“ಖಾಲಿ ಜೋಳಿಗೆಯ ಫಕೀರ” ಕೃತಿ ಪರಿಚಯ

ಗಜಲ್ ಕಾರರಾದ ಲಕ್ಷ್ಮಿಕಾಂತ ಮಿಜಕರ ಅವರ ಜೀವಪರ ಸಾಲುಗಳುಳ್ಳ ಗಜಲ್ “ಖಾಲಿ ಜೋಳಿಗೆಯ ಫಕೀರ” ಕೃತಿಯ ಕುರಿತು ನಾರಾಯಣಸ್ವಾಮಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಖಾಲಿ ಜೋಳಿಗೆಯ ಫಕೀರ
ಲೇಖಕರು : ಲಕ್ಷ್ಮಿಕಾಂತ ಮಿಜಕರ
ಪ್ರಕಾರ : ಗಜಲ್

ಒಂದು ಕಾರ್ಯಕ್ರಮದಲ್ಲಿ ಒಬ್ಬ ಹಿರಿಯ ಲೇಖಕರು ಹೇಳಿದ ನೆನಪು. ಒಂದು ಕೃತಿ ಗೆಲ್ಲಬೇಕಾದರೆ ಇಡೀ ಸಂಕಲನದ ಕವಿತೆಗಳು ಗೆಲ್ಲಬೇಕಿಲ್ಲ, ಒಂದು ಕವಿತೆ ಜನರ (ಓದುಗರ) ಮನಸ್ಸು ಗೆದ್ದರೆ ಸಾಕು ಆ ಕೃತಿ ಗೆದ್ದಂತೆ ಅಂತ. ಒಂದು ಗಜಲ್ ನ ಎಲ್ಲಾ ಶೇರ್ ಗಳ ಪೈಕಿ ಒಂದು ಷೇರ್ ಓದುಗರ ಮನಸ್ಸು ಗೆದ್ದರೆ ಸಾಕು ಇಡೀ ಗಜಲ್ ಗೆ ಒಂದು ಅರ್ಥ ಬರುತ್ತದೆ.

ಓದಿಗೆ ನನ್ನನ್ನು ಹಚ್ಚಿಕೊಂಡು ವರುಷವೇ ಕಳೆದು ಹೋಯಿತೇನೋ ಅದರೆ ಇತ್ತೀಚೆಗೆ ಅತ್ಮೀಯ ಗಜಲ್ ಕಾರರಾದ ಲಕ್ಷ್ಮಿಕಾಂತ ಮಿಜಕರ ರವರು ತಮ್ಮ ಎರಡನೇ ಗಜಲ್ ಸಂಕಲನವನ್ನು ಆತ್ಮೀಯವಾಗಿ ಕಳಿಸಿದ್ದರು. ಈ ಕೃತಿಯನ್ನು ಓದಬೇಕೇಂಬ ಹಂಬಲದಿಂದ, ದಿನಕ್ಕೆ ಒಂದೆರಡು ಗಜಲ್ ಓದಬೇಕೆಂಬ ಪುಟ ತೆರೆದರೆ ನನ್ನ ಮನಸ್ಸನ್ನು ಅವರಿಸಿಕೊಂಡು ಒಂದೇ ಸಮನೆ ಓದಿಸಿಕೊಂಡ ಗಜಲ್ ಕೃತಿಯಿದು.

ನಾನು ಬಹಳಷ್ಟು ಗಜಲ್ ಕಾರರ ಕೃತಿಗಳನ್ನು ಓದಿರುವೆ ಅದರೆ ಈ ಕೃತಿ ಮಾತ್ರ ನನ್ನ ಮನಸ್ಸನ್ನು ತನ್ಮಯತೆಯಲಿ ಲೀನವಾಗಿಸಿ ಓದಿಸಿಕೊಂಡಿತು. ಅದಕ್ಕೆ ಕಾರಣ ನನ್ನ ಮನಸ್ಥಿತಿ ಬಯಸೋದು ಹೆಚ್ಚಾಗಿ ಬಂಡಾಯ, ಶೋಷಣೆಯ ಪ್ರತಿರೋಧದ ಸಾಹಿತ್ಯವನ್ನು, ಪ್ರಾಸಬದ್ದ, ಛಂಧೋಬದ್ದ ಕಾವ್ಯವನ್ನು ನನ್ನ ಮನಸ್ಸು ಅಷ್ಟಾಗಿ ಅರಗಿಸಿಕೊಂಡು ಅದರೊಳಗಿರುವ ತಿರುಳನ್ನು ಹೆಕ್ಕಿ ತೆಗೆಯಲು ಬಲವಂತವಾಗಿ ಪ್ರಯತ್ನ ಪಡಲಾರದು.

ಬಂಡಾಯದ ಸಾಲುಗಳಲ್ಲಿ ನೋವಿರುತ್ತದೆ, ಶೋಷಣೆ ಇರುತ್ತದೆ, ರಾಜಕೀಯ ನಾಯಕರ ದುರಾಡಳಿತ, ಮತಧರ್ಮದ ಅಂತರ, ಜಾತಿಯ ಹೆಸರಿನಲ್ಲಿ ಮನುಕುಲದ ಶೋಷಣೆ ಮುಂತಾದ ವಿಷಯಗಳನ್ನು ಸನ್ನಿವೇಶಗಳು ಇರುತ್ತವೆ. ಕವಿಯಾದವನು/ ಲೇಖಕನು ತಾನು ಅನುಭವಿಸಿ, ಕಣ್ಣಾರೆ ಕಂಡ ಘಟನೆಗಳಿಗೆ ಪ್ರತಿರೋಧದ ಸಾಲುಗಳನ್ನು ಬರೆಯುತ್ತಾನೆ.

ಲಕ್ಷ್ಮಿಕಾಂತ ಮಿರಜಕರ ರವರ ಎರಡನೇ ಗಜಲ್ ಕೃತಿ “ಖಾಲಿ ಜೋಳಿಗೆಯ ಫಕೀರ” ಕಾಂತನ ಗಜಲ್ ಗಳ ಬಗ್ಗೆ ತಿಳಿಯುವ ಮೊದಲು ಅವರ ಪರಿಚಯ ನೋಡುವುದಾದರೆ, ವೃತ್ತಿಯಲ್ಲಿ ಶಿಕ್ಷಕರು, ಪ್ರವೃತ್ತಿಯಲ್ಲಿ ಲೇಖಕರಾಗಿ ಮೂರು ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿರುವ ಇವರು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಕನ್ನಡ ಗಜಲ್ ಸಾಹಿತ್ಯ ಲೋಕದ ಉದಯೋನ್ಮುಖ ಬರಹಗಾರರು ಮತ್ತು ಬರಹದೊಳಗೆ ಪ್ರಬುದ್ದತೆಯನ್ನು ಸಿದ್ದಿಸಿಕೊಂಡಿದ್ದಾರೆ. ಮತ್ತು ಹಲವಾರು ಸಂಘಸಂಸ್ಥೆಗಳ ಮೂಲಕ ಬಹುಮಾನ, ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ.

”ಖಾಲಿ ಜೋಳಿಗೆಯ ಫಕೀರ” ಕೃತಿಯಲ್ಲಿ ಸುಮಾರು ಐವತ್ತೈದು ಗಜಲ್ ಗಳ ಗುಚ್ಚವಿದೆ. ಮೊದಲೆರಡು ಪುಟ ತಿರುವಿದಾಗ ನನ್ನ ಪ್ರೀತಿಯ ಅಕ್ಕ ಗಜಲ್ ಬರಹಗಾರ್ತಿ ಶ್ರೀಮತಿ ಅರುಣಾ ನರೇಂದ್ರ ರವರ ಮುನ್ನುಡಿಯನ್ನು ಓದಲು ಖುಷಿಯಾಗುತ್ತದೆ. ಯಾಕೆಂದರೆ ಶ್ರೀಮತಿ ಅರುಣಾ ನರೇಂದ್ರರವರು ಯುವ ಬರಹಗಾರರಿಗೆ ನೀಡುವ ಪ್ರೋತ್ಸಾಹ ದೊಡ್ಡದು, ಈ ಕೃತಿಯೊಳಗಿನ ಅಂತರಿಕ ಭಾವವನ್ನು ತನ್ನ ಸಾಲುಗಳಲ್ಲಿ ಹಿಡಿದಿರುವ ರೀತಿ ಮೆಚ್ಚುವಂಥದ್ದು. ಈ ಕೃತಿಯ ಬಗ್ಗೆ ಮುನ್ನುಡಿಯಲ್ಲಿ ಬರೆಯುತ್ತಾರೆ.‌ ಈ ಕೃತಿಯಲ್ಲಿನ ಅರ್ಧದಷ್ಟು ಗಜಲ್ ಗಳು ಸಾಮಾಜಿಕ ಅಸಮಾನತೆ, ಜಾತಿ ಮತ ಧರ್ಮಾಂಧತೆಯಿಂದ ಹದೆಗಟ್ಟ ಸಾಮಾಜಿಕ ವ್ಯವಸ್ಥೆಯನ್ನು ಅತ್ಯಂತ ತೀವ್ರವಾಗಿ ಖಂಡಿಸುತ್ತವೆ. ಹಸಿವು, ಅವಮಾನ, ಹೋರಾಟ, ಸ್ತ್ರೀ ಸಂವೇದನೆಯ ತಳಮಳಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ ಎಂಬ ಸೊಗಸಾದ ಮುನ್ನುಡಿ ಬರೆದು ಹಾರೈಸಿದ್ದಾರೆ.

ಮೊದಲಿಗೆ ನನ್ನ ಮನಸ್ಸುನ್ನು ಸೆಳೆದ ನನ್ನನ್ನು ಹಲವಾರು ಬಾರಿ ಓದಿಸಿಕೊಂಡ, ನಾನು ಕೂಡ ಇಂತಹ ಷೇರ್ ಗಳನ್ನು ಬರೆಯಲು ಸಾಧ್ಯವಾ? ಎಂದು ಯೋಚಿಸುವಂತೆ ಮಾಡಿದ ಹದಿನೈದನೇ ಗಜಲ್ ಬಗ್ಗೆ ಹೇಳಲೆಬೇಕು

” ಅನ್ಯಕೋಮಿನವರು ಪ್ರೀತಿಸುವುದು ನಿಷೇದಿಸಲಾಗಿದೆ, ಸಹಕರಿಸಿ
ಜಾತಿ ಕುಲ ಕಿಚ್ಚುಗಳ ಆರಿಸುವುದು ನಿಷೇಧಿಸಲಾಗಿದೆ ಸಹಕರಿಸಿ”

ಜಗದ ಪ್ರಜ್ಞಾವಂತ ಮನುಜ ಈ ಒಂದು ಶೇರ್ ಓದಿದರೆ ಸಾಕು. ಈ ದೇಶದೊಳಗೆ ಯಾವ ರೀತಿಯ ಜಾತಿಯತೆ, ಧರ್ಮಾಂಧತೆ ಅಚರಣೆಯಲ್ಲಿದೆ ಎಂಬುದು ಅರಿವಾಗುತ್ತದೆ ನಮಗೆ, ಮನುಷ್ಯ ಕುಲಂ ತಾವೊಂದೆ ಒಲಂ ಎಂದು ಹಿರಿಯರು ಹೇಳಿದ ಮಾತುಗಳನ್ನು ಯಾರು ಪಾಲಿಸಲಿಲ್ಲ,, ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದ ಜಾತಿಪದ್ದತಿಯನ್ನು ಇಂತಹ ಯಾಂತ್ರಿಕ ಯುಗದಲ್ಲೂ ಕೂಡ ನಮ್ಮ ಮನಸ್ಸುಗಳಿಂದ ತೆಗೆದು ಹಾಕಲು ನಾವು ಯಾರು ಬಯಸಲಿಲ್ಲ, ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನು ನನ್ನಂತೆ ಜೀವ, ಒಂದೇ ತಾಯಿ ಭಾರತಾಂಭೆಯ ಮಕ್ಕಳು, ನಾವೆಲ್ಲರೂ ಕೂಡ ಸಮಾನರು ಎಂದು ಇಂದಿಗೂ ತಿಳಿಯಲಿಲ್ಲ. ಅನಕ್ಷರತೆಯ ಕಾಲದಿಂದ ಅಕ್ಷರತೆಯ ಕಾಲದವರೆಗೂ ಸಾಗಿ ಬಂದರೂ, ಎಷ್ಟೇ ವಿದ್ಯಾವಂತರಾದರೂ ಕೂಡ ಸಾಮಾಜಿಕ ಸ್ತರಗಳನ್ನು ಅನುಸರಿಸುತ್ತಾ ಬಂದರೆ ವಿನಃ, ಆ ಸ್ತರಗಳನ್ನು ಅವಸಾನ ಮಾಡಲು ಬಯಸದೇ ತಮ್ಮ ಮುಂದಿನ ಪೀಳಿಗೆಗೂ ಕೂಡ ಮುಂದುವರಿಸುತ್ತಲೇ ಬಂದಿದ್ದಾರೆ. ಸಂವಿಧಾನ ಕಾನೂನುಗಳು ಜಾರಿಗೆ ಬಂದು ಬೇರುಬಿಟ್ಟಿರುವ ಜಾತಿಯೆಂಬ ಆಲದ ಮರದ ಕೊಂಬೆಗಳನ್ನು ಕಡಿಯಲು ಮಾತ್ರ ಸಾಧ್ಯವಾಯಿತೇ ವಿನಃ, ಬೇರುಬಿಟ್ಟಿರುವ ಜಾತಿಯ ಬೇರುಗಳನ್ನು ಕಡಿಯಲು ಇಂದಿಗೂ ಸಾಧ್ಯವಾಗಲೇ ಇಲ್ಲ. ದೇಶದಲ್ಲಿ ಅನ್ಯಕೋಮಿನವರನ್ನು ಪ್ರೀತಿಸುವುದು ನಿಷೇಧಿಸಲಾಗಿದೆ. ತನ್ನ ಕುಲವೆಂಬ ಸಂಕೋಲದಲ್ಲೆ ಬಂಧಿಯಾಗಿರಬೇಕು. ಶಾಸನ ವಿಧಿಸಿದ ಎಚ್ಚರಿಕೆಯನ್ನಾದರೂ ಮೀರಿ ಬದುಕಬಹುದು, ಅದರೆ ಸಮಾಜ ವಿಧಿಸಿದ ಎಚ್ಚರಿಕೆಯನ್ನು ಮೀರಿದರೆ ಸಮಾಜ ಬಹಿಷ್ಕರಿಸುತ್ತದೆ. ಸಾವನ್ನು ಬಹುಮಾನವಾಗಿ ನೀಡುತ್ತದೆ. ಜಾತಿಮತಗಳ ನಡುವೆ ಹತ್ತಿಕೊಂಡಿರುವ ಕಿಚ್ಚನ್ನು ಅರಿಸುವುದನ್ನು ಕೂಡ ಇಲ್ಲಿ ನಿಷೇಧಿಸಲಾಗಿದೆ ಯಾಕೆಂದರೆ ಜಾತಿ ಮತದ ಹೆಸರಿನಲ್ಲಿ ರಾಜಕೀಯ ಮಾಡಬಹುದು, ಜಾತಿ ಧರ್ಮದ ನಾಯಕತ್ವ ವಹಿಸಬಹುದು. ಜಾತಿಯ ಹೆಸರೇಳಿಕೊಂಡು ಧರ್ಮದ ಹೆಸರೇಳಿಕೊಂಡು ತಮ್ಮ ಸ್ವಾರ್ಥದ ಸಾಧನೆಯನ್ನು ಮಾಡಿಕೊಳ್ಳಬಹುದು. ಎಂದು ಗಜಲ್ ಕಾರ ಬಹಳಷ್ಟು ಮಾರ್ಮಿಕವಾಗಿ ಈ ಗಜಲ್ ನ ಶೇರ್ ಗಳನ್ನು ರಚನೆ ಮಾಡಿದ್ದಾರೆ.

“ಶತಶತಮಾನಗಳಿಂದಲೂ ದೀನದಲಿತರ ಬದು ಕತ್ತಲಿನಲಿಯೇ
ಭರಸವಸೆ ತುಂಬುವ ಹೊಸ ಬೆಳಕು ನೀಡಲಾಗುತ್ತಿಲ್ಲ ಕ್ಷಮಿಸಿಬಿಡಿ”

ಈ ಷೇರ್ ನಲ್ಲಿ ಗಜಲ್ ಕಾರ ಅನಾದಿ ಕಾಲದಿಂದಲೂ ಕತ್ತಲೆಯ ಕೂಪದಲ್ಲಿಯೇ ಬದುಕನ್ನು ಸೆವೆಸಿದ, ಈ ನೆಲದ ವಾಸಿಗಳ ನೋವನ್ನ ಅವರ ಬದುಕನ್ನು ತಮ್ಮ ಸಾಲುಗಳಲ್ಲಿ ನಿವೇದಿಸಿದ್ದಾರೆ.

ಹಿಂದಿನಿಂದಲೂ ಕೂಡ ಬಡವರು, ದಲಿತರು ಕತ್ತಲ್ಲಿನಲ್ಲಿಯೇ ಬದುಕನ್ನು ದೂಡುತ್ತಿದ್ದಾರೆ. ಸಂವಿಧಾನ ಜಾರಿಗೆ ಬಂದು ಅವರಿಗೆ ವಿವಿಧ ಸವಲತ್ತುಗಳನ್ನು ಕೊಟ್ಟರೂ, ಕಾನೂನುಗಳನ್ನು ಜಾರಿಗೆ ತಂದರು ಕೂಡ, ಉನ್ನತ ಅಧಿಕಾರಿ ವರ್ಗವು ಮೇಲ್ವರ್ಗದವರು ಆದ ಕಾರಣ ಕೆಳವರ್ಗದವರಿಗೆ ಕೊಡಲಾದ ಸವಲತ್ತುಗಳನ್ನು ಕಟ್ಟಕಡೆಯ ಮನುಷ್ಯನಿಗೆ ತಲುಪಿಸುವ ಮನಸ್ಸು ಮಾಡುತ್ತಿಲ್ಲ, ಕಾರಣ ಬಡವ ಬಡವನಾಗಿಯೇ ಉಳಿಯಬೇಕು, ಕೊನೆಯವರೆಗೂ ಅವರು ನಮಗೆ ವಿಧೇಯರಾಗಿಯೇ ಉಳಿಯಬೇಕು ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದರೆ, ಬಲಿತ ಜನಾಂಗವಾದರೆ ನಮಗೆ ಊಳಿಗಾಲವಿಲ್ಲ ಎಂಬ ಮನಸ್ಥಿತಿಯನ್ನು ಹೊಂದಿರುವ ಕಾರಣ ಅವರನ್ನು ಇನ್ನೂ ಕತ್ತಲಿನಿಂದ ಹೊರಬರಲಾಗದ ಸ್ಥಿತಿಯಲ್ಲಿ ಉಳಿದಿದ್ದಾರೆ. ಇಲ್ಲಿ ಗಜಲ್ ಕಾರ ತನ್ನ ಎದೆಯಾಳದ ನೋವನ್ನು ಹೇಳಿಕೊಳ್ಳುತ್ತಾನೆ. ನಿಮ್ಮ ಬದುಕಿಗೆ ಭರವಸೆ ತುಂಬುವ ಹೊಸ ಬೆಳಕು ನೀಡಲು ನನ್ನಿಂದ ಸಾಧ್ಯವಾಗುತ್ತಿಲ್ಲ‌, ನಿಮ್ಮನ್ನು ಕತ್ತಲ ಜಗತ್ತಿನಿಂದ ಬೆಳಕಿನ ಕಡೆ ತರಲು, ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಇರರಂತೆ ನೀವು ಹೊಸ ಬದುಕು ಕಟ್ಟಿಕೊಳ್ಳುವಂತೆ ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ, ದಯವಿಟ್ಟು ಕ್ಷಮಿಸಿ ಬಿಡಿ ಅಂತ ಹೇಳುವ ಪರಿಯು ಮನಸ್ಸನ್ನು ಕಲುಕುತ್ತದೆ.

“ಸಂವಿಧಾನದ ಘನತೆಯ ಮತ್ತೆ ಸಾರಿ ಹೇಳಬೇಕಾಗಿದೆ “ಕಾಂತ”
ಬಹುತ್ವದ ಬೆಸುಗೆಯನು ಕಾಪಾಡಲು ಧರೆಯ ಮಾತು ಹಂಚೋಣ ಬನ್ನಿ”

ಭಾರತ ದೇಶದ ಸಂವಿಧಾನ ಜನರಿಗೆ ಒಂದು ಪವಿತ್ರವಾದ ಗ್ರಂಥವಾಗಿದೆ. ಈ ಗ್ರಂಥದೊಳಗಿರುವ ಪ್ರಜಾಪ್ರಭುತ್ವ, ಮಾನವತ್ವದ ಸಂದೇಶಗಳನ್ನು, ನೀಡಿರುವ ಹಕ್ಕುಗಳನ್ನು ಎಲ್ಲಾ ಜನರಿಗೆ ತಲುಪಿಸಬೇಕಾಗಿದೆ. ಎಲ್ಲಾ ಮನುಜರು ಸಮಾನರು ಎಂದು ಭಾವಿಸಿ, ಸಮಾನತೆಯಲ್ಲಿ ಏಕತೆಯನ್ನು ಮೂಡಿಸಿ, ಜಾತಿ ಧರ್ಮವಿಲ್ಲಾ ಬಹುತ್ವ ಭಾರತವನ್ನು ಕಟ್ಟಬೇಕಾದರೆ ಬಹುಜನರ ನಡುವೆ ಬೆಸುಗೆಯನು ಕಾಪಾಡಲು ಈ ನೆಲದ ಮಾತುಗಳನ್ನು ಪ್ರಪಂಚದಲೆಲ್ಲಾ ಹಂಚೋಣ ಎಂಬ ಗಜಲ್ ಕಾರನ ಮಾತು ಆಶಯವನ್ನು ಈ ಗಜಲ್ ಶೇರ್ ನಲ್ಲಿ ನಾವು ಕಾಣಬಹುದು.

“ಇಲ್ಲಿ ಸೂಜಿ ಗಾತ್ರದ ಜಾಗಕ್ಕೆ ಇರುವ ಬೆಲೆ ಮನುಷ್ಯನ ಜೀವಕ್ಕೂ ಇಲ್ಲ ಕಾಂತ
ಹೊಟ್ಟೆಪಾಡಿಗೆ ಕತ್ತಲನ್ನೇ ಕಾಯುವ ದಾರುಣ ಬದುಕುಗಳಿವೆ ಮಹಾನಗರಿಯಲ್ಲಿ”

ಈ ಗಜಲ್ ಶೇರ್ ನಲ್ಲಿ ಗಜಲ್ ಕಾರ ಮಹಾನಗರಗಳಲ್ಲಿ ಉಳ್ಳವರ ಬದುಕು, ಇಲ್ಲದವರ ಬದುಕು ಹೇಗೆ ನಡೆಯುತ್ತಿದೆ. ಯಾವ ಪರಿಸ್ಥಿತಿಯಲ್ಲಿ ಮನುಜ ಜೀವನ ಮಾಡುತ್ತಿದ್ದಾನೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತಾರೆ. ಮಹಾನಗರದಲ್ಲಿ ಭೂಮಿಯ ಒಂದು ಚದುರ ಅಡಿಯು ಸಾವಿರಾರು ರೂಪಾಯಿ ಬೆಲೆ ಬಾಳುತ್ತದೆ. ಅದರೆ ಮನುಷ್ಯನಿಗೆ ಸೂಜಿ ಗಾತ್ರದ ಜಾಗಕ್ಕೆ ಇರುವ ಬೆಲೆಯು ಇಲ್ಲ ಎಂದು ನೋವಿನಿಂದ ಹೇಳುತ್ತಾ, ಅದರೆ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಸಲುವಾಗಿಯೇ ಬಹಳಷ್ಟು ಜನರು ರಾತ್ತಿಯ ಕತ್ತಲು ಯಾವಾಗ ಬರುತ್ತದೆ ಎಂಬುದನ್ನೆ ಕಾಯುತ್ತಿದ್ದಾರೆ ಅಂತಹ ದಾರುಣ್ಯ ಬದುಕುಗಳು ಈ ಮಹಾ ನಗರಗಳಲ್ಲಿ ಇದೆ ಎಂಬ ಶೇರ್ ಅನ್ನು ಅರ್ಥಪೂರ್ಣವಾಗಿ ರಚನೆ ಮಾಡಿದ್ದಾರೆ.

“ಬುದ್ಧ ಬಸವ ಬಾಬಾರನ್ನು ಮೂರ್ತಿ ಮಾಡಿ ಆರಾಧಿಸಿದ್ದು ಸಾಕು
ಅವರ ವಿಚಾರಗಳನ್ನು ಅರಿತು ಹಂಚಬೇಕು ನಾವು ಮೊದಲು”

ಈ ನೆಲದಲ್ಲಿ ತಾಂಡವಾಡುತ್ತಿದ್ದ ಅಸಮಾನತೆಯನ್ನು, ಶೋಷಣೆಯನ್ನು, ಜಾತಿಯ ತಾರತಮ್ಯವನ್ನು ಹೋಗಲಾಡಿಸಿ ಕತ್ತಲಿನಲ್ಲಿದ್ದ ಜನರನ್ನು ಬೆಳಕಿನ ಕಡೆಗೆ ತಂದವರು “ಬುದ್ಧ ಬಸವ ಅಂಬೇಡ್ಕರ್ ರವರು. ಸಮಸಮಾಜವನ್ನು ತರಲು ಬಯಸಿದ ಈ ಮಹನೀಯರನ್ನು ಇಂದು ನಾವು ಅವರ ವಿಗ್ರಹಗಳನ್ನು ಕಟ್ಟಿ ಪೂಜಿಸುತ್ತಿದ್ದೇವೆಯೇ ಹೊರತು ಅವರ ಹೋರಾಟವನ್ನು, ಅವರ ಚಿಂತನೆಗಳನ್ನು ಜನರಿಗೆ ತಲುಪಿಸುತ್ತಿಲ್ಲ, ಅವರ ಹೆಸರೇಳಿಕೊಂಡು ನಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಎಂದು ಈ ಶೇರ್ ನಲ್ಲಿ ಕವಿಯು ಹೇಳುತ್ತಾರೆ. ಈ ಮಹಾನ್ ವ್ಯಕ್ತಿಗಳಿಗೆ ವಿಗ್ರಹ ಕಟ್ಟಿ ಪೂಜೆ ಮಾಡಿದ್ದು ಅವರನ್ನು ಅರಾಧಿಸಿದ್ದು ಸಾಕು, ಬನ್ನಿ ಅವರ ಚಿಂತನೆಗಳನ್ನು, ಅವರ ಆಶಯಗಳನ್ನು ಜನರ ಮನಸ್ಸಿನಲ್ಲಿ ತುಂಬಿ ಅನಕ್ಷರಸ್ಥರ, ಮೌಢ್ಯತುಂಬಿದ ಜನರನ್ನು ಮನಸ್ಸು ಬದಲಾಯಿಸೋಣ, ಸಮತೆಯ ರಾಷ್ಟ್ರವನ್ನು ಕಟ್ಟುವ ಕಡೆ ಸಾಗೋಣ ಎಂಬ ಸಂದೇಶ ಅರ್ಥಪೂರ್ಣ ರಚನೆಯಾಗಿದೆ.

” ನನ್ನ ಹೃದಯ ನನ್ನ ಕೈಯಿಂದ ಜಾರಿ ಹೋಗಿದೆ ನಿನ್ನ ಕಡೆ ಸಖಿ
ಕಡುವಿರಹದ ನೋವು ನಲಿವು ಅನುಭವಿಸಲು ಅಣಿಯಾಗು ಮಧುಶಾಲೆ”

ಪ್ರೇಮಿಯ ವಿರಹ ವೇದನೆಯ ಸಾಲುಗಳು ಓದುಗರ ಮನಸ್ಸನ್ನು ಇನ್ನಷ್ಟು ಕಾಡಿಸುತ್ತದೆ

“ಮಂಜಿನಂತೆ ಕರುಗುತಿಹೆನು ನಿನ್ನ ಕಣ್ಣ ಕಾಂತಿಗೆ
ಎದೆಯ ನವಿಲಾಗಿ ಕುಣಿದರೆ ಸಂತೋಷ ಮನದಲ್ಲಿ”

ಇಂತಹ ಹತ್ತಾರು ಸಾಲುಗಳು ಈ ಸಂಕಲನದಲ್ಲಿ ಇವೆ. ಇಡೀ ಪುಸ್ತಕವನ್ನು ಪರಿಚಯಿಸುವ ಅಸೆಯಿದೆಯಾದರೂ ಎಲ್ಲಾ ಸಾಲುಗಳನ್ನು ಪರಿಚಯ ಮಾಡಿದರೆ ಕೃತಿಯ ಬಗ್ಗೆ ಇರುವ ಕುತೂಹಲ ಕಡಿಮೆಯಾಗಬಹುದು.

ಬೆನ್ನುಡಿ ಬರೆದಿರುವ ಅಬ್ದುಲ್ ಹೈ ತೋರಗಲ್ಲು ರವರು ಭಾವ ಕುಲುಮೆಯಲ್ಲದ ಗಜಲ್ ಗಳು ಎಲ್ಲರೆದೆಯನ್ನು ಆಳುತ್ತವೆ ಎಂಬುದು ನನ್ನ ಬಲವಾದ ಎಂದಿದ್ದಾರೆ.

ಈ ಗಜಲ್ ಸಂಕಲನದಲ್ಲಿ ಬರಿ ಬಂಡಾಯದ ಪ್ರತಿರೋಧದ ಸಾಲುಗಳೇ ಇಲ್ಲ. ಇಲ್ಲಿ ಪ್ರೇಮವಿದೆ, ವಿರಹವಿದೆ, ಅಪ್ಪನ ಅಂತರಂಗದ ನೆನಪುಗಳಿವೆ, ಅಮ್ಮನ ಒಡಲಾಳದ ಸಾಲುಗಳು ಓದಲು ಸಿಗುತ್ತವೆ. ರೈತನ ಬದುಕಿದೆ, ಗೆಳೆಯರ ಪ್ರೋತ್ಸಾಹದ ಸಾಲುಗಳಿವೆ. ಗಜಲ್ ಪ್ರೇಮಿಗಳು, ಗಜಲ್ ಕಲಿಕಾರ್ಥಿಗಳು ದಯವಿಟ್ಟು ಇಂತಹ ಅಮೂಲ್ಯವಾದ ಕೃತಿಯನ್ನು ಓದಿ ಉದಯೋನ್ಮುಖ ಗಜಲ್ ಬರಹಗಾರನನ್ನು ಪ್ರೋತ್ಸಾಹಿಸಿದರೆ ಇವರ ಎದೆಯಾಳದಲ್ಲಿ ಅಡಗಿರುವ ಇನ್ನಷ್ಟು ಸಾಲುಗಳು ಹೊರಬರಬಹುದು.

ಶ್ರೀ ಲಕ್ಷ್ಮಿಕಾಂತ ಮಿರಜಕರ ರವರು ಇತ್ತೀಚಿನ ಯುವ ಗಜಲ್ ಬರಹಗಾರರಿಗೆ ಮಾರ್ಗದರ್ಶಕರಾಗಿ ಮುಂದುವರೆಯಲಿ ಮತ್ತು ಇನ್ನಷ್ಟು ಬಂಡಾಯದ ಕೃತಿಗಳನ್ನು ಬರೆದು ಪ್ರಕಟಿಸಲಿ, ಅವರು ಮಹಿಳಾ ಶೋಷಣೆ, ರೈತರ ಬದುಕು, ಸಾಮಾಜಿಕ ಸ್ತರಗಳ ಬಗ್ಗೆ ಬರೆಯಲಿ, ಇವರು ಶಿಕ್ಷಕರಾಗಿರುವುದರಿಂದ ವಿಧ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳವ ಬಗ್ಗೆ ಕೃತಿಗಳನ್ನು ಹೊರತರಲಿ ಇವರಿಗೆ ಕೃತಿಯು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಕೀರ್ತಿ ಗೌರವವನ್ನು ತಂದು ಕೊಡಲಿ ಎಂದು ಈ ಮೂಲಕ ಹಾರೈಸುತ್ತೇನೆ.


  • ನಾರಾಯಣಸ್ವಾಮಿ – ವಕೀಲರು ಮತ್ತು ಲೇಖಕರು, ಮಾಲೂರು ತಾಲೂಕು, ಕೋಲಾರ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading