2009 ರಲ್ಲಿ ಡಾ.ಯುವರಾಜ ಹೆಗಡೆ ಅವರು ಆಲ್ಸೇಷಿಯನ್ ನಾಯಿಗೆ ಚಿಕಿತ್ಸೆ ನೀಡುವಾಗ, ಅದು ಅವರ ಮೈ ಮೇಲೆ ಎರಗಿ ಘಾಸಿ ಮಾಡಿತು. ಅದರ ಕಹಿನೆನಪು , ಗಾಯಕ್ಕೆ ಹಾಕಿದ ಹೊಲಿಗೆ ಪ್ರತಿ ನಾಯಿಗೆ ಚಿಕಿತ್ಸೆ ನೀಡುವಾಗ ನೆನಪಾಗುತ್ತದೆ ಮತ್ತು ಎಂದಿಗೂ ಮರೆಯದ ಪಾಠವಾಗಿ ಉಳಿಯಿತು. ಅವರ ಅನುಭವದ ಕತೆ ಮುಂದೆ ಓದಿ…
ಮಾನವನು ಪ್ರಾಣಿಗಳನ್ನು ಸಾಕುವುದು ಹಾಲು- ಮಾಂಸ, ಉಣ್ಣೆಗಾಗಿ , ವ್ಯವಸಾಯ , ಜಮೀನಿನ ಸಾವಯವಕ್ಕಾಗಿ, ಸಾಗಾಣಿಕೆ, ರಕ್ಷಣೆಯನ್ನು ಬಯಸಿ, ಜೂಜುಗಾಗಿ, ಪೂಜೆ ಪುನಸ್ಕಾರಗಳಿಗಾಗಿ, ಮುದ್ದಿಗಾಗಿ ಹೀಗೆ ನಾನಾ ಕಾರಣಗಳಿದ್ದರೂ ಅವುಗಳ ಸಾಕಾಣಿಕೆಯಲ್ಲಿ ನಮ್ಮ ಅವಶ್ಯಕತೆ ಹಾಗೂ ಒಂದಿಲ್ಲೊಂದು ಸ್ವಾರ್ಥ ಅಡಗಿರುತ್ತದೆ ಎಂಬುದರಲ್ಲಿ ಎರಡು ಮಾತಿರುವುದಿಲ್ಲ. ಆದರೆ ಅವುಗಳಿಗೆ ನೀಡುವ ಚಿಕಿತ್ಸೆ, ಅವುಗಳ ಒಳಿತು ಮತ್ತು ಮಾನವೀಯತೆಯ ದೃಷ್ಟಿಯಿಂದ ಕೂಡಿರುತ್ತದೆ. ನಾಳೆಯೇ ಕತ್ತರಿಸಲು ನಿಗದಿಗೊಳಿಸಿದ ಕೋಳಿ, ಕುರಿಗಳಿಗೂ ಅವಶ್ಯವಾದಾಗ ದೊರಕುವುದು ಅದೇ ಮಾನವೀಯತೆಯಿಂದ ಕೂಡಿದ ಚಿಕಿತ್ಸೆ. ಆದರೆ ಚಿಕಿತ್ಸೆಯ ವೇಳೆ ನಾವು ನೀಡುವ ಅಲ್ಪಾವಧಿಯ ನೋವು ಅವುಗಳ ವಿವೇಚನಾ ಪರಿಧಿಯನ್ನು ದಾಟಿ ಕೆಲವೊಮ್ಮೆ ಪಶುವೈದ್ಯರ ಮೇಲೆ ದಾಳಿಮಾಡುವುದೂ ಇದೆ. ಏಕೆಂದರೆ ಅವುಗಳಿಗೆ ನೀಡುವ ಚಿಕಿತ್ಸೆಯ ಕುರಿತಾಗಿ ಒಳಿತು ಕೆಡುಕುಗಳ ಅರಿವಿರುವುದಿಲ್ಲ. ಇಂತಹ ದಾಳಿಗೊಳಗಾಗಿ ಹೆಚ್ಚಿನ ಸಾವು ನೊವು ಕಂಡವರು ಸಹಜವಾಗಿ ಪಶುವೈದ್ಯರೇ ಆಗಿರುತ್ತಾರೆ. ಹಲವರು ಶಾಶ್ವತ ಅಂಗವೈಫಲ್ಯ ಅನುಭವಿಸಿದ್ದರೆ, ಅನೇಕರು ದೀರ್ಘಕಾಲದ ಚಿಕಿತ್ಸೆಗೊಳಗಾಗಿ ಅಳಿವುಳಿವಿನ ಹಾವು ಏಣಿಯಾಟದಲ್ಲಿ ಜಯಿಸಿದವರೂ, ಶರಣಾದ ಪಶುವೈದ್ಯರೂ ಇದ್ದಾರೆ. ವನ್ಯ ಜೀವಿಗಳ ಚಿಕಿತ್ಸೆಯ ಜವಾಬ್ದಾರಿ ಹೊತ್ತಿರುವ ಪಶುವೈದ್ಯರಂತೂ ಅಪಾಯದ ಕರಿನೆರಳಿನಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

ಫೋಟೋ ಕೃಪೆ : vetstreet
ಇಂತಹದೇ ಒಂದು ಘಟನೆ ನನ್ನ ವೃತ್ತಿ ಜೀವನದಲ್ಲಿ ನಡೆದು ನಾನು ಪ್ರಾಣಾಪಾಯದಿಂದ ಪಾರಾದೆನಾದರೂ, ಅದು ನನಗೆ ಎಂದಿಗೂ ಮರೆಯಲಾಗದ ಕಹಿ ಘಟನೆಯಾಗಿ, ನಾನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ತಿಳಿಸಿಕೊಟ್ಟಿತು. ಅದು ಬಾಣಂಕಿ ಎಂಬ ಊರು, ಕೃಷಿಕರೊಬ್ಬರು ಸಾಕಿದ ಆಲ್ಸೇಷಿಯನ್ ಶ್ವಾನಕ್ಕೆ ವಿಪರೀತ ಸಿಟ್ಟು. ಆ ಜಾತಿಯ ನಾಯಿಗಳು ಸಹಜವಾಗಿ ಆಕ್ರಮಣಕಾರಿ ಸ್ವಭಾವದವೇ ಆಗಿರುತ್ತವೆ. ಶ್ವಾನಕ್ಕೆ ಆ ಪರಿಯ ಆಕ್ರಮಣಕಾರಿ ಸ್ವಭಾವ ಇದ್ದುದರಿಂದಲೇ ನೆರೆಹೊರೆಯವರ ಮೇಲೆ ದಾಳಿ ನಡೆಸೀತೆಂದು ಮುಂಜಾಗೃತೆಯಾಗಿ ವಾಡಿಕೆಯಂತೆ ವರ್ಷಕ್ಕೊಮ್ಮೆ ರೇಬೀಸ್ ಲಸಿಕೆ ನೀಡಲಾಗುತ್ತಿತ್ತು. ಆದರೆ ಆ ಶ್ವಾನಕ್ಕೆ ಚುಚ್ಚುಮದ್ದು ನೀಡುವುದು ಹರಸಾಹಸದ , ಸವಾಲಿನ ಕೆಲಸವಾಗಿತ್ತು. ಅದಕ್ಕೆ ಕುತ್ತಿಗೆಗೆ ಸುತ್ತುವರೆದಂತೆ ಒಂದು ಬೆಲ್ಟ್, ಬೆಲ್ಟಿನ ಹಿಡಿಕೆಗೆ ಬಲವಾದ ಚೈನನ್ನು ಹಾಕಲಾಗಿತ್ತು . ನಾಯಿಯ ಆರ್ಭಟ ಜೋರಾಗಿದ್ದ ಕಾರಣ ನಾಯಿಯ ಬಾಯನ್ನು ಅವರು ಕಟ್ಟುವ ಸ್ತಿತಿಯಲ್ಲಿ ಇರಲಿಲ್ಲ , ಕಟ್ಟಲು ಅದು ಬಿಡುತ್ತಲೂ ಇರಲಿಲ್ಲ . ಮಾಲೀಕರು ನಾಯಿಯನ್ನು ಗೇಟಿನ ಹೊರಗಿಟ್ಟು, ಅವರು ಕಾಂಪೌಂಡಿನ ಒಳಭಾಗದಲ್ಲಿ ನಿಂತು ಚೈನನ್ನು ಗೇಟಿಗೆ ಹಾಕಿ ಎಳೆದು ಹಿಡಿಯುವುದು ಹಾಗೂ ನಾನು ಹಿಂಬದಿಯಿಂದ ರೇಬೀಸ್ ಲಸಿಕೆ ನೀಡುವ ಅವರ ನಿರ್ಧಾರಕ್ಕೆ ಸಮ್ಮತಿಸಿದೆ . ನಾನು ಚುಚ್ಚುಮದ್ದು ನೀಡಲು ಹತ್ತಿರ ಬರುತ್ತಲೇ, ಸಹಜವಾಗಿ ನನ್ನನ್ನು ವಿರೋಧಿಸುವ ನಾಯಿ ಚೈನನ್ನು ಎಳೆದಾಡಲಾರಂಭಿಸಿತು. ಮಾಲೀಕರು ಶ್ವಾನವನ್ನು ಮತ್ತಷ್ಟು ನಿಯಂತ್ರಿಸುವ ಸಲುವಾಗಿ ಆಚೆಯಿಂದ ಎಳೆಯುತ್ತಿದ್ದಂತೆ, ಅದರ ಕೂದಲು ನುಣುಪಾಗಿದ್ದ ಕಾರಣ ಕುತ್ತಿಗೆಯ ಬೆಲ್ಟ್ ತಲೆಯಿಂದ ಜಾರಿ ಹೊರಬಂದಿತು.

ಫೋಟೋ ಕೃಪೆ : shepherdsense
ನಾಯಿ ಮಾಲೀಕರ ಹಿಡಿತ ತಪ್ಪಿ ನನ್ನ ಮೇಲೆ ದಾಳಿ ಇಡಲಾರಂಭಿಸಿತಲ್ಲದೆ, ನನ್ನ ಕುತ್ತಿಗೆಗೆ ಬಾಯಿ ಹಾಕುವ ಪ್ರಯತ್ನ ನಡೆಸಿತ್ತು. ಅದನ್ನು ಕಂಡ ಶ್ವಾನದ ಮಾಲೀಕರಿಗೆ ಅಘಾತವಾದಂತಾಗಿ ಕ್ಷಣ ಕಾಲ ಏನೂ ತೋಚದೆ ನಿಂತುಬಿಟ್ಟರು. ನಾನು ಸ್ವಲ್ಪ ಎತ್ತರದ ಮನುಷ್ಯ (5.9 ಅಡಿ) ಹಾಗಾಗಿ ಅದರ ಬಾಯಿ ನನ್ನ ಕುತ್ತಿಗೆಯ ಬಳಿ ತರಲು ಸಾಧ್ಯವಾಗಲಿಲ್ಲ. ಅದರ ಎರಡನೆಯ ದಾಳಿಯ ಪ್ರಯತ್ನದಲ್ಲಿ ಕುತ್ತಿಗೆಯ ಬಳಿ ತಲುಪಲು ಬಲವಾಗಿ ಮೇಲಕ್ಕೆ ಚಿಮ್ಮಿ ಹಾರಿದಾಗ ನನ್ನ ಎಡಗೈ ತೋಳನ್ನು ಅಡ್ಡ ಹಿಡಿದೆ. ಆಗ ಅದರ ಬಾಯಿಯ ಹಲ್ಲುಗಳು ನಾಟಿದ ಗುರುತು, ಹಲ್ಲುಗಳನ್ನು ಎಣಿಸಲು ಸಾದ್ಯವಾಗುವಷ್ಟು ಆಳವಾಗಿ ಮೂಡಲ್ಪಟ್ಟವು . ನೋಡುತ್ತಿದ್ದಂತೆ ಮೂರನೆಯ ದಾಳಿಯಲ್ಲಿ ನನ್ನ ಬಲಗಾಲ ತೊಡೆಯ ಮಾಂಸದ ತುಂಡು ಅದರ ಬಾಯಿಯಲ್ಲಿರುವುದು ಕಂಡು ಬಂದಿತು . ಮೈಮೇಲಿನ ಬಟ್ಟೆಗಳು ಚಿಂದಿಯಾಗಿ ರಕ್ತ ಹರಿಯಲಾರಂಬಿಸಿತು. ನಾಲ್ಕನೆಯ ದಾಳಿಯ ವೇಳೆಗಾಗಲೇ ನಾನು ನಿಶ್ಚಯಿಸಿ ಬಿಟ್ಟಿದ್ದೆ . ಸ್ನಾತಕೊತ್ತರ ಪದವಿಯ ವೇಳೆಯಲ್ಲಿ ಸಂಶೋಧನೆ ನಡೆಸುವಾಗ ಸಾಕಷ್ಟು ಶ್ವಾನಗಳನ್ನು ನಿಯಂತ್ರಿಸಿದ್ದ ಅನುಭವದಿಂದ ಮತ್ತೆ ಮೇಲೆರಗಿ ಬಂದ ಶ್ವಾನದ ಎರಡೂ ಮುಂಗಾಲುಗಳನ್ನು ಹಿಡಿದು ಪಕ್ಕದಲ್ಲಿದ್ದ ತುಸು ಆಳವಾಗಿದ್ದ ಖಾಲಿ ಗೊಬ್ಬರದ ಗುಂಡಿಗೆ ಎಸೆದವನೇ ಸುರಕ್ಷಿತ ಜಾಗಕ್ಕೆ ತೆರಳಿದೆ. ಅಷ್ಟರಲ್ಲಿ ಶಾಕ್ ನಿಂದ ಹೊರಬಂದ ಮಾಲೀಕರೂ ಓಡಿ ಬಂದರು . ಇಷ್ಟೆಲ್ಲಾ ನಡೆದದ್ದು ಕೇವಲ 3-4 ನಿಮಿಷಗಳ ಅಂತರದಲ್ಲಿ.

ಫೋಟೋ ಕೃಪೆ : BBC (ಸಾಂದರ್ಭಿಕ ಚಿತ್ರ)
ಶ್ವಾನದ ಮಾಲೀಕರ ಮನೆಯ ನಾಡ ಬಂದೂಕು ಸದ್ದು ಮಾಡುವುದರಲ್ಲಿತ್ತು, ಆದರೆ ಹಾಗಾಗದಂತೆ ತಡೆದೆ. ಈ ಘಟನೆಯೊಂದಿಗೆ ನಾನು ಎಂದಿಗೂ ಮರೆಯದ ಪಾಠವೊಂದನ್ನು ಕಲಿತಿದ್ದೆ. ಅಂದಿನಿಂದ ಅಪಾಯಕಾರಿ ಜಾತಿಯ ಶ್ವಾನಗಳನ್ನು ಚಿಕಿತ್ಸೆ ಮಾಡುವಾಗ ಕುತ್ತಿಗೆಗೆ ಎರಡು ಚೈನುಗಳನ್ನು ಅಗತ್ಯವಾಗಿ ಅಳವಡಿಸಲು ಮಾಲೀಕರಲ್ಲಿ ತಿಳಿಸುತ್ತೇನೆ. ಆಕಸ್ಮಿಕವಾಗಿ ಒಂದು ಚೈನ್ ತುಂಡಾದರೂ ಮತ್ತೊಂದು ಅದನ್ನು ನಿಯಂತ್ರಣದಲ್ಲಿಡಲು ಸಹಾಯಕಾರಿಯಾಗುತ್ತದೆ. ಚಿಕಿತ್ಸೆಯ ಸಂದರ್ಭದಲ್ಲಿ ಕುತ್ತಿಗೆಗೆ ಸುತ್ತುವರೆಸಿದ ಬೆಲ್ಟ್ ಗೆ ಚೈನ್ ಹಾಕಿ ಶ್ವಾನಗಳನ್ನು ನಿಯಂತ್ರಿಸುವುದು ಅಪಾಯ ಅಂಬುದನ್ನು ಅರಿತೆ.
ಅಂದು ಪಶುಚಿಕಿತ್ಸಾಲಯಕ್ಕೆ ವಾಪಾಸಾಗಿ ಗಾಯಗಳನ್ನು ಸ್ವಚ್ಛಗೊಳಿಸಿಕೊಂಡು ಹರಿದ ಬಟ್ಟೆಯಲ್ಲಿಯೇ ಮನೆ ಸೇರಿದೆ. ನಂತರ ಮೇಳಿಗೆಯ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆ ಪಡೆದು ಮೂರು ದಿನಗಳ ವಿಶ್ರಾಂತಿ ಪಡೆಯುವಂತಾಯಿತು. ಗಾಯಗಳೇನೋ ವಾಸಿಯಾಯಿತು. ಆದರೆ ಗಾಯದ ಕಲೆಗಳು ಮಾತ್ರ ಅಂದಿನ ದುರ್ಘಟನೆಯನ್ನು ನೆನೆಸುತ್ತಾ , ಚಿಕಿತ್ಸೆಯ ವೇಳೆ ಶ್ವಾನಗಳನ್ನು ಹೇಗೆ ನಿಯಂತ್ರಿಸಬೇಕೆಂಬ ಸಂದೇಶವನ್ನು ನನಗೆ ಒತ್ತಿ ಹೇಳುತ್ತಲೇ ಇರುತ್ತವೆ. ಇದು ವೃತ್ತಿ ಜೀವನ ತಿಳಿಸಿ ಕೊಟ್ಟ , ಕಲಿಸಿದ ಎಚ್ಚರಿಕೆಯ ಪಾಠ ಎನ್ನಬಹುದು.
ಡಾ.ಯುವರಾಜ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ
