ಖ್ಯಾತ ರಂಗಭೂಮಿ ಕಲಾವಿದರಾದ ಹರಿಕೃಷ್ಣಹರಿಯವರ ಅನುಭವ ಕಥನ ಸದ್ಯದಲ್ಲಿ ಆಕೃತಿಕನ್ನಡದಲ್ಲಿ ಬರಲಿದೆ…ಈಗ ಲೇಖಕರ ಅನಿಸಿಕೆ ಮಾತುಗಳು ಓದುಗರ ಮುಂದೆ…
ಪ್ರಸಿದ್ಧ ವ್ಯಕ್ತಿಗಳಲ್ಲಿ ಬಹಳಷ್ಟು ಮಂದಿ ತಮ್ಮತಮ್ಮ ಬದುಕಿನ ಬಗ್ಗೆ ಬರೆಯುತ್ತಾರೆ. ಕೆಲವರು ತಾವು ಮಾಡಿದ ಸಾಧನೆಗಳು ಮುಂದಿನ ಪೀಳಿಗೆಗೆ ತಿಳಿಯಲಿ ಎಂದು ಬರೆಯುತ್ತಾರೆ. ಇನ್ನು ಕೆಲವರು ಕೆಲವು ಸಾಧನೆಗಳು ಉಳಿದವರಿಗೆ ತಿಳಿಯದಿರಲಿ ಎಂದು ಮುಚ್ಚಿಡಲು ಬರೆಯುತ್ತಾರೆ. ತೀರಾ ಅಪರೂಪದವರು ತಮ್ಮ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾ ಮನದೊಳಗಣ ಮಾತುಗಳನ್ನು ಬರಹದ ರೂಪಕ್ಕೆ ತರುತ್ತಾರೆ. ಆದರೆ ನಾನು ನನ್ನ ಬದುಕಿನ ಬಗ್ಗೆ ಬರೆಯುತ್ತಿರುವ ಉದ್ದೇಶ್ಯ ಇವು ಯಾವುವೂ ಅಲ್ಲ. ನಾನು ಪ್ರಸಿದ್ಧನೂ ಅಲ್ಲ, ಸಿದ್ಧನೂ ಅಲ್ಲ. ಇನ್ನೂ ಕಲಿಯುತ್ತಲೇ ಇರುವ ನನ್ನ ಬಗ್ಗೆ
ತಿಳಿದು ಮುಂದಿನ ಪೀಳಿಗೆ ನನ್ನಿಂದ ಏನಾದರೂ ಕಲಿಯುತ್ತಾರೆಂಬ ಭ್ರಮೆಯೂ ನನಗಿಲ್ಲ ಮತ್ತು ಜಗತ್ತಿನಲ್ಲಿ ಯಾರೂ ಮಾಡದ ತಪ್ಪುಗಳನ್ನು ನಾನು ಮಾಡಿದ್ದೇನೆಂಬ ಅಪರಾಧಿಪ್ರಜ್ಞೆಯೂ ಇಲ್ಲ. ಹಾಗೆಂದು ನನ್ನ ಬದುಕಿನ ಎಲ್ಲ ಪುಟಗಳನ್ನೂ ನಿಮ್ಮ ಮುಂದೆ ತೆರೆದಿಡುವಷ್ಟು ಪ್ರಾಮಾಣಿಕತೆಯಾಗಲಿ ಆಷ್ಟು ನೆನಪಾಗಲಿ ನನ್ನಲ್ಲಿಲ್ಲ. ನೆನಪಿನಲ್ಲಿದ್ದಷ್ಟು, ಎಷ್ಟು ಬೇಕೋ ಅಷ್ಟು, ಓದುಗರೊಂದಿಗೆ ಎಷ್ಟು ಹಂಚಿಕೊಳ್ಳಬಹುದೋ ಅಷ್ಟು ಮಾತ್ರ ಇಲ್ಲಿ ದಾಖಲಿಸಿದ್ದೇನೆ. ಇತರರು ಇದನ್ನು ಓದಲಿ ಎನ್ನುವುದರ ಜೊತೆಯಲ್ಲೇ ನನಗೇ ಇದು ಮೆಲುಕು ಹಾಕಲು ಇರಲಿ ಎಂಬೊಂದು
ನಿರಪಾಯಕರ ಲಾಲಸೆ ಈ ಕಾರ್ಯವನ್ನು ನನ್ನಿಂದ ಮಾಡಿಸಿದೆ. ಏಕೆಂದರೆ ಒಂದು ಸಂವತ್ಸರಚಕ್ರವನ್ನು ಪರಿಕ್ರಮಿಸಿ ಮೂರನೆಯ ಮೈಲಿಗಲ್ಲಿನತ್ತ ಸಾಗುತ್ತಿರುವ ನಾನು ನಡೆದ ದಾರಿ ಹೇಗಿತ್ತೆಂದು ಹಿಂತಿರುಗಿ ನೋಡುವ ಕುತೂಹಲ ಎಲ್ಲರನ್ನೂ ಕಾಡುವಂತೆ ನನ್ನನ್ನೂ ಕಾಡಿದೆ.
ನನ್ನ ಬದುಕಿನಲ್ಲಿ ಅಪ್ಪಯ್ಯನಿಗೆ, ಅಮ್ಮನಿಗೆ ಹಾಗೂ ನನಗೆ ಅನ್ಯಾಯ ಮಾಡಿದ ಸಾಕಷ್ಟು ಜನರ ದೊಡ್ಡ ಪಟ್ಟಿಯೇ ನನ್ನ ನೆನಪಿನ ಪುಟದಲ್ಲಿದೆ. ಅಂಥವರಲ್ಲಿ ಕೆಲವರು ಒಂದು ಕಾಲಘಟ್ಟದಲ್ಲಿ ಸ್ವಭಾವ ಪರಿವರ್ತನೆಗೊಂಡು ಸಜ್ಜನರಾದದ್ದೂ ಇದೆ. ಅಂಥವರ ಬಗ್ಗೆ ನಾನೇನೂ ಬರೆಯಲಾರೆ. ಉಳಿದವರಲ್ಲಿ ತಿದ್ದಿಕೊಳ್ಳಲಾಗದೆ ಹಾಗೆಯೇ ಉಳಿದು ಅಳಿದ ಕೆಲವರ ಪ್ರತಾಪದ ಬಗ್ಗೆ ಅಗತ್ಯವಿದ್ದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಅನಿವಾರ್ಯವಿದ್ದೆಡೆ ಮಾತ್ರ ಅಂಥವರ ಹೆಸರು ಬರೆದಿದ್ದೇನೆ.
ಈ ಲೇಖನದ ಹೆಸರು ಹರಿದಾರಿ ಏಕೆ? ಎಂಬ ಪ್ರಶ್ನೆ ಬರುವುದು ಸಹಜ. ಒಂದು ಅರ್ಥದಲ್ಲಿ ಇದು ನನ್ನ ದಾರಿ, ಇಡೀ ಲೇಖನ ನನ್ನ ಬದುಕಿನಲ್ಲಿ ನಡೆದ ಘಟನೆಗಳ ದಾಖಲೆಯಾದ್ದರಿಂದ. ಇನ್ನು ಹರಿದಾರಿ ಎಂದರೆ ಮೂರು ಮೈಲುಗಳ ಒಂದು ಉದ್ದಳತೆ. ಇಡೀ ಪುಸ್ತಕ ಮೂರು ಭಾಗಗಳನ್ನಾಗಿ ಮಾಡಿದ್ದೇನೆ. ಒಂದೊಂದು ಭಾಗದ ಕೊನೆಯೂ ಒಂದೊಂದು ಮೈಲಿಗಲ್ಲು. ಅದರಲ್ಲಿ ಮೂರನೆಯ ಮೈಲಿಗಲ್ಲು ಇನ್ನೂ ತಲುಪಿಲ್ಲವಾದ್ದರಿಂದ ಎಲ್ಲಿಯವರೆಗೆ ನಡೆದು ಬಂದೆನೋ ಅಲ್ಲಿಂದ ಹಿಂದಕ್ಕೆ ನೋಡಿದ್ದೇನಷ್ಟೇ. ಮುಂದಿನದನ್ನು ಬರೆಯುವುದು ನನ್ನ ಕೈಯಲ್ಲಿಲ್ಲವಲ್ಲ.
- ಹರಿಕೃಷ್ಣ ಹರಿ (ಲೇಖಕರು, ರಂಗಭೂಮಿ ಕಲಾವಿದರು)
