ಬರಿ ಮೂರೇ ಪದಾರ್ಥಗಳಿಂದ ತಯಾರಿಸಬಹುದಂತಹ ತುಂಬಾ ಸರಳ, ರುಚಿಕರ ಕೇಕ್ ಅಥವಾ ಸಿಹಿ ತಿಂಡಿ ಅಂತಲೂ ಹೇಳಬಹುದು, ಇದನ್ನು ನಳಪಾಕ ಪ್ರವೀಣೆ ಪರಿಮಳ ಶಂಕರ್ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ಮನೆಯಲ್ಲಿ ನೀವು ಮಾಡಿ ನೋಡಿ…
ರುಚಿಕರ ಅಡುಗೆ ಮಾಡಿ ಬಡಿಸಬೇಕು ಎನ್ನುವ ಮನಸ್ಥಿತಿ ಇರುವವರಿಗೆ ಎಲ್ಲದಿನವೂ ವಿಶೇಷವಾಗಿರಿಸಬೇಕು ಎನ್ನುವ ಆಸೆ. ಪರಿಮಳ ಶಂಕರ್ ಅವರು ಹಾಗೆಯೇ. ಹೊಸ ಹೊಸ ಅಡುಗೆ ಕಲಿಯಬೇಕು, ಅದನ್ನು ಮನೆಯವರಿಗೆ ಉಣ ಬಡಿಸಬೇಕು ಎನ್ನುವ ಹುಮ್ಮಸು ಯಾವಾಗಲೂ. ಅದಕ್ಕಾಗಿ ಯೂಟ್ಯೂಬ್ ಚಾನೆಲ್ ನಲ್ಲಿ ಹೊಸ ಹೊಸ ಅಡುಗೆ ಕಲಿಯುತ್ತಿರುತ್ತಾರೆ, ಇತ್ತೀಚಿಗೆ ‘ಅಡುಗೆ ಸಾಧನ’ ಚಾನೆಲ್ ನಲ್ಲಿ ಕೇಕ್ ಹೇಗೆ ಮಾಡುವುದು ಕಲಿತು, ಅದನ್ನು ಮಗನ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಕೊಟ್ಟಾಗ ಮನೆಯವರ ಮುಖದಲ್ಲಿ ಮೂಡಿದ ಸಂತೋಷದ ಮುಂದೆ ಬೇಕರಿ ಕೇಕ್ ಡಲ್ ಹೊಡೆಯಿತು.
ನಿಮಗೂ ಕಲಿಬೇಕು ಆಸಕ್ತಿ ಇದ್ದರೇ, ಮಾಡಿ ನೋಡಿ…
ಬೇಕಾಗುವ ಸಾಮಗ್ರಿಗಳು :
- ಹಾಲಿನ ಪುಡಿ – ಮೂರು ದೊಡ್ಡ ಕಪ್
- ಲಿಂಬೆ ಹಣ್ಣು – ಒಂದು
- ಸಕ್ಕರೆ – ೧ ಕಪ್ (ರುಚಿಗೆ ಬೇಕಾದಷ್ಟು)
ಮಾಡುವ ವಿಧಾನ :
ಸ್ಟೋವ್ ಮೇಲೆ ಒಂದು ಬಾಣಲೆಯನ್ನಿಟ್ಟು ಅದರಲ್ಲಿ ಹಾಲಿನ ಪುಡಿ ಹಾಕಿ ನಿಧಾನಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ ಹೋಗಿ, ಗಂಟು ಬೀಳದಂತೆ ನಿಧಾನವಾಗಿ ಸೌಟಿನಿಂದ ತಿರುವುತ್ತಾ ಇರಿ, ಒಂದು ಹದಕ್ಕೆ ಬಂದ ನಂತರ ಅದಕ್ಕೆ ಲಿಂಬೆಹಣ್ಣಿನ ರಸವನ್ನು ನಿಧಾನಕ್ಕೆ ಸೇರಿಸುತ್ತಾ ಹೋಗಿ, ಅನಂತರ ಸಕ್ಕರೆ ಸೇರಿಸಿ.ಇದರಿಂದ ಮಿಶ್ರಣ ಗಟ್ಟಿಯಾಗುವುದು.
ಒಮ್ಮೆ ಗಟ್ಟಿಯಾದ ಬಳಿಕ ಸ್ಟೋವ್ ನಿಂದ ಕೆಳಗೆ ಇಳಿಸಿ, ಆ ಮಿಶ್ರಣವನ್ನು ಕೇಕ್ ಪಾತ್ರೆಗೆ ವರ್ಗಾಯಿಸಿ, ತಣ್ಣಗೆ ಆದ ನಂತರ ಮೇಲೆ ಬಾದಾಮಿ, ಗೋಡಂಬಿ ಅಥವಾ ಇತರೆ ಡ್ರೈ ಫ್ರೂಟ್ಸ್ ಹಾಕಿ ಅಲಂಕರಿಸಿ.
- ಕೈ ರುಚಿ : ಪರಿಮಳ ಶಂಕರ್