ಶೀರ್ಷಿಕೆಯಿಂದಲೇ ಕುತೂಹಲಗೊಂಡು ಓದಲೇಬೇಕೆಂದುಕೊಂಡ “ಹಾವು ಹಚ್ಚೆಯ ನೀಲಿ ಹುಡುಗಿ” ಕೃತಿ ಕೈಗೆತ್ತಿಕೊಂಡ ನನಗೆ, ನೀಲಿ ಬಣ್ಣದ ಮುಖಪುಟದಿಂದಲ್ಲೇ, ಆಕರ್ಷಿಸಿ ಬಿಟ್ಟಿತು ಎನ್ನುತ್ತಾರೆ ಲೇಖಕ ಹೇಮಂತ್ ಪಾರೇರಾ ಅವರು. ಕಾದಂಬರಿಕಾರ ರಾಜೇಶ್ ಶೆಟ್ಟಿ ಅವರ ‘ಹಾವು ಹಚ್ಚೆಯ ನೀಲಿ ಹುಡುಗಿ’ ಯ ಕುರಿತು ಲೇಖಕ ಹೇಮಂತ್ ಪಾರೇರಾ ಅವರು ಬರೆದ ಪರಿಚಯ ಲೇಖನ ತಪ್ಪದೆ ಓದಿ…
ಪುಸ್ತಕ : ಹಾವು ಹಚ್ಚೆಯ ನೀಲಿ ಹುಡುಗಿ
ಪ್ರಕಾರ : ಕಾದಂಬರಿ
ಲೇಖಕರು : ರಾಜೇಶ್ ಶೆಟ್ಟಿ
ಪ್ರಕಾಶನ : ಸ್ವಪ್ನ ಬುಕ್ ಹೌಸ್
ಕಾದಂಬರಿಯ ಕಥಾನಾಯಕ ಅಮರ್ ಎಂದು ಅನಿಸಿದರೂ, ಹೆಚ್ಚಾಗಿ ಕಾಡಿದ್ದು ಬಾಲ್ಟಿಮೋರ್ ಎಂಬ ಪಾತ್ರ ಹಾಗೂ ನನಗೆ ಕಾದಂಬರಿಯಲ್ಲಿ ತುಂಬಾ ಇಷ್ಟವಾದ ಪಾತ್ರವೂ ಕೂಡ ಹೌದು. ಗುಲ್ ಮೊಹರ್ ಮರದ ಕೆಳಗೆ ಮದರಂಗಿ ಹುಡುಗಿ ,ಎಂಥಾ ಪರಿಕಲ್ಪನೆಯ ಸಾಲುಗಳಿವು. ಪ್ರೀತಿಯ ಪರಿಭಾಷೆಯಲ್ಲಿ ಪ್ರಣಯವಿಲ್ಲದೆ ಉತ್ತುಂಗಕೇರಿಸಿದ ಪರಿಶುದ್ಧ ಅಮಲಿನೊಳಗೆ ಕಳೆದು ಹೋದ ಪ್ರೇಮ ಬರಹವಿದು ಏನ್ನಿಸಿಬಿಡುತದೆ.
ಅಸ್ಸಾಮಿ ಹುಡುಗನ ಪ್ರೇಮ ಪ್ರಸಂಗ ಪ್ರಾರಂಭದಿಂದ, ಕೊನೆಯವರೆಗೂ, ಪ್ರೀತಿಯೇಡೆಗಿನ ಆತನ ಕನಸುಗಳನ್ನು ಪ್ರೀತಿಯ ಆದರಗಳನ್ನು ಲೇಖಕರು ತುಂಬಾ ರಸವತ್ತಾಗಿ ವರ್ಣಿಸಿದ್ದಾರೆ. ಪ್ರೀತಿಸಿದ ಹುಡುಗಿಯ ಚಿತ್ತಾರವನ್ನೇ ತನ್ನ ಹೃದಯದ ಗರ್ಭಗುಡಿಯಲ್ಲಿಟ್ಟು ಆ ಅಸ್ಸಾಮಿ ಹುಡುಗನು ಪ್ರೀತಿಸಿದ ರೀತಿ ಸೋಜಿಗವನಿಸಿತು. ಪ್ರೀತಿಯ ಪರಿಭಾಷೆಗಳಲ್ಲಿ, ಅದೆಷ್ಟೋ ಕೃತಿಗಳಲ್ಲಿ ಪ್ರೇಮಪತ್ರದ ಬಗ್ಗೆ ಉಲ್ಲೇಖಗಳಿವೆ. ಮೈಮೇಲೆಲ್ಲಾ ಪರಿಚಿತವಲ್ಲದ ಚಿತ್ತಾರದ ಅಕ್ಷರಗಳನ್ನು ಹಚ್ಚಿಕೊಂಡ, ಹುಡುಗಿಗಾಗಿ ಬರೆಸಿಕೊಂಡ ಹಚ್ಚೆಯಿಂದ , ಅಸ್ಸಾಮಿ ಹುಡುಗನನ್ನು ಲೇಖಕರು “ಜೀವಂತ ಪ್ರೇಮಪತ್ರ” ಎಂದು ಉಲ್ಲೇಖಿಸಿದ್ದಾರೆ ಇದೊಂದು ಹೊಸದಾಗಿ ಪ್ರೇಮ ಲೋಕಕ್ಕೇ ಸೇರಿಕೊಂಡ ಪದ ಎನಿಸುತ್ತದೆ.
ಕೊನೆಗೆ ಹುಡುಗಿಯ ಬಳಿ ಹೋಗುವ ಅಸ್ಸಾಮಿ ಹುಡುಗನು, ಮುತ್ಸಂಜೆ ವೇಳೆಗೆ ಅವಳ ಮನೆಗೆ ಹೋದೆ, ಅವಳನ್ನು ನೋಡಿದೆ,ಅವಳ ಕಾಲ ಬುಡದಲೊಂದು ಗುಲಾಬಿ ಹೂ ಇಟ್ಟೆ, ಇಲ್ಲಿಗೆ ನನ್ನ ಕಣ್ಣೀರು ಮುಗಿಯಿತು.ಪ್ರೇಮ ಸಂಕೋಲೆಯಿಂದ ಹಗುರಾಗಿದ್ದೆನೆ ಎನ್ನುತ್ತಾನೆ. ಪ್ರೀತಿಯ ಪರಕಾಷ್ಟೆಯ ತುತ್ತ ತುದಿಗಳಲ್ಲಿ ಮಿಂದೇಳುವಂತ ಸಾಲುಗಳು ಓದುಗರನ್ನು ಸೆಳೆಯುತ್ತವೆ.
ಗೊಲ್ಲ ಕೃಷ್ಣನ ಇನ್ಸ್ಟಾಗ್ರಾಮ್ ಡಿಪಿಯನ್ನು ಹುಡುಕುವಾಗ ,”ಕೃಷ್ಣನ ಹೆಗಲ ಮೇಲೊಂದು ಕೈ ಇರುವುದು ಕಾಣಿಸಿದ್ದು ,ಮದರಂಗಿ ರಂಗು ಚೆಲ್ಲಿತ್ತು”ಇದೆಂತಹ ವಿನೂತನ ಶೈಲಿಯ ಮಧುರ ಆತ್ಮೀಯತೆಯ ಪ್ರೇಮ ಭಾಷೆ ಎನಿಸದಿರದು, ಬೇಲ್ ಪುರಿ ಕಿಟ್ಟಪ್ಪನನ್ನು,ಮಸಾಲ ಪೂರಿ ಮಾಡಿ ತಿಳಿ ಹಾಸ್ಯವನ್ನು ಅಲ್ಲಲ್ಲಿ ನಗು ತರುವಂತೆ ಮಾಡುತ್ತಿತ್ತು.
ಕಥೆಯೊಂದು ಪ್ರಾರಂಭವಾಗಿ, ಜೀವನದ ಜಂಜಾಟಗಳ ಮದ್ಯೆ, ಅದ್ಯಾವುದೋ ಅತಿಂದ್ರಿಯ ಲೋಕದೊಳಗೆ ಪ್ರವೇಶಿಸಿರುವುದು ಗೊತ್ತೇ ಆಗಲಿಲ್ಲ .ಮಾಯಾಜಗತ್ತಿನ ಒಳಗೆ ಓದುಗರನ್ನು ಕರೆದುಕೊಂಡು ಹೋದ ರೀತಿ ಮತ್ತು ಅಲ್ಲಿ ಬಳಸಿದ ಕೆಲವು ಪದಗಳು ಹೊಸದಾಗಿದೆ. ಇದೊಂದು ಪತ್ತೇದಾರಿ ಕಾದಂಬರಿಯೋ ಅಥವಾ ಪ್ರೇಮ ಕಥೆಯೋ ಕೆಲವೊಮ್ಮೆ ಅರ್ಥವಾಗಲಿಲ್ಲ.
“ಕಾಡ ಮದ್ಯೆ ಬೇಂಕಿಕುಂಡ”ಭಾಗದಲ್ಲಿ “ಹಾವಿನ ವಾಸನೆ” ಎಂಬ ಪದವಿದೆ .ಹಾವಿನ ಸುವಾಸನೆ ಎಂತಾ ಪದ ಪ್ರಯೋಗ “ಮದರಂಗಿ ಹುಡುಗಿಯ ನಿಗೂಡ ನಗು”ಭಾಗದಲ್ಲಿ “ಇಲಿಮರಿ ಹಾವಿನ ಬಾಲವನ್ನು ನುಂಗುತಿತ್ತು” ಎಂತಹ ಕಲ್ಪನೆ, “ಬೆಳ್ಳಿ ಉಂಗುರದ ಕಣ್ಣೀರು” ಭಾಗದಲ್ಲಿ “ಸರಿಯೋ ತಪ್ಪು ಎಂದು ಗೊತ್ತಾಗುವ ವೇಳೆಗೆ ಬಹುತೇಕರು ಕಣ್ಣೀರಿಗೆ ತುಂಬಾ ಹತ್ತಿರವಾಗಿ ಬಿಡುತ್ತಾರೆ.ಬೆಂಗಳೂರು ಬಟ್ಟೆ ಒಗೆದಂತೆ ಒಗೆದು ಬಿಡುತ್ತದೆ”. ಅತಿ ಸೂಕ್ಷ್ಮವಾದ ಸತ್ಯದ ಅರಿವನ್ನು ಮಾಡಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
‘ಹಾವು ಹಚ್ಚೆಯ ನೀಲಿ ಹುಡುಗಿ’ ಕಾದಂಬರಿಕಾರ ರಾಜೇಶ್ ಶೆಟ್ಟಿ
“ಗೊಲ್ಲ ಕೃಷ್ಣನ ಮಾಯೆ”ಭಾಗದಲ್ಲಿ “ನನಗೆ ಅವತ್ತು ಅವಳಲ್ಲಿ ನೀರಿನ ಪರಿಮಳ ಸಿಕ್ಕಿತು”ಹೂವಿನ ಪರಿಮಳ ಕೇಳಿದ್ದೆ ಆದರೆ ನೀರಿನ ಪರಿಮಳ ಎಲ್ಲಿಂದ ತಂದು ಕಥೆಯೊಳಗೆ ಸಿಕ್ಕಿಸಿದರೋ,ತಿಳಿಯದು.ಅತಿ ಸುಂದರವಾಗಿ ಹುಡುಗಿಯ ವರ್ಣನೆ ಮಾಡಿದ್ದಾರೆ.
ಶಿನ ಹೆಗ್ಡೆ ತಿರಿಕೊಂಡಗಿನ ಕಥಬಾಗ ಓದುಗರನ್ನು ತುಂಬಾ ಬಾವುಕವಾಗುವಂತೆ ಮಾಡುತ್ತದೆ. ಬಾಲ್ಟಿಮೋರ್ ಗೆ ಆಸರೆಯಾಗಿದ್ದ ಶೀನ ಹೆಗ್ಡೆ ಸಾವು ಪಾಪದ ಬಾಲ್ಟಿಮೋರ್ ಅನಾಥನಂತೆ ಕಾಣುತ್ತಾನೆ . “ಅಗ್ನಿ ತರ್ಪಣ” ಭಾಗದಲ್ಲಿ ಹುಡುಗಿಯ ಕೈ ಕಟ್ಟಿದ ಹಗ್ಗ ತಾನಾಗಿಯೇ ಬಿಚ್ಚಿಕೊಂಡಿತು, ಬಲ ಭುಜದಲ್ಲಿದ್ದ ಹಾವು ಮತ್ತು ಇಲಿ ಮರಿ ಹಚ್ಚೆ ಚಿತ್ರವು ಬೆಳಗುತ್ತಿತ್ತು. ಹಾವು ಹೆಡೆ ಬೀಚ್ಚಿದಂತೆ ಇಲಿ ಮರಿ ಕಿಲಕಿಲ ನಕ್ಕಂತೆ ಅವಳ ಕಾಲ್ ಗೆಜ್ಜೆ ಘಲ್ ಘಲ್ ಸದ್ದಾದಂತೆ, ಹಸಿರಿನ ಸದ್ದು ಕೇಳಿಸಿತು ನೀರಿನ ಪರಿಮಳ ಅವನನ್ನು ಸೇರಿಕೊಂಡಿತ್ತು. ನೀಲಿ ಚಿಟ್ಟಿಯೊಂದು ಬಂದು ಅವನನ್ನು ತಾಕಿ ಹೋಯಿತು, ಈ ಸಾಲುಗಳು ಬಹಳ ಇಷ್ಟವಾಯಿತು.
ಕೊನೆಗೂ ಕೃಷ್ಣನನ್ನು ತನ್ನೂರಿಗೆ ಕರೆತಂದನು ಮತ್ತು ಸಿನ ಹೆಗ್ಡೆಯವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಅಮರ್ ಸಮುದ್ರದೊಂದಿಗೆ ಪ್ರಾರಂಭವಾದ ಪಯಣವನ್ನು,ಮುಗಿಸಿ ಕೊನೆಗೆ ಸಮುದ್ರದ ಅದೇ ದಡದಲ್ಲಿ ಬಂದು ನಿಂತಿದ್ದನು.
ಹಾವು ಹಚ್ಚೆಯ ನೀಲಿ ಹುಡುಗಿ, ಇಂದ್ರಜಾಲದ ಮಾಯೆಯೊಳಗೆ ಕರೆದುಕೊಂಡು ಹೋಗಿ ತನ್ಮಯರಾಗುವಂತೆ ಮಾಡಿಬಿಡುತ್ತದೆ. ಕಳೆದ ದಿನ ಪೂರ್ತಿ ನೀಲಿ ಹುಡುಗಿ ಗುಂಗಲ್ಲೇ ಇದ್ದೆ.ಒಂದಷ್ಟು ದಿನ ಕಾಡೆ ಕಡ್ತಾಳೆ. ಅದ್ಬುತ ಮಾಯಾಜಾಲದ ಕಲಾಕೃತಿಯ ದರ್ಶನ ಮಾಡಿಸಿದ ರಾಜೇಶ್ ಶೆಟ್ಟಿ ಅವರಿಗೆ ಧನ್ಯವಾದಗಳು.
- ಹೇಮಂತ್ ಪಾರೇರಾ, ಯಡವನಾಡು