ಶ್ರೀ ಹರಿ ನರಸಿಂಹ ಉಪಾಧ್ಯಾಯರು ಇತ್ತೀಚಿನ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ವಿದ್ವತ್ಪೂರ್ಣ ಬರಹಗಳಿಂದ ಬಹಳಷ್ಟು ಓದುಗರನ್ನು ಗಳಿಸಿಕೊಂಡಿರುವ ಲೇಖಕರಾಗಿದ್ದಾರೆ. ಇದುವರೆಗೂ ಸುಮಾರು ಐದು ಕೃತಿಗಳನ್ನ ರಚಿಸಿ, ಕನ್ನಡಮ್ಮನ ಮೂಡಿಲಿಗೆ ಅರ್ಪಿಸಿದ್ದಾರೆ. ಹರಿ ನರಸಿಂಹ ಉಪಾಧ್ಯಾಯರು ಅವರ ಸಾಹಿತ್ಯಸೇವೆಯ ಕುರಿತು ಕವಿ ನಾರಾಯಣಸ್ವಾಮಿ (ನಾನಿ) ಅವರು ಮಾಡಿದ ಲೇಖಕರ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಕವಿಯು ಭಾವಜೀವಿ, ಮನಸ್ಸಿನ ಭಾವಗಳೊಳಗೆ ಆಂತರಿಕ ತುಡಿತವಿರುತ್ತದೆ. ತನ್ನ ಮನದೊಳಗಿನ ತಲ್ಲಣಗಳನ್ನು ಹೊರಹಾಕುವ, ಅವುಗಳನ್ನ ಸಾಲುಗಳಾಗಿ ಸೃಷ್ಟಿಸಿ ಓದುಗರ ಮನಕ್ಕೆ ತಲುಪಿಸುವ ಕಾರ್ಯವು ಕವಿಯದು. ಕಲಿಕೆಯಿಂದ ಪ್ರಬುದ್ಧತೆಯ ಕಡೆ ಸಾಗಲು ಓದು ಬರಹ ನಿರಂತರವಾಗಿರಬೇಕು. ಆ ನಿರಂತರತೆಯಲ್ಲಿ ತೊಡಗಿದಾಗ ಮಾತ್ರ ಕವಿಯು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಳ್ಳಬಹುದು.
ಶ್ರೀ ಹರಿ ನರಸಿಂಹ ಉಪಾಧ್ಯಾಯರು ಇತ್ತೀಚಿನ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ವಿದ್ವತ್ಪೂರ್ಣ ಬರಹಗಳಿಂದ ಬಹಳಷ್ಟು ಓದುಗರನ್ನು ಗಳಿಸಿಕೊಂಡಿರುವ ಲೇಖಕರಾಗಿದ್ದಾರೆ. ಇದುವರೆಗೂ ಸುಮಾರು ಐದು ಕೃತಿಗಳನ್ನ ರಚಿಸಿ, ಕನ್ನಡಮ್ಮನ ಮೂಡಿಲಿಗೆ ಅರ್ಪಿಸಿದ್ದಾರೆ.
ಶ್ರೀ ಹರಿ ನರಸಿಂಹ ಉಪಾಧ್ಯಾಯರು ಇವರು ಬಂಟ್ವಾಳ ತಾಲೂಕಿನ, ದಕ್ಷಿಣ ಕನ್ನಡ ಜಿಲ್ಲೆಯವರು ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ತಾನು ಬರೆಯುತ್ತಾ ಬೆಳೆಯುತ್ತಾ, ತನ್ನೊಳಗೆ ಯಾವುದೇ ಸ್ವಾರ್ಥವಿಲ್ಲದೆ ಇತರರನ್ನು ಬೆಳೆಸುತ್ತಾ ಕನ್ನಡ ಸಾಹಿತ್ಯ ಲೋಕದಲ್ಲಿ ಯಶಸ್ಸನ್ನ ಕಂಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಇವರ ಐದನೇ ಕೃತಿಯೇ ಮನೋವಾರಿಧಿ. ಈ ಕವನ ಸಂಕಲನವನ್ನು ಮಮತಾಮಹಿ ಕರುಣಾಮಯಿ, ತ್ಯಾಗಮೂತಿ೯ಗಳಾದಂತಹ ಎಲ್ಲಾ ಮಹಿಳೆಯರಿಗೆ ಈ ಕೃತಿಯನ್ನು ಅರ್ಪಿಸಿದ್ದಾರೆ.
ಈ ಕೃತಿಗೆ ಪುತ್ತೂರಿನ ಶ್ರೀಮತಿ ಆಶಾಮಯ್ಯ ರವರು ಮುನ್ನುಡಿಯನ್ನು ಬರೆದಿದ್ದು, ಈ ಕವನ ಸಂಕಲನದಲ್ಲಿ ಕವಿತೆಗಳು ಕನ್ನಡ ನುಡಿಯಿಂದ ಆರಂಭವಾದರೂ ಪ್ರಕೃತಿಯ ವಿಸ್ಮಯ ಮತ್ತು ವೈಶಿಷ್ಟ್ಯಗಳ ವಿಶಾಲತೆ ಕವಿತೆಗಳಾಗಿ ಮೂಡಿ ಬಂದಿದೆ. ಶ್ರೀಯುತರಿಗೆ ತಾಯಿ ವಾಗ್ದೇವಿ ಜ್ಞಾನದ ಹರಿವನ್ನ ನೀಡಲಿ, ಕವಿಗಳು ಇತರರಿಗೆ ಮಾದರಿಯಾಗುವಂತಾಗಲಿ ಎಂದು ಶುಭ ಹಾರೈಸಿದ್ದಾರೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಶ್ರೀಮತಿ ಸುಮಾ ಕಿರಣ್ ಬಸ್ರೂರು ಇವರು ಬರೆದಿದ್ದು ಈ ಕೃತಿಯು ಓದುಗರಿಗೆ ಹಲವಾರು ವೈವಿಧ್ಯಮಯ ಕವನಗಳ ರಸದೌತಣವು ನೀಡುತ್ತದೆ. ಕವಿಯ ಭಾಷಾ ಪ್ರೌಢಿಮೆ ಮತ್ತು ಪದ ಲಾಲಿತ್ಯಗಳು ಮನಕ್ಕೆ ಆಹ್ಲಾದಕರವನ್ನು ನೀಡಿ, ಓದುಗರನ್ನು ತನ್ನತ್ತ ಸೆಳೆಯುತ್ತದೆ. ತಾಯಿ ಶಾರದೆಯ ಅನುಗ್ರಹ ಶ್ರೀಯುತರ ಮೇಲಿರಲಿ ಎಂದು ಹೇಳಿ ಶುಭ ಹಾರೈಸಿದ್ದಾರೆ.

ಈ ಮನೋಲಹರಿಯ ಕವನ ಸಂಕಲನಕ್ಕೆ ಕವಯತ್ರಿಯರಾದ ಶ್ರೀಮತಿ ಲತಾ ಕೆ ಎಸ್ ಹೆಗಡೆ, ಶ್ರೀಮತಿ ಪಲ್ಲವಿ ಪ್ರಸನ್ನ, ಶ್ರೀಮತಿ ಅನುರಾಧ ಶಿವಪ್ರಕಾಶ್, ಶ್ರೀಮತಿ ಗೀತಾ ತಿಪ್ಪೇಸ್ವಾಮಿ, ಶ್ರೀಮತಿ ಅನಿತಾ ಪಿ ಕೆ ಇವರುಗಳು ಆಶಯ ನುಡಿಗಳನ್ನು ಬರೆದು ಶುಭ ಹಾರೈಸಿದ್ದಾರೆ.
ಈ ಕವನ ಸಂಕಲನದಲ್ಲಿ ಸುಮಾರು ಎಪ್ಪತ್ತೊಂದು ಕವಿತೆಗಳಿದ್ದು ಕನ್ನಡ ನಾಡು ನುಡಿಯ ವಿಷಯವನ್ನು ಸಾರುವ ಕವಿತೆಯಿಂದ ಪ್ರಾರಂಭವಾಗಿ, ಕಾಂಚಾಣ ಕಾಯಕದಲ್ಲ ಎಂಬ ಕವಿತೆಯೊಂದಿಗೆ ಮುಕ್ತಾಯವಾಗುತ್ತದೆ ಈ ಕವನಸಂಕಲನದಲ್ಲಿ ನನ್ನನ್ನು ಓದಿಸಿಕೊಂಡ ಹಲವಾರು ಕವಿತೆಗಳಲ್ಲಿ ಒಂದಷ್ಟು ಕವಿತೆಗಳನ್ನು ಪರಿಚಯಿಸಲು ಪ್ರಯತ್ನಿಸಿದ್ದೇನೆ.
ಕನ್ನಡದ ಘೋಷ ಎಂಬ ಕವಿತೆಯ ಶೀರ್ಷಿಕೆಯಲ್ಲಿ ಬರೆದ ಕವಿತೆಯು ಕನ್ನಡದ ಮುದ್ದು ಮಕ್ಕಳಿಗೆ ಕರುನಾಡಿನ ಭಾಷೆಯ ಮಹತ್ವವನ್ನು ಸಾರುತ್ತದೆ. ಬನ್ನಿ ಮಕ್ಕಳೆ ಕೊಳಲಿನ ಗಾನದಂತೆ ಊದಬೇಕು ಕನ್ನಡದ ಕಹಳೆಯನ್ನು, ಈ ನಮ್ಮ ಕರುನಾಡು ಭಾರತಾಂಭೆಯ ಮುದ್ದಿನ ಮಗಳು. ನಮ್ಮ ಈ ಕನ್ನಡ ಭಾಷೆಯು ಆಡಲು ಹಾಡಲು ಬಹು ಸೊಗಸಾದ ಭಾಷೆ. ಕನ್ನಡ ಕವಿಗಳಿಂತು ಬರೆಯಲು ಅರಿಯಲು ಖುಷಿ ಪಡುವ ಭಾಷೆಯಿದು. ಕನ್ನಡಯೆಂಬ ಶಬ್ದವು ಕೇಳಿದರೆ ಮನಸ್ಸು ನಮ್ಮ ಕುಣಿದಾಡಬೇಕು. ಕರುನಾಡಿನ ಮಕ್ಕಳು ನಾವೆಲ್ಲ ಒಂದಾಗಿ ಕನ್ನಡಮ್ಮನ ಪೋಷಿಸಬೇಕು, ಕನ್ನಡ ಭಾವುಟ ದಿನದಿನಕ್ಕೂ ಮೇಲೇರಬೇಕು, ಕನ್ನಡಿಗರಾದ ನಮಗೆ ಕನ್ನಡ ಸೇವೆಯೇ ಉಸಿರಾಗಿ, ಕನ್ನಡ ನಾಡಿನಲ್ಲಿ ಕನ್ನಡವೇ ಆಡಳಿತದ ಭಾಷೆಯಾಗಿ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿ ನಡೆಯಲಿ ಎಂಬ ಸದಾಶಯವನ್ನು ಹೊತ್ತ ಈ ಕವಿತೆ ಕನ್ನಡಾಂಭೆಗೆ ಜಯಘೋಶ ಮೊಳಗಿಸುತ್ತಾ ನಮ್ಮ ಕನ್ನಡ ಸಾಹಿತ್ಯವು ಎಲ್ಲಾ ಕಡೆ ಪಸರಿಸಲಿ ಎಂದು ಸಾರಿ ಮುಕ್ತಾಯವಾಗುತ್ತದೆ.
ನನ್ನ ಮತ ನನ್ನ ಹಕ್ಕು ಶೀರ್ಷಿಕೆ ಕವನದಲ್ಲಿ ಮತದಾನ ಈ ದೇಶದ ಪ್ರತಿಯೊಬ್ಬ ಕೃತಿಯ ಆದ್ಯ ಕರ್ತವ್ಯ. ಇದು ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಹಕ್ಕು. ಆ ಮೂಲ ಭೂತವಾದ ಹಕ್ಕನ್ನು ನಾವು ಜಾಗರೂಕತೆಯಿಂದ ಉಪಯೋಗಿಸಬೇಕು. ಮತದಾನದ ಮೂಲಕ ಕೆಟ್ಟ ರಾಜಕಾರಣಿಗಳನ್ನ ಸೋಲಿಸಬೇಕು. ಆದರೆ ನಾವು ನಾಡಿನ ಉನ್ನತಿಯನ್ನ ಬಯಸದ ಹೇಡಿಗಳನ್ನು ಆರಿಸುತ್ತೇವೆ. ಜನರ ದುಡ್ಡು ಕೋಟಿ ಕೋಟಿ ಹಣವನ್ನು ಕೊಳ್ಳೆ ಹೊಡೆಯುವ ರಾಜಕಾರಣಿಗಳನ್ನು ಮತದಾನದ ಮೂಲಕ ಸೋಲಿಸಬೇಕು, ಜನಸೇವೆಯನ್ನ ಮಾಡುವವರನ್ನು ಮಾತ್ರ ನಮ್ಮ ಮುಖಂಡನಾಗಿ ನೇಮಿಸಿಕೊಳ್ಳಬೇಕು. ಅವರ ಭರವಸೆಯ ಮಾತುಗಳನ್ನ ನಂಬಿ ಮೋಸ ಹೋಗುತ್ತಿದ್ದೇವೆ. ಮತದಾನದ ದಿನ ಒಂದು ರಜೆ ಕೊಟ್ಟರೆ ಸಾಕು, ಕುಟುಂಬದ ಸಮೇತ ಖುಷಿಯನ್ನ ಕಳೆಯಲು ಹೊರಗೆ ಹೋಗಿಬಿಟ್ಟರೆ ಮುಂದೆ ನಾವು ಜೀವನದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಮತದಾನದ ಮಹತ್ವವನ್ನು ಅರಿತುಕೊಂಡು ಯೋಗ್ಯರನ್ನು ನಮ್ಮ ಸೇವಕನಾಗಿ ಆರಿಸಿ ಕಳಿಸಬೇಕು ಬಡವ ನೆಮ್ಮದಿಯ ನಾವು ಖುಷಿಯ ಜೀವನವನ್ನ ಅನುಭವಿಸುತ್ತಾನೆ.
ಎತ್ತ ಸಾಗುತ್ತಿದೆ ಪಯಣ ಶೀರ್ಷಿಕೆಯ ಕವಿತೆಯಲ್ಲಿ ಎಲ್ಲರೂ ಆದರ್ಶ ಪಾಲನೆ ಮಾಡಿ ಎಂದು ಹೇಳುತ್ತೇವೆ ನೀತಿ ತತ್ವಗಳನ್ನ ಬರೆಯುತ್ತೇವೆ ಆದರೆ ಕಣ್ಣಿದ್ದು ಕುರುಡರಂತೆ ಬದುಕುತ್ತಿದ್ದೇವೆ. ನಮ್ಮ ಜೀವನವೇ ಅತಂತ್ರವಾಗುತಿದೆ. ಗಾಂಧಿ ಬಸವ ಬುದ್ಧ ಅಂಬೇಡ್ಕರ್ ಶರೀಫರು ಈ ಸಮಾಜಕ್ಕೆ ಬೆಳಕನ್ನ ತೋರಿಸಿದ ಪ್ರವರ್ತಕರು. ಅವರನ್ನು ಬಹಳಷ್ಟು ನಾವು ಓದಿಕೊಂಡಿದ್ದೇವೆ. ಆ ಓದು ಭಾಷಣಕ್ಕೆ ಬೇಕಾಗುವಷ್ಟು ಮಾತ್ರ, ಆದರೆ ನಮ್ಮ ನಡೆ ನುಡಿಯಲ್ಲಿ ಅವರ ಆದರ್ಶವನ್ನು ಮಾತ್ರ ನಾವು ಪಾಲಿಸುತ್ತಿಲ್ಲ. ಸಮಾನತೆ ಶಾಂತಿ ಭ್ರಾತೃತ್ವ ಮನುಕುಲದಲ್ಲಿ ಸತ್ತೆ ಹೋಗಿವೆ. ಆದರೆ ಅವೆಲ್ಲ ಮತ್ತೆ ಹುಟ್ಟಿ ಬರಬೇಕಾಗಿದೆ. ಮನದಲ್ಲಿರುವ ಕೊಳೆಯನ್ನ ತೊಳೆದವರನ್ನು ಈ ಭೂಮಿಯ ಮೇಲೆ ನಾವು ಹುಡುಕಬೇಕಾಗಿದೆ. ಏತ್ತ ಸಾಗುತ್ತಿದೆ ಈ ಮನುಕುಲದ ಪಯಣ ಎಂದು ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಆಡಂಬರವನ್ನೇ ಉಸಿರಾಗಿಸಿಕೊಂಡು ಸ್ವಾಥ೯ವು ತುಂಬಿ ತುಳುಕುತ್ತಿರುವ ಈ ಜಗದಲ್ಲಿ ಆತ್ಮ ಸಾಕ್ಷಿಗೆ, ಮಹಾ ಮಾನವತವಾದಿಗಳಿಗೆ ನಾವು ತಲೆಬಾಗಿ ನಮಸ್ಕರಿಸುವ ಕಾಲ ಬರಬೇಕಾಗಿದೆ ಎಂಬುದನ್ನ ಬಹಳಷ್ಟು ಸೊಗಸಾಗಿ ಈ ಕವಿತೆಯಲ್ಲಿ ಕಟ್ಟಿದ್ದಾರೆ.
ಕ್ಷೇಮ ಎಂಬ ಕವನದ ಶೀರ್ಷಿಕೆಯಲ್ಲಿ ಮನುಜ ಮನುಜನ ನಡುವೆ ಇರುವ ಅಸೂಯೆ ತಿರಸ್ಕಾರ ಮುಂತಾದ ವಿಷಯಗಳ ಬಗ್ಗೆ ಮಾರ್ಮಿಕವಾಗಿ ಕವಿಗಳು ಈ ಕವಿತೆಯಲ್ಲಿ ಬರೆದಿದ್ದಾರೆ.
ನಿನಗೆ ನೋವುವನ್ನು ಕೊಟ್ಟವರನ್ನು ತಪ್ಪು ಮಾಡಿದವರನ್ನು ಕ್ಷಮಿಸಿ ಬಿಡು. ಮನುಜನ ಬಾಳು ಕ್ಷಣಿಕವಾದದ್ದು.. ತಪ್ಪು ಮಾಡಿದವನನ್ನ ಕ್ಷಮಿಸಿದವನು ಮಾತ್ರ ಯೋಗ್ಯನಾಗಿ ಗುರುತಿಸಿಕೊಳ್ಳುತ್ತಾನೆ. ಈ ಭೂತಾಯಿಯನ್ನ ಒಮ್ಮೆ ನೋಡು ಎಲ್ಲವನ್ನು ಸಹಿಸಿಕೊಂಡು ಎಲ್ಲರನ್ನ ಸಂತೈಸಿಕೊಂಡು ಬದುಕುತ್ತಿದ್ದಾಳೆ. ನಡೆಯುತ್ತಿದ್ದಾಳೆ. ಒಬ್ಬ ವ್ಯಕ್ತಿ ತನ್ನ ತಪ್ಪವನ್ನು ಅರಿತುಕೊಂಡು ಅವರಿಗೆ ಬೇಕು ಅವನನ್ನ ಕ್ಷಮಿಸಿ ಅಪ್ಪಿಕೊಂಡು ಬಿಟ್ಟರೆ ಎಷ್ಟು ಸೊಗಸಾಗಿರುತ್ತದೆ ಜೀವನ ಯೋಚಿಸು.. ಎಷ್ಟು ಕಾಲ ಅಂತ ಒಬ್ಬರನ್ನು ದೂರುತ್ತಾ ಸಾಗುವುದು. ಈ ಭೂಮಿಯ ಮೇಲೆ ಯಾರೂ ಕೂಡ ಶಾಶ್ವತವಾಗಿ ಇರಲಾರರು. ಅವರವರ ಕರ್ಮವನ್ನ ಅವರು ಅನುಭವಿಸಿ ತೀರುತ್ತಾರೆ. ಮನುಷ್ಯ ಎಲ್ಲವನ್ನು ಮರೆತು ಸಾಗಬೇಕು. ನಮ್ಮ ತಪ್ಪನ್ನು, ನಾವು ಮಾಡುವ ಒಳ್ಳೆಯ ಕೆಲಸಗಳನ್ನು ನೋಡಲು ಮೇಲೆ ದೇವರಿದ್ದಾನೆ ಅವನು ಎಲ್ಲವನ್ನೂ ಕ್ಷಮಿಸುತ್ತಾ ದೇವರಾಗಿದ್ದಾನೆ. ಲೋಕ ಪಾಲನೆ ಮಾಡುವ ಲೋಕಪಾಲಕನಾಗಿದ್ದಾನೆ ಎಂದು ಕವಿತೆಯಲ್ಲಿ ಹೇಳಿದ್ದಾರೆ.
ಸಾಲು ಮರಗಳ ತಿಮ್ಮಕ್ಕನ ಜೀವನ ಚರಿತ್ರೆಯ ಬಗ್ಗೆ ಅದ್ಭುತವಾಗಿ ಈ ಕವಿತೆಯಲ್ಲಿ ವಿವರಿಸುತ್ತಾ ಸಾಗುತ್ತಾರೆ. ದೇವರನ್ನ ಅಲ್ಲಿ ಇಲ್ಲಿ ಹುಡುಕುತ್ತಾ ಏಕೆ ?ಸಾಗುವೆ ಕನ್ನಡದ ಮಣ್ಣಿನಲ್ಲಿಯೇ ಇರುವವರನ್ನು ಹುಡುಕು ಎನ್ನುತ್ತಾ ಜೀವನದ ಸಂಘರ್ಷದಲ್ಲಿ ಬೆಳಗಿದ ದೀಪದಂತೆ, ಹಚ್ಚಹಸುರಿನ ಸಾವಿರ ಮರಗಳ ತಾಯವ್ವ ಈ ತಿಮ್ಮಕ್ಕ ಇವರ ಬಗ್ಗೆ ನೀವು ಕೇಳಿದ್ದೀರಾ? ಓದುಗರನ್ನು ಪ್ರಶ್ನಿಸುತ್ತಾ ತಿಮ್ಮಕ್ಕನ ಜೀವನ ಚರಿತ್ರೆಯನ್ನು ಕವಿತೆಯ ಮೂಲಕ ಓದುಗರಿಗೆ ತಲುಪಿಸುತ್ತಾರೆ. ತುಮಕೂರಿನ ಸಣ್ಣ ಊರಾದ ಗುಬ್ಬಿಯಲ್ಲಿ ಜನಿಸಿ, ಪ್ರತಿನಿತ್ಯ ದುಡಿದರೇನೆ ಜೀವ ಉಳಿಸಿಕೊಳ್ಳಲು ಗಂಜಿ ಸಿಗುತ್ತದೆ. ಕಲ್ಲು ಕೋರೆಗಳಲ್ಲಿ ಬೆವರನ್ನು ಹರಿಸುತ್ತಿದ್ದ ಹೆಣ್ಣು ಮಗಳು ಇಂದು ಅಪ್ರತಿಮ ಸಾಧಕೀಯಾಗಿ ಗುರುತಿಸಿಕೊಂಡಿದ್ದಾರೆ.
ಚಿಕ್ಕಯ್ಯ ಎಂಬುವ ದನ ಕಾಯುವ ಹುಡುಗನನ್ನ ಮದುವೆಯಾಗಿ ದಾಂಪತ್ಯ ಜೀವನ ಸಾಗಿಸುತ್ತಿದ್ದರೂ ಮಕ್ಕಳ ಭಾಗ್ಯವಂತು ಕಾಣಲಿಲ್ಲ ಕೊನೆಯವರೆಗೂ. ಆದರೂ ಮಕ್ಕಳಿಲ್ಲವೆಂಬ ಕೊರಗಿನಿಂದ ಆಕೆ ಪರಿತಪಿಸಲಿಲ್ಲ, ಕೊನೆಗೆ ಕನಸೊಂದನ್ನು ಕಂಡು ಮಕ್ಕಳಿಲ್ಲದಿದ್ದರೆನಂತೇ ಸಸಿಗಳನ್ನು ರಸ್ತೆಯ ಬದಿಗಳಲ್ಲಿ ನೆಟ್ಟು, ಅವುಗಳನ್ನೆ ಮಕ್ಕಳೆಂದು ಪೋಷಿಸಿದಳು. ಈ ಕೆಲಸಕ್ಕೆ ತನ್ನ ಪತಿಯು ಕೂಡ ಜೊತೆಯಾದರು. ಆಕೆ ಓದಲಿಲ್ಲ, ಬರೆಯಲಿಲ್ಲ ಆದರೂ ಪದ್ಮಶ್ರೀ ಪುರಸ್ಕಾರ ಸಿಕ್ಕಿತು. ಸಾಮಾನ್ಯರಾಗಿ ಬದುಕಿ ಚರಿತ್ರೆಯನ್ನು ಸೃಷ್ಟಿಸಿದರು ಎಂದು ಬಹಳ ಸೊಗಸಾಗಿ ಸಾಲು ಮರದ ತಿಮ್ಮಕ್ಕನ ಜೀವನದ ಬಗ್ಗೆ ಕವಿತೆಯನ್ನು ಬರೆಯುತ್ತಾರೆ ಕವಿಗಳು.

ಬದುಕು ನಿನಗಾಗಿಯೆಂಬ ಶೀರ್ಷಿಕೆ ಕವಿತೆಯು ಒಂದು ಪ್ರೇಮ ಕವಿತೆಯಾಗಿದ್ದು, ಪ್ರಿಯತಮೆಯು ಪ್ರಿಯನಿಗಾಗಿ ಹೇಳುವ ಪರಿಯು ಬಹಳಷ್ಟು ಸೊಗಸಾಗಿದೆ. ಈ ಮನಸ್ಸು ನಿನ್ನ ಒಲವಿಗಾಗಿ ಕಾಯುತಿದೆ ನನ್ನ ಹೃದಯ ಹೂವಾಗಿ ಅರಳುತ್ತಾ ಕಾಯುತಿದೆ ಪ್ರಿಯಾ ನಿನ್ನ ಸವಿ ಮಾತಿಗಾಗಿ ಬಯಸುತಿದೆ. ನಿನ್ನ ಜೊತೆಯಲ್ಲಿ ಸೇರಿ ಆಗಸದಲ್ಲಿ ಹಾರುವ ಆಸೆ. ಹುಣ್ಣುಮೆ ಬೆಳಕನ್ನು , ಚುಕ್ಕಿಗಳನ್ನು ತಂದು ಮುಡಿಸು ನನ್ನ ತುರುಬಿಗೆ, ಹೂ ಬನದಲ್ಲಿ ಮಲ್ಲಿಗೆಯನ್ನು ಮುಡಿದು ಕುಣಿದು ಬರಬೇಕು ನಾನು. ನಮ್ಮ ಬದುಕಿನಲ್ಲಿ ನೂರಾರು ನೋವುಗಳು ಬರಬಹುದು ಅವುಗಳನ್ನು ಸಹಿಸುತ್ತಾ, ನಿನ್ನೊಲವನ್ನು ಬಿಡದೇ ಪ್ರತಿದಿನವೂ ನೆನಪು ಮಾಡಿಕೊಳ್ಳುತ್ತೇನೆ. ನನ್ನ ಮನದ ಮಂದಿರಕ್ಕೆ ದೀಪವು ನೀನು ಎಂದು ಸೊಗಸಾಗಿ ಕವಿತೆಯನ್ನು ರಚಿಸಿದ್ದಾರೆ.
ಯೋಗಿಯಾಗು ನೀನು ಎಂಬ ಈ ಕವನದ ಶೀರ್ಷಿಕೆಯಲ್ಲಿ ಬರೆದ ಸಾಲುಗಳು ಮನುಜನ ಮನಸ್ಥಿತಿಗೆ ತಿಳಿ ಹೇಳಿದ ಸಾಲುಗಳಾಗಿವೆ. ಯಾವುದೋ ಅಂತೆಕಂತೆಗಳಿಗೆ ಕಿವಿಯನ್ನು ಕೊಟ್ಟು, ಚಿಂತಿಸುತ್ತಾ ನಿದ್ದೆಗೆಟ್ಟು ಸಾಯಬೇಡ, ಬರುವುದೆಲ್ಲಾವು ಬಂದೆ ಬರುತ್ತದೆ ನೀನು ಬಯಸಿದ್ದೆಲ್ಲಾವು ನಿನಗೆ ಸಿಗಲಾರದು. ನಿನ್ನ ದುಡಿಮೆಯೊಂದೆ ನಿನಗೆ ಶಾಶ್ವತವಾಗಿ ಉಳಿಯುವುದು ನೀನು ಅಡ್ಡದಾರಿಯಲ್ಲಿ ನಡೆದರೆ ಖಂಡಿತವಾಗಿಯೂ ಮುಂದೆ ಸಂಕಟವನ್ನು ಪಡುವೆ. ಅಸೆ ಮನುಜನ ಮನದಲ್ಲಿ ಜೀವಂತವಾಗಿ ಉಳಿದಿದೆ. ಅದರೆ ಈ ಜೀವ ಶಾಶ್ವತವಲ್ಲ ಕೊನೆಗೊಮ್ಮೆ ಮಣ್ಣು ಸೇರಲೇ ಬೇಕು ಅದ್ದರಿಂದ ಸತ್ಯ ನ್ಯಾಯದ ಹಾದಿಯಲ್ಲಿ ಸಾಗು, ನಿತ್ಯವೂ ಮನದೊಳಗೆ ದೇವರನ್ನು ನೆನೆಯುತ್ತಾ ಸಾಗಿದರೆ ಮೃತ್ಯು ಕೂಡ ತಲೆ ಬಾಗಿ ಗೌರವವನ್ನು ಕೊಡುವುದು. ನಿಜ ಹೇಳುತ್ತೇನೆ ಕೇಳು ನಾನು ನನ್ನದು ಎಂಬ ಭಾವ ಬಹಳಷ್ಟು ಒಳ್ಳೆಯದಲ್ಲ ಜೀವನದಲ್ಲಿ ನೀನು ದೀನನಾಗು,
ದಾನಿಯಾಗು, ತ್ಯಾಗಿಯೂ ಆಗು, ಯಾನ ಮಾಡುವ ಸಮಯವು ಬಂದಾಗ ಯೋಗಿಯಾಗು ನೀನು ಅಂತ ಮನುಜನ ಬದುಕಿನ ಮೇಲೆ ಈ ಕವಿತೆಯ ಸಾಲುಗಳು ಬೆಳಕು ಚೆಲ್ಲುತ್ತವೆ.
ಈ ಮನೋವಾರಿಧಿ ಕವನಸಂಕಲನದ ಕೊನೆಯ ಕವಿತೆಯ ಸಾಲುಗಳು ಬಹಳ ಸೊಗಸಾದ ಅಥ೯ವನ್ನು ನೀಡುತ್ತದೆ ಈ ಸಮಾಜಕ್ಕೆ. ಈ ಕಾಂಚಾಣ ಎಂಬ ಹಣವು ನಿಮ್ಮನ್ನು ಸದಾ ಕಾಯುವುದಿಲ್ಲ ಮನುಜನೇ. ಹಣದ ಅಸೆಯಿಂದ ಲಂಚಕ್ಕೆ ನೀನು ಕೈಚಾಚಿದರೆ ರಾತ್ರಿ ಮಲಗಲು ಲಂಚವೇರಿದ ಸಮಯದಲ್ಲಿ ನಿನಗೆ ನಿದ್ರೆಯೂ ಕೂಡ ಬರುವುದಿಲ್ಲ. ನನ್ನ ಪಾಲಿಗೆ ಬಂದದ್ದು ಪಂಚಾಮೃತವೆಂದು ಸ್ವೀಕರಿಸದೇ, ಮೇಲಾಟಾದಲಿ ಬಡಜನರನ್ನು ದೋಚಿದರೆ, ಸ್ವಂತ ಪ್ರಿಯತಮೆಯನ್ನು ನೀನು ರಮಿಸದೇ ಸಂತೇಯ ಸರಕನ್ನು ಸವಿದರೆ ಅಂತ್ಯದ ಕಾಲದಲ್ಲಿ ರೋಗಪೀಡಿತನಾಗಿ ನರಳುತ್ತಿಯಾ, ಹಸಿದವನ ಹೊಟ್ಟೆಯ ಮೇಲೆ ಹೊಡೆದಾಗ ಪಾಪ ನಿನ್ನನ್ನು ಬೆಂಬೆತ್ತಿ ಕಾಡುತ್ತದೆ. ನಾನು ನನಗಾಗಿಯೆಂಬ ಹೀನ ಬುದ್ದಿಯಿಂದ ಆಪಚಾರವೆಸಗಿ ಅಸ್ತಿ ಮಾಡುತ್ತಿಯಾ, ಸಾಧುಸಂತರನ್ನು ಜರಿಯುತ್ತಾ ನರಕ ಯಾತನೆಯನ್ನು ಅನುಭವಿಸುತ್ತಿಯಾ ಎಂದು ಬಹು ನೋವಿನಿಂದ ಕವಿತೆಯನ್ನು ರಚಿಸಿದ್ದಾರೆ.
ಮನೋವಾರಿಧಿ ಕವನಸಂಕಲನದಲ್ಲಿ ಶಾಂತಿ ಜ್ಯೋತಿ ಬೆಳಗಲಿ, ರಾಣಿ ಚೆನ್ನಮ್ಮ, ಬೆಳಕಿನ ಹಬ್ಬ, ನಮಿಸೋಣ ಬನ್ನಿ, ಅಂಬರದ ಹೂ ಬಳ್ಳಿ, ಪ್ರಕೃತಿ ವಿಕೋಪ ಧಮ೯ಯುದ್ದ, ನಿನ್ನೆಯ ನೆನಪುಗಳು ಇನ್ನೂ ಮುಂತಾದ ಕವಿತೆಗಳು ಓದುಗನ ಮನದೊಳಗೆ ಒಂದೊಂದು ಸಂದೇಶವನ್ನು ನೀಡುತ್ತಾ ಸಾಗುತ್ತದೆ.
ಶ್ರೀ ಹರಿ ನರಸಿಂಹ ಉಪಾಧ್ಯಾಯ ರವರ ಮನೋವಾರಿಧಿ ಐದನೆಯ ಕೃತಿಯಾಗಿದ್ದು ಒಂದಷ್ಟು ಸಂದೇಶಗಳನ್ನು ಹೊತ್ತು ಬಂದಿದೆ. ಎಲ್ಲಾರೂ ಈ ಕೃತಿಯನ್ನು ಕೊಂಡು ಓದಿ ಸಾಹಿತಿಗಳನ್ನು ಬೆಳೆಸಬೇಕಾಗಿದೆ. ಯಾಕೆಂದರೆ ಕೃತಿಯನ್ನು ಓದಿದಾಗ ಮಾತ್ರ ಆ ಕವಿತೆಗಳಲ್ಲಿ ಇರುವ ಒಳಾಂಶಗಳನ್ನು ಗ್ರಹಿಸಬಹುದಾಗಿದೆ.
ತಮ್ಮ ಕೃತಿಯನ್ನು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು ಕವಿಗಳೇ. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ತಂದುಕೊಡಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ.
ಹಿಂದಿನ ಸಂಚಿಕೆಗಳು :
- ನಾರಾಯಣಸ್ವಾಮಿ .(ನಾನಿ) – ವಕೀಲರು, ಲೇಖಕರು , ಬಂಡಹಟ್ಟಿ ಮಾಸ್ತಿ ಮಾಲೂರು ತಾಲ್ಲೂಕು.
