ಪ್ರಸಿದ್ಧ ವ್ಯಕ್ತಿಗಳಲ್ಲಿ ಬಹಳಷ್ಟು ಮಂದಿ ತಮ್ಮ ತಮ್ಮ ಬದುಕಿನ ಬಗ್ಗೆ ಬರೆಯುತ್ತಾರೆ. ನಾನು ಪ್ರಸಿದ್ಧನೂ ಅಲ್ಲ, ಸಿದ್ಧನೂ ಅಲ್ಲ. ಈ ಲೇಖನದ ಹೆಸರು ಹರಿದಾರಿ ಏಕೆ? ಎಂಬ ಪ್ರಶ್ನೆಗೆ ಉತ್ತರವಾಗಿ ಈ ಅನುಭವ ಕಥನ ಎನ್ನುತ್ತಾರೆ ಲೇಖಕರು, ಕಲಾವಿದರಾದ ಹರಿಕೃಷ್ಣ ಹರಿ ಅವರು. ಮುಂದೆ ಓದಿ ರಂಗಭೂಮಿಯಲ್ಲಿನ ಅವರ ಅನುಭವದ ಕಥನ…
ಮೊದಲ ಮೈಲುಗಲ್ಲಿನೆಡೆಗೆ
ಹುಡುಗಾಟ
ಕೇಳಿರಿ, ಕೇಳಿರಿ… ಬನ್ನಿರಿ, ನೋಡಿರಿ, ಆನಂದಿಸಿರಿ…ನಿಮ್ಮ ನೆಚ್ಚಿನ ತಾರೆಯರಾದ ಎಮ್ಮಾರ್ ರಾಧ, ತಂಗವೇಲು ಮತ್ತು ಹಾಗೂ ಕನ್ನಾಂಬ ಅಮೋಘ ಅಭಿನಯದ ತಮಿಳು ಚಿತ್ರ. ಸುದರ್ಶನ ಟಾಕೀಸಿನಲ್ಲಿ ಇಂದಿನಿಂದ ಅಮೋಘ ಪ್ರಾರಂಭ. ಪ್ರತಿದಿನ ಮೂರು ಆಟಗಳು, ಮಧ್ಯಾಹ್ನ ಎರಡು ಗಂಟೆಗೆ ಮ್ಯಾಟ್ನಿ, ಸಾಯಂಕಾಲ ಏಳಕ್ಕೆ ಮೊದಲನೆಯ ಆಟ ಮತ್ತು ರಾತ್ರಿ ಹತ್ತಕ್ಕೆ ಎರಡನೆಯ ಆಟ. ಬನ್ನಿರಿ, ನೋಡಿರಿ, ಆನಂದಿಸಿರಿ…

1987 ತುಕ್ಕೋಜಿ, ರಂಗನಿರಂತರ 150ದಿನಗಳ ರಂಗೋತ್ಸವದಲ್ಲಿ. ನಿರ್ದೇಶನ ರಮೇಶ್ ಚಂದ್.
ಮನೆಯ ಮುಂದೆ ಜಟಕಾಗಾಡಿಯ ಹಿಂತುದಿಯಲ್ಲಿ ಸಾರಥಿಯ ಹಿಂದೆ ಹಿಮ್ಮೊಗವಾಗಿ ಕುಳಿತು ಅವನು ಕೊಂಬುಕಹಳೆ ಯಾನೆ ತುತ್ತೂರಿಯ ಮೂಲಕ ಕೂಗಿ ಸುದ್ದಿಪ್ರಸಾರ ಮಾಡುತ್ತಿದ್ದ. ಒಂದು ಸುತ್ತು ಪ್ರಸಾರ ಮುಗಿದಮೇಲೆ ಒಳಗೆ ಕುಳಿತಿರುವ ವಾದ್ಯಗೋಷ್ಠಿಯ ಬ್ಯಾಂಡ್ ವಾದನ ಆರಂಭ. ಅದರೊಂದಿಗೆ ಅವನು ಪಕ್ಕದಲ್ಲಿಟ್ಟುಕೊಂಡಿದ್ದ ಕರಪತ್ರಗಳಿಂದೊಂದಷ್ಟನ್ನು ಎತ್ತಿಕೊಂಡು ಗಾಡಿಯಿಂದ ಹೊರಗೆ ಎರಚುತ್ತಿದ್ದ. ಆಹಾ! ಬಣ್ಣಬಣ್ಣದ ಕಾಗದಗಳ, ಬಾಲಂಗೋಚಿಯಿರದ ಗಾಳಿಪಟ! ಅದನ್ನು ಆರಿಸಿಕೊಳ್ಳಲು ಗಾಡಿಯ ಹಿಂದೆ ಒಂದಷ್ಟು ಹುಡುಗರ ಪಟಾಲಂ – ಐದರಿಂದ
ಹದಿನೈದು ವಯುಸ್ಸಿನವರದು. ನನಗೂ ಆಸೆ ಅವುಗಳನ್ನಾರಿಸಿಕೊಳ್ಳಲು, ಮನೆಯಿಂದ ಹೊರಗೆ ಓಡುತ್ತಿದ್ದೆ. ಆದರೆ ಆ ಪೋಕರಿಗಳಿಗೆ ನಾನು ಈಡೆ? ಒಂದು ಅಥವಾ ಎರಡು ಸಿಕ್ಕಿದರೆ ಹೆಚ್ಚು. ಆಗ ನನಗಿನ್ನೂ ಮೂರು ವರ್ಷ ವಯಸ್ಸು. ಹೋ ಎಂದು ಅಲವತ್ತುಕೊಳ್ಳುತ್ತಾ ಹತ್ತಿರದಲ್ಲಿಯೇ ಇದ್ದ ಹೋಟೆಲಿನಲ್ಲಿದ್ದ ಅಪ್ಪಯ್ಯನ ಬಳಿಗೆ ಹೋಗಿ ಅಹವಾಲು ಸಲ್ಲಿಸುತ್ತಿದ್ದೆ. ಅಪ್ಪಯ್ಯ ಯಾರನ್ನಾದರೂ ಕಳಿಸಿ ಒಂದಷ್ಟು ಕರಪತ್ರಗಳನ್ನು ತರಿಸಿಕೊಡುತ್ತಿದ್ದರು. ಅದರಲ್ಲೇನಿದೆ ಎಂಬುದನ್ನು ತಿಳಿಯಲು ನನಗಾಗ ಓದಲು ಬರುತ್ತಿದ್ದರೆ ತಾನೆ! ಆದರೆ ಅದರಲ್ಲಿರುವ ಚಿತ್ರಗಳು ಹಾಗೂ ಆ ಬಣ್ಣಗಳು. ನನಗೆ ಖುಷಿ ಕೊಡುತ್ತಿದ್ದದ್ದು ಅವು. ನಿದ್ರೆಯ ಆಳಕ್ಕಿಳಿದ ಕ್ಷಣಗಳಲ್ಲಂತೂ (ಕಲರ್ ಸಿನಿಮಾಗಳಿನ್ನೂ ಬಂದಿರದ ಕಾಲ ಅದು) ಕನಸುಗಳ ತುಂಬಾ ಬಣ್ಣ, ಬಣ್ಣ! ಆ ಕನಸುಗಳಲ್ಲಿ ನಾನು ರಂಗಿನ ರಂಗಣ್ಣ.
ಬದುಕಿನ ಹಳೆಯ ಪುಟ ಅದು. ನೆನಪಿನ ಪುಸ್ತಕದ ಹೊರಹೊದಿಕೆಯನ್ನು ಎತ್ತಿ ನೋಡಿದರೆ ಅದಿನ್ನೂ ಗೆದ್ದಲು ಹಿಡಿಯದೆ ಹೊಚ್ಚಹೊಸದಾಗಿಯೇ ಇದೆ, ಮಾಸಿಲ್ಲ, ಅದರಲ್ಲಿ ಮುದ್ರಿತವಾದ ನೆನಪುಗಳೂ ಅಳಿಸಿಹೋಗಿಲ್ಲ. ಜಟಕಾಗಾಡಿಯ ಹಿಂದೆ ಎದ್ದ ಧೂಳಿನ ವಾಸನೆಯೂ ಸಹ ಪುಸ್ತಕದೊಳಗಿನಿಂದ ಥಟ್ಟನೆದ್ದು ಖಮ್ಮನೆ ಮತ್ತೆ ಮೂಗಿಗೆ ಹೊಸದಾಗಿ ಅಡರಿಕೊಳ್ಳುತ್ತದೆ. ಜೊತೆಗೆ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿರುವ, ನಾವಿದ್ದ ಬಾಡಿಗೆ ಮನೆಯ ಗೋಡೆಯ ಮೇಲೆ ನಾನು ಅಕ್ಷರ ಕಲಿತ ಹೊಸದರಲ್ಲಿ ಓದಲು ಕಣ್ಣಿಗೆ ಬಿದ್ದ, ಆದರೆ ಅದಕ್ಕೂ ಮೊದಲೇ ಇದ್ದ, ದೊಡ್ಡದೊಡ್ಡ ಕಪ್ಪು ಅಕ್ಷರಗಳಲ್ಲಿ ಬರೆದಿದ್ದ ಜಾಹಿರಾತು:
#ಡೋಂಗರೆ_ಬಾಲಾಮೃತ
******
ಫೆಬ್ರುವರಿ 7, 1948 ಸಾಯಂಕಾಲ 5-30ರ ಸುಮಾರು, ಗೋಧೂಳಿ ಲಗ್ನ. (ಆಧಾರ: ಅಪ್ಪಯ್ಯ ಮಾಡಿಸಿದ್ದ ನನ್ನ ಜಾತಕ) ನಾನು ಹುಟ್ಟಿದ್ದು ಶಿವಮೊಗ್ಗೆಯ ಕುಂಬಾರಗುಂಡಿಯಲ್ಲಿ, ಸುದರ್ಶನ ಟಾಕೀಸಿನ ಪಕ್ಕದಲ್ಲಿ ಸಾಲಾಗಿ ನಿಂತಿರುವ ಮನೆಗಳಲ್ಲೊಂದರಲ್ಲಿ. ಆ ಥೇಟ್ರು‘ ಒಂದಷ್ಟು ವರ್ಷಗಳ ನಂತರ ಬದಲಾದ ಹೆಸರೊಂದನ್ನು ಬಿಟ್ಟರೆ ಸಾಕಷ್ಟು ವರ್ಷಗಳ ಕಾಲ ಯಾವುದೇ ರೀತಿಯ ಮಹತ್ವದ ರೂಪಪರಿವರ್ತನೆಯನ್ನು ಕಂಡಿರಲಿಲ್ಲ. 1976ರಲ್ಲಿ ನಾನು ವರ್ಗವಾಗಿ ಬೆಂಗಳೂರಿನಿಂದ ಶಿವಮೊಗ್ಗೆಗೆ ಹೋದಾಗ ಆ ರಸ್ತೆಗೆ ಭೇಟಿ ನೀಡಿದೆ. ನಾವಿದ್ದ ರಸ್ತೆಗೆ ಈಗ ಸಿನಿಮಾ ರಸ್ತೆಯೆಂದು
ನಾಮಕರಣವಾಗಿತ್ತು, ಏಕೆಂದರೆ ಅದೇ ರಸ್ತೆಯಲ್ಲಿ ಮಂಜುನಾಥ‘ ಎಂಬ ಹೆಸರಿನ ಇನ್ನೊಂದು ಚಿತ್ರಮಂದಿರವಿದೆ ಈಗ.

1987 ತುಕ್ಕೋಜಿ, ರಂಗನಿರಂತರ 150ದಿನಗಳ ರಂಗೋತ್ಸವದಲ್ಲಿ. ನಿರ್ದೇಶನ ರಮೇಶ್ ಚಂದ್.
ನನ್ನ ಥೇಟ್ರು ಹುಡುಗನ ಹೆಸರು ಕಳೆದುಕೊಂಡು ಹುಡುಗಿಯ ಹೆಸರು ಪಡೆದು ವಿಜಯಲಕ್ಷ್ಮಿ‘ಯಾಗಿ ನಾನು ಅವನು ಅಲ್ಲ, ಅವಳು‘ ಎಂದಿತ್ತು. ರಸ್ತೆ ಟಾರು ಕಂಡಿತ್ತು. ಆ ಟಾರಿನ ತೆರೆಯ ಹಿಂದೆ ಅಡಗಿದ್ದ ನೆನಪು ನನ್ನಕಡೆ ಇಣುಕಿತ್ತು, ಪರಿಚಯದ ನಗೆ ಬೀರಿ ಕೆಣಕಿತ್ತು. ದೃಶ್ಯಾವಳಿಯ ಸುರುಳಿ ಸರ್ರೆಂದು ಹಿಮ್ಮೊಗವಾಗಿ ಸುತ್ತಿ ಟೈಟಲ್ ಕಾರ್ಡ್ ಬಂತು.
ನನ್ನ ಪೂರ್ವಿಕರು ದಕ್ಷಿಣ ಕನ್ನಡ (ಈಗ ಆ ಜಿಲ್ಲೆಯಿಂದ ಬೇರೆಯಾಗಿರುವ ಉಡುಪಿ) ಜಿಲ್ಲೆಯ ಪೆರ್ಡೂರಿನ ಪಡಪಳ್ಳಿ ಎಂಬ ಗ್ರಾಮದಲ್ಲಿ ಜಮೀನು ಮಾಡಿಕೊಂಡಿದ್ದರಂತೆ. ಅಜ್ಜನ ವಂಶದವರು ಪೆರ್ಡೂರಿನ ಅನಂತಪದ್ಮನಾಭಸ್ವಾಮಿಯ ಪಲ್ಲಕ್ಕಿಯನ್ನು ಹೊರುವ ಮರ್ಯಾದೆ ಹೊಂದಿದ್ದರಂತೆ. ನನ್ನ ಅಜ್ಜ ಸೀತಾರಾಮ ಕೊಡಂಚರು ಕಾರಣಾಂತರದಿಂದ ಆ ಜಮೀನನ್ನು ಮಾರಿ ತಮ್ಮ ಕುಟುಂಬ ಸಮೇತ, ಜೊತೆಯಲ್ಲಿ ತಮ್ಮ ಶ್ರೀನಿವಾಸ ಕೊಡಂಚ (ಸೀನಪ್ಪ)ರನ್ನು ಕರೆದುಕೊಂಡು ಗುಳೆ ಎದ್ದವರು ಘಟ್ಟ ಹತ್ತಿ ಶಿವಮೊಗ್ಗೆಗೆ ಬಂದು ಅಲ್ಲಿ ಊಟದ ಮೆಸ್ ಒಂದನ್ನು ಇಟ್ಟುಕೊಂಡು ಬದುಕು ಮಾಡುತ್ತಿದ್ದರಂತೆ. ಅಜ್ಜನಿಗೆ ನನ್ನ ಅಪ್ಪಯ್ಯನೂ ಸೇರಿ ಮೂವರು ಗಂಡು ಮಕ್ಕಳು. ಹೆಣ್ಣುಮಕ್ಕಳಿರಲಿಲ್ಲ. ಪದ್ಮನಾಭ (ಅಂದರೆ ನನ್ನ ಅಪ್ಪಯ್ಯ) ಹಿರಿಯ ಮಗ. ಎರಡನೆಯವರು ಸುಬ್ರಾಯರು ಹಾಗೂ ಮೂರನೆಯವರು ಪದ್ಮನಾಭ.
ಇದೇನಪ್ಪ, ಒಂದೇ ಕುಟುಂಬದ ಇಬ್ಬರು ಮಕ್ಕಳಿಗೆ ಒಂದೇ ಹೆಸರು! – ಎಂದು ಆಶ್ಚರ್ಯವೇ? ಅದು ಹೀಗೆ, ನೋಡಿ! ಅಪ್ಪಯ್ಯನ ಜನ್ಮನಾಮ ಅನಂತಕೃಷ್ಣ ಎಂದು. ಪ್ರಾಥಮಿಕ ಶಾಲೆಯ ಮೂರನೆಯ ತರಗತಿಯಲ್ಲಿ ಓದುತ್ತಿದ್ದ ಅಪ್ಪಯ್ಯನನ್ನು ಆರ್ಥಿಕ ಕಾರಣದಿಂದಾಗಿ ಅಜ್ಜ ಅಪ್ಪಯ್ಯನನ್ನು ಶಾಲೆ ಬಿಡಿಸಿ ಶಿವಮೊಗ್ಗೆಯಲ್ಲಿ (ಪೆರ್ಡೂರಿನವರೇ ಆಗಿದ್ದ) ನೆಲ್ಲಿ ಅನಂತಯ್ಯ ಎಂಬುವವರ ಕೋಮಲ ವಿಲಾಸ್ ಎಂಬ ಹೆಸರಿನ, ಅಮೀರ್ ಅಹಮದ್ ವೃತ್ತದಲ್ಲಿ ಈಗಿನ ಹೋಟೆಲ್ ಟೂರಿಸ್ಟ್ ಇರುವ ಸ್ಥಳದಲ್ಲಿ ಅಂದು ಇದ್ದ ಹೋಟೆಲ್‍ನಲ್ಲಿ ಕೆಲಸ ಮಾಡಲು ಹಾಕಿದರು — ಬಹುಶಃ ತೆಗೆದುಕೊಂಡಿದ್ದ ಸಾಲವನ್ನು ತೀರಿಸುವ ವ್ಯವಸ್ಥೆಯ ರೂಪವಿದ್ದೀತು, ಗೊತ್ತ್ತಿಲ್ಲ. ಅನಂತಯ್ಯನವರ ಧರ್ಮಪತ್ನಿಗೆ (ಆ ಕಾಲದ ಎಲ್ಲಾ ಹೆಂಗಸರಂತೆ, ಗಂಡನ ಹೆಸರು ಹೇಳಬಾರದಲ್ಲವೆ!) ಅಪ್ಪಯ್ಯನನ್ನು ಅವರ ಹುಟ್ಟುಹೆಸರಿನಿಂದ ಕರೆಯಲಾಗದೆ ―ಪದ್ನಾಬ‖ (ಪದ್ಮನಾಭ ಎಂಬ ಹೆಸರಿನ ಸಂಬೋಧನಾರೂಪ) ಎಂದು ಕರೆಯುವುದನ್ನು ರೂಡಿ ü ಮಾಡಿಕೊಂಡರು. ಮುಂದೆ ಅಪ್ಪಯ್ಯನಿಗೆ ಪದ್ಮನಾಭ ಎನ್ನುವ ಹೆಸರೇ ಕೊನೆತನಕವೂ ಅಂಟಿಕೊಂಡಿತು. ಮೂರನೆಯ ತರಗತಿಯಷ್ಟೇ ಓದಿದ್ದ ಅಪ್ಪಯ್ಯ ತಮ್ಮ ಸಹಿಯನ್ನು ಅಕ್ಷರಗಳ ಮೇಲೆ ಯಾವುದೇ ‗ಒತ್ತಾಯ‘ವನ್ನೂ ಹೇರದೆ ―ಪದನಪಯ‖ ಎಂದೇ ಮಾಡುತ್ತಿದ್ದರು.
ಶಿವಮೊಗ್ಗೆಗೆ ಬಂದ ಮೇಲೆ ಅಜ್ಜಯ್ಯನ ತಮ್ಮ ಶೀನಪ್ಪಯ್ಯನವರಿಗೆ ಶಿವಮೊಗ್ಗೆಯಲ್ಲಿ ಶಾಂಭಟ್ರು (ಬಹುಶಃ ಇದೇ ಇರಬೇಕು ಹೆಸರು) ಎಂಬುವವರ ಸಾಕುಮಗಳು ಗಿರಿಜಮ್ಮನೊಂದಿಗೆ ಮದುವೆಯಾಯಿತು. ಅಜ್ಜಯ್ಯನ ಸಂಸಾರ ವಿಸ್ತಾರವಾಯಿತು.

1987 ತುಕ್ಕೋಜಿ, ರಂಗನಿರಂತರ 150ದಿನಗಳ ರಂಗೋತ್ಸವದಲ್ಲಿ. ನಿರ್ದೇಶನ ರಮೇಶ್ ಚಂದ್.
ಅಪ್ಪಯ್ಯ ಪ್ರಾಯಕ್ಕೆ ಬರುವ ಹೊತ್ತಿಗೆ ಅಜ್ಜನ ದೇಹಾಂತವಾಯಿತು. ಪರಿಣಾಮವಾಗಿ ತನ್ನ ಅಮ್ಮ (ಅಂದರೆ ನನ್ನ ದೊಡ್ಡಮ್ಮ ಅಲಿಯಾಸ್ ಅಜ್ಜಿ) ಹಾಗೂ ತಮ್ಮಂದಿರ ಹೊಣೆ ಅಪ್ಪಯ್ಯನ ಮೇಲೆಯೇ ಬಿತ್ತು. ದೊಡ್ಡಮ್ಮ (ಕಮಲಮ್ಮ)ನ ಮಾನಸಿಕ ಆರೋಗ್ಯವೂ ಸರಿಯಿರಲಿಲ್ಲವಂತೆ. ಕೋಮಲ ವಿಲಾಸ್ ಹೋಟೆಲ್‍ನಲ್ಲಿ ಅಪ್ಪಯ್ಯನ ಜೀತ ಮುಂದುವರೆಯಿತು. ಈಗಿನ ಪರಿಸ್ಥಿತಿ ನನಗೆ ಗೊತ್ತಿಲ್ಲ. ಆಗಿನ ಕಾಲದಲ್ಲಿ – ನಾನು ಕಂಡಂತೆ – ಹೋಟೆಲ್ ಕೆಲಸಗಾರರೊಡನೆ ಮಾಲೀಕರು ಕಠಿಣವಾಗಿ ನಡೆದುಕೊಳ್ಳುತ್ತಿದ್ದರು. ಜೀತವೆಂದರೆ ಜೀತವೇ. ದಿನವಿಡೀ ಗೆಯ್ದು ದಣಿದು ರಾತ್ರಿ ತಡವಾಗಿ ನಿದ್ದೆಹೋಗುತ್ತಿದ್ದ ಅಪ್ಪಯ್ಯನನ್ನು ಮರುದಿನ ಬೆಳಿಗ್ಗೆ ಕಿವಿಯೊಳಗೆ ನೀರು ಸುರಿದು ಎಬ್ಬಿಸುತ್ತಿದ್ದರಂತೆ. ಒದೆ ತಿನ್ನುವುದು ಅಪ್ಪಯ್ಯನಿಗೆ ಆಗ ನಿತ್ಯಕರ್ಮವಾಗಿತ್ತಂತೆ. ಆಗ ಅಳುತ್ತಿದ್ದ ಅಪ್ಪಯ್ಯನ ಅಳುವನ್ನು ಕೇಳುವ ಕಿವಿಗಳೇ ಇರಲಿಲ್ಲವಂತೆ. ಕೆಲಸ ಬಿಡುವ ಸ್ವಾತಂತ್ರ್ಯವೂ ಅಪ್ಪಯ್ಯನಿಗೆ ಇರಲಿಲ್ಲವಂತೆ. ಅದಕ್ಕೇ ನನಗನಿಸಿದ್ದು, ಅದು ಸಾಲ ತೀರಿಸಲು ಮಾಡಿಕೊಂಡ ವ್ಯವಸ್ಥೆಯಿದ್ದಿರಬಹುದೆಂದು. ಗಿರಿಜ ದೊಡ್ಡಮ್ಮನಿಂದ ಸಾವಿರದೊಂಭೈನೂರ ಎಪ್ಪತ್ತಾರು-ಎಪ್ಪತ್ತೆಂಟರಲ್ಲಿ ಈ ವಿಷಯವನ್ನು ಕೇಳಿದ ನನಗೆ ಏಲಿಜ್ಹ್ ಬೆಥ್ ಸ್ಟೊವ್ ಅವರ, ನಾನು ಓದಿ ಮೆಚ್ಚಿದ್ದ.
‘ಅಂಕಲ್ ಟಾಮ್ಸ್ ಕ್ಯಾಬಿನ್‘ ಕಾದಂಬರಿ ಇನ್ನೂ ಪ್ರಿಯವಾಯಿತು. ಅದು ಅಮೆರಿಕದಲ್ಲಿ ಗುಲಾಮಗಿರಿ ಪದ್ಧತಿ ಇದ್ದ ಕಾಲದ ಕತೆಯನ್ನೊಳಗೊಂಡದ್ದು. ಮುಂದೆ ಅಪ್ಪಯ್ಯನಿಗೆ ಮದುವೆಯ ವಯಸ್ಸು ಬಂದಾಗ ಆ ―ಯಜಮಾನ‖ರೇ ಮುಂದಾಗಿ ಉಡುಪಿಯ ಬಳಿ ಪಡು ಅಲೆಊರಿನ ಪದ್ಮನಾಭ ಭಟ್ಟರ ಮೂರನೆಯ ಮಗಳಾದ ‘ಲೀಲಾವತಿ’ ಎಂಬ ಕನ್ಯೆಯೊಂದಿಗೆ ಅಪ್ಪಯ್ಯನ
ಮದುವೆಯನ್ನೂ ಮಾಡಿಸಿ (ಧಾರೆ ಎರೆಯಿಸಿಕೊಂಡ ಅಪ್ಪನಿಗೆ ಮಾತಾಪಿತೃಸ್ಥಾನದಲ್ಲಿ ನಿಂತು ನೋಡಿಕೊಂಡಿದ್ದು ಅಪ್ಪಯ್ಯನ ಚಿಕ್ಕಪ್ಪ, ಅಂದರೆ ಸೀನಪ್ಪ ಮತ್ತು ಗಿರಿಜ ದೊಡ್ಡಮ್ಮ.) ಆಕೆಯನ್ನೂ ಘಟ್ಟ ಹತ್ತಿಸಿದರು. ಹೀಗೆ ನನ್ನ ಅಮ್ಮನೂ ಸಹ ನೆಲ್ಲಿ ಅನಂತಯ್ಯನವರ ಮನೆ ಸೇರಿಕೊಂಡರು. ಅನಂತಯ್ಯನವರ ಮನೆಗೆ ಹೀಗೆ ಕೆಲಸಕ್ಕೆ ಒಂದು ಹೆಣ್ಣುಮಗಳೂ ಬಂದಹಾಗಾಯಿತು.
ಮುಂದೊಮ್ಮೆ – ಭಾರತ ಸ್ವತಂತ್ರವಾಗುವ ಮೊದಲೇ, ಹೇಗೆಂದು ಗೊತ್ತ್ತಿಲ್ಲ, ಅಪ್ಪಯ್ಯ ಸ್ವತಂತ್ರರಾಗುವ ಕಾಲ ಕೂಡಿಬಂತು. ಅಪ್ಪಯ್ಯ ಕೋಮಲ ವಿಲಾಸ್ ಹೋಟೆಲಿನ ಕೆಲಸದಿಂದ ಮುಕ್ತರಾದರು. ಅಪ್ಪಯ್ಯನ ಪ್ರಾಮಾಣಿಕತೆ ಹಾಗೂ ಸರಳ ಸಜ್ಜನಿಕೆಯನ್ನು ಕಂಡಿದ್ದ ನೆಲ್ಲಿ ಜನಾರ್ಧನಯ್ಯ – ಅಂದರೆ ಅನಂತಯ್ಯನವರ ತಮ್ಮ ಮತ್ತು ಶಿವಮೊಗ್ಗೆಯ ಇತರ ಕೆಲವು ಹೋಟೆಲ್ ವ್ಯಾಪಾರಿಗಳು ಅಪ್ಪಯ್ಯನನ್ನು ತಮ್ಮ ಹೋಟೆಲಿನಲ್ಲಿ ಗಲ್ಲಾಪೆಟ್ಟಿಗೆಯ ಮುಂದೆ ಕುಳಿತು ಗಿರಾಕಿಗಳಿಂದ ಹಣ ವಸೂಲು ಮಾಡುವ ಖಜಾಂಚಿಯಾಗಿ ಬರಲು ಆಹ್ವಾನಿಸಿದರಂತೆ. ಬೇರೆ ಯಾರಾದರೂ ಆಗಿದ್ದಿದ್ದರೆ ‘ಹೋ! ಗಲ್ಲಾ‘ ಎಂದು ಖುಷಿಪಡುತ್ತಿದ್ದರೋ ಏನೋ. ಆದರೆ ಅಪ್ಪಯ್ಯ, ಅಮ್ಮನಿಂದಾಗಿರಬೇಕು, ಮತ್ತೆ ನೌಕರಿ ಮಾಡಲು ಹೋಗಲ್ಲ’ ಎಂದು ತೀರ್ಮಾನಿಸಿ ಸ್ವಂತ ಹೋಟೆಲ್ ತೆರೆಯುವ ಮನಸ್ಸು ಮಾಡಿದರು. ಪರಿಣಾಮವಾಗಿ ಶಿವಮೊಗ್ಗೆಯ ಸುದರ್ಶನ ಟಾಕೀಸಿನ ಎದುರು ‘ಕಾಶ್ ಕೆಫೆ‘ ಎಂಬ ಉಡುಪಿ ಬ್ರಾಹ್ಮಣರ ಚಾ ಕಾಫಿ ಕ್ಲಬ್ ಆರಂಭವಾಯಿತು. ಹಾಗೆಯೇ ಥೇಟ್ರಿನ ಪಕ್ಕದಲ್ಲೇ ಇದ್ದ ಮನೆಗಳಲ್ಲೊಂದರಲ್ಲಿ ಅಪ್ಪಯ್ಯನ ಸ್ವತಂತ್ರ #ಸಂಸಾರ ನೆಲೆಗೊಂಡಿತು. ನನ್ನಲ್ಲಿ ನೆನಪೆಂಬುದು ಉಳಿಯತೊಡಗುವ ಹೊತ್ತಿಗೆ ಆ ಹೋಟೆಲಿನಲ್ಲಿ ಅಪ್ಪಯ್ಯನ ತಮ್ಮಂದಿರಿಬ್ಬರು,
ಅಮ್ಮನ ತಮ್ಮಂದಿರಾದ ರಾಮಮಾವ, ಗಣಪತಿಮಾವ – ಇವರೆಲ್ಲರೂ ಕೆಲಸದಲ್ಲಿ ಕೈಜೋಡಿಸುತ್ತಿದ್ದರು. ಅಪ್ಪಯ್ಯನ ತಮ್ಮಂದಿರಲ್ಲಿ ಸುಬ್ರಾಯ ಚಿಕ್ಕಪ್ಪ ಒಬ್ಬರು ಮಾತ್ರ ಆ ಕಾಲದಲ್ಲಿ ಮೆಟ್ರಿಕ್, ಅಂದರೆ ಪ್ರೌಢಶಾಲೆಯ ಅಂತಿಮ ತರಗತಿಯ ಪರೀಕ್ಷೆಯನ್ನು ಬರೆದವರು (ತೇರ್ಗಡೆಯಾಗಿದ್ದರೋ ಇಲ್ಲವೋ, ನನಗೆ ತಿಳಿದಿಲ್ಲ). ಚಿಕ್ಕವರು ಅಷ್ಟು ಓದಲಿಲ್ಲ. ಈ ಚಿಕ್ಕಪ್ಪಂದಿರ ಜೊತೆಯಲ್ಲಿ ಅಲೆವೂರಿನಲ್ಲಿ ಅಜ್ಜನ ಮನೆಯ ಮುಂಭಾಗದಲ್ಲಿ ಇದ್ದ ಶೇಷಿನಕ್ಷತ್ರಿ ಎಂಬಾಕೆಯ ಮಗ ಗೋಪಾಲ ಎಂಬ ಹುಡುಗನೂ ನಮ್ಮ ಮನೆಯಲ್ಲಿಯೆ ಇದ್ದ.
ಮೇಲಿನ ಘಟನೆಗಳು ನಾನು ಹುಟ್ಟುವುದಕ್ಕೆ ಮೊದಲು ನಡೆದವು. ಅವು ಮುಂದೆಂದೋ ಗಿರಿಜಾ ದೊಡ್ಡಮ್ಮ, ಅಂದರೆ ಅಪ್ಪನ ಚಿಕ್ಕಮ್ಮನಿಂದ ಮತ್ತು ನನ್ನ ಅಮ್ಮನಿಂದ ನನ್ನ ನೆನಪಿನ ಭಂಡಾರಕ್ಕೆ ಬಳುವಳಿಯಾಗಿ ಸೇರಿದವು. ಗಿರಿಜಾ ದೊಡ್ಡಮ್ಮನ ಬಗ್ಗೆ ನಾನಿಲ್ಲಿ ಹೇಳಲೇ ಬೇಕು. ಅಪ್ಪಯ್ಯನ ಅಮ್ಮನನ್ನು ತೀರಾ ಎಳೆತನದಲ್ಲಿ ನೋಡಿದ್ದ ಮಸುಕುಮಸುಕು ನೆನಪು, ಅಷ್ಟೇ ಹೊರತು ಅವರ ಮುಖಚಹರೆ ಹೇಗಿತ್ತೆಂಬುದು ಗೊತ್ತಿಲ್ಲ. ಅವರ ಸ್ಥಾನವನ್ನು ತುಂಬಿದ ಗಿರಿಜಾ ದೊಡ್ಡಮ್ಮ ನನಗೆ ಅಮ್ಮನ ನಂತರದ ಪ್ರೀತಿಯ ಗಂಗೋತ್ರಿ. ಇದಕ್ಕಿಂತಲೂ ಹೆಚ್ಚಿನ ವಿವರಣೆ ನೀಡಲು ಹೋದರೆ
‘ಶಬ್ದಭೇದಿ’ಯಾದೀತೆಂಬುದು ನನ್ನ ಆತಂಕ.
ಮುಂದೊರೆಯುತ್ತದೆ…
- ಹರಿಕೃಷ್ಣ ಹರಿ (ಖ್ಯಾತ ಕಲಾವಿದರು, ಬರಹಗಾರರು)
