ಫಕೀರಮ್ಮ ಬಿ ಚಿಟಗೇರಿ ಅವರ ‘ಹೆಪ್ಪುಗಟ್ಟಿದ ಕಣ್ಣೀರು’ ಕವನ ಸಂಕಲನದ ಕುರಿತು ಕವಿ ಹಾಗೂ ವಕೀಲರಾದ ನಾರಾಯಣಸ್ವಾಮಿ .(ನಾನಿ) ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ಅವರು ಹೆಣ್ಣಿನ ಅಂತರಂಗವ ಬಿಂಬಿಸುವ ಭಾವನಾತ್ಮಕ ಸಾಲುಗಳು ಹೆಪ್ಪುಗಟ್ಟಿದ ಕಣ್ಣೀರಾಗಿದ್ದು ಓದುಗರ ಮನಮುಟ್ಟುತ್ತದೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಹೆಪ್ಪುಗಟ್ಟಿದ ಕಣ್ಣೀರು
ಕವಿಯತ್ರಿ : ಫಕೀರಮ್ಮ ಬಿ ಚಿಟಗೇರಿ
ಪ್ರಕಾರ : ಕವನ ಸಂಕಲನ
ಕನ್ನಡ ಸಾಹಿತ್ಯದಲ್ಲಿ ಇತ್ತೀಚಿಗೆ ಬಹಳಷ್ಟು ಕವಿಯತ್ರಿಯರು ಬರವಣಿಗೆಯನ್ನ ಪ್ರವೃತ್ತಿಯಾಗಿಸಿಕೊಂಡು, ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಿತಿಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ. “ಹೆಪ್ಪುಗಟ್ಟಿದ ಕಣ್ಣೀರು” ಈ ಕವನ ಸಂಕಲನದಲ್ಲಿ ಸುಮಾರು ಅರವತ್ತಾರು ಕವಿತೆಗಳಿವೆ. ಬಹಳಷ್ಟು ಕವಿತೆಗಳು ಮಹಿಳೆಯ ಪರವಾದ ಚಿಂತನೆಗಳನ್ನ, ಹೆಣ್ಣಿನ ಒಡಲಾಳದ ನೋವುಗಳನ್ನ,ದೇವದಾಸಿಯರ ಅರ್ತನಾದವನ್ನು, ಅವರ ನೋವಿನ ಸಂಕಟಗಳ ಬಗ್ಗೆ ಕವಿತೆಗಳನ್ನು ಕಟ್ಟುತ್ತಾ ಸಾಗಿದ್ದಾರೆ.
ರಮಾ ಬಸು ಎಂಬ ಕಾವ್ಯನಾಮದಿಂದ ಮುಖಪುಟದಲ್ಲಿ ಪಡಿಚಿತರಾಗಿರುವ ಶ್ರೀಮತಿ ಫಕೀರಮ್ಮ ಬಿ ಚಿಟಗೇರಿ ರವರು ಹೆಪ್ಪುಗಟ್ಟಿದ ಕಣ್ಣೀರು ಎಂಬ ಕೃತಿಯನ್ನು ಬರೆದು ಲೋಕಾರ್ಪಣೆ ಮಾಡಿದರು. ಈ ಕೃತಿಯ ಗೌರವ ಪ್ರತಿಯನ್ನ ನನ್ನ ವಿಳಾಸಕ್ಕೆ ತಲುಪಿಸಿದರು. ಯಾರೇ ಬರಹಗಾರರು ಒಂದು ಕೃತಿಯನ್ನು ನನಗೆ ಕಳಿಸಿದಾಗ ಆ ಕೃತಿಯನ್ನು ಓದಿ ನನ್ನ ಜ್ಞಾನದ ಮಟ್ಟಿಗೆ, ಆ ಕೃತಿಯ ಬಗ್ಗೆ ನಾಲ್ಕು ಸಾಲು ಬರೆಯುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದೇನೆ.

ರಮಾ ಬಸು ರವರು ನನಗೆ ಮುಖದಲ್ಲಿ ಪರಿಚಿತರಾದವರು.ಅವರು ಸಾಹಿತ್ಯದ ಪ್ರೋತ್ಸಾಹಕರೂ ಕೂಡ, ಅವರನ್ನ ಬೆಂಗಳೂರಿನ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದ ನೆನಪು ನನಗಿದೆ. ಮುಖಪುಟದಲ್ಲಿ ಅವರ ಕವಿತೆಗಳನ್ನ ಓದುತ್ತಿದ್ದ ನನಗೆ, ಈಗ ಪುಸ್ತಕ ರೂಪದಲ್ಲಿ ಓದುವ ಭಾಗ್ಯವನ್ನು ನನಗೆ ಕಲ್ಪಿಸಿದ್ದಾರೆ.
“ಹೆಪ್ಪುಗಟ್ಟಿದ ಕಣ್ಣೀರು” ಕೃತಿಯು ಒಂದು ಕವನಸಂಕಲನವಾಗಿದ್ದು, ಈ ಕೃತಿಯನ್ನು ತನ್ನ ಅತ್ತೆಯವರಿಗೆ ಅರ್ಪಿಸಿರುವುದು ವಿಶೇಷವಾಗಿದೆ. ಕೃತಿಗೆ ಹಿರಿಯ ಲೇಖಕರಾದ ನೀ, ಶೈಲ ರವರು ಮುನ್ನುಡಿಯನ್ನು ಬರೆದಿದ್ದು, ಇವರ ಕವನಸಂಕಲನದ ಕವಿತೆಗಳು ಮನುಷ್ಯನ ಬದುಕಿನ ವಿವಿಧ ಅಯಾಮಗಳನ್ನ ಮೈದಡುವುತ್ತಾ, ಭಾವಗಳ ಅಳಕ್ಕಿಳಿದು ಓದುಗರಿಗೆ ಮುದವನ್ನು ನೀಡುತ್ತದೆ ಎಂದಿದ್ದಾರೆ. ಬೆನ್ನುಡಿಯನ್ನು ಬರೆದಿರುವ ಸಾವತ್ರಿ ಮುಜುಮದಾರ ಸಾಹಿತಿಗಳು ಕೊಪ್ಪಳ ಇವರು, ದೇಸಿ ಸಂಸ್ಕೃತಿಗೆ ಮಾರುಹೋದ ಇವರ ಕವಿತೆಗಳು ಜನಪದೀಯ ಸೊಗಡನ್ನ ನುಡಿ ಚಿತ್ರಿಸಿದ್ದಾರೆ ಎಂದಿದ್ದಾರೆ.
ಈ ಕೃತಿಗೆ ಅಬ್ದುಲ್ ಹೈ ತೋರಣಗಲ್, ಶಿಲ್ಪಾ ಮ್ಯಾಗೇರಿ ಶಿವಲೀಲಾ ಎಸ್ದನ್ನ ಶಿವಲೀಲಾ ಎಸ್ ಧನಾ ಮುಂತಾದವರು ಆಶಯ ನುಡಿ, ಶುಭನುಡಿಗಳನ್ನು ಬರೆದು ಕವನ ಸಂಕಲನದ ಮೆರುಗನ್ನ ಹೆಚ್ಚಿಸಿದ್ದಾರೆ. ಸಂಕಲನದಲ್ಲಿ ಈ ಕವನ ಸಂಕಲನವನ್ನ ಓದಲು ಕೈಗೆತ್ತಿಕೊಂಡಾಗ ನನ್ನ ಮನಸನ್ನು ಸೆಳೆದ ಒಂದಷ್ಟು ಕವಿತೆಗಳನ್ನು ಇಲ್ಲಿ ಪರಿಚಯಕ್ಕಾಗಿ ಕೊಡುತ್ತಿದ್ದೇನೆ.
“ನೇಗಿಲ ಯೋಗಿ ” ಕವಿತೆಯ ಶೀರ್ಷಿಕೆಯಲ್ಲಿ ಕವಯಿತ್ರಿ ಬರೆಯುತ್ತಾರೆ.
ತುತ್ತಿಗೊಮ್ಮೆ ಸ್ಮರಿಸೋಣ ಬನ್ನಿ ಸಕಲ ನಾಡ ರೈತ ಬಾಂಧವರನ್ನ…. ರೈತನು ಈ ದೇಶದ ಬೆನ್ನೆಲುಬು, ರೈತನಿಲ್ಲದೆ ಮಾನವನ ಬದುಕುವುದು ಅಸಾಧ್ಯ. ತನ್ನ ಮೈಯ ಬೆವರ ಸುರಿಸಿ ಅನ್ನದ ಧಾನ್ಯಗಳನ್ನ ಬೆಳೆದು ಕೊಟ್ಟಾಗ ಮಾತ್ರ ಅವನ್ನು ಸೇವಿಸಿ ಬದುಕಲು ಸಾಧ್ಯ. ಈ ದೇಶದ ರೈತ ಶ್ರೀಮಂತನಾಗಲೇ ಇಲ್ಲ. ಸಾಲ ಸೋಲ ಮಾಡಿ ಬೆಳೆಯನ್ನು ಭೂತಾಯಿಯ ಮಡಿಲಿಗೆ ಹಾಕಿ, ಭೂತಾಯಿಯನ್ನು ನಂಬಿ ಬದುಕುತ್ತಿದ್ದಾನೆ. ಈ ಭೂಮಿಯ ಮೇಲೆ ಮನುಷ್ಯ ಎಷ್ಟೇ ಹಣವನ್ನು ಗಳಿಸಿಕೊಂಡಿದ್ದರೂ ಕೂಡ, ಹಣವನ್ನು ತಿನ್ನಲು ಸಾಧ್ಯವಿಲ್ಲ, ಶ್ರೀಮಂತ ಕೂಡ ಅನ್ನವನ್ನೇ ತಿಂದು ಜೀವಿಸಬೇಕಾಗುತ್ತದೆ ಆದ್ದರಿಂದ ನಾವು ಊಟ ಮಾಡುವಾಗ ಪ್ರತಿ ತುತ್ತಿಗೂ ಕೂಡ ರೈತರನ್ನ ನೆನೆಯಬೇಕು ಎಂಬುದು ಕವಿತೆಯಾ ಆಶಯವಾಗಿದೆ.
ಜ್ಞಾನದ ದೀವಿಗೆ ಕವಿತೆಯಲ್ಲಿ ಹೇಳುತ್ತಾರೆ
ಎಲ್ಲರ ಮನೆ ಮನಗಳಲ್ಲಿ
ಅಕ್ಷರ ಬೀಜವ ಬಿತ್ತುವಲ್ಲಿ
ನೀವು ಸಹಿಸಿದಿರಿ ಅದೆಷ್ಟೋ ಅವಮಾನಗಳ…. ಈ ಕವಿತೆಯನ್ನ ಮಹಿಳೆಯರಿಗೆ ಶಿಕ್ಷಣವನ್ನು ಕಲಿಸಲು ಹೋರಾಡಿದ, ಸಮಾಜದಲ್ಲಿ ಅಕ್ಷರ ಕ್ರಾಂತಿಯನ್ನೇ ಮಾಡಿದಂತಹ ಅಕ್ಷರದವ್ವ ಜ್ಯೋತಿ ಬಾ ಪುಲೆ ಬಗ್ಗೆ ಬರೆಯುತ್ತಾರೆ.ಭಾರತ ದೇಶದಲ್ಲಿ ಶೋಷಿತರು, ಅಸ್ಪೃಶ್ಯರ ಬದುಕಿನಲ್ಲಿ ಅಕ್ಷರವೇ ಅಗೋಚರವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಅಕ್ಷರ ಕಾಂತಿಯನ್ನ ಆರಂಭಿಸಿದ್ದು ಅಕ್ಷರದವ್ವ, ಅವರು ಹೋರಾಟ ನಡೆಸಲು ಅವರು ಈ ಸಮಾಜದಲ್ಲಿ ಅದೆಷ್ಟೋ ಅವಮಾನ, ಅಪಮಾನ ಅನುಭವಿಸಿದ್ದರು. ಅದರಲ್ಲೂ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿದ್ದ ಹೆಣ್ಣು ಮಕ್ಕಳಿಗೆ ಅಕ್ಷರವನ್ನು ಕಲಿಸುವ ಪ್ರಯತ್ನ ಮತ್ತು ಕಾಯಕದಲ್ಲಿ ಅವರು ಪಟ್ಟ ಶ್ರಮವನ್ನಂತೂ ವರ್ಣಿಸಲಾಗದು ಅವರ ಫಲವಾಗಿಯೆ ಹೆಣ್ಣು ಅಕ್ಷರ ಕಲಿತರು. ಛಲವನ್ನು ಬಿಡದೆ ಸಮಾಜವನ್ನು ಎದುರಿಸಿ ಮೊದಲ ಶಿಕ್ಷಕಿಯಾದರೆಂದು ಬಹಳ ಸೊಗಸಾಗಿ ಅರ್ಥಪೂರ್ಣವಾಗಿ ಈ ಕವಿತೆಯಲ್ಲಿ ವಿವರಿಸಿದ್ದಾರೆ.

ತಾಯಿಗೆ ಮೊದಲ ಹೆರಿಗೆಯಂತೆ ಎಂಬ ಕವನದ ಶೀರ್ಷಿಕೆಯಲ್ಲಿ ಕವಿ ಅಥವಾ ಕವಿಯತ್ರಿ ತಮ್ಮ ಮೊದಲ ಸಂಕಲನವನ್ನು ಹೊರ ತರಲು ಕೊಡುವ ಪ್ರಯಾಸವನ್ನು ಬಹಳ ಸೊಗಸಾಗಿ ಸಾಲುಗಳನ್ನಾಗಿಸಿದ್ದಾರೆ.
ದಿನ ತುಂಬಿದಂತೆ
ತುಂಬು ಗರ್ಭಿಣಿಯ
ಗಾಂಭಿರ್ಯದ ಗತ್ತು
ನಡೆದಂತೆ ಕವಿತೆ .…. ಸಾಹಿತಿ ತಮ್ಮ ಪ್ರಥಮ ಕೃತಿಯನ್ನು ಹೊರತರಲು ಪ್ರಯತ್ನಿಸಿದಾಗ ಆಗುವ ಅನುಭವವನ್ನು ತಾಯಿಯ ಮೊದಲ ಹೆರಿಗೆ ಹೋಲಿಸುತ್ತಾರೆ ಕವಿಯತ್ರಿ. ಎಂದೋ ಮನದಲ್ಲಿ ಮೂಡಿದ್ದ ಕವಿತೆಯನ್ನ ಒಂದು ಕಡೆ ಬರೆದಿಟ್ಟುಕೊಂಡು, ಅದನ್ನು ಕಾಪಾಡಿಕೊಂಡು ಇನ್ನಷ್ಟು ಕವಿತೆಗಳು ಬರೆದಂತೆ ಅವುಗಳನ್ನು ಕೂಡಿಟ್ಟು, ಮುನ್ನುಡಿ ಬೆನ್ನುಡಿಗಾಗಿ ಕಾದು ಕುಳಿತು, ವ್ಯಾಕರಣ ದೋಷಗಳನ್ನು ತಿದ್ದಿ ತೀಡಿ, ಅದಕ್ಕೆ ಮುಖಪುಟ ಒಂದನ್ನ ರಚಿಸಿಕೊಂಡು ಕಷ್ಟ ನಷ್ಟಗಳಿಂದ ಹೊರಬಂದ ನಂತರ ಅದನ್ನು ಓದುಗರು ಸ್ವೀಕರಿಸುವ ರೀತಿಯನ್ನು ಕವಯಿತ್ರಿ ವಿವರಿಸುತ್ತಾರೆ.
“ದೇವದಾಸಿ” ಶೀರ್ಷಿಕೆಯ ಕವಿತೆಯಲ್ಲಿ
ಇಲ್ಲಿ ಮುಟ್ಟು ನಿಲ್ಲಿಸಿದವರ ಹೆಸರೇಳುವಂತಿಲ್ಲ
ಸತ್ಯ ಬಾಯ್ಬಿಟ್ಟರೆ ಎಷ್ಟೋ
ಮನೆ ಮನಗಳು ಹತ್ತಿ ಉರಿಯುತ್ತವೆ
ಮುಖವು ತೋರಿಸಿದಂತೆ ಹೊರ ಜಗಕೆ….ಈ ಕವಿತೆಯಲ್ಲಿ ಕವಿಯತ್ರಿ ದೇವದಾಸಿಯರ ಜೀವನ ಚರಿತ್ರೆಯನ್ನು ಅವರ ಒಡಲಾಳದ ನೋವು ಸಂಕಟವನ್ನು, ಈ ಸಮಾಜವನ್ನ ಅವರು ನೋಡುವ ರೀತಿಯನ್ನು ಬಹಳಷ್ಟು ಮಾರ್ಮಿಕವಾಗಿ ವಿವರಿಸಿದ್ದಾರೆ. ದೇವದಾಸಿಯರು ತಮಗೆ ಹುಟ್ಟಿದ ಮಕ್ಕಳಿಗೆ ತಂದೆಯಾರೆಂದು ಹೇಳುವ ಪರಿಸ್ಥಿತಿಯಲ್ಲಿಲ್ಲ. ಆ ವಿಷಯವನ್ನು ಅವಳು ಹೊರ ಹಾಕಿದರೆ, ಆ ಊರಿನೊಳಗೆ ಹಲವಾರು ಮನೆಗಳು ಹೊತ್ತಿ ಉರಿಯುತ್ತವೆ. ಹಲವಾರು ಮನಸ್ಸುಗಳನ್ನು ಸಂಕಟ ನೋವನ್ನು ಅನುಭವಿಸುತ್ತವೆ. ಪುರುಷ ಸಮಾಜ ಹಸಿದ ರಣಹದ್ದುಗಳಿದ್ದಂತೆ, ಕ್ರೂರ ಪ್ರಾಣಿಗಳಿಗಿಂತ ಹೆಚ್ಚಾಗಿ ಹೆಣ್ಣನ್ನ ಕಿತ್ತು ತಿನ್ನುತ್ತಾರೆ. ಕೂಡ ಅವಳು ಒಂದು ಹೆಣ್ಣು ಅವಳಿಗೂ ನೂರಾರು ಆಸೆ ಕನಸುಗಳು ಇರುತ್ತವೆ. ಆದರೆ ಸಮಾಜದ ಮುಂದೆ ಅವೆಲ್ಲವೂ ನಗಣ್ಯ, ಅವರ ಬದುಕಿನಲ್ಲಿ ಕನಸುಗಳು ಘಟಿಸುವುದಿಲ್ಲ. ತನ್ನನ್ನು ಬಯಸಿದ ಪುರುಷನ ಆಸೆ ತೀರಿಸುವುದು ಅಷ್ಟೇ ಅವರ ಕೆಲಸವಾಗಿದೆ. ದೇವದಾಸಿ ಹೆಣ್ಣನ್ನು ಇಳೆಗೆ ಹೋಲಿಸಿರುವ ಕವಿಯತ್ರಿ, ಹೆಣ್ಣು ಫಲವತ್ತಾದ ಭೂಮಿ ಇದ್ದ ಹಾಗೇ, ಅದರಲ್ಲಿ ಹಲವಾರು ಜನರು ಬೆಳೆ ಹಾಕಿ ಬೆಳೆದುಕೊಳ್ಳುತ್ತಾರೆ. ಸಮಾಜ ಇಂತಹ ಮೌಢ್ಯಚರಣೆಗಳನ್ನು ಧಿಕ್ಕರಿಸಬೇಕು ಎಂಬ ಸಂದೇಶವನ್ನು ಈ ಕವಿತೆಯ ಮೂಲಕ ಕವಿಯತ್ರಿ ನೀಡುತ್ತಾರೆ.
ಇಲ್ಲಿ ಒಬ್ಬರ ಮನಸ್ಸಿನ ಮಾತು
ಇನ್ನೊಬ್ಬರ ಹೃದಯಕ್ಕೆ ಕೇಳದಷ್ಟು ಕಠೋರವಾದ
ದುಸ್ಥಿತಿಯಾಗಿರುವುದು ವಿಪರ್ಯಾಸ…ಗೋಡೆ ಎಂಬ ಕವನದ ಶೀರ್ಷಿಕೆಯಲ್ಲಿ ಅವ್ವನಿಗೆ ಹೇಳುತ್ತಾರೆ. ಹಿಂದಿನ ಕಾಲದಲ್ಲಿ ಮನೆಗಳನ್ನು ಕಲ್ಲು, ಮಣ್ಣು, ಗರಿಗಳಿಂದ ನಿರ್ಮಿಸುತ್ತಿದ್ದರು.ಆಗ ಜನರ ಮನಸ್ಸುಗಳು ಮೃದುವಾಗಿದ್ದವು. ಅನುಕಂಪ ಮಾನವೀಯತೆ, ಕರುಣೆ ತುಂಬಿಕೊಂಡಿದ್ದವು. ಆದರೆ ಇಂದು ಮನುಷ್ಯ ಇದೇ ಕಲ್ಲು, ಸಿಮೆಂಟ್ ಜಲ್ಲಿಗಳಿಂದ ಮನೆಗಳನ್ನು ದೃಢವಾಗಿ ನಿರ್ಮಿಸಿಕೊಂಡಿದ್ದಾನೆ. ಅವನ ಮನಸ್ಸು ಕೂಡ ಕಠೋರವಾಗುತ್ತಿದೆ. ಮನುಷತ್ವದ ಮನಸ್ಥಿತಿಗೆ ದುಸ್ಥಿತಿಗೆ ಕಾರಣವಾಗುತ್ತಿದೆ ಎಂದು ಹೇಳುತ್ತಾರೆ. ತಿರಿಸಲಾಗದ ಋಣ, ಫಕೀರನ ಜೋಲಿಗೆ, ನಿನ್ನೊಲವ ಶಕ್ತಿ, ಹೆಜ್ಜೆ ಗುರುತು, ಅವಳೆಂದರೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಬರೆದ ಕವಿತೆ ಈ ಕವನ ಸಂಕಲನದಲ್ಲಿ ಓದುಗರ ಹಸಿವಿನ ದಾಹವನ್ನ ನೀಗಿಸುವ ಸಾಲುಗಳಾಗಿವೆ ಎಂಬುದು ನನ್ನ ಭಾವನೆ.
ರಮಾ ಬಸು ರವರ ಕವಿತೆಗಳಲ್ಲಿ ಹೆಚ್ಚಾಗಿ ಹೆಣ್ಣಿನ ಮನದಾಳದ ನೋವುಗಳು, ಅವಳ ನಿಕೃಷ್ಟವಾದ ಬದುಕು, ಸಮಾಜ ಅವಳನ್ನು ನಡೆಸಿಕೊಂಡ ರೀತಿ, ಮುಂತಾದ ವಿಷಯಗಳ ಬಗ್ಗೆ ಬರೆದ ಸಾಲುಗಳು ಕವಿತೆ ಕವನ ಸಂಕಲನಗಳಲ್ಲಿದೆ. ಇತ್ತೀಚಿನ ದಿನಗಳಲ್ಲಿ ಇದೊಂದು ಉತ್ತಮ ಕೃತಿಯಾಗಿದ್ದು, ಮುಂದಿನ ದಿನಗಳಲ್ಲಿ ಕವಿಯತ್ರಿ ಇನ್ನಷ್ಟು ಕೃತಿಗಳನ್ನು, ಲೇಖಕರನ್ನು ಓದಿ ಅರ್ಥೈಸಿಕೊಂಡು ಬರೆದರೆ ಕನ್ನಡಕ್ಕೆ ಭರವಸೆಯ ಕವಿತ್ರಿಯ ಆಗಮನವಾಗಬಹುದು. ನಾವೆಲ್ಲರೂ ಓದುಗರು ಇಂತಹ ಕೃತಿಯನ್ನ ಕೊಂಡು ಓದೋಣ, ಭರವಸೆ ಕವಯಿತ್ರಿನ್ನು ಪ್ರೋತ್ಸಾಹಿಸೋಣ..
ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕೃತಿಗಳನ್ನು ಕನ್ನಡಮ್ಮನ ಮಡಿಲು ಸೇರಿಸಿಸಲು ಯೋಜನೆ ಹಾಕಿಕೊಂಡು ಸಿದ್ದತೆಯಲ್ಲಿ ತೊಡಗಿರುವ ಫಕೀರಮ್ಮ ಬಿ ಚಿಟಗೇರಿ ರವರಿಗೆ ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇನ್ನಷ್ಟು ಕೃತಿಗಳನ್ನು ಹೊರತರಲಿ ಅವು ಧಮನಿತರ, ರೈತರ, ಮಹಿಳೆಯರ ಪರವಾದ ಕಾವ್ಯಸಂವೇದನೆಯನು ಚಿಂತಿಸುವ ಕೃತಿಗಳಾಗಲಿ, ಕನ್ನಡ ಸಾಹಿತ್ಯದ ಬರವಣಿಗೆಯಿಂದ ಅವರಿಗೆ ಗೌರವ ಪ್ರಶಸ್ತಿ ಪುರಸ್ಕಾರಗಳು ಸಿಗಲಿ ಎಂದು ಆಶಿಸುವೆ ಶುಭವಾಗಲಿ.
- ನಾರಾಯಣಸ್ವಾಮಿ .(ನಾನಿ) – ವಕೀಲರು ಮತ್ತು ಲೇಖಕರು, ಬಂಡಹಟ್ಟಿ ಮಾಸ್ತಿ ಮಾಲೂರು ತಾಲ್ಲೂಕು
