಮುಂದಿನ ಒಂದಷ್ಟು ತಿಂಗಳುಗಳ ಕಾಲ ಆಕೆ ನನ್ನನ್ನು ಭೇಟಿ ಮಾಡಲು ಅಲಂಕಾರ ಮಾಡಿಕೊಂಡು, ಮೆಹಂದಿ ಹಾಕಿಕೊಂಡು ತಾನೇ ಗಾಡಿ ಓಡಿಸಿಕೊಂಡು ಬರುತ್ತಿದ್ದಳು. ಕೂಡಲೇ ಬುರ್ಖಾ ತೆಗೆದು ಫಳಗುಟ್ಟುವ ನಗು ಕೊಡುತ್ತಿದ್ದಳು. ಪಾಸ್ ಬುಕ್ ತೋರಿಸುತ್ತಿದ್ದಳು. ನಾ ಹೀಗೆ ಮಾಡಿದ್ದು ಮಕ್ಕಳಿಗೆ ಸಂಬಂಧಿಸಿದ ಯಾವ ಕಾನೂನಿನಲ್ಲೂ ಇಲ್ಲ. ಆ ದಿನ ಯಾರೊಬ್ಬರೇ objection ಅಂದಿದ್ದರೂ ನಾನು ಮತ್ತೆಂದೂ ಮೇಲೇಳುತ್ತಿರಲಿಲ್ಲ. ಆದರೆ ಅವಳ ಸ್ವಾತಂತ್ರ್ಯಕ್ಕೆ ಆ ಶಕ್ತಿ ಇತ್ತು. ನನ್ನನ್ನು ಕಾಪಾಡಿತು ಅವಳನ್ನು ಗಾಳಿಯಾಗಿಸಿತು.
ಮೊನ್ನೆ ಫೋನ್ ಮಾಡಿದ್ದಳು. ( ಈಗ ಅವಳದೇ ಮೊಬೈಲ್ ಫೋನ್ ಇದೆ) ಮಗಳನ್ನು ಬಿ ಎ ಓದಲು ಸೇರಿಸಿದ್ದಾಳೆ. ” ಈಗ ಸಾವಿರ ರೂಪಾಯಿ ಹಾಕುತ್ತಿಲ್ಲ ಯಜ್ಮಾನ್, ಆಗಾಗ್ 200, 500 ರುಪೀಸ್ ಹಾಕ್ತಾರೆ” ಎಂದಳು. ” ನಾನ್ ಕಾಸ್ ತೆಗ್ದೇ ಇಲ್ಲ. ಏಜ್ ಆದ್ಮೇಲ್ ತೆಗೀತೀನಿ ” ಅಂದಳು. ಅವಳ ಏಜ್ ಜೊತೆಗೇ ಪಾಸ್ ಬುಕ್ ಏರುತ್ತಿರುವ ವಿಷಯ ಸಮಾಧಾನ ತಂದಿತು.
ಅಂದಹಾಗೆ ಆ ಸೆಕ್ಷನ್ ನಲ್ಲಿ ಮಕ್ಕಳ ಹಿತದೃಷ್ಟಿಗೆ ಮತ್ತಿತರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದು ಮಕ್ಕಳ ಕಲ್ಯಾಣ ಸಮಿತಿಯ ಕರ್ತವ್ಯ ಅಂತ ಹೆಚ್ಚು ಸ್ಪಷ್ಟತೆ ಇಲ್ಲದ ಪದಗಳಿವೆ. ವಿಚಾರಣೆಗೆ ಬಂದರೆ ಬಾಲಕಿಯ ಹಿತದೃಷ್ಟಿ ಎನ್ನುವ ಛತ್ರಿಯನ್ನು ವಿರೋಧ ಎನ್ನುವ ಮಳೆಗೆ ಒಡ್ಡಿಬಿಡೋಣ ಎನ್ನುವ ಭಂಡ ಧೈರ್ಯ ಮಾಡಿದ್ದೆ.
- ಅಂಜಲಿ ರಾಮಣ್ಣ – ವಕೀಲರು,
