‘ವಿಸ್ಮಯ, ಎಂಥಾ ಸೊಗಸು ರಾತ್ರಿ ಹಗಲು’ …ಕವನದ ಸುಂದರ ಸಾಲುಗಳು ಓದುಗರ ಮುಂದಿಟ್ಟಿದ್ದಾರೆ ಕವಿಯತ್ರಿ ಗೀತಾ ಜಿ ಹೆಗಡೆ ಅವರು, ಪೂರ್ತಿ ಕವನವನ್ನು ತಪ್ಪದೆ ಮುಂದೆ ಓದಿ..
ಮುಸ್ಸಂಜೆಯು ಮಬ್ಬಾಗುತಿದೆ
ಕಣ್ಣಂಚಿನ ಕಡು ಕಪ್ಪು
ಮರೆ ಮಾಚಲಾಗದ ಕತ್ತಲೆಗೆ
ಮುದವಾಗಿ ಹಾಸಿದೆ ಸೆರಗು.
ಹಕ್ಕಿ ಗೂಡಲಿ ಕಾಯುತಿರುವ
ತರಾವರಿ ಪುಕ್ಕ ಮೂಡದ ಪುಟಿ ಮರಿಗಳಿಗೆ
ಅಮ್ಮನಾಗಮನದ ಸಂತಸದ ಸೂಚನೆ
ಕಿಚಿ ಕಿಚಿ ಕಲರವ ಮರಗಳ ಮಡಿಲು.
ದಿನಕರನ ಸಲುಗೆಗೆ ಓಲೈಸಿದೆ
ಬಂಗಾರದ ಮೈ ಬಣ್ಣ ಭೂ ರಮೆ
ಬೀಳ್ಕೊಡುವ ವೇಳೆ ಲಯಬದ್ದ ಗಾನ
ಮನೆ ಮನೆಗಳಲಿ ದೀಪದಾರತಿ ಎತ್ತಿ.
ಚಂದಿರನ ಮೊಗದಲ್ಲಿ ಇಂದಿರೆಯ ಚಾಂಚಲ್ಯ
ಬಗ್ಗಿ ನೋಡುವ ಲಲನೆಗದುವೆ ಸೌಂದರ್ಯ
ತುತ್ತಿಡುವ ಕೈಗಳಿಗೂ ಕಥೆಯಾಗುವವನೀಗ
ಹೊತ್ತಾರೆಯಿಂದರಿಯದ ದಣಿವಿಗೂ ತಂಪು.
ಲಕಲಕ ಹೊಳೆವ ಚಿತ್ರ ಚಿನ್ನಾರ ಮುಡಿಗೇರಿ
ಕತ್ತೆತ್ತಿ ಎತ್ತ ನೋಡಿದರತ್ತತ್ತ ಒಡ್ಡೋಲಗದ ಜಾತ್ರೆ
ಚಮು ಚುಮು ಚಳಿಯು ಬಿಡದೆ ಕಾಡಿದರೇನು
ಬಾನಂಗಳದ ತುಂಬ ಸುತ್ತಾಡಿದರೆ ಮನಕಾನಂದ.
ಬೀಗುವ ಬಾನು ಬಾಗದ ಮನಸಿಗದೆ ಏಣಿ
ಆಂತರ್ಯದ ಪುಟಗಳಿಗೆ ಹಿಡಿದಿಟ್ಟ ಭಾವಗಳ ಬಂಧಿ
ಅಚ್ಚೊತ್ತಿ ನಡೆವುದು ಚಿತ್ತದಲ್ಲೊಂದು ಬರಹ
ಎಂಥಾ ವಿಸ್ಮಯ ಎಂಥಾ ಸೊಗಸು ರಾತ್ರಿ ಹಗಲು!
ಕ್ಲಿಕ್: Abdul Rasheed Ahamed
- ಗೀತಾ ಜಿ ಹೆಗಡೆ